ಅಯೋಧ್ಯೆ ರಾಮಮಂದಿರದ ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಯಾವಾಗ? – ಟ್ರಸ್ಟ್ ಹೇಳಿದ್ದೇನು?

ನವದೆಹಲಿ: ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಕೋಟ್ಯಂತರ ಹಿಂದೂಗಳ ಕನಸು ನನಸಾಗುವ ಕಾಲ ಹತ್ತಿರವಾಗುತ್ತಿದೆ. ಶ್ರೀ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹವನ್ನು ಡಿಸೆಂಬರ್ ಅಥವಾ ಜನವರಿಯಲ್ಲಿ ಸ್ಥಾಪಿಸಲಾಗುವುದು. ರಾಮಲಲ್ಲಾ ವಿಗ್ರವನ್ನು ಪ್ರಧಾನಿ ನರೇಂದ್ರ ಮೋದಿ ಪ್ರತಿಷ್ಠಾಪಿಸಲಿದ್ದಾರೆ ಎನ್ನಲಾಗುತ್ತಿದೆ.
ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಸಂದರ್ಭದಲ್ಲಿ 7 ದಿನಗಳ ಕಾಲ ಪ್ರಾಣ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ. ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ನಿರ್ಧಾರ ಕೈಗೊಂಡಿದೆ. ಆದರೆ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಇದಕ್ಕಾಗಿ ವಿದ್ವಾಂಸರು, ಪಂಡಿತರ ಜತೆ ಚರ್ಚೆ ನಡೆಸಲಾಗುತ್ತಿದೆ ಎಂದು ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಈ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಭರದಿಂದ ಸಾಗುತ್ತಿದೆ ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕಾರ್ಯ – ಮಂದಿರದ ಗರ್ಭಗುಡಿ ಫಸ್ಟ್ ಲುಕ್ ಇಲ್ಲಿದೆ..
ರಾಮ ಮಂದಿರದ ನೆಲ ಮಹಡಿ ಹಾಗೂ ಗರ್ಭಗುಡಿಯ ಕಾಮಗಾರಿ ಡಿಸೆಂಬರ್ 15ರೊಳಗೆ ಪೂರ್ಣಗೊಳ್ಳಲಿದೆ. ಇದಾದ ನಂತರ ಪ್ರಾಣ ಪ್ರತಿಷ್ಠೆಗೆ ಸಿದ್ಧತೆಗಳು ನಡೆಯಲಿವೆ. ನೆಲ ಅಂತಸ್ತಿನ ಶೇ. 85ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಡಿಸೆಂಬರ್ ಮೊದಲ ವಾರ ಮತ್ತು ಜನವರಿ 26ರ ನಡುವೆ ಕಾರ್ಯಕ್ರಮದ ಸಂಭವನೀಯ ದಿನಾಂಕದ ಬಗ್ಗೆ ಪ್ರಧಾನಿ ಕಾರ್ಯಾಲಯಕ್ಕೆ ತಿಳಿಸಲಾಗುವುದು. ನಂತರ ಅಂತಿಮ ದಿನಾಂಕ ನಿರ್ಧಾರ ಮಾಡಲಾಗುತ್ತದೆ. ಏಳು ದಿನಗಳ ಕಾಲ ಉತ್ಸವ ನಡೆಯಲಿದೆ. ದೇಶದಾದ್ಯಂತ ಸಂತರು ಮತ್ತು ಧಾರ್ವಿುಕ ಮುಖಂಡರನ್ನು ಆಹ್ವಾನಿಸಲಾಗುವುದು. ಅಯೋಧ್ಯೆಗೆ ಬರಲು ಸಾಧ್ಯವಾಗದವರು ಅವರಿರುವ ಸ್ಥಳಗಳಲ್ಲಿ ಪ್ರಾಣ ಪ್ರತಿಷ್ಠೆಯನ್ನು ಆಚರಿಸಲು ವಿನಂತಿಸ ಲಾಗುವುದು ಎಂದು ಚಂಪತ್ ರೈ ಹೇಳಿದ್ದಾರೆ.
ರಾಮನ ವಿಗ್ರಹಗಳನ್ನು ಸಂಪೂರ್ಣವಾಗಿ ಸಿದ್ಧಪಡಿಸಲು ಸುಮಾರು 4 ತಿಂಗಳು ಬೇಕಾಗುತ್ತದೆ. ರಾಮಸೇವಕಪುರಂನಲ್ಲಿ ಎರಡು ವಿಗ್ರಹ ರೂಪುಗೊಂಡರೆ, ಅದರ ಮುಂಭಾಗದ ಆವರಣದಲ್ಲಿ ರಾಜಸ್ಥಾನದ ಮಾರ್ಬಲ್ ಸ್ಟೋನ್ನಿಂದ ಮತ್ತೊಂದು ವಿಗ್ರಹ ಕೆತ್ತನೆ ಮಾಡಲಾಗುತ್ತದೆ. ಕರ್ನಾಟಕದ ಕುಶಲಕರ್ವಿು ಗಣೇಶ್ ಎಲ್. ಭಟ್ಟ ಮತ್ತು ರಾಜಸ್ಥಾನದ ಕುಶಲಕರ್ವಿು ಸತ್ಯನಾರಾಯಣ ಪಾಂಡೆ ನೇತೃತ್ವದಲ್ಲಿ ಕೆಲಸ ನಡೆಯುತ್ತಿದೆ.