ಸ್ವತಂತ್ರ್ಯ ಅಭ್ಯರ್ಥಿಯಾಗಿ ಯುದ್ಧ ಸಾರಿದ್ರಾ ಸುಮಲತಾ..? – ಪ್ರಚಾರಕ್ಕೆ ಬರುವ ನಾಲ್ವರು ಸ್ಟಾರ್ಸ್ ಯಾರು..?

ಸ್ವತಂತ್ರ್ಯ ಅಭ್ಯರ್ಥಿಯಾಗಿ ಯುದ್ಧ ಸಾರಿದ್ರಾ ಸುಮಲತಾ..? – ಪ್ರಚಾರಕ್ಕೆ ಬರುವ ನಾಲ್ವರು ಸ್ಟಾರ್ಸ್ ಯಾರು..?

ಸುಮಲತಾ ಅಂಬರೀಶ್ ಹಠ.. ಮೈತ್ರಿ ಹಗ್ಗಜಗ್ಗಾಟದಿಂದ ಮಂಡ್ಯ ಅಖಾಡ ದಿನದಿನಕ್ಕೂ ಕಗ್ಗಂಟಾಗ್ತಾನೇ ಹೋಗ್ತಿದೆ. ಇಬ್ಬರ ಜಗಳದಲ್ಲಿ ಮೂರನೇಯವನಿಗೆ ಲಾಭ ಎನ್ನುವಂತೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಈಗಾಗ್ಲೇ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಕ್ಷೇತ್ರದಲ್ಲಿ ಪ್ರಚಾರದ ಭರಾಟೆ ಆರಂಭಿಸಿದ್ದಾರೆ. ಇಷ್ಟು ದಿನ ಹೋದಲ್ಲಿ ಬಂದಲ್ಲೆಲ್ಲಾ ಬಿಜೆಪಿ ಟಿಕೆಟ್ ಸಿಗುತ್ತೆ ಅಂತಿದ್ದ ಸುಮಲತಾಗೆ ಕೊನೆಗೂ ಜ್ಞಾನೋದಯವಾದಂತಿದೆ. ಮಂಡ್ಯದ ಮೈತ್ರಿ ಟಿಕೆಟ್ ಜೆಡಿಎಸ್ ಪಾಲಾಗಿದ್ದು, ಸುಮಲತಾ ಪಕ್ಷೇತರವಾಗಿ ಕಣಕ್ಕಿಳಿಯೋದು ಫೈನಲ್ ಆಗಿದೆ. ಜೊತೆ ಜೊತೆಗೆ ಮತದಾರರ ಮನ ಗೆಲ್ಲೋಕೆ ಸ್ಯಾಂಡಲ್ ವುಡ್ ಸ್ಟಾರ್​ಗಳ ದಂಡೇ ಅಖಾಡಕ್ಕಿಳಿಸಲು ಸುಮಲತಾ ಭರ್ಜರಿ ಪ್ಲ್ಯಾನ್ ಮಾಡಿದ್ದಾರೆ. ದರ್ಶನ್, ಯಶ್ ಮಾತ್ರವಲ್ಲದೆ ಇನ್ನೂ ನಾಲ್ವರು ಸ್ಟಾರ್ಸ್ ಪ್ರಚಾರಕ್ಕೆ ಬರ್ತಾರೆ ಅಂತಾ ಅಭಿಷೇಕ್ ಅಂಬರೀಶ್ ಜಿದ್ದಾಜಿದ್ದಿನ ಹೋರಾಟದ ಬಗ್ಗೆ ಸುಳಿವು ನೀಡಿದ್ದಾರೆ. ಹಾಗಾದ್ರೆ ಸ್ವತಂತ್ರ್ಯ ಅಭ್ಯರ್ಥಿಯಾಗಿ ಯುದ್ಧ ಸಾರಿದ್ರಾ ಸುಮಲತಾ..? ಪ್ರಚಾರಕ್ಕೆ ಬರುವ ನಾಲ್ವರು ಸ್ಟಾರ್ಸ್ ಯಾರು..? ಇದ್ರಿಂದ ಮೈತ್ರಿಗೆ ಎಫೆಕ್ಟ್ ಆಗುತ್ತಾ..? ಈ ಬಗೆಗಿನ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ಹೆಚ್‌.ಡಿ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಾಯ! – ಯೂ ಟರ್ನ್ ಹೊಡೆದ ಸುಮಲತಾ?

2019ರ ಲೋಕಸಭಾ ಚುನಾವಣೆ ವೇಳೆ ಮಂಡ್ಯ ಅಖಾಡ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಅದಕ್ಕೆ ಕಾರಣ ಬರೀ ಸುಮಲತಾ ಅಂಬರೀಶ್ ಸ್ಪರ್ಧೆ ವಿಚಾರ ಮಾತ್ರ ಆಗಿರಲಿಲ್ಲ. ಸುಮಲತಾ ಪರ ಸ್ಯಾಂಡಲ್​ವುಡ್ ಮೇರುನಟರಾದ ದರ್ಶನ್ ಮತ್ತು ಯಶ್ ಕೂಡ ಜೋಡೆತ್ತುಗಳಂತೆ ಬಲ ತುಂಬಿದ್ದರು. ಇಡೀ ಜಿಲ್ಲೆಯಲ್ಲಿ ಮಿಂಚಿನ ಸಂಚಾರ ನಡೆಸಿ ಪ್ರಚಾರ ಮಾಡಿದ್ದರು. ಸ್ಟಾರ್ ನಟರ ಕ್ಯಾಂಪೇನ್ ಕೂಡ ಸುಮಲತಾ ಗೆಲುವಿಗೆ ಸಾಕ್ಷಿಯಾಗಿತ್ತು. ಇದೇ ಕಾರಣಕ್ಕೆ ಈ ಬಾರಿಯೂ ಸುಮಲತಾ ಪರ ಸ್ಟಾರ್​ಗಳನ್ನೇ ಕಣಕ್ಕಿಳಿಸೋಕೆ ರಣತಂತ್ರ ರೆಡಿಯಾಗಿದೆ. ಖುದ್ದು ಸಂಸದೆ ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಮತಬೇಟೆ ಬಗೆಗಿನ ರೋಚಕ ಕಹಾನಿಯನ್ನ ರಿವೀಲ್ ಮಾಡಿದ್ದಾರೆ.

ಸುಮಲತಾ ಅಂಬರೀಶ್ ಪರ ಈ ಬಾರಿ ಯಶ್ ಹಾಗೂ ದರ್ಶನ್ ಜೊತೆ ಮತ್ತೆ ನಾಲ್ವರು ಸ್ಟಾರ್ ನಟರು ಪ್ರಚಾರ ಮಾಡಲಿದ್ದಾರೆ ಎಂದು ಅಭಿಷೇಕ್ ಅಂಬರೀಶ್ ಹೇಳಿದ್ದಾರೆ. ಚುನಾವಣೆಯಲ್ಲಿ ಅಂಬರೀಶ್ ಅಭಿಮಾನಿಗಳು ಒಗ್ಗಟ್ಟಾಗಿ ಅಮ್ಮನಿಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.  ಈ ಮೂಲಕ ಸುಮಲತಾ ಮತ್ತೊಮ್ಮೆ ಮಂಡ್ಯದಿಂದಲೇ ಸ್ಪರ್ಧಿಸೋದು ಫಿಕ್ಸ್ ಎಂಬ ಸುಳಿವು ನೀಡಿದ್ದಾರೆ. ಆದ್ರೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವ ನಾಲ್ವರು ನಟರ ಹೆಸರನ್ನು ಬಹಿರಂಗ ಪಡಿಸಲು ನಿರಾಕರಿಸಿದ ಅಭಿಷೇಕ್ ಮುಂದೆ ಗೊತ್ತಾಗುತ್ತೆ ಎನ್ನುವ ಮೂಲಕ ಸಸ್ಪೆನ್ಸ್ ಕಾಯ್ದಿರಿಸಿದ್ದಾರೆ. ಅಂಬರೀಶ್ ಕುಟುಂಬಕ್ಕೆ ಅತ್ಯಾಪ್ತರಾಗಿರುವ ದರ್ಶನ್ ಕೂಡ ಪ್ರಚಾರಕ್ಕೆ ಹೋಗೋದಾಗಿ ತಿಳಿಸಿದ್ದಾರೆ. ಸುಮಲತಾ ಅವರು ನಮ್ಮ ಅಮ್ಮ, ಅವರ ಜೊತೆ ನಾನು ಯಾವಾಗಲೂ ಇರುತ್ತೇನೆ. ಹೆತ್ತ ತಾಯಿಯನ್ನು ಎಂದಾದರೂ ಬಿಟ್ಟು ಕೊಡಲಿಕ್ಕಾಗುತ್ತದೆಯೇ, ಮೊನ್ನೆಯವರೆಗೂ ಸುಮಲತಾ ಅಮ್ಮನ ಜೊತೆ ಇದ್ದೆ. ಈಗ ಅವರ ಕೈಬಿಟ್ಟರೆ ಆಗುತ್ತದೆಯೇ..? ಬೇರೆಯವರಿಗಾಗಿ ಅಮ್ಮನನ್ನು ಬಿಡೋಕಾಗುತ್ತಾ? ಎಂದು ಪ್ರಶ್ನಿಸಿದ್ದಾರೆ.

ಕಳೆದೊಂದು ವರ್ಷದಿಂದ ಬಿಜೆಪಿ ಜಪ ಮಾಡ್ತಿದ್ದ ಸುಮಲತಾ ಕೊನೆಗೂ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯೋ ತೀರ್ಮಾನ ಮಾಡಿದ್ದಾರೆ. ಆದ್ರೆ ಮಂಡ್ಯ ಅಖಾಡದ ರಾಜಕೀಯ ಕಳೆದ ಬಾರಿಯಂತಿಲ್ಲ. 2019ರ ಚುನಾವಣೆಯಲ್ಲಿ ಸುಮಲತಾಗೆ ಎಲ್ಲರ ಬೆಂಬಲ ಸಿಕ್ಕಿತ್ತು. ಬಿಜೆಪಿ ನಾಯಕರು ಬಹಿರಂಗವಾಗೇ ಸುಮಲತಾ ಪರ ನಿಂತಿದ್ರೆ ಕಾಂಗ್ರೆಸ್ ನಾಯಕರು ಒಳಗೊಳಗೇ ಸಾಥ್ ನೀಡಿದ್ದರು. ಅಂಬರೀಶ್ ನಿಧನದ ಅನುಕಂಪವೂ ಸಿಕ್ಕಿತ್ತು. ಹೀಗಾಗಿ ಸುಮಲತಾ ಗೆಲುವು ಸುಲಭವಾಗಿತ್ತು. ಹೀಗೆ ಪಕ್ಷೇತರವಾಗಿ ಗೆದ್ದ ಸುಮಲತಾಗೆ ಬಿಜೆಪಿಗೆ ಬೆಂಬಲ ನೀಡಿದ್ದೇಕೆ..? ಬಿಜೆಪಿ ಟಿಕೆಟ್ ಅನಿವಾರ್ಯವಾಗಿತ್ತಾ ಅನ್ನೋ ಪ್ರಶ್ನೆಯೂ ಮೂಡಿದೆ.

ಸುಮಲತಾ ಅಂಬರೀಶ್ ಅವರು ಹಾಲಿ ಸಂಸದರಾಗಿದ್ದಾರೆ. ಅವರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ ಜೊತೆಗೆ ಬಿಜೆಪಿಗೆ ಬೆಂಬಲ ನೀಡಿದ್ದಾರೆ ವಿನಃ ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ. ಹೀಗಾಗಿ ಅವರಿಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಟಿಕೆಟ್‌ ಅನಿವಾರ್ಯವೇ ಎನ್ನುವ ಪ್ರಶ್ನೆ ಕಾಡುತ್ತಿದೆ. 2019ರಲ್ಲಿ ಮಂಡ್ಯದಲ್ಲಿ ನಡೆದ ಲೋಕಸಭಾ ಚುನಾವಣೆ ಬರೀ ಚುನಾವಣೆಯಾಗಿ ಉಳಿದಿರಲಿಲ್ಲ. ಅದು ರಾಜಕೀಯ ಮತ್ತು ಸ್ವಾಭಿಮಾನದ ಯುದ್ಧವಾಗಿ ಬಿಂಬಿತವಾಗಿತ್ತು. ಸುಮಲತಾ ಅವರು ಮಂಡ್ಯದಿಂದ ಸ್ಪರ್ಧಿಸಲೇಬೇಕೆಂಬ ಒತ್ತಾಸೆ ಮಂಡ್ಯದ ಜನರದ್ದಾಗಿತ್ತು. ಹಾಗೂ ಅಂಬರೀಶ್ ಅವರ ನಿಧನದ ಅನುಕಂಪ ಇಡೀ ಜಿಲ್ಲೆಯನ್ನಾವರಿಸಿತ್ತು. ಒಬ್ಬ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಐದು ವರ್ಷಗಳ ಕಾಲ ಸಂಸದರಾಗಿ ಕೆಲಸ ಮಾಡಿದವರು ಇವತ್ತು ಬಿಜೆಪಿ ನಾಯಕರ ಮುಂದೆ ಟಿಕೆಟ್ ಗಾಗಿ ಕೈಯೊಡ್ಡಿ ನಿಲ್ಲಬೇಕಾ? ಎಂಬ ಬಗ್ಗೆ ಬಾರೀ ಚರ್ಚೆಯಾಗ್ತಿದೆ. ಆದರೆ ಸುಮಲತಾ ಮುಂದಿನ ರಾಜಕೀಯ ನಡೆಗೆ ಬಿಜೆಪಿ ಬೆಂಬಲ ಅಗತ್ಯ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹತ್ತಿರವಾದ ಸುಮಲತಾ ತಮ್ಮ ಬೆಂಬಲವನ್ನು ಬಿಜೆಪಿಗೆ ನೀಡಿದ್ದರು. ಅದರ ಪರಿಣಾಮ ಮಂಡ್ಯದಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಾಗದೆ ಹೋದರೂ ಜೆಡಿಎಸ್‌ ಅನ್ನು ಸೋಲಿಸಲು ದಾರಿ ಮಾಡಿಕೊಟ್ಟಿತು. ಆದ್ರೆ 2024ರ ವೇಳೆಗೆ ಬದ್ಧ ವೈರಿಗಳಾಗಿರುವ ಜೆಡಿಎಸ್ ಬಿಜೆಪಿ ಜೊತೆಗೆ ಕೈಜೋಡಿಸುತ್ತದೆ ಎಂದು ಸುಮಲತಾ ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಹೀಗಾಗಿ ಬಿಜೆಪಿಗೆ ಬೆಂಬಲ ನೀಡಿ ಆ ಪಕ್ಷದೊಂದಿಗೆ ಗುರುತಿಸಿಕೊಂಡರೆ ತಮ್ಮ ಹಾದಿ ಸುಗಮ ಎಂದೇ ನಂಬಿದ್ದರು. ಆದರೆ ಆಗಿದ್ದೇ ಬೇರೆ. ಜೆಡಿಎಸ್ ಬಿಜೆಪಿ ಜತೆ ಕೈಜೋಡಿಸಿದೆ. ಈಗಿನ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ ಸುಮಲತಾ ಅವರಿಗೆ ಬಿಜೆಪಿಗೆ ಬೆಂಬಲ ನೀಡಿದ್ದೇ ತಪ್ಪಾಯಿತಾ? ಎಂಬ ಭಾವನೆ ಮೂಡಿದ್ದರೂ ಅಚ್ಚರಿಯಿಲ್ಲ.

ಹೀಗೆ ಬಿಜೆಪಿಗೆ ಬೆಂಬಲ ನೀಡಿ ಅಡಕತ್ತರಿಯಲ್ಲಿ ಸಿಲುಕಿರುವ ಸುಮಲತಾ ಅಂಬರೀಶ್​ಗೆ ಪಕ್ಷೇತರ ಸ್ಪರ್ಧೆಯೊಂದೇ ಆಯ್ಕೆಯಾಗಿ ಉಳಿದಿದೆ. ಅಲ್ಲದೆ ಕ್ಷೇತ್ರದಲ್ಲಿ ವಿರೋಧಿ ಅಲೆ ಇರೋದ್ರಿಂದ ಮತ್ತೊಮ್ಮೆ ಜನರನ್ನ ಒಲಿಸೋ ಕೆಲಸ ಮಾಡಬೇಕಿದೆ. ಇದೇ ಕಾರಣಕ್ಕೆ ಸ್ಟಾರ್ ಪ್ರಚಾರಕರನ್ನು ಕಣಕ್ಕಿಳಿಸೋಕೆ ತಯಾರಿ ನಡೀತಿದೆ. ಹೀಗಾಗಿ ಮಂಡ್ಯ ಅಖಾಡ ಮತ್ತೊಮ್ಮೆ ರಣರಂಗವಾಗಲಿದೆ.

 

Sulekha