ವಾಂತಿ ಮಾಡುವ ಮೊದಲು ಮೆದುಳು ಯಾವ ಸಂದೇಶ ರವಾನಿಸುತ್ತದೆ?
ಕಲಬೆರಕೆಯುಳ್ಳ ಅಥವಾ ವಿಷಪೂರಿತ ಆಹಾರವನ್ನು ಸೇವಿಸಿದಾಗ ವಾಂತಿ ಮಾಡುವ ಕುರಿತಾಗಿ ಮೆದುಳು ಯಾವ ರೀತಿ ಪ್ರಚೋದಿಸುತ್ತದೆ ಅನ್ನುವ ಬಗ್ಗೆ ನೀವು ಯಾವತ್ತಾದರೂ ಯೋಚಿಸಿದ್ದೀರಾ? ವಾಂತಿ ಬರೋದಿಕ್ಕೂ ಮೊದಲು ಮೆದುಳು ಯಾವ ಸಂದೇಶ ರವಾನಿಸುತ್ತದೆ? ಎಂಬ ಬಗ್ಗೆ ಬಗ್ಗೆ ಅಧ್ಯಯನಕಾರರು ವಿಶ್ಲೇಷಣೆ ಮಾಡಿದ್ದಾರೆ. ಚೀನಾದ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಬಯೋಲಾಜಿಕಲ್ ಸೈನ್ಸ್‌ನ ಸಂಶೋಧಕರು ಇಲಿಗಳಲ್ಲಿ ವಾಕರಿಕೆಗೆ ಸಂಬಂಧವಿರುವ ಕರುಳು ಮತ್ತು ಮೆದುಳು ಸರ್ಕ್ಯೂಟ್ ಅನ್ನು ಗುರುತಿಸಿದ್ದಾರೆ. ಅದು ಮಾನವರಂತೆಯೇ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತದೆ. ಅಂದ ಹಾಗೇ ಈ ಸಂಶೋಧನಾ ವರದಿಯು ಜರ್ನಲ್ ಸೆಲ್ ನಲ್ಲಿ ಪ್ರಕಟವಾಗಿದೆ.
ಇದನ್ನೂ ಓದಿ: ಜನಸಂಖ್ಯೆ ಕಡಿಮೆಯಿರುವ ದೇಶಗಳಿಗೆ ವರವಾಗಲಿದೆಯಾ ‘ಕೃತಕ ಗರ್ಭಾಶಯದ ಸೌಲಭ್ಯ’..!
ಕಲುಷಿತ ಆಹಾರವನ್ನ ಸೇವಿಸಿದ ನಂತರ ಮೆದುಳು ರಕ್ಷಣಾತ್ಮಕ ಪ್ರತಿಕ್ರಿಯೆಯನ್ನ ಆರಂಭಿಸುತ್ತದೆ. ಆದರೂ ಮೆದುಳು ಯಾವ ರೀತಿ ಕಲುಷಿತ ಆಹಾರದ ಅಂಶವನ್ನ ಪತ್ತೆ ಮಾಡುತ್ತದೆ ಮತ್ತು ರಕ್ಷಣಾತ್ಮಕ ಪ್ರತಿಕ್ರಿಯೆಗಳಿಗೆ ಸಹಕರಿಸುತ್ತದೆ ಅನ್ನುವ ಕುರಿತಾಗಿ ಇನ್ನಷ್ಟೇ ಪೂರ್ತಿಯಾಗಿ ಅರ್ಥಮಾಡಿಕೊಳ್ಳಬೇಕಾಗಿದೆ. ಬ್ಯಾಕ್ಟೀರಿಯಾದ ವಿಷಾಣುಗಳಿಂದ ಪ್ರೇರಿತವಾದ ರಕ್ಷಣಾತ್ಮಕ ಪ್ರತಿಕ್ರಿಯೆಗಳನ್ನ ಅಧ್ಯಯನ ಮಾಡಲು ಮೌಸ್ ಆಧಾರಿತ ಮಾದರಿಯನ್ನು ತಂಡ ಸಿದ್ಧಪಡಿಸಿಕೊಂಡಿದೆ. ಬ್ಯಾಕ್ಟಿರಿಯಾದ ವಿಷಾಣು ಸ್ಟ್ಯಾಫಿಲೋಕೊಕಲ್ ಎಂಟರೊಟಾಕ್ಸಿನ್ ಎ (Staphylococcal Enterotoxin A), ನ್ಯೂರೊ ಟ್ರಾನ್ಸ್ ಮೀಟರ್ ಸೇರೋಟೋನಿನ್ ಅನ್ನು ಸಕ್ರಿಯಗೊಳಿಸುತ್ತದೆ. ಇದು ಕರುಳು ಮತ್ತು ಮೆದುಳಿನ ನರಗಳ ಉದ್ದಕ್ಕೂ ಸಂಕೇತವನ್ನು ರವಾನೆ ಮಾಡುವ ರಾಸಾಯನಿಕ ಕ್ರಿಯೆಯನ್ನ ಪ್ರಾರಂಭಿಸುತ್ತದೆ. ಈ ನಿರ್ದಿಷ್ಟ ನರಕೋಶವನ್ನ Tac1+DVC ಎಂದೂ ಕರೆಯುತ್ತಾರೆ.
ವಿಷಕಾರಿ ಅಂಶ ಮತ್ತು ರಕ್ಷಣಾತ್ಮಕ ಪ್ರತಿಕ್ರಿಯೆ ಪ್ರಚೋದನೆಯ ಮಧ್ಯೆ ಜಂಟಿಯಾಗಿ ಮಧ್ಯಸ್ತಿಕೆ ಮಾಡುವ ಕರುಳು ಮತ್ತು ಮೆದುಳಿನ ಸರ್ಕ್ಯೂಟ್ ಗುಂಪನ್ನು ಗುರುತಿಸಿದ್ದಾರೆ. ಕರುಳು ಮತ್ತು ಮೆದುಳಿನ ಸರ್ಕ್ಯೂಟ್ Htr3a+ ವಾಗಲ್ ಸಂವೇದನಾ ನರಕೋಶಗಳನ್ನ ಒಳಗೊಂಡಿದ್ದು ಇದೂ ವಿಷ ಸಂಬಂಧಿತ ಸಂಕೇತಗಳನ್ನ ಕರುಳಿನ ಎಂಟರೊಕ್ರೊಮಾಫಿನಿಂದ (enterochromaffin ) Tac1 ನರಕೋಶಕ್ಕೆ ಸಾಗಿಸುತ್ತದೆ. ಈ ಸರ್ಕ್ಯೂಟ್ ಗಳನ್ನ ಮ್ಯಾನಿಪುಲೇಟ್ ಮಾಡುವುದರಿಂದ ರಕ್ಷಣಾತ್ಮಕ ಪ್ರತಿಕ್ರಿಯೆಗಳಿಗೆ ಅಡ್ಡಿ ಉಂಟುಮಾಡುತ್ತದೆ.
ಕಲಬೆರಕೆಯ ಆಹಾರದ ಹೊರತಾಗಿಯೂ ಮಾನವರು ಹಲವಾರು ರೋಗಕಾರಕಗಳನ್ನು ಎದುರಿಸುತ್ತಾರೆ. ಈ ಎಲ್ಲಾ ಸಂದರ್ಭಗಳಲ್ಲೂ ವಿಷಕಾರಿ ವಸ್ತುಗಳನ್ನು ಹೊರಹಾಕಲು ಇದೇ ಕಾರ್ಯವಿಧಾನವನ್ನು ಮೆದುಳು ಅನುಸರಿಸುತ್ತದೆ ಎಂದೂ ಸಂಶೋಧಕರು ಹೇಳುತ್ತಾರೆ.