ಸೂರ್ಯವಂಶಿ OUT, ಸಂಜು IN? ಟಾಟಾ ಬೈ ಬೈ ಪಾಕಿಸ್ತಾನ

ಸೂರ್ಯವಂಶಿ OUT, ಸಂಜು IN?  ಟಾಟಾ ಬೈ ಬೈ ಪಾಕಿಸ್ತಾನ

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು 

ಶ್ರೀಲಂಕಾ ಮಹಿಳಾ ತಂಡ ಪಾಕಿಸ್ತಾನವನ್ನು 4 ವಿಕೆಟ್‌ಗಳಿಂದ ಸೋಲಿಸಿ ಮಹಿಳಾ ಏಷ್ಯಾಕಪ್ ಫೈನಲ್‌ಗೆ ಪ್ರವೇಶಿಸಿದೆ. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 130 ರನ್ ಗಳಿಸಿತು. ಶ್ರೀಲಂಕಾ 18.4 ಓವರ್‌ಗಳಲ್ಲಿ ಗುರಿ ತಲುಪಿತು. ಇದೀಗ ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿವೆ. 2024ರ ಫೈನಲ್‌ನಲ್ಲೂ ಇದೇ ಎರಡು ತಂಡಗಳು ಆಡಿದ್ದವು.

ಭಾರತ ಮತ್ತು ಅಪ್ಘಾನಿಸ್ತಾನ್ ನಡುವಣ ಟಿ20 ಸರಣಿಯು ಭಾನುವಾರದಿಂದ (ಸೆ.13) ಶುರುವಾಗಲಿದೆ. ಈ ಸರಣಿ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ಆಘಾತ ಎದುರಾಗಿದೆ. ತಂಡದ ಪ್ರಮುಖ ವಿಕೆಟ್ ಕೀಪರ್ ಬ್ಯಾಟರ್​ ಇಶಾನ್ ಕಿಶನ್ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದು, ಹೀಗಾಗಿ ಮೊದಲ ಮ್ಯಾಚ್​ಗೆ ಅಲಭ್ಯರಾಗುವ ಸಾಧ್ಯತೆಯಿದೆ. ನವದೀಪ್ ಸೈನಿ ಎಸೆದ ಬೌನ್ಸರ್‌ನಿಂದ ತಪ್ಪಿಸಿಕೊಳ್ಳುವಾಗ ಬ್ಯಾಲೆನ್ಸ್ ಕಳೆದುಕೊಂಡು ಇಂಜುರಿಗೆ ಒಳಗಾಗಿದ್ದಾರೆ.

ದುಲೀಪ್ ಟ್ರೋಫಿ ಗೆಲುವಿನ ಬಳಿಕ ಇಶಾನ್ ಕಿಶನ್ ಮತ್ತು 15 ವರ್ಷದ ವೈಭವ್ ಸೂರ್ಯವಂಶಿ ನಡುವಿನ ಮೋಜಿನ ಮಾತುಕತೆ ವೈರಲ್ ಆಗಿದೆ. ಡಿಆರ್‌ಎಸ್ ನಿರ್ಧಾರಗಳ ಕ್ರೆಡಿಟ್ ಬಗ್ಗೆ ಇಬ್ಬರೂ ತಮಾಷೆಯಾಗಿ ಮಾತನಾಡಿದ್ದಾರೆ. ಈ ವೇಳೆ ಇಶಾನ್, ವೈಭವ್ ಭವಿಷ್ಯದ ನಾಯಕನಾಗಬಹುದು ಎಂದು ಹೇಳಿದ್ದು ಗಮನ ಸೆಳೆದಿದೆ.

2026ರ ದುಲೀಪ್ ಟ್ರೋಫಿ ಗೆದ್ದ ಪೂರ್ವ ವಲಯ ತಂಡದ ಅನುಭವಿ ವೇಗಿ ಮೊಹಮ್ಮದ್ ಶಮಿ, 15 ವರ್ಷದ ಉಪನಾಯಕ ವೈಭವ್ ಸೂರ್ಯವಂಶಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತಮ್ಮ ವೃತ್ತಿಜೀವನದಷ್ಟೇ ವಯಸ್ಸಿನ ಅನುಭವವನ್ನು ವೈಭವ್ ಹೊಂದಿದ್ದಾರೆ ಎಂದು ಶಮಿ ಹೇಳಿದ್ದು, ಯುವ ಆಟಗಾರರ ಪ್ರಬುದ್ಧತೆಯನ್ನು ಶ್ಲಾಘಿಸಿದ್ದಾರೆ.

ಭಾರತ ತಂಡದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಮುಂಬರುವ 2026-27ರ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಹೈದರಾಬಾದ್ ಪುರುಷರ ತಂಡದ ನಾಯಕರಾಗಿ ಅಧಿಕೃತವಾಗಿ ನೇಮಕಗೊಂಡಿದ್ದಾರೆ.  ನಿನ್ನೆ  ನಡೆದ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಹಿರಿಯ ಆಯ್ಕೆ ಸಮಿತಿ ಸಭೆಯಲ್ಲಿ ಈ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಲಂಡನ್‌ನಲ್ಲಿ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿಯಾಗಿದ್ದಾರೆ. ಶಿಂಧೆ ಲಂಡನ್‌ನಲ್ಲಿರುವ ವಿಷಯ ತಿಳಿದು ಕೊಹ್ಲಿ ಅವರನ್ನು ಭೇಟಿ ಮಾಡಿದರು ಎನ್ನಲಾಗಿದೆ. ಈ ವೇಳೆ ಕ್ರೀಡಾ ಮೂಲಸೌಕರ್ಯ, ಆಟಗಾರರ ಅಭಿವೃದ್ಧಿ ಹಾಗೂ ಮಹಾರಾಷ್ಟ್ರದ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚೆ ನಡೆದಿದೆ. ಯುವ ಪ್ರತಿಭೆಗಳಿಗೆ ಉತ್ತಮ ಅವಕಾಶ ಕಲ್ಪಿಸುವ ಬಗ್ಗೆಯೂ ಕೊಹ್ಲಿ ಸಲಹೆಗಳನ್ನು ನೀಡಿದ್ದಾರೆ. ಶಿಂಧೆ, ಕೊಹ್ಲಿಯ ಸರಳತೆ ಮತ್ತು ಸ್ನೇಹಪರತೆಯನ್ನು ಮೆಚ್ಚಿಕೊಂಡಿದ್ದಾರೆ.

ಅಫ್ಘಾನಿಸ್ತಾನ್ ವಿರುದ್ಧದ ಮುಂಬರುವ ಟಿ20 ಸರಣಿಗೆ, ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಆಡುವ ಬಳಗದಿಂದ ಹೊರಗಿಟ್ಟು, ಅವರ ಬದಲಿಗೆ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಬೇಕೆಂದು ಅಜಿಂಕ್ಯ ರಹಾನೆ ಆಗ್ರಹಿಸಿದ್ದಾರೆ. ವಿಶ್ವಕಪ್ ಗೆದ್ದ ತಂಡದ ಮೇಲೆ ನಂಬಿಕೆ ಇಡಬೇಕು ಮತ್ತು ಕೆಲವೇ ಪಂದ್ಯಗಳ ವೈಫಲ್ಯಕ್ಕೆ ಸ್ಯಾಮ್ಸನ್ ಅವರನ್ನು ಕೈಬಿಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡವು ತವರಿನಲ್ಲೇ ‘ವಿಸಿಟರ್ಸ್ ಡ್ರೆಸ್ಸಿಂಗ್ ರೂಮ್’ ಬಳಸಲಿದೆ. ಈ ಸರಣಿಯ ಎಲ್ಲಾ ಪಂದ್ಯಗಳು ಭಾರತದಲ್ಲೇ ನಡೆದರೂ, ಇದರ ಅಧಿಕೃತ ಆತಿಥ್ಯ ವಹಿಸಿರುವುದು ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್. ಕ್ರಿಕೆಟ್ ನಿಯಮಗಳ ಪ್ರಕಾರ, ಆತಿಥೇಯ ತಂಡಕ್ಕೆ ‘ಹೋಮ್ ಡ್ರೆಸ್ಸಿಂಗ್ ರೂಮ್’ ನೀಡಬೇಕು. ಇದೇ ಕಾರಣಕ್ಕೆ, ಸರಣಿಯ ಅಧಿಕೃತ ಆಯೋಜಕರಾದ ಅಫ್ಘಾನಿಸ್ತಾನಕ್ಕೆ ಹೋಮ್ ಡ್ರೆಸ್ಸಿಂಗ್ ರೂಮ್ ಸಿಕ್ಕಿದೆ. ಭಾರತ ತಂಡವು ಅತಿಥಿಗಳ ಡ್ರೆಸ್ಸಿಂಗ್ ರೂಮ್ ಬಳಸಬೇಕಾಗಿದೆ.

ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ ತಳಮಟ್ಟದ ಕ್ರಿಕೆಟ್ ಅಭಿವೃದ್ಧಿಗಾಗಿ 500 ಕೋಟಿ ರೂಪಾಯಿಗಳ ಕಾರ್ಪಸ್ ನಿಧಿ ನಿರ್ಮಿಸಲು ಯೋಜನೆ ರೂಪಿಸಿದೆ. ಮುಂದಿನ ಹತ್ತು ವರ್ಷಗಳಲ್ಲಿ ಈ ನಿಧಿಯ ಬಡ್ಡಿಯಿಂದ ಮೈದಾನ ಕ್ಲಬ್‌ಗಳು, ಶಾಲೆಗಳು ಮತ್ತು ಕಾಲೇಜುಗಳಿಗೆ ನೆರವು ನೀಡುವ ಉದ್ದೇಶ ಹೊಂದಿದೆ. ಯುವ ಕ್ರಿಕೆಟಿಗರಿಗೆ ಉತ್ತಮ ಅವಕಾಶ ಕಲ್ಪಿಸುವುದು ಇದರ ಪ್ರಮುಖ ಗುರಿಯಾಗಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಪ್ರದರ್ಶನ ಪಾತಾಳಕ್ಕೆ ಕುಸಿಯುತ್ತಿರುವುದರ ಬಗ್ಗೆ ವಾಸಿಂ ಅಕ್ರಮ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. “ಭಾರತದಲ್ಲಿ ಕೇವಲ 13-14 ವರ್ಷದ ವೈಭವ್ ಸೂರ್ಯವಂಶಿ ಅವರಂತಹ ಆಟಗಾರರು ಪ್ರಥಮ ದರ್ಜೆ ಕ್ರಿಕೆಟ್ಆಡುತ್ತಿದ್ದಾರೆ. ಅವರು ನಾಲ್ಕು ದಿನಗಳ ಪಂದ್ಯಗಳಲ್ಲಿ ದಿನವಿಡೀ ಬ್ಯಾಟಿಂಗ್ ಮಾಡುವ ಕೌಶಲ್ಯವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಆದರೆ ನಮ್ಮಲ್ಲಿ ಟಿ20 ಕ್ರಿಕೆಟ್‌ಗೆ ಸಿಗುತ್ತಿರುವ ಅತಿಯಾದ ಪ್ರಾಮುಖ್ಯತೆಯಿಂದಾಗಿ ಯುವ ಆಟಗಾರರು ಟೆಸ್ಟ್ ಕ್ರಿಕೆಟ್‌ಗೆ ಅಗತ್ಯವಿರುವ ತಾಳ್ಮೆಯನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ.

Kishor KV

Leave a Reply

Your email address will not be published. Required fields are marked *