15 ಲಕ್ಷ ಜನರನ್ನು ಕಾಡುತ್ತಿದೆ ‘ಹಿಕಿಕೋಮೊರಿ’ – ಏನಿದು ಐಸೋಲೇಷನ್ ಪ್ರವೃತ್ತಿ?

15 ಲಕ್ಷ ಜನರನ್ನು ಕಾಡುತ್ತಿದೆ ‘ಹಿಕಿಕೋಮೊರಿ’ – ಏನಿದು ಐಸೋಲೇಷನ್ ಪ್ರವೃತ್ತಿ?

ಟೋಕಿಯೋ: ಆಧುನಿಕ ಜೀವನಲ್ಲಿ ಎಲ್ಲರೂ ಬ್ಯುಸಿಯಾಗಿದ್ದಾರೆ. ಮನೆ, ಆಫೀಸ್ ಕೆಲಸ ಅಂತಾ ಅನೇಕರು ಒತ್ತಡದಲ್ಲಿ ಸಿಲುಕುತ್ತಿದ್ದಾರೆ. ಅಷ್ಟೇ ಅಲ್ಲದೇ ಸಮಾಜದಿಂದ ದೂರವಾಗಿ ಅಂತರ್ಮುಖಿಗಳಾಗುತ್ತಿದ್ದಾರೆ. ಇದೀಗ ಜಪಾನಿನ ಸುಮಾರು 15 ಲಕ್ಷ ಯುವಜನರು ಸಹಜ ಜನಜೀವನದಿಂದ ದೂರವಾಗಿ ಐಸೋಲೇಷನ್‌ನಲ್ಲಿ ಜೀವಿಸುತ್ತಿದ್ದಾರೆ ಅನ್ನೋ ಆತಂಕಕಾರಿ ಮಾಹಿತಿಯೊಂದು ಬಯಲಾಗಿದೆ.

ಈ ವಿದ್ಯಮಾನಕ್ಕೆ ‘ಹಿಕಿಕೋಮೊರಿ’ ಅಂತಾ ಜಪಾನ್ ಭಾಷೆಯಲ್ಲಿ ಕರೆಯಲಾಗುತ್ತದೆ. ಈ ಕಾಯಿಲೆಗೆ ತುತ್ತಾದವರು ಸುಮಾರು 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಸಮಯ ಸಮಾಜದಿಂದ ದೂರ ಇರುತ್ತಿದ್ದಾರಂತೆ. ಹಿಕಿಕೋಮೊರಿ ಅಥವಾ ಸಮಾಜದಿಂದ ದೂರವಾಗುವ ಮನಸ್ಥಿತಿಯ ಕುರಿತು ಜಪಾನ್‌ನಲ್ಲಿ ನಡೆಸಿದ ಸಮೀಕ್ಷೆಯ ವರದಿ ಪ್ರಕಟವಾಗಿದೆ.

ಇದನ್ನೂ ಓದಿ: ಇದು ಭಾರತ, ಅಸಭ್ಯ ದೃಶ್ಯಗಳಿಗೆ ಜಾಗ ಇರಬಾರದು – ಒಟಿಟಿ ಬಗ್ಗೆ ಗರಂ ಆದ ಸಲ್ಮಾನ್ ಖಾನ್

ಯುವಜನರಿಂದ ಹಿಡಿದು ವಯಸ್ಕರವರೆಗೂ ಈ ‘ಹಿಕಿಕೋಮೊರಿ’ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ. ಹಿಕಿಕೋಮೊರಿ ಸ್ಥಿತಿಯನ್ನು ವೈದ್ಯಕೀಯವಾಗಿ ರೋಗ ಎಂದು ಗುರುತಿಸಿಲ್ಲ. ಬದಲಾಗಿ ಎಲ್ಲ ವಯೋಮಾನದ ಜನರನ್ನೂ ಬಾಧಿಸುವಂತಹ ಸಾಮಾಜಿಕ ವಿದ್ಯಮಾನವಾಗಿದೆ. ಸಾಮಾಜಿಕ ಉದ್ವಿಗ್ನತೆ, ಖಿನ್ನತೆ, ಶೈಕ್ಷಣಿಕ ಒತ್ತಡ ಹಾಗೂ ದಬ್ಬಾಳಿಕೆಯಂತಹ ವೈವಿಧ್ಯಮಯ ಅಂಶಗಳಿಂದ ಹಿಕಿಕೋಮೊರಿ ಉಂಟಾಗಬಲ್ಲದು. ಇದು ಕೆಲವೊಮ್ಮೆ ಮಾನಸಿಕ ಆರೋಗ್ಯ ಸಮಸ್ಯೆಗಳ ಜತೆಗೂ ಕಾಡಬಹುದು ಅಂತಾ ಗೊತ್ತಾಗಿದೆ.

ಜಪಾನ್‌ನಲ್ಲಿ ಹಿಕಿಕೋಮೊರಿ ಪ್ರಕರಣಗಳು ಅತ್ಯಧಿಕ ಪ್ರಮಾಣದಲ್ಲಿ ಇರಲು ಹಲವು ಕಾರಣಗಳಿವೆ. ಇದರಲ್ಲಿ ದೇಶದ ಅತ್ಯಂತ ಸ್ಪರ್ಧಾತ್ಮಕ ಹಾಗೂ ಬೇಡಿಕೆಯ ಶಿಕ್ಷಣ ವ್ಯವಸ್ಥೆ ಅತಿ ಪ್ರಮುಖ ಅಂಶವಾಗಿದೆ. ಶಾಲೆಗಳಲ್ಲಿ ಯಶಸ್ಸು ಕಾಣಲು ಹಾಗೂ ಒಳ್ಳೆಯ ಉದ್ಯೋಗ ಸಂಪಾದಿಸಲು ಜಪಾನ್‌ನ ಅನೇಕ ಯುವ ಜನರು ವಿಪರೀತ ಒತ್ತಡಕ್ಕೆ ಒಳಗಾಗುತ್ತಿದ್ದಾರೆ.

ಸರ್ಕಾರದ ಸಮೀಕ್ಷೆ ಪ್ರಕಾರ, ತಾವು ಸಮಾಜದಿಂದ ವಿಮುಖರಾಗಿರಲು ಹೆಚ್ಚಿನವರು ನೀಡಿರುವ ಕಾರಣ ‘ಉದ್ಯೋಗ ತೊರೆದಿರುವುದು’. ಇದು ಕೋವಿಡ್ ಸಾಂಕ್ರಾಮಿಕದ ಬೆನ್ನಲ್ಲೇ ಶುರುವಾದ ಸಮಸ್ಯೆ ಎಂದು 15- 20 ವರ್ಷದ ಶೇ 18ರಷ್ಟು ಹಾಗೂ 40- 64 ವರ್ಷದ ಶೇ 20ರಷ್ಟು ಜನರು ಹೇಳಿದ್ದಾರೆ.

ಕೌಟುಂಬಿಕ ಒತ್ತಡವೂ ಕಾರಣ ಸಾಂಪ್ರದಾಯಿಕ ಜಪಾನ್ ಕುಟುಂಬಗಳೂ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಜಪಾನ್ ಸಾಮಾಜಿಕ ವ್ಯವಸ್ಥೆಯಲ್ಲಿ ಪೋಷಕರು ಹಾಗೂ ಹಿರಿಯರಿಗೆ ಗೌರವ ನೀಡುವುದು ಹಾಗೂ ಧರ್ಮನಿಷ್ಠೆಗೆ ಬಹಳ ಒತ್ತು ನೀಡಲಾಗುತ್ತದೆ. ಪೋಷಕರು ವೃದ್ಧಾಪ್ಯಕ್ಕೆ ಕಾಲಿಟ್ಟಾಗ ಅವರನ್ನು ನೋಡಿಕೊಳ್ಳುವುದು ತಮ್ಮ ಕರ್ತವ್ಯ ಎಂಬ ಬದ್ಧತೆಯ ಸಂಸ್ಕೃತಿಯನ್ನು ಸ್ಥಾಪಿಸಿದೆ. ಇದು ಕೂಡ ಮಕ್ಕಳಲ್ಲಿ ತಪ್ಪಿತಸ್ಥ ಭಾವನೆ ಅಥವಾ ಆತಂಕವನ್ನು ಉಂಟುಮಾಡುತ್ತದೆ ಎನ್ನಲಾಗಿದೆ.

ಇನ್ನು ಜಪಾನ್‌ನ ಉದ್ಯೋಗ ಸಂಸ್ಕೃತಿ ಬಹಳ ಕುಖ್ಯಾತಿ ಪಡೆದಿದೆ. ಜಪಾನ್‌ನ ಉದ್ಯಮ, ಕಚೇರಿಗಳು ವಿಪರೀತವಾಗಿ ದುಡಿಸಿಕೊಳ್ಳುತ್ತವೆ. ಸುದೀರ್ಘ ಕೆಲಸದ ಅವಧಿಗಳು, ವಿಪರೀತವಾದ ಒತ್ತಡ ಹಾಗೂ ವೃತ್ತಿಪರ ಬೆಳವಣಿಗೆಗೆ ತೀರಾ ಸೀಮಿತ ಅವಕಾಶಗಳು ಜನರನ್ನು ಹೈರಾಣಾಗಿಸುತ್ತಿದೆ. ಹೆಚ್ಚಿನವರು ಈ ಕಾರಣದಿಂದ ಹಿಕಿಕೋಮೊರಿಗೆ ಒಳಗಾಗುತ್ತಿದ್ದಾರೆ. ಹಿಕಿಕೋಮೊರಿಗೆ ತುತ್ತಾದವರು ಮನೆಯಿಂದ ಹೊರಗೆ ಕಾಲಿಡಲು ಬಯಸುವುದಿಲ್ಲ. ಶಾಲೆ ಅಥವಾ ಕಚೇರಿಗೆ ತೆರಳುವುದು ಹಾಗೂ ಸಾಮಾಜಿಕವಲ್ಲದ ದಿನನಿತ್ಯದ ಚಟುವಟಿಕೆಗಳಿಂದಲೂ ದೂರ ಇರಲು ಬಯಸುತ್ತಾರೆ.

suddiyaana