ಸೌಜನ್ಯ ಕೇಸ್‌ಗೆ ಟ್ವಿಸ್ಟ್ – ಸಿಬಿಐ ಮೇಲ್ಮನವಿ ಸಲ್ಲಿಸಿರುವ ಉದ್ದೇಶವೇನು? – ಈ ಪ್ರಕರಣ ಇನ್ನೆಷ್ಟು ವರ್ಷ ಮುಂದೂಡಿಕೆ ಆಗಬಹುದು?

ಸೌಜನ್ಯ ಕೇಸ್‌ಗೆ ಟ್ವಿಸ್ಟ್ – ಸಿಬಿಐ ಮೇಲ್ಮನವಿ ಸಲ್ಲಿಸಿರುವ ಉದ್ದೇಶವೇನು? – ಈ ಪ್ರಕರಣ ಇನ್ನೆಷ್ಟು ವರ್ಷ ಮುಂದೂಡಿಕೆ ಆಗಬಹುದು?

2012ರಲ್ಲಿ ಧರ್ಮಸ್ಥಳದ ಮಣ್ಣ‌ಸಂಕದ‌ ಬಳಿಯಲ್ಲಿ ನಡೆದ ಸೌಜನ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹೋರಾಟಗಳು ನಡೆಯುತ್ತಿರುವಾಗಲೇ, ಇಡೀ ಕೇಸ್‌ಗೆ ಸಂಬಂಧಿಸಿ ಒಂದಷ್ಟು ಮಹತ್ವದ ಬೆಳವಣಿಗೆಗಳಾಗಿವೆ. ಆರೋಪಿ ಸಂತೋಷ್ ರಾವ್‌ ಖುಲಾಸೆಗೊಳಿಸಿರೋದನ್ನ ಪ್ರಶ್ನಿಸಿ ಸಿಬಿಐ ಕರ್ನಾಟಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಅತ್ತ ಸೌಜನ್ಯ ಕುಟುಂಬಸ್ಥರು ಇಡೀ ಪ್ರಕರಣದ ಮರುತನಿಖೆಗೆ ಆಗ್ರಹಿಸುತ್ತಿದ್ದಾರೆ. ಸಿಬಿಐ ಮೇಲ್ಮನವಿ ಸಲ್ಲಿಸಿರುವ ಉದ್ದೇಶವೇನು? ಮುಂದೆ ಈ ಪ್ರಕರಣ ಏನಾಗಬಹುದು? ಸೌಜನ್ಯ ಕುಟುಂಬಸ್ಥರ ಮುಂದಿರುವ ಆಯ್ಕೆಗಳೇನು? ಇವೆಲ್ಲದರ ಕುರಿತಾದ ವಿಸ್ತೃತ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ – ವಿಶೇಷ ನ್ಯಾಯಾಲಯದ ಆದೇಶದ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ ಸಿಬಿಐ

2023ರ ಜುಲೈ 16ರಂದು ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಸಂತೋಷ್ ರಾವ್ನನ್ನ ಸಿಬಿಐ ವಿಶೇಷ ನ್ಯಾಯಾಲಯ ಕೇಸ್‌ನಿಂದ ಖುಲಾಸೆಗೊಳಿಸಿತ್ತು. ಸೌಜನ್ಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನ ಕೊಲೆ ಮಾಡಿರೋದಕ್ಕೆ ಸಂತೋಷ್ ವಿರುದ್ಧ ಯಾವುದೇ ಸಮರ್ಪಕ ಸಾಕ್ಷ್ಯಗಳಿಲ್ಲ. ಸಂತೋಷ್ ರಾವ್ ಅಪರಾಧಿ ಅಂತಾ ಸಾಬೀತುಪಡಿಸೋಕೆ ಪ್ರಾಸಿಕ್ಯೂಷನ್‌ಗೆ ಸಾಧ್ಯವಾಗಿಲ್ಲ. ಹೀಗಾಗಿ ಸಂತೋಷ್ ಈ ಪ್ರಕರಣದಲ್ಲಿ ನಿರಪರಾಧಿ ಅಂತಾ ಸಿಬಿಐ ಕೋರ್ಟ್ ತೀರ್ಪು ನೀಡಿತ್ತು. ಸುಮಾರು 11 ವರ್ಷಗಳ ಬಳಿಕ ಸಂತೋಷ್ ರಾವ್, ತನ್ನ ವಿರುದ್ದ‌ದ ಆರೋಪಗಳಿಂದ ದೋಷಮುಕ್ತನಾಗಿ ಹೊರ ಬಂದಿದ್ದ.

ಆರೋಪಿಯಾಗಿದ್ದ ಸಂತೋಷ್ ರಾವ್ ಪರ ವಕೀಲ ಮೋಹಿತ್ ಕುಮಾರ್ ವಾದ ಮಂಡಿಸಿದ್ದರು. ಅತ್ಯಾಚಾರ ಹಾಗೂ ಕೊಲೆಯಾದ ವೇಳೆ ಸಂತೋಷ್ ರಾವ್ ಸ್ಥಳದಲ್ಲಿ ಇರಲಿಲ್ಲ. ಸಂತೋಷ್ ರಾವ್ ರೇಪ್ ಮಾಡಿರುವ ಬಗ್ಗೆ ವೈದ್ಯಕೀಯ ವರದಿ ಇರಲಿಲ್ಲ. ಸೌಜನ್ಯ ಹತ್ಯೆಯಾಗಿ ಎರಡು ದಿನಗಳ ಬಳಿಕ ಆರೋಪಿಯನ್ನ ಬಂಧಿಸಲಾಗಿತ್ತು. ಸೌಜನ್ಯ ಮೃತದೇಹ ಸಿಕ್ಕ ಜಾಗದಿಂದ 50 ಮೀಟರ್ ಅಂತರದಲ್ಲಿ ಟೆಂಟ್‌ನಲ್ಲಿ ವಾಸವಾಗಿದ್ದ. ಹೀಗಾಗಿ ಸಂತೋಷ್ ರಾವ್ ಅತ್ಯಾಚಾರವೆಸಗಿರಬೇಕು ಅಂತಾ ಅನುಮಾನ ವ್ಯಕ್ತಪಡಿಸಿ ಬಂಧಿಸಲಾಗಿತ್ತು ಅನ್ನೋ ಅಂಶಗಳನ್ನೆಲ್ಲಾ ಪ್ರಸ್ತಾಪಿಸಿ ವಕೀಲ ಮೋಹಿತ್ ಕುಮಾರ್ ವಾದ ಮಂಡಿಸಿದ್ದರು. ಅತ್ತ ಸಿಬಿಐ ತನಿಖಾಧಿಕಾರಿಗಳಿಗೆ ಸಂತೋಷ್ ರಾವ್ ಅತ್ಯಾಚಾರ, ಕೊಲೆ ಮಾಡಿದ್ದಾನೆ ಅನ್ನೋದನ್ನ ಸಾಬೀತುಪಡಿಸೋಕೆ ಬೇಕಾದ ಸೂಕ್ತ ಸಾಕ್ಷ್ಯಾಧಾರಗಳು ಕೂಡ ಸಿಕ್ಕಿರಲಿಲ್ಲ. ಹೀಗಾಗಿ ಕೋರ್ಟ್‌ನಲ್ಲಿ ಸಂತೋಷ್ ರಾವ್ ವಿರುದ್ಧದ ಆರೋಪ ಸ್ಟ್ಯಾಂಡ್ ಆಗಲೇ ಇಲ್ಲ. ಹೀಗಾಗಿ ಸಿಬಿಐ ವಿಶೇಷ ನ್ಯಾಯಾಲಯ ಸಂತೋಷ್ ರಾವ್ನನ್ನ ನಿರ್ದೋಷಿ ಅಂತಾ ತೀರ್ಪು ನೀಡಿತ್ತು. ಆದ್ರೆ ಸ್ಪೆಷಲ್ ಕೋರ್ಟ್ನ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸೋಕೆ ಸಿಬಿಐಗೆ 60 ದಿನಗಳ ಕಾಲಾವಕಾಶವನ್ನ ಕೂಡ ನೀಡಲಾಗಿತ್ತು.  ಹೀಗಾಗಿ ಸಂತೋಷ್ ರಾವ್ ನಿರ್ದೋಷಿ ಅನ್ನೋ ತೀರ್ಪನ್ನ ಪ್ರಶ್ನಿಸಿ ಸಿಬಿಐ ಕರ್ನಾಟಕ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದೆ. ಸಂತೂಷ್ ರಾವ್ ಆರೋಪಿ ಅನ್ನೋದಕ್ಕೆ ಸಾಕ್ಷ್ಯ ಒದಗಿಸೋಕೆ ವಿಫಲವಾಗಿದ್ರೂ ಸಿಬಿಐ ಮತ್ತೊಂದು ಹಂತದ ಪ್ರಯತ್ನಕ್ಕೆ ಕೈ ಹಾಕಿದೆ. ಮೇಲ್ಮನವಿ ವೇಳೆಯೂ ಸಂತೋಷ್ ರಾವ್ನೇ ನಿಜವಾದ ಆರೋಪಿಯಾಗಿದ್ದು, ಮರು ವಿಚಾರಣೆ ವೇಳೆ ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನ ಒದಗಿಸೋದಾಗಿ ಸಿಬಿಐ ಕರ್ನಾಟಕ ಹೈಕೋರ್ಟ್‌ನಲ್ಲಿ ಹೇಳಿದೆ.

ಇಲ್ಲಿ ಇನ್ನೊಂದು ವಿಚಾರ ಕೂಡ ಇದೆ. ಸಂತೋಷ್ ರಾವ್ ನಿರಪರಾಧಿ ಅಂತಾ ಸಿಬಿಐ ಸ್ಪೆಷಲ್ ಕೋರ್ಟ್ ತನ್ನ ಅಂತಿಮ ತೀರ್ಪು ನೀಡಿರೋದು 2023ರ ಜುಲೈ 16ರಂದು. ಆಗಲೇ ಹೇಳಿದ ಹಾಗೆ ಮೇಲ್ಮನವಿ ಸಲ್ಲಿಕೆಗೆ 60 ದಿನಗಳ ಕಾಲಾವಕಾಶ ನೀಡಲಾಗಿತ್ತು. ಅಂದ್ರೆ 60 ದಿನಗಳ ಅವಕಾಶ ಇತ್ತು. ಆದ್ರೀಗ ಅವಧಿ ಮುಗಿದ ಬಳಿಕ ಸಿಬಿಐ ಮೇಲ್ಮನವಿ ಸಲ್ಲಿಸಿದ್ದು ಹೀಗಾಗಿ ಮೇಲ್ಮನವಿಯನ್ನ ಹೈಕೋರ್ಟ್ ಮಾನ್ಯ ಮಾಡುತ್ತಾ ಅನ್ನೋದು ಈಗಿರುವ ಪ್ರಶ್ನೆ.

ಸಿಬಿಐ ಬಳಿ ಸಂತೋಷ್ ವಿರುದ್ಧ ಪ್ರಬಲ ಸಾಕ್ಷ್ಯವಿದ್ಯಾ?

ಸಿಬಿಐ ಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಯಲ್ಲಿ ಸಂತೋಷ್ ರಾವ್ನೇ ಆರೋಪಿ ಅನ್ನೋದಕ್ಕೆ ತನ್ನ ಬಳಿ ಎಲ್ಲಾ ಸಾಕ್ಷ್ಯಗಳಿವೆ ಅಂತಾ ಸಿಬಿಐ ಹೇಳಿಕೊಂಡಿದೆ. ಹಾಗಿದ್ರೆ ನಿಜಕ್ಕೂ ಸಂತೋಷ್ ರಾವ್ ವಿರುದ್ಧ ಸಿಬಿಐ ಬಳಿ ಹೆಚ್ಚಿನ ಸಾಕ್ಷ್ಯಗಳಿವೆಯಾ? ಅಷ್ಟು ವಿಶ್ವಾಸದಿಂದ ಮೇಲ್ಮನವಿ ಅರ್ಜಿ ಸಲ್ಲಿಸಿರೋದಾದ್ರೆ ಸಿಬಿಐ ಬಳಿ ಇರುವ ಸಾಕ್ಷ್ಯಗಳೇನು? ಸಂತೋಷ್ ಅಪರಾಧಿ ಅಂತಾ ಸಾಬೀತುಪಡಿಸೋಕೆ ಸಾಧ್ಯಾನಾ ಅನ್ನೋ ಪ್ರಶ್ನೆ ಕೂಡ ಬರುತ್ತೆ.  ಮೇಲ್ಮನವಿ ಅರ್ಜಿಯನ್ನ ಹೈಕೋರ್ಟ್ ಪುರಸ್ಕರಿಸಿದ್ದೇ ಆದಲ್ಲಿ ಸಿಬಿಐ ಅಧಿಕಾರಿಗಳು ಸಂತೋಷ್ ರಾವ್ನನ್ನ ಮತ್ತೊಮ್ಮೆ ವಿಚಾರಣೆಗೊಳಪಡಿಸಬಹುದು. ಆದ್ರೆ ಕಳೆದ 11 ವರ್ಷಗಳಿಂದ ಸಿಗದ ಯಾವ ದಾಖಲೆ, ಯಾವ ಸಾಕ್ಷ್ಯ ಈಗ ಸಿಬಿಐಗೆ ಸಿಕ್ಕಿದೆ ಅನ್ನೋ ಅನುಮಾನ ಸಹಜವಾಗಿಯೇ ಭುಗಿಲೇಳುತ್ತೆ.

ಇಷ್ಟೇ ಅಲ್ಲ, ಸಿಬಿಐ ಕೋರ್ಟ್ ತೀರ್ಪು ಬಂದು ನಾಲ್ಕು ತಿಂಗಳುಗಳು ಕಳೆದ ಮೇಲೆ ಸಿಬಿಐ ಮೇಲ್ಮನವಿ ಸಲ್ಲಿಸಿದೆ. ತನ್ನ ಬಳಿ ಎಲ್ಲಾ ದಾಖಲೆ, ಸಾಕ್ಷ್ಯಗಳು ಇದ್ದಿದ್ದೇ ಆದಲ್ಲಿ ಮೇಲ್ಮನವಿ ಸಲ್ಲಿಸೋಕೆ ಸಿಬಿಐಗೆ ಇಷ್ಟು ಸಮಯ ಯಾಕೆ ಬೇಕಾಯ್ತು? ಕೋರ್ಟ್ ತೀರ್ಪು ನೀಡಿದ ಮರುದಿನವೇ ಅಥವಾ ವಾರದೊಳಗೆ, ಹೋಗ್ಲಿ ಬಿಡಿ ಒಂದು ತಿಂಗಳ ಒಳಗಾದ್ರೂ ಸಿಬಿಐಗೆ ಮೇಲ್ಮನವಿ ಸಲ್ಲಿಸಬಹುದಿತ್ತಲ್ವಾ? ಆದ್ರೆ ಅವಧಿ ಮುಗಿಯೋವರೆಗೂ ಸಿಬಿಐ ಮೇಲ್ಮನವಿ ಸಲ್ಲಿಸೋಕೆ ಕಾದಿದ್ಯಾಕೆ ಅನ್ನೋದು ಇಲ್ಲಿ ಕಾಡುವ ಮತ್ತೊಂದು ಪ್ರಶ್ನೆ.

ಸಿಬಿಐ ಮೇಲ್ಮನವಿಯಿಂದ ಒಂದು ವಿಚಾರವಂತೂ ಸ್ಪಷ್ಟವಾಗುತ್ತೆ. ಸಂತೋಷ್ ಅಪರಾಧಿ ಅಂತಾ ಸಾಬೀತುಪಡಿಸುವಲ್ಲಿ ವಿಫಲವಾಗಿರೋದು ಸಿಬಿಐಗೆ ಆಗಿರುವಂಥಾ ಅತೀ ದೊಡ್ಡ ಮುಖಭಂಗ. ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾಗಿ ಒಂದು ಅತ್ಯಾಚಾರ, ಕೊಲೆ ಕೇಸ್ ಭೇದಿಸೋಕೆ ಸಾಧ್ಯವಾಗಿಲ್ಲ ಅಂದ್ರೆ ಅದು ಸಿಬಿಐಗೆ ನಿಜವಾಗಿಯೇ ಪ್ರತಿಷ್ಠೆಯ ಪ್ರಶ್ನೆಯಾಗುತ್ತೆ. ಸೌಜನ್ಯ ಅತ್ಯಾಚಾರ, ಕೊಲೆ ನಡೆದಿರೋದು ನಿಜ ಅಂದ್ಮೇಲೆ ಅಲ್ಲೊಬ್ಬ ಅಪರಾಧಿ ಇರಲೇ ಬೇಕಲ್ವಾ. ಅಂದು ಸಿಬಿಐ ಸಂತೋಷ್ ರಾವ್ನೇ ಆರೋಪಿ ಅನ್ನೋ ಆಯಾಮದಲ್ಲೇ ತನಿಖೆ ನಡೆಸಿ ಆತನನ್ನ ಕೋರ್ಟ್ ಕಟಕಟೆಯಲ್ಲಿ ನಿಲ್ಲಿಸಿ ವಾದ ಮಂಡಿಸಿತ್ತು. ಆದ್ರೆ ಸಿಬಿಐ ಸ್ಪೆಷಲ್ ಕೋರ್ಟ್ ಸಂತೋಷ್ ವಿರುದ್ಧ ಸಿಬಿಐ ಸರಿಯಾದ ಸಾಕ್ಷ್ಯವನ್ನೇ ಸಲ್ಲಿಸಿಲ್ಲ. ಕೃತ್ಯದಲ್ಲಿ ಈತ ಭಾಗಿಯಾಗಿದ್ದಾನೆ ಅನ್ನೋದಕ್ಕೆ ಯಾವುದೇ ಸಾಂದರ್ಭಿಕ ಸಾಕ್ಷಗಳು ಮಾತ್ರವಲ್ಲದೆ ಬಹುಮುಖ್ಯವಾದ ವೈಜ್ಞಾನಿಕ ಪುರಾವೆ ಇಲ್ಲ ಅಂತಾ ಕಡ್ಡಿ ತುಂಡು ಮಾಡಿದಂತೆ ಆದೇಶ ನೀಡಿತ್ತು. ಹೀಗಾಗಿ ಈಗ ಸಿಬಿಐ ನಿಜಕ್ಕೂ ಒತ್ತಡದಲ್ಲಿ ಸಿಲುಕಿದೆ. ಬೇರೊಬ್ಬ ಆರೋಪಿಯನ್ನ ಹಿಡಿದುಕೊಡುವ ಪರಿಸ್ಥಿತಿಯಲ್ಲಂತೂ ಸಿಬಿಐ ಸದ್ಯಕ್ಕಿಲ್ಲ. ಆಗ ಸಂತೋಷ್ಗೆ ಆರೋಪಿ ಹಣೆಪಟ್ಟಿ ಕಟ್ಟಿದ್ದೇಕೆ ಅನ್ನೋ ಪ್ರಶ್ನೆಯನ್ನ ಸಿಬಿಐ ಎದುರಿಸಬೇಕಾಗುತ್ತೆ. ಹೇಗಾದ್ರೂ ಮಾಡಿ ಸಂತೋಷ್ನನ್ನ ಆರೋಪಿ ಅಂತಾ ಸಾಬೀತುಪಡಿಸಲೇಬೇಕಾದ ಅನಿವಾರ್ಯತೆಯನ್ನ ಸಿಬಿಐ ಇರುವಂತೆ ಕಾಣ್ತಿದೆ. ಹೀಗಾಗಿ ನಮ್ಮಲ್ಲಿ ಪ್ರಬಲ ದಾಖಲೆಗಳಿವೆ ಅನ್ನುತ್ತಾ ಸಿಬಿಐ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದೆ. ಆದ್ರೆ ಇಷ್ಟೊಂದು ತಡವಾಗಿ ಅರ್ಜಿ ಸಲ್ಲಿಸಿದ್ಯಾಕೆ ಅನ್ನೋ ಪ್ರಶ್ನೆಗಳಿಗೆ ಸಿಬಿಐ ಉತ್ತರಿಸಲೇಬೇಕಾಗುತ್ತೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೋರ್ಟ್ನಲ್ಲಿ ಯಾವ ರೀತಿಯಲ್ಲಿ ವಾದ ಮಂಡಿಸುತ್ತೆ. ತನ್ನ ಮೇಲ್ಮನವಿಯನ್ನ ಯಾವ ರೀತಿ ಸಿಬಿಐ ಸಮರ್ಥಿಸಿಕೊಳ್ಳುತ್ತೆ ಅನ್ನೋದನ್ನ ಎದುರು ನೋಡಬೇಕಿದೆ.

ಸಂತೋಷ್ ಸುತ್ತವೇ ತನಿಖೆ ನಡೆಸುವ ಪ್ರಯತ್ನವಾ?

ಇಲ್ಲಿ ಇನ್ನೊಂದು ಕ್ವಶ್ಚನ್ ಕೂಡ ಇದೆ. ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಸುತ್ತ ಸಾರ್ವಜನಿಕ ವಲಯದಲ್ಲಿ ಹಲವರ ಹೆಸರುಗಳು ಕೇಳಿ ಬರ್ತಿದೆ.  ಹೀಗಾಗಿ ಪ್ರಕರಣದ ತನಿಖೆ ಬೇರೆಯವರ ಬುಡದವರೆಗೂ ತಲುಪದಂತೆ ನೋಡಿಕೊಳ್ಳೋ ಪ್ರಯತ್ನ ನಡೀತಿದ್ಯಾ? ಏನೇ ಇದ್ರೂ ಸಂತೂಷ್ ಬಗ್ಗೆಯೇ ಮತ್ತೊಮ್ಮೆ ತನಿಖೆಯಾಗಬೇಕು. ಆತನನ್ನೇ ವಿಚಾರಣೆಗೊಳಪಡಿಸಬೇಕು. ಆತನೇ ಅಪರಾಧಿ ಅಂತಾ ಸಾಬೀತುಪಡಿಸೋಕೆ ಪ್ರಯತ್ನ ಮಾಡಲಾಗ್ತಿದ್ಯಾ ಅನ್ನೋ ಅನುಮಾನ ಕೂಡ ಇದೆ.

ಪ್ರಕರಣವನ್ನ ಮತ್ತಷ್ಟು ಮುಂದೂಡುವ ಪ್ರಯತ್ನ?

ಈಗ ಸಿಬಿಐ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿರೋದ್ರ ಹಿಂದೆ ಇನ್ನೊಂದು ಉದ್ದೇಶ ಇರಬಹುದು ಅಂತಾನೂ ಹೇಳಲಾಗುತ್ತೆ. ಅದು ಕೇಸ್ನ್ನ ಇನ್ನಷ್ಟು ಮುಂದೂಡಿಕೆ ಮಾಡೋದು. ಒಂದು ವೇಳೆ ಕರ್ನಾಟಕ ಹೈಕೋರ್ಟ್ ಸಿಬಿಐ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನ ಪುರಸ್ಕರಿಸಿದ್ದೇ ಆದಲ್ಲಿ, ಕನಿಷ್ಠ ಇನ್ನೂ 2 ರಿಂದ 3 ವರ್ಷಗಳ ಕಾಲ ಈ ಕೇಸ್ನ ವಿಚಾರಣೆ ನಡೆಯುತ್ತೆ. ಪ್ರಕರಣ ಇನ್ನಷ್ಟು ಮುಂದೂಡಿಕೆಯಾಗುತ್ತೆ. ಈ ಮೇಲ್ಮನವಿಯ ಉದ್ದೇಶ ಇದು ಕೂಡ ಆಗಿರಬಹುದು ಅಂತಾ ಹೇಳಲಾಗ್ತಿದೆ.

ಮರುತನಿಖೆ ದಾವೆ ವಜಾಗೊಳಿಸಿದ್ದ ಹೈಕೋರ್ಟ್!

ಸಿಬಿಐ ಏನೋ ಮತ್ತೊಮ್ಮೆ ಸಂತೋಷ್ ಹಿಂದೆಯೇ ಬಿದ್ದಿದೆ. ಆದ್ರೆ ಸೌಜನ್ಯ ಕುಟುಂಬಸ್ಥರು ಮತ್ತು ಸೌಜನ್ಯ ಪರ ಹೋರಾಟಗಾರರು ಸಂತೋಷ್ ಅಪರಾಧಿಯೇ ಅಲ್ಲ. ಈ ಕೇಸ್‌ನಲ್ಲಿ ಆತನದ್ದು ಯಾವುದೇ ಕೈವಾಡ ಇಲ್ಲ. ಇಡೀ ಪ್ರಕರಣದ ಟಢಮರುತನಿಖೆಯಾಗಬೇಕು ಅಂತಾ ಆಗ್ರಹಿಸುತ್ತಿದ್ದಾರೆ. ಆದರೆ, ಈ ಹಿಂದೆ ಸೌಜನ್ಯ ಪ್ರಕರಣದ ಮರುತನಿಖೆಗೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿತ್ತು. ಪ್ರಕರಣದಲ್ಲಿ ಸರ್ಕಾರ, ಮೂಲ ದೂರುದಾರರು ಅಥವಾ ಸಂತ್ರಸ್ತ ಕುಟುಂಬ ಆರೋಪಿಯನ್ನ ದೋಷಮುಕ್ತಗೊಳಿಸಿದ ವಿಚಾರಣಾಧೀನ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶ ಇದೆ. ಮೇಲ್ಮನವಿಯಲ್ಲಿ ತನಿಖಾ ಲೋಪಗಳನ್ನ ಪರಿಗಣಿಸಬಹುದು ಅಂತಾ ಹೇಳಿತ್ತು. ಆದರೆ, ಸೌಜನ್ಯ ಕುಟುಂಬಸ್ಥರು ಈ ಅವಕಾಶವನ್ನ ಬಳಸಿಕೊಂಡಿರಲಿಲ್ಲ.

ಅದೇನೇ ಇರಲಿ, ಸೌಜನ್ಯ ಅತ್ಯಾಚಾರ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯಗಳಾಗಬಹುದಾಗಿದ್ದ ಹಲವು ಅಂಶಗಳನ್ನ ಕೇಸ್‌ನ ಆರಂಭಿಕ ಹಂತದಲ್ಲೇ ಸಂಗ್ರಹಿಸಿರಲಿಲ್ಲ. ಪ್ರಾಸಿಕ್ಯೂಷನ್ ಗೆ ಆರೋಪ‌ ಸಾಬೀತುಪಡಿಸಲು ಅನುಕೂಲವಾಗಬಹುದಾಗಿದ್ದ ವೈಜ್ಞಾನಿಕ ಸಾಕ್ಷ್ಯಗಳನ್ನು ತನಿಖೆಯ ಆರಂಭಿಕ ಹಂತದಲ್ಲೇ ಸಂಗ್ರಹಿಸಲು‌ ತನಿಖಾಧಿಕಾರಿಗಳು ವಿಫಲರಾಗಿದ್ದರು ಎನ್ನುವುದು ಸಿಬಿಐ ಕೋರ್ಟ್‌ನ ತೀರ್ಪಿನಲ್ಲೇ ಉಲ್ಲೇಖವಾಗಿದೆ. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿ ಯಾರದ್ದೋ ಒತ್ತಡ ಇತ್ತು ಅನ್ನೋ ಅನುಮಾನ ಕೂಡ ಬಲವಾಗಿದೆ. ಇದೇ ಕಾರಣಕ್ಕೆ ಈ ಕೇಸ್‌ನಲ್ಲಿ ಕೇವಲ ಮೇಲ್ಮನವಿ ಸಲ್ಲಿಸಿದರೆ ಸಾಕಾಗುವುದಿಲ್ಲ. ಪ್ರಕರಣದ ಮರುತನಿಖೆಯಾಗಬೇಕು ಅನ್ನೋ ಒತ್ತಾಯ ಜೋರಾಗಿದೆ. ಆದ್ರೀಗ ಸಿಬಿಐ ಸಂತೋಷ್ ನಿರಪರಾಧಿ ಎಂಬ ತೀರ್ಪನ್ನ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದು, ಹೈಕೋರ್ಟ್ ಅರ್ಜಿಯನ್ನ ಪುರಸ್ಕರಿಸುತ್ತಾ? ಕೇಸ್‌ನ ಭವಿಷ್ಯವೇನಾಗಬಹುದು ಅನ್ನೋದೆ ಸದ್ಯದ ಕುತೂಹಲ.

Sulekha