ಟಾಟಾ ಸಾಮ್ರಾಜ್ಯ ಮುನ್ನಡೆಸೋದ್ಯಾರು? – ನಾಲ್ವರ ನಡುವೆ ಉತ್ತರಾಧಿಕಾರಿ ರೇಸ್
$3,800 ಕೋಟಿ ಯಾರಾ ಪಾಲಾಗುತ್ತೆ?

ಟಾಟಾ ಸಾಮ್ರಾಜ್ಯ ಮುನ್ನಡೆಸೋದ್ಯಾರು? – ನಾಲ್ವರ ನಡುವೆ ಉತ್ತರಾಧಿಕಾರಿ ರೇಸ್$3,800 ಕೋಟಿ ಯಾರಾ ಪಾಲಾಗುತ್ತೆ?

ಆಡು ಮುಟ್ಟದ ಗಿಡ ಇಲ್ಲ ಅನ್ನೋ ಹಾಗೇ ಉದ್ಯಮದಲ್ಲಿ ರತನ್ ಟಾಟಾ ಮಾಡದ ಕೆಲಸವೇ ಇರ್ಲಿಲ್ಲ. ಅಡುಗೆ ಮನೆಯ ಉಪ್ಪಿನಿಂದ ಹಿಡಿದು ಆಕಾಶದೆತ್ತರದಲ್ಲಿ ಹಾರುವ ಉಕ್ಕಿನಲ್ಲೂ ಟಾಟಾ ಹೆಸರಿತ್ತು. ಶ್ರಮಿಕನ ಮನೆ ಮುಂದಿನ ಪುಟ್ಟ ನ್ಯಾನೋ ಕಾರಿನಿಂದ ಹಿಡಿದು ಸಾಫ್ಟ್​ವೇರ್​ನಲ್ಲೂ ರತನ್ ರಾರಾಜಿಸುತ್ತಿದ್ರು. ಕಾಲಿಟ್ಟಲ್ಲೆಲ್ಲಾ  ಬಂಗಾರವನ್ನೇ ಬೆಳೆಯುತ್ತಿದ್ದ ರತನ್ ಟಾಟಾ ಬರೀ ಕೈಗಾರಿಕೋದ್ಯಮಿ ಮಾತ್ರ ಆಗಿರಲಿಲ್ಲ. ನೈತಿಕತೆ, ವಿಶ್ವಾಸಾರ್ಹತೆ ಜೊತೆ ಜೊತೆಗೆ ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದ ಒಂದು ಪರಿಶುದ್ಧ ವ್ಯಕ್ತಿತ್ವ ಹೊಂದಿದ್ರು. ಸರಳತೆಯ ಸಾಕಾರಮೂರ್ತಿಯಂತೆ ಬದುಕಿದ ಟಾಟಾ ಸಾವಿರಾರು ಕೋಟಿಯ ಒಡೆಯನೂ ಹೌದು. ಆದ್ರೆ ಇರೋ ಇರೋ ಪ್ರಶ್ನೆ ಅಂದ್ರೆ ರತನ್ ಟಾಟಾರ ಬಹುಕೋಟಿ ಸಾಮ್ರಾಜ್ಯದ ಒಡೆಯ ಯಾರು? ಟಾಟಾ ಗ್ರೂಪ್​ಗಳನ್ನ ಮುನ್ನಡೆಸೋದು ಯಾರು? ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ ರತನ್ ಉತ್ತರಾಧಿಕಾರಿ ಯಾರು ಅನ್ನೋದು. ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ – ಅ. 14 ರಂದು ದರ್ಶನ್,  ಪವಿತ್ರಾ ಗೌಡ ಜಾಮೀನು ಭವಿಷ್ಯ ನಿರ್ಧಾರ!

ಭಾರತದಲ್ಲಿ ಟಾಟಾ ಬ್ರ್ಯಾಂಡ್ ಅಂದ್ರೇನೇ ಅದೊಂದು ನಂಬಿಕೆ. ಅದೊಂದು ವಿಶ್ವಾಸ. ಬೇರೆ ಯಾವ ಕಂಪನಿಗೂ ಸಿಗದಂಥ ಗೌರತ ಟಾಟಾ ಗ್ರೂಪ್​ಗಿದೆ. ಸಾಮಾನ್ಯ ಮತ್ತು ಮಧ್ಯಮವರ್ಗದ ಜನ್ರ ದೊಡ್ಡ ದೊಡ್ಡ ಕನಸುಗಳನ್ನ ನನಸು ಮಾಡಿದ ಹೆಗ್ಗಳಿಕೆ ರತನ್ ಟಾಟಾರಿಗೆ ಸಲ್ಲಬೇಕು. ಜಗತ್ತಿನೆಲ್ಲೆಡೆ ಟಾಟಾ ಗ್ರೂಪ್‌ ಅನ್ನು ಮಿಲಿಯನೇರ್​ಗಳೇ ನಿಬ್ಬೆರಗಾಗುವಂತೆ ಬೆಳೆಸಿದ ರತನ್‌ ಟಾಟಾ ಇನ್ನಿಲ್ಲ ಅನ್ನೋ ಸುದ್ದಿಯೇ ಭಾರತಕ್ಕೆ ಬಹುದೊಡ್ಡ ನಷ್ಟ. ಯಾರೂ ತುಂಬಲಾಗದ ನಷ್ಟ. ಜಗತ್ತಿಗೆ ಟಾಟಾ ನ್ಯಾನೋ ಎಂಬ ಅಗ್ಗದ ಕಾರು ನೀಡಿದ ಖ್ಯಾತಿ ರತನ್‌ ಟಾಟಾ ಅವರದ್ದು. ಅಷ್ಟೇ ಯಾಕೆ ಟಾಟಾ ಮೋಟಾರ್ಸ್‌ ಕಂಪನಿಯು ದುಬಾರಿ ಕಾರುಗಳ ಮಾರುಕಟ್ಟೆಯಲ್ಲೂ ಸಾಕಷ್ಟು ಸಾಧನೆ ಮಾಡಿದೆ. ರೇಂಜ್‌ ರೋವರ್‌ ಮತ್ತು ಜಾಗ್ವಾರ್‌ ಎಫ್‌ ಮಾದರಿಯ ಕಾರುಗಳನ್ನು ನೀಡಿದ್ದ ಜಾಗ್ವಾರ್‌ ಲ್ಯಾಂಡ್‌ರೋವರ್‌ ಅನ್ನು ಟಾಟಾ ಮೋಟಾರ್ಸ್‌ ಸ್ವಾಧೀನಪಡಿಸಿಕೊಂಡದ್ದು ಈಗ ಇತಿಹಾಸ.

3,800 ಕೋಟಿ ಮೌಲ್ಯದ ಆಸ್ತಿಯ ವಾರಸುದಾರ ಯಾರು?

ಅಡುಗೆ ಮನೆ ಉಪ್ಪಿನಿಂದ ಹಿಡಿದು ಹಡಗು ನಿರ್ಮಾಣ ಕಂಪನಿವರೆಗೆ ಎಲ್ಲಾ ಕ್ಷೇತ್ರದಲ್ಲಿಯೂ ಟಾಟಾ ಕಂಪನಿ ಪಾಲಿದೆ. ಟಾಟಾ ಬಿಸಿನೆಸ್ ಜಾಗ್ವಾರ್ ಲ್ಯಾಂಡ್ ರೋವರ್, ಏರ್ ಇಂಡಿಯಾ, ಟಿಸಿಎಸ್, ಟಾಟಾ ಮೋಟಾರ್ಸ್, ಟಾಟಾ ಸಾಲ್ಟ್, ಟಾಟಾ ಟೀ, ಟಾಟಾ ಪ್ಲೇ, ಟೈಟಾನ್, ಸ್ಟಾರ್‌ಬಕ್ಸ್, ವೋಲ್ಟಾಸ್, ಟಾಟಾ ಒನ್‌ಎಂಜಿ, ಟಾಟಾ ಕ್ಯಾಪಿಟಲ್, ಟಾಟಾ ಎಐಜಿ, ಟಾಟಾ ಎಐಎ ಲೈಫ್, ಜರಾ, ಫಾಸ್ಟ್ರ್ಯಾಕ್, ತನಿಷ್ಕ್, ಕಲ್ಟ್‌ಫಿಟ್ ಅನೇಕ ವೆಸ್ಟ್‌ಸೈಡ್‌ನಂತಹ ಬ್ರ್ಯಾಂಡ್‌ಗಳು ಟಾಟಾ ಕೊಡುಗೆಯೇ ಆಗಿದೆ. ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ರ ಪ್ರಕಾರ, ರತನ್ ಟಾಟಾ ಅವರು 3,800 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಆದ್ರೆ ಈಗ ಬಹುಕೋಟಿ ಭಾರತೀಯರನ್ನ ಕಾಡ್ತಿರೋ ಪ್ರಶ್ನೆ ಅಂದ್ರೆ ಈ ಟಾಟಾ ಸಾಮ್ರಾಜ್ಯದ ಉತ್ತರಾಧಿಕಾರಿ ಯಾರು ಅನ್ನೋದು.

ಟಾಟಾ ಗ್ರೂಪ್ ಮುನ್ನಡೆಸ್ತಾರಾ ಮನ ಸಹೋದರನ ಪುತ್ರಿ?

ಟಾಟಾ ಗ್ರೂಪ್​ನ ವಾರಸುದಾರ ಯಾರು ಅನ್ನೋ ಪ್ರಶ್ನೆಗೆ ಈಗ ಕೇಳಿ ಬರ್ತಿರೋ ಹೆಸ್ರೇ ಮಾಯಾ ಟಾಟಾ. 34 ವರ್ಷದ ಮಾಯಾ ಟಾಟಾ ದೇಶದ ಅತಿದೊಡ್ಡ ವ್ಯಾಪಾರ ಸಾಮ್ರಾಜ್ಯವಾದ ಟಾಟಾ ಗ್ರೂಪ್ ಅನ್ನು ಮುನ್ನಡೆಸಲಿದ್ದಾರೆ ಎನ್ನಲಾಗಿದೆ. ಮಾಯಾ ಟಾಟಾ ಸಂಬಂಧದಲ್ಲಿ ರತನ್ ಟಾಟಾ ಅವರ ಮಲ ಸಹೋದರನ ಪುತ್ರಿ. ಮಾಯಾ ಟಾಟಾ, ನೋಯೆಲ್ ಟಾಟಾ ಮತ್ತು ಆಲೂ ಮಿಸ್ತ್ರಿ ದಂಪತಿಯ ಪುತ್ರಿ. ಈಗಾಗ್ಲೇ ಮಾಯಾ ಟಾಟಾ ಚಿಕ್ಕ ವಯಸ್ಸಿನಲ್ಲಿಯೇ ಟಾಟಾ ಸಮೂಹದ ಹಲವು ಪ್ರಮುಖ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ.  ಟಾಟಾ ಹೊಸ ಅಪ್ಲಿಕೇಶನ್ ಅನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಟಾಟಾ ಡಿಜಿಟಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಯಾ ಟಾಟಾ ಹೊಸ ಅಪ್ಲಿಕೇಶನ್ ಅನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ಭವಿಷ್ಯದಲ್ಲಿ ಮಾಯಾ ಟಾಟಾ ಅವರೇ ಟಾಟಾ ಸಾಮ್ರಾಜ್ಯದ ಉತ್ತರಾಧಿಕಾರಿ ಎನ್ನಲಾಗುತ್ತಿದೆ. ಮಾಯಾ ಟಾಟಾ ಜೊತೆಗೆ ಅವರ ಸಹೋದರ ಮತ್ತು ಸಹೋದರಿಯಾದ ನೆವಿಲ್ಲೆ ಟಾಟಾ ಮತ್ತು ಲಿಯಾ ಟಾಟಾ  ಕೂಡಾ ನೋಡಿಕೊಳ್ಳಲಿದ್ದಾರೆ.

ಉತ್ತರಾಧಿಕಾರಿ ರೇಸ್ ನಲ್ಲಿ ನೋಯೆಲ್ ಟಾಟಾ ಪ್ರಬಲ ಸ್ಪರ್ಧಿ! 

ಟಾಟಾ ಸಮೂಹದ ಸಂಭಾವ್ಯ ಉತ್ತರಾಧಿಕಾರಿಗಳ ಸಾಲಿನಲ್ಲಿ ನೋಯೆಲ್ ಟಾಟಾ ಪ್ರಬಲ ಸ್ಪರ್ಧಿಯಾಗಿದ್ದಾರೆ. ರತನ್ ಟಾಟಾ ಅವರ ತಂದೆ ನೇವಲ್ ಟಾಟಾ ಅವರ ಎರಡನೇ ಪತ್ನಿ ಸಿಮೋನ್ ಅವರಿಗೆ ಜನಿಸಿದ ನೋಯೆಲ್ ಟಾಟಾ ಅವರು, ರತನ್ ಟಾಟಾ ಅವರ ಮಲಸಹೋದರರಾಗಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಇವರ ಮಕ್ಕಳ ಹೆಸರು ಕೂಡ ಕೇಳಿಬರುತ್ತಿದೆ. 39 ವರ್ಷ ವಯಸ್ಸಿನ ನೋಯೆಲ್ ಟಾಟಾ ಅವರ ಹಿರಿಯ ಪುತ್ರಿಯಾಗಿರುವ ಲಿಯಾ ಟಾಟಾ ಅವರು ಸ್ಪೇನ್‌ನ ಮ್ಯಾಡ್ರಿಡ್‌ನ ಐಇ ಬಿಸಿನೆಸ್ ಸ್ಕೂಲ್‌ನಿಂದ ಮಾರ್ಕೆಟಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ಧಾರೆ. ಟಾಟಾ ಸಮೂಹದ ತಾಜ್ ಹೋಟೆಲ್‌ ಮತ್ತು ರೆಸಾರ್ಟ್‌ ಹಾಗೂ ಅರಮನೆಗಳನ್ನು ನೋಡಿಕೊಳ್ಳುತ್ತಾ, ಹೋಟಲ್ ಉದ್ಯಮದಲ್ಲಿ ತನ್ನ ಹೆಜ್ಜೆಗುರುತನ್ನು ಮೂಡಿಸಿದ್ಧಾರೆ. ಇವರು ರತನ್ ಟಾಟಾ ಅವರ ಉತ್ತರಾಧಿಕಾರಿ ಸಾಲಿನಲ್ಲಿ ಕೇಳಿ ಬರುತ್ತಿರುವ ಪ್ರಮುಖ ಹೆಸರಾಗಿದೆ.

ರತನ್ ಟಾಟಾ ಅವಿವಾಹಿತರಾಗಿದ್ದರಿಂದಲೇ ಉತ್ತರಾಧಿಕಾರಿ ಗೊಂದಲ!

ಹೌದು. ಈವರೆಗೂ ಟಾಟಾ ಸಮೂಹದ ಒಡೆತನ ಕುಟುಂಬದ ನಂತರದ ಪೀಳಿಗೆಗೆ ಸಹಜವಾಗಿಯೇ ವರ್ಗಾವಣೆ ಆಗುತ್ತಿತ್ತು. ಆದ್ರೆ ರತನ್ ಟಾಟಾ ಅವಿವಾಹಿತರು. ಹೀಗಾಗಿ ಸಮೂಹದ ವಾರಸುದಾರಿಕೆ ಮುಂದುವರಿಸಲು ಅವರ ನಂತರದ ತಲೆಮಾರು ಇಲ್ಲ. ಸುಮಾರು 3,800 ಕೋಟಿ ರೂ ಮೌಲ್ಯದ ಕಂಪೆನಿಯನ್ನು ನಡೆಸುವ ಟಾಟಾ ಟ್ರಸ್ಟ್‌ನ ನಾಯಕತ್ವ ಯಾರಿಗೆ ಸಿಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ. ಅಲ್ದೇ ರತನ್ ಟಾಟಾ ಅವರು ಮರಣಕ್ಕೂ ಮುನ್ನ ತಮ್ಮ ಉತ್ತರಾಧಿಕಾರಿ ಯಾರೆಂದು ನೇಮಕ ಮಾಡಿಲ್ಲ ಎನ್ನಲಾಗಿದೆ. ಅವರು ಟಾಟಾ ಟ್ರಸ್ಟ್‌ನ ನೇತೃತ್ವವನ್ನು ವಹಿಸುವ ವ್ಯಕ್ತಿಯ ಆಯ್ಕೆಯ ಹೊಣೆಯನ್ನು ಟ್ರಸ್ಟಿಗಳ ಮಂಡಳಿಗೇ ವಹಿಸಿದ್ದರು. ಹೀಗಾಗಿ ನೋಯೆಲ್ ಟಾಟಾ ಅವರನ್ನೇ ಮುಂದಿನ ನಾಯಕರನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಅಧಿಕವಾಗಿದೆ. ನೋಯೆಲ್ ಅವರ ಮಕ್ಕಳಾದ ಲೀಹ್, ಮಾಯಾ ಮತ್ತು ನೆವಿಲ್ಲೆ ಭವಿಷ್ಯದ ಪೀಳಿಗೆಯ ನಾಯಕರಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಆದರೆ 13 ಟ್ರಸ್ಟಿಗಳ ಮಂಡಳಿಯು ಸಹಮತದೊಂದಿಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ.

ಸುಮಾರು 150 ವರ್ಷಗಳಿಂದ ದೇಶದ ಉದ್ಯಮ ವಲಯದಲ್ಲಿ ಮುಗಿಲೆತ್ತರದ ಸಾಧನೆ ಮಾಡುತ್ತಿರುವ ಟಾಟಾ ಸಮೂಹವನ್ನು ಜಮ್ಶೆಡ್ಜಿ ಟಾಟಾರಿಂದ ಹಿಡಿದು ರತನ್ ಟಾಟಾವರೆಗೆ ಟಾಟಾ ಕುಟುಂಬದ ಐವರು ಸದಸ್ಯರು ಸಮೂಹ ಮುಖ್ಯಸ್ಥರಾಗಿ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಆದ್ರೆ ದೇಶ ಕಂಡ ವಿಶಿಷ್ಟ ಹಾಗೂ ಸಜ್ಜನ ಉದ್ಯಮಿಯಾಗಿದ್ದು ರತನ್ ಟಾಟಾ ಮಾತ್ರ. ಅವರ ನಿಗರ್ಮನದೊಂದಿಗೆ ಈಗ ಒಂದು ಯುಗಾಂತ್ಯಗೊಂಡಿದೆ. ಟಾಟಾ ಕುಟುಂಬದ ಒಂದು ಅಮೂಲ್ಯ ಕೊಂಡಿ ಕಳಚಿಕೊಂಡಿದೆ. ಜೆಮ್‌ಶೆಡ್‌ಜಿ ಟಾಟಾ ಹುಟ್ಟುಹಾಕಿದ ಕಂಪೆನಿಯನ್ನು ಮುಗಿಲೆತ್ತರಕ್ಕೆ ಬೆಳೆಸುವಲ್ಲಿ ರತನ್ ಟಾಟಾ ಪಾತ್ರ ಬಹುದೊಡ್ಡದು. ಒಟ್ನಲ್ಲಿ ಸಾವಿರಾರು ಕೋಟಿ ಸಂಪತ್ತಿದ್ರೂ ಸಂತನಂತೆ ಬದುಕಿದ ರತನ್ ಟಾಟಾ ಕೋಟಿ ಕೋಟಿ ಜನರಿಗೆ ಮಾದರಿಯಾಗಿದ್ದಾರೆ. ವಿಶ್ವದ ಅತ್ಯಂತ ಪ್ರಭಾವಿ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾಗಿದ್ರೂ ಯಾರ ಜೊತೆಗೂ ಪೈಪೋಟಿಗೆ ಇಳಿಯಲಿಲ್ಲ. 100ಕ್ಕೂ ಹೆಚ್ಚು ದೇಶಗಳಲ್ಲಿ 30ಕ್ಕೂ ಹೆಚ್ಚು ಕಂಪನಿಗಳನ್ನ ನಡೆಸುತ್ತಿದ್ರೂ ದೊಡ್ಡು ಆಡಂಭರಗಳಿಗೆ ಮರುಳಾಗದೆ ಬದುಕು ನಡೆಸಿದ್ರು. ದೂರದೃಷ್ಠಿಯ, ಸಹಾನುಭೂತಿಯ, ಅಸಾಧಾರಣ ವ್ಯಕ್ತಿತ್ವ ಹೊಂದಿದ್ದ ಒಬ್ಬ ಸರ್ವಶ್ರೇಷ್ಠ ಸಹೃದಯಿ ಮರೆಯಾಗಿದ್ದಾರೆ. ಆದ್ರೆ ಅವ್ರು ಕಟ್ಟಿ ಬೆಳೆಸಿದ ಸಾಮ್ರಾಜ್ಯಕ್ಕೆ ಅವ್ರಷ್ಟೇ ನಿಷ್ಠೆಯ ಉತ್ತರಾಧಿಕಾರಿ ಬರಲಿ ಅನ್ನೋದೇ ಕೋಟಿ ಕೋಟಿ ಭಾರತೀಯರ ಆಶಯ.

Shwetha M

Leave a Reply

Your email address will not be published. Required fields are marked *