ಡಿಕೆ ಸುರೇಶ್ ವಿರುದ್ಧ ಡಾ.ಮಂಜುನಾಥ್ ಕಣಕ್ಕಿಳಿದರೆ ಏನಾಗುತ್ತೆ? – ಅಳಿಯ ಸ್ಪರ್ಧೆ ಮಾಡೋದು ದೇವೇಗೌಡರಿಗೆ ಇಷ್ಟವಿಲ್ಲ ಏಕೆ..?

ಡಿಕೆ ಸುರೇಶ್ ವಿರುದ್ಧ ಡಾ.ಮಂಜುನಾಥ್ ಕಣಕ್ಕಿಳಿದರೆ ಏನಾಗುತ್ತೆ? – ಅಳಿಯ ಸ್ಪರ್ಧೆ ಮಾಡೋದು ದೇವೇಗೌಡರಿಗೆ ಇಷ್ಟವಿಲ್ಲ ಏಕೆ..?

ಲೋಕಸಭಾ ಚುನಾವಣೆಗೆ ಬಿಜೆಪಿ ಜೆಡಿಎಸ್ ಮೈತ್ರಿ ಪಾಲಿಟಿಕ್ಸ್ ಜೋರಾಗೇ ನಡೀತಿದೆ. ಕ್ಷೇತ್ರಗಳ ಹಂಚಿಕೆಯಿಂದ ಹಿಡಿದು ಅಭ್ಯರ್ಥಿಗಳ ಆಯ್ಕೆವರೆಗೂ ಅಳೆದು ತೂಗಿ ಲೆಕ್ಕಾಚಾರ ಹಾಕಲಾಗುತ್ತಿದೆ. ಈ ಬಾರಿ 28ಕ್ಕೆ 28 ಕ್ಷೇತ್ರಗಳನ್ನೂ ಗೆಲ್ಲಬೇಕೆಂಬುದು ಮೈತ್ರಿ ಪಕ್ಷಗಳ ಗುರಿ. ಅದಕ್ಕಾಗಿ ಹಲವು ಕ್ಷೇತ್ರಗಳಿಗೆ ಅಚ್ಚರಿಯ ಅಭ್ಯರ್ಥಿಗಳನ್ನ ಆಯ್ಕೆ ಮಾಡ್ತಿದ್ದಾರೆ. ಅದ್ರಲ್ಲೂ ಕಾಂಗ್ರೆಸ್‌ನ ಕಟ್ಟಾಳು ಡಿ.ಕೆ ಶಿವಕುಮಾರ್ ಅವರ ಸೋದರ ಡಿ.ಕೆ ಸುರೇಶ್‌ ಅವರನ್ನು ಮಣಿಸಲು ದೋಸ್ತಿಗಳು ಚಕ್ರವ್ಯೂಹವನ್ನೇ ರೆಡಿ ಮಾಡಿದ್ದಾರೆ. ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿರೋ ಡಿ.ಕೆ ಸುರೇಶ್‌ ಅವರಿಗೆ ಸೋಲಿನ ರುಚಿ ತೋರಿಸಲು ದೊಡ್ಡಗೌಡ್ರ ಅಳಿಯನನ್ನೇ ಕಣಕ್ಕಿಳಿಸಲು ಮೈತ್ರಿ ನಾಯಕರು ಸ್ಕೆಚ್ ಹಾಕಿದ್ದಾರೆ. ರೋಗಿಗಳ ಹೃದಯ ಗೆದ್ದ ವೈದ್ಯ ಎಂದೇ ಕರೆಸಿಕೊಳ್ಳುತ್ತಿದ್ದ ಡಾ.ಸಿ.ಎನ್ ಮಂಜುನಾಥ್ ಅವರನ್ನೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಸುವುದು ಬಹುತೇಕ ಫೈನಲ್‌ ಆದಂತಿದೆ..  ಒಂದ್ಕಡೆ ಬಿಜೆಪಿ ನಾಯಕರು ಡಾ.ಮಂಜುನಾಥ್ ಅವ್ರ ಸ್ಪರ್ಧೆಗೆ ಪಟ್ಟು ಹಿಡಿದು ಕುಳಿತಿದ್ರೆ ಅತ್ತ ದೇವೇಗೌಡ್ರ ತಲೆಯಲ್ಲಿ ಬೇರೆಯದ್ದೇ ಯೋಚನೆ ಇದೆ. ಒಂದು ಕಪ್ಪು ಚುಕ್ಕೆಯೂ ಇಲ್ಲದ ಅಳಿಯನನ್ನು ರಾಜಕೀಯದ  ಅಖಾಡದಲ್ಲಿ ದಾಳವಾಗಿ ಉರುಳಿಸಲು ಗೌಡರು ತಯಾರಿಲ್ಲ.. ಹಾಗಂತ ಕೇಂದ್ರದ ಮಂತ್ರಿಯಾಗಿ ನೋಡುವ ಅವಕಾಶ ಸಿಕ್ಕರೆ ಅದಕ್ಕಿಂತ ದೊಡ್ಡ ಗೌರವ ಬೇರಿಲ್ಲ ಎಂಬ ಯೋಚನೆಯೂ ಗೌಡರಲ್ಲಿ ಮನೆ ಮಾಡಿದಂತಿದೆ.. ಆದ್ರೆ ಹಾರ್ಡ್‌ಕೋರ್‌ ರಾಜಕಾರಣಿಗಳಾಗಿರುವ ಡಿಕೆ ಸೋದರರ ವಿರುದ್ಧ ಅಳಿಯನನ್ನು ನಿಲ್ಲಿಸಿದರೆ ಗೆಲುವು ಅಷ್ಟು ಸುಲಭದ ಮಾತಲ್ಲ ಎನ್ನುವುದು ದೇವೇಗೌಡರಿಗೆ ಸ್ವಂತ ಅನುಭವದಿಂದಲೇ ಗೊತ್ತಿದೆ.. ಯಾಕಂದ್ರೆ ಡಿಕೆಶಿ ಹೆಣೆದಿದ್ದ ಜಾಲದಲ್ಲಿ ಹಿಂದೆ ಸ್ವತಃ ದೇವೇಗೌಡರೇ ಸೋತಿದ್ದರು. ಈಗ ಡಿ.ಕೆ ಸುರೇಶ್ ವಿರುದ್ಧ ಮಂಜುನಾಥ್ರನ್ನ ಸ್ಪರ್ಧೆಗೆ ಇಳಿಸಲು ದೇವೇಗೌಡರಿಗಿಂತ ಬಿಜೆಪಿ ನಾಯಕರಿಗೆ ಹೆಚ್ಚಿನ ಉತ್ಸಾಹವಿದೆ.. ಕಮಲ ನಾಯಕರ ಕನಸಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಾಥ್‌ ನೀಡುತ್ತಿರುವುದು ವಿಶೇಶ.. ಹಾಗಿದ್ದರೆ ಡಿಕೆ ಸುರೇಶ್‌ ವಿರುದ್ಧ ಡಾ.ಮಂಜುನಾಥ್‌ ಅವರನ್ನು ಕಣಕ್ಕಿಳಿಸಬೇಕು ಎನ್ನುವವರ ಉದ್ದೇಶ ಏನು..? ಬಿಜೆಪಿ ನಾಯಕರ ಲೆಕ್ಕಾಚಾರ ಏನು..? ಲೋಕಸಭಾ ಚುನಾವಣೆಗೆ ಡಾ.ಮಂಜುನಾಥ್ ಸ್ಪರ್ಧೆ ಮಾಡೋದು ದೇವೇಗೌಡರಿಗೆ ಇಷ್ಟ ಇಲ್ಲ ಏಕೆ..? ಈ ಬಗೆಗಿನ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಡಿ.ಕೆ ಸುರೇಶ್ ವಿರುದ್ಧ ಕಣಕ್ಕಿಳಿಯೋ ಸ್ಪರ್ಧಿ ಯಾರು..?- ಹೆಚ್‌ಡಿಕೆ ಉರುಳಿಸಿರೋ ದಾಳ ಯಾವುದು..?

ಕಾಂಗ್ರೆಸ್ ಭದ್ರಕೋಟೆಯಾಗಿರುವ ಅದ್ರಲ್ಲೂ ಡಿಸಿಎಂ ಡಿ.ಕೆ ಶಿವಕುಮಾರ್ ಅವ್ರ ಸಹೋದರ ಡಿ.ಕೆ ಸುರೇಶ್ ಪ್ರತಿನಿಧಿಸುತ್ತಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಈ ಬಾರಿ ಡಾ.ಸಿ.ಎನ್ ಮಂಜುನಾಥ್ ಸ್ಪರ್ಧೆ ಮಾಡೋದು ಬಹುತೇಕ ಫೈನಲ್ ಆಗಿದೆ. ಇಷ್ಟು ದಿನ ರಾಜಕೀಯ ಸೇರಬೇಕೋ ಬೇಡವೋ ಎಂಬ ಯೋಜನೆಯಲ್ಲಿದ್ದ ಡಾಕ್ಟರ್‌, ಈಗ ರಾಜಕೀಯ ಅದೃಷ್ಟ ಪರೀಕ್ಷೆಗೆ ಮುಂದಾಗುವ ಸಾಧ್ಯತೆ ದಟ್ಟವಾಗಿದೆ.. ಆರ್‌ ಆರ್‌ ನಗರ ಶಾಸಕ ಮುನಿರತ್ನ ಆಯೋಜಿಸಿದ್ದ ಶಿವರಾತ್ರಿ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಜೊತೆಯೇ ಡಾ.ಸಿ.ಎನ್. ಮಂಜುನಾಥ್ ವೇದಿಕೆ ಹಂಚಿಕೊಂಡಿದ್ದರು. ನಿಮ್ಮಂತಹ ವ್ಯಕ್ತಿಗಳು ರಾಜಕೀಯಕ್ಕೆ ಬರಬೇಕು ಎಂದು ಹೇಳುವ ಮೂಲಕ ವೇದಿಕೆ ಮೇಲೆಯೇ ಬಿಜೆಪಿಗೆ ಆಹ್ವಾನ ನೀಡಲಾಗಿತ್ತು. ಬಿಜೆಪಿ ನಾಯಕರು ಡಾ. ಮಂಜುನಾಥ್ರಿಗೆ ಬೆಂಗಳೂರು ಗ್ರಾಮಾಂತರದಿಂದ ಮೈತ್ರಿ ಅಭ್ಯರ್ಥಿಯಾಗಿ ಟಿಕೆಟ್ ಕೊಡಲು ಮುಂದಾಗಿರೋದಕ್ಕೆ ಕಾರಣವೂ ಇದೆ.

ಬಿಜೆಪಿ ಮೈಂಡ್ ಗೇಮ್!

ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್ ಕಾಂಗ್ರೆಸ್ನ ಪ್ರಭಾವಿ ನಾಯಕ. ಅಲ್ಲದೆ ಕ್ಷೇತ್ರ ಕೂಡ ಕಾಂಗ್ರೆಸ್ನ ಭದ್ರಕೋಟೆ. ಅದಕ್ಕಿಂತ ಮೇಲಾಗಿ ಡಿ.ಕೆ ಶಿವಕುಮಾರ್ ಅವ್ರ ಸಹೋದರ. ಡಿಕೆ ಬ್ರದರ್ಸ್ ಡೋಂಟ್ಕೇರ್ ಪಾಲಿಟಿಕ್ಸ್ ಮಾಡಿಕೊಂಡೇ ಬಂದವರು. ಹೀಗಾಗಿ ಡಿ.ಕೆ ಸುರೇಶ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದರೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಕಡಿವಾಣ ಹಾಕಿದಂತೆ ಆಗುತ್ತೆ. ಸರ್ಕಾರದ ಮಟ್ಟದಲ್ಲಿ ಹಾಗೂ ಒಕ್ಕಲಿಗ ಸಮುದಾಯದಲ್ಲಿ ಡಿಕೆಶಿ ಪ್ರಭಾವ ಕಡಿಮೆಯಾಗಲಿದೆ ಎಂದ ಲೆಕ್ಕಾಚಾರ ಇದರ ಹಿಂದಿದೆ..  ಇದೇ ಕಾರಣಕ್ಕೆ ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕರಾದ ಡಾ.ಸಿ.ಎನ್ ಮಂಜುನಾಥ್ರನ್ನೇ ಡಿ.ಕೆ ಸುರೇಶ್ ಎದುರು ಕಣಕ್ಕಿಳಿಸಲು ಪ್ಲ್ಯಾನ್ ಮಾಡಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ಕೂಡ ಅವಿರೋಧವಾಗಿ ಒಪ್ಪಿಕೊಂಡಿದ್ದಾರೆ.

ಯಾವಾಗ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಡಾ.ಮಂಜುನಾಥ್ ಅವರ ಹೆಸರು ಫಿಕ್ಸ್ ಅನ್ನೋ ಸಂದೇಶ ಬಂತೋ ಆ ಕೂಡಲೇ  ಮಾಜಿ ಸಚಿವ ಸಿ.ಪಿ ಯೋಗೇಶ್ವರ್, ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ, ಶಾಸಕ ಮುನಿರತ್ನ  ಸಭೆ ನಡೆಸಿದ್ದರು. ಬಳಿಕ ಮಂಜುನಾಥ್ರನ್ನ ಮುನ್ನಲೆಗೆ ತರಬೇಕೆಂಬ ಚರ್ಚೆ ನಡೆದಿತ್ತು. ಅದ್ರಂತೆ ಬಿಜೆಪಿ ಕಾರ್ಯಕ್ರಮಕ್ಕೂ ಕರೆದು ಚುನಾವಣಾ ಅಖಾಡ ಸಿದ್ಧಗೊಳಿಸ್ತಿದ್ದಾರೆ. ಒಂದ್ಕಡೆ ಮೈತ್ರಿ ನಾಯಕರು ಮಂಜುನಾಥ್ರ ಸ್ಪರ್ಧೆಗೆ ಸಜ್ಜು ಮಾಡ್ತಿದ್ರೆ ಅತ್ತ ದೊಡ್ಡಗೌಡ್ರು ಒಳಗೊಳಗೇ ಆತಂಕ ಪಡ್ತಿದ್ದಾರೆ. ಹಾಗೇ ಚುನಾವಣಾ ರಾಜಕೀಯಕ್ಕೆ ತಮ್ಮ ಅಳಿಯ ಬರೋದಕ್ಕೆ ತಾವು ಒಪ್ಪಿಗೆ ನೀಡಲ್ಲ ಎಂದಿದ್ದಾರೆ.

ದೊಡ್ಡಗೌಡ್ರ ಪ್ಲ್ಯಾನೇ ಬೇರೆ!

ದೇವೇಗೌಡರಿಗೆ ತಮ್ಮ ಅಳಿಯ ಡಾ.ಸಿ.ಎನ್ ಮಂಜುನಾಥ್ ರಾಜಕೀಯಕ್ಕೆ ಬರುವುದು ಇಷ್ಟ ಇಲ್ಲ ಅಂತೇನಿಲ್ಲ. ಆದ್ರೆ ಚುನಾವಣಾ ರಾಜಕೀಯ ಬೇಡ. ಅದ್ರಲ್ಲೂ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಬೇಡವೇಬೇಡ ಎನ್ನುವುದು ದೊಡ್ಡಗೌಡ್ರ ವಾದ. ಯಾಕಂದ್ರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಕಾಂಗ್ರೆಸ್ನ ಭದ್ರಕೋಟೆ. ಈಗಾಗ್ಲೇ ಡಿ.ಕೆ ಸುರೇಶ್ ಕಾಂಗ್ರೆಸ್ನಿಂದ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಜೊತೆಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣಾ ವ್ಯಾಪ್ತಿಗೆ ಬರುವ ರಾಮನಗರ ಜಿಲ್ಲೆ ಡಿಕೆ ಬ್ರದರ್ಸ್ ಪ್ರಾಬಲ್ಯವಿರುವ ಕ್ಷೇತ್ರ. ಅಂಥಾದ್ರಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಅದೂ ಕೂಡ ಇದೇ ಮೊದಲ ಬಾರಿಗೆ ಡಾ.ಸಿ.ಎನ್ ಮಂಜುನಾಥ್ ಸ್ಪರ್ಧೆ ಮಾಡಿದ್ರೆ ಗೆದ್ದೇ ಗೆಲ್ತಾರೆ ಅಂತಾ ಹೇಳೋಕೆ ಆಗಲ್ಲ. ಹಾಗೇನಾದ್ರೂ ಆದ್ರೆ ದಶಕಗಳ ಕಾಲ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿ ಮಾಡಿದ ಸಾಧನೆಗಳಿಗೆ ಚುನಾವಣೆ ಸೋಲು ಕಪ್ಪುಚುಕ್ಕೆಯಂತಾಗಿಬಿಡುತ್ತೆ. ಅದರ ಬದಲು ರಾಜ್ಯಸಭೆಗೆ ನೇರ ಆಯ್ಕೆ ಮಾಡಿದರೆ ಪ್ರಧಾನಿ ಮೋದಿಯವರ ಮನವೊಲಿಸಿ ಅಳಿಯನಿಗೆ ಸಚಿವ ಪಟ್ಟ ಕೊಡಿಸಬೇಕೆಂಬುದು ದೊಡ್ಡಗೌಡ್ರ ಮಹದಾಸೆ. ಹೀಗಾಗಿ ಮಂಜುನಾಥ್ರಿಗೆ ಚುನಾವಣೆ ಸ್ಪರ್ಧೆ ಬೇಡ ಎನ್ನುತ್ತಿದ್ದಾರೆ.

ಇದೇ ಕಾರಣಕ್ಕೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಅಳಿಯ ಸ್ಪರ್ಧೆ ಮಾಡೋದು ಬೇಡ ಅಂತಿದ್ದಾರೆ ದೊಡ್ಡಗೌಡ್ರು. ಆದ್ರೆ ಬಿಜೆಪಿ ನಾಯಕರು ಮತ್ತು ಹೆಚ್.ಡಿ ಕುಮಾರಸ್ವಾಮಿ ಮಾತ್ರ ಸ್ಪರ್ಧೆಗೆ ವೇದಿಕೆ ಸಿದ್ಧ ಮಾಡ್ತಿದ್ದಾರೆ. ಇಲ್ಲಿ ಒಂದಂತೂ ಸತ್ಯ. ಬೆಂಗಳೂರು ಗ್ರಾಮಾಂತರ ಡಿ.ಕೆ ಸುರೇಶ್ ಪ್ರಾಬಲ್ಯವಿರುವ ಕ್ಷೇತ್ರ. ಇಲ್ಲಿ ಮಂಜುನಾಥ್ ಗೆ ಅಷ್ಟು ಈಸಿಯಾಗಿ ಗೆಲುವು ಧಕ್ಕುವ ಸಾಧ್ಯತೆಯಿಲ್ಲ.. ಒಳ್ಳೆಯತನ, ಜನಪ್ರಿಯತೆ ಅನ್ನೋದೇ ಬೇರೆ.. ಚುನಾವಣಾ ರಾಜಕೀಯ ಎನ್ನುವುದೇ ಬೇರೆ.. ಇಲ್ಲಿ ಒಮ್ಮೆ ಎದುರಾಳಿಗಳು ನಿರ್ಧಾರವಾದರೆ ನಂತರ ಜನ ಕೂಡ ಒಳಿತು- ಕೆಡುಕುಗಳನ್ನು ಮರೆತು ಎದುರುಬದುರಾಗುವ ಸಾಧ್ಯತೆ ಇರುತ್ತದೆ.. ಇದುವೇ ಈಗ ದೊಡ್ಡ ಗೌಡರನ್ನು ಚಿಂತೆಗೆ ಈಡು ಮಾಡಿದ್ದರೂ, ಡಾ.ಮಂಜುನಾಥ್‌ ಅವರನ್ನು ರಾಜಕೀಯಕ್ಕೆ ಎಳೆದು ತರುವ ಪ್ರಯತ್ನ ಮಾತ್ರ ಜೋರಾಗಿಯೇ ಸಾಗಿದೆ.

Sulekha