ಕರಾವಳಿ ಸಿನಿಮಾ ಕಾದಾಟಕ್ಕೆ ಕಾರಣವೇನು? – ಪ್ರಜ್ವಲ್ ದೇವರಾಜ್ ದನಿಯಿಲ್ಲದೇ ಟ್ರೇಲರ್ ರಿಲೀಸ್ ಮಾಡಿದ್ಯಾಕೆ?
ಕರಾವಳಿ ಸಿನಿಮಾ ಕಾಂಟ್ರವರ್ಸಿ ಮುಗಿಯೋದು ಯಾವಾಗ?

ಕರಾವಳಿ ಸಿನಿಮಾ ಕಾದಾಟಕ್ಕೆ ಕಾರಣವೇನು? – ಪ್ರಜ್ವಲ್ ದೇವರಾಜ್ ದನಿಯಿಲ್ಲದೇ ಟ್ರೇಲರ್ ರಿಲೀಸ್ ಮಾಡಿದ್ಯಾಕೆ?ಕರಾವಳಿ ಸಿನಿಮಾ ಕಾಂಟ್ರವರ್ಸಿ ಮುಗಿಯೋದು ಯಾವಾಗ?

ಕರಾವಳಿ. ಈ ಸಿನಿಮಾ ಬಿಡುಗಡೆಗೂ ಮೊದಲು ಸದ್ದು ಮಾಡುತ್ತಿದೆ. ಅದು ಕೂಡಾ ಕರಾವಳಿ ಸಿನಿಮಾ ಹೀರೋ, ನಿರ್ದೇಶಕ, ನಿರ್ಮಾಪಕರ ನಡುವೆ ವಿವಾದ ತಾರಕಕ್ಕೇರುತ್ತಿದೆ. ದಿನೇ ದಿನೇ ಈ ವಿವಾದ ಬೇರೆಯ ರೀತಿಯಲ್ಲಿ ತಿರುವು ಪಡೆದುಕೊಳ್ಳುತ್ತಿದೆ. ಇದೆಲ್ಲದರ ಮಧ್ಯೆ ಕರಾವಳಿ ಸಿನಿಮಾ ಟ್ರೇಲರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಇದನ್ನೂ ಓದಿ:ಕರಾವಳಿ ಸಿನಿಮಾ ಟ್ರೈಲರ್ ಲಾಂಚ್ ವೇಳೆ ಕಿರಿಕ್ – ಪ್ರಜ್ವಲ್ ದೇವರಾಜ್‌ಗೆ ಖಡಕ್ ಸಂದೇಶ ಕೊಟ್ಟ ರಾಜ್ ಬಿ ಶೆಟ್ಟಿ

ಸ್ಯಾಂಡಲ್‌ವುಡ್‌ನ ಭರವಸೆಯ ನಟ ಪ್ರಜ್ವಲ್ ದೇವರಾಜ್ ನಟನೆಯ  ಕರಾವಳಿ ಸಿನಿಮಾದ ಮೇಲೆ ಬಹುನಿರೀಕ್ಷೆಯಿತ್ತು. ಆದರೆ, ಈಗ ಕರಾವಳಿ ಸಿನಿಮಾ ವಿವಾದದಲ್ಲೇ ಸುದ್ದಿಯಾಗುತ್ತಿದೆ. ಸಿನಿಮಾ ಟ್ರೇಲರ್ ರಿಲೀಸ್ ಗೂ ಮೊದಲು ಈ ವಿವಾದ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಟ್ರೇಲರ್ ಬಿಡುಗಡೆ ಆದ ಬೆನ್ನಲ್ಲೇ ಅಭಿಮಾನಿಗಳು ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟ್ರೇಲರ್​ನಲ್ಲಿ ಪ್ರಜ್ವಲ್ ದೇವರಾಜ್ ಅವರ ಧ್ವನಿ ಇಲ್ಲ ಎಂಬುದು ಅಭಿಮಾನಿಗಳಿಗೆ ಬೇಸರ ತರಿಸಿದೆ.

ಕರಾವಳಿ ಸಿನಿಮಾ ಜುಲೈ 24ರಂದು ಬಿಡುಗಡೆ ಆಗಲಿದೆ. ಇದಕ್ಕೂ ಮೊದಲು ಮಂಗಳವಾರ ಸಂಜೆ ನಂತರ (ಜುಲೈ 7) ಕರಾವಳಿ ಸಿನಿಮಾ ಟ್ರೇಲರ್ ರಿಲೀಸ್ ಆಗಿದೆ. ಈ ಸಿನಿಮಾಗೆ ಗುರುದತ್ ಗಾಣಿಗ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಸೆಟ್ಟೇರಿದ ದಿನದಿಂದಲೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದ್ದ ಈ ಸಿನಿಮಾದ ಟ್ರೇಲರ್‌ ನೋಡಲು ಪ್ರೇಕ್ಷಕರು ಕಾದಿದ್ದರು. ಪ್ರಜ್ವಲ್ ದೇವರಾಜ್ , ರಾಜ್ ಬಿ. ಶೆಟ್ಟಿ, ರಮೇಶ್ ಇಂದಿರ ಮುಂತಾದವರು ನಟಿಸಿರುವ ಈ ಸಿನಿಮಾದ ಟ್ರೇಲರ್ ಫ್ಯಾನ್ಸ್ ಮನಗೆದ್ದಿದೆ. ಆದರೆ, ಈ ಸಿನಿಮಾದ ಹೀರೋನೇ ಟ್ರೇಲರ್ ರಿಲೀಸ್ ಸಮಾರಂಭಕ್ಕೆ ಬಂದಿರಲಿಲ್ಲ. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ಗುರುದತ್ ಗಾಣಿಗ, ರಾಜ್ ಬಿ. ಶೆಟ್ಟಿ, ನಾಯಕಿಯರಾದ ಸಂಪದಾ, ಸುಷ್ಮಿತಾ, ನಟರಾದ ಮಿತ್ರ, ಶ್ರೀಧರ್ ಸೇರಿದಂತೆ ಇಡೀ ಸಿನಿಮಾತಂಡ ಹಾಜರಿತ್ತು. ಆದರೆ ಪ್ರಜ್ವಲ್ ದೇವರಾಜ್ ಅವರ ಗೈರುಹಾಜರಿ ಎದ್ದು ಕಾಣುತ್ತಿತ್ತು.

ಪ್ರಜ್ವಲ್ ದೇವರಾಜ್ ಬೇಸರಕ್ಕೆ ಕಾರಣವಾಗಿದ್ದು ಸಂಭಾವನೆ ವಿಚಾರ ಎನ್ನಲಾಗುತ್ತಿದೆ. ನಿರ್ದೇಶಕ ಹಾಗೂ ನಿರ್ಮಾಪಕ ಗುರುದತ್ ಗಾಣಿಗ ಅವರು ಪ್ರಜ್ವಲ್‌ಗೆ 1.25 ಕೋಟಿ ರೂ. ಸಂಭಾವನೆ ನಿಗದಿಪಡಿಸಿ, ಈಗಾಗಲೇ 1 ಕೋಟಿ ರೂಪಾಯಿ ಹಣವನ್ನು ಪಾವತಿ ಮಾಡಿದ್ದಾರಂತೆ. ಉಳಿದ 25 ಲಕ್ಷ ರೂ.ಗಳನ್ನು ಡಬ್ಬಿಂಗ್ ಮುಗಿದ ನಂತರ ನೀಡುವುದಾಗಿ ಗಾಣಿಗ ಹೇಳಿದ್ದಾರೆ. ಆದರೆ, ಪ್ರಜ್ವಲ್ ತಮ್ಮ ಸಹಾಯಕರಿಗಾಗಿ ಹೆಚ್ಚುವರಿಯಾಗಿ 20 ಲಕ್ಷ ರೂ. ಭತ್ಯೆ ಮತ್ತು ಜಿಎಸ್‌ಟಿ ಮೊತ್ತವನ್ನು ಕೇಳುತ್ತಿದ್ದಾರೆ. ಇದಕ್ಕೆ ನಿರ್ಮಾಪಕರು ಒಪ್ಪದ ಕಾರಣ ಇಬ್ಬರ ನಡುವೆ ಹಣಕಾಸಿನ ವೈಮನಸ್ಯವುಂಟಾಗಿದೆ ಎಂದು ಹೇಳಲಾಗುತ್ತಿದೆ.  ಮತ್ತೊಂದೆಡೆ, ಸಿನಿಮಾದ ಸ್ಟಾರ್ ಕಾಸ್ಟಿಂಗ್ ವಿಚಾರದಲ್ಲೂ ಅಸಮಾಧಾನವಿದೆ ಎಂದು ಹೇಳಲಾಗುತ್ತಿದೆ. ಚಿತ್ರದ ಕಥೆ ಒಪ್ಪಿಸುವಾಗ ಗುರುದತ್ ಗಾಣಿಗ ಅವರು ಬೇರೊಬ್ಬ ಪ್ರಮುಖ ಸ್ಟಾರ್ ನಟನನ್ನು ಕರೆತರುವುದಾಗಿ ಪ್ರಜ್ವಲ್‌ಗೆ ಭರವಸೆ ನೀಡಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಆ ನಟನ ಬದಲಿಗೆ ರಾಜ್ ಬಿ. ಶೆಟ್ಟಿ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು. ಈ ದಿಢೀರ್ ಬದಲಾವಣೆ ಪ್ರಜ್ವಲ್‌ಗೆ ಇಷ್ಟವಿರಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಈ ವಿಚಾರವನ್ನು ಪ್ರಜ್ವಲ್ ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಕರಾವಳಿ ಸಿನಿಮಾದಲ್ಲಿ ರಾಜ್ ಬಿ. ಶೆಟ್ ನಟಿಸಿರುವುದರ ಬಗ್ಗೆ ನನಗೆ ಯಾವುದೇ ಸಮಸ್ಯೆಯಿಲ್ಲ ಎಂದು ಪ್ರಜ್ವಲ್ ತಿಳಿಸಿದ್ದಾರೆ.

ಮತ್ತೊಂದೆಡೆ ಈ ಆರೋಪಗಳಿಗೆ ಸ್ವತಃ ರಾಜ್ ಬಿ ಶೆಟ್ಟಿ ಉತ್ತರಿಸಿದ್ದಾರೆ. ಈ ಚಿತ್ರದಲ್ಲಿ ನಾನು ಒಂದು ಅತಿಥಿ ಪಾತ್ರ ಮಾಡುತ್ತಿದ್ದೇನೆ ಅಷ್ಟೇ. ಮೊದಲಿಗೆ ಈ ಚಿತ್ರಕ್ಕೆ ನಾನು ಆಯ್ಕೆ ಆಗಿರಲಿಲ್ಲ. ಬೇರೊಬ್ಬ ನಟರು ನಟಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಕೊನೆಯಲ್ಲಿ ನಾನು ಅಭಿನಯಿಸಬೇಕಾಗಿ ಬಂದಿತು ಎಂದು ಶೆಟ್ಟಿ ಹೇಳಿದ್ದಾರೆ. ಇಲ್ಲಿ ಅವರು ದೊಡ್ಡವರು, ಇವರು ಚಿಕ್ಕವರು ಎಂದು ಭೇದಭಾವ ಮಾಡುತ್ತಿರುವುದರಿಂದಲೇ ಕನ್ನಡ ಚಿತ್ರರಂಗ ಉದ್ಧಾರ ಆಗಿಲ್ಲ ಎಂದು ರಾಜ್‌ಬಿ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Sulekha

Leave a Reply

Your email address will not be published. Required fields are marked *