3 ರನ್ ಗೆ ಧೋನಿ ಬಂದಿದ್ದೇಕೆ? – ಜಡ್ಡುಗೆ ಕ್ರಿಕೆಟ್ ತಲಪತಿ ಎಂದಿದ್ಯಾರು?- ರುತುರಾಜ್ ಲೆಕ್ಕಕ್ಕಷ್ಟೇ ನಾಯಕನಾ?

ಗೆಲ್ಲೋದಿಕ್ಕೆ ಬೇಕಿದ್ದದ್ದು ಕೇವಲ ಮೂರೇ ಮೂರು ರನ್.. ಒಂದು ಕಡೆ ಸಂಪೂರ್ಣ ಸೆಟ್ಲ್ ಆಗಿದ್ದ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ಬ್ಯಾಟಿಂಗ್ ಮಾಡ್ತಿದ್ದರು.. ಆ ಮೂರೇ ಮೂರು ರನ್ ಗಳಿಸಲು, ಅಜಿಂಕ್ಯಾ ರಹಾನೆ, ಸಮೀರ್ ರಿಜ್ವಿ, ರವೀಂದ್ರ ಜಡೇಜಾರಂತಹ ಬ್ಯಾಟ್ಸ್ಮನ್ಗಳಿದ್ದರು.. ಒಂದೇ ಒಂದು ಎಸೆತ ಎದುರಿಸಿದ್ರೂ ಬ್ಯಾಟಿಂಗ್ ಮತ್ತೆ ರುತುರಾಜ್ ಗಾಯಕ್ವಾಡ್ಗೆ ಸಿಗುತ್ತಿತ್ತು.. ಗೆಲುವು ಆರಾಮಾಗಿ ಸಿಎಸ್ಕೆ ಪಾಲಾಗುತ್ತಿತ್ತು.. ಹಾಗಿದ್ದರೂ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ಗೆ ಬಂದ್ರು.. ಕ್ರೀಸ್ಗಿಳಿದ ಧೋನಿಯೇನೂ ಸಿಕ್ಸ್ ಹೊಡೆಯೋ ಹುಮ್ಮಸ್ಸನ್ನಾಗಲೀ, ಬೌಂಡರಿ ಬಾರಿಸುವ ಆತುರವನ್ನಾಗಲೀ ತೋರಲಿಲ್ಲ.. ಹಾಗಿದ್ದರೂ ಆ ಮೂರು ರನ್ಗಾಗಿ ಧೋನಿ ಬ್ಯಾಟಿಂಗ್ಗೆ ಇಳಿದಿದ್ದೇಕೆ? ಇಷ್ಟಕ್ಕೂ ಸಿಎಸ್ಕೆ ತಂಡದಲ್ಲಿ ಲೆಕ್ಕಕ್ಕಷ್ಟೇ ರುತುರಾಜ್ ಗಾಯಕ್ವಾಡ್ ನಾಯಕರಾಗಿದ್ದಾರಾ ?. ಈ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: RCB ಸೋಲಿಗೆ ಕೊಹ್ಲಿ ಕಾರಣ? – ಸ್ಟ್ರೈಕ್ ರೇಟ್ ಕಿಡಿ.. ಸೆಂಚುರಿಯೇ ತಪ್ಪಾ?
ಚೈನ್ನೈನ ಚಿಪಾಕ್ಗೆ ಕಾಲಿಡುತ್ತಿದ್ದಂತೆ ಸಿಎಸ್ಕೆ ಮತ್ತೆ ಗೆಲುವಿನ ಟ್ರ್ಯಾಕ್ಗೆ ಮರಳಿದೆ.. ತವರಿನ ಪಂದ್ಯ ಎನ್ನುವುದು ಸಿಎಸ್ಕೆ ಪಾಲಿಗೆ ತವರುಮನೆಯ ಉಡುಗೊರೆ ರೀತಿಯಲ್ಲೇ ಇರುತ್ತದೆ.. ಅಷ್ಟರಮಟ್ಟಿಗೆ ಚೈನ್ನೈನಲ್ಲಿ ಯೆಲ್ಲೋ ಬಾಯ್ಸ್ ಮೇಲುಗೈ ಹೊಂದಿದ್ದಾರೆ.. ಆರ್ಸಿಬಿ ಹಾಗೂ ಡಿಸಿ ವಿರುದ್ಧ ಅಬ್ಬರಿಸಿದ್ದ ಕೆಕೆಆರ್, ಚೆನ್ನೈನಲ್ಲಿ ಮಾತ್ರ ಬಾಲ ಮುದುರಿಕೊಂಡಿತ್ತು.. ಸುನಿಲ್ ನರೈನ್ ಎಂದಿನಂತೆ ಅಬ್ಬರಿಸಲು ಹೋದ್ರೂ ಜಾಸ್ತಿ ಹೊತ್ತು ನಿಲ್ಲಲಿಲ್ಲ.. ಯುವ ಬ್ಯಾಟ್ಸ್ಮನ್ ಅಂಗ್ಕ್ರಿಶ್ ರಘುವಂಶಿ ಕೂಡ ಬ್ಯಾಟಿಂಗ್ಗೆ ವೇಗ ಕೊಡಲು ಪ್ರಯತ್ನಿಸಿದ್ರೂ ರವೀಂದ್ರ ಜಡೇಜ ಮೋಡಿಗೆ ಬಲಿಯಾದ್ರು.. ತುಂಬಾ ಲೆಕ್ಕಾಚಾರದಿಂದ ಸಿಎಸ್ಕೆ ಬೌಲಿಂಗ್ ಚೇಂಜ್ ಮಾಡ್ತಾ ಹೋಗಿತ್ತು.. ಆರ್ಸಿಬಿಯಂತಹ ತಂಡದಲ್ಲಾದ್ರೆ ಇನ್ನೂ ತುಷಾರ್ ದೇಶಪಾಂಡೆ ಇನ್ನೂ ಬೆಂಜ್ ಕಾಯಿಸ್ತಾ ಕೂರಬೇಕಿತ್ತು.. ಆದ್ರೆ ಸಿಎಸ್ಕೆಯಲ್ಲಿ ತುಷಾರ್ ದೇಶಪಾಂಡೆಯಂತಹ ಆಟಗಾರನ ಮೇಲೆ ವಿಶೇಷ ನಂಬಿಕೆಯಿಟ್ಟು ಆಡಿಸ್ತಿದ್ದಾರೆ.. ಇದಕ್ಕೆ ತುಷಾರ್ ಕೂಡ ಬೌಲಿಂಗ್ ಮೂಲಕ ಕೊಡುಗೆ ನೀಡುತ್ತಿದ್ದಾರೆ.. ಮೊದಲ ಪಂದ್ಯದಲ್ಲಿ ಆರ್ಸಿಬಿ ಎದುರು ತುಷಾರ್ ದೇಶಪಾಂಡೆ ಚೆನ್ನಾಗಿಯೇ ಚಚ್ಚಿಸಿಕೊಂಡಿದ್ರು.. ಆದ್ರೆ ತುಷಾರ್ ಈಗ ಮತ್ತೆ ಚೆನ್ನಾಗಿಯೇ ಬೌಲಿಂಗ್ ಮಾಡಿ, ಎದುರಾಳಿ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕುತ್ತಿದ್ದಾರೆ.. ಕೆಕೆಆರ್ ವಿರುದ್ಧ 3 ವಿಕೆಟ್ ಕಬಳಿಸಿ, ಟೀಂ ತನ್ನ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.. ಇನ್ನು ರವೀಂದ್ರ ಜಡೇಜಾ ಕೇವಲ 18 ರನ್ ಕೊಟ್ಟು 3 ವಿಕೆಟ್ ಪಡೆದಿದ್ದರಿಂದ ಕೆಕೆಆರ್ ದೊಡ್ಡ ಮೊತ್ತ ದಾಖಲಿಸುವಲ್ಲಿ ವಿಫಲವಾಯಿತು.. ಈ ಪಂದ್ಯದಲ್ಲಿ ಎರಡು ಕ್ಯಾಚ್ ಪಡೆದ ಜಡೇಜಾ ಐಪಿಎಲ್ನಲ್ಲಿ 100 ಕ್ಯಾಚ್ ಪಡೆದ ದಾಖಲೆ ಬರೆದ್ರು.. ಜೊತೆಗೆ 100 ವಿಕೆಟ್.. 1000 ರನ್ .. ಹಾಗೂ 100 ಕ್ಯಾಚ್ ಪಡೆದ ಏಕೈಕ ಆಟಗಾರ ಎಂಬ ದಾಖಲೆ ಕೂಡ ರವೀಂದ್ರ ಜಡೇಜಾ ಪಾಲಾಗಿದೆ.. ಇದೇ ಕಾರಣಕ್ಕಾಗಿ ರವೀಂದ್ರ ಜಡೇಜಾಗೆ ಕಾಮೆಂಟೇಟರ್ ಹರ್ಷ ಬೋಗ್ಲೆ ಚೆನ್ನೈನಲ್ಲಿ ಹೊಸ ಹೆಸರಿಟ್ಟಿದ್ದಾರೆ.. ರವೀಂದ್ರ ಜಡೇಜಾಗೆ ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ ಕೊಟ್ಟ ನಂತರ ಅವರನ್ನು ಮಾತಾಡಿಸುವ ವೇಳೆ ಹರ್ಷ ಬೋಗ್ಲೆ, ಈಗಾಗ್ಲೇ ಚೈನ್ನೈ ತಂಡದಲ್ಲಿ ಧೋನಿಯನ್ನು ತಲಾ ಎಂದು ಕರೀತಾರೆ.. ಚೆನ್ನೈ ಪಾಲಿಗೆ ಸುರೇಶ್ ರೈನಾ ಚಿನ್ನ ತಲಾ ಆಗಿದ್ದಾರೆ.. ಹೀಗಾಗಿ ರವೀಂದ್ರ ಜಡೇಜಾರನ್ನು ಕ್ರಿಕೆಟ್ ತಳಪತಿ ಎಂದು ಕರೀಬಹುದಾ ಎಂದು ಚೆನ್ನೈ ತಂಡದ ಫ್ಯಾನ್ಸ್ಗೆ ಪ್ರಶ್ಸಿಸಿದ್ದಾರೆ.. ಈ ಮೂಲಕ ಚೆನ್ನೈ ಫ್ಯಾನ್ಸ್ ಕ್ರಿಕೆಟ್ ತಳಪತಿ ಎಂಬ ಬಿರುದನ್ನು ಜಡ್ಡುಗೆ ಕೊಡೋದ್ರ ಬಗ್ಗೆ ವೆರಿಫೈ ಮಾಡಬಹುದು ಎಂದು ಸಲಹೆ ನೀಡಿದ್ದಾರೆ.. ಇಷ್ಟಾಗುತ್ತಿದ್ದಂತೆ ಎಕ್ಸ್ನಲ್ಲಿ ಕ್ರಿಕೆಟ್ ತಳಪತಿ ಎಂದು ಟ್ರೆಂಡಿಂಗ್ ಶುರುವಾಗಿದೆ.. ಈ ಮೂಲಕ ಹರ್ಷ ಬೋಗ್ಲೆ ಇಟ್ಟ ಹೆಸರನ್ನು ಚೆನ್ನೈ ಫ್ಯಾನ್ಸ್ ಖುಷಿಯಿಂದಲೇ ಒಪ್ಪಿಕೊಂಡಿದ್ದಾರೆ.. ಕ್ರಿಕೆಟ್ ತಳಪತಿ ಎಂದು ರವೀಂದ್ರ ಜಡೇಜಾರನ್ನು ಕರೆದು ಖುಷಿಪಡುತ್ತಿದ್ದಾರೆ.
ಹೀಗೆ ಒಂದ್ಕಡೆ ಚೆನ್ನೈ ಫ್ಯಾನ್ಸ್ಗೆ ಕ್ರಿಕೆಟ್ನಲ್ಲೂ ತಳಪತಿ ಸಿಕ್ಕಿದ್ದಾರೆ.. ಆದ್ರೆ ಅದಕ್ಕಿಂತ ಹೆಚ್ಚು ಚೆನ್ನೈ ಫ್ಯಾನ್ಸ್ ಸೆಲೆಬ್ರೇಟ್ ಮಾಡಿದ್ದು ತಲಾ ಬ್ಯಾಟಿಂಗ್ ಅನ್ನು.. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಗೆಲ್ಲಲು ಕೇವಲ ಮೂರು ರನ್ ಬೇಕಿದ್ದಾಗ ಶಿವಂ ದುಬೆ ವಿಕೆಟ್ ಒಪ್ಪಿಸಿದ್ರು.. ಆ ಮೂರು ರನ್ಗಾಗಿ ಯಾರು ಬ್ಯಾಟಿಂಗ್ಗೆ ಬರಬಹುದು ಎಂಬ ಬಗ್ಗೆ ಫ್ಯಾನ್ಸ್ ಕಾತರದಿಂದ ಕಾಯ್ತಿದ್ದರು.. ಅದ್ರಲ್ಲೂ ಡ್ರೆಸ್ಸಿಂಗ್ ರೂಂನಿಂದ ರವೀಂದ್ರ ಜಡೇಜಾ ತಾವೇ ಬ್ಯಾಟಿಂಗ್ಗೆ ಬರುವವರಂತೆ ಮೈದಾನದ ಕಡೆಗೆ ಹೊರಟು, ನಂತರ ಡಗೌಟ್ಗೆ ತೆರಳಿ ತಮಾಷೆ ಮಾಡಿದ್ರು.. ಯಾಕಂದ್ರೆ ಅವರ ಹಿಂದಿನಿಂದ ಕ್ರೀಸ್ಗಿಳಿಯಲು ರೆಡಿಯಾಗಿ ಎಂ.ಎಸ್.ಧೋನಿ ಬರುತ್ತಿದ್ದರು.. ಕೇವಲ ಮೂರು ರನ್ ಮಾತ್ರ ತಂಡಕ್ಕೆ ಬೇಕಿದ್ದಾಗ ಖುದ್ದು ಧೋನಿಯೇ ಬ್ಯಾಟಿಂಗ್ ಗೆ ಇಳಿದಿದ್ದರು.. ಧೋನಿ ಕಳೆದೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ಗೆ ಬಂದಿದ್ದರು.. ಡಿಸಿ ವಿರುದ್ಧವಂತೂ ಅಬ್ಬರದ ಬ್ಯಾಟಿಂಗ್ ಮೂಲಕ ಮಿಂಚು ಹರಿಸಿದ್ದರು.. ಆದ್ರೆ ಕಳೆದೆರಡು ಪಂದ್ಯಗಳು ಚೆನ್ನೈನಲ್ಲಿ ನಡೆದಿರಲಿಲ್ಲ.. ಹೀಗಾಗಿ ಚೆನ್ನೈ ಫ್ಯಾನ್ಸ್ ಅನ್ನು ಖುಷಿ ಪಡಿಸಲು ಧೋನಿ ಕ್ರೀಸ್ಗೆ ಇಳಿದಿದ್ದರು.. ಅದರಲ್ಲೂ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸುವ ಅವಕಾಶವಿದ್ದರೂ ಧೋನಿ ಮಾತ್ರ ಅರ್ಜೆಂಟ್ ಮಾಡಲಿಲ್ಲ.. ಜಸ್ಟ್ ಡಿಫೆನ್ಸ್ ಆಡಿ, ರುತುರಾಜ್ಗೆ ಬ್ಯಾಟಿಂಗ್ ಕೊಟ್ಟರು.. ರುತುರಾಜ್ ಕೂಡ ಬೌಂಡರಿ ಹೊಡೆಯುವ ಅವಕಾಶವನ್ನು ಬಳಸಿಕೊಳ್ಳದೆ, ಜಸ್ಟ್ ಸಿಂಗಲ್ ರನ್ ತಗೊಂಡು ಧೋನಿಗೆ ಮತ್ತೆ ಸ್ಟ್ರೈಕ್ ಬಿಟ್ಟುಕೊಟ್ಟರು.. ಆಗ ಸ್ಟೇಡಿಯಂನಲ್ಲಿ ಧೋನಿ.. ಧೋನಿ ಎಂಬ ಅಬ್ಬರ ಬಿಟ್ಟರೆ ಬೇರೇನೂ ಕೇಳಿಸುತ್ತಿರಲಿಲ್ಲ.. ಇದರ ನಡುವೆ ಧೋನಿ ಒಂದು ಬಾಲ್ ಡಿಫೆನ್ಸ್ ಮಾಡಿ, ನಂತರ ಸಿಂಗಲ್ ರನ್ ತಗೊಂಡ್ರು.. ಗೆಲ್ಲೋದಿಕ್ಕೆ ಕೇವಲ ಒಂದೇ ರನ್ ಬೇಕಿದ್ದರಿಂದ ರುತುರಾಜ್ ಬೌಂಡರಿ ಬಾರಿಸುವ ಮೂಲಕ ಚೆನ್ನೈಗೆ ಗೆಲುವು ತಂದುಕೊಟ್ಟರು. ಧೋನಿ ಮೂರು ಎಸೆತಗಳಲ್ಲಿ ಒಂದು ರನ್ ಮಾತ್ರ ಗಳಿಸಿದ್ರು.. ಧೋನಿ ಕ್ರೀಸ್ಗೆ ಇಳಿದಿದ್ದನ್ನು ಕಂಡ ಚೆನ್ನೈ ಫ್ಯಾನ್ಸ್ ಸಂಭ್ರಮದ ಸಾಗರದಲ್ಲಿ ತೇಲಾಡಿದ್ರು.. ದುಡ್ಡು ಕೊಟ್ಟು ಟಿಕೆಟ್ ತಗೊಂಡು ಬಂದಿದ್ದು ಸಾರ್ಥಕ ಆಯ್ತು ಎಂಬ ಸಮಾಧಾನ ಫ್ಯಾನ್ಸ್ ಮುಖದಲ್ಲಿತ್ತು.. ಕಾಮೆಂಟೇಟರ್ಗಳು ಕೂಡ ಹಿಂದೆ ಮುಂಬೈ ಸೇರಿದಂತೆ ಬೇರೆ ಬೇರೆ ಸ್ಟೇಡಿಯಂಗಳಲ್ಲಿ ಸಚಿನ್ ಬ್ಯಾಟಿಂಗ್ ಗೆ ಬಂದಾಗ Sachiiiiin Saaaaachin ಅಂತ ಕೂಗುತ್ತಿದ್ದ ಫ್ಯಾನ್ಸ್ ರೀತಿಯಲ್ಲೇ ಈಗ ಧೋನೀ… ಧೋನಿ.. ಎಂಬ ಕೂಗು ಕೇಳಿಸುತ್ತಿದೆ ಎಂದು ಚೆನ್ನೈ ಫ್ಯಾನ್ಸ್ ಅಬ್ಬರವನ್ನು ಹೊಗಳಿದ್ರು..
ಇನ್ನು ಕೆಕೆಆರ್ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಲು ಸಾಧ್ಯವಾಗಿದ್ದರ ಬಗ್ಗೆ ಪಂದ್ಯದ ನಂತರ ಮಾತಾಡಿದ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್ ತಮ್ಮ ಬೌಲರ್ಗಳನ್ನು ಹೊಗಳಿದ್ರು.. ಅದರಲ್ಲೂ ಗಾಯಕ್ವಾಡ್ ಹೇಳಿದ ಒಂದು ಮಾತು, ರುತುರಾಜ್ ಸಿಎಸ್ಕೆಗೆ ಹೆಸರಿಗಷ್ಟೇ ನಾಯಕ ಎಂಬುದನ್ನು ಸಾಬೀತುಪಡಿಸುವಂತಿತ್ತು.. ‘ಪ್ರಾಮಾಣಿಕವಾಗಿ ಹೇಳಬೇಕು ಅಂದರೆ ನಾನು ಬೌಲರ್ಗಳಿಗೆ ಏನೂ ಹೇಳಬೇಕಾದ ಅಗತ್ಯವೇ ಇಲ್ಲ.. ಈ ಟೀಂ ಹೇಗಿದೆ ಎಂದರೆ ಇಲ್ಲಿ ಪ್ರತಿಯೊಬ್ಬ ಆಟಗಾರನಿಗೂ ಅವನ ಜವಾಬ್ದಾರಿಯ ಬಗ್ಗೆ ಮೊದಲೇ ತಿಳಿದಿರುತ್ತದೆ.. ಬೌಲರ್ಗಳು ತಾವೇನು ಮಾಡ್ಬೇಕು ಎಂಬುದನ್ನೂ ಮೊದಲೇ ತಿಳಿದುಕೊಂಡಿರುತ್ತಾರೆ ಎಂದು ವಿವರಿಸಿದ್ದರು.. ಈ ಮೂಲಕ ಧೋನಿ ಸಿಎಸ್ಕೆ ತಂಡವನ್ನು ಹೇಗೆ ತಯಾರು ಮಾಡಿಟ್ಟಿದ್ದಾರೆ ಎಂಬುದನ್ನು ರುತುರಾಜ್ ಗಾಯಕ್ವಾಡ್ ಪರೋಕ್ಷವಾಗಿ ವಿವರಿಸಿದ್ದಾರೆ.. ಈಗಲೂ ಫೀಲ್ಡ್ ಸೆಟ್ ಮಾಡುವ ವಿಚಾರಕ್ಕೆ ಬಂದಾಗ ಚೆನ್ನೈ ಟೀಂನಲ್ಲಿ ಬಹುತೇಕ ನಿರ್ಧಾರ ಧೋನಿಯೇ ತೆಗೆದುಕೊಳ್ತಾರೆ.. ಇದ್ರಿಂದಾಗಿ ರುತುರಾಜ್ ಟಾಸ್ಗೆ ಹೋಗೋದಿಕ್ಕೆ ಮತ್ತು ಮ್ಯಾಚ್ ಮುಗಿದ್ಮೇಲೆ ಮಾತಾಡೋದಿಕ್ಕಷ್ಟೇ ಕ್ಯಾಪ್ಟನ್ ಎನ್ನುವಂತಾಗಿದೆ.. ಹಾಗಿದ್ದರೂ ಕೆಕೆಆರ್ ವಿರುದ್ಧ ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ರುತುರಾಜ್ ಗಾಯಕ್ವಾಡ್ ಮತ್ತೆ ಲಯ ಕಂಡುಕೊಂಡಿರುವುದು ಸಿಎಸ್ಕೆ ಒಳ್ಳೆಯ ಸುದ್ದಿ.. ಆದ್ರೆ ಎದುರಾಳಿ ತಂಡಗಳಿಗೆ ಇದಕ್ಕಿಂತ ಕೆಟ್ಟ ಸುದ್ದಿ ಬೇರೇನೂ ಇರೋದಿಕ್ಕೆ ಸಾಧ್ಯವೇ ಇಲ್ಲ.. ಒಟ್ನಲ್ಲಿ ಸಿಎಸ್ಕೆ ಮತ್ತೊಂದು ಬಾರಿ ಚಾಂಪಿಯನ್ ಆಗುವ ಗುರಿಯಿಟ್ಟುಕೊಂಡೇ ಆಡ್ತಿರುವುದು ಸೀಸನ್ ಆರಂಭದಲ್ಲೇ ಗೋಚರಿಸುತ್ತಿದೆ.. ಏನೇ ಆದ್ರೂ ಧೋನಿ ಆಟ ನೋಡಿದ ಅಭಿಮಾನಿಗಳಂತು ಥ್ರಿಲ್ ಆಗಿರೋದು ಸುಳ್ಳಲ್ಲ..