ಸಂಜೀವ್ ಗೋಯೆಂಕಾ ಯಾರು? – ಕನ್ನಡಿಗನ ಕೆಣಕಿ ತಪ್ಪು ಮಾಡಿದ್ರಾ?
ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್‌ಜೈಂಟ್ಸ್ ನಡುವಿನ ಪಂದ್ಯದ ನಂತರ, ನಡೆದ ವಿವಾದವೊಂದು ಈಗ ಭಾರಿ ಸೌಂಡ್ ಮಾಡ್ತಾ ಇದೆ.. ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲಿಕ ಸಂಜೀವ್ ಗೊಯೆಂಕಾ, ತಂಡದ ಕ್ಯಾಪ್ಟನ್ ಕೆಎಲ್ ರಾಹುಲ್ ಜೊತೆ ನಡೆದುಕೊಂಡ ರೀತಿ ವಿರುದ್ಧ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಇದೀಗ ಎಂಎಸ್ ಧೋನಿ ಅಭಿಮಾನಿಗಳು ಕೂಡ ಗೊಯೆಂಕಾರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಎಲ್ ಎಸ್ ಜಿ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಯಾರು? ಇವರ ಹಿನ್ನೆಲೆ ಏನು? ಹಾಗೂ ಒಟ್ಟು ಆಸ್ತಿ ಮೌಲ್ಯ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:LSG ನಾಯಕತ್ವಗೆ ಕೆಎಲ್ ಗುಡ್ ಬೈ? – RCB ಗೆ ಬರ್ತಾರಾ ಕೆ.ಎಲ್ ರಾಹುಲ್?
ಮೊನ್ನೆಯಷ್ಟೇ ಹೈದರಾಬಾದ್ ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಎದುರು ಲಕ್ನೋ ಸೂಪರ್ ಜೇಂಟ್ಸ್ ಹೀನಾಯವಾಗಿ ಸೋತಿತ್ತು. ಎಸ್ ಆರ್ ಹೆಚ್ ಸ್ಫೋಟಕ ಆಟಕ್ಕೆ ಕೆಎಲ್ ರಾಹುಲ್ ನೇತೃತ್ವದ ಎಲ್ ಎಸ್ ಜಿ ಚಿಂದಿ ಚಿಂದಿಯಾಗಿತ್ತು. ಆ ಪಂದ್ಯದ ಬಳಿಕ ಮೈದಾನದಿಂದ ಹೊರಗಡೆ ಬರುತ್ತಿದ್ದಂತೆ ನಾಯಕ ಕೆಎಲ್ ರಾಹುಲ್ ಹಾಗೂ ಎಲ್‌ಎಸ್‌ಜಿ ಮಾಲೀಕ ಸಂಜೀವ್ ಗೋಯೆಂಕಾ ದೀರ್ಘಕಾಲ ಸಂಭಾಷಣೆ ನಡೆಸಿದ್ದರು. ಈ ವೇಳೆ ಸಂಜೀವ್, ಕೆಎಲ್ ರಾಹುಲ್ ಅವರಿಗೆ ಕೈ ತೋರಿಸುವ ಮೂಲಕ ಅಸಮಾಧಾನದ ಮಾತುಗಳನ್ನು ಹೇಳುತ್ತಿದ್ದರು. ರಾಹುಲ್ ಮಾತ್ರವಲ್ಲದೆ ತಂಡದ ಹೆಡ್ ಕೋಚ್ ಜಸ್ಟಿನ್ ಲ್ಯಾಂಗರ್ ಅವರನ್ನು ಕೂಡ ಕರೆದು ತಂಡದ ಬಗ್ಗೆ ವಿಚಾರಿಸಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದು ಕ್ರಿಕೆಟ್ ಪ್ರೇಮಿಗಳನ್ನು ಕೆರಳಿ ಕೆಂಡವಾಗುವಂತೆ ಮಾಡಿದೆ.. ಗೊಯೆಂಕಾ, ರಾಹುಲ್ ಮೇಲೆ ಮಾತ್ರ ಸಿಟ್ಟಾಗಿಲ್ಲ.. ಕೆಲ ವರ್ಷಗಳ ಹಿಂದೆ ಎಂಎಸ್ ಧೋನಿ ಜೊತೆಯೂ ಇದೇ ರೀತಿ ವರ್ತಿಸಿದ್ರು.. ಆಗ ಎಂಎಸ್ ಧೋನಿ ಅವರು ಹಿಂದಿನ ಪುಣೆ ರೈಸಿಂಗ್ ಜೇಂಟ್ಸ್ ತಂಡದ ಕ್ಯಾಪ್ಟನ್ ಆಗಿದ್ದರು. ಆ ಸಮಯದಲ್ಲಿ ಪುಣೆ ರೈಸಿಂಗ್ ಜೈಂಟ್ಸ್ ತಂಡದ ಮಾಲೀಕನಾಗಿದ್ದದ್ದು ಇದೇ ಸಂಜೀವ್ ಗೋಯಂಕಾ. ಆಗ ಪುಣೆ ಟೀಂ ಲೀಗ್ ಹಂತದಲ್ಲಿ ಕೆಟ್ಟ ಪ್ರದರ್ಶನ ನೀಡಿದಾಗ ಎಂಎಸ್ ಧೋನಿಯನ್ನು ಕ್ಯಾಪ್ಟನ್ಸಿಯಿಂದ ತೆಗೆದಿದ್ದರು.
ದೊಡ್ಡ ಬಿಸಿನೆಸ್ ಮ್ಯಾನ್ ಸಂಜೀವ್ ಗೋಯಂಕಾ ಕ್ರೀಡಾಪಟುಗಳಿಗೆ ಮರ್ಯಾದೆ ಕೊಡದವರು ಎಂಥ ಶ್ರೀಮಂತ ಆದರೇನು ಎಂದು ಅಭಿಮಾನಿ ಟ್ರೋಲ್ ಮಾಡ್ತಾ ಇದ್ದಾರೆ.. ಸಂಜೀವ್ ಗೋಯಂಕಾ ಹತ್ತಾರು ಕಂಪನಿಗಳ ಒಡೆಯ. ಅವರ ಒಟ್ಡು ಆಸ್ತಿ ಮೌಲ್ಯ ಹೆಚ್ಚೂಕಡಿಮೆ 30,000 ಕೋಟಿ ರೂಪಾಯಷ್ಟಿದೆ.. ಸಂಜೀವ್ ಗೋಯೆಂಕಾ ಅವರು ಗೌರವಾನ್ವಿತ ಗೋಯೆಂಕಾ ಕುಟುಂಬದಲ್ಲಿ ಜನಿಸಿದ್ದರು. ಗೋಯಂಕಾ ಎಂಬುದು ಭಾರತದ ಖ್ಯಾತ ಬಿಸಿನೆಸ್ ಫ್ಯಾಮಿಲಿಗಳಲ್ಲಿ ಒಂದು. ಕೋಲ್ಕತ್ತಾ ಮೂಲದ ಗೋಯೆಂಕಾ ಅವರು 1981ರಲ್ಲಿ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಪಡೆದಿದ್ದರು. ಪ್ರಖ್ಯಾತ ಇಂಟೀರಿಯರ್ ಡಿಸೈನರ್ ಪ್ರೀತಿ ಗೋಯೆಂಕಾ ಅವರನ್ನು ಮದುವೆಯಾಗಿದ್ದ ಅವರಿಗೆ ಶಾಶ್ವತ್ ಮತ್ತು ಅವರ್ನಾ ಎಂಬ ಇಬ್ಬರು ಮಕ್ಕಳಿದ್ದಾರೆ. ಶಾಶ್ವತ್ ಪ್ರಸ್ತುತ ಆರ್‌ಪಿಎಸ್‌ಜಿ ಗ್ರೂಪ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ತಂದೆಯ ಹಾದಿಯನ್ನೇ ಅನುಸರಿಸುತ್ತಿದ್ದಾರೆ. 2011ರಲ್ಲಿ ಕುಟುಂಬದ ವ್ಯವಹಾರಗಳ ವಿಭಜನೆಯ ನಂತರ ಗೋಯೆಂಕಾ ಆರ್‌ಪಿಎಸ್‌ಜಿ (RPSG) ಸಂಸ್ಥೆಯನ್ನು ಕಟ್ಟಿದರು.
ಇಂಡಿನ್ ಎಕ್ಸ್ಪ್ರೆಸ್, ಕನ್ನಡಪ್ರಭ ಇತ್ಯಾದಿ ಮಾಧ್ಯಮಗಳನ್ನು ಆರಂಭಿಸಿದ್ದು ಇದೇ ಗೋಯಂಕಾ ಫ್ಯಾಮಿಲಿ. ಮಾಧ್ಯಮ, ವಿದ್ಯುತ್, ಐಟಿ, ಕ್ರೀಡೆ, ಶಿಕ್ಷಣ, ಇನ್ಫ್ರಾಸ್ಟ್ರಕ್ಚರ್, ಕಾರ್ಬನ್ ಬ್ಲ್ಯಾಕ್, ರೀಟೇಲ್ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಅವರ ಕಂಪನಿಗಳು ವ್ಯವಹಾರ ಹೊಂದಿವೆ. 2023ರಲ್ಲಿ ಈ ಸಂಸ್ಥೆಯು 32,000 ಕೋಟಿ ರೂಪಾಯಿಗಿಂತ ಹೆಚ್ಚಿನ ಆದಾಯವನ್ನು ಗಳಿಸಿದೆ. ಕೋಲ್ಕತಾ ಮೂಲದ ಸಂಜೀವ್ ಗೋಯಂಕಾ ವಿದ್ಯುತ್ ಕ್ಷೇತ್ರದಲ್ಲಿ ಹಿಡಿತ ಹೊಂದಿದ್ದಾರೆ. ಇವರ ಪೂರ್ವಿಕರ ಪ್ರಮುಖ ವ್ಯವಹಾರವೇ ಈ ಕ್ಷೇತ್ರದಲ್ಲಿತ್ತು. 19ನೇ ಶತಮಾನದ ಕೊನೆಯಿಂದ ಹಿಡಿದು ಇಲ್ಲಿಯವರೆಗೆ ಕೋಲ್ಕತಾಗೆ ವಿದ್ಯುತ್ ವಿತರಣೆ ಮಾಡುತ್ತಿರುವ ಸಿಇಎಸ್ ಸಿ ಕಂಪನಿ ಇವರ ಆರ್ ಪಿಎಸ್ ಜಿ ಗ್ರೂಪ್ ಗೆ ಸೇರಿದ್ದಾಗಿದೆ. ಸಿಪಿಎಲ್, ಐಸಿಎಂಎಲ್, ಡಿಐಎಲ್ ಇತ್ಯಾದಿ ಕಂಪನಿಗಳು ವಿದ್ಯುತ್ ಉತ್ಪಾದನೆ ಮತ್ತು ವಿತರಣೆಯ ಸೇವೆಯಲ್ಲಿವೆ.
ನೇಚರ್ಸ್ ಬ್ಯಾಸ್ಕೆಟ್ನಿಂದ ಹಿಡಿದು ಸ್ಪೆನ್ಸರ್ಸ್ ರೀಟೇಲ್ವರೆಗೆ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಇವರ ಮಾಲಕತ್ವದ ಕಂಪನಿಗಳಿವೆ. ಮೋಹನ್ ಬಗಾನ್ ಫುಟ್ಬಾಲ್ ತಂಡ, ಲಕ್ನೋ ಸೂಪರ್ ಜೈಂಟ್ಸ್ ಕ್ರಿಕೆಟ್ ತಂಡ, ಸೌತ್ ಆಫ್ರಿಕಾದ ಡರ್ಬನ್ ಸೂಪರ್ ಜೇಂಟ್ಸ್ ಕ್ರಿಕೆಟ್ ತಂಡ ಇದೇ ಆರ್ಪಿಎಸಿಜಿ ಗ್ರೂಪ್ ನದ್ದಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡವನ್ನು ಖರೀದಿಸಲು ಗೋಯೆಂಕಾ ಅವರು 7,000 ಕೋಟಿ ರೂ. ಗಳಿಗೂ ಹೆಚ್ಚು ಬಿಡ್ ಮಾಡಿದ್ದರು. ಇನ್ನು ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋತರೂ ಎಲ್‌ಎಸ್‌ಜಿ ಪ್ರಸಕ್ತ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದೆ. 6 ಪಂದ್ಯಗಳನ್ನು ಗೆದ್ದಿರುವ ಲಖನೌ ಇನ್ನುಳಿದ ಎರಡೂ ಪಂದ್ಯಗಳಲ್ಲಿ ಗೆದ್ದರೆ ಪ್ಲೇಆಫ್‌ಗೆ ಪ್ರವೇಶಿಸುವ ಅವಕಾಶ ಇದ್ದೇ ಇದೆ. ಆದ್ರೆ ಒಂದು ಮ್ಯಾಚ್ ಸೋತಿದ್ದಕ್ಕೆ ಕ್ಯಾಪ್ಟನ್ ನ ಕರೆದು ಮಾಲೀಕ ಬೈತಾರೆ ಅಂತಾದ್ರೆ ಆ ಮಾಲೀಕನ ದರ್ಪ ಅದೆಷ್ಟಿರಬೇಡ ಹೇಳಿ..ಮಾಲೀಕರು ತಂಡದ ಮೇಲೆ ಹೂಡಿಕೆ ಮಾಡ್ತಾರೆ ನಿಜ. ಆದರೆ ಆಟಗಾರರು ಇದ್ರೆ ಮಾತ್ರ ಟೀಂ ಆಗೋದು ಅನ್ನುವ ವಾಸ್ತವ ಇಂತಾ ಮಾಲೀಕರಿಗೂ ಗೊತ್ತಿರಬೇಕು.. ಸಂಜೀವ್ ಗೋಯೆಂಕಾರಂತಹ ಮಾಲೀಕರು ಆರ್ ಸಿ ಬಿಯನ್ನು ನೋಡಿ ಕಲೀಬೇಕು.