ನೂತನ ಮೆಟ್ರೋ ಮಾರ್ಗ ಉದ್ಘಾಟನೆಗೆ ಕೌಂಟ್ಡೌನ್ – ಪ್ರಯಾಣಿಕರಿಗೆ ಏನೆಲ್ಲಾ ಸೌಲಭ್ಯಗಳಿವೆ ಗೊತ್ತಾ..?
ರಾಜಧಾನಿ ಬೆಂಗಳೂರಿನ ನಿವಾಸಿಗಳಿಗೆ ಬಹುದೊಡ್ಡ ಕಿರಿಕಿರಿ ಅಂದರೆ ಅದು ಟ್ರಾಫಿಕ್ ಜಾಮ್. ಗುಂಡಿಬಿದ್ದ ರಸ್ತೆ, ಸಿಗ್ನಲ್, ವಾಹನಗಳ ದಟ್ಟಣೆ ಅನ್ಕೊಂಡು ಗಂಟೆಗಟ್ಟಲೆ ರಸ್ತೆಗಳಲ್ಲೇ ಕಾಲ ಕಳೆಯುತ್ತಾರೆ. ಇದೀಗ ಬೆಂಗಳೂರಿಗರ ಕಿರಿಕಿರಿಯನ್ನ ಕೊಂಚ ಕಡಿಮೆ ಮಾಡಲು ಕೆ.ಆರ್.ಪುರಂದಿಂದ ವೈಟ್ ಫೀಲ್ಡ್ಗೆ ಮೆಟ್ರೋ ಮಾರ್ಗ ಪ್ರಾರಂಭವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ.
ಸಿಲಿಕಾನ್ ಸಿಟಿ ಜನರ ಬಹುದಿನಗಳ ನಿರೀಕ್ಷೆ ಮತ್ತು ಹೆಚ್ಚುತ್ತಿರುವ ಟ್ರಾಫಿಕ್ ಕಿರಿಕಿರಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೆ.ಆರ್.ಪುರಂದಿಂದ ವೈಟ್ ಫೀಲ್ಡ್ಗೆ ಮೆಟ್ರೋ ಮಾರ್ಗ ಪ್ರಾರಂಭವಾಗಲಿದ್ದು, ಇಂದು (ಮಾರ್ಚ್. 25) ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. ವೈಟ್‌ಫೀಲ್ಡ್‌ನಿಂದ ಕೆಆರ್ ಪುರಂವರೆಗಿನ 13.71 ಕಿಮೀ ಉದ್ದದ ಆರ್-1 ವಿಸ್ತರಣಾ ಮಾರ್ಗದ ಅಂತಿಮ ಹಂತದ ಟ್ರಯಲ್ ರನ್ ಅನ್ನು ರೈಲ್ವೆ ಸೇಫ್ಟಿ ಕಮಿಷನ್ ಈಗಾಗಲೆ ನಡೆಸಿದೆ. ಅಷ್ಟಕ್ಕೂ ಪ್ರಯಾಣಿಕರಿಗೆ ಆರ್-1 ವಿಸ್ತರಣೆಯ ಮಾರ್ಗದಲ್ಲಿ ಏನೆಲ್ಲಾ ಸೌಲಭ್ಯಗಳು ಲಭ್ಯವಾಗಲಿವೆ ಅನ್ನೋ ಬಗ್ಗೆ ಇಲ್ಲಿದೆ ಮಾಹಿತಿ.
ಇದನ್ನೂ ಓದಿ : ಅಮಿತ್ ಶಾಗೆ ಹೂಗುಚ್ಛ ನೀಡಿ ಉಪಹಾರ ಬಡಿಸಿದ ವಿಜಯೇಂದ್ರ – ಕೇಸರಿ ಪಾಳಯದಲ್ಲಿ ಅದೆಷ್ಟು ಲೆಕ್ಕಾಚಾರ?
– ನಿಲ್ದಾಣಗಳಲ್ಲಿ ಸೀಮಿತ ದ್ವಿಚಕ್ರ ವಾಹನ ನಿಲುಗಡೆ ಮತ್ತು ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್ ನಿಲ್ದಾಣಗಳಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳಿಗೆ ಹೆಚ್ಚುವರಿ ಪಾರ್ಕಿಂಗ್ ಸೌಲಭ್ಯ
– ನಿಲ್ದಾಣಗಳ ಸುತ್ತಲೂ ಇರುವ ಸೇವಾ ರಸ್ತೆಗಳ ಎರಡೂ ಬದಿಯಲ್ಲಿ, ಪ್ರವೇಶ/ನಿರ್ಗಮನ ದ್ವಾರದೊಂದಿಗೆ ಬಿಎಂಟಿಸಿ ಬಸ್ ನಿಲ್ದಾಣಗಳು, ಮಲ್ಟಿಮೋಡಲ್ ಏಕೀಕರಣ ಕೇಂದ್ರ
– ರಸ್ತೆಗಳನ್ನು ದಾಟಲು ಎಲ್ಲಾ ನಿಲ್ದಾಣಗಳನ್ನು ಪಾದಚಾರಿಗಳ ಮೇಲ್ಸೇತುವೆಯಾಗಿ ಉಪಯೋಗಿಸಬಹುದು
– ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್‌ನಲ್ಲಿ, ಮೆಟ್ರೋ ನಿಲ್ದಾಣಗಳಿಂದ ನೇರವಾಗಿ ರೈಲ್ವೆ ನಿಲ್ದಾಣಗಳಿಗೆ ಸಂಪರ್ಕಿಸಲು ಮೇಲ್ಸೇತುವೆಗಳು
– ಪಟ್ಟಂದೂರು ಅಗ್ರಹಾರ ನಿಲ್ದಾಣದಲ್ಲಿ ಐಟಿಪಿಬಿಗೆ ನೇರವಾಗಿ ಮೇಲ್ಸೇತುವೆ ಸಂಪರ್ಕ
– ವಿಕಲಚೇತರು ಎಲ್ಲಾ ನಿಲ್ದಾಣಗಳನ್ನು ಉಪಯೋಗಿಸುವ ಸೌಲಭ್ಯ –
– ಪ್ರಯಾಣಿಕರ ಅನುಕೂಲಕ್ಕಾಗಿ, ಪ್ರತಿ ನಿಲ್ದಾಣದಲ್ಲಿ 8 ಎಸ್ಕಲೇಟರ್‌ಗಳು, 4 ಎಲಿವೇಟರ್‌ಗಳು ಮತ್ತು 8 ಮೆಟ್ಟಿಲುಗಳ ಅಳವಡಿಕೆ
ನೂತನ ಮೆಟ್ರೋ ಸಂಚಾರಕ್ಕೆ ಚಾಲನೆ ಸಿಗುವ ಮೂಲಕ ದೇಶದ ಅತೀ ಹೆಚ್ಚು ಮೆಟ್ರೋ ಸೇವೆ ಕ್ರಮಿಸುವ ದೂರದ ನಗರಗಳ ಪೈಕಿ ಬೆಂಗಳೂರು ಎರಡನೇ ಸ್ಥಾನಕ್ಕೆ ಜಿಗಿಯಲಿದೆ. ನಾಳೆ ಬಹುನೀರಿಕ್ಷಿತ ಕೆ.ಆರ್.ಪುರಂ ಟು ವೈಟ್ ಫೀಲ್ಡ್ 13.71 ಕಿ.ಮೀ ನೂತನ ಮಾರ್ಗ ಸಾರ್ವಜನಿಕರಿಗೆ ಮುಕ್ತವಾಗಲಿದ್ದು, ಈ ಮೂಲಕ ತನ್ನ ಸೇವೆ ವಿಸ್ತರಣೆಯನ್ನ ನಮ್ಮ ಮೆಟ್ರೋ ಹೆಚ್ಚಿಸಲಿದೆ. ಈವರೆಗೂ ದೇಶದಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದ್ದು, ಮೊದಲ ಸ್ಥಾನದಲ್ಲಿ ದೆಹಲಿ, ನಂತರ ಹೈದ್ರಾಬಾದ್ ಇತ್ತು. ನೂತನ ಮಾರ್ಗ ಲೋಕಾರ್ಪಣೆಯಾದ ಬಳಿಕ ಹೈದ್ರಾಬಾದ್ ಅನ್ನು ಹಿಂದಿಕ್ಕಿ ಬೆಂಗಳೂರು ಎರಡನೇ ಸ್ಥಾನಕ್ಕೇರಲಿದೆ.
ಐಟಿ ಕಾರಿಡಾರ್‌ಗೆ ಪ್ರವೇಶಿಸುತ್ತಿರುವ ಮೆಟ್ರೋದ ಮೊದಲ ಮಾರ್ಗ ಎನ್ನಿಸಿಕೊಂಡಿರುವ ಕೆ.ಆರ್.ಪುರ-ವೈಟ್‌ಫೀಲ್ಡ್ ಮಧ್ಯೆ ಮಾ.26ರಿಂದಲೇ ಸಾರ್ವಜನಿಕರ ಸಂಚಾರಕ್ಕೆ ರೈಲು ಸೇವೆ ಲಭ್ಯವಾಗುವುದು ಬಹುತೇಕ ನಿಶ್ಚಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾ.25ರಂದು ಈ ಮಾರ್ಗದ ರೈಲ್ವೆ ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದು, ಮರುದಿನದಿಂದ ವಾಣಿಜ್ಯ ಸಂಚಾರ ಆರಂಭಿಸುವುದಾಗಿ ಬೆಂಗಳೂರು ಮೆಟ್ರೋ ರೈಲ್ವೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ನೇರಳೆ ಮಾರ್ಗದ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮಾರ್ಗದ (15 ಕಿ.ಮೀ.) ಭಾಗವಾದ ಕೆ.ಆರ್.ಪುರ-ವೈಟ್‌ಫೀಲ್ಡ್‌ನ 13 ಕಿ.ಮೀ. ಒಟ್ಟಾರೆ 4,500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಇದೀಗ ಮೊದಲ ಹಂತದಲ್ಲಿ ಈ ಭಾಗ ಜನಸಂಚಾರಕ್ಕೆ ಲಭ್ಯವಾಗುತ್ತಿದೆ. ಬೆನ್ನಿಗಾನಹಳ್ಳಿಯಲ್ಲಿ ನಡೆಯುತ್ತಿರುವ ಮಾರ್ಗ ನಿರ್ಮಾಣ ಮತ್ತಿತರ ಕಾಮಗಾರಿ ವರ್ಷದ ಮಧ್ಯದಲ್ಲಿ ಮುಕ್ತಾಯವಾಗುವ ಸಾಧ್ಯತೆಯಿದೆ. ಬಳಿಕಷ್ಟೇ ಉಳಿದ 2 ಕಿ.ಮೀ. ಮಾರ್ಗದಲ್ಲಿ ರೈಲ್ವೆ ಸಂಚರಿಸಲಿದೆ. ಒಟ್ಟಾರೆ 2ನೇ ಹಂತದ ಯೋಜನೆ ಪೂರ್ಣಗೊಂಡ ಬಳಿಕ ಪ್ರತಿನಿತ್ಯ 2.5 ರಿಂದ 3 ಲಕ್ಷ ಜನರು ಸಂಚರಿಸುವ ಸಾಧ್ಯತೆಯಿದೆ.
ನರೇಂದ್ರ ಮೋದಿ ಅವರೇ ‘ನಮ್ಮ ಮೆಟ್ರೋ’ದ ಮಾರ್ಗವೊಂದಕ್ಕೆ ಚಾಲನೆ ನೀಡುತ್ತಿರುವ ಮೊದಲ ಪ್ರಧಾನಿ ಎನ್ನಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 2017ರಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಹಸಿರು ಮಾರ್ಗವೊಂದನ್ನು ಉದ್ಘಾಟಿಸಿದ್ದರು. ಮಾಜಿ ಪ್ರಧಾನಿ ಮನ್‌ಮೋಹನ್‌ಸಿಂಗ್ ಅವರು ಹಂತ-1ರ ಎಂ.ಜಿ.ರೋಡ್-ಬೈಯಪ್ಪನಹಳ್ಳಿವರೆಗಿನ ಮಾರ್ಗ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚವ್ಹಾಣ್, ಹಿಂದೆಲ್ಲ ಮೆಟ್ರೋ ಮಾರ್ಗ ಉದ್ಘಾಟನೆಯಾದ ಮರುದಿನದಿಂದಲೇ ಜನಸಂಚಾರ ಕೂಡ ಪ್ರಾರಂಭವಾಗಿದೆ. ಕೆ.ಆರ್.ಪುರ ಹಾಗೂ ವೈಟ್‌ಫೀಲ್ಡ್ ನಡುವಿನ ಮಾರ್ಗದ ವಾಣಿಜ್ಯ ಸಂಚಾರದ ಕುರಿತು ಸಹ ಉನ್ನತಮಟ್ಟದ ಸಮಿತಿ ಸಭೆ ನಡೆದಿದೆ ಎಂದು ತಿಳಿಸಿದರು.