ಜೆಡಿಎಸ್ ನಾಯಕರು ಸಭೆ ಮೇಲೆ ಸಭೆ ನಡೆಸ್ತಿರೋದೇಕೆ..? – ಸುಮಲತಾ ಕಥೆ ಏನು..?

ಜೆಡಿಎಸ್ ನಾಯಕರು ಸಭೆ ಮೇಲೆ ಸಭೆ ನಡೆಸ್ತಿರೋದೇಕೆ..? – ಸುಮಲತಾ ಕಥೆ ಏನು..?

ಸಕ್ಕರೆನಾಡು ಮಂಡ್ಯವನ್ನು ಹೇಗಾದ್ರೂ ಮಾಡಿ ಕಬ್ಜಾ ಮಾಡಿಕೊಳ್ಳಬೇಕು ಅನ್ನೋದೇ ಜೆಡಿಎಸ್ ನಾಯಕರ ಟಾರ್ಗೆಟ್. ಅದ್ರಲ್ಲೂ ಮಂಡ್ಯ ಕ್ಷೇತ್ರ ಜೆಡಿಎಸ್​ಗೆ ಬರೀ ಒಂದು ಕ್ಷೇತ್ರವಾಗಿ ಉಳಿದಿಲ್ಲ. ಪ್ರತಿಷ್ಠೆಯ ಅಖಾಡವಾಗಿ ಮಾರ್ಪಟ್ಟಿದೆ. ಅಸ್ತಿತ್ವದ ಪ್ರಶ್ನೆಯೂ ಆಗಿದೆ. ಸೋಲಿನ ಪ್ರತೀಕಾರದ ಅಸ್ತ್ರವೂ ಹೌದು. 2019ರ ಲೋಕಸಭಾ ಚುನಾವನೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಮಲತಾ ಅಂಬರೀಶ್ ಪ್ರಚಂಡ ಗೆಲುವು ಸಾಧಿಸಿದ್ದರು. ಸುಮಲತಾ ಎಂಟ್ರಿ ಬಳಿಕ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಈ ಸಲವೂ ಮಂಡ್ಯದಿಂದ್ಲೇ ಸ್ಪರ್ಧಿಸೋದಾಗಿ ಸುಮಲತಾ ಸವಾಲು ಹಾಕಿದ್ದಾರೆ. ಅಸಲಿಗೆ ಇಲ್ಲಿ ಜೆಡಿಎಸ್​ಗೆ ಪ್ರಬಲ ಎದುರಾಳಿಯಾಗಿ ಕಾಣ್ತಿರೋದೇ ಸುಮಲತಾ ಅಂಬರೀಶ್. ಇದೇ ಕಾರಣಕ್ಕೆ ಜೆಡಿಎಸ್ ನಾಯಕರು ಪ್ರಬಲ ಸ್ಪರ್ಧಿಯನ್ನೇ ಮಂಡ್ಯದಿಂದ ಕಣಕ್ಕಿಳಿಸೋ ತಯಾರಿಯಲ್ಲಿದ್ದಾರೆ. ಅದೂ ಕೂಡ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರನ್ನ ಅನ್ನೋದೇ ವಿಶೇಷ.

ಇದನ್ನೂ ಓದಿ: ಹಣ ಹಿಂದಿರುಗಿಸದೆ ಸತಾಯಿಸುತ್ತಿದ್ದ ಎಸಿಪಿ ಪುತ್ರನ ಭೀಕರ ಹತ್ಯೆ – ಲಾಯರ್ ಮರ್ಡರ್ ರಹಸ್ಯ ಬಿಚ್ಚಿಟ್ಟ ದೆಹಲಿ ಪೊಲೀಸರು

ಲೋಕಸಭೆಗೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗೋದು ಬಹುತೇಕ ಪಕ್ಕಾ ಆಗಿದೆ. ಸದ್ಯದ ಮಟ್ಟಿಗೆ ಮಾಜಿ ಸಚಿವರಾದ ಸಿ.ಎಸ್ ಪುಟ್ಟರಾಜು, ಡಿ.ಸಿ ತಮ್ಮಣ್ಣ ಹಾಗೂ ಮಾಜಿ ಶಾಸಕ ಸುರೇಶ್‍ಗೌಡ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಆದ್ರೆ ಇವರನ್ನು ಹೊರತುಪಡಿಸಿ ಮಂಡ್ಯಗೆ ಪ್ರಬಲ ನಾಯಕನನ್ನೇ ಅಭ್ಯರ್ಥಿಯಾಗಿ ತರಬೇಕೆಂದು ಜೆಡಿಎಸ್ ಲೆಕ್ಕಾಚಾರ ಹಾಕಿಕೊಂಡಿದೆ. ಅಭ್ಯರ್ಥಿ ಹುಟುಕಾಟಕ್ಕಾಗಿ ಸಭೆ ಮೇಲೆ ಸಭೆ ನಡೆಸಲಾಗುತ್ತಿದೆ. ಅಂತಿಮ ಸಭೆಯಲ್ಲಿ ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಅಥವಾ ನಿಖಿಲ್ ಇಬ್ಬರಲ್ಲಿ ಒಬ್ಬರು ಬಂದ್ರೆ ಸೂಕ್ತ ಎಂದು ತೀರ್ಮಾನ ಮಾಡಲಾಗಿದೆ. ಹೆಚ್‍ಡಿಕೆ ಅಥವಾ ನಿಖಿಲ್ ಅಖಾಡಕ್ಕಿಳಿದ್ರೆ ಮಂಡ್ಯದಲ್ಲಿ ಜೆಡಿಎಸ್ ಮತ್ತೆ ಹಳೆ ಲಯಕ್ಕೆ ತಿರುಗಬಹುದು. ಜೊತೆಗೆ ಮಂಡ್ಯ ಕ್ಷೇತ್ರವನ್ನು ಸುಲಭವಾಗಿ ಗೆದ್ದು, ಜಿಲ್ಲೆಯಲ್ಲಿ ನಾಯಕರ ನಡುವೆ ಇರುವ ಅಸಮಧಾನವನ್ನು ಸರಿಪಡಿಸಬಹುದು ಎಂಬ ಲೆಕ್ಕಾಚಾರ ಜಿಲ್ಲಾ ನಾಯಕರಲ್ಲಿ ಇದೆ. ಈ ತೀರ್ಮಾನವನ್ನು ಸದ್ಯ ಪತ್ರದ ಮೂಲಕ ದೊಡ್ಡಗೌಡರಿಗೆ ಹಾಗೂ ಕುಮಾರಸ್ವಾಮಿಗೆ ತಲುಪಿಸಲಾಗಿದೆ.

ಹಾಗಂತ ಇದು ಬರೀ ಜಿಲ್ಲೆಯ ಮುಖಂಡರ ಅಥವಾ ಜೆಡಿಎಸ್ ಕಾರ್ಯಕರ್ತರ ಅಭಿಪ್ರಾಯ ಮಾತ್ರ ಆಗಿಲ್ಲ. ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ಕೂಡ ಕುಮಾರಣ್ಣನ ಸ್ಪರ್ಧೆಗೆ ಅಸ್ತು ಎಂದಿದ್ದಾರೆ. ಒಪ್ಪಿಗೆ ನಿರ್ಧಾರವನ್ನ ಪ್ರಧಾನಿ ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ಹೆಗಲಿಗೆ ಹಾಕಿದ್ದಾರೆ. ಮೋದಿ, ಅಮಿತ್ ಶಾ ಹೇಳಿದ್ರೆ ಕುಮಾರಸ್ವಾಮಿ ಮಂಡ್ಯ, ತುಮಕೂರು ಅಥವಾ ಚಿಕ್ಕಬಳ್ಳಾಪುರ ಎಲ್ಲಿ ಬೇಕಾದ್ರೂ ಸ್ಪರ್ಧೆ ಮಾಬಹುದು. ಯಾವುದೇ ಸಮಸ್ಯೆ ಇಲ್ಲ. ಆದ್ರೆ ನಿರ್ಧಾರ ತೆಗೆದುಕೊಳ್ಳೋದು ಬಿಡೋದು ಶಾ ಮತ್ತು ಮೋದಿಗೆ ಬಿಟ್ಟ ವಿಚಾರ ಎಂದಿದ್ದಾರೆ. ಒಂದರ್ಥದಲ್ಲಿ ಬಿಜೆಪಿ ಕೂಡ ಹೆಚ್.ಡಿ ಕುಮಾರಸ್ವಾಮಿ ಅವ್ರ ಸ್ಪರ್ಧೆಗೆ ಒಪ್ಪಿಗೆ ನೀಡಿದೆ ಎನ್ನಲಾಗಿದೆ. ಯಾಕಂದ್ರೆ ಕುಮಾರಣ್ಣನ ಸ್ಪರ್ಧೆ ಮತ್ತು ಗೆಲುವಿನ ಹಿಂದೆ ಹಲವು ಲೆಕ್ಕಾಚಾರಗಳೂ ಇವೆ.

ಬಿಜೆಪಿಗೂ ಕುಮಾರಣ್ಣನೇ ಸ್ಪರ್ಧಿಸಬೇಕು!

2019ರ ಲೋಕಸಭಾ ಚುನಾವಣೆಗೂ 2024 ಲೋಕಸಭಾ ಚುನಾವಣೆಗೂ ಸಾಕಷ್ಟು ರಾಜಕೀಯ ಬೆಳವಣಿಗೆಗಳಾಗಿವೆ. ಸಂಸದೆ ಸುಮಲತಾ ಅಂಬರೀಶ್ ಬಿಜೆಪಿಯ ಸಹವಾಸದಲ್ಲಿದ್ದರೂ ಆ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿಲ್ಲ. ಬಿಜೆಪಿಯಿಂದ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಯೂ ತೀರಾ ಕಡಿಮೆ. ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಬಗ್ಗೆ ಬಿಜೆಪಿ ವರಿಷ್ಠರು ಆಸಕ್ತಿ ತೋರಿದ್ದಾರೆ. ಕುಮಾರಸ್ವಾಮಿ ಸ್ಪರ್ಧಿಸಿದರೆ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಒಳ್ಳೆಯದು ಎಂಬುದು ಕಮಲ ಪಾಳಯದ ಲೆಕ್ಕಾಚಾರ. ಇತ್ತ ಕುಮಾರಸ್ವಾಮಿ ಕೂಡ ಸದ್ದಿಲ್ಲದೆ ತಯಾರಿ ಕೂಡ ಮಾಡಿಕೊಳ್ತಿದ್ದಾರೆ. ಯಾಕಂದ್ರೆ ರಾಜ್ಯದಲ್ಲಿ 19 ಶಾಸಕರನ್ನಿಟ್ಟುಕೊಂಡು ವಿರೋಧ ಪಕ್ಷವಾಗಿ ಕೂರುವುದಕ್ಕಿಂತ ಕೇಂದ್ರ ಸಚಿವರಾದರೆ ಅನುಕೂಲಗಳು ಜಾಸ್ತಿ ಎಂಬ ಲೆಕ್ಕಾಚಾರ ಕುಮಾರಸ್ವಾಮಿ ಅವರದ್ದಾಗಿದೆ. ಮುಂದಿನ ನಾಲ್ಕು ವರ್ಷ ಸಚಿವರಾಗಿ ದೇಶ, ರಾಜ್ಯ ಸುತ್ತಾಡಿ ವರ್ಚಸ್ಸು ಹೆಚ್ಚಿಸಿಕೊಂಡು, ಪಕ್ಷ ಬೆಳೆಸಿದರೆ 2028ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಒಡ್ಡುವ ಅಪೇಕ್ಷೆ ಅವರಲ್ಲಿದೆ. ಹೀಗಾಗಿ, ಮಂಡ್ಯದಲ್ಲಿ ಸ್ಪರ್ಧಿಸಿದರೂ ಅಚ್ಚರಿಯಿಲ್ಲ. ಅವರು ಸ್ಪರ್ಧಿಸದೇ ಇದ್ದರೂ ನಿಖಿಲ್ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆಯೂ ಇದೆ. ) Gxf Voice Out

ಸದ್ಯ ಪ್ರತಿಷ್ಠೆಯ ಕಣವಾಗಿರುವ ಮಂಡ್ಯ ಕ್ಷೇತ್ರದಲ್ಲಿ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಡ ಹೆಚ್ಚಾಗ್ತಿದೆ. ಜೆಡಿಎಸ್ ನಾಯಕರೆಲ್ಲಾ ಕುಮಾರಣ್ಣನ ಪರವೇ ಬ್ಯಾಟ್ ಬೀಸ್ತಿದ್ದಾರೆ. ಆದ್ರೆ ಅಂತಿಮವಾಗಿ ಮೈತ್ರಿ ಅಭ್ಯರ್ಥಿಯಾಗಿ ಯಾರು ಕಣಕ್ಕಿಳಿಯುತ್ತಾರೆ.. ಸುಮಲತಾ ಕಥೆ ಏನು.. ಕಾಂಗ್ರೆಸ್ ಲಾಭ ಪಡೆದುಕೊಳ್ಳುತ್ತಾ ಅನ್ನೋದೇ ಈಗಿರುವ ಪ್ರಶ್ನೆ.

Shwetha M