ಕಂಗನಾ ಬಗ್ಗೆ ಪೋಸ್ಟ್ ಮಾಡಿದ ಸುಪ್ರಿಯಾ ಯಾರು? – 2012ರಲ್ಲಿ ಮಂಡಿಯಲ್ಲಿ ಮೋದಿ ಏನಂದಿದ್ರು ಗೊತ್ತಾ?
ಕಂಗನಾ ರಣಾವತ್ ಬಗ್ಗೆ ಇನ್ಸ್ಟಾ ಗ್ರಾಂನಲ್ಲಿ ಪೋಸ್ಟ್ ಮಾಡಿ ವಿವಾದಕ್ಕೆ ಕಾರಣವಾದ ಈ ಸುಪ್ರಿಯಾ ಶ್ರೀನೇತ್ ಯಾರು ಗೊತ್ತಾ? ಇಷ್ಟಕ್ಕೂ ಕಾಂಗ್ರೆಸ್ನಲ್ಲಿ ಅಷ್ಟು ದೊಡ್ಡ ಜವಾಬ್ದಾರಿ ಪಡೆದಿದ್ದರೂ ಅಂತವರ ಅಕೌಂಟ್ನಿಂದಲೇ ಇಂತಹ ಪೋಟೋ ಪೋಸ್ಟ್ ಆಗುತ್ತೆ ಅಂತಾದ್ರೆ ಎಲೆಕ್ಷನ್ಗೆ ದೇಶದ ಅತ್ಯಂತ ಹಳೆಯ ಪಕ್ಷ ಇನ್ನೂ ಸಜ್ಜಾಗಿಯೇ ಇಲ್ವಾ ಎಂಬ ಪ್ರಶ್ನೆಯೂ ಮೂಡಿದೆ.. ಇಷ್ಟಕ್ಕೂ ಈ ಫೋಟೋ ಪೋಸ್ಟ್ ವಿವಾದದಿಂದ ಕಾಂಗ್ರೆಸ್ಗೆ ಡ್ಯಾಮೇಜ್ ಆಗುತ್ತಾ? ಇಷ್ಟಕ್ಕೂ ಈಗ ಕಂಗನಾ ಸ್ಪರ್ಧಿಸುತ್ತಿರುವ ಅದೇ ಮಂಡಿಕ್ಷೇತ್ರದಲ್ಲಿ ಹಿಂದೆ ಪ್ರಧಾನಿ ಮೋದಿ ಆಡಿದ್ದ ವಿವಾದಾತ್ಮಕ ಹೇಳಿಕೆ ಹೇಗಿತ್ತು ಗೊತ್ತಾ?. ಈ ಬಗ್ಗೆ ವಿವರಣೆ ಇಲ್ಲಿದೆ.
ಇದನ್ನೂ ಓದಿ: ಯದುವೀರ್ ಸೋಲಿಗೆ ಸಿದ್ಧವಾಯ್ತು ತಂತ್ರ – ಮೈಸೂರು ಗೆಲ್ಲಲು ಸಿದ್ದು ಪ್ಲ್ಯಾನ್ ಏನು?
ಬಿಜೆಪಿ ಈ ಬಾರಿ ಬಾಲಿವುಡ್ ಬ್ಯೂಟಿ ಕಂಗನಾ ರಣಾವತ್ ಅವರನ್ನು ಲೋಕಸಭೆ ಚುನಾವಣಾ ಕಣಕ್ಕಿಳಿಸಿದೆ.. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಎನ್ಸಿಪಿ ಜೊತೆ ಸೇರಿ ಶಿವಸೇನೆಯ ಉದ್ಧವ್ ಠಾಕ್ರೆ ಸರ್ಕಾರ ರಚಿಸಿದ ಮೇಲೆ ಕಂಗನಾ ರಣಾವತ್ ಬಿಜೆಪಿ ಕಾರ್ಯಕರ್ತರ ಹಾಟ್ ಫೇವರೇಟ್ ಆಗಿಬಿಟ್ಟಿದ್ದರು.. ಬಾಲಿವುಡ್ನಲ್ಲಿ ತನ್ನ ಖಡಕ್ ಮಾತುಗಳಿಂದಲೇ ಅಭಿಮಾನಿಗಳು ಮತ್ತು ವಿರೋಧಿಗಳನ್ನು ಏಕ ಕಾಲದಲ್ಲಿ ಕಟ್ಟಿಕೊಂಡಿರುವ ನಟಿಯೆಂದ್ರೆ ಅದು ಕಂಗನಾ ರಣಾವತ್.. ಆದ್ರೆ ಯಾವಾಗ ಉದ್ಧವ್ ಠಾಕ್ರೆ ಬಿಜೆಪಿ ಬದಲಿಗೆ ಕಾಂಗ್ರೆಸ್-ಎನ್ಸಿಪಿ ಜೊತೆ ಸರ್ಕಾರ ರಚಿಸಿದ್ರೊ ಅಲ್ಲಿಂದ ನಂತರ ಕಂಗನಾ, ನೇರವಾಗಿಯೇ ಠಾಕ್ರೆ ವಿರುದ್ಧ ಮುಗಿಬಿದ್ದಿದ್ದರು.. ಇದು ಮುಂದೆ ಅತಿಕ್ರಮವಾಗಿ ಕಚೇರಿ ಹಾಗೂ ಮನೆ ಕಟ್ಟಿಕೊಂಡಿದ್ದಾರೆಂದು ಕಂಗನಾ ಅವರಿಗೆ ಸೇರಿದ್ದ ಕಟ್ಟಡದ ಒಂದು ಭಾಗವನ್ನು ಮುಂಬೈ ಮಹಾನಗರ ಪಾಲಿಕೆ ಡೆಮಾಲಿಷನ್ ಮಾಡುವವರೆಗೂ ಮುಂದುವರೆದಿತ್ತು.. ಪಾಕಿಸ್ತಾನ.. ಮುಸ್ಲಿಂ.. ಹೀಗೆ ಅನೇಕ ವಿಚಾರಗಳಲ್ಲಿ ಕಂಗನಾ ಮಾಡುತ್ತಿದ್ದ ಟ್ವೀಟ್ ಸಹಜವಾಗಿಯೇ ಸಂಘಪರಿವಾರದ ಮಂದಿಗೆ ಖುಷಿ ತಂದರೆ, ವಿರೋಧಿಗಳಿಗೆ ಬೆಂಕಿ ಉಂಡೆಯಂತೆ ಭಾಸವಾಗುತ್ತಿದ್ದವು.. ಇಂತಹ ಕಂಗನಾ ರಣಾವತ್ಗೆ ಬಿಜೆಪಿ ಹಿಮಾಚಲ ಪ್ರದೇಶದ ಮಂಡಿಯಿಂದ ಲೋಕಸಭೆ ಟಿಕೆಟ್ ಘೋಷಿಸಿದೆ.. ಕಂಗನಾಗೆ ಟಿಕೆಟ್ ಸಿಕ್ಕಿದ್ದೇನೋ ಸರಿ.. ರಾಜಕೀಯ ನಿಲುವುಗಳ ವಿಚಾರಕ್ಕೆ ಬಂದಾಗ ಕಂಗನಾ ಮುಕ್ತವಾಗಿಯೇ ಬಿಜೆಪಿ ಪರ ನಿಂತಿದ್ದರು.. ಹೀಗಾಗಿ ಕಂಗನಾಗೆ ಟಿಕೆಟ್ ಸಿಕ್ಕಿದ್ದರಲ್ಲಿ ಅಚ್ಚರಿಯೇನೂ ಇರಲಿಲ್ಲ.. ಆದರೆ ಕಂಗನಾಗೆ ಟಿಕೆಟ್ ಘೋಷಮೆಯಾದ್ಮೇಲೆ ಸುಪ್ರಿಯಾ ಶ್ರೀನೇತ್ ಕೆಟ್ಟ ಟೇಸ್ಟ್ನ ಬರಹವನ್ನು ಇನ್ಸ್ಸ್ಟಾ ಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.. ಇಷ್ಟಾಗುತ್ತಿದ್ದಂತೆ ಆ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು.. ಆದ್ರೆ ನಂತರ ಸುಪ್ರಿಯಾ ಪೋಸ್ಟ್ ಡಿಲೀಟ್ ಮಾಡಿದ್ದಲ್ಲದೆ ನನ್ನ ಅಕೌಂಟ್ ನ ಲಾಗಿನ್ ಕ್ರೆಡೆನ್ಷಿಯಲ್ಗಳು ಹಲವರ ಬಳಿಯಿವೆ.. ಅವರಲ್ಲಿ ಯಾರು ಇಂತಹ ಪೋಸ್ಟ್ ಮಾಡಿದ್ದಾರೆಂದು ಗೊತ್ತಿಲ್ಲ.. ಅವರನ್ನು ಪತ್ತೆ ಹಚ್ಚುತ್ತೇನೆ.. ಅಷ್ಟೇ ಅಲ್ಲ ಇದು ತನ್ನ ಹೆಸರಿಗೆ ಕಳಂಕ ತರುವ ವಿಚಾರ ಅಂತೆಲ್ಲಾ ಹೇಳಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಲ್ಲದೆ ವೀಡಿಯೋ ಮೂಲಕವೂ ಸ್ಪಷ್ಟನೆ ಕೊಟ್ಟಿದ್ದರು..
ಆದ್ರೆ ಇಷ್ಟೆಲ್ಲಾ ಸ್ಪಷ್ಟನೆ ನೀಡಿದ ಸುಪ್ರಿಯಾ ಶ್ರೀನೇತ್ ಕೂಡ ಒಬ್ಬ ಪತ್ರಕರ್ತೆಯಾಗಿ ಕೆಲಸ ಮಾಡಿದವರು.. ಅದೂ ಒಂದೆರಡು ವರ್ಷವಲ್ಲ.. ಬರೋಬ್ಬರಿ 18 ವರ್ಷಗಳ ಕಾಲ ಸುಪ್ರಿಯಾ ಪತ್ರಕರ್ತೆಯಾಗಿ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು.. ಇಂಡಿಯಾ ಟುಡೆಯಲ್ಲಿ ವೃತ್ತಿ ಜೀವನ ಆರಂಭಿಸಿದ್ದ ಸುಪ್ರಿಯಾ ನಂತರ ಎನ್ಡಿಟಿವಿ, ಟೈಮ್ಸ್ ಗ್ರೂಪ್ನ ಇಟಿ ನೌ ಚಾನೆಲ್ನಲ್ಲೂ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದವರು.. ಕಡೆಗೆ 2019ರಲ್ಲಿ ಪತ್ರಕರ್ತೆ ಹುದ್ದೆಗೆ ಗುಡ್ ಬೈ ಹೇಳಿ, ಕಾಂಗ್ರೆಸ್ನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು.. ಉತ್ತರ ಪ್ರದೇಶದ ಮಹಾರಾಜ್ ಗಂಜ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸುಪ್ರಿಯಾ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.. ಇಷ್ಟಕ್ಕೂ ಸುಪ್ರಿಯಾ ಅಲ್ಲಿ ಗಳಿಸಿದ್ದ ಮತವೆಷ್ಟು ಗೊತ್ತಾ? ಕೇವಲ 72, 516 ಮತಗಳು ಮಾತ್ರ.. ಕ್ಷೇತ್ರದಲ್ಲಿ ಕೇವಲ ಶೇ.5.91ರಷ್ಟು ಮತಗಳನ್ನು ಮಾತ್ರ ಅವರಿಂದ ಗಳಿಸಲು ಸಾಧ್ಯವಾಗಿತ್ತು.. ಅವರ ವಿರುದ್ಧ ಗೆದ್ದಿದ್ದ ಬಿಜೆಪಿಯ ಪಂಕ್ ಚೌಧರಿ ಗಳಿಸಿದ್ದು, 7,26,349 ಮತಗಳು ಅಂದರೆ ಸೋಲಿನ ಅಂತರ ಎಷ್ಟು ಹೀನಾಯವಾಗಿತ್ತು ಅಂತ ಅರ್ಥವಾಗುತ್ತದೆ.. ಅಷ್ಟು ಹೀನಾಯವಾಗಿ ಲೋಕಸಭೆ ಚುನಾವಣೆಯಲ್ಲಿ ಸೋತ ಸುಪ್ರಿಯಾ, ಲೋಕಸಭೆ ಚುನಾವಣೆಗೆ ಟಿಕೆಟ್ ಪಡೆದ ಎದುರಾಳಿ ಪಕ್ಷದ ಮಹಿಳಾ ಅಭ್ಯರ್ಥಿಯ ಬಗ್ಗೆ ಕೆಟ್ಟ ಟೇಸ್ಟ್ ಇರುವ ಪೋಸ್ಟ್ ಮಾಡಿ ವಿವಾದ ಸೃಷ್ಟಿಸಿದ್ದಾರೆ.. ಇಷ್ಟಕ್ಕೂ ಆ ಪೋಸ್ಟ್ ಮೊದಲು ಸುಪ್ರಿಯಾ ಪರೋಡಿ ಅಕೌಂಟ್ನಲ್ಲಿ ಪೋಸ್ಟ್ ಆಗಿತ್ತಂತೆ.. ಫೇಕ್ ಅಕೌಂಟ್ನಲ್ಲಿ ಪೋಸ್ಟ್ ಆದ ಫೋಟೋ ಮತ್ತೆ ಸುಪ್ರಿಯಾ ಅಕೌಂಟ್ನಲ್ಲಿ ಪೋಸ್ಟ್ ಆಗಿದ್ದು ಹೇಗೆ ಎನ್ನುವುದು ಸುಪ್ರಿಯಾ ಶ್ರೀನೇತ್ಗೆ ಗೊತ್ತಿಲ್ಲ ಎನ್ನುವುದು ಅವರೇ ನೀಡಿದ ಸ್ಪಷ್ಟನೆ.. ಇನ್ನು ಈ ಸುಪ್ರಿಯಾ ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ಕಾಂಗ್ರೆಸ್ ಅವರನ್ನು ವಕ್ತಾರೆಯಾಗಿ ನೇಮಿಸಿತ್ತು.. ಅಷ್ಟೇ ಅಲ್ಲ.. 2022ರಿಂದ ಎಐಸಿಸಿಯ ಸೋಷಿಯಲ್ ಮೀಡಿಯಾ ಮತ್ತು ಡಿಜಿಟಲ್ ಪ್ಲಾಟ್ಫಾರಂನ ಚೇರ್ಮನ್ ಆಗಿಯೂ ನೇಮಕ ಮಾಡಲಾಗಿತ್ತು.. ಅಂದರೆ ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಪರವಾಗಿ ಕ್ಯಾಂಪೇನ್ ಮಾಡುವ ದೊಡ್ಡ ಜವಾಬ್ದಾರಿ ಸುಪ್ರಿಯಾ ಅವರ ಹೆಗಲ ಮೇಲಿದೆ.. ಅಂತಹ ಸುಪ್ರಿಯಾಗೆ ತನ್ನ ಸ್ವಂತ ಅಕೌಂಟ್ನಿಂದಲೇ ಯಾರು ಏನು ಪೋಸ್ಟ್ ಮಾಡ್ತಾರೆ ಎನ್ನುವುದೇ ಗೊತ್ತಿಲ್ಲ.. ಇಂತಹವರು ಪಕ್ಷದ ಅಕೌಂಟ್ನಿಂದ ಯಾರು ಏನು ಪೋಸ್ಟ್ ಮಾಡ್ತಾರೆಂದು ಹೇಗೆ ಮಾನಿಟರ್ ಮಾಡುತ್ತಾರೆ ಎನ್ನುವುದೇ ಸೋಜಿಗ.. ಇನ್ನು ಸುಪ್ರಿಯಾ ಶ್ರೀನೇತ್ ಮಾಡಿದ ಪೋಸ್ಟ್ಗೆ ಕ್ಷಮೆ ಕೇಳಿದ್ರೂ.. ಪೋಸ್ಟ್ ಅಳಿಸಿ ಹಾಕಿದ್ರೂ ಬಿಜೆಪಿಯವರು ಮಾತ್ರ ಬಿಡ್ತಿಲ್ಲ.. ಮೊದಲೇ ನೇರಮಾತು, ಖಡಕ್ ಉತ್ತರ ಅಷ್ಟೇ ಏಕೆ ಟ್ವೀಟ್ಗಳ ಮೂಲಕವೇ ಸಂಚಲನ ಸೃಷ್ಟಿಸುವ ಕಂಗನಾ ಈಗ ತರಹೇವಾರಿ ರೀತಿಯಲ್ಲಿ ಸುಪ್ರಿಯಾಗೆ ಉತ್ತರ ಕೊಟ್ಟಿದ್ದಾರೆ.. ಪ್ರತಿ ಹೆಣ್ಣೂ ಗೌರವಕ್ಕೆ ಅರ್ಹಳು ಎನ್ನುವ ಮೂಲಕ ಕಲಾವಿದೆಯಾಗಿ ತಾನು ಮಾಡಿದ ಪಾತ್ರದ ಫೋಟೋವನ್ನು ಮುಂದಿಟ್ಟು ಮಾಡಿದ ಪೋಸ್ಟ್ಗೆ ತಿರುಗೇಟು ಕೊಟ್ಟಿದ್ದಾರೆ..
ಇಷ್ಟಕ್ಕೂ ಚುನಾವಣೆಗಳ ಹೊತ್ತಲ್ಲಿ ಹೆಣ್ಣು ಮಕ್ಕಳ ಮೇಲೆ ಅವಹೇಳನಕಾರಿ ಹೇಳಿಕೆಗಳು ಬರೋದು ಇದೇ ಮೊದಲೇನೂ ಅಲ್ಲ.. ಅಲ್ಲದೆ ಇದು ಕೇವಲ ಒಂದು ಪಕ್ಷಕ್ಕಷ್ಟೇ ಸೀಮಿತವಾಗಿರುವ ವಿಚಾರವೂ ಅಲ್ಲ.. ಅದರಲ್ಲೂ ಈಗ ಕಂಗನಾ ರಣಾವತ್ ಚುನಾವಣೆಗೆ ಸ್ಪರ್ಧಿಸುತ್ತಿರುವ ಹಿಮಾಚಲ ಪ್ರದೇಶದ ಮಂಡಿಯಲ್ಲೇ 2012ರಲ್ಲಿ ಗುಜರಾತ್ನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ 50 ಕೋಟಿಯ ಗರ್ಲ್ ಫ್ರೆಂಡ್ ಎಂಬ ಹೇಳಿಕೆ ನೀಡಿದ್ದರು.. ಹಿಮಾಚಲ ಪ್ರದೇಶದ ಚುನಾವಣಾ ಪ್ರಚಾರದಲ್ಲಿ ಬಾಗಿಯಾಗಿದ್ದ ನರೇಂದ್ರ ಮೋದಿ, ಆಗ ಕೇಂದ್ರ ಸರ್ಕಾರದ ಸಚಿವರಾಗಿದ್ದ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ರನ್ನು ಎಂತಾ ಗರ್ಲ್ ಫ್ರೆಂಡ್.. ನೀವು ಯಾವತ್ತಾದ್ರೂ 50 ಕೋಟಿಯ ಗರ್ಲ್ ಫ್ರೆಂಡ್ ನೋಡಿದ್ದೀರಾ ಎಂದು ಪ್ರಶ್ನಿಸಿದ್ದರು.. ಆ ವಿಚಾರ ಕೂಡ ಆಗ ದೊಡ್ಡ ವಿವಾದ ಸೃಷ್ಟಿಸಿತ್ತು.. ಈಗ ಅದೇ ಮಂಡಿಯ ಬಿಜೆಪಿ ಅಭ್ಯರ್ಥಿಯ ಬಗ್ಗೆ ಕಾಂಗ್ರೆಸ್ ನಾಯಕಿ ವಿವಾದಾತ್ಮಕ ಪೋಸ್ಟ್ ಮಾಡಿದ್ದು ನಿಜಕ್ಕೂ ವಿಪರ್ಯಾಸ..