ಹೊಸ ಬ್ರಹ್ಮಾಸ್ತ್ರದೊಂದಿಗೆ ದೀದಿ ಕೋಟೆಗೆ ನುಗ್ಗಿದ ಮೋದಿ! – ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಹೊಸ ಬೆಳವಣಿಗೆ?   

ಹೊಸ ಬ್ರಹ್ಮಾಸ್ತ್ರದೊಂದಿಗೆ ದೀದಿ ಕೋಟೆಗೆ ನುಗ್ಗಿದ ಮೋದಿ! – ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಹೊಸ ಬೆಳವಣಿಗೆ?   

ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಯಾವುದೇ ಚುನಾವಣೆ ನಡೀಲಿ..ಅಲ್ಲಿ ಜಿದ್ದಾಜಿದ್ದಿ ನಡೆಯೋದೆ ಟಿಎಂಸಿ ಮತ್ತು ಬಿಜೆಪಿ ನಡುವೆ. ಹೇಗಾದ್ರು ಮಾಡಿ ದೀದಿ ಕೋಟೆ ಭೇದಿಸಬೇಕು ಅಂತಾ ಬಿಜೆಪಿ ಇನ್ನಿಲ್ಲದ ಸರ್ಕಸ್ ಮಾಡ್ತಿದೆ. ಕಳೆದ ಬಂಗಾಳ ವಿಧಾನಸಭೆ ಚುನಾವಣೆ ವೇಳೆಯೇ ಮಮತಾರನ್ನ ಮಣಿಸಬೇಕು ಅಂತಾ ಬಿಜೆಪಿ ಪಣ ತೊಟ್ಟಿತ್ತು. ಆದ್ರೆ ಚುನಾವಣಾ ರಿಸಲ್ಟ್​​ನಲ್ಲಿ ದೀದಿ ಅಬ್ಬರಕ್ಕೆ ಮೋದಿಯ ಅಡ್ರೆಸ್ ಇಲ್ಲದಂತಾಗಿತ್ತು. ಹಾಗಂತಾ ಕಂಪ್ಲೀಟ್ ನೆಗ್ಲೆಕ್ಟ್​ ಮಾಡುವಷ್ಟು ಬಿಜೆಪಿ ಬಂಗಾಳದಲ್ಲಿ ವೀಕ್ ಆಗಿಲ್ಲ. ಟಿಎಂಸಿ ಬಳಿಕ ಬಲಿಷ್ಠ ಪಕ್ಷ ಅಂತಾ ಇರೋದು ಬಿಜೆಪಿಯೇ. ಎಡಪಕ್ಷ ಮತ್ತು ಕಾಂಗ್ರೆಸ್​​ನ್ನ ಕೇಸರಿ ಪಡೆ ಸೈಡಿಗಟ್ಟಿಯಾಗಿದೆ. ಆದ್ರೆ ಮೋದಿ-ಅಮಿತ್ ಶಾಗೆ ಎರಡನೇ ಸ್ಥಾನದಲ್ಲಿರೋದು ಬೇಕಾಗಿಯೇ ಇಲ್ಲ. ಬಂಗಾಳದಲ್ಲೂ ಕೇಸರಿ ಪತಾಕೆ ಹಾರಿಸಲೇಬೇಕು ಅನ್ನೋದೆ ಅವರ ಟಾರ್ಗೆಟ್. ಹೀಗಾಗಿ ಈಗ ಮತ್ತೊಮ್ಮೆ ಪಶ್ಚಿಮ ಬಂಗಾಳ ರಣಕಣವಾಗಿಬಿಟ್ಟಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಂಗಾಳದಲ್ಲೇನಾಗಬಹುದು ಅನ್ನೋದು ಮತ್ತೊಮ್ಮೆ ಕುತೂಹಲ ಕೆರಳಿಸಿದೆ. ಈ ಬಾರಿ ಪ್ರಧಾನಿ ಮೋದಿ ಸಂದೇಶ್​ಕಾಲಿ ಅನ್ನೋ ಹೊಸ ಬ್ರಹ್ಮಾಸ್ತ್ರವನ್ನಿಟ್ಟುಕೊಂಡೇ ದೀದಿ ಕೋಟೆಗೆ ನುಗ್ಗಿದ್ದಾರೆ. ಈ ಅಸ್ತ್ರದ ಮೂಲಕವೇ ಬಂಗಾಳವನ್ನ ಕ್ಲೀನ್ ಸ್ವೀಪ್ ಮಾಡೋ ಮಾತುಗಳನ್ನಾಡಿದ್ದಾರೆ. ಅಷ್ಟಕ್ಕೂ ಏನಿದು ಸಂದೇಶ್​ಕಾಲಿ ಮ್ಯಾಟರ್? ಮತ್ತೊಮ್ಮೆ ಬಿಜೆಪಿಯನ್ನ ಮಮತಾ ಬಗ್ಗು ಬಡೀತಾರಾ? ಪಶ್ಚಿಮ ಬಂಗಾಳದಲ್ಲಿ ಏನಾಗಬಹುದು? ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: 2,500 ಬಗೆ ಊಟ.. ಕುಬೇರರ ಸಮಾಗಮ – ಮಗನಿಗಾಗಿ ದೇವಲೋಕ ಧರೆಗಿಳಿಸಿದ ಅಂಬಾನಿ

ಮೊದಲಿಗೆ ಪಶ್ಚಿಮಬಂಗಾಳದಲ್ಲಿ ಹಂಗಾಮ ಸೃಷ್ಟಿಸಿರೋ ಸಂದೇಶ್​ಕಾಲಿ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ​ನಿಮ್ಮ ಮಾಹಿತಿಗೆ ಇರ್ಲಿ.. ನ್ಯಾಷನಲ್ ಕ್ರೈಮ್ ಬ್ಯೂರೋದ ದಾಖಲೆಗಳ ಪ್ರಕಾರ ಕಳೆದ ಮೂರು ವರ್ಷಗಳಿಂದ ಕೊಲ್ಕತ್ತಾ ನಗರ ದೇಶದಲ್ಲೇ ಮಹಿಳೆಯರಿಗೆ ಅತ್ಯಂತ ಸೇಫೆಸ್ಟ್ ಸಿಟಿಯಾಗಿ ಗುರುತಿಸಿಕೊಂಡಿದೆ. ಆದ್ರೆ ಬಂಗಾಳ ರಾಜಧಾನಿಯಿಂದ ಕೇವಲ 75 ಕಿಲೋ ಮೀಟರ್​ ದೂರದಲ್ಲಿರೋ ನಾರ್ತ್ 24 ಪರಗಣ ಜಿಲ್ಲೆಯಲ್ಲಿರೋ ಸಂದೇಶ್​ಕಾಲಿ ಎಂಬಲ್ಲಿ ಕಳೆದ ಕೆಲ ವರ್ಷಗಳಿಂದ ನಡೀತಿದ್ದ ಭೀಕರ ಘಟನೆಯೊಂದು ಈಗ ಬೆಳಕಿಗೆ ಬಂದಿದ್ದು, ಬಂಗಾಳ ಮಾತ್ರವಲ್ಲಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. 2024ರ ಜನವರಿ 5ರಂದು ಸಂದೇಶ್​ಕಾಲಿಯಲ್ಲಿ ಟಿಎಂಸಿಯ ಪ್ರಮುಖ ನಾಯಕ ಶಹಜಹಾನ್ ಶೇಖ್ ಮನೆ ಮೇಲೆ ಇಡಿ ಅಧಿಕಾರಿಗಳು ರೇಡ್ ಮಾಡ್ತಾರೆ. ಪಡಿತರ ವಿತರಣೆಯಲ್ಲಿ ಕೋಟಿಗಟ್ಟಲೆ ಅಕ್ರಮವಾಗಿರೋದಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಆಪರೇಷನ್ ಕೈಗೊಳ್ಳುತ್ತೆ. ಯಾವಾಗ ಇಡಿ ಅಧಿಕಾರಿಗಳು ಟಿಎಂಸಿ ನಾಯಕನ ಮನೆ ಮೇಲೆ ದಾಳಿಗಿಳಿದ್ರೋ, ಶಹಜಹಾನ್ ಕಡೆಯ ಜನ್ರು ಅಧಿಕಾರಿಗಳ ಮೇಲೆ ಅಟ್ಯಾಕ್ ಮಾಡ್ತಾರೆ, ಹಲ್ಲೆ ನಡೆಸ್ತಾರೆ. ಇಷ್ಟೆಲ್ಲಾ ಹೈಡ್ರಾಮದ ಬಳಿಕ ಟಿಎಂಸಿ ನಾಯಕ ಶಹಜಾಹನ್ ಮನೆಯಿಂದ ಹೊರಗೆ ನಿಲ್ತಾರೆ. ಅತ್ತ ಅಧಿಕಾರಿಗಳು ಮನೆಯೊಳಗ ತಲಾಶ್ ನಡೆಸ್ತಾರೆ. ಈ ಎಲ್ಲಾ ಬೆಳವಣಿಗೆಗಳ ಬಳಿಕ ಫೆಬ್ರವರಿ 7ರಂದು ಸಂದೇಶ್​ಕಾಲಿಯ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿ ಬೀದಿಗಿಳೀತಾರೆ. ನೋಡ ನೋಡ್ತಿದ್ದಂತೆ ಸಂದೇಶ್​ಕಾಲಿಯಲ್ಲಿ ಪ್ರತಿಭಟನೆ ತಾರಕಕ್ಕೇರಿ, ಹಿಂಸಾಚಾರ ನಡೆದು ದೊಡ್ಡ ಗಲಭೆಯಾಗುತ್ತೆ. ಸಂದೇಶ್​ಕಾಲಿ ಅಕ್ಷರಶ: ಹೊತ್ತಿ ಉರಿಯುತ್ತೆ. ಅಲ್ಲಿನ ಮಹಿಳೆಯರು ಮಾಡಿರೋ ಆರೋಪದ ಪ್ರಕಾರ, ಟಿಎಂಸಿ ನಾಯಕ ಶಹಜಹಾನ್ ಶೇಖ್ ಮತ್ತು ಆತನ ಸಹಚರರು ಅಲ್ಲಿನ ಮಹಿಳೆಯರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡ್ತಾನೆ ಇದ್ರಂತೆ. ಗ್ರಾಮದ ಮಹಿಳೆಯರನ್ನ ಪಕ್ಷದ ಕಚೇರಿಗೆ ಕರೆದು, ಧಮ್ಕಿ ಹಾಕಿ ಲೈಂಗಿಕ ದೌರ್ಜನ್ಯ ಎಸಗ್ತಾ ಇದ್ನಂತೆ. ಇದ್ರಿಂದ ರೋಸಿ ಹೋಗಿ ರೊಚ್ಚಿಗೆದ್ದ ಮಹಿಳೆಯರು ಶಹಜಹಾನ್ ಶೇಖ್ ಮತ್ತು ಆತನ ಸಹಚರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹೋರಾಟಕ್ಕಿಳಿಯುತ್ತಾರೆ. ಅಷ್ಟೇ ಅಲ್ಲ, ಕಳೆದ ಹಲವು ವರ್ಷಗಳಿಂದ ದೌರ್ಜನ್ಯ ನಡೀತಾ ಇದ್ರೂ ತಮ್ಮ ಸಂಕಟವನ್ನ ಕೇಳುವವರೇ ಇರಲಿಲ್ಲ. ಬಂಗಾಳ ಸರ್ಕಾರ ಮತ್ತು ಪೊಲೀಸರು ಶಹಜಹಾನ್​​ ಬೆನ್ನಿಗೆ ನಿಂತಿದ್ರು ಅಂತಾ ಗ್ರಾಮದ ಮಹಿಳೆಯರು ಆರೋಪಿಸಿದ್ರು. ಪ್ರತಿಭಟನೆ ಬಳಿಕ ಮಧ್ಯಪ್ರವೇಶಿಸಿದ ಕೋರ್ಟ್, ಪ್ರಕರಣದ ತನಿಖೆಗೆ ಆದೇಶಿಸುತ್ತೆ. ನಂತ್ರ ಟಿಎಂಸಿ ನಾಯಕ ಶಹಜಹಾನ್ ಶೇಖ್​ನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಆದ್ರೆ ಇಂಥಾ ಕ್ರೈಂಗಳಿಗೆ ಕೇವಲ ಸಂದೇಶಕಾಲಿ ಮಾತ್ರ ಸೀಮಿತವಾಗಿಲ್ಲ. ಅಸಲಿಗೆ ಇಡೀ 24 ಪರಗಣ ಜಿಲ್ಲೆ ಕ್ರಿಮಿನಲ್ ಕೃತ್ಯಗಳಿಗೆ ಎಪಿಕ್​ಸೆಂಟರ್​​ ಆಗಿದೆ. ಇಲಿಯಿಂದ ಹಿಡಿದು ಮಾನವನವರೆಗೂ ಕಳ್ಳಸಾಗಾಣೆ ಇಲ್ಲಿಯ ದೊಡ್ಡ ದಂಧೆ. ಸಾಲದ್ದಕ್ಕೆ ಡ್ರಗ್ಸ್ ಸ್ಮಗ್ಲಿಂಗ್, ಭೂಮಿ ಒತ್ತುವರಿ ಹೀಗೆ ಎಲ್ಲಾ ರೀತಿಯ ಕ್ರೈಮ್​ಗಳು ಇಲ್ಲಿ ನಡೆಯುತ್ತೆ. 24 ಪರಗಣ ಜಿಲ್ಲೆಯಲ್ಲಿ ಇಂಥಾ ಏನೇ ಕೃತ್ಯಗಳು ನಡೆದ್ರೂ ಬಾಂಗ್ಲಾದೇಶದ ಹೆಸರು ಥಳುಕು ಹಾಕಿಕೊಂಡು ಬಿಡುತ್ತೆ. ಅದಕ್ಕೆ ಕಾರಣ ಕೂಡ ಇದೆ. 24 ಪರಗಣ ಜಿಲ್ಲೆಯಲ್ಲಿ ಬಾಂಗ್ಲಾದೇಶದಿಂದ ಬಂದವರು ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಸ್ಥಳೀಯ ಮೂಲ ನಿವಾಸಿಗಳ ಭೂಮಿಯನ್ನ ಕಿತ್ತುಕೊಂಡು ಬಾಂಗ್ಲಾದಿಂದ ಬಂದವರಿಗೆ ನೀಡಲಾಗ್ತಿದೆ. ಹಾಗೆಯೇ ಸ್ಥಳೀಯರನ್ನ ಜಿಲ್ಲೆಯಿಂದಲೇ ಹೊರಗಟ್ಟಲಾಗ್ತಿದೆ ಅನ್ನೋ ಆರೋಪ ಕೂಡ ಇದೆ. ಉತ್ತರ 24 ಪರಗಣ ಮತ್ತು ದಕ್ಷಿಣ 24 ಪರಗಣ ಎರಡೂ ಜಿಲ್ಲೆಗಳಲ್ಲೂ ಇಂಥಾ ಬೆಳವಣಿಗೆಗಳಾಗ್ತಾ ಇದೆ. 1981 ರಿಂದ 2011ರವರೆಗಿನ ಜನಗಣತಿ ರಿಪೋರ್ಟ್ ನೋಡೋದಾದ್ರೆ ಪಶ್ಚಿಮ ಬಂಗಾಳದ ಪೂರ್ವ ವಲಯ ಮತ್ತು ಅದ್ರಲ್ಲೂ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಜನನ ಮತ್ತು ಸಾವಿನ ಪ್ರಮಾಣ ಆಲ್​ಮೋಸ್ಟ್ ಒಂದೇ ರೀತಿ ಇದ್ರೂ ವೋಟರ್ಸ್​​ಗಳ ಸಂಖ್ಯೆ ಮಾತ್ರ ಭಾರಿ ವೇಗವಾಗಿ ಹೆಚ್ಚಾಗ್ತಾನೆ ಇದೆ. 2011ರಿಂದ 2021ರ ಅವಧಿಯಲ್ಲಿ ದೆಗಂಗಾ ಎಂಬಲ್ಲಿ ಒಂದು ಲಕ್ಷ ಮತದಾರರ ಸಂಖ್ಯೆ ಹೆಚ್ಚಾಗಿದೆ. ಬಸೀರ್​ಹಾಟ್ ಲೋಕಸಭಾ ಕ್ಷೇತ್ರದಲ್ಲಿ ವೋಟರ್ಸ್​ಗಳ ಸಂಖ್ಯೆ 5 ಲಕ್ಷದಷ್ಟು ಹೆಚ್ಚಾಗಿದೆ. ಬಂಗಾಳದ ವಿವಿಧ ಕ್ಷೇತ್ರಗಳಲ್ಲಿ ಇದೇ ರೀತಿ ಮತದಾರರ ಸಂಖ್ಯೆ ಹೆಚ್ಚಾಗ್ತಾನೆ ಇದೆ. ಇವಱರೂ ಬಂಗಾಳದ ಮೂಲ ನಿವಾಸಿಗಳಲ್ಲಿ. ಹೋಗ್ಲಿ ಭಾರತೀಯರೂ ಅಲ್ಲ. ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದವರೇ ಇಲ್ಲಿ ಬೀಡುಬಿಟ್ಟು, ಮತದಾನದ ಹಕ್ಕನ್ನೂ ಪಡೆದುಕೊಂಡಿದ್ದಾರೆ ಅನ್ನೋ ಆರೋಪಗಳು ಕೇಳಿ ಬರ್ತಾ ಇದೆ. ಬಾಂಗ್ಲಾದಿಂದ ಬಂದವರಿಗೆ ಆಶ್ರಯ ನೀಡೋಕೆ ಹಿಂದೂಗಳ ಭೂಮಿಯನ್ನ ಕಿತ್ತುಕೊಳ್ಳಲಾಗಿದೆ ಅನ್ನೋದು ವಿವಾದದ ಕಿಚ್ಚು ಹೊತ್ತಿಸಿದೆ.

ಇನ್ನು ಬಿಜೆಪಿಯಂತೂ ಅರೆಸ್ಟ್ ಆಗಿರೋ ಟಿಎಂಸಿ ನಾಯಕ ಶಹಜಹಾನ್ ಶೇಖ್ ಒಬ್ಬ ಪ್ರತ್ಯೇಕತಾವಾದಿ ಅಂತಾ ಆರೋಪಿಸಿದೆ. ಬಾಂಗ್ಲಾದೇಶದಿಂದ ಜನರನ್ನ ಕರೆತಂದು ಸ್ಥಳೀಯರ ಮೇಲೆ ದಬ್ಬಾಳಿಕೆ ನಡೆಸಲಾಗ್ತಿದೆ. ಹಾಗೆಯೇ  ಕೃಷಿ ಭೂಮಿಯನ್ನ ಸಂದೇಶ್ ಕಾಲಿ ಒತ್ತುವರಿ ಮಾಡಿಸಿದ್ದಾರಂತೆ. ಕಾಲುವೆ ನೀರನ್ನ ಕೂಡ ತಡೆದು ಕೃಷಿಗೆ ಅಡ್ಡಿಪಡಿಸಿದ್ದಾರೆ. ಇದ್ರ ಪರಿಣಾಮ ಅಲ್ಲಿನ ಗಂಡಸರು ಕೆಲಸ ಹುಡುಕಿಕೊಂಡು ಬೇರೆಡೆಗೆ ವಲಸೆ ಹೋಗ್ತಾ ಇದ್ರು. ಇದ್ರಿಂದ ಇಡೀ ಗ್ರಾಮದಲ್ಲಿ ಮಹಿಳೆಯರಷ್ಟೇ ಮನೆಯಲ್ಲಿದ್ರು. ಈ ಸಂದರ್ಭದಲ್ಲಿ ಟಿಎಂಸಿ ನಾಯಕ ಶಹಜಹಾನ್ ಶೇಖ್ ತನ್ನ ಸಹಜರರ ಜೊತೆಗೂಡಿ ಮಹಿಳೆಯರಿಗೆ ಬೆದರಿಕೆ ಹಾಕಿ ದೌರ್ಜನ್ಯವೆಸಗ್ತಾ ಇದ್ದ ಅನ್ನೋದು ಸ್ಥಳೀಯ ಮಹಿಳೆಯರ ಆರೋಪ. ಈ ಮೂಲಕ ಇಡೀ ಸಂದೇಶ್​ಕಾಲಿಯನ್ನ ಹಿಂದೂಗಳಿಂದ ಮುಕ್ತ ಮಾಡೋದು ಶಹಜಹಾನ್ ಶೇಖ್​ನ ಉದ್ದೇಶ ಅನ್ನೋ ಆರೋಪ ಕೇಳಿ ಬಂದಿದೆ.

ದಕ್ಷಿಣ ಮತ್ತು ಪೂರ್ವ 24 ಪರಗಣ ಜಿಲ್ಲೆಗಳಲ್ಲಿ ಆಗಾಗ ಕೋಮು ಘರ್ಷಣೆ ನಡೀತಾನೆ ಇರುತ್ತೆ. ಚುನಾವಣೆ ಹತ್ತಿರ ಬಂದ್ರಂತೂ ಕೇಳೋದೇ ಬೇಡ. ಇನ್ನು ಕೊಲ್ಕತ್ತಾ ನಗರ ಮಹಿಳೆಯರಿಗೆ ಸೇಫ್ ಆದ್ರೂ, ಇಡೀ ಪಶ್ಚಿಮ ಬಂಗಾಳವಂತೂ ಮಹಿಳೆಯರ ಪಾಲಿಗೆ ಕಂಪ್ಲೀಟ್ ಸೇಫ್ ಆಗಿಲ್ಲ. ಬದಲಾಗಿ ಮಹಿಳೆಯರ ಮೇಲಿನ ಅಪರಾದಧ ಪ್ರಮಾಣ ತೀವ್ರಗೊಂಡಿದೆ. ನ್ಯಾಷನಲ್ ಕ್ರೈಮ್ ಬ್ಯೂರೋದ ವರದಿ ಪ್ರಕಾರ 2022ರಲ್ಲಿ ಪಶ್ಚಿಮಬಂಗಾಳದಲ್ಲಿ 40,725 ಮಹಿಳೆಯರು, 10,571 ಯುವತಿಯರು ನಾಪತ್ತೆಯಾಗಿದ್ದಾರಂತೆ. ಅಕ್ರಮವಲಸಿಗರಂತೂ 24 ಪರಗಣ ಜಿಲ್ಲೆಗಳ ಮೂಲಕವೇ ಭಾರತಕ್ಕೆ ಎಂಟ್ರಿಯಾಗ್ತಾ ಇದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಈಗ ಲೋಕಸಭೆ ಚುನಾವಣೆ ಬೇರೆ ಹತ್ತಿರವಾಗಿರೋದ್ರಿಂದ 24 ಪರಗಣ ಜಿಲ್ಲೆ ಭಾರಿ ಸುದ್ದಿಯಲ್ಲಿದೆ. ಅದ್ರಲ್ಲೂ ಸಂದೇಶ್​ಕಾಲಿಯಲ್ಲಿ ಟಿಎಂಸಿ ನಾಯಕನೇ ಮಹಿಳೆಯರ ಮೇಲೆ ಹಲವು ವರ್ಷಗಳಿಂದ ದೌರ್ಜನ್ಯವೆಸಗ್ತಾ ಇದ್ದಾನೆ ಅನ್ನೋ ವಿಚಾರ ಬಂಗಾಳ ರಾಜಕೀಯದಲ್ಲಿ ಸುಂಟರಗಾಳಿಯೆಬ್ಬಿಸಿದೆ. ಸಂದೇಶ್​ಕಾಲಿ ಪ್ರಕರಣವನ್ನೇ ಪ್ರಸ್ತಾಪಿಸಿ ಪ್ರಧಾನಿ ಮೋದಿಯಿಂದ ಹಿಡಿದು ಕೇಸರಿ ಕಲಿಗಳು ಮಮತಾ ಸರ್ಕಾರದ ಮೇಲೆ ಸವಾರಿ ಮಾಡೋಕೆ ಮುಂದಾಗಿದ್ದಾರೆ.

ಇಲ್ಲಿ ಇನ್ನೊಂದು ಸಂಗತಿ ಕೂಡ ಇದೆ. 2021ರಲ್ಲಿ ನಡೆದ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಗೆಲುವಿನಲ್ಲಿ ಮಹಿಳೆಯರು ಪ್ರಧಾನ ಪಾತ್ರವಹಿಸಿದ್ರು. ರಾಜ್ಯದ ಮಹಿಳೆಯರ ಮತ ಹೆಚ್ಚಿನ ಸಂಖ್ಯೆಯಲ್ಲಿ ಟಿಎಂಸಿಗೆ ಬಿದ್ದಿತ್ತು. ಟಿಎಂಸಿ 213 ಸ್ಥಾನಗಳನ್ನ ಗೆದ್ರೆ, ಬಿಜೆಪಿ 77 ಕ್ಷೇತ್ರಗಳಲ್ಲಷ್ಟೇ ಗೆದ್ದಿತ್ತು. ದೀದಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೇರಿದ್ರು. ಬಿಜೆಪಿ ಆಟ ಬಂಗಾಳದಲ್ಲಿ ನಡೆಯೋದಿಲ್ಲ. ಮೋದಿಯನ್ನ ದೀದಿಗಷ್ಟೇ ಎದುರಿಸೋಕೆ ಸಾಧ್ಯ ಅನ್ನೋ ಮಟ್ಟಕ್ಕೆ ಟಿಎಂಸಿ ಸೆಡ್ಡು ಹೊಡೆದಿತ್ತು. ಹೀಗಾಗಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರ ವಿಚಾರವನ್ನಿಟ್ಟುಕೊಂಡೇ ದೀದಿ ಕೋಟೆ ಭೇದಿಸೋಕೆ ಮೋದಿ ಮುಂದಾಗಿದ್ದಾರೆ. ಹೀಗಾಗಿಯೇ ಸಂದೇಶ್ಕಾಲಿ ಪ್ರಕರಣ ಈ ರೇಂಜಿಗೆ ಸದ್ದು ಮಾಡ್ತಿದೆ. ಪಶ್ಚಿಮ ಬಂಗಾಳದಲ್ಲಿ ಒಟ್ಟು 42 ಲೋಕಸಭಾ ಕ್ಷೇತ್ರಗಳಿದ್ದು, 2019ರಲ್ಲಿ ಟಿಎಂಸಿ 22 ಸ್ಥಾನಗಳನ್ನ ಪಡೆದಿತ್ತು. ಬಿಜೆಪಿ 18 ಕ್ಷೇತ್ರಗಳಲ್ಲಿ ಗೆದ್ದಿತ್ತು. ಈ ಬಾರಿ ನಮ್ಮನ್ನ ಬಹುಮತದೊಂದಿಗೆ ಗೆಲ್ಲಿಸಿ ಅಂತಾ ಮೋದಿ ಮನವಿ ಮಾಡ್ತಾ ಇದ್ದಾರೆ. ಮಮತಾ ಆಡಳಿತದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲ ಅಂತಾ ಆರೋಪಿಸಿ ಮಹಿಳೆಯರ ಮತ ಸೆಳೆಯೋಕೆ ಮೋದಿ ಪ್ರಯತ್ನಿಸ್ತಾ ಇದ್ದಾರೆ. ಆದ್ರೆ ದೀದಿ ಕೋಟೆ ಭೇದಿಸೋದು ಬಿಜೆಪಿಗೆ ಅಂದುಕೊಂಡಷ್ಟು ಸುಲಭ ಇಲ್ಲ. ಇತ್ತೀಚಿನ ಇಂಡಿಯಾ ಟುಡೇ ಮಾಧ್ಯಮದ ಸಮೀಕ್ಷೆ ಪ್ರಕಾರ ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಳೆದ ಬಾರಿಯಷ್ಟೇ ಅಂದ್ರೆ 22 ಕ್ಷೇತ್ರಗಳನ್ನ ಗೆಲ್ಲಬಹುದಂತೆ. ಬಿಜೆಪಿ ಕಳೆದ ಬಾರಿಗಿಂತ ಒಂದು ಕ್ಷೇತ್ರ ಹೆಚ್ಚು. ಅಂದ್ರೆ 19 ಸ್ಥಾನಗಳನ್ನ ಪಡೆಯಬಹುದು ಅಂತಾ ಸಮೀಕ್ಷಾ ವರದಿ ಬಂದಿದೆ. ಆದ್ರೀಗ ಲಾಸ್ಟ್​ ಮೂಮೆಂಟ್​ನಲ್ಲಿ ಬಿಜೆಪಿ ಸಂದೇಶ್​ಕಾಲಿ ಅಸ್ತ್ರ ಪ್ರಯೋಗಿಸೋ ಮೂಲಕ ಮಮತಾ ಬ್ಯಾನರ್ಜಿಗೆ ಮಹಿಳಾ ಮತಗಳಿಂದಲೇ ಹೊಡೆತ ನೀಡೋಕೆ ಪ್ರಯತ್ನಿಸ್ತಾ ಇದೆ. ಒಂದು ವೇಳೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮೋದಿ ದೀದಿಗಿಂತಲೂ ಹೆಚ್ಚು ಕ್ಷೇತ್ರಗಳನ್ನ ಗೆದ್ರೆ ಅದಕ್ಕೆ ಸಂದೇಶ್​ಕಾಲಿ, 24 ಪರಗಣ ಜಿಲ್ಲೆಗಳ ಪ್ರಕರಣಗಳು ಕೂಡ ಕಾರಣ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ.

Shwetha M