ಮಂಡ್ಯದಲ್ಲಿ ದಳ ಅಭ್ಯರ್ಥಿ ಯಾರು..? – ಬಿಜೆಪಿ ಟಿಕೆಟ್ ಸಿಗದ ಸಿಟ್ಟಲ್ಲಿರೋ ಸುಮಲತಾ ಸುಮ್ಮನಿರ್ತಾರಾ?

ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳು ಪ್ರಚಾರ ಆರಂಭಿಸಿದ್ರೂ ಮಂಡ್ಯ ಕ್ಷೇತ್ರ ಮಾತ್ರ ಕಗ್ಗಂಟಾಗೇ ಉಳಿದಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಯ್ಕೆಯ ಗೊಂದಲ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಒಂದ್ಕಡೆ ಮಂಡ್ಯ ಜೆಡಿಎಸ್ ಪಾಲಾಗಿದ್ದು ದಳ ಅಭ್ಯರ್ಥಿಯೇ ಕಣಕ್ಕಿಳಿಯುತ್ತಾರೆ. ಅದೂ ಕೂಡ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಎಂದು ಬಾರೀ ಚರ್ಚೆಯಾಗ್ತಿದೆ. ಮತ್ತೊಂದೆಡೆ ಹಾಲಿ ಸಂಸದೆ ಸುಮಲತಾ ಬಿಜೆಪಿಯಿಂದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲೇ ಸ್ಪರ್ಧಿಸುವ ಪಟ್ಟುಹಿಡಿದಿದ್ದಾರೆ. ತಮ್ಮ ಅವಧಿ ಮುಗಿದ ಬಳಿಕ ಬಿಜೆಪಿ ಸೇರುವ ಭರವಸೆ ನೀಡಿರುವ ಸಂಸದೆ ಸುಮಲತಾ ರಾಜ್ಯ ಬಿಜೆಪಿ ನಾಯಕರಿಗೆ ನುಂಗಲಾರದ ಬಿಸಿತುಪ್ಪವಾಗಿದ್ದಾರೆ. ಇದೇ ಕಾರಣಕ್ಕೆ ಬಿಜೆಪಿ ನಾಯಕರು ಸುಮಲತಾರನ್ನ ಸೈಲೆಂಟಾಗಿ ಸೈಡ್ಲೈನ್ ಮಾಡ್ತಿದ್ದಾರೆ. ಮತ್ತೊಂದೆಡೆ ಮಂಡ್ಯದಲ್ಲಿ ಹೆಚ್ಡಿಕೆ ಸ್ಪರ್ಧೆಗೆ ಜೆಡಿಎಸ್ ಪಾಳಯದಲ್ಲೇ ವಿರೋಧ ವ್ಯಕ್ತವಾಗಿದೆ. ಹಾಗಾದ್ರೆ ಮಂಡ್ಯದಲ್ಲಿ ದಳ ಅಭ್ಯರ್ಥಿ ಯಾರು..? ಬಿಜೆಪಿ ಟಿಕೆಟ್ ಸಿಗದ ಸಿಟ್ಟಲ್ಲಿರೋ ಸುಮಲತಾ ಸುಮ್ಮನಿರ್ತಾರಾ? ಜೆಡಿಎಸ್ ಪಾಳಯದಲ್ಲಿ ಏನಾಗ್ತಿದೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಅಭಿಮಾನಿಗಳಿಗೆ ಬೇಸರ ತಂದ ವಿರಾಟ್ ಕೊಹ್ಲಿ ಕೈ ಸನ್ನೆ – RCB ಸ್ಟಾರ್ ಆಟಗಾರ ಮಾಡಿದ್ದು ಸರಿನಾ?
ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿ ಬಿಜೆಪಿಗೆ 25 ಕ್ಷೇತ್ರ.. ಜೆಡಿಎಸ್ ಗೆ 3 ಕ್ಷೇತ್ರ ಎಂದು ಘೋಷಣೆಯಾಗಿದೆ. ಜೆಡಿಎಸ್ಗೆ ಸಿಕ್ಕಿರುವ ಮೂರು ಕ್ಷೇತ್ರಗಳಲ್ಲಿ ಮಂಡ್ಯ ಕೂಡ ಒಂದಾಗಿದೆ. ಯಾಕೆಂದರೆ ಮಂಡ್ಯದಲ್ಲಿ ಜೆಡಿಎಸ್ ಪ್ರಾಬಲ್ಯವಿರುವ ಕಾರಣ ಗೆಲುವು ಸುಲಭ ಎನ್ನುವ ಲೆಕ್ಕಾಚಾರದಲ್ಲಿ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದೆ. ಆದರೆ ಕ್ಷೇತ್ರದ ಸಂಸದೆ ಸುಮಲತಾ ಬಿಜೆಪಿ ಟಿಕೆಟ್ಗಾಗಿ ಪಟ್ಟು ಹಿಡಿದು ಕುಳಿತಿದ್ದಾರೆ. ಬಿಜೆಪಿ ಹೈಕಮಾಂಡ್ ನಾಯಕರನ್ನೇ ನೇರವಾಗಿ ಭೇಟಿಯಾಗಿ ಟಿಕೆಟ್ಗಾಗಿ ಒತ್ತಡ ಹೇರುತ್ತಿದ್ದಾರೆ. ಸುಮಲತಾಗೆ ಟಿಕೆಟ್ ನೀಡಬೇಕೋ ಬೇಡವೋ ಎನ್ನುವ ಗೊಂದಲದಲ್ಲಿ ಬಿಜೆಪಿ ಹೈಮಾಂಡ್ ಇದ್ದರೆ, ಇತ್ತ ಸುಮಲತಾಗೆ ಟಿಕೆಟ್ ನೀಡಿದರೆ ಅವರು ಸೋಲುತ್ತಾರೆ ಎನ್ನುವ ಆಂತರಿಕ ವರದಿ ಬಿಜೆಪಿ ಕೈ ಸೇರಿದೆ.
ಸುಮಲತಾ ಸೋಲುತ್ತಾರೆ!
2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಸುಮಲತಾ, ಬಳಿಕ ಬಿಜೆಪಿಯತ್ತ ಒಲವು ತೋರಿದ್ದರು. ಆದ್ರೆ ಹೈಕಮಾಂಡ್ ಮಟ್ಟದಲ್ಲಿ ಸುಮಲತಾ ಬಿಜೆಪಿ ವರಿಷ್ಠರ ವಿಶ್ವಾಸ ಗೆದ್ದಿದ್ದು ಬಿಟ್ರೆ ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನಕ್ಕೆ ಮುಂದಾಗಲೇ ಇಲ್ಲ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ ನಡ್ಡಾ ಮಟ್ಟದಲ್ಲೇ ಲಾಬಿ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಮುಂಚೂಣಿಯಲ್ಲಿರುವ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅಥವಾ ವಿಪಕ್ಷ ನಾಯಕ ಆರ್.ಅಶೋಕ್ ಅವರನ್ನು ಭೇಟಿ ಮಾಡಿ ಮಾತನಾಡುವ, ಟಿಕೆಟ್ಗಾಗಿ ಚರ್ಚಿಸುವ ಯಾವ ಕೆಲಸವನ್ನೂ ಸಹ ಮಾಡಿಲ್ಲ. ಹೀಗಾಗಿ ಸುಮಲತಾಗೆ ಟಿಕೆಟ್ ನೀಡಿದರೆ ಬಿಜೆಪಿ ನಾಯಕರು ಒಗ್ಗಟ್ಟಾಗಿ ಅವರ ಪರ ಪ್ರಚಾರಕ್ಕೆ ಇಳಿಯುತ್ತಾರಾ ಎನ್ನುವುದು ಕೂಡ ಬಿಜೆಪಿ ಹೈಕಮಾಂಡ್ಗೆ ಪ್ರಶ್ನೆಯಾಗಿದೆ. ಅಲ್ದೇ ಕ್ಷೇತ್ರಗಳ ಆಂತರಿಕ ಸಮೀಕ್ಷೆ ವೇಳೆ ಸುಮಲತಾ ಸೋಲುತ್ತಾರೆ ಎಂಬ ವರದಿ ಬಿಜೆಪಿ ಕೈಸೇರಿದೆ. ಇದೇ ಕಾರಣಕ್ಕೆ ಸುಮಲತಾಗೆ ಟಿಕೆಟ್ ನೀಡಲು ಹಿಂದೇಟು ಹಾಕ್ತಿದ್ದಾರೆ.
ಹೀಗೆ ಸುಮಲತಾಗೆ ಒಂದ್ಕಡೆ ಟಿಕೆಟ್ ಸಿಕ್ಕಿಲ್ಲ. ಮತ್ತೊಂದೆಡೆ ಸೋಲುತ್ತಾರೆ ಅನ್ನೋ ವರದಿ ರಾಜಕೀಯ ಮಟ್ಟದಲ್ಲಿ ಭಾರೀ ಚರ್ಚೆಯಾಗ್ತಿದೆ. ಸುಮಲತಾ ಮಾತ್ರ ಬ್ಯಾಕ್ ಟು ಬ್ಯಾಕ್ ಡೆಲ್ಲಿಗೆ ವಿಸಿಟ್ ಕೊಟ್ಟು ಟಿಕೆಟ್ಗಾಗಿ ಡಿಮ್ಯಾಂಡ್ ಮಾಡ್ತಾನೇ ಇದ್ದಾರೆ. ಆದ್ರೆ ಟಿಕೆಟ್ ಸಿಗದೇ ಇದ್ರೂ ಮಂಡ್ಯದಿಂದಲೇ ಸ್ಪರ್ಧೆ ಅನ್ನುತ್ತಿರೋದು ಭಾರಿ ಕುತೂಹಲ ಮೂಡಿಸಿದೆ. ಮತ್ತೊಂದೆಡೆ ಮಂಡ್ಯಕ್ಕೆ ಹೆಚ್ಡಿಕೆ ಸ್ಪರ್ಧಿಸ್ತಾರಾ ಅಥವಾ ನಿಖಿಲ್ ಸ್ಪರ್ಧೆನಾ ಅನ್ನೋದು ಇನ್ನೂ ಸಸ್ಪೆನ್ಸ್ ಆಗೇ ಇದೆ.
ಮಂಡ್ಯಕ್ಕೆ ಅಪ್ಪನಾ.. ಮಗನಾ?
ಹೆಚ್ ಡಿ ಕುಮಾರಸ್ವಾಮಿ ಶಾಸಕರಾಗಿರುವ ಚನ್ನಪಟ್ಟಣ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸಭೆ ನಡೆಸಿದ್ದಾರೆ. ಈ ವೇಳೆ ನಿಖಿಲ್ಗೆ ಜೆಡಿಎಸ್ ಕಾರ್ಯಕರ್ತರೇ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರು ಮಂಡ್ಯದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಎಂಬ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ರು. ಹೆಚ್ಡಿಕೆಯಾವುದೇ ಕಾರಣಕ್ಕೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಬಿಟ್ಟು ಹೋಗುವುದು ಬೇಡ ಅಂತ ಪಟ್ಟು ಹಿಡಿದಿದ್ರು. ಈ ವೇಳೆ ಮಾತನಾಡಿದ ನಿಖಿಲ್, ಹಲವು ವರ್ಷಗಳಿಂದ ಚನ್ನಪಟ್ಟಣದಲ್ಲಿ ನಮ್ಮ ಕಾರ್ಯಕರ್ತರು ನೋವನ್ನ ಅನುಭವಿಸಿದ್ರು. ಹಾಗಾಗಿ ನಾಲ್ಕು ಬಾರಿ ರಾಮನಗರದಲ್ಲಿ ಸ್ಪರ್ಧಿಸಿದ್ರೂ ಕೂಡಾ ಚನ್ನಪಟ್ಟಣಕ್ಕೆ ಬಂದ್ರು. ಇಲ್ಲಿನ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಪಡೆಯಬೇಕು. ಎಲ್ಲರ ಜೊತೆ ಕೂತು ಚರ್ಚೆ ಮಾಡಿ ಅಂತಿಮ ತೀರ್ಮಾನ ಮಾಡ್ತೇವೆ. ಅತ್ತ ಮಂಡ್ಯ ಜಿಲ್ಲೆ ಜನತೆ ಅವರ ಮೇಲೆ ಪ್ರೀತಿ, ಭರವಸೆ ಇಟ್ಟಿದ್ದಾರೆ. ಹೀಗಾಗಿ ಚನ್ನಪಟ್ಟಣ, ರಾಮನಗರ ಜನರ ಅಭಿಪ್ರಾಯ ಪಡೆದ ಬಳಿಕ ಪಕ್ಷ ತೀರ್ಮಾನ ಮಾಡುತ್ತೆ ಅಂತ ಎಂದಿದ್ದಾರೆ.
ಸದ್ಯ ಹಾರ್ಟ್ ಆಪರೇಷನ್ಗೆ ಒಳಗಾಗಿರುವ ಹೆಚ್ಡಿಕೆ ಆಸ್ಪತ್ರೆಯಲ್ಲಿದ್ದು, ಭಾನುವಾರ ಡಿಸ್ಚಾರ್ಜ್ ಆಗಲಿದ್ದಾರೆ. ಬಳಿಕ ಅಭ್ಯರ್ಥಿಗಳ ಘೋಷಣೆ ಮಾಡಲಿದ್ದಾರೆ. ಒಟ್ಟಾರೆ ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಸ್ಪರ್ಧೆಗೆ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ ಕೊನೇ ಕ್ಷಣದಲ್ಲಿ ಯಾರು ಸ್ಪರ್ಧೆ ಮಾಡಬಹುದು ಅನ್ನೋದು ಇನ್ನೂ ನಿಗೂಢವಾಗೇ ಇದೆ. ಮತ್ತೊಂದೆಡೆ ಸಂಸದೆ ಸುಮಲತಾ ಬಿಜೆಪಿ ಟಿಕೆಟ್ ಸಿಗದಿದ್ರೆ ಪಕ್ಷೇತರವಾಗಿ ಸ್ಪರ್ಧೆ ಮಾಡಬೇಕೋ, ಬೇಡ್ವೋ ಅನ್ನೋ ಗೊಂದಲದಲ್ಲೇ ಇದ್ದಾರೆ.