ಚೀನಾಗೆ ಸೆಡ್ಡು ಹೊಡೆಯೋಕೆ ಮುಂದಾಯ್ತು ಭಾರತ! – ಮೋದಿ ಸರ್ಕಾರದ ಮಾಸ್ಟರ್ ಪ್ಲ್ಯಾನ್ ಏನು?

ಚೀನಾಗೆ ಸೆಡ್ಡು ಹೊಡೆಯೋಕೆ ಮುಂದಾಯ್ತು ಭಾರತ! – ಮೋದಿ ಸರ್ಕಾರದ ಮಾಸ್ಟರ್ ಪ್ಲ್ಯಾನ್ ಏನು?

ಲಕ್ಷಾದ್ವೀಪ..ಕೆಲ ತಿಂಗಳುಗಳ ಹಿಂದೆ ಅದೆಷ್ಟೋ ಮಂದಿ ಭಾರತೀಯರಿಗೆ ಇಂಥದ್ದೊಂದು ದ್ವೀಪ ಇದೆ ಅನ್ನೋದೆ ಗೊತ್ತಿರಲಿಲ್ಲ. ಲಕ್ಷಾದ್ವೀಪ ಎಲ್ಲಿ ಬರುತ್ತೆ? ಹೇಗಿರುತ್ತೆ? ಲಕ್ಷಾದ್ವೀಪದ ಮಹತ್ವ ಏನು? ಈ ಬಗ್ಗೆ ಅಷ್ಟಾಗಿ ಯಾರಿಗೂ ಮಾಹಿತಿ ಇರಲಿಲ್ಲ. ಆದ್ರೆ ಯಾವಾಗ ಪ್ರಧಾನಿ ಮೋದಿ ಲಕ್ಷಾದ್ವೀಪಕ್ಕೆ ಭೇಟಿ ನೀಡಿ ಫೋಟೋಗೆ ಪೋಸ್​ ಕೊಟ್ರೋ ಈ ಪುಟ್ಟ ದ್ವೀಪ ಜಗಜ್ಜಾಹೀರಾಗಿದೆ. ಭಾರತದ ವಿರುದ್ಧ ತಿರುಗಿ ಬಿದ್ದಿರೋ ಮಾಲ್ಡೀವ್ಸ್​​ನ್ನ ಬಾಯ್ಕಾಟ್ ಮಾಡಿ ಎಲ್ಲರೂ ಲಕ್ಷಾದ್ವೀಪಕ್ಕೆ ಟ್ರಿಪ್ ಹೋಗ್ತಾ ಇದ್ದಾರೆ. ಲಕ್ಷಾದ್ವೀಪ ಅನ್ನೋದು ಈಗ ಭಾರತದ ಮೇನ್ ಡೂರಿಸ್ಟ್ ಡೆಸ್ಟಿನೇಷನ್ ಆಗಿದೆ. ಲಕ್ಷಾದ್ವೀಪದಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನ ಕೈಗೊಳ್ಳೋಕೆ ಸರ್ಕಾರ ಈಗಾಗ್ಲೇ ಪ್ಲ್ಯಾನ್ ಮಾಡಿದೆ. ಐಷಾರಾಮಿ ಹೋಟೆಲ್, ವಿಲ್ಲಾಗಳ ನಿರ್ಮಾಣ ಕಾರ್ಯ ಕೂಡ ಶುರುವಾಗಿದೆ. ಆದ್ರೆ ಲಕ್ಷಾದ್ವೀಪ ಅನ್ನೋದು ಕೇವಲ ಒಂದು ಟೂರಿಸ್ಟ್ ಪ್ಲೇಸ್​​ಗೆ ಮಾತ್ರ ಸೀಮಿತವಾಗ್ತಾ ಇಲ್ಲ. ಭಾರತೀಯ ಸೇನೆ ಕೂಡ ಇಲ್ಲೇ ಬೀಡು ಬಿಡ್ತಿದೆ. ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿ ಲಕ್ಷಾದ್ವೀಪದಲ್ಲಿ ಅತ್ಯಂತ ಮಹತ್ವದ ಬೆಳವಣಿಗೆಯಾಗ್ತಾ ಇದೆ. ಲಕ್ಷಾದ್ವೀಪದ ಮೂಲಕವೇ ಚೀನಾಗೆ ಸೆಡ್ಡು ಹೊಡೆಯೋಕೆ ಭಾರತ ಮುಂದಾಗಿದೆ. ಹಾಗಿದ್ರೆ ಸೇನೆಗೆ ಸಂಬಂಧಿಸಿ ಲಕ್ಷಾದ್ವೀಪದಲ್ಲೇನಾಗಲಿದೆ? ಮೋದಿ ಸರ್ಕಾರದ ಮಾಸ್ಟರ್ ಪ್ಲ್ಯಾನ್ ಏನು? ಇವೆಲ್ಲದರ ಬಗ್ಗೆಯೂ ಇಂಟ್ರೆಸ್ಟಿಂಗ್​ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್ ಮಂಜುನಾಥ್ ರಾಜಕೀಯಕ್ಕೆ ಬರುತ್ತಾರಾ? – ಮೈತ್ರಿ ಲೆಕ್ಕಾಚಾರಗಳೇನು?

ಹಿಂದೂ ಮಹಾಸಾಗಾರದ ಮೇಲೆ ಹಿಡಿತ ಸಾಧಿಸೋಕೆ ಚೀನಾ ಇನ್ನಿಲ್ಲದ ಸರ್ಕಸ್ ಮಾಡ್ತಾ ಇದೆ. ಇದೇ ಕಾರಣಕ್ಕೆ ಮಾಲ್ಡೀವ್ಸ್​ನ್ನ ಬುಟ್ಟಿಗೆ ಹಾಕಿಕೊಂಡು ಭಾರತದ ವಿರುದ್ಧ ಎತ್ತಿ ಕಟ್ಟುತ್ತಿದೆ. ಈಗಾಗ್ಲೇ ಚೀನಾದ ಗೂಢಾಚಾರಿಕೆ ಹಡಗು ಮಾಲ್ಡೀವ್ಸ್​​ ಠಿಕಾಣಿ ಹೂಡಿದೆ. ಭೂಮಾರ್ಗವಾಗಿ, ಸಮುದ್ರದ ಮೂಲಕ ಹೀಗೆ ಭಾರತದ ಸುತ್ತಲೂ ಚಕ್ರವ್ಯೂಹ ನಿರ್ಮಿಸೋಕೆ ಚೀನಾ ಮುಂದಾಗಿದೆ.  ಅದ್ರಲ್ಲೂ ಹಿಂದೂ ಮಹಾಸಾಗರದ ಮೇಲೆ ಪ್ರಭುತ್ವ ಸಾಧಿಸಬೇಕು ಅನ್ನೋದಾದ್ರೆ ಮಾಲ್ಡೀವ್ಸ್ ಅತ್ಯಂತ ಅನಿವಾರ್ಯ. ಇದುವರೆಗೆ ಮಾಲ್ಡೀವ್ಸ್​ನಲ್ಲಿ ಭಾರತೀಯ ಸೇನೆಯಿತ್ತು. ಆದ್ರೆ ಚೀನಾದ ಕೈಗೊಂಬೆಯಾಗಿರೋ ಮಾಲ್ಡೀವ್ಸ್ ಸರ್ಕಾರ ಈಗ ಭಾರತೀಯ ಸೇನೆಗೆ ಜಾಗ ಖಾಲಿ ಮಾಡುವಂತೆ ಸೂಚಿಸಿದೆ. ಹೀಗಾಗಿ ಭಾರತ ಕೂಡ ತನ್ನ ಸೈನಿಕರನ್ನ ವಾಪಸ್ ಕರೆಸಿಕೊಳ್ಳೋಕೆ ನಿರ್ಧರಿಸಿದೆ. ಇದ್ರಿಂದ ಮಾಲ್ಡೀವ್ಸ್​​ ಮೇಲೆ ನಮ್ಮ ಸೇನೆಗೆ ಇದ್ದ ಹಿಡಿತ ಕೂಡ ತಪ್ಪಿ ಹೋಗಿರೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಭಾರತದ ಭದ್ರತೆಯ ದೃಷ್ಟಿಯಿಂದ ಮಾಲ್ಡೀವ್ಸ್​ನಂಥಾ ಸ್ಟ್ರ್ಯಾಟಜಿಕಲ್ ಲೊಕೇಷನ್​ನಲ್ಲಿ ಸೇನೆಯನ್ನ ನಿಯೋಜಿಸೋದು​​​ ಅತ್ಯಂತ ಅನಿವಾರ್ಯವಾಗಿತ್ತು. ಆದ್ರೀಗ ಮಾಲ್ಡೀವ್ಸ್​ಗೆ ಪರ್ಯಾಯವಾಗಿ ಟೂರಿಸಂನಲ್ಲಷ್ಟೇ ಅಲ್ಲ ಸೈನಿಕರನ್ನ ನಿಯೋಜನೆ ಮಾಡೋ ವಿಚಾರದಲ್ಲೂ ಭಾರತ ಪರ್ಯಾಯ ಪ್ರದೇಶವನ್ನ ಕಂಡುಕೊಂಡಿದೆ. ಆ ಜಾಗ ಮತ್ಯಾವುದೂ ಅಲ್ಲ ಲಕ್ಷಾದ್ವೀಪ.

ಲಕ್ಷಾದ್ವೀಪದಲ್ಲಿ ಭಾರತೀಯ ಸೇನಾ ನೆಲೆಯನ್ನ ಸ್ಥಾಪಿಸೋಕೆ ಮೋದಿ ಸರ್ಕಾರ ಪ್ಲ್ಯಾನ್ ಮಾಡಿದೆ. ನೌಕಾಪಡೆ ಮತ್ತು ವಾಯುಪಡೆಯ ಸೇನಾ ನೆಲೆಗಳನ್ನ ಲಕ್ಷಾದ್ವೀಪದಲ್ಲಿ ಸ್ಥಾಪಿಸೋ ಸಾಧ್ಯತೆ ಇದೆ. ಅಗಟ್ಟಿ ಮತ್ತು ಮಿನಿಕಾಯ್​ ದ್ವೀಪಗಳಲ್ಲಿ ಸೇನೆಯನ್ನ ನಿಯೋಜಿಸೋಕೆ ತಯಾರಿ ನಡೀತಿದೆ. ಸಮುದ್ರದ ಮೂಲಕ ನಡೆಯೋ ಮಧ್ಯಪ್ರಾಚ್ಯ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳ ನಡುವಿನ ವಹಿವಾಟಿಗೆ ಲಕ್ಷಾದ್ವೀಪ ತುಂಬಾ ಇಂಪಾರ್ಟೆಂಟ್​. ಹಡಗುಗಳು ಲಕ್ಷಾದ್ವೀಪದ ಮೂಲಕವೇ ಹಾದು ಹೋಗುತ್ತೆ. ಹೀಗಾಗಿ ಲಕ್ಷಾದ್ವೀಪದಲ್ಲಿ ನಮ್ಮ ಸೇನೆಯನ್ನ ನಿಯೋಜಿಸಿದ್ರೆ ಈ ಭಾಗದ ಮೇಲೆ ಭಾರತ ಹೆಚ್ಚಿನ ಹಿಡಿತ ಸಾಧಿಸಿದಂತಾಗುತ್ತೆ. ಈ ಮಾರ್ಗ ಚೀನಾದ ವಹಿವಾಟಿಗೂ ಮುಖ್ಯವಾಗಿರೋದ್ರಿಂದ ಲಕ್ಷಾದ್ವೀಪದಲ್ಲಿ ಭಾರತೀಯ ಸೇನಾ ನೆಲೆ ಇದ್ರೆ ಚೀನಾದ ಹಾರಾಟಕ್ಕೂ ಸ್ವಲ್ಪ ಬ್ರೇಕ್ ಹಾಕಬಹುದೋ ಏನೋ. ಹಾಗೆಯೇ ಭಾರತೀಯ ಸೇನಾ ನೆಲೆ ಸ್ಥಾಪನೆಯಾಗೋ ಮಿನಿಕಾಯ್​ ದ್ವೀಪದಿಂದ ಮಾಲ್ಡೀವ್ಸ್​ಗೆ ಕೇವಲ 524 ಕಿಲೋ ಮೀಟರ್​​ ದೂರವಷ್ಟೇ ಇದೆ. ಭಾರತೀಯ ಸೈನಿಕರಿಗೆ ತನ್ನ ನೆಲದಿಂದ ಜಾಗ ಖಾಲಿ ಮಾಡುವಂತೆ ಸೂಚಿಸಿದ್ದ ಮಾಲ್ಡೀವ್ಸ್​​ ಅಧ್ಯಕ್ಷ ಮೊಹಮ್ಮದ್ ಮುಯಿಜುಗೆ ತಿರುಗೇಟು ಕೊಡಬೇಕು ಅನ್ನೋ ಕಾರಣಕ್ಕಾಗಿಯೇ ಮಾಲ್ಡೀವ್ಸ್​​ನಿಂದ ಜಸ್ಟ್ 524 ಕಿಲೋ ಮೀಟರ್​ ಅಂತರದಲ್ಲೇ ಭಾರತ ತನ್ನ ಸೇನಾ ನೆಲೆಯನ್ನ ಸ್ಥಾಪಿಸ್ತಿದೆ. ಇದುವರೆಗೆ ಕೇವಲ 75 ಸೈನಿಕರಷ್ಟೇ ಮಾಲ್ಡೀವ್ಸ್​​ನಲ್ಲಿದ್ರು. ಆದ್ರೆ ಇನ್ಮುಂದೆ ಲಕ್ಷಾದ್ವೀಪದಲ್ಲಿ ದೊಡ್ಡ ಮಟ್ಟದ ಭಾರತೀಯ ಸೇನೆಯೇ ಶಾಶ್ವತವಾಗಿ ನಿಯೋಜನೆಯಾಗಲಿದೆ. ಅದು ಕೂಡ ನೌಕಾಪಡೆ ಮತ್ತು ವಾಯುಪಡೆಯ ಸೈನಿಕರು ಮಾಲ್ಡೀವ್ಸ್​ ಪಕ್ಕದಲ್ಲೇ ಬೀಡು ಬಿಡ್ತಾ ಇದ್ದಾರೆ.

ಮಾರ್ಚ್ 4-5ರಂದು ಮಿನಿಕಾಯ್​​ನಲ್ಲಿ ಐಎನ್​ಎಸ್ ಜಟಾಯು ಹೆಸರಲ್ಲಿ ಭಾರತೀಯ ನೌಕಾನೆಲೆಯನ್ನ ಉದ್ಘಾಟನೆ ಮಾಡಲಾಗುತ್ತೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್​ ಮಿನಿಕಾಯ್​​ಗೆ ಭೇಟಿ ನೀಡ್ತಾ ಇದ್ದಾರೆ. ಇದೇ ಸಂದರ್ಭದಲ್ಲಿ ಭಾರತೀಯ ನೌಕಾಪಡೆ ಕಮಾಂಡರ್​​ಗಳ ಕಾನ್ಫರೆನ್ಸ್​ ಕೂಡ ನಡೆಯುತ್ತೆ. ನೌಕಾಪಡೆಯ ಹಡಗಿನಲ್ಲೇ ಈ ಕಾನ್ಫರೆನ್ಸ್ ನಡೆಯಲಿದ್ದು, ಗೋವಾದಿಂದ ಹೊರಟು ಕರ್ನಾಟಕದ ಕಾರವಾರವನ್ನ ಹಾದು ಹೋಗಿ ಬಳಿಕ ಮಿನಿಕಾಯ್ ದ್ವೀಪವನ್ನ ತಲುಪುತ್ತೆ. ನಂತರ ಮರಳಿ ಕೇರಳದ ಕೊಚ್ಚಿನಗೆ ಬರುತ್ತೆ. ಪ್ರಯಾಣದ ವೇಳೆ ಹಡಗಿನಲ್ಲಿ ಕಮಾಂಡರ್ಸ್​ಗಳ ಕಾನ್ಫರೆನ್ಸ್ ಕೂಡ ನಡೆಯುತ್ತೆ.

ಇನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಿನಿಕಾಯ್​ಗೆ ಯುದ್ಧ ಹಡಗಿನ ಮೂಲಕವೇ ಭೇಟಿ ಕೊಡ್ತಾರೆ. ಐಎನ್​ಎಸ್ ವಿಕ್ರಮಾದಿತ್ಯ ಮತ್ತು ಐಎನ್​ಎಸ್ ವಿಕ್ರಾಂತ್ ಎರಡೂ ಯುದ್ಧ ಹಡಗುಗಳು ಮಿನಿಕಾಯ್​​ಗೆ ತೆರಳುತ್ತೆ. ಅಷ್ಟೇ ಅಲ್ಲ, ಇದ್ರ ಜೊತೆಗೆ ಭಾರತದ ಒಟ್ಟು 15 ಯುದ್ಧ ಹಡಗುಗಳು ಕೂಡ ಮಿನಿಕಾಯ್​ಗೆ ಹೋಗ್ತಾ ಇವೆ. ಭಾರತೀಯ ನೌಕಾಪಡೆ ದೊಡ್ಡ ಶಕ್ತಿಪ್ರದರ್ಶನವನ್ನೇ ನಡೆಸ್ತಿದೆ. ಈ ಮೂಲಕ ಚೀನಾ, ಮಾಲ್ಡೀವ್ಸ್​ಗೆ ನೇರವಾಗಿ ಮೆಸೇಜ್ ಪಾಸ್ ಮಾಡಲಾಗ್ತಿದೆ. ಹಾಗೆಯೇ ಮಿನಿಕಾಯ್​​ನಲ್ಲಿ ಹೊಸ ಏರ್​ಸ್ಟ್ರಿಪ್​​ನ್ನ ಕೂಡ ನಿರ್ಮಾಣ ಮಾಡಲಾಗುತ್ತಿದೆ. ಅತ್ತ ಇನ್ನೊಂದು ಸೇನಾನೆಲೆ ಸ್ಥಾಪನೆಯಾಗೋ ಲಕ್ಷಾದ್ವೀಪದ ಅಗಾಟ್ಟಿಯಲ್ಲೂ ಏರ್​​ಸ್ಟ್ರಿಪ್​​ ನಿರ್ಮಿಸಲಾಗ್ತಾ ಇದೆ.

ಇಲ್ಲಿ ಭಾರತೀಯ ಸೇನೆಯ ಮೇನ್ ಸ್ಟ್ರ್ಯಾಟಜಿಕ್ ಲೊಕೇಷನ್​ ಆಗಿ ಕನ್ವರ್ಟ್ ಆಗ್ತಾ ಇರೋ ಮಿನಿಕಾಯ್ ದ್ವೀಪದ ಬಗ್ಗೆ ಇನ್ನೊಂದಷ್ಟು ವಿಚಾರಗಳನ್ನ ಹೇಳಲೇಬೇಕು. ಮಿನಿಕಾಯ್ ಅನ್ನೋ ದ್ವೀಪ 9 ಡಿಗ್ರಿ ಕಾಲುವೆಯ ಮಧ್ಯೆ ಇದೆ. ಈ ಕಾಲುವೆ 200 ಕಿಲೋ ಮೀಟರ್ ಅಗಲ ಇದೆ. 2,600 ಮೀಟರ್ ಆಳ ಇದೆ. ಅಗಲೇ ಹೇಳಿದ ಹಾಗೆ ಈ ಕಾಲುವೆ ಅತ್ಯಂತ ಬ್ಯುಸಿ ಟ್ರೇಡ್ ರೂಟ್. ಮಧ್ಯಪ್ರಾಚ್ಯ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳ ಮಧ್ಯೆ ಗೂಡ್ಸ್​​ ಹಡಗುಗಳು ಸಂಚಾರ ಮಾಡೋದು ಮಿನಿಕಾಯ್ ಸಮೀಪದ ಇದೇ 200 ಕಿಲೋ ಮೀಟರ್​ ಅಗಲದ ಕಾಲುವೆಯ ಮೂಲಕ. ಚೀನಾದ ಹಡಗುಗಳೂ ಇಲ್ಲೇ ಹೂಗುತ್ತೆ. ಹೀಗಾಗಿ ಈ ಕಾಲುವೆಯ ಬುಡದಲ್ಲೇ ಇರೋ ಭಾರತಕ್ಕೆ ಸೇರಿದ ಮಿನಿಕಾಯ್ ದ್ವೀಪದಲ್ಲಿ ಸೇನಾನೆಲೆ ಮಾಡಿದ್ರೆ ಹೇಗಿರುತ್ತೆ ಅನ್ನೋದನ್ನ ಸ್ವಲ್ಪ ಊಹಿಸ್ಕೊಳ್ಳಿ. ಪ್ರಮುಖ ವ್ಯಾಪಾರ ಮಾರ್ಗವೇ ಭಾರತದ ಹಿಡಿತಕ್ಕೆ ಸಿಕ್ಕಂತಾಗುತ್ತೆ. ಅಲ್ಲಿಗೆ ಚೀನಾಗೆ ಭಾರತ ಬತ್ತಿ ಇಟ್ಟಂತಾಗುತ್ತೆ.

ಇತ್ತೀಚಿನ ವರ್ಷಗಳಲ್ಲಿ ಚೀನಾ ಅರಬ್ಬಿ ಸಮುದ್ರದಲ್ಲಿ ತನ್ನ ಕಬಂಧ ಬಾಹುವನ್ನ ವಿಸ್ತರಿಸೋ ಪ್ರಯತ್ನ ಮಾಡ್ತಿದೆ. ಇದಕ್ಕೆ ಪಾಕಿಸ್ತಾನ ಕೂಡ ಸಹಕಾರ ನೀಡ್ತಿದೆ. ಹೀಗಾಗಿ ಅರಬ್ಬೀ ಸಮುದ್ರದಲ್ಲಿ ಭಾರತದ ತಾಕತ್ತು ತೋರಿಸೋಕೆ ಮೋದಿ ಸರ್ಕಾರ ಲಕ್ಷಾದ್ವೀಪದಲ್ಲಿ ಸೇನೆನೆಲೆ ಸ್ಥಾಪಿಸೋಕೆ ಮುಂದಾಗಿದೆ.

ಕೇವಲ ಲಕ್ಷಾದ್ವೀಪ ಅಷ್ಟೇ ಅಲ್ಲ, ಅಂಡಮಾನ್-ನಿಕೋಬಾರ್​​ ಮತ್ತು ಬಂಗಾಳ ಕೊಲ್ಲಿಯಲ್ಲೂ ಸೇನೆಯನ್ನ ನಿಯೋಜಿಸೋಕೆ ಭಾರತ ಪ್ಲ್ಯಾನ್ ಮಾಡಿದೆ. ಇದಕ್ಕಾಗಿ 2019ರಲ್ಲಿ ಸುಮಾರು 5500 ಕೋಟಿ ರೂಪಾಯಿ ಹಣವನ್ನ ಕೇಂದ್ರ ಸರ್ಕಾರ ಮೀಸಲಿಟ್ಟಿತ್ತು. ಇದು ಕೂಡ ಅಷ್ಟೆ, ಸ್ಟ್ರ್ಯಾಟಜಿಕಲಿ ತುಂಬಾ ಇಂಪಾರ್ಟೆಂಟ್ ಲೊಕೇಷನ್. ಯುರೋಪ್ ಮತ್ತು ಪೂರ್ವ ಏಷ್ಯಾ ನಡುವೆ ವ್ಯಾಪಾರ ಹಡಗುಗಳು ಅಂಡಮಾನ್-ನಿಕೋಬಾರ್ ಮೂಲಕವೇ ಹಾದು ಹೋಗೋದು. ಮಲೇಷ್ಯಾ ಮತ್ತು ಇಂಡೋನೇಷ್ಯಾ ಮಧ್ಯೆ ಮಲಾಕಾ ಅನ್ನೋ ಕಾಲುವೆ ಇದೆ. ಯುರೋಪ್​​ – ಏಷ್ಯಾ ಮಧ್ಯೆ ಹಡಗಿನ ವಹಿವಾಟಿಗೆ ಇದುವೇ ಶಾರ್ಟೆಸ್ಟ್ ರೂಟ್. 2016ರಲ್ಲಿ ಚೀನಾಗೆ ಸಾಗಾಣೆಯಾದ ಶೇಕಡಾ 80ರಷ್ಟು ಇಂಧನ ಹಾದು ಹೋಗಿರೋದು ಇದೇ ಮಲಾಕಾ ಕಾಲುವೆ ಮೂಲಕ. ಅಂಡಮಾನ್-ನಿಕೋಬಾರ್ ಸಮೀಪವೇ ಚೀನಾ ಹಡಗುಗಳು ಸಂಚರಿಸ್ತಿವೆ. ಈಗ ಇದೇ ಅಂಡಮಾನ್-ನಿಕೋಬಾರ್​ನಲ್ಲೇ ಭಾರತ ಸೇನಾನೆಲೆ ನಿರ್ಮಾಣ ಮಾಡ್ತಿದ್ದು, ಚೀನಾದ ಹಡಗುಗಳ ಮೇಲೆಯೇ ನಮ್ಮ ನಿಗಾ ಇರುತ್ತೆ. ಭಾರತದ ವಿರುದ್ಧ ಚೀನಾ ಏನೇ ಹೆಚ್ಚು ಕಮ್ಮಿ ಮಾಡಿದ್ರೂ ಇಲ್ಲಿ ಅಂಡಮಾನ್-ನಿಕೋಬಾರ್​ ಬಳಿ ಚೀನಾ ಶಿಪ್​ಗಳ ಸಂಚಾರಕ್ಕೆ ಬ್ರೇಕ್​​ ಹಾಕಿದ್ರೆ ಸರ್ವಾಧಿಕಾರಿ ಕ್ಸಿ ಜಿನ್​​ಪಿಂಗ್ ಹಿಂದೇಟು ಹಾಕಲೇಬೇಕಾಗುತ್ತೆ.

ಅಂತೂ ಭಾರತ ತನ್ನ ಬಳಿಯಿರೋ ದ್ವೀಪಗಳನ್ನ ಟೂರಿಸಂಗಷ್ಟೇ ಅಲ್ಲ ದೇಶದ ರಕ್ಷಣೆಗಾಗಿ ಬಳಸೋಕೆ ಮುಂದಾಗಿದೆ. ದ್ವೀಪಗಳಲ್ಲಿ ಸೇನಾ ನೆಲೆ ಸ್ಥಾಪಿಸಿ ಸ್ಟ್ರ್ಯಾಟಜಿಕ್ ಲೊಕೇಶನ್​​ಗಳನ್ನಾಗಿ ಪರಿವರ್ತಿಸ್ತಾ ಇದೆ. ಹಾಗೆಯೇ ನಮ್ಮ ನೌಕಾಪಡೆಯ ತಾಕತ್ತೇನು ಅನ್ನೋದನ್ನ ಕೂಡ ಭಾರತ ಜಗತ್ತಿನ ಮುಂದೆ ಪ್ರದರ್ಶಿಸ್ತಾ ಇದೆ. 2023ರಲ್ಲಿ ದಕ್ಷಿಣ ಚೀನಾ ಸಮುದ್ರ ಭಾಗದ ಸಮೀಪವೇ ಫಿಲಿಪಿನ್ಸ್​ ಜೊತೆಗೆ ಭಾರತೀಯ ನೌಕಾಪಡೆ ಸಮರಾಭ್ಯಾಸ ನಡೆಸಿತ್ತು. ಅರಬ್ಬಿ ಸಮುದ್ರ, ಹಿಂದೂ ಮಹಾಸಾಗರದಲ್ಲೂ ಭಾರತ ಜಂಟಿ ಸಮರಾಭ್ಯಾಸಗಳನ್ನ ನಡೆಸ್ತಾನೆ ಇದೆ. ನೌಕಾಪಡೆಯಲ್ಲಿ ಯುದ್ಧಹಡಗುಗಳು ಮತ್ತು ಸಬ್​​ಮರೀನ್​​ಗಳ ಸಂಖ್ಯೆಯನ್ನ ಕೂಡ ಬಲ ಪಡಿಸಲಾಗ್ತಿದೆ. ಹೀಗಾಗಿಯೇ ಕಳೆದ ಕೆಲ ತಿಂಗಳುಗಳಲ್ಲಿ ಭಾರತೀಯ ನೌಕಾಪಡೆ ಅರಬ್ಬಿ ಸಮುದ್ರ ಸೇರಿದಂತೆ ಹಲವೆಡೆ ಕೆಲ ಮಹತ್ವದ ರಕ್ಷಣಾ ಕಾರ್ಯಾಚರಣೆಗಳನ್ನ ಕೈಗೊಂಡಿತ್ತು. ಮೀನುಗಾರರು, ಗೂಡ್ಸ್​ಶಿಪ್​ಗಳನ್ನ ರಕ್ಷಣೆ ಮಾಡಿತ್ತು. ಇದು ನಮ್ಮ ನೌಕಾಪಡೆಯ ಶಕ್ತಿಗೆ ಸಣ್ಣ ಸಾಕ್ಷಿಯಷ್ಟೇ. ಸ್ನೇಹಿತರೇ ನಿಮಗೆ ಗೊತ್ತಿರ್ಲಿ, ಭವಿಷ್ಯದಲ್ಲಿ ಯುದ್ಧದಂತಾ ಸನ್ನಿವೇಶಗಳು ನಿರ್ಮಾಣವಾದ್ರೆ ಆ ವೇಳೆ ನೌಕಾಪಡೆಯ ಪಾತ್ರ ಅತ್ಯಂತ ದೊಡ್ಡ ಮಟ್ಟದಲ್ಲಿರುತ್ತೆ. ನೌಕಾಪಡೆ ಮತ್ತು ವಾಯುಪಡೆಯನ್ನ ಬಲಗೊಳಿಸಿದ್ರಷ್ಟೇ ಯುದ್ಧ ಗೆಲ್ಲೋಕೆ ಸಾಧ್ಯ ಅನ್ನೋ ಕಾಲದಲ್ಲಿ ಈಗ ನಾವಿದ್ದೇವೆ. ಇದೇ ಕಾರಣಕ್ಕೆ ಅಮೆರಿಕ, ಚೀನಾ, ಭಾರತ ಸೇರಿದಂತೆ ಪ್ರಮುಖ ರಾಷ್ಟ್ರಗಳು ನೌಕಾಪಡೆಯನ್ನ ಬಲಗೊಳಿಸ್ತಿವೆ.

ಇನ್ನು ಚೀನಾ, ಪಾಕಿಸ್ತಾನದಂಥಾ ಕಂತ್ರಿ ದೇಶಗಳು ಬುಡದಲ್ಲೇ ಇರೋವಾಗ ಕೇವಲ ಭೂಮಾರ್ಗದಲ್ಲಷ್ಟೇ ಅಲ್ಲ, ಜಲಮಾರ್ಗದ ಮೇಲೂ ಭಾರತ ಹೆಚ್ಚಿನ ನಿಗಾ ವಹಿಸಬೇಕಾದ ಅನಿವಾರ್ಯತೆ ಇದೆ. ಈಗಾಗ್ಲೇ ಭಾರತದ ಸುತ್ತಲಿನ ದೇಶಗಳನ್ನ ಕಪಿಮುಷ್ಠಿಯಲ್ಲಿಟ್ಟುಕೊಳ್ಳೋಕೆ ಚೀನಾ ಶತಪ್ರಯತ್ನ ಮಾಡ್ತಿದೆ. ಭಾರತಕ್ಕೆ 360 ಡಿಗ್ರಿಯಿಂದಲೂ ಅಪಾಯ ಇದೆ. ಹೀಗಾಗಿಯೇ ಭಾರತ ಸಮುದ್ರ ಪ್ರದೇಶದಲ್ಲೂ ತನ್ನ ಸೇನಾ ಶಕ್ತಿಯನ್ನ ಗಟ್ಟಿಗೊಳಿಸ್ತಾ ಇದೆ. ಹೇಗೆ ಚೀನಾ ಮತ್ತು ಅಮೆರಿಕ ಜಗತ್ತಿನ ವಿವಿಧೆಡೆ ಆಯಕಟ್ಟಿನ ಜಾಗಗಳಲ್ಲಿ ಸೇನಾನೆಲೆಗಳನ್ನ ಸ್ಥಾಪಿಸಿವೆಯೋ ಅದೇ ರೀತಿ ಭಾರತ ಕೂಡ ಸೇನಾನೆಲೆಗಳ ಸಂಖ್ಯೆಯನ್ನ ಹೆಚ್ಚಿಸ್ತಾ ಇದೆ. ಅಂತೂ ರಕ್ಷಣಾ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ಬೆಳವಣಿಗೆಗಳಾಗ್ತಾ ಇದ್ದು, ಈ ಪೈಕಿ ಭಾರತ ಕೂಡ ಮೇನ್ ರೋಲ್ ನಿಭಾಯಿಸ್ತಾ ಇದೆ.

Shwetha M