ಶುಕ್ರವಾರ ಸಂಪೂರ್ಣ ಸ್ತಬ್ಧವಾಗಲಿದ್ಯಾ ಕರುನಾಡು? – ಕರ್ನಾಟಕ ಬಂದ್‌ಗೆ ಯಾರ್ಯಾರ ಬೆಂಬಲ?

ಶುಕ್ರವಾರ ಸಂಪೂರ್ಣ ಸ್ತಬ್ಧವಾಗಲಿದ್ಯಾ ಕರುನಾಡು? – ಕರ್ನಾಟಕ ಬಂದ್‌ಗೆ ಯಾರ್ಯಾರ ಬೆಂಬಲ?

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕನ್ನಡ ಕನ್ನಡ ಪರ ಸಂಘಟನೆಗಳು ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಕಾವೇರಿ ಕಿಚ್ಚು ಇನ್ನಷ್ಟು ಹೆಚ್ಚಾಗಲಿದೆ. ಕರ್ನಾಟಕ ಬಂದ್‌ ವೇಳೆ ರಾಜ್ಯದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು, ರೈಲು ಸಂಚಾರಕ್ಕೆ ಅಡ್ಡಿಪಡಿಸಲು ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಚಳವಳಿಗಾರರು ಯೋಜಿಸಿದ್ದಾರೆ.

ಕರ್ನಾಟಕ ಬಂದ್‌ಗೆ 1,900 ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿದ್ದು, ಕರ್ನಾಟಕದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಬಂಧಿಸಲಾಗುತ್ತಿದೆ. ಕ್ಯಾಬ್ ಮತ್ತು ಆಟೋರಿಕ್ಷಾ ಚಾಲಕರ ಸಂಘಗಳು ಸಹ ಬಂದ್‌ಗೆ ಬೆಂಬಲ ನೀಡಿವೆ. ಆದರೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರ ಸಂಘವು ಯಾವುದೇ ನಿರ್ಧಾರವನ್ನು ಇನ್ನೂ ತೆಗೆದುಕೊಂಡಿಲ್ಲ. ಪರಿಸ್ಥಿತಿಯನ್ನು ಅವಲೋಕಿಸಿ ಗುರುವಾರ ಸಂಜೆಯೊಳಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವ ಬಗ್ಗೆ ನಿರ್ಧರಿಸುವ ಸಾಧ್ಯತೆ ಇದೆ. ಉದ್ಯಮ ಸಂಸ್ಥೆಗಳು ಮತ್ತು ಹೋಟೆಲ್ ಸಂಘಗಳು ಇನ್ನೂ ಬಂದ್ ಕರೆ ಬಗ್ಗೆ ನಿರ್ಧರಿಸಿಲ್ಲ.

ಇದನ್ನೂ ಓದಿ: ಪೊಲೀಸರ ಬಿಗಿ ಭದ್ರತೆಯಲ್ಲಿ ದಸರಾ ಆನೆಗಳ ತೂಕ ಪರೀಕ್ಷೆ! – ತೂಕದಲ್ಲಿ ಮಾಜಿ ಕ್ಯಾಪ್ಟನ್‌ ಅರ್ಜುನ ಫಸ್ಟ್‌, ಅಭಿಮನ್ಯು ಸೆಕೆಂಡ್‌!

ಕರ್ನಾಟಕ ಬಂದ್‌ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಸಂಪೂರ್ಣ ಬೆಂಬಲ ಸೂಚಿಸಿದೆ. ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಾದ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು, ಚಲನಚಿತ್ರಗಳ ಪ್ರದರ್ಶನ ಇತ್ಯಾದಿಗಳನ್ನು ಶುಕ್ರವಾರ ಬಂದ್‌ ಮಾಡಲಾಗಿದೆ. ಅಷ್ಟೇ ಅಲ್ಲದೇ ಪ್ರತಿಭಟನಾ ರ್ಯಾಲಿಯಲ್ಲಿ ಸ್ಟಾರ್ ನಟರು ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ.

ಇನ್ನು ಬಂದ್‌ಗೆ ಬೆಂಬಲ ಕೋರಿ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಅವರು ತೆರೆದ ವಾಹನದಲ್ಲಿ ಮಲ್ಲೇಶ್ವರಂ ಮತ್ತಿತರ ಬಡಾವಣೆಗಳಲ್ಲಿ ಸಂಚರಿಸಿ ಕರ್ನಾಟಕ ಬಂದ್‌ಗೆ ಬೆಂಬಲ ನೀಡುವಂತೆ ವ್ಯಾಪಾರಿಗಳಿಗೆ ಮನವಿ ಮಾಡಿದ್ದಾರೆ. ನಾವು ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳನ್ನು ಮುಚ್ಚುತ್ತೇವೆ, ರೈಲುಗಳನ್ನು ನಿಲ್ಲಿಸುತ್ತೇವೆ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕುತ್ತೇವೆ. ಮಾಲ್ ಅಥವಾ ಚಿತ್ರಮಂದಿರಗಳು ಇರುವುದಿಲ್ಲ. ಶಾಂತಿಯುತವಾಗಿ ಪ್ರತಿಭಟಿಸುತ್ತೇವೆ ಮತ್ತು ಬಂದ್‌ನಿಂದ ಯಾವುದೇ ವೈದ್ಯಕೀಯ ಸೇವೆಗಳಿಗೆ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ.

ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ರ್ಯಾಲಿ

ಶಕ್ರವಾರ ಬೆಳಗ್ಗೆ 10.30ಕ್ಕೆ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ರ್ಯಾಲಿ ನಡೆಸಲು ಯೋಜಿಸಲಾಗಿದೆ. ರ್ಯಾಲಿ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರೆ ಪ್ರತಿಭಟನೆಯನ್ನು ಮತ್ತಷ್ಟು  ತೀವ್ರಗೊಳಿಸಲಾಗುವುದು ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.  ಕಾವೇರಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮೌನ ವಹಿಸಿದ್ದಾರೆ ಎಂದು ಟೀಕಿಸಿದ ಅವರು, ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಪರೀಕ್ಷೆ ಮುಂದೂಡಿಕೆ

ಬಂದ್‌ನಿಂದಾಗಿ ಬೆಂಗಳೂರು ವಿಶ್ವವಿದ್ಯಾಲಯ ನಾಳೆ ನಡೆಯಬೇಕಿದ್ದ ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್ ಪದವಿ ಪರೀಕ್ಷೆಗಳನ್ನು ಶನಿವಾರಕ್ಕೆ ಮುಂದೂಡಿದೆ. ಅದೇ ರೀತಿ, ತುಮಕೂರು ವಿಶ್ವವಿದ್ಯಾಲಯವು ಯುಜಿ ಕೋರ್ಸ್‌ಗಳ ಮೊದಲ ಸೆಮಿಸ್ಟರ್‌ನ ಪೂರಕ ಪರೀಕ್ಷೆಗಳನ್ನು ಅಕ್ಟೋಬರ್ 18 ಕ್ಕೆ ಮತ್ತು ಪಿಜಿ ಕೋರ್ಸ್‌ಗಳ (ಸಿಬಿಸಿಎಸ್-ಇಎಂಎಸ್ ಮತ್ತು ಯುಯುಸಿಎಂಎಸ್) ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್‌ಗಳ ಪರೀಕ್ಷೆಗಳನ್ನು ಅಕ್ಟೋಬರ್ 12 ಕ್ಕೆ ಮುಂದೂಡಿದೆ.

Shwetha M