ರೇಸ್ ​ನಲ್ಲಿ ಮೂವರು.. ತೆಲಂಗಾಣ ಸಿಎಂ ಯಾರು? – ತೆಲಂಗಾಣದಲ್ಲೂ ಡಿಕೆಶಿ ಗೇಮ್ ಪ್ಲ್ಯಾನ್!

ರೇಸ್ ​ನಲ್ಲಿ ಮೂವರು.. ತೆಲಂಗಾಣ ಸಿಎಂ ಯಾರು? – ತೆಲಂಗಾಣದಲ್ಲೂ ಡಿಕೆಶಿ ಗೇಮ್ ಪ್ಲ್ಯಾನ್!

ತೆಲಂಗಾಣದಲ್ಲಿ ಕಾಂಗ್ರೆಸ್​ ಅಕ್ಷರಶ: ಕಮಾಲ್ ಮಾಡಿದೆ. ಕೆಸಿಆರ್​​ ತಲೆಗೆ ಹತ್ತಿದ್ದ ಅಹಂಕಾರವನ್ನ ಕಾಲಿಗೆ ಇಳಿಸಿದೆ. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಕೆಸಿಆರ್​​ರನ್ನ ​ರನ್​ಔಟ್ ಮಾಡಿ ಮನಗೆ ಕಳುಹಿಸಿದೆ. ನಿಜಕ್ಕೂ ಇಷ್ಟು ಬೇಗ ಕೆಸಿಆರ್​​ ಅಧಿಕಾರ ಕಳೆದುಕೊಳ್ತಾರೆ ಅಂತಾ ಯಾರು ಕೂಡ ಅಂದುಕೊಂಡಿರಲಿಲ್ಲ. ಯಾಕಂದ್ರೆ ತೆಲಂಗಾಣವೆಂಬ ರಾಜ್ಯ ರಚನೆಗಾಗಿ ಮುಂಚೂಣಿಯಲ್ಲಿ ನಿಂತು ಹೋರಾಡಿ, ತಮ್ಮ ಕನಸಿನ ರಾಜ್ಯ ನಿರ್ಮಾಣ ಮಾಡಿ ಸಿಎಂ ಪಟ್ಟಕ್ಕೇರಿದ್ದ ಕೆಸಿಆರ್​ ತಮ್ಮ ರಾಜ್ಯವನ್ನ ಆಳಿದ್ದು ಕೇವಲ 9 ವರ್ಷಗಳಷ್ಟೇ. ಅಷ್ಟರಲ್ಲೇ ಕೆಸಿಆರ್​ ಕೈನಿಂದ ಕಾಂಗ್ರೆಸ್ ಅಧಿಕಾರ ಕಸಿದುಕೊಂಡು ಬಿಟ್ಟಿದೆ. ಚಂದ್ರಶೇಖರ್​ ರಾವ್​ಗೆ ನಿಜಕ್ಕೂ ಗರ್ವಭಂಗವಾಗಿದೆ. ತೆಲಂಗಾಣದಲ್ಲಿ ಕಾಂಗ್ರೆಸ್​ ಗೆಲುವಿನ ರಹಸ್ಯವೇನು? ಕಾಂಗ್ರೆಸ್ ಗೆಲುವಿನಲ್ಲಿ ಕರ್ನಾಟಕ ಕಾಂಗ್ರೆಸ್​ನ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಪಾತ್ರವಿದ್ಯಾ? ತೆಲಂಗಾಣದಲ್ಲಿ ಪಕ್ಷವನ್ನ ಈ ಮಟ್ಟಕ್ಕೆ ಕಟ್ಟಿ ಬೆಳೆಸಿದ ಕೈ ಕಲಿ ಯಾರು? ಮುಂದಿನ ಮುಖ್ಯಮಂತ್ರಿ ಯಾರಾಗಬಹುದು? ಹಾಗೆಯೇ ತೆಲಂಗಾಣದಲ್ಲಿ ಬಿಜೆಪಿ ಮತ್ತು ಬಿಆರ್​ಎಸ್​ನ ಭವಿಷ್ಯವೇನು? ಈ ಕುರಿತ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟ ಖೇಲ್ ಖತಂ? – ಲೋಕಸಭೆಯಲ್ಲಿ ಏನಾಗುತ್ತೆ?

2018ರ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 19 ಕ್ಷೇತ್ರಗಳನ್ನ ಗೆದ್ದುಕೊಂಡಿತ್ತು. ಆದ್ರೆ ಈ ಬಾರಿ ಕಾಂಗ್ರೆಸ್ 64 ಸ್ಥಾನಗಳನ್ನ ಗೆದ್ದು ತೆಲಂಗಾಣದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಹೇಗೆ ಕರ್ನಾಟಕದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಪಕ್ಷವನ್ನ ಕಟ್ಟಿ, ಬಿಜೆಪಿಯನ್ನ ಮಣಿಸುವಲ್ಲಿ ಯಶಸ್ವಿಯಾದ್ರೋ ಅದೇ ರೀತಿ ತೆಲಂಗಾಣದಲ್ಲೂ ಒಬ್ಬ ಡಿಕೆ ಶಿವಕುಮಾರ್ ಕಾಂಗ್ರೆಸ್​​​ನ್ನ ಅಧಿಕಾರಕ್ಕೆ ತಂದಿದ್ದಾರೆ. ಕೆಸಿಆರ್ ವಿರುದ್ಧ ಮೀಸೆ ತಿರುಗಿಸಿ ಗೆದ್ದ ತೆಲಂಗಾಣದ ಡಿಕೆ ಶಿವಕುಮಾರ್ ಮತ್ಯಾರೂ ಅಲ್ಲ ಅನುಮುಲ ರೇವಂತ್ ರೆಡ್ಡಿ. ತೆಲಂಗಾಣ ಕಾಂಗ್ರೆಸ್​​ನ ಅಧ್ಯಕ್ಷರಾಗಿದ್ದ ರೇವಂತ್​ ರೆಡ್ಡಿ ​ಅಕ್ಷರಶ: ಕರ್ನಾಟಕದಲ್ಲಿ ಡಿಕೆ ಶಿವಕುಮಾರ್​ ರೋಲ್​ನ್ನೇ ನಿಭಾಯಿಸಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಡಿಕೆಶಿ ಯಾವ ರೀತಿ ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್​ ಆಗಿದ್ರೋ, ಅದೇ ರೀತಿ ರೇವಂತ್​ ರೆಡ್ಡಿ ತೆಲಂಗಾಣ  ಕಾಂಗ್ರೆಸ್​​ ಎದುರಿಸಿದ್ದ ಟ್ರಬಲ್​ಗಳನ್ನ ಶೂಟೌಟ್ ಮಾಡಿದ್ದಾರೆ. ಪ್ರಚಾರದುದ್ದಕ್ಕೂ ರೇವಂತ್​​ ರೆಡ್ಡಿ ಕಾಂಗ್ರೆಸ್​​ನ ಫೇಸ್ ಆಗಿದ್ರು. ಆದ್ರೆ ಹಾದಿ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಯಾಕಂದ್ರೆ ತೆಲಂಗಾಣ ಕಾಂಗ್ರೆಸ್​ನೊಳಗೂ ಸಾಕಷ್ಟು ಭಿನ್ನಮತಗಳಿದ್ವು. ಹಲವು ಬಣಗಳಿದ್ದವು. ಕೆಲ ಸ್ಥಳೀಯ ನಾಯಕರಂತೂ ನಿರಂಕುಶವಾದಿ, ತಮ್ಮ ಬೆಂಬಲಿಗರಿಗಷ್ಟೇ ಮಣೆ ಹಾಕ್ತಾರೆ ಅಂತೆಲ್ಲಾ ರೇವಂತ್ ರೆಡ್ಡಿ ವಿರುದ್ಧ ಹೈಕಮಾಂಡ್​​ಗೆ ದೂರು ನೀಡಿದ್ರು. ಆದ್ರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ರೇವಂತ್ ರೆಡ್ಡಿ ಸಂಪೂರ್ಣವಾಗಿ ತೆಲಂಗಾಣ ಜನತೆಯನ್ನೇ ನಂಬಿಕೊಂಡಿದ್ರು. ರಾಜ್ಯದುದ್ದಕ್ಕೂ ಜನರ ಮಧ್ಯೆ ಓಡಾಡಿದ್ರು. ಪ್ರತಿದಿನ ಕನಿಷ್ಠ ನಾಲ್ಕು ರ್ಯಾಲಿಗಳನ್ನ ನಡೆಸ್ತಿದ್ರು. ಈ ಮೂಲಕ ತಮ್ಮನ್ನ ತಾವು ಸ್ಟೇಟ್ ಲೀಡರ್ ಆಗಿ ಪ್ರಾಜೆಕ್ಟ್ ಮಾಡಿಕೊಂಡ್ರು. ಇದ್ರ ಜೊತೆಗೆ ಹೈಕಮಾಂಡ್​ ಜೊತೆಗೂ ಉತ್ತಮ ಬಾಂಡ್​ ಇಟ್ಟುಕೊಂಡಿದ್ರು. ಅದ್ರಲ್ಲೂ ರಾಹುಲ್​ ಗಾಂಧಿಗೆ ರೇವಂತ್​​ ರೆಡ್ಡಿ ಅತ್ಯಂತ ಆಪ್ತ ವ್ಯಕ್ತಿ.

ರೇವಂತ್ ರೆಡ್ಡಿಯ ಪೊಲಿಟಿಕಲ್ ಜರ್ನಿ ಕೂಡ ತುಂಬಾನೆ ಇಂಟ್ರೆಸ್ಟಿಂಗ್ ಆಗಿದೆ. ರೇವಂತ್ ರಾಜಕೀಯ ಕೆರಿಯರ್ ಆರಂಭವಾಗಿದ್ದೇ ಎಬಿವಿಪಿಯಿಂದ. ಬಳಿಕ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಜಾಯಿನ್ ಆಗ್ತಾರೆ. 2004 ಮತ್ತು 2019ರ ಚುನಾವಣೆಯಲ್ಲಿ ಕೋಡಂಗಲ್​ ಕ್ಷೇತ್ರದಲ್ಲಿ ನಿಂತು ಗೆಲ್ತಾರೆ. ಆದ್ರೆ ಲಂಚ ಹಗರಣದಲ್ಲಿ ತಮ್ಮ ಹೆಸರು ಕೇಳಿ ಬರುತ್ತಲೇ ರೇವಂತ್​ ರೆಡ್ಡಿ ಟಿಡಿಪಿಗೆ ಗುಡ್​ಬೈ ಹೇಳಿ 2017ಕ್ಕೆ ಕಾಂಗ್ರೆಸ್​ನ್ನ ಸೇರ್ತಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕೋಡಂಗಲ್​​ನಲ್ಲಿ ಬಿಆರ್​​ಎಸ್ ಅಭ್ಯರ್ಥಿ ಮುಂದೆ ರೇವಂತ್​ ರೆಡ್ಡಿ ಸೋಲ್ತಾರೆ. ಆದ್ರೆ 2019ರ ಲೋಕಸಭಾ ಚುನಾವಣೆಯಲ್ಲಿ ಮಲ್ಕಜ್​ಗಿರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ತಾರೆ.

ತೆಲಂಗಾಣದಲ್ಲಿ ರೇವಂತ್​ ರೆಡ್ಡಿ ಇಷ್ಟೊಂದು ಪ್ರಭಾವಿಯಾಗಿ ಬೆಳೆಯೋಕೆ ಇನ್ನೊಂದು ಪ್ರಮುಖ ಕಾರಣ ಇದೆ. ಮುಖ್ಯಂತ್ರಿಯಾಗಿದ್ದ ಕೆಸಿಆರ್​​ರನ್ನ ರೇವಂತ್​ ರೆಡ್ಡಿ ನೇರಾನೇರ ಎದುರು ಹಾಕಿಕೊಂಡಿದ್ರು. ಕಳೆದ ಕೆಲ ವರ್ಷಗಳಿಂದ ಕೆಸಿಆರ್​ VS ರೇವಂತ್ ರೆಡ್ಡಿ ಅನ್ನೋದೆ ತೆಲಂಗಾಣ ರಾಜಕೀಯದ ಹೆಡ್​​ಲೈನ್ ಆಗಿತ್ತು. ಪ್ರತಿ ಬಾರಿಯೂ ಮಾಧ್ಯಮಗಳ ಬಳಿ ಮಾತನಾಡೋವಾಗ ರೇವಂತ್​ ರೆಡ್ಡಿ ಕೆಸಿಆರ್​ ಕುಟುಂಬದ ವಿರುದ್ಧ ಹರಿಹಾಯ್ತಿದ್ರು. ಬಿಆರ್​ಎಸ್​ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಡ್ತಿದ್ರು. ಸ್ಟ್ರೀಟ್ ಪ್ರೊಟೆಸ್ಟ್ ಮತ್ತು ಸಾರ್ವಜನಿಕ ರ್ಯಾಲಿಗಳನ್ನ ಮಾಡೋದ್ರಲ್ಲಿ ರೆಡ್ಡಿಯದ್ದು ಎತ್ತಿದ ಕೈ. ಇಲ್ಲಿ ಡಿಕೆ ಶಿವಕುಮಾರ್​ ಬಿಜೆಪಿ ವಿರುದ್ಧ ಯಾವ ಕ್ಯಾಂಪೇನ್​ಗಳನ್ನ ಮಾಡಿದ್ರೋ ಸೇಮ್ ಟು ಸೇಮ್​ ತೆಲಂಗಾಣದಲ್ಲಿ ರೇವಂತ್​​ ರೆಡ್ಡಿ ಕೆಸಿಆರ್​​ ಕೋಟೆಯೊಳಗೆ ನುಗ್ತಾ ಇದ್ರು. ಏಕಾಂಗಿಯಾಗಿ ಕೆಸಿಆರ್​ ಫ್ಯಾಮಿಲಿಯನ್ನ ಎದುರು ಹಾಕಿಕೊಂಡ ರೀತಿಯನ್ನ ನೋಡಿ, ಪಕ್ಷವನ್ನ ಅಧಿಕಾರಕ್ಕೆ ತರೋಕೆ ಸರಿಯಾದ ವ್ಯಕ್ತಿ ಅಂತಾ ಗುರುತಿಸಿ ಹೈಕಮಾಂಡ್ 2021ರಲ್ಲಿ ರೇವಂತ್​ ರೆಡ್ಡಿಯನ್ನ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಮಾಡುತ್ತೆ. ಇದೀಗ ಕಾಂಗ್ರೆಸ್​ ಚುನಾವಣೆಯನ್ನ ಗೆದ್ರೂ ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋ ಪ್ರಶ್ನೆ ಈಗಲೂ ಇದೆ. ರೇವಂತ್​ ರೆಡ್ಡಿಯೇ ಸಿಎಂ ಪೋಸ್ಟ್​​ ಫೇವರೇಟ್ ಆದ್ರೂ ಕೂಡ, ಮುಖ್ಯಮಂತ್ರಿ ರೇಸ್​ನಲ್ಲಿ ಇನ್ನೂ ಇಬ್ಬರಿದ್ದಾರೆ. ಭಟ್ಟಿ ವಿಕ್ರಮಾರ್ಕ ಮಲ್ಲು ಮತ್ತು ಉತ್ತಮ್ ಕುಮಾರ್ ರೆಡ್ಡಿ. ಈ ಪೈಕಿ ವಿಕ್ರಮಾರ್ಕ ಮಲ್ಲು ಕೂಡ ಕೆಸಿಆರ್​ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡಿದ್ರು. ತೆಲಂಗಾಣದಾದ್ಯಂತ 1,400 ಕಿಲೋ ಮೀಟರ್​ ಪಾದಯಾತ್ರೆ ನಡೆಸಿದ್ರು. ಮತ್ತೊಂದೆಡೆ 2021ರವರೆಗೆ ಉತ್ತಮ್ ರೆಡ್ಡಿ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷರಾಗಿದ್ರು. ಉತ್ತಮ್ ರೆಡ್ಡಿ ಮತ್ತು ವಿಕ್ರಮಾರ್ಕ ಮಲ್ಲುಗೆ ರೇವಂತ್​ ರೆಡ್ಡಿ ಅಂದ್ರೆ ಅಷ್ಟಕ್ಕಷ್ಟೇ. ಒಳಗಿಂದೊಳಗೆ ಇವರಿಬ್ಬರ ಬಣವನ್ನ ಕೂಡ ರೇವಂತ್​ ರೆಡ್ಡಿ ಎದುರಿಸಬೇಕಿತ್ತು. ಹೀಗಾಗಿ ಕಾಂಗ್ರೆಸ್​​ ಹೈಕಮಾಂಡ್​​ಗೆ ತೆಲಂಗಾಣದಲ್ಲಿ ಸಿಎಂ ಆಯ್ಕೆಯೂ ಒಂದು ದೊಡ್ಡ ಸವಾಲಾಗಿದೆ. ಆದ್ರೂ ರೇವಂತ್​ ರೆಡ್ಡಿಗೆ ಪಟ್ಟ ಕಟ್ಟುವ ಸಾಧ್ಯತೆ ಹೆಚ್ಚಿದ್ದು, ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

ತೆಲಂಗಾಣದಲ್ಲೂ ಡಿಕೆಶಿ ಗೇಮ್ ಪ್ಲ್ಯಾನ್!

ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅಂತೂ ರಿಸಲ್ಟ್​ಗೂ ಮುನ್ನವೇ ತೆಲಂಗಾಣದಲ್ಲಿ ಬೀಡುಬಿಟ್ಟಿದ್ರು. ತೆಲಂಗಾಣ ಕಾಂಗ್ರೆಸ್​ ಎಂಎಲ್​​ಎಗಳ ರಕ್ಷಣೆಗಾಗಿಯೇ ಡಿಕೆಶಿ ತೆಲಂಗಾಣಕ್ಕೆ ತೆರಳಿದ್ರು. ಯಾಕಂದ್ರೆ ಕೆಸಿಆರ್ ಕಾಂಗ್ರೆಸ್​​ ಎಂಎಲ್​ಎಗಳನ್ನ ಎಲ್ಲಿ ಸೆಳೀತಾರೋ ಅನ್ನೋ ಆತಂಕ ಕಾಂಗ್ರೆಸ್​ಗೂ ಇತ್ತು. ಡಿಕೆ ಶಿವಕುಮಾರ್ ಅಂತೂ ನೇರವಾಗಿಯೇ ಕೆಸಿಆರ್​ ವಿರುದ್ಧ ಆರೋಪಿಸಿದ್ದಾರೆ. ಕಾಂಗ್ರೆಸ್​​ ಶಾಸಕರನ್ನ ಸಂಪರ್ಕಿಸೋಕೆ ಕೆಸಿಆರ್​ ಯತ್ನಿಸ್ತಿದ್ದಾರೆ ಅಂತಾ ಹೇಳಿದ್ರು. ಇನ್ನು ಚುನಾವಣೆ ರಿಸಲ್ಟ್ ಬಂದ ಬಳಿಕವೂ ರೇವಂತ್​ ರೆಡ್ಡಿಗೆ ಮೊದಲು ಸ್ವೀಟ್ ತಿನ್ನಿಸಿದ್ದೇ ಡಿಕೆ ಶಿವಕುಮಾರ್. ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿಗಾಗಿ ತೆರೆಮರೆಯಲ್ಲಿ ನಿಂತು ಡಿಕೆಶಿ ಕೆಲಸ ಮಾಡಿದ್ದಾರೆ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ಹೆಣೆದ ತಂತ್ರವನ್ನೇ ಕೆಸಿಆರ್​​ ಕೆಡವೋಕೂ ಕಾಂಗ್ರೆಸ್ ಪ್ಲ್ಯಾನ್ ಮಾಡಿತ್ತು.

ಇನ್ನು ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿನ ಹಿಂದೆ ಚುನಾವಣಾ ಚಾಣಕ್ಯರೊಬ್ಬರು ಕೂಡ ಕೆಲಸ ಮಾಡಿದ್ದಾರೆ. ಸುನಿಲ್ ಕನುಗೋಲು. ಈ ಹಿಂದೆ ಕರ್ನಾಟಕ, ತಮಿಳುನಾಡು ಚುನಾವಣೆಯಲ್ಲೂ ಸುನಿಲ್ ಕನುಗೋಲು ಗ್ರೌಂಡ್ ವರ್ಕ್​ ಮಾಡಿ, ಸರ್ವೆ ನಡೆಸಿ ಕಾಂಗ್ರೆಸ್​ ಮತ್ತು ಡಿಎಂಕೆ ಪರ ಸ್ಟ್ರ್ಯಾಟಜಿ ಮಾಡಿದ್ರು. ಕರ್ನಾಟಕ, ತಮಿಳುನಾಡು ರೀತಿ ತೆಲಂಗಾಣದಲ್ಲೂ ಕನುಗೋಲುಗೆ ಫ್ರೀಹ್ಯಾಂಡ್ ನೀಡಲಾಗಿತ್ತು. ಸುನಿಲ್​ ಸೂಚಿಸಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿತ್ತು. ಆದ್ರೆ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಸುನಿಲ್ ಸ್ಟ್ರ್ಯಾಟಜಿ ವರ್ಕೌಟ್ ಆಗಿಲ್ಲ. ಅದಕ್ಕೆ ಇನ್ನೊಂದು ಕಾರಣ ಕೂಡ ಇದೆ. ತೆಲಂಗಾಣದಲ್ಲಿ ಸಿಕ್ಕ ಫ್ರೀಹ್ಯಾಂಡ್ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಸುನಿಲ್ ಕನುಗೋಲುಗೆ ಸಿಕ್ಕಿಲ್ಲ. ಸುನಿಲ್​ & ಟೀಂ ನಡೆಸಿದ್ದ ಸರ್ವೆಯನ್ನ ಮಧ್ಯಪ್ರದೇಶದಲ್ಲಿ ಕಮಲ್​ನಾಥ್ ಒಪ್ಪಿಕೊಂಡಿರಲಿಲ್ಲ. ಅತ್ತ ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಸಹಮತ ವ್ಯಕ್ತಪಡಿಸಿರಲಿಲ್ಲ. ಕಮಲ್​ನಾಥ್, ಗೆಹ್ಲೋಟ್ ಸ್ವಪ್ರತಿಷ್ಠೆಯ ಪರಿಣಾಮ ಏನಾಯ್ತು ಅನ್ನೋದು ರಿಸಲ್ಟ್​​​ನಲ್ಲೇ ಗೊತ್ತಾಗಿದೆ. ಮುಂದಿನ ಚುನಾವಣೆ ವೇಳೆಗಾದ್ರೂ ಸುನಿಲ್ ಕನುಗೋಲು ಸಲಹೆಯನ್ನ ಕಾಂಗ್ರೆಸ್​​ ಇನ್ನಷ್ಟು ಗಂಭೀರವಾಗಿ ಪರಿಗಣಿಸಬಹುದೋ ಏನೋ.

ಇನ್ನು ತೆಲಂಗಾಣದಲ್ಲಿ ಕೆಸಿಆರ್​ರದ್ದಂತೂ ದುರಂತ ಕಥೆಯಾಗಿಬಿಟ್ಟಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ತೆಲಂಗಾಣ ರಾಜ್ಯ ರಚನೆಯಾಗಿತ್ತು. ಆದ್ರೀಗ ರಾಜ್ಯ ರಚಿಸಿಕೊಟ್ಟ ಅದೇ ಕಾಂಗ್ರೆಸ್​ಗೆ ಕೆಸಿಆರ್​ ತಮ್ಮ ಕನಸಿನ ರಾಜ್ಯವನ್ನೇ ಬಿಟ್ಟು ಕೊಟ್ಟಿದ್ದಾರೆ. ತಮ್ಮನ್ನ ಸೋಲಿಸೋಕೆ ಸಾಧ್ಯವೇ ಇಲ್ಲ ಅನ್ನೋ ಓವರ್​ಕಾನ್ಫಿಡೆನ್ಸ್​ ಕೆಸಿಆರ್​ಗೆ ಕೊಡಲಿಯೇಟು ಕೊಟ್ಟಿರೋದಂತೂ ಸತ್ಯ. ಕೆಸಿಆರ್​ರದ್ದು ಒಂಥರಾ ಚಂದ್ರಬಾಬು ನಾಯ್ಡು ಕಥೆಯಂತಾಗಿದೆ. 2019ರ ಲೋಕಸಭೆ ಚುನಾವಣೆ ವೇಳೆ ಆಂಧ್ರ ಸಿಎಂ ಆಗಿದ್ದ ಚಂದ್ರಬಾಬು ನಾಯ್ಡು ಅವರು ಮೋದಿ ಸರ್ಕಾರವನ್ನ ಉರುಳಿಸಿದ ದೇಶಾದ್ಯಂತ ಓಡಾಡಿದ್ರು. ಸ್ಥಳೀಯ ಪಕ್ಷಗಳನ್ನೆಲ್ಲಾ ಒಂದುಗೂಡಿಸಿ ಘಟಬಂಧನ್​ ಕಟ್ಟೋಕೆ ಮುಂದಾಗಿದ್ರು. ಈ ಭರದಲ್ಲಿ ತಮ್ಮ ರಾಜ್ಯದಲ್ಲಿ ನಡೆಯಲಿದ್ದ ವಿಧಾನಸಭೆ ಚುನಾವಣಾ ತಯಾರಿಯನ್ನೇ ಸೈಡ್​​ಲೈನ್​ ಮಾಡಿದ್ರು. ಅತ್ತ ಮೋದಿಯನ್ನೋ ಸೋಲಿಸೋಕೆ ಆಗಿಲ್ಲ, ಇತ್ತ ಅಧಿಕಾರವನ್ನ ಕೂಡ ಉಳಿಸಿಕೊಳ್ಳೋಕೆ ಆಗಿಲ್ಲ. ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಜಗನ್​ಮೋಹನ್ ಮುಂದೆ ಸೋತು ಸುಣ್ಣವಾದ್ರು. ಈಗ ಮತ್ತೊಮ್ಮೆ ಘಟಬಂಧನ್ ಸಹವಾಸ ಬೇಡ ಅಂತಾ ಸುಮ್ಮನಾಗಿದ್ದಾರೆ. ಇಲ್ಲಿ ಕೆಸಿಆರ್​ ಕೂಡ ಅಷ್ಟೇ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೋದಿ ವಿರುದ್ಧ ತೊಡೆ ತಟ್ಟೋಕೆ ಭರದ ತಯಾರಿ ನಡೆಸ್ತಿದ್ರು. ಇದಕ್ಕಾಗಿ ತಮ್ಮ ಪಕ್ಷದ ಹೆಸರನ್ನೇ ಬದಲಾಯಿಸಿ, ಬಿಆರ್​ಎಸ್​ ಅಂತಾ ಮಾಡಿಕೊಂಡು ರಾಷ್ಟ್ರೀಯ ಪಕ್ಷವನ್ನಾಗಿಸಿದ್ರು. ರಾಷ್ಟ್ರೀಯ ಪಕ್ಷ ಮಾಡಿಕೊಂಡ್ರೆ ಏನಂತೆ..ರಾಜ್ಯವನ್ನೇ ಉಳಿಸೋಕೆ ಆಗಿಲ್ಲ. ಇನ್ನು ದೇಶ ಗೆಲ್ಲೋಕೆ ಕೆಸಿಆರ್​ಗೆ ಸಾಧ್ಯಾನಾ? ಕಾಲಿನ ಮೇಲೆ ಚಪ್ಪಡಿ ಹಾಕಿಕೊಳ್ಳೋದು ಅಂದ್ರೆ ಇದೇ. ಕೆಸಿಆರ್​​ ಇನ್ನೂ ಎಚ್ಚೆತ್ತುಕೊಳ್ಳದೇ ಇದ್ದಲ್ಲಿ, ಮತ್ತೆ ಜನಸಾಮಾನ್ಯರ ಬಳಿಗೆ ಹೋಗದೆ ಇದ್ದಲ್ಲಿ ಮುಂದಿನ ಚುನಾವಣೆ ವೇಳೆಗೆ ಬಿಜೆಪಿ ಕೈಯಿಂದಲೂ ಹೊಡೆತ ತಿನ್ನೋದು ಗ್ಯಾರಂಟಿ. ಯಾಕಂದ್ರೆ ತೆಲಂಗಾಣದಲ್ಲಿ ಪ್ರಭಾವಿಯಾಗಿ ಬೆಳೆಯೋ ಮುನ್ಸೂಚನೆಯನ್ನ ಬಿಜೆಪಿ ಈ ಬಾರಿಯ ಎಲೆಕ್ಷನ್​ನಲ್ಲೇ ಕೊಟ್ಟಿದೆ. 2018ರ ಚುನಾವಣೆಯಲ್ಲಿ 1 ಸ್ಥಾನವನ್ನಷ್ಟೇ ಗಳಿಸಿದ್ದ ಬಿಜೆಪಿ ಈ ಬಾರಿ ತೆಲಂಗಾಣದ 8 ಕ್ಷೇತ್ರಗಳಲ್ಲಿ ಕಮಲ ಅರಳಿಸಿದೆ. ಹೀಗಾಗಿ ಹೆಸರಿಗೆ ರಾಷ್ಟ್ರೀಯ ಪಕ್ಷವಾಗಿರೋ ಬಿಆರ್​ಎಸ್​​ಗೆ ಎರಡು ಅಸಲಿ ರಾಷ್ಟ್ರೀಯ ಪಕ್ಷಗಳೇ ಸೆಡ್ಡು ಹೊಡೆಯುತ್ತಿವೆ. ಕೆಸಿಆರ್​​ ಪಾಲಿಗೆ ಮುಂದಿನ 5 ವರ್ಷಗಳ ಹೋರಾಟ ಅಕ್ಷರಶ: ಅಳಿವು-ಉಳಿವಿನ ಪ್ರಶ್ನೆಯಾಗೋದ್ರಲ್ಲಿ ಅನುಮಾನವೇ ಇಲ್ಲ. ಇದು ಸದ್ಯದ ತೆಲಂಗಾಣ ರಾಜಕೀಯದ ಕುರಿತ ಕಹಾನಿ..

Shwetha M