IND Vs ZIM ಸಮರ ಗೆಲ್ಲೋದ್ಯಾರು? – ಗಿಲ್ ಗೆ ಅಗ್ನಿಪರೀಕ್ಷೆ.. ಗೆದ್ರೆ ಅದೃಷ್ಟ

ಟಿ-20 ವಿಶ್ವಯುದ್ಧದಲ್ಲಿ ಜಗತ್ತನ್ನೇ ಗೆದ್ದ ಖುಷಿಯನ್ನ ಕೋಟಿ ಕೋಟಿ ಭಾರತೀಯರು ಈ ಕ್ಷಣದವರೆಗೂ ಎಂಜಾಯ್ ಮಾಡ್ತಿದ್ದಾರೆ. ಹುಟ್ಟಿದ ಊರುಗಳಲ್ಲಿ ಆಟಗಾರರಿಗೆ ಭರ್ಜರಿ ಸ್ವಾಗತವೂ ಸಿಗ್ತಿದೆ. ಇಡೀ ದೇಶವೇ ವಿಜಯೋತ್ಸವದ ಗುಂಗಿನಲ್ಲಿದೆ. ಇದೇ ಜೋಶ್ನಲ್ಲೇ ಇರೋ ಟೀಮ್ ಇಂಡಿಯಾ ಹೊಸ ಸವಾಲಿಗೆ ಸಜ್ಜಾಗಿದೆ. ಇಂದಿನಿಂದಲೇ ಟಿ20 ವಿಶ್ವ ಚಾಂಪಿಯನ್ನರ ಹೊಸ ಅಧ್ಯಾಯ ಆರಂಭವಾಗ್ತಿದ್ದು, ಶುಭಾರಂಭದ ಕನಸಿನಲ್ಲಿದೆ. ಜಿಂಬಾಬ್ವೆ ಎದುರಿನ 5 ಪಂದ್ಯಗಳ ಟಿ20 ಸರಣಿ ಇಂದಿನಿಂದ ಆರಂಭಗೊಳ್ಳುತ್ತಿದ್ದು, ಮೊದಲ ಟಿ20 ಪಂದ್ಯಕ್ಕೆ ಹರಾರೆ ಸ್ಪೋರ್ಟ್ಸ್ ಕ್ಲಬ್ ವೇದಿಕೆಯಾಗಿದೆ. ಒಂದ್ಕಡೆ ಆತಿಥೇಯ ಜಿಂಬಾಬ್ವೆ, ಚಾಂಪಿಯನ್ ಟೀಮ್ ಇಂಡಿಯಾಗೆ ಟಕ್ಕರ್ ನೀಡುವ ಲೆಕ್ಕಚಾರದಲ್ಲಿದ್ರೆ. ಇತ್ತ ಶುಭ್‌ಮನ್ ಗಿಲ್ ನೇತೃತ್ವದ ಯಂಗ್ ಇಂಡಿಯಾ ಇತಿಹಾಸ ಪುನಾರಾವರ್ತಿಸುವ ಕನಸು ಕಾಣುತ್ತಿದೆ. ಸೋ ಯಂಗ್ ಇಂಡಿಯಾ ಜಿಂಬಾಬ್ವೆ ಸರಣಿಗೆ ಹೇಗೆ ಸಜ್ಜಾಗಿದೆ? ಪ್ಲೇಯಿಂಗ್ 11ನಲ್ಲಿ ಯಾರಿಗೆಲ್ಲಾ ಚಾನ್ಸ್ ಸಿಗುತ್ತೆ? ಗಿಲ್ ಮುಂದಿರೋ ಸವಾಲುಗಳೇನು ಅನ್ನೋದರ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
ಮಿನಿ ವಿಶ್ವಕಪ್ನಲ್ಲಿ ಭಾರತಕ್ಕೆ ಟ್ರೋಫಿ ತಂದುಕೊಟ್ಟ ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೇ ರವೀಂದ್ರ ಜಡೇಜಾ ಟಿ-20 ಫಾರ್ಮೇಟ್ಗೆ ಗುಡ್ ಬೈ ಹೇಳಿದ್ದಾರೆ. ಮತ್ತೊಂದ್ಕಡೆ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬೂಮ್ರಾ, ಪಂತ್ ಹೀಗೆ ಸ್ಟಾರ್ ಆಟಗಾರರೆಲ್ಲಾ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಹೀಗಾಗಿ ಯಂಗ್ ಪ್ಲೇಯರ್ಸ್ ಮತ್ತೊಂದು ಸಮರಕ್ಕೆ ಸಜ್ಜಾಗಿದ್ದಾರೆ. ಟಿ20 ಸರಣಿಯು ಜುಲೈ 6 ರಿಂದ ಅಂದ್ರೆ ಇಂದಿನಿಂದಲೇ ಶುರುವಾಗಲಿದೆ. ಹರಾರೆಯಲ್ಲಿ ನಡೆಯಲಿರುವ 5 ಪಂದ್ಯಗಳ ಈ ಸರಣಿಯ ಮೊದಲೆರಡು ಪಂದ್ಯಗಳು ಜುಲೈ 6 ಮತ್ತು ಜುಲೈ 7 ರಂದು ನಡೆಯಲಿದೆ. ಇನ್ನು ಮೂರನೇ ಪಂದ್ಯವು ಜುಲೈ 10 ರಂದು ನಡೆದರೆ, ಕೊನೆಯ ಎರಡು ಪಂದ್ಯಗಳು ಜುಲೈ 13 ಮತ್ತು 14 ರಂದು ನಡೆಯಲಿದೆ. ಹರಾರೆಯ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಭಾರತೀಯ ಕಾಲಮಾನ ಸಂಜೆ 4.30 ರಿಂದ ಶುರುವಾಗಲಿದೆ.
ಜಿಂಬಾಬ್ವೆ ಸರಣಿಗೆ ಸಜ್ಜಾಗಿರೋ ಟೀಂ ಇಂಡಿಯಾದಲ್ಲಿ ಓಪನರ್ಸ್ ಯಾರು ಅನ್ನೋದೇ ದೊಡ್ಡ ಪ್ರಶ್ನೆಯಾಗಿತ್ತು. ಯಾಕಂದ್ರೆ ಟಿ-20 ವಿಶ್ವಕಪ್ನಲ್ಲಿದ್ದ ಕೆಲವ್ರು ಭಾರತಕ್ಕೆ ಬರೋದು ತಡವಾಗಿದ್ದಿದ್ರಿಂದ ಜಿಂಬಾಬ್ವೆ ಸರಣಿಗೆ ಇನ್ನೂ ತೆರಳಿರಲಿಲ್ಲ. ಮೂರನೇ ಪಂದ್ಯದ ವೇಳೆ ಸಂಜು ಸ್ಯಾಮ್ಸನ್, ಶಿವಂ ದುಬೆ ಹಾಗೂ ಯಶಸ್ವಿ ಜೈಸ್ವಾಲ್ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಹೀಗಾಗಿ ಮೊದಲ 2 ಪಂದ್ಯಗಳಿಗಾಗಿ ಹರ್ಷಿತ್ ರಾಣಾ, ಸಾಯಿ ಸುದರ್ಶನ್ ಹಾಗೂ ಜಿತೇಶ್ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ. ಇದೀಗ ಶನಿವಾರದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಓಪನರ್ಸ್ ಯಾರು ಅನ್ನೋದಕ್ಕೆ ಕ್ಯಾಪ್ಟನ್ ಶುಭ್‌ಮನ್ ಗಿಲ್ ಉತ್ತರ ಕೊಟ್ಟಿದ್ದಾರೆ. ಯಂಗ್ ಬ್ಯಾಟರ್ ಅಭಿಷೇಕ್ ಶರ್ಮಾ ಹಾಗೂ ಗಿಲ್ ಇನ್ನಿಂಗ್ಸ್ ಆರಂಭಿಸೋದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 3ನೇ ಕ್ರಮಾಂಕದಲ್ಲಿ ಋತುರಾಜ್ ಗಾಯಕ್ವಾಡ್ ಬ್ಯಾಟ್ ಬೀಸಲಿದ್ದು, 4ನೇ ಕ್ರಮಾಂಕದಲ್ಲಿ ರಿಯಾನ್ ಪರಾಗ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಬಟ್ ವಿಕೆಟ್ ಕೀಪರ್ ಸ್ಥಾನಕ್ಕೆ ಯಾರನ್ನ ಸೆಲೆಕ್ಟ್ ಮಾಡೋದು ಅನ್ನೋ ಕನ್ಫ್ಯೂಷನ್ ಇದೆ. ಜಿತೇಶ್ ಶರ್ಮಾ ಹಾಗೂ ಧೃವ್ ಜುರೇಲ್ ನಡುವೆ ನೇರಾ ನೇರ ಫೈಟ್ ಇದೆ. ಆದ್ರೂ ಈಗಾಗಲೇ ಟಿ20 ಕ್ರಿಕೆಟ್ನಲ್ಲಿ ಆಡಿದ ಅನುಭವ ಹೊಂದಿರುವ ಜಿತೇಶ್ ಶರ್ಮಾ ಫಸ್ಟ್ ಚಾಯ್ಸ್ ಆಗೋ ಸಾಧ್ಯತೆ ಇದೆ. ವಿಶ್ವಕಪ್ನಲ್ಲಿ ಸ್ಥಾನ ಪಡೆಯುವಲ್ಲಿ ಫೇಲ್ಯೂರ್ ಆಗಿದ್ದ ರಿಂಕು ಸಿಂಗ್ ಮೇಲೆ ಅಪಾರ ನಿರೀಕ್ಷೆ ಇದ್ದು, ಇಂದಿನ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಇನ್ನು ಹರಾರೆಯ ಪಿಚ್ ಸ್ಪಿನ್ ಫ್ರೆಂಡ್ಲಿ ಆಗಿರೋದ್ರಿಂದ ಆಲ್ರೌಂಡರ್ ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್ ಸ್ಥಾನ ಪಡೆಯೋದು ಬಹುತೇಕ ಕನ್ಫರ್ಮ್. ಇವರ ಜೊತೆ ವೇಗಿಗಳಾಗಿ ಮುಖೇಶ್ ಕುಮಾರ್, ಅವೇಶ್ ಖಾನ್ ಆ್ಯಂಡ್ ಖಲೀಲ್ ಅಹ್ಮದ್ ಕಮಾಲ್ ಮಾಡಲು ತುದಿಗಾಲಿನಲ್ಲೇ ನಿಂತಿದ್ದಾರೆ.
ಮತ್ತೊಂದೆಡೆ ಜಿಂಬಾಬ್ವೆ ತಂಡ ಸಿಕಂದರ್ ರಾಜಾ ನೇತೃತ್ವದಲ್ಲಿ ಕಣಕ್ಕಿಳಿಯುತ್ತಿದೆ. ಅನುಭವಿಗಳನ್ನ ಕೈಬಿಟ್ಟರೂ, ತಂಡದಲ್ಲಿರುವ ಬ್ರಿಯಾನ್ ಬೆನೆಟ್, ವಿಕೆಟ್ ಕೀಪರ್ ಆ್ಯಂಡ್ ಬ್ಯಾಟರ್ ಮದಾಂಡೆ ಕ್ಲೈವ್ ಹಾಗೂ ವೇಗಿ ರಿಚರ್ಡ್ ಎನ್ಗವಾರ ಮ್ಯಾಚ್ ವಿನ್ನರ್ ಪ್ಲೇಯರ್ಗಳಾಗಿದ್ದಾರೆ. ಹಿರಿಯ ಆಟಗಾರರೇ ಟೀಮ್ನಲ್ಲಿ ಇರೋದ್ರಿಂದ ಪಂದ್ಯಗಳನ್ನ ಗೆಲ್ಲೋ ಲೆಕ್ಕಚಾರದಲ್ಲಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಎಚ್ಚರಿಕೆಯ ಆಟವಾಡಬೇಕಿದೆ. ಆದ್ರೆ ಇತಿಹಾಸ ತೆಗೆದು ನೋಡಿದ್ರೆ ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. 2022 ರ ಪ್ರವಾಸದಲ್ಲಿ ಶಿಖರ್ ಧವನ್ ನೇತೃತ್ವದ ಭಾರತ ತಂಡ ಸರಣಿ ಜಯಿಸಿ ಕಮಾಲ್ ಮಾಡಿತ್ತು. 1998ರ ಏಕೈಕ ಟೆಸ್ಟ್ ಬಿಟ್ಟರೆ, ಇದುವರೆಗೆ ಜಿಂಬಾಬ್ವೆಯಲ್ಲಿ ಭಾರತ ಸರಣಿ ಸೋತ ಉದಾಹರಣೆಯೇ ಇಲ್ಲ. ಹೀಗಾಗಿ ಗೆಲುವಿನ ಇತಿಹಾಸ ಮುಂದುವರಿಸುವ ಬಿಗ್ ಚಾಲೆಂಜ್ ಯಂಗ್ ಇಂಡಿಯಾ ಮುಂದಿದೆ.
ಇನ್ನು ಸರಣಿ ನಡೆಯಲಿರುವ ಹರಾರೆ ಸ್ಪೋರ್ಟ್ಸ್ ಕ್ಲಬ್ನ ಪಿಚ್ ಬಗ್ಗೆ ನೋಡೋದಾದ್ರೆ, ಹೆಚ್ಚಿನ ಬೌನ್ಸ್ ಇಲ್ಲ. ಬ್ಯಾಟರ್ಸ್ ಮತ್ತು ಬೌಲರ್‌ಗಳಿಗೆ ಇಬ್ಬರಿಗೂ ಈ ಪಿಚ್ ಸಹಕಾರಿಯಾಗಲಿದೆ. ಆದ್ರೆ ಪಂದ್ಯ ಮುಂದುವರಿದಂತೆ ಸ್ಪಿನ್ನರ್ಗಳು ಪ್ರಾಬಲ್ಯ ಸಾಧಿಸುವ ಸಾಧ್ಯತೆ ಹೆಚ್ಚಿದೆ. ಈ ಪಿಚ್ನಲ್ಲಿ 50 ಟಿ20ಐ ಪಂದ್ಯಗಳು ಜರುಗಿದ್ದು, ಮೊದಲು ಬ್ಯಾಟಿಂಗ್ ನಡೆಸಿದ ತಂಡ 29 ಸಲ ಗೆದ್ದಿದೆ. ಹಾಗಾಗಿ ಟಾಸ್ ಗೆದ್ದವರೇ ಮೊದಲು ಬ್ಯಾಟಿಂಗ್ ಆಯ್ಕೆ ಮಾಡುವ ನಿರೀಕ್ಷೆ ಇದೆ. ಸದ್ಯ ಟೀಂ ಇಂಡಿಯಾ ಅಂತಾರಾಷ್ಟ್ರೀಯ ಟಿ20 ಱಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿದೆ. ಮೊದಲ ಸ್ಥಾನಕ್ಕೇರಿದ ಬೆನ್ನಲ್ಲೇ ಟೀಂ ಇಂಡಿಯಾ ಮೊದಲ ಬಾರಿಗೆ ಜಿಂಬಾಬ್ವೆ ವಿರುದ್ಧ ಆಡುತ್ತಿದೆ. ಕಳೆದ ಐದು ಪಂದ್ಯಗಳಲ್ಲಿ ಬಲಿಷ್ಠ ಟೀಂ ಇಂಡಿಯಾವನ್ನು ಜಿಂಬಾಬ್ವೆ ಎರಡು ಬಾರಿ ಸೋಲಿಸಿದೆ. ಅದೇ ಸಮಯದಲ್ಲಿ ಭಾರತ ಮೂರು ಬಾರಿ ಗೆದ್ದಿದೆ. ಎರಡು ತಂಡಗಳು ಟಿ-20 ಮಾದರಿಯಲ್ಲಿ ಒಟ್ಟು 8 ಬಾರಿ ಮುಖಾಮುಖಿಯಾಗಿದ್ದು, 6 ಬಾರಿ ಭಾರತ ತಂಡವೇ ಗೆಲುವು ಸಾಧಿಸಿದೆ.
ಜಿಂಬಾಬ್ವೆ ವಿರುದ್ಧದ ಸರಣಿ ಟೀಂ ಇಂಡಿಯಾ ಪಾಲಿಗೂ ತುಂಬಾನೇ ಮಹತ್ವದ್ದಾಗಿದೆ. ಟಿ-20 ಪಂದ್ಯಗಳಿಗೆ ಮೂವರು ಸ್ಟಾರ್ ಆಟಗಾರರು ವಿದಾಯ ಹೇಳಿರೋದ್ರಿಂದ 2026ರ ಟಿ-20 ವಿಶ್ವಕಪ್ಗೆ ಬಲಿಷ್ಠ ಭಾರತ ತಂಡವನ್ನ ರೆಡಿ ಮಾಡಬೇಕಿದೆ. ಈಗಿನಿಂದಲೇ ಆ ಕಸರತ್ತು ನಡೆಯಲಿದೆ. ಹೀಗಾಗಿ ಅನುಭವಿ ಆಟಗಾರರ ವಿದಾಯದಿಂದ ಖಾಲಿಯಾಗಿರುವ ಸ್ಥಾನವನ್ನು ತಮ್ಮದಾಗಿಸಿಕೊಳ್ಳಲು ಈಗ ಯುವ ಪ್ಲೇಯರ್ಸ್ ಪೈಪೋಟಿಗಿಳಿದಿದ್ದಾರೆ. ಅಲ್ದೇ ಈ ಸರಣಿಗೆ ಐಪಿಎಲ್‌ನ ಹಲವು ಸ್ಟಾರ್ ಆಟಗಾರರನ್ನು ಭಾರತ ತಂಡದಲ್ಲಿ ಸೇರಿಸಲಾಗಿದೆ. ಅನೇಕರು ಮೊದಲ ಪಂದ್ಯದಲ್ಲಿ ಪದಾರ್ಪಣೆ ಮಾಡುವ ಅವಕಾಶವಿದೆ. ಈಗಾಗಲೇ ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಅಕ್ಷರ್ ಪಟೇಲ್, ಅರ್ಶ್‌ದೀಪ್ ಸಿಂಗ್, ಕುಲ್ದೀಪ್ ಯಾದವ್ ಸೇರಿ ಪ್ರಮುಖರು ತಂಡದಲ್ಲಿ ತಮ್ಮ ಸ್ಥಾನವನ್ನ ಭದ್ರಪಡಿಸಿಕೊಂಡಿದ್ದಾರೆ. ಹೀಗಾಗಿ ಯುವ ಆಟಗಾರರಿಗೆ ತಂಡಕ್ಕೆ ಆಯ್ಕೆಯಾಗಲು ಜಿಂಬಾಬ್ವೆ ಸರಣಿಯಿಂದಲೇ ಆಡಿಷನ್ ಆರಂಭಗೊಳ್ಳಲಿದೆ. ಪ್ರಮುಖವಾಗಿ ಭಾರತದ ಮುಂದಿನ ನಾಯಕ ಎಂದೇ ಬಿಂಬಿತರಾಗ್ತಿರೋ ಶುಭ್‌ಮನ್ ಗಿಲ್ ಬ್ಯಾಟಿಂಗ್ ಜೊತೆ ನಾಯಕತ್ವದಲ್ಲೂ ಮಿಂಚಬೇಕಾದ ಅಗತ್ಯವಿದೆ. ರೋಹಿತ್, ವಿರಾಟ್ ವಿದಾಯದಿಂದ ಆರಂಭಿಕನ ಸ್ಥಾನ ತೆರವುಗೊಂಡಿದೆ. ಈ ಸ್ಥಾನಕ್ಕೆ ಗಿಲ್, ಋತುರಾಜ್ ಜೊತೆ ಉದಯೋನ್ಮುಖ ಬ್ಯಾಟರ್ ಅಭಿಷೇಕ್ ಶರ್ಮಾ ನಡುವೆ ನೇರ ಪೈಪೋಟಿ ನಡೆಯಲಿದೆ. ಸಾಯಿ ಸುದರ್ಶನ್ ಕೂಡಾ ರೇಸ್‌ನಲ್ಲಿರುವುದರಿಂದ ಕುತೂಹಲ ಹೆಚ್ಚಾಗಿದೆ. ಹಿರಿಯ ಬ್ಯಾಟರ್‌ಗಳ ಅನುಪಸ್ಥಿತಿಯಲ್ಲಿ ರಿಂಕು ಸಿಂಗ್ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆಯೂ ಹೆಚ್ಚಿದೆ.
ಒಟ್ನಲ್ಲಿ ಅನುಭವಿಗಳ ಆಬ್ಸೆನ್ಸ್ ನಡುವೆಯೂ ಯಂಗ್ ಇಂಡಿಯಾ ಬಲಿಷ್ಠವಾಗಿ ಕಾಣ್ತಿದ್ದು, ಸರಣಿ ಜಯಿಸೋ ಹಾಟ್ ಫೇವರಿಟ್ ಆಗಿದೆ. ಆದ್ರೆ, ತವರಿನ ಲಾಭದ ನಿರೀಕ್ಷೆಯಲ್ಲಿರುವ ಜಿಂಬಾಬ್ವೆಯನ್ನ ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸುವಂತಿಲ್ಲ. ಹೀಗಾಗಿ ಈ ಪ್ರೆಶರ್ನ ಶುಭ್‌ಮನ್ ಗಿಲ್ ಹೇಗೆ ಹ್ಯಾಂಡಲ್ ಮಾಡ್ತಾರೆ? ಯಂಗ್ ಪ್ಲೇಯರ್ಸ್ ಸಿಕ್ಕಿರೋ ಅವಕಾಶವನ್ನ ಹೇಗೆ ಬಳಸಿಕೊಳ್ತಾರೆ? ಯಾರೆಲ್ಲಾ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನ ಗಟ್ಟಿಗೊಳಿಸ್ತಾರೆ ಅನ್ನೋದನ್ನ ಕಾದು ನೋಡ್ಬೇಕು.