ಆರ್‌ಸಿಬಿ ಪ್ಲೇ ಆಫ್‌ಗೆ ಲಗ್ಗೆ ಹಾಕಲು ಗೆಲುವಿನ ಅಂತರ ಎಷ್ಟಿರಬೇಕು..? – ಯಾವ ತಂಡಗಳು ಸೋಲಬೇಕು?
ಐಪಿಎಲ್ 2024ರ ಸೀಸನ್ ಕೊನೇ ಹಂತಕ್ಕೆ ಬಂದಿದೆ. ಲೀಗ್ ಹಂತದಲ್ಲಿ ಇನ್ಮುಂದೆ 8 ಪಂದ್ಯಗಳಷ್ಟೇ ಬಾಕಿ ಉಳಿದಿವೆ. ಹೀಗಿದ್ರೂ ಈವರೆಗೆ ಕೆಕೆಆರ್ ಮಾತ್ರವೇ ಅಧಿಕೃತವಾಗಿ ಪ್ಲೇಆಫ್ ಗೆ ಲಗ್ಗೆ ಇಟ್ಟಿದೆ. ಗುಜರಾತ್ ಟೈಟಾನ್ಸ್, ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ಪ್ಲೇಆಫ್‌ನಿಂದ ಹೊರ ಬಿದ್ದಿವೆ. ಸದ್ಯ ಉಳಿದ 3 ಸ್ಥಾನಗಳಿಗಾಗಿ 6 ತಂಡಗಳ ನಡುವೆ ರೇಸ್ ನಡೀತಿದೆ. ಇದ್ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡಾ ಒಂದು. ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ, ಪ್ಲೇ ಆಫ್ ರೇಸ್‌ನಲ್ಲಿ ತಾನಿನ್ನೂ ಜೀವಂತವಾಗಿರುವುದಾಗಿ ಆರ್‌ಸಿಬಿ ತೋರಿಸಿಕೊಟ್ಟಿದೆ. ಸತತ ಐದು ಗೆಲುವುಗಳೊಂದಿಗೆ ಪ್ರಚಂಡ ಫಾರ್ಮ್‌ನಲ್ಲಿರುವ ಆರ್‌ಸಿಬಿ ತಂಡದ ಮುಂದಿರುವುದು ಒಂದು ಪಂದ್ಯ ಮಾತ್ರ. ಆದ್ರೆ ಈ ಪಂದ್ಯವೇ ಆರ್‌ಸಿಬಿ ಪಾಲಿಗೆ ನಿರ್ಣಾಯಕವಾಗಿದೆ. ಸಿಎಸ್‌ಕೆ ವಿರುದ್ಧ ಗೆದ್ರೆ ಮಾತ್ರವೇ ಪ್ಲೇಆಫ್ ಕನಸು ನನಸಾಗೋಕೆ ಸಾಧ್ಯ. ಹಾಗಂತ ಬರೀ ಗೆಲುವು ಸಾಲೋದಿಲ್ಲ ಭರ್ಜರಿ ಜಯಭೇರಿ ಬಾರಿಸ್ಬೇಕು. ಫಸ್ಟ್ ಬ್ಯಾಟಿಂಗ್ ಮಾಡಿದ್ರೂ ಇಲ್ಲ ಚೇಸಿಂಗ್ ಮಾಡಿದ್ರೂ ಇಂತಿಷ್ಟೇ ರನ್ಸ್, ಓವರ್ಗಳಿಂದ ಗೆಲ್ಲಬೇಕು ಅನ್ನೋ ಲೆಕ್ಕಾಚಾರ ಇದೆ. ಅಷ್ಟಕ್ಕೂ ಆರ್‌ಸಿಬಿ ಪ್ಲೇ ಆಫ್‌ಗೆ ಲಗ್ಗೆ ಹಾಕಲು ಫಾಫ್ ಡುಪ್ಲೆಸಿಸ್ ಪಡೆಯ ಗೆಲುವಿನ ಅಂತರ ಎಷ್ಟಿರಬೇಕು..? ಯಾವ ತಂಡಗಳು ಸೋಲಬೇಕು? ಮಳೆಯಿಂದ ಪಂದ್ಯ ರದ್ದಾದ್ರೆ ಮುಂದೇನು?
ಇದನ್ನೂ ಓದಿ:ಲಕ್ನೋ ತಂಡಕ್ಕೆ ಪ್ಲೇ ಆಫ್ ರೇಸ್‌ನಲ್ಲಿ ಗೆಲುವು ಸಿಗುತ್ತಾ?- ನಾಯಕ ಕೆ.ಎಲ್ ರಾಹುಲ್ ಸಾಮರ್ಥ್ಯವೇ ಪ್ಲಸ್ ಆಗುತ್ತಾ?
ಭಾನುವಾರದ ಪಂದ್ಯದಲ್ಲಿ ಚೆನ್ನೈ ಹಾಗೂ ಬೆಂಗಳೂರು ತಂಡಗಳು ಗೆದ್ದು ಬೀಗಿವೆ. ಪಾಯಿಂಟ್ಸ್ ಪಟ್ಟಿಯಲ್ಲಿ ಸಿಎಸ್‌ಕೆ ಮೂರನೇ ಪ್ಲೇಸ್ನಲ್ಲಿದ್ರೆ 5ನೇ ಸ್ಥಾನದಲ್ಲಿ ಆರ್‌ಸಿಬಿ ಟೀಂ ಇದೆ. ಹೀಗಾಗಿ ಎರಡೂ ತಂಡಗಳಿಗೂ ಪ್ಲೇಆಫ್ ಹಾದಿ ಇನ್ನೂ ತೆರೆದಿದೆ. ಟೂರ್ನಿಯಲ್ಲಿ ಕಳಪೆ ಆರಂಭ ಪಡೆದು ಸೋಲುಗಳಿಂದ ಕಂಗೆಟ್ಟಿದ್ದ ಆರ್‌ಸಿಬಿ ತಂಡವು, ಇದೀಗ ಸತತ ಐದು ಪಂದ್ಯಗಳಲ್ಲಿ ಗೆದ್ದು ಪ್ಲೇಆಫ್ ಪ್ರವೇಶಿಸುವ ಫೇವರೆಟ್ ತಂಡವಾಗಿದೆ. ತಂಡ ಮುಂದಿನ ಹಂತಕ್ಕೆ ಪ್ರವೇಶಿಸಬೇಕೆಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಸದ್ಯ ಆರ್‌ಸಿಬಿಗೆ ಮುಂದೆ ಇರುವುದು ಒಂದು ಪಂದ್ಯ ಮಾತ್ರ. ಅದು ಸಿಎಸ್‌ಕೆ ವಿರುದ್ಧ. ಅತ್ತ ಸಿಎಸ್‌ಕೆಗೂ ಈ ಒಂದು ಪಂದ್ಯದಲ್ಲಿ ಗೆಲ್ಲಬೇಕಾದ ಅನಿವಾರ್ಯವಿದೆ. ಹೀಗಾಗಿ ಈ ಪಂದ್ಯದಲ್ಲಿ ಆರ್‌ಸಿಬಿಯು ಗೆಲ್ಲಲೇಬೇಕು. ಹಳದಿ ಆರ್ಮಿ ವಿರುದ್ಧ ಉತ್ತಮ ಅಂತರದಿಂದ ಗೆದ್ದರೆ, ಇತರ ತಂಡಗಳ ಸೋಲಿನ ಆಧಾರದ ಮೇಲೆ ಪ್ಲೇ ಆಫ್ ಪ್ರವೇಶ ಪಡೆಯಲಿದೆ. ಕಳೆದ ಐದು ಪಂದ್ಯಗಳಿಂದ ಉತ್ತಮ ಫಾರ್ಮ್‌ನಲ್ಲಿರುವ ಆರ್‌ಸಿಬಿ ತಂಡವು ಸಿಎಸ್ಕೆಗಿಂತ ನೆಟ್ ರನ್ ರೇಟ್ ಹೆಚ್ಚಿಸಿಕೊಳ್ಳಬೇಕು. ಯಾಕಂದ್ರೆ ಚೆನ್ನೈ ಈಗಾಗಲೇ 14 ಅಂಕ ಪಡೆದಿದೆ. ಅತ್ತ ಸನ್ರೈಸರ್ಸ್ ಹೈದರಾಬಾದ್ ಕೂಡಾ 14 ಅಂಕಗಳೊಂದಿಗೆ ನೆಟ್ ರನ್‌ರೇಟ್‌ನಿಂದಲೂ ಆರ್‌ಸಿಬಿಗಿಂತ ಮುಂದಿದೆ. ವಿಷ್ಯ ಏನಂದ್ರೆ ಹೈದ್ರಾಬಾದ್ ತಂಡಕ್ಕೆ ಇನ್ನೂ ಎರಡು ಪಂದ್ಯಗಳಿವೆ. ತನ್ನ ಮುಂದಿನ ಪಂದ್ಯದಲ್ಲಿ ಪಂಜಾಬ್ ಮತ್ತು ಗುಜರಾತ್ ತಂಡಗಳನ್ನ ಎದುರಿಸಲಿದೆ. ಆರ್‌ಸಿಬಿಗೆ ಪ್ಲಸ್ ಆಗ್ಬೇಕು ಅಂದ್ರೆ ಎಸ್ಆರ್ಹೆಚ್ ಈ ಎರಡೂ ಪಂದ್ಯಗಳಲ್ಲೂ ಸೋಲಬೇಕು. ಸೋತಿದ್ದೇ ಆದ್ರೆ ತಂಡದ ನೆಟ್ ರನ್ ರೇಟ್ ಕುಸಿಯಲಿದೆ. ಆಗ ಆರ್‌ಸಿಬಿ ಹೈದರಾಬಾದ್‌ಗಿಂತ ಮೇಲೆ ಬರಲು ಸಾಧ್ಯವಾಗುತ್ತದೆ. ಹಾಗೇ ಮಂಗಳವಾರದ ಪಂದ್ಯದಲ್ಲಿ ಡೆಲ್ಲಿ ತಂಡವು ಲಕ್ನೋ ವಿರುದ್ಧ ಸೋಲಬೇಕು. ಅದು ಕೂಡ ಕಡಿಮೆ ಅಂತರದಲ್ಲಿ ಸೋಲಬೇಕು. ಲಕ್ನೋ ತಂಡ ಡಿಸಿ ವಿರುದ್ಧ ಗೆದ್ರೂ ತನ್ನ ಕೊನೆಯ ಪಂದ್ಯವಾದ ಮುಂಬೈ ವಿರುದ್ಧದ ಪಂದ್ಯದಲ್ಲಿ ಸೋಲಬೇಕು. ಇದು ಸಾಧ್ಯವಾಗಲೇ ಕೆ.ಎಲ್ ರಾಹುಲ್ ಪಡೆಯು ತನ್ನ ಮುಂದಿನ ಎರಡೂ ಪಂದ್ಯಗಳಲ್ಲೂ ಉತ್ತಮ ಅಂತರದಿಂದ ಗೆದ್ದರೆ, 16 ಅಂಕ ಪಡೆದು ಪ್ಲೇಆಫ್ ಪ್ರವೇಶಿಸಿದರೂ ಅಚ್ಚರಿ ಇಲ್ಲ. ಇಲ್ಲಿ ಒಂದು ಸೋಲು, ಒಂದು ಕಡಿಮೆ ಅಂತರದ ಗೆಲುವು ಸಿಕ್ಕರೂ ಆರ್‌ಸಿಬಿಗೆ ಸಮಸ್ಯೆ ಇಲ್ಲ. ಏಕೆಂದರೆ ಡೆಲ್ಲಿ ಮತ್ತು ಲಕ್ನೋ ತಂಡಗಳಿಗಿಂತ ಆರ್‌ಸಿಬಿ ತಂಡದ ನೆಟ್ ರನ್ ರೇಟ್ ಉತ್ತಮವಾಗಿದೆ. ಇದು ಇತರೆ ತಂಡಗಳ ಸೋಲು ಗೆಲುವಿನ ಲೆಕ್ಕಾಚಾರವಾದ್ರೆ ಮೇ 18ರಂದು ನಡೆಯಲಿರುವ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಪಂದ್ಯ ಉಭಯ ತಂಡಗಳಿಗೆ ಡು ಆರ್ ಡೈ ಮ್ಯಾಚ್ ಆಗಿದೆ. ಎರಡೂ ಟೀಮ್ಗಳಿಗೆ ಒಂದೇ ಪಂದ್ಯ ಬಾಕಿ ಉಳಿದಿದೆ. ಇದರಲ್ಲಿ ಸಿಎಸ್‌ಕೆ ಗೆದ್ದರೆ ಬಹುತೇಕ ಯಾವುದೇ ಲೆಕ್ಕಾಚಾರವೂ ಇಲ್ಲದೇ ಪ್ಲೇ ಆಫ್ ಪ್ರವೇಶಿಸುತ್ತದೆ. ಆದರೆ ಆರ್‌ಸಿಬಿಯು ಉತ್ತಮ ಅಂತರದಿಂದ ಗೆದ್ದು ರನ್ ರೇಟ್ ಹೆಚ್ಚಿಸಿಕೊಳ್ಳಬೇಕಾದ ಒತ್ತಡದಲ್ಲಿದೆ. ಆರ್‌ಸಿಬಿ ಸಿಎಸ್‌ಕೆ ವಿರುದ್ಧ ಕನಿಷ್ಠ 18 ರನ್‌ಗಳ ಅಂತರದಲ್ಲಿ ಗೆಲ್ಬೇಕು ಇಲ್ಲದಿದ್ರೆ 18ನೇ ಓವರ್ನಲ್ಲೇ ಸಿಎಸ್‌ಕೆ ತಂಡವನ್ನ ಕಟ್ಟಿ ಹಾಕ್ಬೇಕು. ಉದಾಹರಣೆಗೆ ಆರ್‌ಸಿಬಿ ಫಸ್ಟ್ ಬ್ಯಾಟಿಂಗ್ ಮಾಡಿ 200 ರನ್ ಗಳಿಸಿತು ಎಂದಿಟ್ಟುಕೊಳ್ಳೋಣ. ಆಗ ಸಿಎಸ್‌ಕೆ ತಂಡವನ್ನು 182 ರನ್ ಗಡಿ ದಾಟದಂತೆ ನೋಡಿಕೊಳ್ಳಬೇಕು. ಅಂದರೆ, ಆರ್‌ಸಿಬಿಯು ಕನಿಷ್ಠ 18 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳ ಅಂತರದಿಂದ ಗೆಲ್ಲಬೇಕು. ಆಗ ಸಿಎಸ್‌ಕೆ ರನ್ ರೇಟ್ ಅನ್ನು ಮೀರಿ ಆರ್‌ಸಿಬಿ ಮೇಲಿನ ಸ್ಥಾನಕ್ಕೇರಬಹುದು. ಒಂದು ವೇಳೆ ಸಿಎಸ್‌ಕೆ ತಂಡವು ಮೊದಲು ಬ್ಯಾಟಿಂಗ್ ಮಾಡಿ, ಆರ್‌ಸಿಬಿಗೆ 201 ರನ್ ಗುರಿ ನೀಡಿತು ಅನ್ಕೊಳ್ಳೋಣ. ಆಗ ಆರ್‌ಸಿಬಿ ತಂಡವು ವೇಗವಾಗಿ ರನ್ ಕಲೆ ಹಾಕಿ, ಎರಡು ಓವರ್ ಉಳಿಸಿ ಯಶಸ್ವಿ ರನ್ ಚೇಸಿಂಗ್ ಮಾಡಬೇಕು. ಕನಿಷ್ಠ ಸರಿಸುಮಾರು 11 ಎಸೆತಗಳು ಬಾಕಿ ಇರುವಾಗಲೇ ಗುರಿ ತಲುಪಿ ಗೆಲ್ಲಬೇಕಾದ ಅನಿವಾರ್ಯವಿದೆ. ಹೀಗಾದರೆ ಆರ್‌ಸಿಬಿಯು ಸಿಎಸ್‌ಕೆ ರನ್ ರೇಟ್ ಮೀರಿಸಲಿದೆ. ಹೀಗಾದಾಗ ಮಾತ್ರ ಆರ್‌ಸಿಬಿಗೆ ಪ್ಲೇಆಫ್ಗೇರೋ ಅವಕಾಶ ಇರಲಿದೆ. ಆದ್ರೆ ಹೀಗೆ ಸೋಲು ಗೆಲುವಿನ ಅಂತರದ ಲೆಕ್ಕಾಚಾರದ ನಡುವೆ ಆರ್‌ಸಿಬಿಗೆ ದೊಡ್ಡ ಆಘಾತವೇ ಎದುರಾಗಿದೆ.
ತಂಡದ ಇಬ್ಬರು ಪ್ರಮುಖ ಆಟಗಾರರು ಐಪಿಎಲ್ ತೊರೆದು ತವರಿಗೆ ಮರಳಿದ್ದಾರೆ. ಮುಂಬರುವ ಟಿ20 ವಿಶ್ವಕಪ್ಗೆ ತಯಾರಿಗಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಮ್ಮ ಆಟಗಾರರಿಗೆ ತವರಿಗೆ ಮರಳುವಂತೆ ಕರೆ ನೀಡಿದೆ. ಹೀಗಾಗಿ ಇಂಗ್ಲೆಂಡ್‌ನ ವಿಲ್ ಜಾಕ್ಸ್ ಮತ್ತು ರೀಸ್ ಟೋಪ್ಲಿ ಆರ್‌ಸಿಬಿ ಕ್ಯಾಂಪ್ ಬಿಟ್ಟು ತವರಿಗೆ ತೆರಳಿದ್ದಾರೆ. ಇದೀಗ ಆರ್‌ಸಿಬಿ ಈ ಇಬ್ಬರು ವಿದೇಶಿ ಆಟಗಾರರಿಲ್ಲದೆ ತಮ್ಮ ಉಳಿದ ಪಂದ್ಯವನ್ನ ಆಡಬೇಕಾಗುತ್ತದೆ. ಆರ್‌ಸಿಬಿ ಕಳೆದ ಐದು ಪಂದ್ಯಗಳಿಂದ ಅದ್ಭುತ ಕಮ್ ಬ್ಯಾಕ್ ಮಾಡಿದೆ. ಇದರಲ್ಲಿ ವಿಲ್ ಜಾಕ್ಸ್ ಆಟ ನಿರ್ಣಾಯಕವಾಗಿತ್ತು. ಅದ್ರಲ್ಲೂ ಗುಜರಾತ್ ವಿರುದ್ಧ ಭರ್ಜರಿ ಸೆಂಚುರಿ ಬಾರಿಸಿದ್ದ ಜಾಕ್ಸ್ ತಂಡದ ಗೆಲುವಿಗೆ ಪಾತ್ರರಾಗಿದ್ರು. ಇದೀಗ ಪ್ಲೇ ಆಫ್ ನಿರ್ಧರಿಸುವ ಪಂದ್ಯದಿಂದಲೇ ಹೊರಗುಳಿಯುತ್ತಿರುವುದು ಆರ್‌ಸಿಬಿಗೆ ನುಂಗಲಾರದ ತುತ್ತಾಗಿದೆ. ಜೊತೆಗೆ ಜಾಕ್ಸ್ ಬದಲಿಗೆ ಯಾವ ಆಟಗಾರ ತಂಡದ ಭಾಗವಾಗಲಿದ್ದಾರೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಜಾಕ್ಸ್ ಬದಲಿಗೆ ಆರ್‌ಸಿಬಿ ತಂಡ ಮತ್ತೊಬ್ಬ ವಿದೇಶಿ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಬೇಕಿದೆ. ಇದರ ಭಾಗವಾಗಿ ಗ್ಲೇನ್ ಮ್ಯಾಕ್ಸ್‌ವೆಲ್ ಮತ್ತೆ ಆರ್‌ಸಿಬಿ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಳ್ಳಬಹುದು. ಆದ್ರೆ ಮ್ಯಾಕ್ಸ್‌ವೆಲ್ ಈ ವರ್ಷ ಐಪಿಎಲ್‌ನಲ್ಲಿ ಉತ್ತಮವಾಗಿ ಆಡಿಲ್ಲ. ಇದೇ ಕಾರಣಕ್ಕೆ ಅವ್ರನ್ನ ಕಳೆದ ಕೆಲ ಪಂದ್ಯದಿಂದ ಅವರನ್ನು ಹೊರಗಿಡಲಾಗಿದೆ. ಈ ಸೀಸನ್ನಲ್ಲಿ ಮ್ಯಾಕ್ಸಿ ಆಡಿರುವ 8 ಪಂದ್ಯದಲ್ಲಿ ಕೇವಲ 36 ರನ್ ಸಿಡಿಸಿದ್ದಾರೆ. ಆದ್ರೀಗ ಅನಿವಾರ್ಯವಾಗಿ ತಂಡಕ್ಕೆ ಸೇರಿಸಿಕೊಳ್ಳಬೇಕಿದೆ. ಆದರೆ ಮ್ಯಾಕ್ಸ್‌ವೆಲ್ ಅದ್ಭುತ ಆಟಗಾರನಾಗಿದ್ದು, ಯಾವುದೇ ಕ್ಷಣದಲ್ಲಿಯಾದರೂ ಅಬ್ಬರಿಸುವ ಸಾಧ್ಯತೆ ಇದೆ. ಸದ್ಯ ಆರ್‌ಸಿಬಿ ಆಡಿರುವ 13 ಪಂದ್ಯದಲ್ಲಿ 6ರಲ್ಲಿ ಗೆದ್ದು 12 ಅಂಕದೊಂದಿಗೆ 5ನೇ ಸ್ಥಾನದಲ್ಲಿದೆ. ಹೀಗಾಗಿ ಮೇ 18ರಂದು ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆದ್ದರೆ ಮಾತ್ರ ಆರ್‌ಸಿಬಿ ಪ್ಲೇಆಫ್ ಆಸೆ ಜೀವಂತವಾಗಲಿದೆ. ಇಲ್ಲದಿದ್ದರೆ ತಂಡ ಪ್ಲೇಆಫ್‌ನಿಂದ ಹೊರಬೀಳಲಿದೆ. ಹೀಗಾಗಿ ಈ ಪಂದ್ಯ ಆರ್‌ಸಿಬಿ ತಂಡಕ್ಕೆ ಅತ್ಯಂತ ಮಹತ್ವದ್ದಾಗಿದೆ. ಹೀಗೆ ಪಾಯಿಂಟ್ಸ್ ಪಟ್ಟಿ ಪ್ರಕಾರ ಪ್ಲೇ ಆಫ್ ಸ್ಥಾನಗಳಿಗೆ ಕ್ಯಾಲ್ಕುಲೇಷನ್ ನಡೆಯುವಾಗ್ಲೇ ಆರ್‌ಸಿಬಿ ವರ್ಸಸ್ ಸಿಎಸ್‌ಕೆ ಪಂದ್ಯಕ್ಕೆ ಮಳೆ ಆತಂಕ ಎದುರಾಗಿದೆ. ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಮಳೆ ಬೀಳ್ತಿದ್ದು ಹಾಗೇನಾದ್ರೂ ಶನಿವಾರದ ಪಂದ್ಯ ಮಳೆಯಿಂದ ರದ್ದಾದ್ರೆ ಆರ್ಸಿಬಿಯ ಪ್ಲೇ ಆಫ್ ಕನಸು ಕಮರಿ ಹೋಗಲಿದೆ. ಮತ್ತೊಂದೆಡೆ ಪಂದ್ಯ ನಡೆಯುವ ಮೇ 18 ಅಂದ್ರೆ ಶನಿವಾರದಂದು ಬೆಂಗಳೂರಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಬೆಂಗಳೂರು ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಸತತವಾಗಿ ಮಳೆಯಾಗುತ್ತಿದೆ. ಜತೆಗೆ ಪಕ್ಕದ ರಾಜ್ಯ ಕೇರಳ, ಮಹಾರಾಷ್ಟದಲ್ಲಿಯೂ ಮಳೆಯಾಗುತ್ತಿದೆ. ಸೋಮವಾರ ಅಹಮದಾಬಾದ್ನಲ್ಲಿ ಸುರಿದ ಭಾರೀ ಮಳೆಯಿಂದ ಗುಜರಾತ್ ಮತ್ತು ಕೆಕೆಆರ್ ನಡುವಣ ಪಂದ್ಯ ಟಾಸ್ ಕೂಡ ಕಾಣದೆ ರದ್ದುಗೊಂಡಿತ್ತು. ಪಂದ್ಯ ರದ್ದುಗೊಂಡ್ರೂ ಎರಡೂ ತಂಡಗಳಿಗೆ ಒಂದೊಂದು ಪಾಯಿಂಟ್ಸ್ ನೀಡಲಾಗಿದೆ. ಆದ್ರೆ ಗುಜರಾತ್ ತಂಡ ಪ್ಲೇ ಆಫ್ ರೇಸ್ ನಿಂದ ಹೊರಬಿದ್ದಿದೆ. ಇದೀಗ ಆರ್‌ಸಿಬಿ ಪಂದ್ಯಕ್ಕೂ ಮಳೆ ಭೀತಿ ಎದುರಾಗಿರುವುದು ತಂಡ ಸೇರಿ ಅಭಿಮಾನಿಗಳಿಗೂ ಆತಂಕಪಡುವಂತೆ ಮಾಡಿದೆ. ಮಳೆ ಕಾರಣಕ್ಕೆ ಪಂದ್ಯ ರದ್ದಾದ್ರೆ ಆರ್‌ಸಿಬಿ ಮತ್ತು ಸಿಎಸ್‌ಕೆ ಒದೊಂದು ಪಾಯಿಂಟ್ಸ್ ನೀಡಬಹುದು. ಹೀಗೆ ನೀಡಿದ್ರೆ ಆರ್‌ಸಿಬಿ ಬಳಿ ಒಟ್ಟಾರೆ 13 ಅಂಕಗಳಷ್ಟೇ ಆಗಲಿವೆ. ಸಿಎಸ್‌ಕೆ ಬಳಿ ಈಗಾಗ್ಲೇ ಹದಿನಾಲ್ಕು ಪಾಯಿಂಟ್ಸ್ ಇರೋದ್ರಿಂದ 15 ಅಂಕಗಳನ್ನ ಗಳಿಸುತ್ತೆ. ಈ ಮೂಲಕ ಸಿಎಸ್‌ಕೆ ಪ್ಲೇ ಆಫ್‌ಗೆ ಹೋಗುವ ಅವಕಾಶ ಹೆಚ್ಚಿರುತ್ತೆ. ಒಟ್ನಲ್ಲಿ ಸತತ 16 ವರ್ಷಗಳಿಂದ ಕಪ್ ಗೆಲ್ಲದ ಆರ್‌ಸಿಬಿ ಈ ಬಾರಿ ಟಾಪ್ 4ನಲ್ಲಿ ಸ್ಥಾನ ಪಡೆಯೋಕೆ ಕೊನೇ ಅವಕಾಶ ಇದೆ. ಪಂದ್ಯ ನಡೆದ್ರೂ ನಿರ್ಧಿಷ್ಟ ರನ್‌ಗಳ ಅಥವಾ ಓವರ್ಗಳ ಅಂತರದಲ್ಲಿ ಗೆಲ್ಲುವ ಅನಿವಾರ್ಯತೆ ಇದೆ. ಹೀಗಾಗಿ ಆರ್‌ಸಿಬಿ ತಂಡ ಪ್ರಚಂಡ ಗೆಲುವಿಗೆ ಲೆಕ್ಕಾಚಾರ ಹಾಕ್ತಿದ್ರೆ ಮತ್ತೊಂದ್ಕಡೆ ಮಳೆಯ ಭೀತಿ ಕಾಡ್ತಿದೆ. ಆರ್‌ಸಿಬಿ ಅಭಿಮಾನಿಗಳು ಶನಿವಾರ ಸಂಜೆಯ ಬಳಿಕ ಒಂದ್ ನಾಲ್ಕು ಗಂಟೆ ರೆಸ್ಟ್ ತಗೊಳಪ್ಪ ಮಳೆರಾಯ ಅಂತಾ ಬೇಡಿಕೊಳ್ತಿದ್ದಾರೆ.