ಸಂಸತ್ ಭವನದಲ್ಲಿ ಸೆಕ್ಯೂರಿಟಿ ಸಿಸ್ಟಂಗೆ ಏನಾಗಿದೆ? – ಆರು ಮಂದಿಗೂ ಇರುವುದು ಒಂದೇ ಲಿಂಕ್..!

ಸಂಸತ್ ಭವನದಲ್ಲಿ ಸೆಕ್ಯೂರಿಟಿ ಸಿಸ್ಟಂಗೆ ಏನಾಗಿದೆ?  – ಆರು ಮಂದಿಗೂ ಇರುವುದು ಒಂದೇ ಲಿಂಕ್..!

ಡಿಸೆಂಬರ್​ 13..2001.. 22 ವರ್ಷಗಳ ಹಿಂದೆ ಪಾಕಿಸ್ತಾನ ಮೂಲದ ಜೈಷ್-ಎ-ಮೊಹಮ್ಮದ್ ಸಂಘಟನೆಯ ಉಗ್ರರು ದೆಹಲಿಯಲ್ಲಿರುವ ಸಂಸತ್ ಭವನದ ಮೇಲೆ ದಾಳಿ ನಡೆಸಿದ್ದರು. ಒಳಗೆ ಸಂಸತ್ ಕಲಾಪ ನಡೆಯುತ್ತಿದ್ದಾಗ ಹೊರಗಡೆ ಐವರು ಉಗ್ರರು ಗುಂಡಿನ ಸುರಿಮಳೆಗೆರೆದಿದ್ದರು. ಕೌಂಟರ್​ ಆಪರೇಷನ್​​ನಲ್ಲಿ ಎಲ್ಲಾ ಐವರು ಉಗ್ರರನ್ನ ಕೂಡ ಕೊಲ್ಲಲಾಗಿತ್ತು. ಆದ್ರೆ, 8 ಮಂದಿ ಭದ್ರತಾ ಸಿಬ್ಬಂದಿ ಒಬ್ಬ ಗಾರ್ಡನ್ ಮೆಂಟೇನರ್ ಸಿಬ್ಬಂದಿ ದಾರುಣವಾಗಿ ಅಂತ್ಯಕಂಡಿದ್ದರು. ಈ ಘಟನೆ ನಡೆದು ಭರ್ತಿ 22 ವರ್ಷಗಳಾದ ದಿನವೇ ನೂತನ ಸಂಸತ್​ ಭವನದಲ್ಲಿ ಭಾರಿ ಭದ್ರತಾ ಲೋಪವಾಗಿದೆ. ಮೂವರು ಪುರುಷರು ಮತ್ತು ಒಬ್ಬ ಮಹಿಳೆ ಇಬ್ಬರು ಸಂಸತ್​​ ಭವನದ ಮೇಲೆ ಮತ್ತೊಂದು ಮಾದರಿಯಲ್ಲಿ ಅಟ್ಯಾಕ್ ಮಾಡಿದ್ದಾರೆ. ನಮ್ಮ ಸಾರ್ವಭೌಮತ್ವದ ಮೇಲೆಯೇ ನಡೆದ ದಾಳಿ ಇದಾಗಿದೆ. ಅತ್ಯಾಧುನಿಕ ಮತ್ತು ಹೈ ಸೆಕ್ಯೂರಿಟಿ ಇರೋ ಸಂಸತ್​ ಭವನದಲ್ಲೇ ಈ ಘಟನೆ ನಡೆದಿರೋದು ನಿಜಕ್ಕೂ ದುರಂತ. ಹಾಗಿದ್ರೆ ನಿಜವಾಗಿಯೂ ಸಂಸತ್​ ಭವನದಲ್ಲಿ ಆಗಿರೋದೇನು? ಕಲಾಪದ ವೇಳೆ ನುಗ್ಗಿದವರು ಯಾರು? ಸೆಕ್ಯೂರಿಟಿ ಪರ್ಸನಲ್​​ಗಳು ಏನು ಮಾಡ್ತಾ ಇದ್ದರು? ಈ ಘಟನೆ ಹಿಂದಿರೋ ಷಡ್ಯಂತ್ರವೇನು? ಒಳಗೆ ನುಗ್ಗಿದವರ ಉದ್ದೇಶ ಏನಾಗಿತ್ತು? ಇವೆಲ್ಲದರ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸಂಸತ್ ಭವನದಲ್ಲಿ ಭಾರಿ ಭದ್ರತಾ ಲೋಪ – 6 ಆರೋಪಿಗಳ ಪೈಕಿ ಐವರನ್ನು ಬಂಧಿಸಿದ ಪೊಲೀಸರು

ಈ ಇಡೀ ಘಟನೆಯಲ್ಲಿ ಒಟ್ಟು ಆರು ಮಂದಿ ಇದ್ದಾರೆ. ಈ ಪೈಕಿ ನಾಲ್ವರು ಸಂಸತ್​​ನ ಹೊರಗಡೆ ಇದ್ದರು. ಇಬ್ಬರು ಸಂಸತ್​​ನ ಒಳಗಡೆ ಇದ್ದರು. ಸಾಗರ್ ಶರ್ಮಾ ಮತ್ತು ಮನೋರಂಜನ್ ಇವರಿಬ್ಬರೂ ಲೋಕಸಭೆಯಲ್ಲಿರುವ ಪಬ್ಲಿಕ್ ಗ್ಯಾಲರಿಯಲ್ಲಿ ಕುಳಿತಿದ್ದರು. ಪಬ್ಲಿಕ್ ಗ್ಯಾಲರಿ ಅನ್ನೋದು ಜನಸಾಮಾನ್ಯರಿಗೆ ಕಲಾಪವನ್ನ ನೋಡಲು ಇರುವಂಥಾ ವ್ಯವಸ್ಥೆ. ನಮ್ಮ ವಿಧಾನಸೌಧದಲ್ಲೂ ಇದೇ ರೀತಿಯ ವ್ಯವಸ್ಥೆ ಇದೆ. ಪಾಸ್​ ಪಡೆದುಕೊಂಡು ಕಲಾಪವನ್ನ ನೋಡಲು ಅವಕಾಶ ಇರುತ್ತೆ. ಇಲ್ಲಿ ಸಾಗರ್​ ಶರ್ಮಾ ಮತ್ತು ಮನೋರಂಜನ್ ಇಬ್ಬರೂ ಪಾಸ್ ಪಡ್ಕೊಂಡೇ ಲೋಕಸಭೆಯೊಳಕ್ಕೆ ಎಂಟ್ರಿಯಾಗಿದ್ದರು. ಇವರಿಗೆ ಪಾಸ್ ಸಿಕ್ಕಿರೋದು ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಕಡೆಯಿಂದ. ಲೋಕಸಭೆ ಕಲಾಪ ಆರಂಭವಾದಾಗ ಸಾಗರ್​ ಶರ್ಮಾ ಮತ್ತು ಮನೋರಂಜನ್ ಇಬ್ಬರೂ ವಿಸಿಟರ್ಸ್ ಗ್ಯಾಲರಿಯಲ್ಲಿ ಕುಳಿತು ನೋಡ್ತಾ ಇದ್ದರು. ಆದ್ರೆ ಕಲಾಪ ಆರಂಭವಾಗಿ ಜೀರೋ ಹವರ್​​ನ ವೇಳೆ ಇದ್ದಕ್ಕಿದ್ದಂತೆ ವಿಸಿಟರ್ಸ್ ಗ್ಯಾಲರಿಯಿಂದ ಸಂಸದರು ಕುಳಿತಿದ್ದ ಜಾಗಕ್ಕೆ ಸಾಗರ್​ ಶರ್ಮಾ ಮತ್ತು ಮನೋರಂಜನ್ ಜಂಪ್ ಮಾಡ್ತಾರೆ. ಮೊದಲಿಗೆ ಒಬ್ಬ ಜಂಪ್ ಮಾಡಿದಾಗ ಸಂಸದರೆಲ್ಲಾ ಹಿಂದಕ್ಕೆ ತಿರುಗಿ ನೋಡ್ತಾರೆ. ವೀಕ್ಷಕರ ಗ್ಯಾಲರಿಯಲ್ಲಿದ್ದವನು ಯಾರೋ ಆಯತಪ್ಪಿ ಕೆಳಕ್ಕೆ ಬಿದ್ದಿರಬೇಕು ಅಂದುಕೊಳ್ತಾರೆ. ನೋಡನೋಡುತ್ತಲೇ ಇನ್ನೊಬ್ಬ ಜಂಪ್ ಮಾಡ್ತಾನೆ. ಸಾಗರ್ ಶರ್ಮಾ ಮತ್ತು ಮನೋರಂಜನ್ ಇಬ್ಬರೂ ಕೂಡ ಲೋಕಸಭೆಯೊಳಗೆ ಸಂಸದರು ಕುಳಿತುಕೊಳ್ಳೋ ಬೆಂಚ್​​ಗಳ ಮೇಲೆಯೇ ಜಂಪ್​ ಮಾಡಿಕೊಂಡು ಹೋಗ್ತಾರೆ. ಸೀದಾ ಸ್ಪೀಕರ್​ ಚೇರ್ ಬಳಿಗೆ ನುಗ್ಗೋಕೆ ಯತ್ನಿಸ್ತಾರೆ. ಇದೇ ವೇಳೆ ತಮ್ಮ ಕಾಲಿನ ಶೂವಿನೊಳಗೆ ಇಟ್ಟಿದ್ದ ಸಣ್ಣ ಡಬ್ಬಿಯನ್ನ ಹೊರಗೆ ತೆಗೆದು ಓಪನ್ ಮಾಡ್ತಾರೆ. ಸಾಗರ್​ ಶರ್ಮಾ ಮತ್ತು ಮನೋರಂಜನ್ ಇಬ್ಬರೂ ಸ್ಮೋಕಿಂಗ್ ಕ್ಯಾನಿಸ್ಟರ್ಸ್​ಗಳನ್ನ ಓಪನ್ ಮಾಡಿರ್ತಾರೆ. ಅದ್ರಿಂದ ಯೆಲ್ಲೋ ಕಲರ್​ನ​ ಸ್ಮೋಕ್ ಹೊರಗೆ ಬರುತ್ತೆ. ಲೋಕಸಭೆ ಬಾವಿಯನ್ನ ಯೆಲ್ಲೋ ಸ್ಮೋಕ್ ಆವರಿಸಿಕೊಳ್ಳುತ್ತೆ. ಈ ವೇಳೆ ಬೆಂಚ್ ಮೇಲೆ ಓಡ್ತಾ ಇದ್ದವನನ್ನ ಕೆಲ ಸಂಸದರು ಸುತ್ತುವರೀತಾರೆ. ಡ್ಯಾಮಿಶ್ ಅಲಿ ಸೇರಿದಂತೆ ಕೆಲ ಸಂಸದರೇ ಆತನನ್ನ ಹಿಡಿದುಕೊಳ್ತಾರೆ.  ಅಷ್ಟೊತ್ತಿಗೆ ಮಾರ್ಷಲ್​​ಗಳು ಕೂಡ ಓಡಿಕೊಂಡು ಬರ್ತಾರೆ. ಇಬ್ಬರನ್ನ ಕೂಡ ಗಟ್ಟಿಯಾಗಿ ಹಿಡ್ಕೊಂಡು ಏಳೆಂಟು ಸಂಸದರು ಸರಿಯಾಗಿ ಹೊಡೀತಾರೆ. ಯಾಕಂದ್ರೆ, ಆವರು ಶೂ ಒಳಗಿಂದ ಸ್ಮೋಕಿಂಗ್ ಕ್ಯಾನಿಸ್ಟರ್ಸ್ ತೆಗೆಯೋವಾಗ ಸಂಸದರಿಗೆ ಆತಂಕವಾಗಿತ್ತು. ಇನ್ನೇನೋ ಚಾಕು, ಪಿಸ್ತೂಲ್ ಹೊರಕ್ಕೆ ತೆಗೆದ್ರೆ ಅಂತಾ ಇಬ್ಬರನ್ನೂ ಹಿಡ್ಕೊಂಡು ಸರಿಯಾಗಿಯೇ ಥಳಿಸ್ತಾರೆ. ಅಷ್ಟೊತ್ತಿಗೆ ಭದ್ರತಾ ಸಿಬ್ಬಂದಿ ಬರ್ತಾರೆ. ಬಳಿಕ ಇಬ್ಬರನ್ನೂ ವಶಕ್ಕೆ ಪಡೆದು ಸಂಸತ್​​ನಿಂತ ಹೊರಕ್ಕೆ ಎಳೆದುಕೊಂಡು ಹೋಗ್ತಾರೆ. ಇತ್ತ ಕಲಾಪವನ್ನ ಕೆಲ ಕಾಲ ಸ್ಥಗಿತಗೊಳಿಸಲಾಗುತ್ತೆ. ಈ ಘಟನೆಯಿಂದ ಸಂಸದರೆಲ್ಲ ಅಕ್ಷರಶ: ಶಾಕ್​ಗೆ ಒಳಗಾಗಿದ್ರು.

ಇನ್ನು ಲೋಕಸಭೆ ಬಾವಿಯೊಳಗೆ ನುಗ್ಗಿದಾಗ ಸಾಗರ್ ಶರ್ಮಾ ಮತ್ತು ಮನೋರಂಜನ್ ಇಬ್ಬರೂ ಘೋಷಣೆಗಳನ್ನ ಕೂಗುತ್ತಲೇ ಇದ್ದರು. ಜೈಭೀಮ್, ಭಾರತ್ ಮಾತಾ ಕೀ ಜೈ, ತಾನಾ ಸಾಹಿ ನಹೀ ಚಲೇಗಿ ಅಂದ್ರೆ ಸರ್ವಾಧಿಕಾರ ನಡೆಯೋದಿಲ್ಲ ಅನ್ನೋ ಘೋಷಣೆಗಳನ್ನ ಕೂಗ್ತಾ ಇರ್ತಾರೆ. ಇಲ್ಲಿ ಯಾವ ಕಾರಣಕ್ಕೆ ಘೋಷಣೆ ಕೂಗಿದ್ರು, ಅವರ ಉದ್ದೇಶ ಏನಾಗಿತ್ತು ಅನ್ನೋದು ಇನ್ನಷ್ಟೇ ಬಯಲಾಗಬೇಕಿದೆ. ಆದ್ರೆ ಇಬ್ಬರೂ ಕೂಡ ಯಾವುದೇ ಸಂಘಟನೆಗಳಲ್ಲಿ ಗುರುತಿಸಿಕೊಂಡವರಲ್ಲ ಅಂತಾ ಹೇಳಲಾಗ್ತಾ ಇದೆ.

ಇಲ್ಲಿ ಕಹಾನಿಗೆ ಇನ್ನೊಂದು ಟ್ವಿಸ್ಟ್ ಕೂಡ ಸಿಕ್ಕಿದೆ. ಸಂಸತ್​ನೊಳಕ್ಕೆ ನುಗ್ಗಿದ ಮನೋರಂಜನ್ ಕರ್ನಾಟಕದವನೇ.. ಅದ್ರಲ್ಲೂ ಮನೋರಂಜನ್​ ಮೈಸೂರು ಮೂಲದವನು. ಸಾಗರ್ ಶರ್ಮಾ ಉತ್ತರಪ್ರದೇಶದವನು. ಈ ಇಬ್ಬರೂ ಸಂಸದ ಪ್ರತಾಪ್ ಸಿಂಹ ಹೆಸರನ್ನ ಉಲ್ಲೇಖಿಸಿ ವಿಸಿಟರ್ ಪಾಸ್ ಪಡೆದುಕೊಂಡು ಸಂಸತ್​​ನೊಳಕ್ಕೆ ಎಂಟ್ರಿಯಾಗಿದ್ದಾರೆ. ಪ್ರತಾಪ್ ಸಿಂಹ ಪಿಎ ನೀಡಿದ್ದು ಎನ್ನಲಾದ ಪಾಸ್ ಈಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಹೀಗಾಗಿ ಈ ಬಗ್ಗೆ ತನಿಖಾಧಿಕಾರಿಗಳು ಸಂಸದ ಪ್ರತಾಪ್​ ಸಿಂಹ ಮತ್ತು ಅವರ ಪರ್ಸನಲ್ ಅಸಿಸ್ಟೆಂಟ್​ನ್ನ ಕೂಡ ವಿಚಾರಣೆಗೊಳಪಡಿಸೋದು ಗ್ಯಾರಂಟಿ. ಇನ್ನು ಸಂಸತ್​​ನೊಳಕ್ಕೆ ನುಗ್ಗಿದ್ದ ಮೈಸೂರು ಮೂಲದ ಮನೋರಂಜನ್​​ ಇಂಜಿನಿಯರಿಂಗ್ ಪದವಿ ಪೂರೈಸಿದ್ದ. ಆತನ ತಂದೆ ದೇವರಾಜ್ ಹೇಳೋ ಪ್ರಕಾರ, ಮನೋರಂಜನ್ ಸ್ವಾಮಿ ವಿವೇಕಾನಂದರ ಪುಸ್ತಕ ಓದುತ್ತಿದ್ದ. ಆತನಿಗೆ ಸಮಾಜದ ಬಗ್ಗೆ ಭಾರಿ ಕಳಕಳಿ ಇತ್ತು. ಸಮಾಜಕ್ಕೆ ಒಳ್ಳೆಯದು ಮಾಡಬೇಕು ಅಂದುಕೊಂಡಿದ್ದ. ಆತ ಈಗ ತಪ್ಪು ಮಾಡಿದ್ದೇ ಆದಲ್ಲಿ ಅವನನ್ನ ಗಲ್ಲಿಗೇರಿಸಿ ಎಂದಿದ್ದಾರೆ. ಅಷ್ಟೇ ಅಲ್ಲ, ಸಂಸದ ಪ್ರತಾಪ್ ಸಿಂಹ ನನಗೆ ತುಂಬಾ ಆತ್ಮೀಯರು. ಅವರ ಮೂಲಕವೇ ಪಾಸ್ ಪಡೆದುಕೊಂಡು ಹೋಗಿದ್ದಾನೋ ಗೊತ್ತಿಲ್ಲ ಎಂದಿದ್ದಾರೆ. ಇನ್ನು ಮನೋರಂಜನ್ ದೆಹಲಿ ಹೋಗಿರೋದು ಆತನ ತಂದೆಗೆ ಗೊತ್ತೇ ಇರಲಿಲ್ವಂತೆ. ಬೆಂಗಳೂರಿಗೆ ಹೋಗ್ತೀನಿ ಅಂತಾ ಮನೆ ಬಿಟ್ಟದ್ನಂತೆ. ಇದು ಆತನ ತಂದೆ ನೀಡಿರೋ ಮಾಹಿತಿ.

ಇವಿಷ್ಟು ಸಂಸತ್​ನೊಳಕ್ಕೆ ನುಗ್ಗಿದ ಸಾಗರ್ ಮತ್ತು ಮನೋರಂಜನ್ ಕಥಾನಕವಾಯ್ತು. ಹೊರಗಡೆ ಇನ್ನೂ ನಾಲ್ವರಿದ್ರು. ಈ ಪೈಕಿ ನೀಲಂ ಅನ್ನೋ ಮಹಿಳೆ ಮತ್ತು ಅನುಮೋಲ್ ಅನ್ನೋ ಯುವಕ ಸಂಸತ್​​ನ ಹೊರಗಡೆ ಘೋಷಣೆ ಕೂಗುತ್ತಾ ಅವರು ಕೂಡ ಗ್ಯಾಸ್ ಕ್ಯಾನ್ಸಿಸ್ಟರ್ಸ್​ಗಳನ್ನ ಓಪನ್​ ಮಾಡಿದ್ರು. ಸಂಸತ್​​ನೊಳಗೆ ಯೆಲ್ಲೋ ಸ್ಮೋಕ್ ಹರಡಿದಂತೆ ಹೊರಗಡೆಯೋ ಸ್ಮೋಕ್ ಉಂಟಾಗಿತ್ತು. ಕೂಡಲೇ ಇಬ್ಬರನ್ನೂ ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪೈಕಿ ನೀಲಂ ಹರಿಯಾಣ ಮೂಲದವಳಾಗಿದ್ದು, ಸಿವಿಲ್ ಸರ್ವಿಸ್ ಎಕ್ಸಾಮ್​ಗೆ ಪ್ರಿಪೇರ್ ಆಗಬೇಕು ಅಂತಾ ಮನೆ ಬಿಟ್ಟಿದ್ಲಂತೆ. ಆದ್ರೆ ಇಲ್ಲಿ ನೋಡಿದ್ರೆ ಸಂಸತ್ ಆವರಣದಲ್ಲಿ ಹಂಗಾಮ ಸೃಷ್ಟಿಸಿದ್ದಾರೆ. ಇಡೀ ಕೇಸ್​​ನಲ್ಲಿ ಒಟ್ಟು ಆರು ಮಂದಿಯ ಕೈವಾಡವಿದ್ದು, ಈ ಪೈಕಿ 4 ಮಂದಿಯನ್ನ ಬಂಧಿಸಲಾಗಿದೆ. ಇನ್ನಿಬ್ಬರು ಎಸ್ಕೇಪ್ ಆಗಿದ್ದು ಅವರ ಪತ್ತೆಗೆ ಪೊಲೀಸರು ತಲಾಶ್ ನಡೆಸ್ತಾ ಇದ್ದಾರೆ. ಈ ಕೇಸ್​​ನಲ್ಲಿ ಒಂದಂತೂ ಸ್ಪಷ್ಟ. ಇದು ಕಂಪ್ಲೀಟ್ಲಿ ಪ್ರಿಪ್ಲ್ಯಾನ್ಡ್ ಅಟ್ಯಾಕ್. ಆರು ಮಂದಿ ಪೈಕಿ ಇಬ್ಬರು ಕರ್ನಾಟಕದವರಾಗಿದ್ದು, ನೀಲಂ ಹರಿಯಾಣ ಮೂಲದಳು. ಅನುಮೋಲ್ ಮಹಾರಾಷ್ಟ್ರದವನು. ಇಲ್ಲಿ ದೆಹಲಿ ಮೂಲದವರು ಯಾರೂ ಇಲ್ಲ. ಆದ್ರೆ, ಈ ಆರೂ ಮಂದಿಗೂ ಲಿಂಕ್ ಇತ್ತು ಅನ್ನೋದು ಮಾತ್ರ ಸ್ಪಷ್ಟ. ಪ್ರೈಮರಿ ಸೋರ್ಸ್ ಪ್ರಕಾರ ಈ ಆರೂ ಮಂದಿ ಆರೋಪಿಗಳು ಗುರ್​ಗಾಂವ್​ನಲ್ಲಿ ಜೊತೆಗೆ ಉಳಿದುಕೊಂಡಿದ್ರಂತೆ. ಆದ್ರೆ ಯಾವ ಉದ್ದೇಶವನ್ನ ಇಟ್ಕೊಂಡು ಸಂಸತ್​​​ನ್ನ ಟಾರ್ಗೆಟ್ ಮಾಡಿದ್ದಾರೆ, ಯಾವುದಾದ್ರೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾರಾ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.

Sulekha