ತಾಯಿಯ ಗರ್ಭದಲ್ಲೇ ಮಗುವಿಗೆ ಮೊಟ್ಟ ಮೊದಲ ಮೆದುಳಿನ ಶಸ್ತ್ರ ಚಿಕಿತ್ಸೆ – ವೇನ್ ಆಫ್ ಗ್ಯಾಲೆನ್ ಮಾಲ್ಫಾರ್ಮೇಷನ್ ಎಂದರೇನು?

ತಾಯಿಯ ಗರ್ಭದಲ್ಲೇ ಮಗುವಿಗೆ ಮೊಟ್ಟ ಮೊದಲ ಮೆದುಳಿನ ಶಸ್ತ್ರ ಚಿಕಿತ್ಸೆ – ವೇನ್ ಆಫ್ ಗ್ಯಾಲೆನ್ ಮಾಲ್ಫಾರ್ಮೇಷನ್ ಎಂದರೇನು?

ವೈದ್ಯಕೀಯ ಕ್ಷೇತ್ರದಲ್ಲಿ ಒಂದು ಜಾದು ನಡೆದಿದೆ. ಜಗತ್ತಿನಲ್ಲಿ ಮೊದಲ ಬಾರಿಗೆ ತಾಯಿ ಗರ್ಭದಲ್ಲಿದ್ದ ಹೆಣ್ಣು ಮಗುವಿಗೆ ಮೆದುಳಿನ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಯಾಗಿದೆ. ಬ್ರಿಗಮ್ ನ ಮಹಿಳಾ ಆಸ್ಪತ್ರೆ ಮತ್ತು ಬೋಸ್ಟನ್ ಮಕ್ಕಳ ಆಸ್ಪತ್ರೆಯ ವೈದ್ಯರ ತಂಡವೂ ಈ ಅಪರೂಪದ ಶಸ್ತ್ರ ಚಿಕಿತ್ಸೆಯನ್ನ ಯಶಸ್ವಿಯಾಗಿ ನಡೆಸಿದೆ.

ಇದನ್ನೂ ಓದಿ:  ‘ಕರಿ ಹೈದ ಕರಿ ಅಜ್ಜ’ ಸಿನಿಮಾ ಚಿತ್ರೀಕರಣದಲ್ಲಿ ವಿಶೇಷ ಅನುಭವ – ಗುಳಿಗನಿಗೆ ಗುಡಿ ಕಟ್ಟಿದ ಚಿತ್ರತಂಡ..!

ಮಗು ಹುಟ್ಟುವ ಮೊದಲೇ ಅಪರೂಪದ ಮೆದುಳಿನ ಸಮಸ್ಯೆಯಾದ ವೇನ್ ಆಫ್ ಗ್ಯಾಲೆನ್ ಮಾಲ್ಫಾರ್ಮೇಷನ್ (Vein of Galen Malformation) ನೊಂದಿಗೆ ಹೋರಾಡುತ್ತಿತ್ತು. ತಾಯಿಯ ಗರ್ಭದಲ್ಲಿ ಇದ್ದಾಗಲೇ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿದ್ದರು. ಇದಾಗಿ ಕೆಲವು ದಿನಗಳ ನಂತರ ಹೆಣ್ಣು ಮಗು ಜನಿಸಿತ್ತು. ಜನನದ ನಂತರವೂ ಹಲವಾರು ತಪಾಸಣೆಗಳ ನಂತರ ಶಸ್ತ್ರ ಚಿಕಿತ್ಸೆಯನ್ನ ಯಶಸ್ವಿಯೆಂದು ಘೋಷಿಸಿದ್ದು, ಇದು ತಾಯಿಯ ಗರ್ಭದಲ್ಲಿ ಇದ್ದಾಗಲೇ ನಡೆದ ಮೊಟ್ಟ ಮೊದಲ ಮೆದುಳಿನ ಶಸ್ತ್ರ ಚಿಕಿತ್ಸೆಯೆಂದು ಹೇಳಲಾಗುತ್ತಾ ಇದೆ.

ಅಮೇರಿಕಾದ ಸಿಬಿಎಸ್ ನ್ಯೂಸ್ ಚಾನೆಲ್ ವರದಿಯ ಪ್ರಕಾರ, ಡೆರೆಕ್ ಮತ್ತು ಕೆನ್ಯಾಟ್ಟಾ ಕೋಲ್ಮನ್‌ನಲ್ಲಿ ವಾಸಿಸುವ ದಂಪತಿ ಗರ್ಭಾವಸ್ಥೆಯಲ್ಲಿ ಹಲವಾರು ಬಾರಿ ಅಲ್ಟ್ರಾಸೌಂಡ್‌ಗೆ ಒಳಗಾಗಿದ್ದರು. ಆದರೆ ವೈದ್ಯರು 30 ವಾರಗಳವರೆಗೆ ಅಲ್ಟ್ರಾಸೌಂಡ್‌ನಲ್ಲಿ ಅಸಹಜತೆ ಏನನ್ನೂ ನೋಡಲಿಲ್ಲ. ಅಲ್ಲಿಯವರೆಗೂ ಎಲ್ಲವೂ ಸಾಮಾನ್ಯವಾಗಿತ್ತು. ನಿಧಾನವಾಗಿ ಭ್ರೂಣದ ಮೆದುಳಿನೊಳಗೆ ಅಪರೂಪದ ರಕ್ತನಾಳದ ಅಸಹಜತೆಯನ್ನ ವೈದ್ಯರು ಕಂಡುಹಿಡಿದಿದ್ದರು. ಇಂತಹ ಸಮಸ್ಯೆಯಿಂದ ಬಳಲುವ ಮಕ್ಕಳು ಮುಂದೆ ಹೃದಯ ಕಾಯಿಲೆ ಅಥವಾ ಮೆದುಳಿನ ಹಾನಿಯಂತಹ ಸಮಸ್ಯೆಯಿಂದ ಬಳಲುತ್ತಾರೆ. ಮಗುವಿನ ಸ್ಥಿತಿಯು ಗರ್ಭದಲ್ಲೇ ಚಿಂತಾಜನಕವಾಗಿತ್ತು. ವೈದ್ಯರು ಗರ್ಭದಲ್ಲಿ ಚಿಕಿತ್ಸೆ ನೀಡಬೇಕೇ ಅಥವಾ ಬೇಡವೇ ಎಂದು ಯೋಚಿಸುತ್ತಿದ್ದರು. ಅಂತಿಮವಾಗಿ, 34 ವಾರಗಳ ಗರ್ಭಾವಸ್ಥೆಯ ನಂತರ, ವೈದ್ಯರ ತಂಡವು ಗರ್ಭದಲ್ಲಿಯೇ ಮಗುವಿನ ಮೆದುಳಿಗೆ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿತು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಕೆಲವು ದಿನಗಳ ನಂತರ ಹೆಣ್ಣು ಮಗು ಜನಿಸಿತು. ಶಸ್ತ್ರಚಿಕಿತ್ಸೆ ನಡೆದು 7 ವಾರಗಳು ಕಳೆದಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.

ವೇನ್ ಆಫ್ ಗ್ಯಾಲೆನ್ ಮಾಲ್ಫಾರ್ಮೇಷನ್ ಎಂದರೇನು?

ಗ್ಯಾಲೆನ್ ಮಾಲ್ಫಾರ್ಮೇಷನ್ ಒಂದು ಅಪರೂಪದ ಸಮಸ್ಯೆ ಯಾಗಿದ್ದು ಹೃದಯದಿಂದ ಮೆದುಳಿಗೆ ಅಧಿಕ ಹರಿವಿನ, ಅಧಿಕ ಒತ್ತಡದ ರಕ್ತವನ್ನು ತರುವ ಅಪಧಮನಿಗಳು ರಕ್ತದ ಹರಿವನ್ನು ನಿಧಾನಗೊಳಿಸಲು ಮತ್ತು ಸುತ್ತಮುತ್ತಲಿನ ಮೆದುಳಿನ ಅಂಗಾಂಶಗಳಿಗೆ ಆಮ್ಲಜನಕವನ್ನು ತಲುಪಿಸಲು ಬೇಕಾಗಿರುವ ಕ್ಯಾಪಿಲ್ಲರಿಗಳನ್ನ ಸಂಪರ್ಕಿಸುವ ಬದಲು ರಕ್ತ ನಾಳಗಳ ಜೊತೆ ನೇರವಾಗಿ ಸಂಪರ್ಕಿಸುತ್ತವೆ. . ಜನನ ಪ್ರಕ್ರಿಯೆಯ ಸಮಯದಲ್ಲಿ ಮತ್ತು ನಂತರ ಹೆಚ್ಚಿನ ರಕ್ತದ ಹರಿವು ಹೃದಯ ಮತ್ತು ಮೆದುಳಿನ ಮೇಲೆ ಇನ್ನಷ್ಟು ಗಂಭೀರ ಪರಿಣಾಮವನ್ನು ಬೀರುತ್ತದೆ, ಮಗುವಿನ ಹೃದಯ ಮತ್ತು ಶ್ವಾಸಕೋಶದ ಮೇಲೆ ಅಗಾಧವಾದ ಒತ್ತಡವನ್ನು ಉಂಟುಮಾಡುತ್ತದೆ. ಇದು ಶ್ವಾಸಕೋಶದ ಅಧಿಕ ರಕ್ತದೊತ್ತಡ , ಹೃದಯ ವೈಫಲ್ಯಕ್ಕೆ ಕಾರಣವಾಗಬಹುದು. ಈ ರಕ್ತನಾಳವು ಸರಿಯಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗದಿದ್ದಾಗ, ರಕ್ತನಾಳ ಮತ್ತು ಹೃದಯಕ್ಕೆ ರಕ್ತದೊತ್ತಡವನ್ನು ಉಂಟು ಮಾಡುತ್ತದೆ.ಇದು ಹೃದಯ ವೈಫಲ್ಯ ಮತ್ತು ಮೆದುಳಿನ ಹಾನಿಗೆ ಕಾರಣವಾಗಬಹುದು. ಇದು ಅನೇಕ ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಕಾಯಿಲೆಗೆ ಯಾವುದೇ ನಿರ್ದಿಷ್ಟ ಕಾರಣವಿಲ್ಲ. ಇದು ಜೆನೆಟಿಕ್ಸ್ ಅಥವಾ ಜೀನ್ ಅಸ್ವಸ್ಥತೆಗಳಿಂದ ಉಂಟಾಗಬಹುದು ಎಂದು ನಂಬಲಾಗಿದೆ

suddiyaana