ರಾಮಾಯಣದಲ್ಲಿ ಲೇಪಾಕ್ಷಿ ಮಹತ್ವದ ಸ್ಥಾನ ಪಡೆದುಕೊಂಡಿರೋದ್ಯಾಕೆ? – ಜಟಾಯು ಬಗ್ಗೆ ನಿಮಗೆಷ್ಟು ಗೊತ್ತು?
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೂ ಮುನ್ನ ಪ್ರಧಾನಿ ಮೋದಿ ಆಂಧ್ರಪ್ರದೇಶದ ಲೇಪಾಕ್ಷಿಗೆ ಭೇಟಿ ನೀಡಿದ್ದರು. ಈ ವೇಳೆ ವೀರಭದ್ರಾ ದೇವಾಲಯದಲ್ಲಿ ಮೋದಿ ವಿಶೇಷ ಪೂಜೆ ಕೂಡ ಸಲ್ಲಿಸಿದ್ದರು. ಅಯೋಧ್ಯೆಯ ರಾಮಮಂದಿರ ಲೋಕಾರ್ಪಣೆಗೂ ಮೊದಲು ಮೋದಿ ಲೇಪಾಕ್ಷಿಗೆ ಭೇಟಿ ನೀಡಿರೋದಕ್ಕೂ ಒಂದು ಮಹತ್ವದ ಕಾರಣ ಇದೆ. ರಾಮಾಯಣದಲ್ಲಿ ಲೇಪಾಕ್ಷಿಗೆ ವಿಶೇಷ ಸ್ಥಾನಮಾನವಿದೆ. ಅದರದ್ದೇ ಆದ ಇತಿಹಾಸವಿದೆ. ಹೀಗಾಗಿಯೇ ಪ್ರಧಾನಿ ಮೋದಿ ರಾಮನ ಪ್ರಾಣಪ್ರತಿಷ್ಠಾಪನೆಗೂ ಮುನ್ನ ಲೇಪಾಕ್ಷಿಗೆ ತೆರಳಿದ್ದು. ರಾಮಾಯಣದಲ್ಲಿ ಲೇಪಾಕ್ಷಿ ಮಹತ್ವದ ಸ್ಥಾನ ಪಡೆದುಕೊಂಡಿರೋದ್ಯಾಕೆ? ಲೇಪಾಕ್ಷಿಯ ಹಿನ್ನೆಲೆ ಏನು? ರಾಮಾಯಣ ಕಾಲದಲ್ಲಿ ಅಲ್ಲಿ ಏನಾಗಿತ್ತು? ಎಂಬ ಬಗ್ಗೆ ವಿಸ್ತೃತ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮಂದಿರ vs ಮಸೀದಿ – ಅಯೋಧ್ಯೆಯ ಐದು ಶತಮಾನಗಳ ಕಿತ್ತಾಟ..ಹೋರಾಟ.. ಹೇಗಿತ್ತು?
ರಾಮಾಯಣದಲ್ಲಿ ನೀವು ಜಟಾಯು ಪಕ್ಷಿ ಬಗ್ಗೆ ಕೇಳಿಯೇ ಇರ್ತೀರಾ. ಜಟಾಯು ಅಂದ್ರೆ ಹದ್ದುಗಳ ರಾಜ. ರಾವಣನು ಸೀತೆಯನ್ನ ಅಪಹರಿಸಿ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಜಟಾಯು ಪಕ್ಷಿ ರಾವಣನ ವಿರುದ್ಧ ಹೋರಾಡಿ. ಸೀತಾಯನ್ನ ರಕ್ಷಿಸೋಕೆ ಯತ್ನಿಸುತ್ತೆ. ಆದ್ರೆ ಜಟಾಯುಗೆ ಆದಾಗ್ಲೇ ವಯಸ್ಸಾಗಿತ್ತು. ಸುದೀರ್ಘವಾಗಿ ಹೋರಾಡುವಷ್ಟು ಶಕ್ತಿ ಜಟಾಯುಗೆ ಇರಲಿಲ್ಲ. ರಾವಾಣನ ಜೊತೆಗೆ ಕಾದಾಡಿ ಸುಸ್ತಾದ ಸಂದರ್ಭದಲ್ಲಿ ರಾಣವ ತನ್ನಲ್ಲಿದ್ದ ಖಡ್ಗದಿಂದ ಜಟಾಯುವಿನ ಒಂದು ರೆಕ್ಕೆಯನ್ನೇ ಕತ್ತರಿಸಿ ಬಿಡ್ತಾನೆ. ಹೋರಾಡೋಕೆ ಸಾಧ್ಯವಾಗದೆ ಜಟಾಯು ಅಲ್ಲೇ ಕುಸಿದು ಬೀಳುತ್ತೆ. ಇದೇ ವೇಳೆ ರಾಮ ಮತ್ತು ಲಕ್ಷ್ಮಣ ನಾಪತ್ತೆಯಾದ ಸೀತೆಯನ್ನ ಹುಡುಕಿಕೊಂಡು ಆ ದಾರಿಯಲ್ಲಿ ಬರ್ತಾರೆ. ಆಗ ಗಾಯಗೊಂಡು ರಕ್ತದ ನಡುವೆ ಬಿದ್ದು ಒದ್ದಾಡುತ್ತಿದ್ದ ಜಟಾಯು ಪಕ್ಷಿ ಅವರ ಕಣ್ಣಿಗೆ ಬೀಳುತ್ತೆ. ತನ್ನ ಕೊನೆಯ ಕ್ಷಣದಲ್ಲಿ ಜಟಾಯು ರಾಮ ಮತ್ತು ಲಕ್ಷ್ಮಣನಿಗೆ ನಡೆದ ಘಟನೆಯನ್ನ ತಿಳಿಸುತ್ತೆ. ಸೀತೆಯನ್ನ ರಾವಣ ಅಪಹರಿಸಿದ್ದಾನೆ. ಆತನ ಜೊತೆಗೆ ಹೋರಾಡೋಕೆ ಯತ್ನಿಸಿದೆ. ಈಗ ರಾವಣ ಸೀತೆಯನ್ನ ಕರೆದುಕೊಂಡು ದಕ್ಷಿಣದತ್ತ ಹೋಗಿರೋದಾಗಿ ಜಟಾಯು ಮಾಹಿತಿ ನೀಡುತ್ತೆ. ಇಷ್ಟು ಹೇಳಿ ಜಟಾಯು ಅಲ್ಲೇ ಕೊನೆಯುಸಿರೆಳೆಯುತ್ತೆ. ಬಳಿಕ ರಾಮ, ಲಕ್ಷ್ಣಣ ಇಬ್ಬರೂ ಜಟಾಯುವಿನ ಅಂತ್ಯಸಂಸ್ಕಾರ ಮಾಡ್ತಾರೆ. ತನ್ನ ತಂದೆಗೆ ಸಮಾನ ಅಂತಾ ಪರಿಗಣಿಸಿಯೇ ರಾಮ 7 ಪವಿತ್ರ ನದಿಗಳ ನೀರನ್ನ ಬಳಸಿ ಜಟಾಯುವಿಗೆ ತಿಲಾಂಜಲಿ ಇಡ್ತಾರೆ.
ಲೇಪಾಕ್ಷಿ ಅಂದ್ರೆ ತೆಲುಗಿನಲ್ಲಿ ಎದ್ದೇಳು ಓ ಹಕ್ಕಿಯೇ ಎಂದರ್ಥ. ಹೀಗಾಗಿ ಸೀತೆಯನ್ನ ರಕ್ಷಿಸೋಕೆ ರಾವಣನ ಜೊತೆಗೆ ಹೋರಾಡಿ ಜಟಾಯು ಬಿದ್ದ ಜಾಗಕ್ಕೆ ಲೇಪಾಕ್ಷಿ ಅನ್ನೋ ಹೆಸರು ಬಂತು. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಈ ಲೇಪಾಕ್ಷಿ ಅನ್ನೋ ಜಾಗವಿದೆ. ಜಟಾಯುವಿನ ನೆನಪಿಗಾಗಿ ಲೇಪಾಕ್ಷಿಯಲ್ಲಿ ಒಂದು ಗರುಡನ ಪ್ರತಿಮೆಯನ್ನ ಕೂಡ ನಿರ್ಮಾಣ ಮಾಡಲಾಗಿದೆ. ಆದ್ರೆ ಇಲ್ಲೊಂದು ಟ್ವಿಸ್ಟ್ ಕೂಡ ಇದೆ. ಕೇರಳಿಗರು ನಂಬಿರೋ ಪ್ರಕಾರ ಜಟಾಯು ಬಿದ್ದ ಜಾಗ ಕೇರಳದ ಕೊಲ್ಲಂನಲ್ಲಿದ್ಯಂತೆ. ಶ್ರೀರಾಮನು ಕೇರಳದಲ್ಲೇ ಗಾಯಗೊಂಡು ಬಿದ್ದ ಜಟಾಯುವನ್ನ ನೋಡ್ತಾನೆ ಅಂತಾ ಅಲ್ಲಿನ ಜನರು ನಂಬಿದ್ದಾರೆ. ಹೀಗಾಗಿಯೇ ಕೊಲ್ಲಂನಲ್ಲಿ ಬೆಟ್ಟವೊಂದರ ಮೇಲೆ ಜಟಾಯು ಪಕ್ಷಿಯ ಭಾರಿ ಗಾತ್ರದ ಪ್ರತಿಮೆ ನಿರ್ಮಿಸಲಾಗಿದೆ. ಈ ಪ್ರತಿಮೆಯಲ್ಲೂ ಅಷ್ಟೇ, ಗರುಡನ ಒಂದು ರೆಕ್ಕೆ ಕಟ್ ಆಗಿದೆ. ಆಕಾಶದಿಂದ ಯಾವ ರೀತಿ ಬಿತ್ತೋ ಅದೇ ಪೊಸೀಶನ್ನಲ್ಲಿ ಜಟಾಯುವಿನ ಪ್ರತಿಮೆ ನಿರ್ಮಿಸಿದ್ದಾರೆ. ಇದು ಈಗ ಕೇರಳದ ಪ್ರಮುಖ ಪ್ರವಾಸಿ ತಾಣವಾಗಿದೆ.
ಈ ಪ್ರತಿಮೆಯನ್ನ ನೋಡಿದಾಗ ಒಂದು ಪ್ರಶ್ನೆ ಕೂಡ ಸಹಜವಾಗಿಯೇ ಬರುತ್ತೆ. ಇಷ್ಟೊಂದು ದೊಡ್ಡ ಗಾತ್ರದ ಹದ್ದು ಇರೋಕೆ ಸಾಧ್ಯಾನಾ ಅನ್ನೋದು. ಆದ್ರೆ ರಾಮಾಯಣ ಕಾಲದ ಈ ಜಟಾಯುವಿನ ಗಾತ್ರ ಪರ್ವತದಷ್ಟು ದೊಡ್ಡದಾಗಿತ್ತಂತೆ. ಜಟಾಯು ಅನ್ನೋದೇನು ಸಾಮಾನ್ಯ ಪಕ್ಷಿ ಆಗಿರಲಿಲ್ಲ. ಇದೊಂದು ದೈವಿಕ ಶಕ್ತಿಯ ಪಕ್ಷಿಯಾಗಿತ್ತು. ಸಪ್ತ ಋಷಿಗಳಲ್ಲಿ ಒಬ್ಬರಾಗಿರುವ ಕಶ್ಯಪ ಋಷಿಯ ವಂಶಕ್ಕೆ ಜಟಾಯು ಪಕ್ಷಿ ಸೇರಿದೆ. ಋಷಿ ಕಶ್ಯಪರ ಪತ್ನಿ ವಿನಿತಾಗೆ ಅರುಣ ಮತ್ತು ಗರುಡ ಅನ್ನೋ ಇಬ್ಬರು ಪುತ್ರರ ಜನನವಾಗುತ್ತೆ. ಗರುಡ ವಿಷ್ಣುವಿನ ವಾಹನವಾಗುತ್ತಾನೆ. ಅರುಣ ಸೂರ್ಯ ದೇವರ ಸಾರಥಿಯಾಗುತ್ತಾನೆ. ಅರುಣನಿಗೆ ಸಂಪಾಥಿ ಮತ್ತು ಜಟಾಯು ಅನ್ನೋ ಇಬ್ಬರು ಪುತ್ರರು ಜನಿಸ್ತಾರೆ. ಈ ಪೈಕಿ ಸಂಪಾಥಿ ದೊಡ್ಡವನಾದ್ರೆ, ಜಟಾಯು ಚಿಕ್ಕವನಾಗಿರ್ತಾನೆ.
ಹೀಗಾಗಿಯೇ ಸಂಪಾಥಿ ಮತ್ತು ಜಟಾಯುವನ್ನ ದೈವಿಕ ಪಕ್ಷಿ ಅಂತಾ ಪರಿಗಣಿಸಲಾಗುತ್ತೆ. ಇಂಥಾ ಜಟಾಯುವಿಗೆ ಮಾನವನ ರೂಪ ತಾಳುವ ಸಾಮರ್ಥ್ಯ ಕೂಡ ಇತ್ತು. ತನಗೆ ಬೇಕೆಂದಾದಾಗಲೆಲ್ಲಾ ಮಾನವನ ರೂಪ ಪಡೆಯಬಹುದಿತ್ತು. ಪರ್ವತ ಗಾತ್ರದ ಇಬ್ಬರೂ ವಿಂಧ್ಯಾಚಲ ಪರ್ವತ ಶ್ರೇಣಿಗಳಲ್ಲೇ ಸಂಚರಿಸ್ತಾ ಇದ್ರು.
ಇನ್ನು ವನವಾಸದ ಸಂದರ್ಭದಲ್ಲಿ ಜಟಾಯು ರಾಮನಿಗೆ ನೆರವು ನೀಡಿತ್ತಂತೆ. ಅದೊಮ್ಮೆ ದಶರಥ ಮಹಾರಾಜ ಶನಿಯ ಮೇಲೆ ದಾಳಿ ನಡೆಸೋಕೆ ಅಂತಾ ರಥದಲ್ಲಿ ಕುಳಿತು ಶನಿ ಮಂಡಲದತ್ತ ತೆರಳುತ್ತಾರೆ. ಇದು ಶನಿಯ ಕಣ್ಣಿಗೆ ಬೀಳುತ್ತಲೇ ಶನಿಯ ಕಣ್ಣಿನ ಬೆಂಕಿ ನೇರವಾಗಿ ದಶರಥನ ರಥವನ್ನೇ ಸುಟ್ಟು ಹಾಕುತ್ತೆ. ದಶರಥ ಮಹಾರಾಜ ಆಕಾಶದಿಂದ ಕೆಳಕ್ಕೆ ಬೀಳ್ತಾರೆ. ಆದ್ರೆ ಭೂಮಿಗೆ ಅಪ್ಪಳಿಸುವ ಮೊದಲೇ ಪಕ್ಷಿಗಳ ರಾಜ ಜಟಾಯು ದಶರಥನನ್ನ ಹಿಡಿದು ರಕ್ಷಿಸಿ ಭೂಮಿಯ ಮೇಲೆ ಇಳಿಸುತ್ತೆ. ಅಲ್ಲಿಂದ ದಶರಥ ಮತ್ತು ಜಟಾಯು ಮಧ್ಯೆ ಸ್ನೇಹ ಶುರುವಾಗುತ್ತೆ. ಇದೇ ಕಾರಣಕ್ಕಾಗಿ ವನವಾಸದ ವೇಳೆ ಜಟಾಯು ಶ್ರೀರಾಮನಿಗೆ ಸಹಾಯ ಮಾಡುವುದು.
ಯಾರೇ ಆಗಲಿ, ಸ್ತ್ರೀಯರನ್ನ ಬಲವಂತವಾಗಿ ಕರೆದುಕೊಂಡು ಹೋಗುತ್ತಿದ್ರೆ ಜಟಾಯುವಿನಿಂದ ಮಾತ್ರ ತಪ್ಪಿಸಿಕೊಳ್ಳೋಕೆ ಸಾಧ್ಯವೇ ಇರುತ್ತಿರಲಿಲ್ಲ. ಶತ್ರುಗಳು ಎಷ್ಟೇ ಬಲಾಢ್ಯರಾಗಿದ್ರೂ ಸ್ತ್ರೀಯರನ್ನ ರಕ್ಷಿಸೋಕೆ ಜಟಾಯು ತನ್ನ ಪ್ರಾಣವನ್ನೂ ಲೆಕ್ಕಿಸ್ತಿರಲಿಲ್ಲ. ಒಂದು ವೇಳೆ ಜಟಾಯುವಿಗೆ ವಯಸ್ಸು ಅನ್ನೋದು ಅಡ್ಡಿಯಾಗದೆ ಇರ್ತಿದ್ರೆ ಅಂದು ರಾವಣನನ್ನ ಕೂಡ ಮಣಿಸಿ ಸೀತೆಯನ್ನ ರಕ್ಷಿಸ್ತಾ ಇತ್ತು. ಇದನ್ನ ಆಧರಿಸಿಯೇ ಹಿಂದೂ ಧರ್ಮಗ್ರಂಥಗಳಲ್ಲಿ ಒಂದು ಸೂಕ್ಷ್ಮ ವಿಚಾರ ಕೂಡ ಉಲ್ಲೇಖವಾಗಿದೆ. ಸ್ತ್ರೀಯರ ಮೇಲಿನ ಅತ್ಯಾಚಾರ, ದುರಾಚಾರಗಳ ವಿರುದ್ಧ ವೃದ್ಧ ಜಟಾಯುವೇ ಹೋರಾಟಕ್ಕೆ ಇಳಿದಿದೆ ಅಂದ್ರೆ ನಾವು ಕೂಡ ಯಾವತ್ತಿಗೂ ಮೌನವಾಗಿರಬಾರದು ಅನ್ನೋದನ್ನ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.
ಜಟಾಯು ವಿಚಾರವಾಗಿ ಪುರಾಣಗಳಲ್ಲಿ ಇನ್ನೊಂದು ಕಥೆ ಕೂಡ ಇದೆ. ಅದೊಂದು ಬಾರಿ ಸಂಪಾಥಿ ಮತ್ತು ಜಟಾಯು ಇಬ್ಬರೂ ತಮ್ಮಲ್ಲಿ ಯಾರು ಹೆಚ್ಚು ದೂರಕ್ಕೆ, ಎತ್ತರಕ್ಕೆ ಹಾರಾಡೋಕೆ ಸಾಧ್ಯ ಅನ್ನೋ ವಿಚಾರವಾಗಿ ಸ್ಪರ್ಧೆಗೆ ಮುಂದಾಗ್ತಾರೆ. ಇಬ್ಬರೂ ಜೊತೆಗೆ ಸೂರ್ಯಮಂಡಲವನ್ನ ಮುಟ್ಟುವಂಥಾ ಸುದೀರ್ಘ ಹಾರಾಟ ಕೈಗೊಳ್ತಾರೆ. ಈ ವೇಳೆ ಸೂರ್ಯನ ಶಾಖವನ್ನ ಸಹಿಸಿಕೊಳ್ಳೋಕೆ ಆಗದೆ ಜಟಾಯು ಕಂಗಾಲಾಗಿ ಬಿಡ್ತಾನೆ. ಆಗ ಅಣ್ಣ ಸಂಪಾಥಿ ತನ್ನ ರೆಕ್ಕೆಯಡಿ ಜಟಾಯುವನ್ನ ರಕ್ಷಣೆ ಮಾಡಿ ಕರೆದುಕೊಂಡು ಹೋಗ್ತಾನೆ. ಆದ್ರೆ ಸೂರ್ಯನ ಹತ್ತಿರ ಹೋಗುತ್ತಲೇ ಸಂಪಾಥಿಯ ರೆಕ್ಕೆಯಲ್ಲಿ ಬೆಂಕಿ ಹೊತ್ತಿಕೊಳ್ಳುತ್ತೆ. ಮೂರ್ಛೆ ತಪ್ಪಿ ಸಂಪಾಥಿ ಸಮುದ್ರ ತಟದ ಮೇಲೆ ಬೀಳ್ತಾನೆ. ಜೊತೆಗಿದ್ದ ಜಟಾಯು ಕೂಡ ಮೂರ್ಛೆ ತಪ್ಪಿ ವಿಂಧ್ಯ ಪರ್ವತ ಶ್ರೇಣಿ ಮೇಲೆ ಬೀಳ್ತಾನೆ. ಋಷಿಯೊಬ್ಬರು ಸಮುದ್ರ ತೀರದಲ್ಲಿ ಬಿದ್ದಿದ್ದ ಸಂಪಾಥಿಗೆ ಉಪಚಾರ ಮಾಡ್ತಾರೆ. ರೆಕ್ಕೆಯೇ ಸುಟ್ಟು ಹೋಗಿದ್ರಿಂದ ಸಂಪಾಥಿಗೆ ಅಲ್ಲಿಂದ ಹಾರೋಕೆ ಸಾಧ್ಯವಾಗೋದಿಲ್ಲ. ಇತ್ತ ಪರ್ವತ ಶ್ರೇಣಿಯಲ್ಲಿ ಬಿದ್ದಿದ್ದ ಜಟಾಯುವಿಗೂ ಅಣ್ಣ ಎಲ್ಲಿ ಬಿದ್ದಿದ್ದಾನೆ ಅನ್ನೋದನ್ನ ಪತ್ತೆ ಹಚ್ಚೋಕೆ ಆಗೋದಿಲ್ಲ. ಸಂಪಾಥಿ ರೆಕ್ಕೆಯೇ ಇಲ್ಲದೆ ತನ್ನ ಜೀವನವನ್ನ ಕಳೆಯುತ್ತಾನೆ. ಯಾವತ್ತಿಗೂ ಜಟಾಯುವನ್ನ ನೋಡೋಕೆ ಸಾಧ್ಯವೇ ಆಗೋದಿಲ್ಲ. ಈ ನಡುವೆ ಜಾಂಬವಂತ, ಅಂಗದ ಮತ್ತು ಹನುಮಾನ್ ರಾವಣ ಅಪಹರಣ ಮಾಡಿದ್ದ ಸೀತಾ ಮಾತೆಯನ್ನ ಹುಡುಕಿಕೊಂಡು ಹೋಗುವಾಗ ರೆಕ್ಕೆಯೇ ಇಲ್ಲದ ಸಂಪಾಥಿ ಅವರ ಕಣ್ಣಿಗೆ ಬೀಳುತ್ತೆ. ಹಸಿದಿದ್ದ ಸಂಪಾಥಿ ಅವರನ್ನ ತಿನ್ನೋಕೆ ಮುಂದಾಗುತ್ತೆ. ಆಗ ಜಾಂಬವಂತ ಸಂಪಾಥಿಗೆ ರಾಮ ಕಥೆಯನ್ನ ಹೇಳ್ತಾನೆ. ಅತ್ತ ಅಂಗದ ನಿನ್ನ ತಮ್ಮ ಜಟಾಯು ರಾವಣನ ಜೊತೆ ಹೋರಾಡಿ ಸಾವನ್ನಪ್ಪಿದ್ದಾನೆ ಅನ್ನೋ ವಿಚಾರವನ್ನ ಸಂಪಾಥಿಗೆ ತಿಳಿಸ್ತಾನೆ. ಇದನ್ನ ಕೇಳಿ ಸಂಪಾಥಿ ತೀವ್ರ ಬೇಸರಗೊಳ್ತಾನೆ. ಅಷ್ಟೇ ಅಲ್ಲ, ರಾವಣನು ಪುಷ್ಪಕ ವಿಮಾನದ ಮೂಲಕ ಸೀತಾಮಾತೆಯನ್ನ ಕರೆದುಕೊಂಡು ಹೋಗ್ತಿದ್ದಿದ್ದನ್ನ ನಾನು ಕಣ್ಣಾರೆ ನೋಡಿದ್ದೇನೆ. ಆದ್ರೆ ನನ್ನ ರೆಕ್ಕೆ ಸುಟ್ಟು ಹೋಗಿದ್ರಿಂದ ಹಾರೋಕೆ ಸಾಧ್ಯವಾಗಿಲ್ಲ ಅನ್ನೋದಾಗಿ ಸಂಪಾಥಿ ಮರುಗುತ್ತಾನೆ. ಆದ್ರೆ ಸೀತೆ ಎಲ್ಲಿದ್ದಾಳೆ, ಹೇಗಿದ್ದಾಳೆ ಅನ್ನೋದನ್ನು ಸಂಪಾಥಿ ಪತ್ತೆ ಹಚ್ಚುತ್ತಾನೆ. ಗರುಡ ಮತ್ತು ಹದ್ದುಗಳ ಕಣ್ಣು ತುಂಬಾ ಸೂಕ್ಷ್ಮವಾಗಿರುತ್ತೆ. ಭಾರಿ ದೂರದೃಷ್ಟಿ ಹೊಂದಿರ್ತಾವೆ. ಹೀಗಾಗಿ ಅಂಗದನ ಮನವಿ ಮೇರೆಗೆ ತನ್ನ ದೂರದೃಷ್ಟಿಯಿಂದ ಗಮನಿಸಿ ಸೀತಾಮಾತೆ ಅಶೋಕ ವನದಲ್ಲಿ ಸುರಕ್ಷಿತವಾಗಿದ್ದಾಳೆ ಅನ್ನೋದನ್ನ ತಿಳಿಸ್ತಾನೆ. ಹಾಗೆಯೇ ಹನುಮಾನ್ ಮತ್ತು ವಾನರರನ್ನ ಲಂಕೆಗೆ ತೆರಳುವಂತೆ ಸಂಪಾಥಿ ಪ್ರೇರೇಪಿಸ್ತಾನೆ. ಹೀಗಾಗಿ ರಾಮಾಯಣದಲ್ಲಿ ಜಟಾಯು ಮತ್ತು ಸಂಪಾಥಿ ಪಕ್ಷಿಗಳು ತಮ್ಮದೇ ಭೂಮಿಕೆಯನ್ನ ನಿಭಾಯಿಸಿದ್ದಾರೆ.
ಇಲ್ಲಿ ಇನ್ನೊಂದು ವಿಚಾರ ಹೇಳಲೇಬೇಕು.. ಕಳೆದ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹದ್ದುಗಳ ಒಂದಷ್ಟು ವಿಡಿಯೋಗಳು ಹರಿದಾಡ್ತಾ ಇವೆ. ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗೂ ಮುನ್ನ ಹದ್ದುಗಳು ಅಯೋಧ್ಯೆಗೆ ಆಗಮಿಸಿವೆ. ಇದು ರಾಮನ ಭಕ್ತ ಜಟಾಯುವಿನ ಸಂಕೇತ ಅಂತೆಲ್ಲಾ ಹೇಳಲಾಗ್ತಿದೆ. ಅಸಲಿಗೆ ಈಗ ಸ್ಪ್ರೆಡ್ ಆಗ್ತಾ ಇರೋ ಈ ವಿಡಿಯೋಗಳು ಈಗಿನದ್ದಲ್ಲ. 2021ರ ವಿಡಿಯೋಗಳನ್ನ ಈಗ ವೈರಲ್ ಮಾಡಲಾಗ್ತಿದೆ. ಆದ್ರೆ ನಮ್ಮ ದೇಶದ ಪುರಾಣಗಳಲ್ಲಿ ಪಕ್ಷಿಗಳಿಗೂ ಅದರದ್ದೇ ಆದ ಸ್ಥಾನಮಾನವಿದೆ. ಪ್ರಾಣಿ, ಪಕ್ಷಿಗಳನ್ನೂ ಅರಾಧಿಸೋಕೆ ಜಟಾಯುವಿನಂಥಾ ಹಲವು ಉದಾಹರಣೆಗಳಿವೆ. ಈ ಪೈಕಿ ಸ್ತ್ರೀಯ ರಕ್ಷಣೆಗೋಸ್ಕರ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದ ಜಟಾಯುವಿನ ಕಥೆಯಲ್ಲಂತೂ ನಿಜಕ್ಕೂ ದೊಡ್ಡ ಸಂದೇಶವೇ ಇದೆ. ಇವಿಷ್ಟು ರಾಮಾಯಣ ಕಾಲದ ಜಟಾಯುವಿನ ಕುರಿತಾದಂಥಹ ಮಾಹಿತಿ.