ಬೆಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಕಂಡಿದ್ದು ಚಿರತೆಯಲ್ಲ.. ಕಾಡುಬೆಕ್ಕು..!

ಬೆಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಕಂಡಿದ್ದು ಚಿರತೆಯಲ್ಲ.. ಕಾಡುಬೆಕ್ಕು..!

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್​ನಲ್ಲಿ ಕೆಲದಿನಗಳಿಂದ ಚಿರತೆಯದ್ದೇ ಚಿಂತೆಯಾಗಿತ್ತು. ಚಿರತೆ ಕಾಣಿಸಿಕೊಂಡಿದೆ ಅನ್ನೋ ವಿಚಾರ ಆತಂಕಕ್ಕೂ ಕಾರಣವಾಗಿತ್ತು. ಚಿರತೆಯಿರುವ ದೃಶ್ಯಾವಳಿಗಳು ನೋಡಿದ ಮೇಲಂತೂ ಚಿರತೆಯನ್ನ ಹಿಡಿಯಿರಿ ಎಂಬ ಕೂಗು ಜೋರಾಗಿ ಕೇಳಿಬಂದಿತ್ತು. ಆದರೆ, ಇದೀಗ ಬಂದ ಮಾಹಿತಿ ಪ್ರಕಾರ, ಅದು ಚಿರತೆಯಲ್ಲ, ಅದೇ ಆಕಾರ ಹೋಲುವ ಕಾಡುಬೆಕ್ಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ವನ್ಯಜೀವಿ ಸಂರಕ್ಷಣೆ ಕಾರ್ಯಕರ್ತರು ವಿವರಣೆ ನೀಡಿದ್ದಾರೆ.

ಇದನ್ನೂ ಓದಿ:  ಜ. 16 ರಿಂದ ಬೆಂಗಳೂರು – ಮೈಸೂರು ಇವಿ ಪವರ್ ಪ್ಲಸ್ ಬಸ್ ಸೇವೆ ಆರಂಭ

ಈ ಪ್ರಾಣಿಯು ದಕ್ಷಿಣ ಏಷ್ಯಾದ ಕಾಡುಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಕಳೆದ ಶುಕ್ರವಾರದಿಂದ ಕಾಡುಬೆಕ್ಕಿನ ಸಿಸಿಟಿವಿ ಫೂಟೇಜ್ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಲು ಆರಂಭಿಸಿತ್ತು. ಅಷ್ಟೇ ಅಲ್ಲದೇ, ಬೆಂಗಳೂರು ವಿಶ್ವವಿದ್ಯಾಲಯದ ಸಮೀಪ ಚಿರತೆಯೊಂದು ಕಾಣಿಸಿಕೊಂಡಿದೆ ಎಂಬ ಮಾಹಿತಿ ಆತಂಕಕ್ಕೂ ಕಾರಣವಾಗಿತ್ತು. ಈ ವಿಚಾರದ ಕುರಿತು ಅರಣ್ಯ ಇಲಾಖೆಯ ಆರ್​ಎಫ್​ಒ ಒಬ್ಬರು ಮಾಹಿತಿ ನೀಡಿದ್ದಾರೆ. ‘ಬೆಂಗಳೂರು ಹೊರವಲಯದ ಕಾಡುಗಳಲ್ಲಿ ಚಿರತೆ ಕಾಣಿಸುವುದರಲ್ಲಿ ವಿಶೇಷ ಏನೂ ಇಲ್ಲ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ವಿಡಿಯೊ ತುಣುಕು ಕಾಡುಬೆಕ್ಕಿನದು. ಅದು ಚಿರತೆ ಅಲ್ಲ. ವಿಡಿಯೊ ಕ್ಲಿಪ್​ನಲ್ಲಿದ್ದ ಪ್ರಾಣಿಯ ದೇಹದ ಗಾತ್ರ ಮತ್ತು ಅದರ ಕಿವಿ ಇರುವ ರೀತಿಯನ್ನು ವಿಶ್ಲೇಷಿಸಿದಾಗ ಅದು ಪ್ರೌಢಾವಸ್ಥೆಯಲ್ಲಿರುವ ಕಾಡುಬೆಕ್ಕು ಎಂಬ ಅಂಶ ಮನದಟ್ಟಾಯಿತು’ ಎಂದಿದ್ದಾರೆ.

ಕನ್ನಳ್ಳಿ ಸಮೀಪದ ಗಂಗಾಡಿಪುರ ಗ್ರಾಮದ ಮಹಿಳೆಯೊಬ್ಬರು ಬೆಂಗಳೂರು ನಗರ ಆರ್​ಎಫ್​ಒ ಕಚೇರಿಯನ್ನು ಸಂಪರ್ಕಿಸಿ ತಮ್ಮ ಬಳಿ ಇದ್ದ ವಿಡಿಯೊ ತುಣುಕು ಹಂಚಿಕೊಂಡಿದ್ದರು. ಕೃತಕ ಸೌಂಡ್ ಎಫೆಕ್ಟ್ ಮತ್ತು ಗರ್ಜಿಸುವ ಧ್ವನಿಗಳಿದ್ದ ವಿಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದ ನಂತರ ವಿಷಯ ಏನೆಂದು ಮನದಟ್ಟಾಯಿತು. ಆದರೂ ಅರಣ್ಯ ಇಲಾಖೆ ಸಿಬ್ಬಂದಿ ಇಡೀ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ಯಾರೂ ಕೂಡಾ ಚಿರತೆಯನ್ನು ಕಣ್ಣಾರೆ ಕಂಡಿದ್ದನ್ನು ತಿಳಿಸಿಲ್ಲ ಎಂದು ಅರಣ್ಯ ಇಲಾಖೆ ಕೂಡಾ ಸ್ಪಷ್ಪಪಡಿಸಿದೆ.

suddiyaana