ಹಿಂದೂ ಧರ್ಮ ಹುಟ್ಟಿದ್ದು ಯಾವಾಗ.. ಯಾರು ಹುಟ್ಟಿಸಿದರು ಎಂಬುದೇ ಪ್ರಶ್ನೆ! – ವಿವಾದಾತ್ಮಕ ಹೇಳಿಕೆ ನೀಡಿದ ಗೃಹ ಸಚಿವ ಪರಮೇಶ್ವರ್‌

ಹಿಂದೂ ಧರ್ಮ ಹುಟ್ಟಿದ್ದು ಯಾವಾಗ.. ಯಾರು ಹುಟ್ಟಿಸಿದರು ಎಂಬುದೇ ಪ್ರಶ್ನೆ! – ವಿವಾದಾತ್ಮಕ ಹೇಳಿಕೆ ನೀಡಿದ ಗೃಹ ಸಚಿವ ಪರಮೇಶ್ವರ್‌

ಬೆಂಗಳೂರು: ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ಹೇಳಿಕೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಹೇಳಿಕೆ ವಿರುದ್ದ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ ಗೃಹ ಇಲಾಖೆ ಸಚಿವ ಪರಮೇಶ್ವರ್‌ ಅವರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಹಿಂದೂ ಧರ್ಮ ಹುಟ್ಟಿದ್ದು ಯಾವಾಗ, ಯಾರು ಹುಟ್ಟಿಸಿದರು ಎಂಬುದೇ ಪ್ರಶ್ನೆ ಎಂದು ಹೇಳಿದ್ದಾರೆ.

ಮಂಗಳವಾರ ಕೊರಟಗೆರೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಪರಮೇಶ್ವರ್, ಜಗತ್ತಿನಲ್ಲಿ ಅನೇಕ ಧರ್ಮಗಳು ಹುಟ್ಟಿಕೊಂಡಿವೆ. ಹಿಂದೂ ಧರ್ಮವನ್ನು ಹುಟ್ಟಿಸಿದ್ದು ಯಾರು, ಯಾವಾಗ ಹುಟ್ಟಿತು ಎಂಬುದು ಇನ್ನೂ ಪ್ರಶ್ನಾರ್ಥಕ ಚಿಹ್ನೆಯಾಗಿಯೇ ಉಳಿದಿದೆ ಎಂದಿದ್ದರು. ಇದೀಗ ಈ ಹೇಳಿಕೆಗೆ ಟ್ವೀಟ್ ಮಾಡುವ ಮೂಲಕ ರಾಜ್ಯ ಬಿಜೆಪಿ ಪ್ರತ್ಯುತ್ತರ ನೀಡಿದೆ.

ಇದನ್ನೂ ಓದಿ: ಕುಡಿದು ಸತ್ತರೂ ಪರಿಹಾರದ ಆಸೆಗೆ ರೈತರ ಆತ್ಮಹತ್ಯೆ ಅಂತಾರೆ – ಸಚಿವರ ಬೇಜವಾಬ್ದಾರಿ ಹೇಳಿಕೆಗೆ ರೈತರ ಆಕ್ರೋಶ

ಈ ಬಗ್ಗೆ ರಾಜ್ಯ ಬಿಜೆಪಿ ಟ್ವೀಟ್‌ ಮಾಡಿದ್ದು, “ಯಾರಿಗಾದರೂ ಅವರ ಮುತ್ತಾತನ, ತಾತನ ಹೆಸರು ಗೊತ್ತಿಲ್ಲವೆಂದರೆ ಅವರಿಗೆ ತಾತ-ತಂದೆಯಿಲ್ಲ ಎಂದಲ್ಲ, ಅವರಿಗೆ ಆ ಬಗ್ಗೆ ಜ್ಞಾನವಿಲ್ಲ ಎಂದಷ್ಟೇ. ಪಾಪ ಪರಮೇಶ್ವರ್ ಅವರ ಸ್ಮೃತಿ I.N.D.I.A ಮೈತ್ರಿಕೂಟದ ಪ್ರಭಾವದಿಂದಾಗಿ ಕೊಂಚ ಪಲ್ಲಟವಾದ ಹಾಗಿದೆ. ಹಿಂದೂ ಧರ್ಮ ಒಬ್ಬ ಪುರುಷ ಅಥವಾ ಒಂದು ಪುಸ್ತಕದಿಂದ ಹುಟ್ಟಿದ ಧರ್ಮವಲ್ಲ. ಅದಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಇದೊಂದು ಸಹಸ್ರಾರು ವರ್ಷಗಳಿಂದ ನಡೆದು ಬಂದ, ಬಹು ಉಪಾಸನಾ ವಿಧದ ಜೀವನ ಪದ್ಧತಿ. ಈ ಕಾರಣಕ್ಕೇ ಇದು ಸನಾತನ ಧರ್ಮ ಮತ್ತು ಭಾರತ ಸನಾತನ ಭೂಮಿ ಎಂದು ಹೇಳಿದೆ.

ಔರಂಗಜೇಬನಿಂದ ಹಿಡಿದು ಉದಯನಿಧಿ ಸ್ಟಾಲಿನ್‌ವರೆಗೆ ಅವೆಷ್ಟೋ ದಾಳಿಕೋರರನ್ನು ಈ ಮಣ್ಣು ಕಂಡ ಮೇಲೂ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಧರ್ಮ ಜಿಜ್ಞಾಸೆಗಿಂತಲೂ ಹೆಚ್ಚು ಸದ್ಯಕ್ಕೆ ನಿಮ್ಮ ಪಕ್ಷದಲ್ಲೇ ನಿಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಕಡೆಗೆ ಹೆಚ್ಚಿನ ಗಮನ ಕೊಡುವುದು ನಿಮ್ಮ ವೈಯಕ್ತಿಕ ಹಿತದ ದೃಷ್ಟಿಯಿಂದ ಒಳಿತು‌” ಎಂದು ಬಿಜೆಪಿ ಕೌಂಟರ್ ನೀಡಿದೆ.

suddiyaana