3ನೇ ಹಂತ ನಮ್ಮ ಮೆಟ್ರೋ ನಿರ್ಮಾಣಕ್ಕೆ ಸರ್ವೆ ಯಾವಾಗಿಂದ? – ಜಿಯೋಟೆಕ್ನಿಕಲ್ ಸರ್ವೆ ಎಂದರೇನು?
ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ವೇಗದ ಹಾಗೂ ಸುಖಕರ ಪ್ರಯಾಣಕ್ಕಾಗಿ ನಮ್ಮ ಮೆಟ್ರೋ ಸಹಕಾರಿಯಾಗಿದೆ. ನಿತ್ಯ ಲಕ್ಷಾಂತರ ಜನರು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ಬಿಎಂಆರ್ಸಿಎಲ್ ಹಂತ ಹಂತವಾಗಿ ಮೆಟ್ರೋ ಮಾರ್ಗ ವಿಸ್ತರಣೆ ಮಾಡುತ್ತಿದೆ. ಇದೀಗ ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆ ಕಾಮಗಾರಿಗಾಗಿ ಭೂಸ್ವರೂಪದ ಅಧ್ಯಯನದ ವರದಿ ಪಡೆಯಲು ಬೆಂಗಳೂರು ಮೆಟ್ರೋ ರೈಲು ನಿಗಮವು ಶೀಘ್ರ ‘ಜಿಯೋಟೆಕ್ನಿಕಲ್ ಇನ್ವೆಸ್ಟಿಗೇಶನ್’ ಕೈಗೊಳ್ಳಲಿದೆ.
ಇದನ್ನೂ ಓದಿ: RCB ಪ್ಲೇ ಆಫ್ ಕನಸು ಭಗ್ನ? – 4 ಮ್ಯಾಚ್ ಗಳಿಗಿಲ್ಲ ವಿಲ್ ಜಾಕ್ಸ್!
ಮೂರನೇ ಹಂತದ ಮೆಟ್ರೋ ಮಾರ್ಗ ಒಟ್ಟು 44.65 ಕಿ.ಮೀ. ಉದ್ದದ ಯೋಜನೆ ಆಗಿದ್ದು, ಎರಡು ಮಾರ್ಗ ಒಳಗೊಂಡಿದೆ. ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರ (32.5 ಕಿ.ಮೀ.) ಹಾಗೂ ಹೊಸಹಳ್ಳಿಯಿಂದ ಮಾಗಡಿ ರಸ್ತೆಯ ಕಡಬಗೆರೆವರೆಗೆ (12.5 ಕಿ.ಮೀ.) ಸಂಪರ್ಕ ಕಲ್ಪಿಸಲಿದೆ. ಈ ಮಾರ್ಗದ ಕಾಮಗಾರಿ 2024ರ ಅಂತ್ಯ ಅಥವಾ 2025ರ ಆರಂಭಿಕ ತಿಂಗಳಲ್ಲೇ ಶುರುವಾಗುವ ನಿರೀಕ್ಷೆ ಇದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. .
ಯೋಜನೆಗೆ ಈಗಾಗಲೇ ಡಿಪಿಆರ್ ಆಗಿದ್ದು, ರಾಜ್ಯ ಸರ್ಕಾರ ಅನುಮೋದನೆ ದೊರೆತಿದೆ. ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯಡಿ ಅನುಮೋದನೆ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡಲಾಗಿದ್ದು, ಹಸಿರು ನಿಶಾನೆ ಬಾಕಿ ಇದೆ. ರಾಜ್ಯ ಸರ್ಕಾರದ ಅನುಮತಿ ಸಿಕ್ಕಿರುವ ಕಾರಣ ಬಿಎಂಆರ್ಸಿಎಲ್ ಕಾಮಗಾರಿ ಆರಂಭಕ್ಕೆ ಬೇಕಾದ ಭೂಸ್ವಾದೀನ, ಪರಿಹಾರ ವಿತರಣೆಯ ಕ್ರಮ ಸೇರಿ ಇತರೆ ಎಲ್ಲ ಪ್ರಾಥಮಿಕ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರ ಭಾಗವಾಗಿ ಕಳೆದ ತಿಂಗಳು ಬಿಎಂಆರ್ಸಿಎಲ್ ಕರೆದಿದ್ದ ‘ಜಿಯೋಟೆಕ್ನಿಕಲ್ ಇನ್ವೆಸ್ಟಿಗೇಶನ್’ ಟೆಂಡರ್ ಇನ್ನೊಂದು ವಾರದಲ್ಲಿ (ಮೇ 7) ಟೆಂಡರ್ ತೆರೆಯಲಿದೆ. ಟೆಂಡರ್ ಪಡೆವ ಸಂಸ್ಥೆ ಐದು ತಿಂಗಳಲ್ಲಿ ವರದಿ ನೀಡಬೇಕಿದೆ. ಸುಮಾರು ₹6 ಕೋಟಿ ಮೊತ್ತದಲ್ಲಿ ಈ ತಪಾಸಣೆ ನಡೆಯಲಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದರು.
ಜಿಯೋಟೆಕ್ನಿಕಲ್ ಸರ್ವೆ ಎಂದರೇನು?
ನಮ್ಮ ಮೆಟ್ರೋದಲ್ಲಿ ಒಂದು ಕಿ.ಮೀ. ಎಲೆವೆಟೆಡ್ ಕಾರಿಡಾರ್ಗೆ ಸಾಮಾನ್ಯವಾಗಿ 40 ಪಿಲ್ಲರ್ಗಳು ನಿರ್ಮಾಣ ಆಗುತ್ತವೆ. ಮೂರನೇ ಹಂತದ ಮಾರ್ಗಕ್ಕಾಗಿ ಪಿಲ್ಲರ್ ನಿರ್ಮಾಣ ಆಗುವ ಭೂಮಿಯ ಸ್ವರೂಪ ಹೇಗಿದೆ, ಕಲ್ಲು, ಮಣ್ಣು ಸಡಿಲವಾಗಿದೆಯೇ? ಎಷ್ಟು ಆಳದಿಂದ ತಳಪಾಯ ಮಾಡಿಕೊಳ್ಳಬೇಕು, ಪ್ರಸ್ತುತ ಮಾರ್ಗಗಳಿಗೆ ಹೋಲಿಸಿದರೆ ಪಿಲ್ಲರ್ಗಳಲ್ಲಿ ಯಾವ ರೀತಿಯ ಬದಲಾವಣೆ ಮಾಡಿಕೊಳ್ಳಬೇಕು ಎಂದು ಈ ಸರ್ವೆಯಿಂದ ತಿಳಿಯಲಿದೆ. ಇದಕ್ಕಾಗಿ ಮೂರನೇ ಮಾರ್ಗ ಸಾಗುವಲ್ಲಿ ಸುಮಾರು 30 ಮೀ. ಆಳಕ್ಕೆ ಕೊಳವೆ ಕೊರೆದು ವಿವಿಧ ತಪಾಸಣೆ ಕೈಗೊಳ್ಳಲಾಗುತ್ತದೆ. ಜೊತೆಗೆ ನಿಲ್ದಾಣ ನಿರ್ಮಾಣ ಆಗುವ ಸ್ಥಳದ ಭೂಸ್ವರೂಪ ಹೇಗಿದೆ ಎಂಬುದರ ಬಗ್ಗೆಯೂ ಅಧ್ಯಯನ ನಡೆಯಲಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.