ಮೊದಲ ಸಲ ಬಾಹ್ಯಾಕಾಶಕ್ಕೆ ಹಾರಲಿರೋ ಶುಭಾಂಶು ಶುಕ್ಲಾ
ಭಾರತದ ಭವಿಷ್ಯಕ್ಕೆ ಮಹತ್ವದ ಹೆಜ್ಜೆ

ಮೊದಲ ಸಲ ಬಾಹ್ಯಾಕಾಶಕ್ಕೆ ಹಾರಲಿರೋ ಶುಭಾಂಶು ಶುಕ್ಲಾಭಾರತದ ಭವಿಷ್ಯಕ್ಕೆ ಮಹತ್ವದ ಹೆಜ್ಜೆ

ಭಾರತದ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ಮತ್ತು ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾದ ನಾಸಾದ ಒಪ್ಪಂದಂತೆ ಭಾರತೀಯ ವಾಯಪಡೆಯ ಪೈಲಟ್‌ ಶುಭಾಂಶು ಶುಕ್ಲಾ ಇದೀಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳುತ್ತಿದ್ದಾರೆ. ಭಾರತದಂತೆ ಪೋಲೆಂಡ್‌, ಹಂಗರಿ ದೇಶಗಳು ಕೂಡಾ ಮೊದಲ ಸಲ ತಮ್ಮ ಗಗನಯಾತ್ರಿಗಳನ್ನು ISIಗೆ ಕಳುಹಿಸುತ್ತಿವೆ. ಅಮೆರಿಕದ ಆ್ಯಕ್ಸಿಯಾಮ್‌ ನೌಕೆಯಲ್ಲಿ ನಾಲ್ವರು ಯಾತ್ರಿಗಳು ಪ್ರಯಾಣ ಕೈಗೊಳ್ಳಲಿದ್ದಾರೆ. ಈ ನೌಕೆಯನ್ನು ಹೊತ್ತು ಎಲಾನ್‌ ಮಸ್ಕ್‌ ಒಡೆತನದ ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಬುಧವಾರ ಸಂಜೆ 5.30ಕ್ಕೆ ಬಾಹ್ಯಾಕಾಶಕ್ಕೆ ಜಿಗಿಯಲಿದೆ. ನಾಲ್ವರು ಗಗನಯಾತ್ರಿಗಳನ್ನು ಹೊತ್ತ ನೌಕೆ ( ಇಂದು ) ಬುಧವಾರ ಸಂಜೆ ಹೊರಟರೂ ಅದು ಐಎಸ್‌ಎಸ್‌ ತಲುಪಲು ಭರ್ಜರಿ 28 ಗಂಟೆ ಬೇಕು. ಭೂಮಿಯ ವಿವಿಧ ಕಕ್ಷೆಯಲ್ಲಿ ಸುತ್ತಿದ ಬಳಿಕ ಗುರುವಾರ ರಾತ್ರಿ 10 ಗಂಟೆಯ ವೇಳೆಗೆ ನಾಲ್ವರನ್ನು ಹೊತ್ತ ನೌಕೆ ಐಎಸ್‌ಎಸ್‌ ತಲುಪಲಿದೆ.

 14 ದಿನಗಳ ಐಎಸ್‌ಎಸ್‌ ವಾಸ

ನಾಲ್ವರು ಗಗನಯಾತ್ರಿಗಳು ಒಟ್ಟು 14 ದಿನಗಳ ಕಾಲ ಐಎಸ್ಎಸ್‌ನಲ್ಲಿ ತಂಗಲಿದ್ದಾರೆ. ಈ ವೇಳೆ ಅವರು ಬಾಹ್ಯಾಕಾಶ ಯಾನದ ಅನುಭವಗಳ ಜತೆಗೆ ತಮ್ಮ ತಮ್ಮ ದೇಶಕ್ಕೆ ಸಂಬಂಧ ಪಟ್ಟ ಒಟ್ಟು 60 ಪ್ರತ್ಯೇಕ ಪ್ರಯೋಗಗಳನ್ನು ನಡೆಸಿ ಬಳಿಕ ಭೂಮಿಗೆ ಮರಳಲಿದ್ದಾರೆ.

 ಎಷ್ಟು ಜನ ಗಗನಯಾತ್ರಿಗಳು ಹೋಗ್ತಾರೆ?

ಒಟ್ಟು 4 ಜನ ಗಗನಯಾನ ಮಾಡಲಿದ್ದಾರೆ. ಭಾರತದ ಶುಭಾಂಶು ಶುಕ್ಲಾ,  ಪೈಲಟ್‌ , ಅಮೆರಿಕದ ಪೆಗ್ಗಿ ವಿಟ್ಸನ್‌ ಪೈಲಟ್‌, ಪೋಲೆಂಡ್‌ನ ಸ್ಲವೋಝ್‌ ಉಝ್‌ನಾಸ್ಕಿ – ವಿಜ್ಞಾನಿ ಹಾಗೂ ಎಂಜಿನಿಯರ್‌-  ಮತ್ತು ಹಂಗರಿಯ ಟಿಬರ್‌ ಕಪು ಎಂಜಿನಿಯರ್‌ ಆಗಿದ್ದು  ಐಎಸ್‌ಎಸ್‌ಗೆ ತೆರಳುತ್ತಿದ್ದಾರೆ.

  41 ವರ್ಷದ ಬಳಿಕ ಯಾತ್ರೆ

1984ರ ಏ.3ರಂದು ರಷ್ಯಾದ ಸೋಯುಜ್‌ ಟಿ 11 ನೌಕೆಯಲ್ಲಿ ಭಾರತೀಯ ಗಗನಯಾತ್ರಿ ರಾಕೇಶ್‌ ಶರ್ಮಾ ಭಾರತದ ಮೊದಲ ಬಾಹ್ಯಾಕಾಶ ಯಾನ ಕೈಗೊಂಡಿದ್ದರು. ಈ ವೇಳೆ ಅವರಿಗೆ ದೂರವಾಣಿ ಕರೆ ಮಾಡಿದ್ದ ಭಾರತದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಆಗಸದಿಂದ ಭಾರತ ಹೇಗೆ ಕಾಣುತ್ತದೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಶರ್ಮಾ, ಸಾರೇ ಜಹಾಂ ಸೇ ಅಚ್ಚಾ ಎಂದಿದ್ದರು. ಶರ್ಮಾ 7 ದಿನ 21 ಗಂಟೆ 40 ನಿಮಿಷ ಅಂತರಿಕ್ಷದಲ್ಲಿದ್ದರು.

 ಭಾರತಕ್ಕೆ ಪ್ರಯಾಣದ ಲಾಭ ಏನು?

2027ರಲ್ಲಿ ಭಾರತ ಮಾನವ ಸಹಿತ ಗಗನಯಾನಕ್ಕೆ ಉದ್ದೇಶಿಸಿದೆ. ಈ ಯಾತ್ರೆಯ ಅನುಭವ 2027ರಲ್ಲಿ ಭಾರತದ ಯಾತ್ರಿಗಳಿಗೆ ನೆರವು ನೀಡಲಿದೆ. ಇದಲ್ಲದೆ ಆಹಾರ, ಪೋಷಕಾಂಶ ಮತ್ತು ಜೈವಿಕ ಪ್ರಯೋಗಗಳನ್ನು ಇದೀಗ ಶುಕ್ಲಾ ನಡೆಸಲಿದ್ದಾರೆ.

  ಐಎಸ್‌ಎಸ್‌ಗೆ ಹೋಗುತ್ತೆ ಹೆಸರುಬೇಳೆ, ಕ್ಯಾರೆಟ್‌ ಹಲ್ವಾ!

ಶುಕ್ಲಾ ತಮ್ಮೊಂದಿಗೆ ಐಎಸ್‌ಎಸ್‌ಗೆ ಹೆಸರುಬೇಳೆ ಹಲ್ವಾ, ಕ್ಯಾರೆಟ್‌ ಹಲ್ವಾ, ಮಾವಿನ ಹಣ್ಣಿನ ಮತ್ತು ಅನ್ನವನ್ನು ಕೊಂಡೊಯ್ಯಲಿದ್ದು, ಸಹವರ್ತಿಗೊಂದಿಗೆ ಅದನ್ನು ಹಂಚಿಕೊಳ್ಳಲಿದ್ದಾರೆ. ಭಾರತೀಯ ತಿನಿಸು ಹೆಚ್ಚು ಖಾರ ಇರುವ ಕಾರಣ ಹೆಚ್ಚಿನ ವಸ್ತು ಕೊಂಡೊಯ್ಯುಲು ಅವಕಾಶ ನೀಡಿಲ್ಲ.

 

  ಶುಕ್ಲಾ ಉಡ್ಡಯನಕ್ಕೆ 500 ಕೋಟಿ ರು.ವೆಚ್ಚ

ಐಎಸ್‌ಎಸ್‌ ನೌಕೆಗೆ ಪ್ರಯಾಣದ ಸೀಟು ಕಾದಿರಿಸಲು ಮತ್ತು ಅದಕ್ಕೆ ಅಗತ್ಯವಾದ ವಿವಿಧ ರೀತಿಯ ಕಠಿಣ ತರಬೇತಿಯನ್ನು ಶುಭಾಂಶು ಶುಕ್ಲಾ ಅವರಿಗೆ ನೀಡಲು ಭಾರತ ಅಂದಾಜು 500 ಕೋಟಿ ರು. ವ್ಯಯಿಸಿದೆ ಎನ್ನಲಾಗಿದೆ.

 

  ಕಾರ್ಗಿಲ್‌ ಯುದ್ಧ ನೋಡಿ ಶುಕ್ಲಾ ಸೇನೆಗೆ

ಉತ್ತರಪ್ರದೇಶದ ಲಖನೌ ಮೂಲದ ಶುಕ್ಲಾ, 1999ರಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಭಾರತದ ಕಾರ್ಗಿಲ್‌ ಯುದ್ಧದಿಂದ ಪ್ರಭಾವಿತರಾಗಿ ಸೇನೆ ಸೇರಿದರು. ಯುಪಿಎಸ್‌ಸಿಯಲ್ಲಿ ಎನ್‌ಡಿಎ ಪರೀಕ್ಷೆ ಉತ್ತೀರ್ಣರಾದ ಶುಕ್ಲಾ ಬಳಿಕ 2005ರಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮೆಯಿಂದ ಕಂಪ್ಯೂಟರ್ಸ್‌ ಸೈನ್ಸ್‌ನಲ್ಲಿ  ಪದವಿ ಪಡೆದರು. ಬಳಿಕ ಬೆಂಗಳೂರಿನ IISCಯಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಮಾಸ್ಟರ್‌ ಆಫ್‌ ಟೆಕ್ನಾಲಜಿ ಪದವಿ ಪಡೆದರು.

ಬಳಿಕ ಸೇನೆಯಲ್ಲಿ ಫ್ಲೈಯಿಂಗ್‌ ಬ್ರ್ಯಾಂಚ್‌ಗೆ ಸೇರಿದ ಶುಕ್ಲಾರನ್ನು ತರಬೇತಿ ಬಳಿಕ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಪೈಲಟ್‌ ಆಗಿ ನೇಮಿಸಲಾಯಿತು. 2000 ಗಂಟೆಗಳಿಗೂ ಹೆಚ್ಚು ವಿಮಾನ ಹಾರಾಟದ ಅನುಭವ ಹೊಂದಿರುವ ಇವರು ಸುಖೋಯ್‌ 30 MKI, ಮಿಗ್ಗ್ 21, ಮಿಗ್‌ 29, ಜಾಗ್ವಾರ್‌, ಹಾಕ್‌, ಡೋರ್ನಿಯರ್‌ 228, ಎನ್‌ 32 ವಿಮಾನ ಹಾರಿಸಿದ ಅನುಭವ ಹೊಂದಿದ್ಧಾರೆ. 2019ರಲ್ಲಿ ಶುಕ್ಲಾ ಸೇರಿದಂತೆ ಹಲವರನ್ನು ಗಗನಯಾತ್ರಿ ಆಯ್ಕೆ ಪಟ್ಟಿಗೆ ಸೇರಿಸಲಾಗಿತ್ತು. 2020ರಲ್ಲಿ ಅಂತಿಮ ನಾಲ್ವರ ಪಟ್ಟಿಯಲ್ಲಿ ಸ್ಥಾನ ಪಡೆದ ಶುಕ್ಲಾ ಹೆಸರನ್ನು, ಐಎಸ್‌ಎಸ್‌ ಪ್ರಯಾಣದ ವ್ಯಕ್ತಿ ಎಂದು 2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.

 

Kishor KV