ರಣಜಿ ಸೋಲಿಗೆ ಕೆ.ಎಲ್ ರಾಹುಲ್ ನೋವು – ವೀರಾಂಜನೇಯ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ಯಾಕೆ ಕೆ.ಎಲ್ ರಾಹುಲ್?

ರಣಜಿ ಟ್ರೋಫಿ ಕೈತಪ್ಪಿದ್ದಕ್ಕೆ ಕರ್ನಾಟಕದ ಆಟಗಾರರು ಬೇಸರದಲ್ಲಿದ್ದಾರೆ. ಅದರಲ್ಲೂ ಟೀಮ್ ಇಂಡಿಯಾ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ ಕೂಡಾ ರಣಜಿ ಟ್ರೋಫಿ ಕೈತಪ್ಪಿದ ಬೇಜಾರಿನಲ್ಲಿದ್ದಾರೆ. ಇದೀಗ ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ಕೆ.ಎಲ್. ರಾಹುಲ್ ವೀರಾಂಜನೇಯ ಕ್ಷೇತ್ರಕ್ಕೆ ತೆರಳಿ, ದೇವರ ದರ್ಶನ ಪಡೆದಿದ್ದಾರೆ.
ಇದನ್ನೂ ಓದಿ:ಅಂದು ಸಂಜು ಬ್ಯಾಟಿಂಗ್‌ಗೆ ಸೂರ್ಯ ವ್ಯಂಗ್ಯ – ಇಂದು ಸಂಜು ಸ್ಯಾಮ್ಸನ್ ಮುಂದೆ ತಲೆಬಾಗಿದ ಸೂರ್ಯ
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರವಾದ ಬಂಗಾರಮಕ್ಕಿಗೆ ಕನ್ನಡಿಗ ಕ್ರಿಕೆಟರ್ ಕೆ.ಎಲ್ ರಾಹುಲ್ ಭೇಟಿ ನೀಡಿದರು. ಇಲ್ಲಿನ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು ಹನುಮಂತನ ದರ್ಶನ ಪಡೆದರು. ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ಮಾರುತಿ ಗುರೂಜಿ ಅವರನ್ನು ಭೇಟಿ ಮಾಡಿದ ರಾಹುಲ್, ಅವರ ಸಮ್ಮುಖದಲ್ಲಿ ಆಶೀರ್ವಾದ ಪಡೆದರು. ವಿಶೇಷವೆಂದರೆ, ರಾಹುಲ್ ಅವರು ರಣಜಿ ಟ್ರೋಫಿ ಮುಕ್ತಾಯವಾದ ಮರುದಿನವೇ ಈ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.
ಶರಾವತಿ ನದಿ ತೀರದಲ್ಲಿರುವ ಬಂಗಾರಮ್ಮಕ್ಕಿ ಕ್ಷೇತ್ರ ಕ್ಷೇತ್ರವು ಅತ್ಯಂತ ಜಾಗೃತ ತಾಣವೆಂದು ಹೆಸರುವಾಸಿಯಾಗಿದೆ. ಇಲ್ಲಿನ ಹನುಮಂತನನ್ನು “ಕಾರ್ಯಸಿದ್ದಿ ಆಂಜನೇಯ” ಎಂದು ಭಕ್ತರು ನಂಬುತ್ತಾರೆ. ಉತ್ತರ ಕನ್ನಡದ ಹೊನ್ನಾವರ ತಾಲ್ಲೂಕಿನಲ್ಲಿ ಈ ಬಂಗಾರಮಕ್ಕಿ ಶ್ರೀ ವೀರಾಂಜನೇಯ ಕ್ಷೇತ್ರವಿದೆ. ಈ ಕ್ಷೇತ್ರದ ಮೂಲ ವಿಗ್ರಹವು ಮಿರ್ಜಾನ್ ಸಮೀಪ 15 ವರ್ಷಗಳ ಕಾಲ ನೀರಿನಲ್ಲಿದ್ದು, ನಂತರ ಕ್ಷೇತ್ರದ ಸ್ಥಾಪಕ ಬ್ರಹ್ಮಶ್ರೀ ಗಣೇಶ್ ಭಟ್ ಅವರಿಗೆ ದಿವ್ಯ ದರ್ಶನದ ಮೂಲಕ ಲಭ್ಯವಾಯಿತು ಎಂಬ ಐತಿಹ್ಯವಿದೆ. ಇಲ್ಲಿನ ಆಂಜನೇಯನು ಕೈಮುಗಿದು ನಿಂತಿರುವ ನಮಸ್ಕಾರ ಮುದ್ರೆಯಲ್ಲಿದ್ದು, ಉತ್ತರಾಭಿಮುಖವಾಗಿ ನೆಲೆಸಿರುವುದು ಅತ್ಯಂತ ವಿಶೇಷವಾಗಿದೆ. ಈ ಕ್ಷೇತ್ರವು ಕೇವಲ ಭಕ್ತಿಯ ಕೇಂದ್ರವಲ್ಲದೆ, ಭಕ್ತರ ಕಷ್ಟ-ಕಾರ್ಪಣ್ಯಗಳಿಗೆ ದೈವವಾಣಿಯ ಮೂಲಕ ಪರಿಹಾರ ಸೂಚಿಸುವ ‘ದರ್ಶನ ಸೇವೆ’ ಹಾಗೂ ಶ್ರೀ ಮಾರುತಿ ಗುರೂಜಿ ಅವರ ಮಾರ್ಗದರ್ಶನದಿಂದಾಗಿ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಶೃಂಗೇರಿ ಜಗದ್ಗುರುಗಳಿಂದ ‘ಹೇಮಪುರ’ ಎಂದು ಕರೆಸಿಕೊಂಡಿರುವ ಈ ಕ್ಷೇತ್ರವು ಶಿಕ್ಷಣ, ಅನ್ನದಾನ ಮತ್ತು ಗೋಸೇವೆಯಂತಹ ಸಾಮಾಜಿಕ ಕಾರ್ಯಗಳ ಮೂಲಕ ಅಪಾರ ಮಹತ್ವವನ್ನು ಪಡೆದುಕೊಂಡಿದೆ.

ನೋಡಿರಿ

