ಎಲ್ಲಿ ನೋಡಿದರೂ ಕುಸಿದು ಬಿದ್ದ ಮನೆಗಳದ್ದೇ ದೃಶ್ಯ – ಮಳೆಯ ಆರ್ಭಟಕ್ಕೆ ಒಂದೇ ದಿನದಲ್ಲಿ198 ಮನೆಗಳು ನೆಲಸಮ!

ಎಲ್ಲಿ ನೋಡಿದರೂ ಕುಸಿದು ಬಿದ್ದ ಮನೆಗಳದ್ದೇ ದೃಶ್ಯ – ಮಳೆಯ ಆರ್ಭಟಕ್ಕೆ ಒಂದೇ ದಿನದಲ್ಲಿ198 ಮನೆಗಳು ನೆಲಸಮ!

ಕಳೆದ ವಾರ ರಾಜ್ಯದಲ್ಲಿ ಸುರಿದ ರಣ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. 15 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಸುರಿದ್ದಿದ್ದು, ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು. ಅಲ್ಲಲ್ಲಿ ಭೂಕುಸಿತ ಸಂಭವಿಸಿತ್ತು. ಧಾರವಾಡ ಜಿಲ್ಲೆಯಲ್ಲೂ ಕಳೆದ ವಾರ ಮಳೆಯ ಆರ್ಭಟ ಜೋರಾಗಿತ್ತು. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಜುಲೈ 26 ರಂದು ಸುರಿದ ಮಳೆಗೆ ಬರೋಬ್ಬರಿ 198 ಮನೆಗಳು ಕುಸಿದಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಇದನ್ನೂ ಓದಿ: ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ಪ್ರಯಾಣಿಸುವಾಗ ಎಚ್ಚರ.. ಘಾಟಿಯ 34 ಕಡೆಗಳಲ್ಲಿ ಭೂ ಕುಸಿತ ಭೀತಿ!

ಜಿಲ್ಲಾಡಳಿತದ ಅಂಕಿ-ಅಂಶಗಳ ಪ್ರಕಾರ, ಜುಲೈ 26ರ ಬೆಳಗ್ಗೆ 8ರಿಂದ 27ರ ಬೆಳಗ್ಗೆ 8ರ ವರೆಗೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸುಮಾರು 198 ಮನೆಗಳಿಗೆ ಹಾನಿಯಾಗಿದೆ. ಧಾರವಾಡ ತಾಲೂಕಿನಲ್ಲಿ 87, ಅಳ್ನಾವರದಲ್ಲಿ ನಾಲ್ಕು, ಹುಬ್ಬಳ್ಳಿ ಗ್ರಾಮೀಣದಲ್ಲಿ 11, ಹುಬ್ಬಳ್ಳಿ ಶಹರದಲ್ಲಿ 5 ಮತ್ತು 2 ತೀವ್ರ, ಕಲಘಟಗಿ ತಾಲೂಕಿನಲ್ಲಿ 45, ಕುಂದಗೋಳ ತಾಲೂಕಿನಲ್ಲಿ 26, ನವಲಗುಂದ ತಾಲೂಕಿನಲ್ಲಿ 10 ಮತ್ತು ಅಣ್ಣಿಗೇರಿ ತಾಲೂಕಿನಲ್ಲಿ 8 ಸೇರಿದಂತೆ ಜಿಲ್ಲೆಯ 8 ತಾಲೂಕಗಳಲ್ಲಿನ ಸುಮಾರು 198 ಮನೆಗಳಿಗೆ ಹಾನಿಯಾಗಿದೆ. ಹಾಗೆಯೇ, ಜಿಲ್ಲೆಯ ವಿವಿಧ ತಾಲೂಕುಗಳ ವಿವಿಧ ಗ್ರಾಮ ಹಾಗೂ ನಗರಗಳಲ್ಲಿ ಮಳೆಯಿಂದಾಗಿ ಏಪ್ರಿಲ್‌ 1ರಿಂದ ಜುಲೈ 27ರ ವರೆಗೆ 677 ಮನೆಗಳಿಗೆ ಭಾಗಶಃ ಹಾಗೂ 15 ಮನೆಗಳಿಗೆ ತೀವ್ರತರವಾಗಿ ಹಾನಿಯಾಗಿದೆ. ಒಟ್ಟಾರೆ ಇಲ್ಲಿ ವರೆಗೆ ಸುಮಾರು 692 ಮನೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.

ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೂರಾರು ಬಡ ಕುಟುಂಬಗಳು ಸೂರು ಕಳೆದುಕೊಂಡಿದ್ದು, ಬದುಕು ಅತಂತ್ರವಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಒಂದೊಂದು ಕುಟುಂಬದ ಸ್ಥಿತಿ ಶೋಚನೀಯವಾಗಿದೆ. ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

suddiyaana