ಲಂಕೆಯಲ್ಲಿ ಬ್ಯಾಟಿಂಗ್ ಚೆಲ್ಲಾಟಕ್ಕೆ ಬ್ರೇಕ್ – ಸರಣಿ ಗೆದ್ರೆ ಟೀಂ ಇಂಡಿಯಾಗೆ ಬಂಪರ್
ಸೋಲಿನ ಸುಳಿ ಬಿಡಿಸ್ತಾರಾ ಗಿಲ್?

ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿ ಶನಿವಾರದಿಂದ ಶುರು ಆಗಲಿದೆ. ಶುಭಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ ಎರಡು ಟೆಸ್ಟ್ ಪಂದ್ಯಗಳನ್ನ ಆಡಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ 0-2 ಅಂತರದ ಸೋಲಿನ ಬಳಿಕ ಇದು ಮೊದಲ ಡಬ್ಲ್ಯೂಟಿಸಿ ಪಂದ್ಯ. ಕಳೆದ ಜೂನ್ನಲ್ಲಿ ಆಫ್ಘನ್ ವಿರುದ್ಧ ಒಂದು ಟೆಸ್ಟ್ ಪಂದ್ಯ ಆಡಿದ್ರೂ ಕೂಡ ಅದು ಡಬ್ಲ್ಯೂಟಿಸಿ ಅಂಡರ್ನಲ್ಲಿ ಇರ್ಲಿಲ್ಲ.
ಇದನ್ನೂ ಓದಿ : IPLನಲ್ಲಿ ಆಡಲ್ಲ AUS ಪ್ಲೇಯರ್ಸ್? – RCBಗೆ ಕೈಕೊಟ್ರಾ ಡೇವಿಡ್ & ಜೋಶ್?
ವಿಶ್ವಟೆಸ್ಟ್ ಚಾಂಪಿಯನ್ಶಿಪ್ ರೇಸ್ನಲ್ಲಿ ಸದ್ಯ ಟೀಂ ಇಂಡಿಯಾ ಐದನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಹಾಗೇ ಸೌತ್ ಆಫ್ರಿಕಾ ತಂಡಗಳು ಟಾಪ್-2ನಲ್ಲಿವೆ. ಭಾರತ ಕೂಡ ರೇಸ್ನಲ್ಲಿ ಉಳೀಬೇಕು ಅಂದ್ರೆ ಲಂಕಾದಹನ ಆಗಲೇಬೇಕು. 2024ರ ಮಿಡಲ್ನಿಂದ ಈಚೆಗೆ ಭಾರತ ಟೆಸ್ಟ್ ಮಾದರಿಯಲ್ಲಿ ಸ್ಟ್ರಗಲ್ ಕಾಣ್ತಾನೇ ಇದೆ. ಇದ್ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ಒಂದೇ ಒಂದು ಸರಣಿ ಗೆದ್ದಿದ್ದು ಬಿಟ್ರೆ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು ಕಂಡಿತ್ತು. ಆಸ್ಟ್ರೇಲಿಯಾ ವಿರುದ್ಧವೂ ಸೋಲು.. ಇಂಗ್ಲೆಂಡ್‌ನಲ್ಲಿ ಡ್ರಾ ಮಾಡಿಕೊಂಡಿದ್ದೇ ಸಾಧನೆಯಾಗಿತ್ತು. ಈಗ ಶ್ರೀಲಂಕಾಗೆ ಹಾರಿರೋ ಭಾರತಕ್ಕೆ ಗೆಲ್ಲಲೇಬೇಕಾದ ಅನಿವಾರ್ಯತೆಯೂ ಇದೆ. ಒತ್ತಡವೂ ಇದೆ.
ಕಳೆದ 18 ವರ್ಷಗಳಿಂದ ಲಂಕಾದಲ್ಲಿ ಟೆಸ್ಟ್ ಸರಣಿ ಸೋಲದ ಭಾರತ!
ಶ್ರೀಲಂಕಾದಲ್ಲಿ ಭಾರತದ ಟೆಸ್ಟ್ ಪರ್ಫಾಮೆನ್ಸ್ ಇತಿಹಾಸ ಕೆದಕಿದ್ರೆ ಅಲ್ಲಿ ಭಾರತವೇ ಬಾಸ್. 9 ವರ್ಷಗಳ ಬಳಿಕ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಆಡಲು ಸಜ್ಜಾಗಿರುವ ಭಾರತಕ್ಕೆ ಈ ಸರಣಿ ಗೆಲ್ಲೋದು ಅಷ್ಟು ಸುಲಭ ಇಲ್ಲ. ಯಾಕಂದ್ರೆ ಗೌತಮ್ ಗಂಭೀರ್ ಹೆಡ್ ಕೋಚ್ ಆದ್ಮೇಲೆ ಭಾರತದ ಅಜೇಯ ವಿಜಯಯಾತ್ರೆಗಳಿಗೆಲ್ಲಾ ಬ್ರೇಕ್ ಬಿದ್ದು ಐತಿಹಾಸಿಕ ಸೋಲುಗಳನ್ನ ಕಂಡಿದ್ದಾರೆ. ಈಗ ಲಂಕಾದಲ್ಲೂ ನೋ ಲಾಸ್ ಜರ್ನಿ ಎಂಡ್ ಆಗುತ್ತೇನೋ ಅನ್ನೋ ಭಯವೂ ಇದೆ. ಇತ್ತೀಚೆಗಷ್ಟೇ ಭಾರತ ಲಂಕಾದಲ್ಲಿ ಅಲ್ಲಿನ ಕ್ರಿಕೆಟ್ ಇಲೆವೆನ್ ತಂಡದ ವಿರುದ್ಧ ವಾರ್ಮ್ ಅಪ್ ಮ್ಯಾಚಲ್ಲಿ ಗೆಲುವು ಸಾಧಿಸಿತ್ತು. ಹಾಗಂತ ಅದೇನು ದೊಡ್ಡ ಗೆಲುವೂ ಅಲ್ಲ. ಬೌಲಿಂಗ್‌ನಲ್ಲಿ ಹಿಗ್ಗಾಮುಗ್ಗಾ ಹೊಡೆಸಿಕೊಂಡಿದ್ದ ತಂಡ ಲಾಸ್ಟ್ ಓವರ್ನಲ್ಲಿ ಅದೂ ಕೂಡ ಮೊಹಮ್ಮದ್ ಸಿರಾಜ್ ಅವ್ರ ಹ್ಯಾಟ್ರಿಕ್ ಸಿಕ್ಸ್ಗಳ ಮ್ಯಾಜಿಕ್ನಿಂದಾಗಿ ಗೆದ್ದು ಬೀಗಿತ್ತು. ಹೀಗಾಗಿ ಅಧಿಕೃತ ಪಂದ್ಯಗಳಲ್ಲೂ ಭಾರತಕ್ಕೆ ಅತಿದೊಡ್ಡ ಸವಾಲೇ ಎದುರಾಗಲಿದೆ. ಹಾಗೇನಾದ್ರೂ ಭಾರತ ಇಲ್ಲಿ ಎರಡಕ್ಕೆ ಎರಡೂ ಪಂದ್ಯಗಳನ್ನ ಗೆದ್ರೆ ದೊಟ್ಟ ಲಾಟರಿ ಹೊಡೆದಂತೆಯೇ ಲೆಕ್ಕ.
ಲಂಕಾ ದಹನಕ್ಕೆ ಭಾರತ ಸಜ್ಜು!
ಸಾಲು ಸಾಲು ಸರಣಿಗಳನ್ನ ಸೋತಿರುವ ತಂಡಕ್ಕೆ ಗೆಲುವಿನ ಕಾನ್ಫಿಡೆನ್ಸ್
ಮುಂಬರುವ ನ್ಯೂಜಿಲೆಂಡ್ & ಆಸ್ಟ್ರೇಲಿಯಾ ಟೆಸ್ಟ್ ಸರಣಿಗಳಿಗೆ ಬೂಸ್ಟ್
ಬ್ಯಾಟಿಂಗ್ ಆರ್ಡರ್ ಬಗ್ಗೆ ಕ್ಲಾರಿಟಿ, ಮ್ಯೂಸಿಕಲ್ ಚೇರ್ ಆಟಕ್ಕೆ ಬ್ರೇಕ್
ಗಾಲೆ & ಕೊಲೊಂಬೊದಲ್ಲಿ ಸ್ಪಿನ್ ದಾಳಿ ಎದುರು ಗೆದ್ರೆ ಹೊಸ ವಿಶ್ವಾಸ
ಡಬ್ಲ್ಯೂಸಿಟಿ ಫೈನಲ್ ರೇಸ್ ನಲ್ಲಿ ಉಳಿಯೋದು ಇಲ್ಲಿಯೇ ನಿರ್ಧಾರ
ವಿದೇಶಿ ನೆಲಗಳಲ್ಲಿ ಟೆಸ್ಟ್ ಗೆಲ್ಲೋದು ಗಿಲ್ ಕ್ಯಾಪ್ಟನ್ಸಿಗೂ ಅಗ್ನಿಪರೀಕ್ಷೆ
ಶ್ರೀಲಂಕಾದಲ್ಲಿ ಕಳೆದ 18 ವರ್ಷಗಳಿಂದ ಟೆಸ್ಟ್ ಸರಣಿಯನ್ನು ಸೋತಿಲ್ಲ
ಈ ಎಲ್ಲಾ ಕಾರಣಗಳಿಂದ ಭಾರತಕ್ಕೆ ಶ್ರೀಲಂಕಾ ಟೆಸ್ಟ್ ಸರಣಿ ಗೆಲ್ಲೋದು ತುಂಬಾನೇ ಮುಖ್ಯವಾಗಿದೆ. ಇನ್ನು ಭಾರತ-ಲಂಕಾ ತಂಡಗಳು 1982ರಿಂದಲೇ ಟೆಸ್ಟ್ ಸರಣಿ ಆಡುತ್ತಿವೆ. ಭಾರತ ಮೊದಲ ಬಾರಿ ಲಂಕಾದಲ್ಲಿ ಟೆಸ್ಟ್ ಆಡಿದ್ದು 1985ರಲ್ಲಿ. ಅದರಲ್ಲಿ ಲಂಕಾ ಗೆದ್ದಿತ್ತು. ಆ ಬಳಿಕ ಭಾರತ ತಂಡ ಲಂಕಾ ಪ್ರವಾಸ ಕೈಗೊಂಡಿದೆ. ಆದರೆ 2008ರ ಬಳಿಕ ಲಂಕಾದಲ್ಲಿ ಭಾರತ ತಂಡ ಟೆಸ್ಟ್ ಸರಣಿ ಸೋತಿಲ್ಲ. 2010ರಲ್ಲಿ ಸರಣಿ ಡ್ರಾಗೊಂಡಿದ್ದರೆ, 2015, 2017ರ ಸರಣಿಗಳಲ್ಲಿ ಭಾರತ ಗೆದ್ದಿತ್ತು. ಒಟ್ಟಾರೆ ಕಳೆದ 18 ವರ್ಷಗಳಲ್ಲಿ ಭಾರತ ತಂಡ ಲಂಕಾದಲ್ಲಿ ಟೆಸ್ಟ್ ಸರಣಿ ಸೋತಿಲ್ಲ. ಭಾರತ ಹಾಗೂ ಲಂಕಾ ಎರಡೂ ದೇಶಗಳಲ್ಲಿ 2008ರ ಬಳಿಕ ನಡೆದ ಒಟ್ಟು 6 ಟೆಸ್ಟ್ ಸರಣಿಗಳಲ್ಲಿ ಭಾರತ ಅಜೇಯವಾಗಿದೆ. 5 ಸರಣಿಗಳಲ್ಲಿ ಟೀಂ ಇಂಡಿಯಾ ಗೆದ್ದಿದ್ದು, 1 ಸರಣಿ ಡ್ರಾದಲ್ಲಿ ಅಂತ್ಯಗೊಂಡಿದೆ. ಕಳೆದ 10 ಟೆಸ್ಟ್ ಪಂದ್ಯಗಳಲ್ಲೂ ಭಾರತ ಅಜೇಯವಾಗಿದ್ದು, ಈ ಗೆಲುವಿನ ಓಟವನ್ನು ಈ ಬಾರಿಯೂ ಮುಂದುವರಿಸುವ ನಿರೀಕ್ಷೆಯಲ್ಲಿದೆ. 2024ರ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತ ತಂಡ ತವರಿನಲ್ಲೇ ನ್ಯೂಜಿಲೆಂಡ್ ವಿರುದ್ಧ 0-3 ಅಂತರದಲ್ಲಿ ಹೀನಾಯವಾಗಿ ಸರಣಿ ಸೋತಿತ್ತು. ಅದು ಭಾರತಕ್ಕೆ ತವರಿನಲ್ಲಿ 12 ವರ್ಷಗಳಲ್ಲೇ ಎದುರಾದ ಮೊದಲ ಸರಣಿ ಸೋಲು. ಅದೇ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ 5 ಪಂದ್ಯಗಳ ಸರಣಿಯನ್ನು 1-3 ಅಂತರದಲ್ಲಿ ಕಳೆದುಕೊಂಡಿತ್ತು. ಅದು ಆಸ್ಟ್ರೇಲಿಯಾ ವಿರುದ್ಧ 10 ವರ್ಷಗಳ ಬಳಿಕ ಭಾರತಕ್ಕೆ ಎದುರಾಗಿದ್ದ ಸೋಲು. ಕಳೆದ ವರ್ಷ ನವೆಂಬರ್‌ನಲ್ಲಿ ಭಾರತಕ್ಕೆ ಆಗಮಿಸಿದ್ದ ದಕ್ಷಿಣ ಆಫ್ರಿಕಾ ತಂಡ, 2 ಪಂದ್ಯಗಳ ಸರಣಿಯನ್ನು 0-2 ಅಂತರದಲ್ಲಿ ಕೈವಶಪಡಿಸಿಕೊಂಡಿತ್ತು. ಈ ಮೂಲಕ ಭಾರತ ತಂಡ ಬರೋಬ್ಬರಿ 25 ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿ ಸೋತಿತ್ತು. ಹೀಗೆ ಕಳೆದ ಎರಡ್ಮೂರು ವರ್ಷಗಳಿಂದ ಭಾರತ ಟೆಸ್ಟ್ ಮಾದರಿಯಲ್ಲಿ ಕಂಪ್ಲೀಟ್ ಹಳ್ಳ ಹಿಡಿದಿದೆ. ಈಗ ಮತ್ತೆ ಗೆಲುವಿನ ಟ್ರ್ಯಾಕ್ಗೆ ಬರಬೇಕು. ಗತವೈಭವ ಮರಳಿ ಸಿಗ್ಬೇಕು ಅಂದ್ರೆ ಶತಾಯ ಗತಾಯ ಲಂಕೆಗೆ ಭಾರತ ಲಗಾಮು ಹಾಕಲೇಬೇಕಿದೆ.

ನೋಡಿರಿ

