ಶ್ರೀಮಂತ ದೇಶಗಳ ಪೌರತ್ವ ಪಡೆಯುವಲ್ಲಿ ಭಾರತೀಯರೇ ನಂ.1 – ಕೆಲಸ, ಸಂಬಳ, ವಿಲಾಸಿ ಜೀವನ ಕಾರಣನಾ?

ಶ್ರೀಮಂತ ದೇಶಗಳ ಪೌರತ್ವ ಪಡೆಯುವಲ್ಲಿ ಭಾರತೀಯರೇ ನಂ.1 – ಕೆಲಸ, ಸಂಬಳ, ವಿಲಾಸಿ ಜೀವನ ಕಾರಣನಾ?

ಭಾರತ ಹೇಳಿಕೇಳಿ ವಿಶ್ವದಲ್ಲೇ ಅತೀಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ. ಚೀನಾವನ್ನೇ ಹಿಂದಿಕ್ಕಿರೋ ಇಂಡಿಯಾದಲ್ಲಿ ಪ್ರಸ್ತುತ 142 ಕೋಟಿ 27 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ಪ್ರತೀ ಸೆಕೆಂಡ್​ಗೂ ಈ ಸಂಖ್ಯೆ ವೇರಿಯೇಷನ್ ಆಗ್ತಿರುತ್ತೆ. ಜಗತ್ತಿನ ಜನಸಂಖ್ಯೆ ಪೈಕಿ ಶೇಕಡಾ 18.9 ಪರ್ಸೆಂಟ್ ಪಾಪ್ಯುಲೇಷನ್ ಇಂಡಿಯಾದಲ್ಲೇ ಇದೆ ಅಂದ್ರೆ ನೀವು ಇಮ್ಯಾಜಿನ್ ಮಾಡಿಕೊಳ್ಳಿ. ಇಂಥಾ ದೊಡ್ಡ ದೇಶದಲ್ಲಿ ಪ್ರತಿಭಾವಂತರಿಗೂ ಏನು ಕಡಿಮೆ ಇಲ್ಲ. ಆದ್ರೆ ತಮ್ಮ ನಿರೀಕ್ಷೆಗೆ ತಕ್ಕಂತೆ ಕೆಲ್ಸ ಸಿಗ್ತಿಲ್ಲ ಅನ್ನೋ ಚಿಂತೆಯೋ, ಕೈತುಂಬಾ ಸಂಬಳದ ಆಸೆಯೋ, ಇಲ್ಲ ಸುಧಾರಿತ ಜೀವನದ ಬಯಕೆಯೋ, ಇಲ್ಲ ಫಾರಿನ್ ಕ್ರೇಜೋ ಗೊತ್ತಿಲ್ಲ. ಪ್ರತೀವರ್ಷ ಲಕ್ಷಾಂತರ ಜನ ವಿದೇಶಗಳಿಗೆ ಹೋಗುತ್ತಾರೆ. ಆದ್ರೆ ಹೀಗೆ ಹೋಗುವವರು ಅಲ್ಲಿಯ ದೇಶಗಳ ಪೌರತ್ವವನ್ನೇ ಪಡೆದು ಅಲ್ಲೇ ನೆಲೆಯೂರುತ್ತಿದ್ದಾರೆ. ಅದ್ರಲ್ಲೂ ಶ್ರೀಮಂತ, ಅಭಿವೃದ್ಧಿ ಹೊಂದಿದ ಮತ್ತು ರಾಜಕೀಯ ಸ್ಥಿರತೆ ಹೊಂದಿರುವ ದೇಶಗಳ ಪೌರತ್ವ ಪಡೆಯುವವರಲ್ಲಿ ಭಾರತೀಯರೇ ಮೊದಲಿಗರು ಎನ್ನುವ ಅಚ್ಚರಿಯ ಅಂಕಿಅಂಶ ಹೊರಬಿದ್ದಿದೆ.

ವಿದೇಶಗಳಲ್ಲಿ ಪೌರತ್ವ ಪಡೆಯುತ್ತಿರುವವರ ಪೈಕಿ ಭಾರತೀಯರೇ ಹೈಯೆಸ್ಟ್ ಇದ್ದಾರೆ. 2021ರಲ್ಲಿ ಬೇರೆ ದೇಶಗಳ ಪೌರತ್ವ ಪಡೆದ ಅತ್ಯಂತ ದೊಡ್ಡ ಸಂಖ್ಯೆ ಭಾರತೀಯರದ್ದೇ ಆಗಿದೆ. ಬರೋಬ್ಬರಿ 1.32 ಲಕ್ಷ ಭಾರತೀಯರು ಬೇರೆ ದೇಶಗಳ ಪೌರತ್ವ ಪಡೆದಿದ್ದಾರೆ. ಉತ್ತಮ ಜೀವನಮಟ್ಟ, ಉದ್ಯಮ ಮತ್ತು ಉದ್ಯೋಗದ ಕಾರಣಕ್ಕೆ ಭಾರತೀಯರು ಶ್ರೀಮಂತ ದೇಶಗಳ ಪೌರತ್ವ ಪಡೆಯುತ್ತಿದ್ದಾರೆ ಎಂದು ವರದಿ ಒಂದರಲ್ಲಿ ವಿಶ್ಲೇಷಿಸಲಾಗಿದೆ. ವಿಶ್ವದ ಶ್ರೀಮಂತ ದೇಶಗಳು ಅರ್ಥಿಕ ಚಟುವಟಿಕೆಗಳ ಸಹಕಾರಕ್ಕಾಗಿ ಒಂದು ಸಂಘ ರಚಿಸಿಕೊಂಡಿವೆ. ಆರ್ಥಿಕ, ಸಹಕಾರ ಮತ್ತು ಅಭಿವೃದ್ಧಿ ಸಂಘ ಅಂದ್ರೆ ಒಇಸಿಡಿ ಎಂಬುದೇ ಅದರ ಹೆಸರು. ಅಮೆರಿಕ, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ ಹೀಗೆ 38 ದೇಶಗಳು ಈ ಸಂಘದ ಸದಸ್ಯರಾಗಿವೆ. ಅಭಿವೃದ್ಧಿ ಹೊಂದುತ್ತಿರುವ ಮತ್ತು ಹಿಂದುಳಿದ ದೇಶಗಳ ಲಕ್ಷಾಂತರ ಜನರು ಪ್ರತಿ ವರ್ಷ ಈ ಒಇಸಿಡಿ ದೇಶಗಳ ಪೌರತ್ವ ಪಡೆಯುತ್ತಾರೆ. ಅದ್ರಲ್ಲೂ ಈ ಲಿಸ್ಟ್​ನಲ್ಲಿ ನಮ್ಮ ಇಂಡಿಯನ್ಸ್ ಫಸ್ಟ್ ಪ್ಲೇಸ್​ನಲ್ಲಿದ್ದಾರೆ.

ಇದನ್ನೂ ಓದಿ : ಅಫ್ಘಾನಿಸ್ತಾನ ವಲಸಿಗರ ಬಂಧನ, ಹಲ್ಲೆ.. ದೇಶದಿಂದಲೇ ಗಡೀಪಾರು -ನಿರಾಶ್ರಿತರನ್ನು ಹೊರ ದಬ್ಬಿದ್ದೇಕೆ ಪಾಕ್, ಇರಾನ್? 

2021ರಲ್ಲಿ ಒಇಸಿಡಿ ದೇಶಗಳ ಪೌರತ್ವ ಪಡೆದವರ ಒಟ್ಟಾರೆ ಸಂಖ್ಯೆ 48 ಲಕ್ಷ. ಈ ಪೈಕಿ  ಭಾರತೀಯರ ಸಂಖ್ಯೆಯೇ 1.32 ಲಕ್ಷ ಇದೆ. ಈ ರೀತಿ ಅತಿಹೆಚ್ಚು ಪೌರತ್ವ ಪಡೆದವರ ಪಟ್ಟಿಯಲ್ಲಿ ನಮ್ಮ ಭಾರತೀಯರದ್ದೇ ಮೊದಲ ಸ್ಥಾನ. ಇನ್ನೊಂದು ಅಚ್ಚರಿಯ ಸಂಗತಿ ಅಂದ್ರೆ 2019ರಲ್ಲಿ ಈ ಸಂಖ್ಯೆ 1.55 ಲಕ್ಷದಷ್ಟಿತ್ತು. 2019ಕ್ಕೆ ಹೋಲಿಸಿದರೆ 2021ರಲ್ಲಿ ಶ್ರೀಮಂತ ದೇಶಗಳ ಪೌರತ್ವ ಪಡೆದ ಭಾರತೀಯರ ಸಂಖ್ಯೆಯಲ್ಲಿ ಶೇಕಡಾ 14.8ರಷ್ಟು ಇಳಿಕೆಯಾಗಿದೆ. ಹೀಗಿದ್ದೂ, ಭಾರತೀಯರು ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. 2022ರಲ್ಲಿ ಈ ರೀತಿ ಅತಿಹೆಚ್ಚು ಪೌರತ್ವ ಪಡೆದವರ ಪಟ್ಟಿಯಲ್ಲಿ ಭಾರತೀಯರೇ ಮೊದಲಿಗರು ಎನ್ನಲಾಗಿದೆ. 2022ರಲ್ಲಿ ಈ ರೀತಿ 62 ಲಕ್ಷಕ್ಕೂ ಹೆಚ್ಚು ಜನ ಒಇಸಿಡಿ ದೇಶಗಳಲ್ಲಿ ಪೌರತ್ವ ಪಡೆದಿದ್ದಾರೆ. 2013ರಿಂದ ಈವರೆಗೆ ವಿದೇಶಗಳಲ್ಲಿ ಪೌರತ್ವ ಪಡೆದ ಅತ್ಯಂತ ದೊಡ್ಡ ಸಂಖ್ಯೆ ಇದು. ಇನ್ನು ವಿದೇಶಗಳಲ್ಲಿ ಪೌರತ್ವ ಹೆಚ್ಚಾಗಲು ಹಲವು ಕಾರಣಗಳಿವೆ. ಉಕ್ರೇನ್ ರಷ್ಯಾ ಯುದ್ಧ, ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿನ ಅರ್ಥಿಕ ಬಿಕ್ಕಟ್ಟು, ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಅಧಿಕಾರ, ಇರಾನ್ ಮೇಲಿನ ಆರ್ಥಿಕ ನಿರ್ಬಂಧ, ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಬರದ ಸ್ಥಿತಿ ಇರೋದ್ರಿಂದ ವಲಸೆ ಹೆಚ್ಚಾಗಲು ಕಾರಣ ಎನ್ನಲಾಗಿದೆ.

ಹೀಗೆ ವಲಸೆ ಹೋಗುವ ಬಹುತೇಕ ಜನ ಉದ್ಯೋಗ ಹಾಗೂ ಸುರಕ್ಷಿತ ನೆಲೆ ದೃಷ್ಟಿಯಿಂದ ಹೋಗುತ್ತಾರೆ ಎನ್ನಲಾಗಿದೆ. ಪ್ರಸ್ತುತ 2023ರಲ್ಲೂ ವಿಶ್ವದ ಹಲವೆಡೆ ಇಂಥದ್ದೇ ಪರಿಸ್ಥಿತಿ ಇದೆ. ಯಾಕಂದ್ರೆ 2023ರ ಆರಂಭದಿಂದಲೇ ವಿಶ್ವದ ಎಲ್ಲಾ ದೇಶಗಳು ಅರ್ಥಿಕ ಹಿಂಜರಿತವನ್ನು ಎದುರಿಸುತ್ತಿವೆ. ಮತ್ತೊಂದೆಡೆ ರಷ್ಯಾ ಉಕ್ರೇನ್ ಯುದ್ಧ ಮುಂದುವರಿಕೆ, ಹಮಾಸ್ ಪ್ಯಾಲೆಸ್ತೀನ್ ಯುದ್ಧ. ಗಾಜಾಪಟ್ಟಿಯಲ್ಲೇ 17 ಲಕ್ಷಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದಾರೆ. ಈ ಯುದ್ಧ ಲೆಬನಾನ್‌ಗೂ ವಿಸ್ತರಿಸಿದೆ, ಇವೆಲ್ಲವೂ ನಿರಾಶ್ರಿತರ ಮತ್ತು ಯುದ್ಧಪೀಡಿತರ ವಲಸೆಯನ್ನು ಹೆಚ್ಚಿಸಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಭಾರತದಲ್ಲಿ ಇಂತಹ ಯಾವುದೇ ಪರಿಸ್ಥಿತಿ ಇಲ್ಲದಿದ್ರೂ ಕೂಡ ವಲಸೆ ಹೆಚ್ಚಾಗಲು ಕಾರಣ ಉದ್ಯೋಗ. ಹೆಚ್ಚಿನ ಭಾರತೀಯರು ವಿದೇಶದಲ್ಲಿ ಕೆಲಸದ ವಾತಾವರಣವು ಉತ್ತಮವಾಗಿದೆ ಮತ್ತು ಮೊತ್ತಕ್ಕೆ ವೇತನವು ಸಹ ಉತ್ತಮವಾಗಿದೆ ಎಂದು ಭಾವಿಸುತ್ತಾರೆ. ಹೀಗಾಗೇ ಎಷ್ಟೋ ಜನ ವಿದೇಶಕ್ಕೆ ಹೋದ ಮೇಲೆ ಮತ್ತೆ ಭಾರತಕ್ಕೆ ಬರುವುದೇ ಇಲ್ಲ. ಅದ್ರಲ್ಲೂ ಲಕ್ಷಾಂತರ ಭಾರತೀಯರು ಅಮೆರಿಕಕ್ಕೆ ಹೋಗಲು ಮೊದಲ ಆದ್ಯತೆ ನೀಡುತ್ತಾರೆ. ಒಂದು ವರದಿಯ ಪ್ರಕಾರ 46 ಲಕ್ಷಕ್ಕೂ ಹೆಚ್ಚು ಭಾರತೀಯರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಇದೆ. ಅಲ್ಲಿ ಭಾರತದ 31.5 ಲಕ್ಷ ಜನ ವಾಸಿಸುತ್ತಿದ್ದಾರೆ. ಈ ಪಟ್ಟಿಯಲ್ಲಿ ಮಲೇಷ್ಯಾ ಮೂರನೇ ಸ್ಥಾನದಲ್ಲಿದೆ ಮತ್ತು ಅಲ್ಲಿ ಸುಮಾರು 30 ಲಕ್ಷ ಭಾರತೀಯರು ವಾಸಿಸುತ್ತಿದ್ದಾರೆ.

2021ರಲ್ಲಿ ಒಇಸಿಡಿ ದೇಶಗಳಲ್ಲಿ ಪೌರತ್ವ ಪಡೆದ ಒಟ್ಟು ಭಾರತೀಯರ ಸಂಖ್ಯೆ 1.32 ಲಕ್ಷ. ಈ ಪೈಕಿ ಮೂರನೇ ಎರಡಕ್ಕಿಂತಲೂ ಹೆಚ್ಚು ಮಂದಿ ಅಮೆರಿಕದ ಪೌರತ್ವ ಪಡೆದಿದ್ದಾರೆ. ಹಲವು ವರ್ಷಗಳಿಂದ ಭಾರತೀಯರಿಗೆ ಹೆಚ್ಚು ಪೌರತ್ವ ನೀಡುತ್ತಿರುವ ದೇಶ ಅಮೆರಿಕವೇ ಆಗಿದ್ದು ಮೊದಲ ಸ್ಥಾನ ಕಾಯ್ದುಕೊಂಡಿದೆ. 2021ನೇ ವರ್ಷ ಅಮೆರಿಕ ಭಾರತ ಮೂಲದ 56 ಸಾವಿರ ಜನರಿಗೆ ಪೌರತ್ವ ನೀಡಿದೆ. ಅಮೆರಿಕದ ನಂತರ ಭಾರತೀಯರಿಗೆ ಅತಿಹೆಚ್ಚು ಪೌರತ್ವ ನೀಡುತ್ತಿರುವ ದೇಶ ಅಂದ್ರೆ ಅದು ಆಸ್ಟ್ರೇಲಿಯಾ. 2021ರಲ್ಲಿ 24,000 ಭಾರತೀಯರು ಆಸ್ಟ್ರೇಲಿಯಾದ ಪೌರತ್ವ ಪಡೆದಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ಕೆನಡಾ ಇದ್ದು, 21,000 ಭಾರತೀಯರಿಗೆ ಪೌರತ್ವ ನೀಡಿದೆ. ಇದು 2022ನೇ ಸಾಲಿನಲ್ಲೂ ಗಣನೀಯ ಸಂಖ್ಯೆಯಲ್ಲಿ ಏರಿಕೆ ಕಂಡಿದೆ ಎನ್ನಲಾಗಿದೆ.

ಕೆನಡಾ ದೇಶ ಭಾರತೀಯರಿಗೆ ಹೆಚ್ಚೆಚ್ಚು ಪೌರತ್ವ ನೀಡ್ತಿದ್ರೂ ಕೂಡ ಪ್ರಸ್ತುತ ಎರಡೂ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಎದುರಾಗಿದೆ. ಖಲಿಸ್ತಾನಿ ಉಗ್ರನ ಹತ್ಯೆ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ. ಈ ಬಿಕ್ಕಟ್ಟು ಭಾರತೀಯರಿಗೆ ಕೆನಡಾದ ಪೌರತ್ವ ದೊರೆಯುವಲ್ಲಿ ತೊಡಕಾಗಬಹುದು ಎಂದು ಅಂದಾಜಿಸಲಾಗಿದೆ. ಇನ್ನು 2022ರಲ್ಲಿ ಒಇಸಿಡಿ ದೇಶಗಳಲ್ಲಿ ಆಶ್ರಯ ಮತ್ತ ರಕ್ಷಣೆ ಕೋರಿ 21 ಲಕ್ಷಕ್ಕೂ ಹೆಚ್ಚು ಜನ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ವಿಶ್ವ ಸಂಸ್ಥೆಯ ಮಾನದ ಹಕ್ಕುಗಳ ಸಮಿತಿ ನೀಡಿದ ದತ್ತಾಯಗಳನ್ನು ಆಧಾರವಾಗಿ ಇರಿಸಿಕೊಂಡು ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಇನ್ನು 2021ರಲ್ಲಿ ಇಂತಹ ಅರ್ಜಿ ಸಲ್ಲಿಸಿದ್ದ ಭಾರತೀಯರ ಸಂಖ್ಯೆ 11,197 ಇತ್ತು. ಆದರೆ ಅದು 2022ರಲ್ಲಿ  55,541ಕ್ಕೆ ಏರಿಕೆಯಾಗಿದೆ. ಅಂದ್ರೆ ನಾಲ್ಕುಪಟ್ಟು ಜಾಸ್ತಿಯಾಗಿದೆ. ಈ ರೀತಿ ಆಶ್ರಯ ಕೋರಿದ ಭಾರತೀಯರ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಕಾಣಲು ಕಾರಣವೇನು ಎಂಬುದನ್ನು ವರದಿಯಲ್ಲಿ ವಿವರಿಸಿಲ್ಲ.

2021ರಲ್ಲಿ ಆಶ್ರಯ ಮತ್ತು ರಕ್ಷಣೆ ಕೋರಿ ಒಇಸಿಡಿ ದೇಶಗಳಿಗೆ ಒಟ್ಟು 9.98 ಲಕ್ಷ ಅರ್ಜಿಗಳನ್ನ ಸಲ್ಲಿಸಲಾಗಿತ್ತು. ಹಾಗೇ 2022ರಲ್ಲಿ ಒಟ್ಟು 21 ಲಕ್ಷ ಒಇಸಿಡಿ ದೇಶಗಳಲ್ಲಿ ಆಶ್ರಯ ಮತ್ತು ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ರು. ಅಂದ್ರೆ ಈ ಸಂಖ್ಯೆ ಒಂದೇ ವರ್ಷದಲ್ಲಿ ಒನ್ ಟು ಡಬಲ್ ಆಗಿದೆ. ಆದ್ರೆ 21 ಲಕ್ಷ ಅರ್ಜಿದಾರರ ಪೈಕಿ 6.52 ಲಕ್ಷ ಜನ್ರಿಗೆ ಮಾತ್ರ ಒಇಸಿಡಿ ದೇಶಗಳು ಆಶ್ರಯ ಮತ್ತು ರಕ್ಷಣೆಯನ್ನ ನೀಡಿವೆ. ಇಲ್ಲಿ ಇನ್ನೊಂದು ಮುಖ್ಯವಾದ ವಿಚಾರ ಇದೆ. ಅದೇನಂದ್ರೆ ಭಾರತೀಯರು ಪೌರತ್ವ ಪಡೆಯಲು ಬಯಸುವ ವಿದೇಶಗಳಲ್ಲಿ ಮೊದಲ ಸ್ಥಾನ ಅಮೆರಿಕದ್ದು, ಆದರೆ, ಆಶ್ರಯ ಮತ್ತು ರಕ್ಷಣೆ ಕೋರಿ ಒಬ್ಬ ಭಾರತೀಯನೂ ಅಮೆರಿಕಕ್ಕೆ ಅರ್ಜಿ ಸಲ್ಲಿಸಿಲ್ಲ. ಬದಲಿಗೆ ಆಶ್ರಯ ಮತ್ತು ರಕ್ಷಣೆ ಕೋರಿ ಭಾರತೀಯರಿಂದ ಹೆಚ್ಚು ಅರ್ಜಿ ಸಲ್ಲಿಕೆಯಾಗಿರೋದು ಆಸ್ಟ್ರೇಲಿಯಾ ದೇಶಕ್ಕೆ.

ಒಟ್ಟಾರೆ 21 ಲಕ್ಷ ಅರ್ಜಿಗಳ ಪೈಕಿ ಬರೋಬ್ಬರಿ 1.80 ಲಕ್ಷ ಅರ್ಜಿಗಳು ಕ್ಯೂಬಾದಿಂದಲೇ ಸಲ್ಲಿಕೆಯಾಗಿವೆ. ಅಫ್ಘಾನಿಸ್ತಾನದಿಂದ 1.61 ಲಕ್ಷ, ನಿಕರಾಗುವಾ ದೇಶದಿಂದ 1.65 ಲಕ್ಷ, ಸಿರಿಯಾದಿಂದ 1.25 ಲಕ್ಷ ಮಂದಿ ಅಪ್ಲಿಕೇಶನ್ ಸಲ್ಲಿಸಿದ್ದಾರೆ. ಕೊಲಂಬಿಯಾ 87,917,  ಹೊಂಡುರಸ್ 79,595, ಟರ್ಕಿ 71,651 ಹಾಗೇ ಭಾರತದಿಂದ 55,541 ಅರ್ಜಿಗಳು ಸಲ್ಲಿಕೆಯಾಗಿವೆ. ಇನ್ನು ಉಳಿದ ಎಲ್ಲಾ ದೇಶಗಳಿಂದ ಸೇರಿ 8.71 ಲಕ್ಷ ಅರ್ಜಿಗಳನ್ನ ಸಲ್ಲಿಸಲಾಗಿದೆ. ಸದ್ಯ ಲಕ್ಷಾಂತರ ಭಾರತೀಯರು ದೇಶ ಬಿಟ್ಟು ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. 2023 ರ ಮಾರ್ಚ್ 14 ರಂದು ಲೋಕಸಭೆಯಲ್ಲಿ ಮಂಡಿಸಿದ ಹೇಳಿಕೆಯಲ್ಲಿ 2022 ರಲ್ಲಿ 3,73,434 ಭಾರತೀಯರಿಗೆ ವಲಸೆ ಕಾಯ್ದೆ 1983 ರ ಅಡಿಯಲ್ಲಿ ವಲಸೆ ಅನುಮತಿಯನ್ನು ನೀಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಜೊತೆಗೆ ಒಇಸಿಡಿ ದೇಶಗಳೂ ಭಾರತೀಯರಿಗೆ ಖಾಯಂ ಪೌರತ್ವ ನೀಡಲು ಮುಂದಾಗುತ್ತಿವೆ. ಈ ಎಲ್ಲಾ ಅಂಕಿ ಅಂಶಗಳನ್ನ ನೋಡಿದ್ರೆ ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಜೊತೆಗೆ ಶ್ರೀಮಂತರೇ ಹೆಚ್ಚು ವಿದೇಶಿ ಪೌರತ್ವ ಪಡೆಯುತ್ತಿರೋದು ಆತಂಕಕ್ಕೂ ಕಾರಣವಾಗಿದೆ.

Shantha Kumari