ಡಿ.ಕೆ ಸುರೇಶ್ ವಿರುದ್ಧ ಕಣಕ್ಕಿಳಿಯೋ ಸ್ಪರ್ಧಿ ಯಾರು..?- ಹೆಚ್‌ಡಿಕೆ ಉರುಳಿಸಿರೋ ದಾಳ ಯಾವುದು..?

ಡಿ.ಕೆ ಸುರೇಶ್ ವಿರುದ್ಧ ಕಣಕ್ಕಿಳಿಯೋ ಸ್ಪರ್ಧಿ ಯಾರು..?- ಹೆಚ್‌ಡಿಕೆ ಉರುಳಿಸಿರೋ ದಾಳ ಯಾವುದು..?

ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 28ಕ್ಷೇತ್ರಗಳನ್ನೂ ಗೆಲ್ಲಬೇಕೆಂಬುದು ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಟಾರ್ಗೆಟ್. ಆದ್ರೆ ಮೈತ್ರಿ ಪಡೆಗೆ ಬಿಗ್ ಚಾಲೆಂಜ್ ಇರೋದು ಬೆಂಗಳೂರು ಗ್ರಾಮಾಂತರ ಕ್ಷೇತ್ರ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಹಾಲಿ ಸಂಸದ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವ್ರ ಸೋದರ ಡಿ.ಕೆ ಸುರೇಶ್​ರನ್ನ ಸೋಲಿಸೋದು ಅಷ್ಟು ಸುಲಭದ ಮಾತಲ್ಲ. ಆದ್ರೆ ಈ ಸಲ ಶತಾಯಗತಾಯ ಸುರೇಶ್​ಗೆ ಸೋಲಿನ ರುಚಿ ತೋರಿಸುವ ಮೂಲಕ ಅಣ್ಣ ಡಿಕೆಶಿಗೆ ಮಾಸ್ಟರ್ ಸ್ಟ್ರೋಕ್ ಕೊಡ್ಬೇಕು ಅನ್ನೋದು ಮೈತ್ರಿ ನಾಯಕರ ಮಹಾಪ್ಲ್ಯಾನ್. ಅದಕ್ಕಾಗಿ ಬಿಜೆಪಿ-ಜೆಡಿಎಸ್ ನಾಯಕರು ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸೋಕೆ ತಯಾರಿ ನಡೆಸಿದ್ದಾರೆ. ಜೊತೆಗೆ ರಣತಂತ್ರದ ಸಭೆಗಳನ್ನೂ ನಡೆಸ್ತಿದ್ದಾರೆ. ಹಾಗಾದ್ರೆ ಡಿ.ಕೆ ಸುರೇಶ್ ವಿರುದ್ಧ ಕಣಕ್ಕಿಳಿಯೋ ಸ್ಪರ್ಧಿ ಯಾರು..? ಮೈತ್ರಿ ಪಡೆ ಪ್ಲ್ಯಾನ್ ವರ್ಕೌಟ್ ಆಗುತ್ತಾ? ಯಾರೆಲ್ಲಾ ಒಟ್ಟಾಗಿದ್ದಾರೆ..? ಹೆಚ್​ಡಿಕೆ ಉರುಳಿಸಿರೋ ದಾಳ ಯಾವುದು..? ಈ ಬಗೆಗಿನ ಕಂಪ್ಲೀಟ್ ವಿವರಣೆ ಇಲ್ಲಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ಅಪ್ಪ ಮಗ ಎಲೆಕ್ಷನ್‌ಗೆ ನಿಲ್ಲಲ್ಲ ಅಂದಿದ್ದು ಇದೇ ಕಾರಣಕ್ಕಾ? – ಮೈತ್ರಿ ಅಭ್ಯರ್ಥಿಯಾಗಿ ಡಾ.ಸಿ.ಎನ್ ಮಂಜುನಾಥ್ ಕಣಕ್ಕೆ?

2024ರ ಲೋಕಸಭಾ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಿ.ಕೆ ಸುರೇಶ್ ಮತ್ತೊಮ್ಮೆ ಸ್ಪರ್ಧಿಸೋದು ಖಚಿತ. ಹೀಗಾಗಿ ಸಂಸದ ಡಿ.ಕೆ.ಸುರೇಶ್‌ ರನ್ನು ಸೋಲಿಸಲು ಮೈತ್ರಿ ನಾಯಕರು ರಣತಂತ್ರ ರೂಪಿಸ್ತಿದ್ದಾರೆ. ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ.ಸಿಎನ್ ಮಂಜುನಾಥ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಖುದ್ದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವ್ರೇ ಅಖಾಡಕ್ಕಿಳಿದಿದ್ದಾರೆ. ಡಿ.ಕೆ ಸುರೇಶ್ ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯನ್ನ ಗೆಲ್ಲಿಸಲು ಸಿದ್ಧತೆ ಆರಂಭಿಸಿದ್ದಾರೆ. ಇದೇ ಮೊದಲ ಬಾರಿಗೆ ಡಿಕೆ ಶಿವಕುಮಾರ್ ಕ್ಷೇತ್ರ ಕನಕಪುರ ಭಾಗದ ಮುಖಂಡರನ್ನು ಕರೆಸಿ ಹೆಚ್.​ಡಿ ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ. ಸಭೆಯಲ್ಲಿ ಹತ್ತಾರು ಲೆಕ್ಕಾಚಾರಗಳನ್ನ ಹಾಕಿಕೊಳ್ಳಲಾಗಿದೆ.

ರಾಮನಗರ ಜಿಲ್ಲೆಯ ಬಿಡದಿಯಲ್ಲಿನ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ತೋಟದ ಮನೆಯಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಡಾ.ಸಿ.ಎನ್ ಮಂಜುನಾಥ್​ರನ್ನು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಗೆಲ್ಲಿಸುವ ಬಗ್ಗೆ ಮಾತುಕತೆ ನಡೆಸಲಾಗಿದೆ. ಅದ್ರಲ್ಲೂ ಡಿ.ಕೆ ಶಿವಕುಮಾರ್ ಪ್ರತಿನಿಧಿಸುವ ಕನಕಪುರ ಕ್ಷೇತ್ರದ ಮುಖಂಡರನ್ನು ಕರೆಸಿ ಮೈತ್ರಿ ನಾಯಕರು ಚರ್ಚೆ ನಡೆಸಿದ್ದಾರೆ. ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶಾಸಕ ಮುನಿರತ್ನ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಸೇರಿ ಹಲವರು ಭಾಗಿಯಾಗಿ ತಂತ್ರಗಾರಿಕೆ ಮಾಡಿದ್ದಾರೆ. ಅಭ್ಯರ್ಥಿ ಯಾರೇ ಆದರೂ ದೊಡ್ಡ ಅಂತರದಲ್ಲಿ ಗೆಲ್ಲಿಸೋಣ ಅಂತ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಈ ಮೂಲಕ ಸಂಸದ ಡಿಕೆ ಸುರೇಶ್ ರನ್ನು ಸೋಲಿಸಿ, ಸಹೋದರ ಡಿಸಿಎಂ ಡಿಕೆ ಶಿವಕುಮಾರ್​​ಗೆ ಶಾಕ್ ಕೊಡಲು ಮೈತ್ರಿ ನಾಯಕರು ಮುಂದಾಗಿದ್ದಾರೆ. ಹಾಗೇ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಅಭ್ಯರ್ಥಿ ಘೋಷಣೆ ಮಾಡಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ.

ಅಸಲಿಗೆ ಮೈತ್ರಿ ನಾಯಕರಿಗೆ ಡಿ.ಕೆ ಸುರೇಶ್​ರನ್ನ ಸೋಲಿಸೋದು ಅಷ್ಟು ಸುಲಭವಿಲ್ಲ. ಕಾಂಗ್ರೆಸ್ ಪಾಳಯದಲ್ಲಿ ಡಿ.ಕೆ ಶಿವಕುಮಾರ್ ರಂತೆಯೇ ಡಿ.ಕೆ ಸುರೇಶ್ ಪ್ರಾಬಲ್ಯವಿದೆ. ಹೈಕಮಾಂಡ್ ಮಟ್ಟದಲ್ಲೂ ಪ್ರಭಾವಿಯಾಗಿದ್ದಾರೆ.  ಅಷ್ಟೇ ಯಾಕೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಕಂಡಿದ್ದಾರೆ. ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕನಾಗಿರುವ ಸುರೇಶ್​ರನ್ನ ಸೋಲಿಸೋಕೆ ಒಕ್ಕಲಿಗ ಸಮುದಾಯದ ದೊಡ್ಡಗೌಡ್ರ ಅಳಿಯ ಸಿ.ಎನ್ ಮಂಜುನಾಥ್​ರನ್ನೇ ನಿಲ್ಲಿಸೋ ತಯಾರಿ ನಡೆದಿದೆ. ಅಷ್ಟಕ್ಕೂ ಇಲ್ಲಿ ಡಿ.ಕೆ ಸುರೇಶ್ ಹಾಗೂ ಡಾ.ಸಿ.ಎನ್ ಮಂಜುನಾಥ್ ಬಲಾಬಲ ಏನು ಅನ್ನೋದನ್ನ ನೋಡೋದಾದ್ರೆ..

2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಉದಯವಾಗಿತ್ತು. 3 ಜಿಲ್ಲೆಗಳಿಗೆ ಕ್ಷೇತ್ರ ವ್ಯಾಪಿಸಿದ್ದು, ಒಕ್ಕಲಿಗ ಮತಗಳೇ ನಿರ್ಣಾಯಕವಾಗಿವೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ 3 ಬಾರಿ ಡಿಕೆ ಸುರೇಶ್ ಆಯ್ಕೆಯಾಗಿದ್ದಾರೆ. 2013ರಲ್ಲಿ ಸಂಸದರಾಗಿದ್ದ ಹೆಚ್. ಡಿ ಕುಮಾರಸ್ವಾಮಿ ರಾಜೀನಾಮೆಯಿಂದ ಈ ಸ್ಥಾನ ತೆರವಾಗಿತ್ತು. ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ ಡಿ.ಕೆ ಸುರೇಶ್ ಗೆಲುವು ದಾಖಲಿಸಿದ್ರು. ಬಳಿಕ 2014, 2019ರಲ್ಲೂ ಜಯಭೇರಿ ಬಾರಿಸಿದ್ರು. ಇನ್ನು ಡಾ.ಸಿಎನ್ ಮಂಜುನಾಥ್ ವಿಚಾರ ನೋಡೋದಾದ್ರೆ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಅವ್ರು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಅಳಿಯ. ವೈದ್ಯಕೀಯ ಲೋಕದಲ್ಲಿ ಒಳ್ಳೆಯ ಹೆಸರಿದ್ದು, ಜನರಿಗೆ ಚಿರಪರಿಚಿತರಾಗಿದ್ದಾರೆ. ಜನವರಿ 31ರಂದು  ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಇದೇ ಮೊದಲ ಬಾರಿಗೆ ರಾಜಕೀಯಕ್ಕೆ ಕಾಲಿಡ್ತಿದ್ದು, ಅದೃಷ್ಟ ಪರೀಕ್ಷೆಗೆ ಮುಂದಾಗಲಿದ್ದಾರೆ.

ಒಟ್ಟಾರೆ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಡಿ.ಕೆ ಸುರೇಶ್ ನಾಲ್ಕನೇ ಬಾರಿ ಗೆಲುವಿನ ವಿಶ್ವಾಸದಲ್ಲಿ ಇದ್ದಾರೆ. ಆದ್ರೆ ಮೈತ್ರಿ ನಾಯಕರು ಮಾತ್ರ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯೋ ಪ್ಲ್ಯಾನ್ ಮಾಡ್ತಿದ್ದಾರೆ. ಡಿ.ಕೆ ಸುರೇಶ್​ರನ್ನ ಸೋಲಿಸಿ ಡಿ.ಕೆ ಶಿವಕುಮಾರ್ ಗೂ ಶಾಕ್ ಕೊಡಲು ತಂತ್ರ ರೂಪಿಸುತ್ತಿದ್ದಾರೆ. ಆದ್ರೆ ಇದು ವರ್ಕೌಟ್ ಆಗುತ್ತಾ ಅನ್ನೋದೇ ಈಗಿರುವ ಪ್ರಶ್ನೆ.

Sulekha