ಶಪಥದಿಂದ ಸಿಕ್ಕಿಬಿದ್ರಾ ಸುಮಲತಾ? – ಸ್ವಾಭಿಮಾನ ಬಿಟ್ಟರೆ ಸೀಟು ಪಡೆಯಬಹುದಾ?
2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದ ಚುನಾವಣೆ ಇಡೀ ಇಂಡಿಯಾದ ಗಮನ ಸೆಳೆದಿತ್ತು.. ಅದಕ್ಕೆ ಕಾರಣವಾಗಿದ್ದು ಕೇವಲ ಸುಮಲತಾ ಸ್ವಾಭಿಮಾನದ ಹೆಸರಿನಲ್ಲಿ ಸ್ಪರ್ಧೆಗೆ ಇಳಿದಿದ್ದು ಮಾತ್ರವಲ್ಲ.. ಅಂದಿನ ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಧುಮುಕಿದ್ದು.. ಕುಮಾರಸ್ವಾಮಿಯವರ ಬೆನ್ನಿಗೆ ನಿಂತ ಡಿ.ಕೆ.ಶಿವಕುಮಾರ್, ಜೋಡೆತ್ತಿನ ರೀತಿಯಲ್ಲಿ ಕೆಲಸ ಮಾಡ್ತೀವಿ ಎಂದು ಭರವಸೆ ಕೊಟ್ಟಿದ್ದು.. ಇದರಿಂದಾಗಿ ಮಂಡ್ಯದ ಸೊಸೆಯ ವಿರುದ್ಧ ರಾಜ್ಯದ ಸರ್ಕಾರವೇ ಕೆಲಸ ಮಾಡುತ್ತಿದೆ ಎಂಬ ರೀತಿಯಲ್ಲಿ ಚರ್ಚೆ ನಡೆದಿತ್ತು.. ಇದನ್ನೇ ಮುಂದಿಟ್ಟು ಸುಮಲತಾ ಸ್ವಾಭಿಮಾನದ ವ್ಯೂಹ ರಚಿಸಿದ್ದರು.. ಅಳೆದು ತೂಗಿ ಮಾತಾಡಿದ್ರು.. ಮಂಡ್ಯದ ಗಂಡು ಅಂಬರೀಷ್ ಅವರ ರಾಜಕೀಯ ಉತ್ತರಾಧಿಕಾರದ ಮಾತುಗಳನ್ನು ಹೇಳಿದ್ರು. ಸೆರಗೊಡ್ಡಿ ಜನರ ಬಳಿ ಮತಭಿಕ್ಷೆ ಕೇಳಿದ್ರು.. ಪತಿಯನ್ನು ಕಳೆದುಕೊಂಡ ನಂತರ ಪತ್ನಿ ಚುನಾವಣೆ ಅಖಾಡಕ್ಕೆ ಇಳಿದಾಗ ಮಂಡ್ಯದ ಜನ ಸೋಲಿಸಿದ್ದೇ ಇಲ್ಲ.. ಒಂದು ಚುನಾವಣೆಯಲ್ಲಂತೂ ಆಕೆಯ ಜೊತೆ ನಿಂತು ಗೆಲ್ಲಿಸುವ ಮೂಲಕ ಸಮಾಧಾನದ ಸಾಂತ್ವನ ಹೇಳುವುದು ಮಂಡ್ಯ ರಾಜಕೀಯದ ಸಾಮಾನ್ಯ ಪ್ರಕ್ರಿಯೆ ಎಂಬಷ್ಟರ ಮಟ್ಟಿಗೆ ಉದಾಹರಣೆಗಳು ಸಿಗುತ್ತವೆ… ಸುಮಲತಾ ವಿಚಾರದಲ್ಲೂ ಮಂಡ್ಯದ ಜನ, ಎಲ್ಲಾ ಅಧಿಕಾರ, ಆಡಳಿತದ ಅವಕಾಶಗಳನ್ನು ಬದಿಗಿಟ್ಟು, ಮಂಡ್ಯದ ಹೆಮ್ಮೆಯ ಪ್ರತೀಕವಾಗಿದ್ದು ಅಂಬರೀಷ್ ಪತ್ನಿಗೆ ಗೆಲುವಿನ ಮೂಲಕ ಸಾಂತ್ವನ ಹೇಳಲು ನಿರ್ಧರಿಸಿದ್ದರು.. ಪರಿಣಾಮ ಅಂದು ಸುಮಲತಾ ಅಂಬರೀಷ್ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಲೋಕಸಭೆ ಪ್ರವೇಶಿಸಿದ್ದರು.. ಆದರೆ ಈಗ ಅದೇ ಸುಮಲತಾ ಅವರಿಗೆ ಅವರ ಮಾತುಗಳೇ ರಾಜಕೀಯವಾಗಿ ಸಿಕ್ಕುಗಳಾಗಿ ಮಾರ್ಪಟ್ಟಿವೆಯೇ ಎಂಬ ಪ್ರಶ್ನೆ ಮೂಡುತ್ತಿದೆ.. ಸುಮಲತಾ ಮನಸ್ಸು ಮಾಡಿದ್ರೆ ರಾಜಕೀಯವಾಗಿ ಬೆಳೆಯಲು ಬೇರೆ ಅವಕಾಶಗಳು ತೆರೆದುಕೊಳ್ಳುವ ಸಾಧ್ಯತೆಗಳು ಎಷ್ಟು? ಸ್ವಾಭಿಮಾನ ಬಿಟ್ಟರೆ ಸೀಟು ಪಡೆಯಬಹುದಾ?, ಈ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಜನರಿಂದ ದೂರ ಉಳಿದ ಸಂಸದೆ ಸುಮಲತಾ – ಅಭಿಮಾನಿಗಳ ಬಲವೂ ಇಲ್ಲ, ಕ್ಷೇತ್ರದ ಜನ್ರ ಬೆಂಬಲವೂ ಸಿಗ್ತಿಲ್ಲ ಏಕೆ..?
ಮಂಡ್ಯದ ರಾಜಕೀಯದ ಬಗ್ಗೆ ಅನೇಕರಿಗೆ ಚೆನ್ನಾಗಿಯೇ ಗೊತ್ತಿರಬಹುದು.. ಅದರಲ್ಲೂ 2019ರಲ್ಲಿ ನಡೆದ ಲೋಕಸಭೆ ಚುನಾವಣೆಯ ಹಣಾಹಣಿಯನ್ನು ಮರೆಯೋದಿಕ್ಕೆ ಸಾಧ್ಯವೇ ಇಲ್ಲ.. ಒಂದು ಕಡೆ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಎಂಬ ಜೋಡೆತ್ತು.. ಮತ್ತೊಂದು ಕಡೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಎಂಬ ಜೋಡೆತ್ತು.. ಈ ಎರಡು ಜೋಡೆತ್ತುಗಳು ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಹಗಲಿರುಳು ದುಡಿದಿದ್ದರು.. ದೋಸ್ತಿ ಪಕ್ಷಗಳ ಅಭ್ಯರ್ಥಿಯಾದ ಕಾರಣಕ್ಕೆ ನಿಖಿಲ್ ಕುಮಾರಸ್ವಾಮಿ ನಿರಾಯಾಸವಾಗಿ ಗೆದ್ದು ಲೋಕಸಭೆ ಪ್ರವೇಶಿಸಬಹುದು ಎಂಬುದನ್ನು ಪೇಪರ್ ಮೇಲಿನ ಅಂಕೆ ಸಂಖ್ಯೆಗಳು ಹೇಳುತ್ತಿದ್ದವು.. ಆದರೆ ಮಂಡ್ಯದ ವಾಸ್ತವ ಪರಿಸ್ಥಿತಿ ಬೇರೆಯೇ ಇತ್ತು.. ಪೇಪರ್ ಮೇಲಿನ ಸಂಖ್ಯೆಗಳನ್ನು ಸುಲಭವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ನ ಮತಗಳನ್ನು ಕೂಡಿಸುವುದು ಸಾಧ್ಯವಿರಲಿಲ್ಲ.. ಹಾಲು ಜೇನು ಒಂದಾಗುವ ರೀತಿಯಲ್ಲಿ ಈ ಎರಡೂ ಪಕ್ಷಗಳು ಒಂದಾಗುವುದು ಮಂಡ್ಯದ ಮಟ್ಟಿಗೆ ಅಸಾಧ್ಯವಾಗಿತ್ತು.. ಅಲ್ಲೇನಿದ್ದರೂ ದಳ ಮತ್ತು ಕಾಂಗ್ರೆಸ್ ಕಾರ್ಯಕರ್ತನ ನಡುವಿನದ್ದು ಎಣ್ಣೆ ಸೀಗೆಕಾಯಿಯ ಸಂಬಂಧ.. ತಲೆಮಾರುಗಳಿಂದ ನಡೆದು ಬಂದ ರಾಜಕೀಯ ವೈಷಮ್ಯ.. ಅಷ್ಟು ಸುಲಭವಾಗಿ ಕುಮಾರಸ್ವಾಮಿ ಹೆಗಲ ಮೇಲೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಕೈ ಹಾಕಿದಾಕ್ಷಣ ಮಂಡ್ಯದ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರ ಹೆಗಲ ಮೇಲೆ ಕೈಹಾಕಲು ತಯಾರಿರಲಿಲ್ಲ.. ಅಂತದ್ದೊಂದು ರಾಜಕೀಯ ಪರಿಸ್ಥಿತಿಯ ಲಾಭ ಪಡೆಯುವ ಚಾಕಚಕ್ಯತೆ ಪ್ರದರ್ಶಿಸಿದ್ದು ಸುಮಲತಾ ಅಂಬರೀಷ್.. ಮೇಲ್ನೋಟಕ್ಕೆ ಸುಮಲತಾ ಅವರು ಭಾವನಾತ್ಮಕವಾಗಿ ಮಾತಾಡುತ್ತಿದ್ದರು.. ಮಂಡ್ಯದ ಸೊಸೆ.. ಅಂಬರೀಷ್ ಪತ್ನಿ.. ಸ್ವಾಭಿಮಾನ.. ರಾಜಕೀಯ ಉತ್ತರಾಧಿಕಾರ ಹೀಗೆ ಹಲವು ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದರು.. ಅದರಾಚೆಗೆ ಮಂಡ್ಯದಲ್ಲಿ ಕೆಲಸ ಮಾಡುತ್ತಿದ್ದ ಜೆಡಿಎಸ್ ವರ್ಸಸ್ ಕಾಂಗ್ರೆಸ್ ರಾಜಕಾರಣದ ಶಕ್ತಿಯಾಗಿದ್ದರು.. ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಂತೆ ಸದ್ದಿಲ್ಲದೆ ಸುಮಕ್ಕನ ಬೆನ್ನಿಗೆ ಕಾಂಗ್ರೆಸ್ ಕಾರ್ಯಕರ್ತರು ನಿಂತಿದ್ದರು.. ಅದರ ಜೊತೆಗೆ ದರ್ಶನ್-ಯಶ್ ಜೋಡಿ ಬಹಿರಂಗವಾಗಿ ಓಡಾಡಿ ಮತಯಾಚನೆ ಮಾಡ್ತಿದ್ದರು.. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರು ಈ ಬಾರಿ ಕುಮಾರಸ್ವಾಮಿಯವರಿಗೆ ರಾಜಕೀಯವಾಗಿ ಬಲವಾದ ಪೆಟ್ಟುಕೊಡಬೇಕು ಎಂದು ಕಾದು ಕುಳಿತಿದ್ದರು.. ಇದರ ಪರಿಣಾಮವಾಗಿಯೇ ಸುಮಲತಾ ಅಂದು ಗೆದ್ದು ಬೀಗಿದ್ದರು.. ಬರೋಬ್ಬರಿ 1 ಲಕ್ಷದ 25 ಸಾವಿರ 876 ಮತಗಳ ಅಂತರದಿಂದ ಸುಮಲತಾ ಗೆದ್ದು ಬೀಗಿದ್ದರು.. ಬರೋಬ್ಬರಿ ಏಳು ಲಕ್ಷದ ಮೂರು ಸಾವಿರದ ಆರುನೂರ ಆರವತ್ತು ಮತಗಳು ಅಂದು ಸುಮಲತಾ ಅವರಿಗೆ ಬಿದ್ದಿದ್ದವು.. ಕುಮರಸ್ವಾಮಿಯವರು ಕನಸಿನಲ್ಲೂ ಯೋಚಿಸಿರದ ರೀತಿಯಲ್ಲಿ ಅವರ ಪುತ್ರರತ್ನ ಸೋಲಿನ ಕಹಿಯೊಂದಿಗೆ ರಾಜಕೀಯ ಅಭಿಯಾನ ಆರಂಭಿಸುವಂತಾಗಿತ್ತು.. ಇದು ದಳಪತಿಗಳಿಗೆ ಮಂಡ್ಯದ ಮತದಾರರು ಕೊಟ್ಟ ಮರ್ಮಾಘಾತವಾಗಿತ್ತು.. ಹಾಗಿದ್ದರೂ 2024ರ ಲೋಕಸಭಾ ಚುನಾವಣೆಯ ವೇಳೆಗೆ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ.. ಅಂದು ದೋಸ್ತಿಗಳಾಗಿದ್ದವರು ಈಗ ಶತ್ರುಗಳಾಗಿದ್ದಾರೆ.. ಅಂದು ವಿರೋಧಿಗಳಾಗಿದ್ದವರ ಹೆಗಲ ಮೇಲೆ ಕುಮಾರಸ್ವಾಮಿಯವರು ಕೈಹಾಕಿ ದೋಸ್ತಿ ಮಾಡಿಕೊಂಡಿದ್ದಾರೆ.. ಕಮಲದಳ ಮೈತ್ರಿಯಲ್ಲಿ ಮಂಡ್ಯ ಟಿಕೆಟ್ ಬಹುತೇಕ ಜೆಡಿಎಸ್ ಪಾಲಾಗುತ್ತಿದೆ.. ಖುದ್ದು ಕುಮಾರಸ್ವಾಮಿಯವರೇ ಮಂಡ್ಯದಿಂದ ಸ್ಪರ್ಧಿಸಬೇಕೋ ಅಥವಾ ನಿಖಿಲ್ ಕುಮಾರಸ್ವಾಮಿಯವರಿಗೆ ಮಣೆ ಹಾಕಬೇಕೋ ಎಂಬ ಬಗ್ಗೆ ದಳದಲ್ಲಿಯೇ ಗೊಂದಲವಿದೆ.. ಇಂತಹ ಪರಿಸ್ಥಿತಿಯಲ್ಲಿ ಫ್ಯಾಮಿಲಿ ಬದಲು ಮಂಡ್ಯದ ಜೆಡಿಎಸ್ ನಾಯಕರಿಗೇ ಟಿಕೆಟ್ ಕೊಡೋದು ಸೂಕ್ತ ಎಂಬ ನಿಲುವಿಗೆ ದಳಪತಿಗಳು ಬಂದಂತಿದೆ.. ಆದರೆ ಇದರಲ್ಲಿ ನಿಜವಾದ ಲಾಸ್ ಆಗಿರೋದು ಹಾಲಿ ಸಂಸದೆ ಸುಮಲತಾ ಅವರಿಗೆ.. ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿರುವ ಸುಮಲತಾ ಟಿಕೆಟ್ಗಾಗಿ ಎಷ್ಟೇ ಫೈಟ್ ಕೊಟ್ಟರೂ ಸೀಟು ಜೆಡಿಎಸ್ಗೆ ಅಂತ ಆದ್ಮೇಲೆ, ಸೀಟು ಸಿಗೋದಿಲ್ಲ ಅನ್ನೋದು ಖಾತ್ರಿಯಾಗಿದೆ.. ಅತ್ತ ಕಾಂಗ್ರೆಸ್ ಕೂಡ ಸುಮಲತಾ ಅವರಿಗೆ ಬಾಗಿಲುಮುಚ್ಚಿದ್ದು, ಮಂಡ್ಯದಲ್ಲಿ ಸ್ಟಾರ್ ಚಂದ್ರುಗೆ ಟಿಕೆಟ್ ಘೋಷಿಸಿದೆ.. ಇದ್ರಿಂದಾಗಿ ಬಿಜೆಪಿಯ ಟಿಕೆಟ್ ಸಿಗಬೇಕು ಇಲ್ಲದಿದ್ರೆ ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು ಎನ್ನುವ ಸ್ಥಿತಿಯಲ್ಲಿ ಸುಮಲತಾ ಇದ್ದಾರೆ.. ಆದ್ರೆ ಮೊದಲೇ ಹೇಳಿದಂತೆ ಮಂಡ್ಯದಲ್ಲಿ ಈಗ 2019ರ ಚುನಾವಣೆಯ ವಾತಾವರಣ ಇಲ್ಲ.. ಕಾಂಗ್ರೆಸ್ನಿಂದ ಸ್ಟಾರ್ ಚಂದ್ರು ಅಭ್ಯರ್ಥಿಯಾಗುವುದರ ಮೂಲಕ ದಳ ವಿರೋಧಿ ಮತಗಳನ್ನು ಸೆಳೆಯಲು ಕಾಂಗ್ರೆಸ್ ಸನ್ನದ್ಧವಾಗಿದೆ.. ಜೆಡಿಎಸ್ಗೆ ಟಿಕೆಟ್ ಹೋಗೋದ್ರಿಂದ ಬಿಜೆಪಿ ಸ್ಪರ್ಧಿಸುವ ಮಾತು ಉಳಿದಿಲ್ಲ.. ಅಥವಾ ಬಿಜೆಪಿ ಒಂದು ವೇಳೆ ಸುಮಲತಾ ಪಕ್ಷೇತರರಾಗಿ ಸ್ಪರ್ಧಿಸಿದ್ರೆ ಮೈತ್ರಿಧರ್ಮ ಪಾಲನೆ ದೃಷ್ಟಿಯಿಂದ ಸುಮಲತಾ ಬೆನ್ನಿಗೆ ನಿಲ್ಲುವುದೂ ಕಷ್ಟವಾಗಲಿದೆ.. ಅಲ್ಲದೆ ಬಿಜೆಪಿಗೆ ಮಂಡ್ಯದಲ್ಲಿ ಕಾಂಗ್ರೆಸ್ನಷ್ಟು ದೊಡ್ಡಮಟ್ಟದ ಶಕ್ತಿಯೂ ಇಲ್ಲ..
ಸ್ವಾಭಿಮಾನ ಬದಿಗಿಟ್ಟರೆ ಸುಮಲತಾಗೆ ಟಿಕೆಟ್?
ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಸುಮಲತಾ ಪದೇ ಪದೆ ಹೇಳಿದ್ದು ಸ್ವಾಭಿಮಾನದ ಮಾತು. ಮಂಡ್ಯದ ಸ್ವಾಭಿಮಾನದ ಮಾತು.. ಅಂಬರೀಷ್ ಸ್ವಾಭಿಮಾನದ ಮಾತು.. ಮಂಡ್ಯದ ಸೊಸೆಯ ಸ್ವಾಭಿಮಾನದ ಮಾತು.. ಆದ್ರೀಗ ಅದೇ ಸ್ವಾಭಿಮಾನದ ಮಾತು ಸುಮಲತಾ ಅವರಿಗೆ ಅಡ್ಡಗಾಲಾಗಿ ನಿಂತಿದೆ.. ಯಾಕಂದ್ರೆ ಎಷ್ಟೇ ಪ್ರಯತ್ನಿಸಿದ್ರೂ ಒಂದೆಡೆ ಮಂಡ್ಯದ ಟಿಕೆಟ್ ಸಿಗ್ತಿಲ್ಲ.. ಕೇವಲ ಮಂಡ್ಯದಿಂದ ಟಿಕೆಟ್ ಸಿಕ್ಕಿಲ್ಲ ಎಂಬ ಏಕೈಕ ಕಾರಣಕ್ಕೆ ಮಂಡ್ಯದ ಬದಲು ಬೇರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ರೆ ಮಂಡ್ಯದ ಸ್ವಾಭಿಮಾನದ ಬಗ್ಗೆ ಅಂದು ಪುಂಖಾನುಪುಂಖವಾಗಿ ಮಾತಾಡಿದ್ದೆಲ್ಲಾ ಎಲೆಕ್ಷನ್ ಗಿಮಿಕ್ಕಾ ಎಂಬ ಪ್ರಶ್ನೆಗೆ ಉತ್ತರಿಸಬೇಕಿದೆ.. ಇದರ ಹೊರತಾಗಿ ಜೆಡಿಎಸ್ನಿಂದ ಯಾರೇ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ರೂ ಅವರ ಪರವಾಗಿ ಮತ ಯಾಚಿಸುವುದು ಕೂಡ ಅನಿವಾರ್ಯ ಎಂಬಂತಾಗಿದೆ.. ಆದ್ರೆ ಇಲ್ಲಿ ಒಂದು ಅಂಶವನ್ನು ಮರೀಬಾರದು. ಒಂದು ವೇಳೆ ಮಂಡ್ಯದ ಹೊರಗೆ ಸುಮಲತಾ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ರೆ ಅವ ರಿಗೆ ಟಿಕೆಟ್ ಕೊಡಲು ಬಿಜೆಪಿ ಕೂಡ ಬಹುತೇಕ ಸಿದ್ಧವಾಗಿದೆ.. ಅದರಲ್ಲೂ ಬೆಂಗಳೂರು ಉತ್ತರ ಕ್ಷೇತ್ರ ಸುಮಲತಾ ಸ್ಪರ್ಧೆಗೆ ಪ್ರಶಸ್ತವಾದ ಸ್ಥಳ ಎನ್ನುವುದು ಬಿಜೆಪಿ ನಾಯಕರ ಯೋಚನೆ.. ಆದ್ರೆ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಹೋದ್ರೆ ತಮ್ಮ ಸ್ವಾಭಿಮಾನದ ಕತೆಯೇನು ಎನ್ನುವುದು ಸುಮಲತಾ ಅವರ ಪ್ರಶ್ನೆ.. ರಾಜಕೀಯದಲ್ಲಿ ಶಾರ್ಟ್ ಟೈಮ್ ಲಾಭ ಪಡೆಯಲು ಈಗ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ರೂ ಅವರು ಶಾಶ್ವತವಾಗಿ ಮಂಡ್ಯ ಬಿಟ್ಟಂತೆಯೇ ಆಗಲಿದೆ.. ಬಹುತೇಕ ಸುಮಲತಾ ಅವರಿಗೆ ಅಂತಹ ರಾಜಕೀಯ ಪರಿಸ್ಥಿತಿ ಬೇಕಿದ್ದಂತೆ ಕಾಣ್ತಿಲ್ಲ.. ಇದರ ಬದಲು ಈಗ ಟಿಕೆಟ್ ಕೈತಪ್ಪಿದರೂ ಮುಂದೆ ಮಂಡ್ಯದಲ್ಲೇ ಇದ್ದು ರಾಜಕೀಯ ಮುಂದುವರಿಸಿದ್ರೆ ಮಾತ್ರ ತಮ್ಮ ಭವಿಷ್ಯಕ್ಕೆ ಅನುಕೂಲ ಆಗಬಹುದು ಎಂಬ ಲೆಕ್ಕಾಚಾರವನ್ನು ಸುಮಲತಾ ಹಾಕಿದಂತಿದೆ.. ಹೀಗಾಗಿ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಸುಮಲತಾ ತಾಳುವ ನಿಲುವು ದಿನ ದಿನಕ್ಕೂ ಕುತೂಹಲ ಹೆಚ್ಚಿಸುತ್ತಿದೆ.