ಆರೆಂಜ್ ಆರ್ಮಿಗೆ ಸೋಲುಣಿಸುತ್ತಾ ಆರ್ಸಿಬಿ? – ಆರ್ಸಿಬಿ ಫೇಲ್ಯೂರ್ಗೆ ಆ ಇಬ್ಬರೇ ಕಾರಣನಾ..?
ಹೊಸ ಅಧ್ಯಾಯ ಅಂತಾ ಐಪಿಎಲ್ ಸೀಸನ್ 17ಗೆ ಕಾಲಿಟ್ಟಿದ್ದ ಆರ್ಸಿಬಿ ಹಳೇ ಸಂಪ್ರದಾಯಕ್ಕಿಂತ್ಲೂ ಕೆಟ್ಟದಾಗಿ ಪ್ರದರ್ಶನ ನೀಡ್ತಿದೆ. ಟ್ರೋಫಿ ಗೆಲ್ಲೋದಿರಲಿ ಪ್ಲೇಆಫ್ಗೂ ಹೋಗೋ ಕನಸನ್ನೇ ಕೈ ಬಿಟ್ಟಿದ್ದಾರೆ ಅನ್ಸುತ್ತೆ. ಒಂದೊಂದ್ ಸಲ ಆರ್ಸಿಬಿ ಬೌಲರ್ಗಳು ನಮಗೋಸ್ಕರ ಆಡ್ತಾರೋ ಇಲ್ಲ ಎದುರಾಳಿ ಟೀಂ ಗೆಲ್ಲಲಿ ಅಂತಾ ಆಡ್ತಾರೋ ಗೊತ್ತೇ ಆಗಲ್ಲ. ಆಡಿರೋ ಆರು ಮ್ಯಾಚಲ್ಲಿ ಒಂದೇ ಒಂದು ಪಂದ್ಯ ಗೆದ್ದು ಐದು ಪಂದ್ಯಗಳಲ್ಲಿ ಕೈ ಚೆಲ್ಲಿ ಕೂತಿದ್ದಾರೆ. ಇವತ್ತು ಎಸ್ಆರ್ಹೆಚ್ ವಿರುದ್ಧ ಆರ್ಸಿಬಿ ಅಖಾಡಕ್ಕೆ ಇಳೀತಿದ್ದು, ಈ ಪಂದ್ಯ ಗೆದ್ದಿಲ್ಲ ಅಂದ್ರೆ ಆರ್ಸಿಬಿ ಬಹುತೇಕ ಫ್ಲೇಆಫ್ ಕನಸನ್ನ ಕೈ ಬಿಟ್ಟಂತೆ. ಆರ್ಸಿಬಿ ಫೇಲ್ಯೂರ್ಗೆ ಆ ಇಬ್ಬರೇ ಕಾರಣನಾ..? ಇಂದಿನ ಮ್ಯಾಚ್ ಎಷ್ಟು ಮುಖ್ಯ..? ಟೀಮ್ನಿಂದ ಯಾರೆಲ್ಲಾ ಔಟ್ ಆಗಬಹುದು..? ಪ್ಲೇಆಫ್ಗೆ ಹೋಗೋ ಚಾನ್ಸ್ ಇದ್ಯಾ..?. ಈ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: MI ಫ್ಯಾನ್ಸ್ಗೆ ಕೊಹ್ಲಿ ಪಾಠ! – T20 ವರ್ಲ್ಡ್ ಕಪ್ಗೆ DK? – ಇಂತಾ ಬೌಲರ್ಸ್ ಬೇಕಾ?
ಸನ್ ರೈಸರ್ಸ್ ಹೈದ್ರಾಬಾದ್ ತಂಡ ಒಳ್ಳೇ ಫಾರ್ಮ್ನಲ್ಲಿದ್ದು ಈ ಬಾರಿ ಇತಿಹಾಸ ಸೃಷ್ಟಿಸಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಐಪಿಎಲ್ ಐತಿಹಾಸದಲ್ಲೇ ಅತೀ ಹೆಚ್ಚು ರನ್ ಹೊಡೆದಿದ್ದು, ಬೌಲಿಂಗ್ ಮತ್ತು ಬ್ಯಾಟಿಂಗ್ನಲ್ಲೂ ಸ್ಟ್ರಾಂಗ್ ಆಗಿದ್ದಾರೆ. ಇನ್ನು ಆರ್ಸಿಬಿ ಕಥೆಯಂತೂ ಹೇಳೋದೇ ಬೇಡ. ಆರು ಮ್ಯಾಚ್ ಆಡಿ 5 ಮ್ಯಾಚ್ಗಳಲ್ಲಿ ಸೋಲು ಕಂಡಾಗಿದೆ. ಸಿಎಸ್ಕೆ ವಿರುದ್ಧ ಸೀಸನ್ನ ಫಸ್ಟ್ ಮ್ಯಾಚ್ನಲ್ಲೇ ಮುಗ್ಗರಿಸಿದ್ದ ಆರ್ಸಿಬಿ ಬಳಿಕ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದಿತ್ತು. ಆಮೇಲೆ ಕೆಕೆಆರ್, ಎಲ್ಎಸ್ಜಿ, ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಸೋತು ಸುಣ್ಣವಾಗಿದ್ರು. ವಿಪರ್ಯಾಸ ಅಂದ್ರೆ ಹೋಂ ಗ್ರೌಂಡ್ನಲ್ಲೂ ಆಡಿಲ್ಲ. ಹೊರಗಿನ ನೆಲದಲ್ಲೂ ಗೆಲ್ಲೋಕೆ ಆಗಿಲ್ಲ. ಇದೀಗ ಮೊದಲಾರ್ಧದ ಕೊನೆಯ ಪಂದ್ಯದಲ್ಲಿ ಎಸ್ಆರ್ಹೆಚ್ ವಿರುದ್ಧ ಕಣಕ್ಕಿಳಿಯಲು ಆರ್ಸಿಬಿ ಪಡೆ ಸಜ್ಜಾಗಿದೆ. ಏಪ್ರಿಲ್ 15 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್ಸಿಬಿ ತಂಡದ ಎದುರಾಗಿ ಸನ್ರೈಸರ್ಸ್ ಹೈದರಾಬಾದ್ ತಂಡ ಕಣಕ್ಕಿಳಿಯಲಿದೆ.
ಈ ಬಾರಿಯ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು ಅದ್ಭುತ ಪ್ರದರ್ಶನ ನೀಡುತ್ತಿದೆ. ಆಡಿರುವ 5 ಪಂದ್ಯಗಳಲ್ಲಿ ಎಸ್ಆರ್ಹೆಚ್ ತಂಡವು 3 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದರೆ, 2 ಪಂದ್ಯಗಳಲ್ಲಿ ವಿರೋಚಿತ ಹೋರಾಟ ಪ್ರದರ್ಶಿಸಿತ್ತು. ಹೀಗಾಗಿ ಆರ್ಸಿಬಿ ತಂಡಕ್ಕೆ ಎಸ್ಆರ್ಹೆಚ್ ಕಠಿಣ ಪೈಪೋಟಿ ನೀಡಲಿದೆ. ಅದರಲ್ಲೂ ಈ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರೋದ್ರಿಂದ ರನ್ ಮಳೆ ಹರಿಯುವ ಸಾಧ್ಯತೆಯಿದೆ. ಏಕೆಂದರೆ ಈ ಬಾರಿಯ ಐಪಿಎಲ್ನಲ್ಲಿ 277 ರನ್ ಕಲೆಹಾಕುವ ಮೂಲಕ ಎಸ್ಆರ್ಹೆಚ್ ತಂಡ ಹೊಸ ಇತಿಹಾಸವನ್ನೇ ನಿರ್ಮಿಸಿದೆ. ಇತ್ತ ಬ್ಯಾಟರ್ಗಳ ಸ್ವರ್ಗ ಎನಿಸಿಕೊಂಡಿರುವ ಚಿನ್ನಸ್ವಾಮಿ ಮೈದಾನದಲ್ಲಿ ಸನ್ರೈಸರ್ಸ್ ಬ್ಯಾಟ್ಸ್ಮನ್ಗಳು ಅಬ್ಬರಿಸುವ ನಿರೀಕ್ಷೆಯಿದೆ. ಮತ್ತೊಂದೆಡೆ ಆರ್ಸಿಬಿ ಕೂಡ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ. ಮೊದಲಾರ್ಧದ ಕೊನೆಯ ಪಂದ್ಯದಲ್ಲಿ ಆರ್ಸಿಬಿ ತಂಡಕ್ಕೆ ಗೆಲುವು ಅನಿವಾರ್ಯ.
ಆರ್ಸಿಬಿ ಸೋಲಿಗೆ ಆರ್ಸಿಬಿ ಬೌಲರ್ಗಳೇ ಕಾರಣ. ಹಾಗಂತ ಬ್ಯಾಟಿಂಗ್ ಏನು ಫಸ್ಟ್ ಕ್ಲಾಸ್ ಆಗಿದೆ ಅಂತೇನಿಲ್ಲ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳ ಪ್ಲೇಯರ್ಸ್ ಕಳಪೆ ಫಾರ್ಮ್ನಲ್ಲಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಡಿಕೆ ಇಬ್ರನ್ನ ಬಿಟ್ರೆ ಮುಂಬೈ ವಿರುದ್ಧದ ಪಂದ್ಯದಲ್ಲಿ ಕ್ಯಾಪ್ಟನ್ ಡುಪ್ಲೆಸ್ಸಿ ಮತ್ತು ಪಟೀದಾರ್ ಸ್ವಲ್ಪ ಅಬ್ಬರಿಸಿದ್ರು. ಇನ್ನು ಗ್ರೀನ್ ಮತ್ತು ಮ್ಯಾಕ್ಸ್ವೆಲ್ ಅಂತೂ ಟೀಮ್ನಲ್ಲಿ ಇದ್ದೂ ಇಲ್ಲದಂತೆಯೇ ಇದ್ದಾರೆ. ಸಸ್ಟಾರ್ ಬ್ಯಾಟ್ಸ್ಮನ್ ಅಂತಾ ಕರೆಸಿಕೊಳ್ಳೋ ಗ್ಲೆನ್ ಮ್ಯಾಕ್ಸ್ವೆಲ್ ಗಾಯಗೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ಮ್ಯಾಕ್ಸ್ವೆಲ್ ಅವರ ಹೆಬ್ಬೆರಳಿಗೆ ಗಾಯವಾಗಿದ್ದು, ಹೀಗಾಗಿ ಅವರು ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗ್ತಿದೆ. ಮ್ಯಾಕ್ಸಿ ಏನಾದ್ರೂ ಟೀಮ್ನಿಂದ ಹೊರಗೆ ಉಳಿದ್ರೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕ್ಯಾಮರೋನ್ ಗ್ರೀನ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಯಾಕಂದ್ರೆ ಕಳೆದ ಪಂದ್ಯದಲ್ಲಿ ಗ್ರೀನ್ ಬದಲಿಗೆ ವಿಲ್ ಜಾಕ್ಸ್ ಕಣಕ್ಕಿಳಿದಿದ್ದರು. ಇದೀಗ ಮ್ಯಾಕ್ಸ್ವೆಲ್ ಹೊರಗುಳಿದರೆ ಅವರ ಸ್ಥಾನ ತುಂಬಬಲ್ಲ ಸಮರ್ಥ ಆಟಗಾರ ಆರ್ಸಿಬಿ ತಂಡದಲ್ಲಿಲ್ಲ. ಹೀಗಾಗಿ ಔಟ್ ಆಫ್ ಫಾರ್ಮ್ನಲ್ಲಿರುವ ಗ್ರೀನ್ ಅವರನ್ನೇ ಮತ್ತೆ ಕಣಕ್ಕಿಳಿಸಬೇಕಾದ ಅನಿವಾರ್ಯತೆ ಆರ್ಸಿಬಿ ಮುಂದಿದೆ. ಮತ್ತೊಂದೆಡೆ ಮೊಹಮ್ಮದ್ ಸಿರಾಜ್ ಕೂಡ ಆರ್ಸಿಬಿ ಪಾಲಿಗೆ ಬಿಎಂಟಿಸಿಯಲ್ಲಿರೋ ಎಸಿ ಬಸ್ಗಳ ಥರ ಆಗಿದ್ದಾರೆ. ಮೇಂಟೇನೆನ್ಸ್ ಜಾಸ್ತಿ ಆದ್ರೆ ಲಾಭ ಮಾತ್ರ ಕಡಿಮೆ. ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ಗೆ ಸ್ಟ್ರೆಂಥ್ ಮತ್ತು ವೀಕ್ನೆಸ್ ಎರಡೂ ಈ ಮ್ಯಾಕ್ಸ್ವೆಲ್ ಮತ್ತು ಮೊಹಮ್ಮದ್ ಸಿರಾಜ್.. ಕಳೆದ ಆವೃತ್ತಿಯಲ್ಲಿ ಗೇಮ್ ಚೇಂಜಿಂಗ್ ಪರ್ಫಾಮೆನ್ಸ್ ನೀಡಿದ್ದ ಇವರ ಮೇಲೆ, ಈ ಸಲ ಬೆಟ್ಟದಷ್ಟು ನಿರೀಕ್ಷೆಗಳನ್ನೇ ಇಡಲಾಗಿತ್ತು. ಆದ್ರೆ ಆ ನಿರೀಕ್ಷೆಗಳೆಲ್ಲಾ ಹುಸಿಯಾಗಿ ಈ ಇಬ್ಬರು ಆಟಗಾರರೇ ಆರ್ಸಿಬಿ ಪಾಲಿಗೆ ವಿಲನ್ಗಳಾಗಿದ್ದಾರೆ. ಕಳೆದ ಸೀಸನ್ನಲ್ಲಿ ಆಕ್ಷರಶಃ ಆರ್ಸಿಬಿಯ ಆಪದ್ಬಾಂಧವರಾಗಿದ್ದ ಮ್ಯಾಕ್ಸಿ ಈ ಸಲ ಫ್ರಾಡ್ವೆಲ್ ಅಂತಾ ಟ್ರೋಲ್ ಆಗ್ತಿದ್ದಾರೆ. ಆಡಿದ್ದು 6 ಪಂದ್ಯ.. ಮೂರು ಡಕೌಟ್.. ಒಟ್ಟು ರನ್ 32.. ಸೋ ಕಾಲ್ಡ್ ಸ್ಫೋಟಕ ದಾಂಡಿಗ ಮ್ಯಾಕ್ಸಿಯ ಬ್ಯಾಟಿಂಗ್ ಕಥೆ ಇದು. ಗೇಮ್ ಚೇಂಜರ್, ಪವರ್ ಸ್ಟ್ರೈಕರ್ ಎನಿಸಿಕೊಂಡ ಮ್ಯಾಕ್ಸಿಯ ಪವರ್ಲೆಸ್ ಬ್ಯಾಟಿಂಗ್ ಕಥೆ. ಆಡಿರುವ 6 ಇನಿಂಗ್ಸ್ಗಳಿಂದ ಮ್ಯಾಕ್ಸಿ ಕಲೆಹಾಕಿದ್ದು ಕೇವಲ 32 ರನ್ಗಳು ಮಾತ್ರ. ಈ ಆರು ಇನಿಂಗ್ಸ್ಗಳಲ್ಲಿ ಅವರು ಕಲೆಹಾಕಿದ ಗರಿಷ್ಠ ಸ್ಕೋರ್ 28 ರನ್ಗಳು. ಇನ್ನುಳಿದ 5 ಇನಿಂಗ್ಸ್ಗಳಲ್ಲಿ ಕ್ರಮವಾಗಿ 0, 1, 0, 3, 0 ಗೆ ವಿಕೆಟ್ ಒಪ್ಪಿಸಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಮ್ಯಾಕ್ಸಿ ಕ್ರೀಸ್ನಲ್ಲಿ ಉಳಿದಿದ್ದಕ್ಕಿಂತ ಡಕೌಟ್ ಆಗಿ ಡಗೌಟ್ನಲ್ಲಿ ಕೂಲ್ ಡ್ರಿಂಕ್ಸ್ ಕುಡಿದಿದ್ದೇ ಹೆಚ್ಚು.. ಇಷ್ಟಾದ ಮೇಲೂ ನಿರ್ಣಾಯಕ ಪಂದ್ಯಗಳ ವೇಳೆ ಮ್ಯಾಕ್ಸ್ವೆಲ್ ಫಾರ್ಮ್ಗೆ ಮರಳುವ ನಿರೀಕ್ಷೆಯಿತ್ತು. ಆದ್ರೆ ಇಂಥಾ ಟೈಮಲ್ಲೇ ಮ್ಯಾಕ್ಸಿ ಗಾಯಗೊಂಡಿದ್ದಾರೆ. ಇನ್ನು ಬೌಲರ್ ಮೊಹಮ್ಮದ್ ಸಿರಾಜ್ ಬಗ್ಗೆ ಹೇಳಲೇಬೇಕು. ಸಿರಾಜ್ರ ಪವರ್ ಲೆಸ್ ಬೌಲಿಂಗ್ ಅಂತೂ ತಂಡಕ್ಕೆ ಮಾರಕವಾಗಿದೆ. ಪವರ್ ಪ್ಲೇ, ಡೆತ್ ಓವರ್ಗಳಲ್ಲಿ ದಾರಾಳ ರನ್ ನೀಡುವ ಸಿರಾಜ್, ವಿಕೆಟ್ ಬೇಟೆಯಾಡಲು ಇನ್ನಿಲ್ಲದ ಕಸರತ್ತು ನಡೆಸ್ತಿದ್ದಾರೆ. ಎದುರಾಳಿಗಳ ಪಾಲಿನ್ ರನ್ ಮಷಿನ್ ಆಗಿದ್ದಾರೆ. ಐಪಿಎಲ್ ಸೀಸನ್ 17 ಆವೃತ್ತಿಯಲ್ಲಿ 6 ಪಂದ್ಯಗಳಿಂದ 4 ವಿಕೆಟ್ ಉರುಳಿಸಿರುವ ಸಿರಾಜ್, 26 ರನ್ ನೀಡಿ 2 ವಿಕೆಟ್ ತೆಗೆದಿರುವುದು ಬೆಸ್ಟ್ ಪರ್ಫಾಮೆನ್ಸ್ ಆಗಿದೆ. 10.40ರ ಎಕಾನಮಿಯಲ್ಲಿ ರನ್ ನೀಡಿದ್ದಾರೆ. ಇದಿಷ್ಟೇ ಅಲ್ಲ.! ಪ್ರಸಕ್ತ ಆವೃತ್ತಿಯಲ್ಲಿ ಪವರ್ ಪ್ಲೇನಲ್ಲಿ ಗರಿಷ್ಠ 10 ಸಿಕ್ಸರ್ ಬಿಟ್ಟುಕೊಟ್ಟ ಅಪಖ್ಯಾತಿಯೂ ಸಿರಾಜ್ಗೆ ಸೇರುತ್ತೆ. ಸಿರಾಜ್ರ ಈ ದುಬಾರಿ ಸ್ಪೆಲ್, ಆರ್ಸಿಬಿಗೆ ಮಾತ್ರವಲ್ಲ. ಮುಂದಿನ ಟಿ20 ವಿಶ್ವಕಪ್ ದೃಷ್ಟಿಯಿಂದ ಟೀಮ್ ಇಂಡಿಯಾಗೂ ದುಬಾರಿಯಾಗಲಿದೆ.
ಇನ್ನು ಮುಂಬೈ ವಿರುದ್ಧದ ಹೀನಾಯ ಸೋಲಿನ ಬಳಿಕ ಆರ್ಸಿಬಿ ಫ್ಯಾನ್ಸ್ ರೊಚ್ಚಿಗೆದ್ದಿದ್ದಾರೆ. ಬೌಲರ್ಸ್ ಪ್ಲಾಪ್ ಶೋ ಅಂತೂ ಆಕ್ರೋಶಕ್ಕೆ ಕಾರಣವಾಗಿದ್ದು, ಆರ್ಸಿಬಿ ಆಟಗಾರರನ್ನ ಟ್ರೋಲ್ ಮಾಡಲಾಗುತ್ತಿದೆ. ನಮಗೆ ಬ್ಯಾಟಿಂಗ್ ಮಾತ್ರ ಸಾಕು.. ಬೌಲಿಂಗ್ ಬೇಡವೇ ಬೇಡ ಅಂತಿದ್ದಾರೆ. ಪ್ರತೀ ಬಾರಿ ಆರ್ಸಿಬಿ ಮ್ಯಾಚ್ ಇದ್ದಾಗ ಈ ಸಲ ಕಪ್ ನಮ್ದೇ ಅನ್ನೋದಂತೂ ಸಖತ್ ಟ್ರೆಂಡ್ ಆಗುತ್ತೆ. ಆದ್ರೆ ಅಂತ್ಯದಲ್ಲಿ ಆಟಗಾರರ ಫ್ಲಾಫ್ ಶೋ ನಿರಾಸೆ ಉಂಟು ಮಾಡ್ತಿದೆ. ಕನ್ನಡಿಗರನ್ನ ಕೂರಿಸಿ ಬೇರೆ ರಾಜ್ಯದ ಆಟಗಾರರನ್ನ ಆಡಿಸೋದು, ಫಾರಿನ್ ಪ್ಲೇಯರ್ ಮೇಲೆ ಕೋಟಿ-ಕೋಟಿ ಸುರಿಯೋದು ಇದೇ ಆರ್ಸಿಬಿಯ ಹೊಸ ಅಧ್ಯಾಯ ಅಂತಾ ಫ್ಯಾನ್ಸ್ ಕಿಡಿ ಕಾರ್ತಿದ್ದಾರೆ.
ಬ್ಯಾಕ್ ಟು ಬ್ಯಾಕ್ ಸೋತು ಪಾಯಿಂಟ್ಸ್ ಟೇಬಲ್ನಲ್ಲಿ ಕೊನೇ ಸ್ಥಾನದಲ್ಲಿ ಕುಳಿತಿರೋ ಆರ್ಸಿಬಿ ಪ್ಲೇಆಫ್ಗೆ ಹೋಗುತ್ತಾ ಅನ್ನೋದೇ ಡೌಟ್ ಆಗಿದೆ. ಕೋಟ್ಯಾಂತರ ಅಭಿಮಾನಿಗಳು ಆರ್ಸಿಬಿ ಕಪ್ ಗೆಲ್ಲುತ್ತೆ ಅನ್ನೋ ಆಸೆಯನ್ನೇ ಕೈಬಿಟ್ಟಿದ್ದಾರೆ. ಆದ್ರೆ, ಆರ್ಸಿಬಿಯ ಪ್ಲೇಆಫ್ ದಾರಿ ಇನ್ನೂ ಮುಚ್ಚಿಲ್ಲ. ಆದ್ರೆ ದಾರಿ ಮಾಡಿಕೊಳ್ಬೇಕು ಅಷ್ಟೇ.. ಸದ್ಯ 6 ಪಂದ್ಯಗಳನ್ನಾಡಿರುವ ಆರ್ಸಿಬಿ ಕೇವಲ ಒಂದರಲ್ಲಷ್ಟೇ ಗೆದ್ದು ಬೀಗಿದೆ. ಹೀಗಾಗಿ ಮುಂದಿನ ಪ್ರತಿ ಮ್ಯಾಚ್ ಡು ಆರ್ ಡೈ ಆಗಿದೆ. ಮುಂದಿನ 8 ಪಂದ್ಯಗಳ ಪೈಕಿ ಕನಿಷ್ಠ 7ರಲ್ಲಿ ಗೆಲುವಿನ ದಡ ಸೇರಿದ್ರಷ್ಟೇ ಆರ್ಸಿಬಿಯ ಪ್ಲೇ-ಆಫ್ ಕನಸು ಜೀವಂತವಾಗಿರಲಿದೆ. ಒಂದು ಮ್ಯಾಚ್ ಸೋತ್ರೂ ಫ್ಲೇ-ಆಫ್ ಡೋರ್ ಕಂಪ್ಲೀಟ್ ಕ್ಲೋಸ್ ಆಗೋದು ಗ್ಯಾರಂಟಿ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಗೆಲುವೊಂದೇ ಆರ್ಸಿಬಿಯ ಗುರಿ.. ಹಾಗಂತ ಗೆಲುವೊಂದೇ ಟಾರ್ಗೆಟ್ ಅಲ್ಲ.. ಗೆಲುವಿನ ಜೊತೆಗೆ ರನ್ರೇಟ್ ಕಾಯ್ದಕೊಳ್ಳುವುದು ಮೋಸ್ಟ್ ಇಂಪಾರ್ಟೆಂಟ್. ಈಗಾಗಲೇ ಮೈನಸ್ ಹೊಂದಿರುವ ಆರ್ಸಿಬಿ, ಮುಂದಿನ ಪಂದ್ಯಗಳನ್ನ ಭಾರೀ ಅಂತರದಲ್ಲಿ ಗೆಲುವು ಕಾಣಬೇಕಿದೆ. ಆರ್ಸಿಬಿ ಇನ್ನೂ ಲೀಗ್ನ 8 ಪಂದ್ಯಗಳನ್ನ ಆಡಲಿದ್ದು, ಈ ಎಲ್ಲಾ ಪಂದ್ಯಗಳ ಪೈಕಿ ತವರಿನಾಚೆಯ ಪಂದ್ಯಗಳನ್ನ ಗೆಲ್ಲಬೇಕಾದ ಸವಾಲು ಇದೆ. ತವರಿನಲ್ಲಿ ಕೇವಲ ಒಂದು ಮ್ಯಾಚ್ ಗೆದ್ದಿರುವ ಆರ್ಸಿಬಿ, ತವರಿನ ಹೊರಗೆ ಆಡಿರೋ ಮೂರು ಪಂದ್ಯಗಳನ್ನ ಕೈಚೆಲ್ಲಿದೆ. ಹಾಗಂತ ತವರಿನಾಚೆ ಮಾತ್ರವಲ್ಲ. ತವರಿನ ಚಿನ್ನಸ್ವಾಮಿಯಲ್ಲೂ ಆರ್ಸಿಬಿ ಗೆಲ್ಲೋಕೆ ಪರದಾಡುತ್ತಿದೆ. ತವರಿನಲ್ಲಿ ಆಡಿದ 4ರಲ್ಲಿ ಕೇವಲ 1ರಲ್ಲಷ್ಟೇ ಗೆದ್ದಿದೆ. ಹೀಗಾಗಿ ಬೆಂಗಳೂರಲ್ಲಿ ಇಂದಿನ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧದ ಪಂದ್ಯ, ಮುಂಬರುವ ಗುಜರಾತ್ ಟೈಟನ್ಸ್, ಡೆಲ್ಲಿ, ಚೆನ್ನೈ ಎದುರು ಗೆಲ್ಲಲೇಬೇಕು. ಕೊನೆ 3 ಪಂದ್ಯಗಳನ್ನ ಚಿನ್ನಸ್ವಾಮಿಯಲ್ಲೇ ಆಡಲಿರುವ ಆರ್ಸಿಬಿಗೆ, ಈ ಪಂದ್ಯಗಳೇ ಕ್ರೂಶಿಯಲ್ ರೋಲ್ ಪ್ಲೇ ಮಾಡುತ್ತೆ. ಆದ್ರೆ, ಇದಕ್ಕೂ ಹಿಂದಿನ 5 ಪಂದ್ಯಗಳ ಗೆಲುವು ಇಂಪಾರ್ಟೆಟ್ ಆಗಲಿದೆ. ಆರ್ಸಿಬಿಗೆ ಗೆಲುವಿನ ಜೊತೆಗೆ ಲಕ್ ಕೂಡ ಕೈಹಿಡಿಯಬೇಕಿದೆ. 10ನೇ ಸ್ಥಾನದಲ್ಲಿರುವ ಆರ್ಸಿಬಿ 4ನೇ ಸ್ಥಾನಕ್ಕೇರಬೇಕಾದ್ರೆ, ಆರ್ಸಿಬಿ ಮೇಲಿನ ತಂಡಗಳ ಸೋಲು ಕೂಡ ಸಾಥ್ ನೀಡಬೇಕು. ಆ ಸೋಲುಗಳು ಆರ್ಸಿಬಿಗೆ ವರವಾಗಿ ಪರಣಮಿಸಬೇಕು. ಇದೆಲ್ಲವೂ ನಡೆದರಷ್ಟೇ ಆರ್ಸಿಬಿಗೆ ಉಳಿಗಾಲ. ಒಟ್ನಲ್ಲಿ ಸಾಲು ಸಾಲು ಸೋಲು ಕಂಡಿರೊ ಆರ್ಸಿಬಿ, ಪ್ಲೇ-ಆಫ್ಗೇರಲು ಅವಕಾಶವೇನೋ ಇದೆ. ಆಟದ ಜೊತೆ ಅದೃಷ್ಟವೂ ಕೈ ಹಿಡಿಯಬೇಕಿದೆ. ಇಲ್ದಿದ್ರೆ ದೃಶ್ಯ ಸಿನಿಮಾದ ಡೈಲಾಗ್ ಥರ ಈ ವರ್ಷ ಐಪಿಎಲ್ ನಡೆದೇ ಇಲ್ಲ. ನಡೆದ್ರೂ ಆರ್ಸಿಬಿ ಆಡೇ ಇಲ್ಲ ಅಂತಾ ಅಭಿಮಾನಿಗಳು ಹೃದಯನ ಕಲ್ಲು ಮಾಡ್ಕೊಳ್ಬೇಕು. ಮುಂದಿನ ವರ್ಷ ಈ ಸಲ ಕಪ್ ನಮ್ದೇ ಅಂತಾ ಹೇಳೋಕೆ ಸಿದ್ಧರಾಗ್ಬೇಕು.