ಬಲೂಚ್ ಲಿಬರೇಷನ್ ಸೇನೆ ದಂಗೆ ಎದ್ದಿರೋದ್ಯಾಕೆ? – ಇದರ ಹಿಂದೆ ಭಾರತದ ಕೈವಾಡ ಇದೆಯಾ?

ಬಲೂಚ್ ಲಿಬರೇಷನ್ ಸೇನೆ ದಂಗೆ ಎದ್ದಿರೋದ್ಯಾಕೆ? – ಇದರ ಹಿಂದೆ ಭಾರತದ ಕೈವಾಡ ಇದೆಯಾ?

ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಶೀಘ್ರವೇ ಏನೋ ದೊಡ್ಡ ಮಟ್ಟದ ಬೆಳವಣಿಗೆ ನಡೆಯೋ ಎಲ್ಲಾ ಸಾಧ್ಯತೆಗಳೂ ದಟ್ಟವಾಗಿದೆ. ಬಲೂಚಿಸ್ತಾನ ಅಂದ ಕೂಡ ಭಾರತೀಯರು ಏನೋ ಒಂದು ಕುತೂಹಲ. ಬಲೂಚಿಸ್ತಾನದ ಹೆಸರು ಕೇಳಿದ ಕೂಡಲೇ ನಮ್ಮ ಗುಪ್ತಚರ ಸಂಸ್ಥೆ ರಾ ನೆನಪಾಗಿಬಿಡುತ್ತೆ. ಯಾಕಂದ್ರೆ ಬಲೂಚಿಸ್ತಾನದಲ್ಲಿ ನಮ್ಮ ಇಂಟೆಲಿಜೆನ್ಸ್​ ಏಜೆನ್ಸಿ ಒಂದಷ್ಟು ಕಾರುಬಾರು ಮಾಡ್ತಾ ಇರೋದು ಒಂಥರಾ ಓಪನ್ ಸೀಕ್ರೆಟ್ ವಿಚಾರ. ಬಲೂಚಿಸ್ತಾನದ ಜನರಂತೂ ಪಾಕ್​ ಸರ್ಕಾರದ ವಿರುದ್ಧ ಆಗಾಗ ದಂಗೆಯೇಳ್ತಾನೆ ಇದ್ದಾರೆ. ಬಲೂಚಿಗಳು ಭಾರಿ ಸಂಖ್ಯೆಯಲ್ಲಿ ಭಾರತದ ಪರ ನಿಂತಿದ್ದಾರೆ. ಹೀಗಾಗಿ ಪಾಕ್​ ಸರ್ಕಾರ, ಸೇನೆ ಕೂಡ ಬಲೂಚಿಗಳ ಮೇಲೆ ನಿರಂತರವಾಗಿ ದೌರ್ಜನ್ಯವೆಸಗುತ್ತಲೇ ಇದೆ. ಇವೆಲ್ಲದ್ರ ಮಧ್ಯೆ ಬಲೂಚ್ ಲಿಬರೇಷನ್ ಆರ್ಮಿ ಅಂದ್ರೆ ಬಲೂಚ್ ವಿಮೋಚನಾ ಸೇನೆ ಬಲೂಚಿಸ್ತಾನದ ಮಾಚ್ ಅನ್ನೋ ನಗರವನ್ನ ವಶಕ್ಕೆ ಪಡೆದ ಘಟನೆ ನಡೆದಿದೆ. ಹಾಗಿದ್ರೆ ಬಲೂಚಿಸ್ತಾನದಲ್ಲಿ ನಿಜಕ್ಕೂ ಈಗ ಏನಾಗ್ತಿದೆ? ಮುಂದಿನ ದಿನಗಳಲ್ಲಿ ಏನೆಲ್ಲಾ ಬೆಳವಣಿಗೆಗಳಾಗಬಹುದು? ಬಲೂಚ್ ಲಿಬರೇಷನ್ ಆರ್ಮಿ ದಂಗೆಯೆದ್ದಿರೋದ್ಯಾಕೆ? ಇದ್ರಲ್ಲಿ ಭಾರತದ ಪಾತ್ರ ಇದ್ಯಾ? ಇವೆಲ್ಲದರ ಬಗ್ಗೆ ವಿಸ್ತೃತ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಇರಾಕ್  ಮೇಲೆ ಪ್ರತಿಕಾರ ತೀರಿಸಿಕೊಂಡ ಅಮೆರಿಕ –  ಏರ್​ಸ್ಟ್ರೈಕ್ ನಡೆಸಿ 85 ಟಾರ್ಗೆಟ್ಸ್​ ಧ್ವಂಸ, 18 ಮಂದಿಯ ಹತ್ಯೆ..!

ಬಲೂಚ್ ಲಿಬರೇಷನ್ ಆರ್ಮಿ ಅನ್ನೋದು ಬಲೂಚಿಸ್ತಾನದಲ್ಲಿರೋ ಒಂದು ಬಂಡುಕೋರ ಸಂಘಟನೆ. ಅಂದ್ರೆ ಪಾಕಿಸ್ತಾನದ ವಿರುದ್ಧ ತಿರುಗಿಬಿದ್ದಿರೋ ಸ್ಥಳೀಯ ಸೇನೆ. ಈ ಬಲೂಚ್ ಲಿಬರೇಷನ್ ಆರ್ಮಿ ಈಗ ಆಪರೇಷನ್-ದಾರ—ಇ-ಬೊಲಾನ್ ಅನ್ನೋ ಕಾರ್ಯಾಚಾರಣೆಯನ್ನ ಕೈಗೊಂಡಿದೆ. ಇಡೀ ಬಲೂಚಿಸ್ತಾನ ಪ್ರಾಂತ್ಯವನ್ನ ಪಾಕಿಸ್ತಾನದಿಂದ ಸ್ವಾತಂತ್ರ್ಯಗೊಳಿಸೋ ಗುರಿ ಇಟ್ಟುಕೊಂಡು ಬಲೂಚ್ ಲಿಬರೇಷನ್ ಆರ್ಮಿ ಆಪರೇಷನ್​ಗೆ ಇಳಿದಿದೆ. ಬಲೂಚಿಸ್ತಾನದಲ್ಲಿರೋ ಬೋಲನ್ ಅನ್ನೋ ಜಿಲ್ಲೆಯಲ್ಲಿ ಮಾಚ್ ಹೆಸರಿನ ನಗರ ಇದೆ. ಈ ಮಾಚ್ ಸಿಟಿಯನ್ನ ಮತ್ತು ಅದ್ರ ಸುತ್ತಮುತ್ತಲಿನ ಕೆಲ ಪ್ರದೇಶಗಳನ್ನ ಬಲೂಚ್ ಲಿಬರೇಷನ್ ಆರ್ಮಿ ಸಂಪೂರ್ಣವಾಗಿ ಸುತ್ತುವರೆದಿದೆ. ಇಡೀ ನಗರವನ್ನ ತನ್ನ ಕಂಟ್ರೋಲ್​ಗೆ ತೆಗೆದುಕೊಂಡಿತ್ತು. ಆ್ಯಕ್ಚುವಲಿ ಬಲೂಚಿಸ್ತಾನ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾ ಬಳಿಯೇ ಈ ಮಾಚ್​​ ನಗರ ಇದೆ. ಕಾರ್ಯಾಚರಣೆ ವೇಳೆ ಬಲೂಚ್ ಲಿಬರೇಷನ್ ಆರ್ಮಿಯ ನಾಲ್ವರು ಫೈಟರ್ಸ್​​ಗಳು ಕೂಡ ಸಾವನ್ನಪ್ಪಿದ್ದಾರೆ. ಇನ್ನು ಆಪರೇಷನ್ ಸಂದರ್ಭದಲ್ಲಿ ಬಲೂಚ್ ಲಿಬರೇಷನ್ ಆರ್ಮಿಯ ಇನ್ನೊಂದು ಸ್ಪೆಷಲ್ ಟ್ಯಾಕ್ಟಿಕಲ್ ಆಪರೇಷನ್ ಸ್ಕ್ವಾಡ್ ಮಾಚ್ ನಗರದ ಎಂಟ್ರಿ ಮತ್ತು ಎಕ್ಸಿಟ್ ರೂಟ್​ನ್ನ ಕೂಡ ಕಂಪ್ಲೀಟ್​​ ಆಗಿ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಹಾಗೆಯೇ ಎಂಟ್ರಿ ಪ್ರದೇಶದಲ್ಲಿ ನೆಲ ಬಾಂಬ್​ಗಳನ್ನ ಕೂಡ ಫಿಕ್ಸ್ ಮಾಡಲಾಗಿದೆ. ಹೀಗಾಗಿ ಬಲೂಚ್ ಲಿಬರೇಷನ್ ಆರ್ಮಿಯಿಂದ ಮಾಚ್ ನಗರವನ್ನ ವಶಪಡಿಸಿಕೊಳ್ಳೋದು ಕೂಡ ಪಾಕಿಸ್ತಾನ ಸೇನೆಗೆ ಸುಲಭ ಇಲ್ಲ. ಯಾಕಂದ್ರೆ ಪಾಕ್​ ಸೇನೆ ಬರೋ ಹಾದಿಯುದ್ದಕ್ಕೂ ನೆಲ ಬಾಂಬ್​ಗಳಿದ್ದು, ಆ ಮಾರ್ಗವಾಗಿ ಹೋದ್ರೆ ಪಾಕ್ ಸೈನಿಕರು ಸತ್ತೇ ಹೋಗ್ತಾರೆ.

ಇಷ್ಟೇ ಅಲ್ಲ, ಬಲೂಚ್ ಲಿಪರೇಷನ್ ಆರ್ಮಿಯ ಫತೇ ಅನ್ನೋ ಇನ್ನೊಂದು ಸ್ಕ್ವಾಡ್ ಮಾಚ್ ನಗರದ ಪ್ರಮುಖ ಏರಿಯಾಗಳನ್ನ ತನ್ನ ಕಂಟ್ರೋಲ್​​ನಲ್ಲಿಟ್ಟುಕೊಂಡಿದೆ. ಪೊಲೀಸ್ ಸ್ಟೇಷನ್, ರೈಲ್ವೆ ಸ್ಟೇಷನ್ ಇವೆಲ್ಲವನ್ನು ಫತೇ ಸ್ಕ್ವಾಡ್​ ಸುತ್ತುವರೆದಿದೆ. ಬಲೂಚಿಸ್ತಾನದ ಆಂತರಿಕ ಸಚಿವಾಲಯದ ಮಂತ್ರಿ ನೀಡಿರೋ ಮಾಹಿತಿ ಪ್ರಕಾರ, ಬಲೂಚ್ ಲಿಬರೇಷನ್ ಆರ್ಮಿ ಏಕಕಾಲಕ್ಕೆ ತನ್ನ ಮೂರು ಪಡೆಗಳ ಮೇಲೆ ಮಾಚ್​ ನಗರಕ್ಕೆ ದಾಳಿಯಿಟ್ಟಿದೆ. ಗುಂಡಿನ ದಾಳಿ, ರಾಕೆಟ್ ಲಾಂಚರ್​ಗಳ ಮೂಲಕ ಅಟ್ಯಾಕ್​ ಮಾಡಿತ್ತು. ಮಾಚ್​ ನಗರದೊಳಗಿದ್ದ ಪಾಕಿಸ್ತಾನ ಸೇನೆಯ ಕ್ಯಾಂಪ್​​ಗಳ ಮೇಲೂ ದಾಳಿ ಮಾಡಿ, ಪಾಕ್ ಸೈನಿಕರನ್ನೆಲ್ಲಾ ಅಲ್ಲಿಂದ ಓಡಿಸಿದ್ದಾರೆ. ಇಂಪಾರ್ಟೆಂಟ್​ ಲೋಕೇಷನ್​ಗಳ ಜೊತೆಗೆ ಇಡೀ ನಗರವನ್ನ ಬಲೂಚ್ ಲಿಬರೇಷನ್ ಆರ್ಮಿ ತನ್ನ ಸುಪರ್ದಿಗೆ ತೆಗೆದುಕೊಂಡಿದೆ.

ಮಾಚ್ ನಗರವನ್ನ ವಶಪಡಿಸಿಕೊಂಡ ಬಳಿಕ ಬಲೂಚ್ ಲಿಬರೇಷನ್ ಆರ್ಮಿ ಮಹತ್ವದ ಸ್ಟೇಟ್​ಮೆಂಟ್ ಕೂಡ ಕೊಟ್ಟಿದೆ. ನಮ್ಮ ಫಿದಾಯಿನ್ ಮಜೀದ್ ಬ್ರಿಗೇಡ್ ತಮ್ಮ ಕೊನೆಯುಸಿರು ಇರೋವರೆಗೂ ಹೋರಾಡ್ತಾರೆ ಅಂತಾ ಹೇಳಿದೆ.

ಇನ್ನು ಈ ಮಾಚ್​ ನಗರದಲ್ಲಿ ನಡೆದಿರೋದು ಸಾಮಾನ್ಯ ಸಮರವೇನೂ ಅಲ್ಲ. ಬಲೂಚ್ ಲಿಬರೇಷನ್ ಆರ್ಮಿಯ ಫಿದಾಯಿನ್ ಮಾದರಿ ದಾಳಿಗೆ ಮಾಚ್​​ನಲ್ಲೇ ಪಾಕ್​ ಸೇನೆಯ 45 ಮಂದಿ ಸೈನಿಕರು ಕೂಡ ಸತ್ತಿದ್ದಾರಂತೆ. ಮತ್ತೊಂದು ಏರಿಯಾದಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಅಂತೂ ಬಲೂಚ್ ಲಿಬರೇಷನ್ ಆರ್ಮಿ ಪಾಕ್​ ಸೇನೆ ವಿರುದ್ಧ ನೇರಾ ನೇರ ಹೊಡೆತಾಟಕ್ಕೆ ಇಳಿದಿದೆ. ಹಾಗೆಯೇ ಬಲೂಚಿಸ್ತಾನದಲ್ಲಿರುವ ಎಲ್ಲಾ ಯುವಕರು ಕೂಡ ಬಲೂಚ್ ಲಿಬರೇಷನ್ ಆರ್ಮಿಯನ್ನ ಸೇರಿಕೊಳ್ಳಿ. ನಮ್ಮ ಭೂಮಿಯಿಂದ ಪಾಕಿಸ್ತಾನ ಸೇನೆಯನ್ನ ಹೊಡೆದೋಡಿಸಲೇಬೇಕು ಅಂತಾ ಕರೆ ಕೊಟ್ಟಿದೆ. ಇಷ್ಟೇ ಅಲ್ಲ, ಪಾಕಿಸ್ತಾನ ಸೇನೆಗೆ ಧಮ್ ಇದ್ರೆ ನಮ್ಮ ಕಂಟ್ರೋಲ್​ನಲ್ಲಿರೋ ಮಾಚ್​​ ನಗರದ ಒಳಕ್ಕೆ ಬಂದು ನಮ್ಮ ವಿರುದ್ಧ ಬಂದು ಹೋರಾಡಿ ಅಂತಾನೂ ಬಲೂಚ್ ಲಿಬರೇಷನ್ ಆರ್ಮಿ ಚಾಲೆಂಜ್ ಮಾಡಿದೆ. ಆದ್ರೆ ಭೂಮಾರ್ಗವಾಗಿಯಂತೂ ಪಾಕ್​ ಸೈನಿಕರಿಗೆ ಮಾಚ್ ನಗರಕ್ಕೆ ಎಂಟ್ರಿ ಕೊಡೋದು ಅಷ್ಟು ಸುಲಭ ಇಲ್ಲ. ಆಗಲೇ ಹೇಳಿದ ಹಾಗೆ, ಮಾಚ್ ನಗರಕ್ಕೆ ಎಂಟ್ರಿಯಾಗೋ ಪ್ರದೇಶದ ತುಂಬಾ ಬಲೂಚ್ ಲಿಬರೇಷನ್ ಆರ್ಮಿ ನೆಲ ಬಾಂಬ್​​ಗಳನ್ನ ಹುದುಗಿಸಿ ಇಟ್ಟಿದೆ.

ಅಸಲಿಗೆ ಇದು ಬಲೂಚ್ ಲಿಬರೇಷನ್ ಆರ್ಮಿಯ ಹೋರಾಟದ ಆರಂಭ ಇಷ್ಟೇ. ಆಟ ಈಗ ಶುರುವಾಗಿದ್ಯಷ್ಟೇ. ದಾರ-ಇ-ಬೋಲಾನ್ ಹೆಸರಲ್ಲಿ ಬಲೂಚ್ ಲಿಬರೇಷನ್ ಆರ್ಮಿ ಕಾರ್ಯಾಚರಣೆ ಶುರು ಮಾಡಿದ್ದು, ಮೊದಲ ಹಂತದಲ್ಲಿ ಮಾಚ್​ ನಗರವನ್ನ ಸದ್ಯಕ್ಕೆ ಪಾಕ್​ ಸೇನೆಯಿಂದ ಮುಕ್ತಿಗೊಳಿಸಿದೆ. ಇದು ಮುಂದಿನ ದಿನಗಳಲ್ಲೂ ಬಲೂಚಿಸ್ತಾನದ ಇತರೆ ನಗರಗಳಿಗೆ, ಜಿಲ್ಲೆಗಳಿಗೂ ವ್ಯಾಪಿಸುವ ಎಲ್ಲಾ ಚಾನ್ಸಸ್ ಇದೆ.ಈ ಆಪರೇಷನ್​ನಲ್ಲಿ ಬಲೂಚ್ ಲಿಬರೇಷನ್ ಆರ್ಮಿಯ ವಿವಿಧ ಯುನಿಟ್​ನ ಫೈಟರ್ಸ್​ಗಳು ಇನ್ವಾಲ್​ ಆಗಿದ್ದಾರೆ. ಮಜೀದ್ ಬ್ರಿಗೇಡ್, ಸ್ಪೆಷಲ್ ಟ್ಯಾಕ್ಟಿಕಲ್ ಆಪರೇಷನ್ ಸ್ಕ್ವಾಡ್, ಫತೇ ಸ್ಕ್ವಾಡ್, ಇಂಟೆಲಿಜೆನ್ಸ್ ವಿಂಗ್ ಹೀಗೆ ಎಲ್ಲಾ ಯುನಿಟ್​ಗಳು ಒಟ್ಟಾಗಿ, ಒಂದೇ ಟಾರ್ಗೆಟ್ ಇಟ್ಕೊಂಡು ಪಾಕ್​ ಸೇನೆ ವಿರುದ್ಧ ಹೋರಾಟಕ್ಕಿಳಿದಿದೆ.

ಇನ್ನು ಸದ್ಯ ಬಲೂಚ್ ಲಿಬರೇಷನ್ ಆರ್ಮಿಯ ಕಂಟ್ರೋಲ್​ನಲ್ಲಿರೋ ಮಾಚ್ ನಗರದ ಜನರಿಗೆ ಮನೆಯೊಳಗೆಯೇ ಇರುವಂತೆ ಸೂಚಿಸಲಾಗಿದೆ. ಯಾಕಂದ್ರೆ ಯಾವುದೇ ಕ್ಷಣದಲ್ಲಿ ಪಾಕಿಸ್ತಾನ ಸೇನೆ ಕೌಂಟರ್ ಅಟ್ಯಾಕ್ ಮಾಡಬಹುದು. ಹೀಗಾಗಿ ಬಲೂಚ್ ಲಿಬರೇಷನ್ ಆರ್ಮಿ ಎಲ್ಲದಕ್ಕೂ ರೆಡಿಯಾಗಿಯೇ ಇದೆ. ಹಲವೆಡೆ ಚೆಕ್​​ ಪಾಯಿಂಟ್​​ಗಳನ್ನ ಸಿದ್ಧಪಡಿಸಿದೆ. ಆದ್ರೀಗ ಇಂಟ್ರೆಸ್ಟಿಂಗ್​ ಆಗಿರೋದು ಪಾಕ್ ಸೇನೆ ಮುಂದೆ ಏನು ಮಾಡಬಹುದು ಅನ್ನೋದು. ಒಂದು ನಗರವೇ ಪಾಕಿಸ್ತಾನದ ಹಿಡಿತದಿಂದ ತಪ್ಪಿದೆ. ಇದು ಪಾಕ್ ಸರ್ಕಾರ ಮತ್ತು ಸೇನೆಗೆ ಮರ್ಯಾದೆಯ ಪ್ರಶ್ನೆ. ಬಲೂಚಿಸ್ತಾನದಲ್ಲಾಗಿರೋ ಈ ಬೆಳವಣಿಗೆ ಇದ್ಯಲ್ಲಾ ಇದು ಆ್ಯಕ್ಚುವಲಿ ತುಂಬಾ ದೊಡ್ಡ ಬೆಳವಣಿಗೆ. ಭೌಗೋಳಿಕವಾಗಿ ಬಲೂಚಿಸ್ತಾನದ ಸ್ಟ್ರ್ಯಾಟಜಿಕ್ ಪೊಸೀಶನ್​​ಗಳನ್ನ ಕಂಟ್ರೋಲ್​ನಲ್ಲಿಟ್ಟುಕೊಳ್ಳೋದು ಪಾಕ್​ ಸೇನೆ ತುಂಬಾನೆ ಅನಿವಾರ್ಯ. ಸ್ಟ್ರ್ಯಾಟಜಿಕ್ ಪೊಸೀಶನ್​​ ಅಂದ್ರೆ ಆಯಕಟ್ಟಿನ ಪ್ರದೇಶಗಳ ಮೇಲಿನ ಕಂಟ್ರೋಲ್​ನ್ನೇ ಕಳೆದುಕೊಂಡ್ರೆ, ಮುಂದೊಂದು ದಿನ ಇಡೀ ಬಲೂಚಿಸ್ತಾನ ಪ್ರಾಂತ್ಯವೇ ಕೈಜಾರಿ ಹೋಗುವಂತಾ ಬದಲಾವಣೆಗಳಾಗಬಹುದು. ಹೀಗಾಗಿ ಮಾಚ್​ ನಗರದಲ್ಲಿ ಬಲೂಚ್ ಲಿಬರೇಷನ್ ಆರ್ಮಿ ವಿರುದ್ಧ ಪಾಕಿಸ್ತಾನ ಸೇನೆ ಕೌಂಟರ್​ ಆಪರೇಷನ್​​ಗೆ ಇಳಿಯೋದಂತೂ ಗ್ಯಾರಂಟಿ. ಆದ್ರೆ ಇದು ಕೂಡ ಅಷ್ಟೊಂದು ಸುಲಭ ಇಲ್ಲ. ಯಾಕಂದ್ರೆ, ಮಾಚ್​ನಲ್ಲಿ ಪಾಕಿಸ್ತಾನದ ಪೊಲೀಸರು ಮತ್ತು ಸೈನಿಕರನ್ನ ಬಲೂಚ್ ಲಿಬರೇಷನ್ ಆರ್ಮಿ ಒತ್ತೆಯಾಳುಗಳನ್ನಾಗಿಟ್ಟುಕೊಂಡಿದೆ. ಹೀಗಾಗಿ ಸದ್ಯ ಅಲ್ಲಿನ ಪರಿಸ್ಥಿತಿ ಭಾರಿ ಗಂಭೀರವಾಗಿಯೇ ಇದೆ.

ಇಲ್ಲಿ ಇನ್ನೊಂದು ಸೂಕ್ಷ್ಮ ವಿಚಾರವನ್ನ ಹೇಳಲೇಬೇಕು. ಕೆಲ ವಾರಗಳ ಹಿಂದೆಯಷ್ಟೇ ಇರಾನ್ ಸೇನೆ ಬಲೂಚಿಸ್ತಾನದಲ್ಲಿರೋ ಪಾಕ್ ಪ್ರಾಯೋಜಿತ ಉಗ್ರರ ಕ್ಯಾಂಪ್​ಗಳನ್ನ ಗುರಿಯಾಗಿಸಿ ಅಟ್ಯಾಕ್ ಮಾಡಿತ್ತು. ಮಿಸೈಲ್​ಗಳ ಮೂಲಕ ದಾಳಿ ನಡೆಸಿತ್ತು. ಆಗ ಪಾಕ್ ಸೇನೆ ಕೂಡ ಇರಾನ್​ ಮೇಲೆ ಪ್ರತಿ ದಾಳಿ ನಡೆಸಿತ್ತು. ಇರಾನ್ ಮತ್ತು ಪಾಕಿಸ್ತಾನ ನಡುವಿನ ಅಟ್ಯಾಕ್-ಕೌಂಟರ್​ ಅಟ್ಯಾಕ್​ನಲ್ಲಿ ಬಲೂಚಿಸ್ತಾನದ ಹಲವು ಅಮಾಯಕ ಜನರು ಕೂಡ ಸಾವನ್ನಪ್ಪಿದ್ರು. ಇದ್ರಿಂದ ರೊಚ್ಚಿಗೆದ್ದ ಬಲೂಚ್ ಲಿಬರೇಷನ್ ಆರ್ಮಿ ಪಾಕಿಸ್ತಾನದ ವಿರುದ್ಧ ಯುದ್ಧವನ್ನೇ ಘೋಷಿಸಿತ್ತು. ಇದ್ರ ಭಾಗವಾಗಿಯೇ ದಾರಾ-ಇ-ಬೋಲಾನ್ ಕಾರ್ಯಾಚರಣೆಯನ್ನ ಬಲೂಚ್ ಲಿಬರೇಷನ್ ಆರ್ಮಿ ಕೈಗೊಂಡಿದೆ. ಸ್ನೇಹಿತರೇ, ನಿಮಗೆ ಗೊತ್ತಿರ್ಲಿ. ಬಲೂಚ್ ಲಿಬರೇಷನ್ ಆರ್ಮಿ ಅನ್ನೋದು ಪಾಕಿಸ್ತಾನದಿಂದ ಬ್ಯಾನ್​​ಗೆ ಒಳಗಾಗಿರೋ ಸಂಘಟನೆ. ಪಾಕ್ ಸರ್ಕಾರ ಇದನ್ನ ಉಗ್ರ ಸಂಘಟನೆ ಅಂತಾ ಘೋಷಣೆ ಮಾಡಿದೆ. ಬಲೂಚಿಸ್ತಾನ ಮತ್ತು ಇರಾನ್ ಗಡಿ ಬಳಿಯೇ ಈ ಬಲೂಚ್ ಲಿಬರೇಷನ್ ಆರ್ಮಿ ಸಂಘಟನೆ ಇರೋದು. ಬಲೂಚಿಸ್ತಾನವನ್ನ ಪಾಕಿಸ್ತಾನದಿಂದ ಸಂಪೂರ್ಣವಾಗಿ ಸ್ವಾತಂತ್ರ್ಯಗೊಳಿಸಬೇಕು ಅನ್ನೋದೆ ಬಲೂಚ್ ಲಿಬರೇಷನ್ ಆರ್ಮಿಯ ಮೂಲ ಉದ್ದೇಶ. ಅದಕ್ಕೂ ಒಂದು ಪ್ರಮುಖ ಕಾರಣ ಇದೆ. ಬಲೂಚಿಸ್ತಾನ ಅನ್ನೋದು ಪಾಕಿಸ್ತಾನದ ಅತೀ ದೊಡ್ಡ ಪ್ರಾಂತ್ಯ. ಅತ್ಯಂತ ಸಂಪದ್ಭರಿತ ಪ್ರಾಂತ್ಯ. ಗಣಿಗಾರಿಕೆ, ನೀರು, ನ್ಯಾಚ್ಯುರಲ್ ಗ್ಯಾಸ್ ಹೀಗೆ ಸಾಕಷ್ಟು ರಿಸೋರ್ಸ್​​ಗಳು ಇಲ್ಲಿವೆ. ಆದ್ರೆ ಬಲೂಚಿಸ್ತಾನಿಗಳಿಗೆ ಮಾತ್ರ ರಾಜಕೀಯವಾಗಿ ಯಾವುದೇ ಪವರ್ ಇಲ್ಲ. ಪ್ರಾಕೃತಿವಾಗಿ ಅಷ್ಟೆಲ್ಲಾ ಸಂಪತ್ತು ಇದ್ರೂ ಬಲೂಚಿಗಳು ಬಡತನದಲ್ಲೇ ಬೇಯುತ್ತಿದ್ದಾರೆ. ಪಾಕಿಸ್ತಾನ ಸೇನೆ ಇಲ್ಲಿನ ಜನರ ಮೇಲೆ ದೌರ್ಜನ್ಯ ಎಸಗುತ್ತಲೇ ಬಂದಿದೆ. ಬಲೂಚಿ ಜನರ ಏಳಿಗೆಗಾಗಿ ಪಾಕ್​ ಸರ್ಕಾರ ಏನನ್ನೂ ಮಾಡ್ತಿಲ್ಲ. ಅಭಿವೃದ್ಧಿ ಅನ್ನೋ ಇಲ್ಲಿ ಇಲ್ವೇ ಇಲ್ಲ. ಇದ್ರಿಂದ ರೋಸಿ ಹೋಗಿಯೇ ಬಲೂಚ್ ಲಿಬರೇಷನ್ ಆರ್ಮಿಯಂಥಾ ಬಂಡಾಯ ಸಂಘಟನೆ ಹುಟ್ಟಿಕೊಳ್ತು. ಈ ಸಂಘಟನೆ ಈಗ ತನ್ನದೇ ಸೇನೆಯನ್ನ ಕಟ್ಟಿಕೊಂಡಿದೆ. ಬಲೂಚಿಗಳು ಕೈಗೆ ಶಸ್ತ್ರಾಸ್ತ್ರ ಎತ್ತಿಕೊಂಡಿದ್ದಾರೆ. ಪಾಕಿಸ್ತಾನದ ಭಾಗವಾಗಿಯೇ ಇದ್ರೆ ನಾವು ಹೀಗೆ ನರಕಯಾತನೆ ಅನುಭವಿಸಬೇಕಾಗುತ್ತೆ. ಬಲೂಚಿಸ್ತಾನವನ್ನ ಪ್ರತ್ಯೇಕ ದೇಶವನ್ನಾಗಿಸಿದ್ರಷ್ಟೇ ಉದ್ಧಾರವಾಗೋಕೆ ಸಾಧ್ಯ ಅನ್ನೋದು ಅಲ್ಲಿನ ಜನರಿಗೆ ಅರ್ಥವಾಗಿದೆ. ಹೀಗಾಗಿ ಪಾಕ್​ ಸರ್ಕಾರ ಮತ್ತು ಸೇನೆ ವಿರುದ್ಧ ಹೋರಾಟಕ್ಕಿಳಿದಿದ್ದಾರೆ. ಇನ್ನು ಭಾರತ ಸರ್ಕಾರ ಪರೋಕ್ಷವಾಗಿ ಬಲೂಚಿಸ್ತಾನಿಗಳ ಬೆಂಬಲಕ್ಕೆ ನಿಂತಿದೆ. ಅಲ್ಲಿನ ಪ್ರತ್ಯೇಕತಾವಾದಿ ಹೋರಾಟಗಾರರಿಗೆ ತೆರೆಮರೆಯಲ್ಲೇ ನೆರವು ನೀಡಲಾಗ್ತಿದೆ. ಇದ್ರ ಪರಿಣಾಮ ಪಾಕ್ ವಿರೋಧಿ ಪ್ರತಿಭಟನೆಗಳು ಬಲೂಚಿಸ್ತಾನದಲ್ಲಿ ತೀವ್ರಗೊಳ್ತಾ ಇದೆ. 2022ರಲ್ಲಿ ಬಂದ ಕೆಲ ವರದಿಗಳ ಪ್ರಕಾರ, ಸುಮಾರು 600 ಮಂದಿ ಬಲೂಚಿಗಳಿಗೆ ಭಾರತದ ಇಂಟೆಲಿಜೆನ್ಸ್ ಏಜೆನ್ಸಿ ರಾ ಅಫ್ಘಾನಿಸ್ತಾನದಲ್ಲಿ ಶಸ್ತ್ರಾಸ್ತ್ರ ತರಬೇತಿ ನೀಡಿದ್ಯಂತೆ. ಬಲೂಚಿಸ್ತಾನದಲ್ಲಿ ಏನೇ ಪಾಕ್ ವಿರೋಧಿ ಬೆಳವಣಿಗೆಗಳಾದ್ರೂ ಪಾಕಿಸ್ತಾನ ಮೊದಲು ಬೆರಳು ತೋರಿಸೋದೆ ಭಾರತದ ಮೇಲೆ. ರಾ ವಿರುದ್ಧ ಆರೋಪಗಳನ್ನ ಮಾಡ್ತಾನೆ ಇರುತ್ತೆ. ಈಗ ಬಲೂಚ್ ಲಿಬರೇಷನ್ ಆರ್ಮಿ ಮಾಚ್ ನಗರವನ್ನ ವಶಪಡಿಸಿಕೊಂಡಿರೋದ್ರಲ್ಲಿ ರಾ ಕೆಲಸ ಮಾಡಿದ್ಯಾ ಇಲ್ವಾ ಅನ್ನೋದು ಸದ್ಯಕ್ಕೆ ಸೂಪರ್ ಸೀಕ್ರೆಟ್. ಭವಿಷ್ಯದಲ್ಲಿ ಬಲೂಚಿಸ್ತಾನದಲ್ಲಿ ದೊಡ್ಡ ಮಟ್ಟದ ಬೆಳವಣಿಗೆಗಳಾಗೋದಂತೂ ಗ್ಯಾರಂಟಿ.

Sulekha