ಕಾಂಗ್ರೆಸ್‌ಗೆ ಯಾವ ಯಾವ ಕ್ಷೇತ್ರಗಳು ಕಷ್ಟ..? – ವಿಧಾನಸಭಾ ಚುನಾವಣೆ ಲಾಜಿಕ್ ಲೋಕಸಭೆಗೆ ವರ್ಕೌಟ್ ಆಗುತ್ತಾ?

ಕಾಂಗ್ರೆಸ್‌ಗೆ ಯಾವ ಯಾವ ಕ್ಷೇತ್ರಗಳು ಕಷ್ಟ..? – ವಿಧಾನಸಭಾ ಚುನಾವಣೆ ಲಾಜಿಕ್ ಲೋಕಸಭೆಗೆ ವರ್ಕೌಟ್ ಆಗುತ್ತಾ?

ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿದ್ದ ಕಾಂಗ್ರೆಸ್​ಗೆ ಲೋಕಸಭಾ ಚುನಾವಣೆಯಲ್ಲೂ ಜಯಭೇರಿ ಬಾರಿಸಬೇಕು ಅನ್ನೋ ಗುರಿ ಇದೆ. ಹೀಗಾಗೇ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಕರ್ನಾಟಕದ 28 ಕ್ಷೇತ್ರಗಳ ಪೈಕಿ ಕನಿಷ್ಠ 20 ಸ್ಥಾನಗಳನ್ನಾದರೂ ಗೆಲ್ಲಲೇಬೇಕೆಂಬ ಗುರಿ ಹೊಂದಿದ್ದಾರೆ. ಆದ್ರೆ ಈ ಟಾರ್ಗೆಟ್ ಅಷ್ಟು ಸುಲಭವಾಗಿಲ್ಲ. ಕಳೆದ ಬಾರಿ ಜಸ್ಟ್ 1 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದ ಕೈಪಡೆಗೆ ಈ ಗುರಿ ನಿಜಕ್ಕೂ ಸವಾಲಿನ ಕೆಲಸ. ಯಾಕಂದ್ರೆ ವಿಧಾನಸಭಾ ಕ್ಷೇತ್ರಗಳ ಲೆಕ್ಕಾಚಾರವೇ ಬೇರೆ. ಲೋಕಸಭಾ ಕಣಗಳ ತಂತ್ರಗಾರಿಕೆಯೇ ಬೇರೆ.ಇದೇ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್‌ ರಾಜ್ಯದ ಸಚಿವರಿಗೆ ಕೆಲವೊಂದು ಕ್ಷೇತ್ರಗಳ ಟಾಸ್ಕ್ ಕೊಟ್ಟಿದೆ. ಅಷ್ಟಕ್ಕೂ ಕಾಂಗ್ರೆಸ್​ಗೆ ಯಾವ ಯಾವ ಕ್ಷೇತ್ರಗಳು ಕಷ್ಟ..? ಯಾಕೆ ಎಂಬ ಬಗ್ಗೆ ವಿವರಣೆ ಇಲ್ಲಿದೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಯತೀಂದ್ರ ಮಾತುಗಳೇ ಬಿಸಿತುಪ್ಪವಾಗ್ತಿದೆಯಾ..? ಡಿಸಿಎಂ ಡಿಕೆಶಿ ಕೆರಳಿದ್ದೇಕೆ..?

ಬಿಜೆಪಿ ಭದ್ರಕೋಟೆ ಅಂತಾನೇ ಕರೆಸಿಕೊಳ್ಳುವ ಶಿವಮೊಗ್ಗ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಾಲಿಗೆ ಕಬ್ಬಿಣದ ಕಡಲೆಯಾಗಿದೆ. ಇಡೀ ಜಿಲ್ಲೆಯಲ್ಲಿ ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಸಂಸದ ಬಿ.ವೈ ರಾಘವೇಂದ್ರ ತಮ್ಮದೇ ಆದ ಹಿಡಿತವನ್ನ ಹೊಂದಿದ್ದಾರೆ. 2009, 2014, 2019ರಲ್ಲಿ ಬಿಎಸ್​ವೈ ಪುತ್ರ ಬಿ.ವೈ ರಾಘವೇಂದ್ರ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್​​ಗೆ ಸೂಕ್ತ ಅಭ್ಯರ್ಥಿಯ ಕೊರತೆ ಇದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಕೂಡ ಬಿಜೆಪಿಯ ಭದ್ರಕೋಟೆ. 1991 ರಿಂದ 2019 ರವರೆಗೆ ಬಿಜೆಪಿ ಇಲ್ಲಿ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿದೆ. ಇನ್ನು ಬೀದರ್ ಲೋಕಸಭಾ ಕ್ಷೇತ್ರ ಕೂಡ ಬಿಜೆಪಿ ಭದ್ರಕೋಟೆಯಾಗಿ ಬದಲಾಗುತ್ತಿದೆ. 2014, ಹಾಗೂ 2019 ರಲ್ಲಿ ಬಿಜೆಪಿ ಭಗವಂತ ಕೂಬಾ ಗೆಲುವು ಸಾಧಿಸಿದ್ದಾರೆ.  ಹಾಗೇ ಧಾರವಾಡ ಲೋಕಸಭೆ ಕ್ಷೇತ್ರ ಬಿಜೆಪಿಯ ಪ್ರಬಲ ಕೋಟೆ. 2009, 2014 ಹಾಗೂ 2019 ರಲ್ಲಿ ಬಿಜೆಪಿಯ ಪ್ರಹ್ಲಾದ್ ಜೋಶಿ ಸತತವಾಗಿ ಗೆಲುವು ಕಾಣ್ತಿದ್ದಾರೆ.

ಇನ್ನು ಹಾಸನ ಕ್ಷೇತ್ರ ಜೆಡಿಎಸ್‌ ಭದ್ರಕೋಟೆ. ಇಲ್ಲಿ ಸತತವಾಗಿ ಜೆಡಿಎಸ್ ಗೆದ್ದುಕೊಂಡು ಬಂದಿದೆ.  ಕಳೆದ ಬಾರಿ ಪ್ರಜ್ವಲ್‌ ರೇವಣ್ಣ ಜಯಗಳಿಸಿದ್ದು, ಈ ಬಾರಿಯೂ ಪ್ರಜ್ವಲ್‌ ರೇವಣ್ಣ ಕಣಕ್ಕಿಳಿಯಲಿದ್ದಾರೆ. ಇಲ್ಲೂ ಕೂಡ ಕಾಂಗ್ರೆಸ್​ಗೆ ಅಭ್ಯರ್ಥಿ ಕೊರತೆ ಇದೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್​ಗೆ ಬರೀ ಅಭ್ಯರ್ಥಿಗಳ ಕೊರತೆ ಕಾಣ್ತಿಲ್ಲ. ಈ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆಯ ಕೊರತೆ ಕೂಡ ಇದೆ. ಇಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇದ್ದರೂ ಕೂಡ ಪ್ರಭಾವ ಬೀರುವಷ್ಟರ ಮಟ್ಟಿಗೆ ಬೆಳೆದಿಲ್ಲ.  ಹೀಗಾಗಿ ಪ್ರತೀ ಬಾರಿ ಚುನಾವಣೆ ಬಂದಾಗಲೂ ಯಾರನ್ನ ಅಭ್ಯರ್ಥಿ ಮಾಡೋದು ಅನ್ನೋ ಗೊಂದಲ ಶುರುವಾಗುತ್ತೆ. ಅದ್ರಲ್ಲೂ ಕರಾವಳಿ ಭಾಗ ಅಂತೂ ಹಿಂದುತ್ವದ ಪ್ರಯೋಗಶಾಲೆಯಾಗಿ ಮಾರ್ಪಟ್ಟು ವರ್ಷಗಳೇ ಉರುಳಿವೆ. ಇಲ್ಲೂ ಕೂಡ ಕೈಪಡೆಗೆ ಗೆಲುವು ಅನ್ನೋದು ಮರೀಚಿಕೆಯಾಗಿದೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಕರಾವಳಿ ಹಾಗೂ ಮಲೆನಾಡನ್ನು ಒಳಗೊಂಡಿದ್ದು, ಬಿಜೆಪಿಯ ಪ್ರಾಬಲ್ಯ ಹೆಚ್ಚಿದೆ. ಈ ಕ್ಷೇತ್ರದಲ್ಲಿ ಹಿಂದುತ್ವದ ಅಜೆಂಡಾ ಬಹಳ ಮುಖ್ಯವಾಗುತ್ತೆ. ಮೋದಿ ಫ್ಯಾಕ್ಟರ್ ಜೊತೆಗೆ ಬಿಜೆಪಿಯ ತಂತ್ರಗಾರಿಕೆಗಳು ಚುನಾವಣೆಯಲ್ಲಿ ಸಾಕಷ್ಟು ಪರಿಣಾಯ ಬೀರಿದೆ. ಹೀಗಾಗಿ ಉಡುಪಿ ಚಿಕ್ಕಮಗಳೂರು ಜಿಲ್ಲೆ ಕಾಂಗ್ರೆಸ್ ಪಾಲಿಗೆ ಸವಾಲಿನ ಕ್ಷೇತ್ರವಾಗಿದೆ. ಇನ್ನು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ನಾಯಕ ಅನಂತ್‌ ಕುಮಾರ್‌ ಹೆಗಡೆ ಸರಣಿ ಗೆಲುವು ಸಾಧಿಸಿಕೊಂಡು ಬಂದಿದ್ದಾರೆ. ಇಲ್ಲೂ ಕೂಡ ಕಾಂಗ್ರೆಸ್​ಗೆ ಗೆಲುವು ಸಿಗೋದು ಕಷ್ಟಸಾಧ್ಯ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಗ್ಗೆಯಂತೂ ಕೇಳೋದೇ ಬೇಡ. ಇಲ್ಲಿ ಬಿಜೆಪಿ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಹಿಂದುತ್ವ ಹಾಗೂ ಬಿಜೆಪಿಯ ಭದ್ರಕೋಟೆಯಾಗಿದ್ದು, ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆ ನೆಲೆಯೇ ಇಲ್ಲ. ನಳಿನ್ ಕುಮಾರ್ ಕಟೀಲ್ ಕಳೆದ ಮೂರು ಅವಧಿಯಲ್ಲಿ ಸರಣಿ ಗೆಲುವು ಸಾಧಿಸಿದ್ದಾರೆ. ಆದ್ರೆ ಕಾಂಗ್ರೆಸ್‌ನಲ್ಲಿ ಸೂಕ್ತ ಅಭ್ಯರ್ಥಿಗಳ ಕೊರತೆ ಹಾಗೂ ಸ್ಥಳೀಯ ನಾಯಕರುಗಳ ನಡುವಿನ ಭಿನ್ನಾಭಿಪ್ರಾಯವೇ ಹೆಚ್ಚಾಗಿದೆ. ಸದ್ಯಕ್ಕೆ ಇಷ್ಟು ಕ್ಷೇತ್ರಗಳು ಕಾಂಗ್ರೆಸ್ ಪಾಲಿಗೆ ಚಾಲೆಂಜಿಂಗ್ ಆಗಿವೆ. ಆದ್ರೆ ಕಾಂಗ್ರೆಸ್ ನಾಯಕರು ಮಾತ್ರ ಈ ಸಲ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲೋ ಗುರಿ ಇಟ್ಟುಕೊಂಡಿದ್ದಾರೆ. ರಾಜ್ಯದಲ್ಲಿ ಜಾರಿ ಮಾಡಿರುವ 5 ಗ್ಯಾರಂಟಿ ಯೋಜನೆಗಳನ್ನೇ ಅಸ್ತ್ರ ಮಾಡಿಕೊಂಡು ಮತದಾರರ ಮನ ಗೆಲ್ಲೋಕೆ ಕಸರತ್ತು ನಡೆಸ್ತಿದ್ದಾರೆ. ಆದ್ರೆ ವಿಧಾನಸಭಾ ಚುನಾವಣೆ ಲಾಜಿಕ್ ಲೋಕಸಭೆಗೆ ವರ್ಕೌಟ್ ಆಗುತ್ತಾ ಅನ್ನೋದೇ ಈಗಿರುವ ಪ್ರಶ್ನೆ.

Sulekha