ಬರೋಬ್ಬರಿ 74 ಲಕ್ಷಕ್ಕೂ ಅಧಿಕ ಭಾರತೀಯರ ವಾಟ್ಸ್ಆ್ಯಪ್ ಖಾತೆ ಬ್ಯಾನ್! – ಮೆಟಾ ಕೊಟ್ಟ ಕಾರಣ ಏನು?
ನವದೆಹಲಿ: ಮೆಟಾ ಒಡೆತನದ ಪ್ರಸಿದ್ದ ಮೆಸೆಜಿಂಗ್ ಆ್ಯಪ್ ವಾಟ್ಸ್ಆ್ಯಪ್ ಕಂಪನಿಯು ಕಳೆದ ಏಪ್ರಿಲ್ ತಿಂಗಳಿನಲ್ಲಿ ಬರೋಬ್ಬರಿ 74 ಲಕ್ಷ ಅಧಿಕ ಭಾರತೀಯರ ಖಾತೆಗಳನ್ನು ನಿರ್ಬಂಧಿಸಿದೆ. 2021ರ ಐಟಿ ನಿಯಮಗಳ ಅನುಸಾರವಾಗಿ ಕಂಪನಿಯು ಮಾಸಿಕ ವರದಿಯನ್ನು ಪ್ರಕಟಿಸಿದ್ದು, ಇದರಲ್ಲಿ ಎಲ್ಲ ವಿವರಗಳನ್ನು ನಮೂದಿಸಲಾಗಿದೆ.
ಕಳೆದ ಏಪ್ರಿಲ್ 1 ರಿಂದ 30 ರವರೆಗೆ ವಾಟ್ಸ್ಆ್ಯಪ್ ಕಂಪನಿಯು ಲಕ್ಷಾಂತರ ದೂರುಗಳನ್ನು ಸ್ವೀಕರಿಸಿದೆ. ವಾಟ್ಸ್ಆ್ಯಪ್ ಸೇವಾ ಷರತ್ತುಗಳ ಉಲ್ಲಂಘನೆ ಮತ್ತು ಬಳಕೆದಾರರ ದೂರುಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದ್ದು, ಅದರಂತೆ 74,52,500 ವಾಟ್ಸ್ಆ್ಯಪ್ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ ಎಂದು ಮೆಟಾ ತಿಳಿಸಿದೆ.
ಇದನ್ನೂ ಓದಿ: ಭೂಮಿಯಾಳದಲ್ಲಿ ರಂಧ್ರ ಕೊರೆಯುತ್ತಿರುವುದೇಕೆ ಚೀನಾ ? – ಆಳವಾದ ಬೋರ್ಹೋಲ್ಗೆ ಕಾರಣಗಳೇನು?
ಈ ಬಗ್ಗೆ ವಾಟ್ಸ್ಆ್ಯಪ್ ವಕ್ತಾರರು ಮಾತನಾಡಿದ್ದು, 2021ರ ಐಟಿ ನಿಯಮಗಳ ಅನುಸಾರವಾಗಿ ನಾವು ಏಪ್ರಿಲ್ ತಿಂಗಳ ವರದಿಯನ್ನು ಪ್ರಕಟಿಸಿದ್ದೇವೆ. ಬಳಕೆದಾರ ಸುರಕ್ಷತಾ ವರದಿಯು, ಗ್ರಾಹಕರಿಂದ ಸ್ವೀಕರಿಸಿದ ದೂರುಗಳ ಆಧಾರಕ್ಕನುಗುಣವಾದ ತೆಗೆದುಕೊಳ್ಳಲಾದ ಕ್ರಮ ಮತ್ತು ನಮ್ಮ ಪ್ಲಾಟ್ಫಾರ್ಮ್ಗೆ ಅನುಸಾರವಾಗಿ ತೆಗೆದುಕೊಂಡಿರುವ ಕ್ರಮಗಳ ವಿವರಗಳನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.
ಬ್ಯಾನ್ ಆಗಿರುವ ಖಾತೆಗಳು ಕಿರುಕುಳ, ನಕಲಿ ಮಾಹಿತಿಯನ್ನು ಫಾರ್ವರ್ಡ್ ಮಾಡುವುದು, ಇತರ ಬಳಕೆದಾರರನ್ನು ವಂಚಿಸಿರುವುದು ಕಂಡುಬಂದಿದೆ. ಇದಲ್ಲದೆ ಹಾನಿಕಾರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಈ ಖಾತೆಗಳನ್ನು ನಿಷೇಧಿಸಲಾಗಿದೆ. ಮೇ 26 ರಂದು ಜಾರಿಗೆ ಬಂದ ಹೊಸ ಐಟಿ ನಿಯಮಗಳ ಪ್ರಕಾರ ದೊಡ್ಡ ಡಿಜಿಟಲ್ ಪ್ಲಾಟ್ಫಾರ್ಮ್ಗಳು (5 ಮಿಲಿಯನ್ಗಿಂತಲೂ ಹೆಚ್ಚು ಬಳಕೆದಾರರು) ಪ್ರತಿ ತಿಂಗಳು ವರದಿಗಳನ್ನು ಪ್ರಕಟಿಸಬೇಕು. ಈ ವರದಿಯಲ್ಲಿ ಸ್ವೀಕರಿಸಿದ ದೂರುಗಳು ಹಾಗೂ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸ್ಪಷ್ಟನೆ ನೀಡಬೇಕು.
ಇನ್ನು ವಾಟ್ಸ್ಆ್ಯಪ್ ಕಳೆದ ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ 47 ಲಕ್ಷಕ್ಕೂ ಅಧಿಕತ ಖಾತೆಗಳನ್ನು ನಿಷೇಧಿಸಿದೆ ಎಂದು ವರದಿಯಾಗಿತ್ತು. ಏಪ್ರಿಲ್ ನಲ್ಲೂ ಕೂಡ ಕಂಪನಿ ಕಿರುಕುಳ, ನಕಲಿ ಮಾಹಿತಿ ಫಾರ್ವರ್ಡ್ ಮಾಡುತ್ತಿರುವ ದೂರಿನ ಆಧಾರದ ಮೇಲೆ 74 ಲಕ್ಷಕ್ಕೂ ಅಧಿಕ ಖಾತೆಗಳನ್ನು ನಿಷೇಧಿಸಲಾಗಿದೆ.