ಗಾರ್ಬಾ ನೃತ್ಯದ ವೇಳೆ 10 ಮಂದಿ ಹೃದಯಾಘಾತದಿಂದ ಸಾವು – ಹಾರ್ಟ್‌ ಅಟ್ಯಾಕ್‌ಗೆ ಕಾರಣವೇನು ಗೊತ್ತಾ?  

ಗಾರ್ಬಾ ನೃತ್ಯದ ವೇಳೆ 10 ಮಂದಿ ಹೃದಯಾಘಾತದಿಂದ ಸಾವು – ಹಾರ್ಟ್‌ ಅಟ್ಯಾಕ್‌ಗೆ ಕಾರಣವೇನು ಗೊತ್ತಾ?  

ದೇಶದಾದ್ಯಂತ ನವರಾತ್ರಿ ಸಂಭ್ರಮ ಜೋರಾಗಿದೆ. ನವರಾತ್ರಿಯಲ್ಲಿ ಪೂಜೆ, ಪುನಸ್ಕಾರದ ಜೊತೆ ಜೊತೆಗೆ ಹಾಡು, ನೃತ್ಯದ ಸಡಗರವೂ ಸೇರಿರುತ್ತದೆ. ಉತ್ತರ ಭಾರತದ ಕಡೆ ಗಾರ್ಬಾ ಡಾನ್ಸ್‌ ಬಹಳ ಫೇಮಸ್‌. ಇದು ಮನೆ, ಮನಗಳನ್ನು ಒಂದುಗೂಡಿಸುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಗಾರ್ಬಾ ನೃತ್ಯ ಸಂಭ್ರಮಕ್ಕಿಂತ ದುಃಖವನ್ನೇ ಹೆಚ್ಚಿಸುತ್ತಿದೆ. ಇದಕ್ಕೆ ಕಾರಣ ಹೃದಯಾಘಾತ. ಕೇವಲ 24 ಗಂಟೆಗಳಲ್ಲಿ 10 ಮಂದಿ ನೃತ್ಯ ಮಾಡುತ್ತಿರುವಾಗಲೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

ಹೌದು ಗುಜರಾತ್‌ನಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಗಾರ್ಬಾ ಅಥವಾ ದಾಂಢಿಯಾ ನೃತ್ಯ ಮಾಡುವಾಗ 10 ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇವರಲ್ಲಿ 13 ವರ್ಷದ ಬಾಲಕನೂ ಸೇರಿದ್ದಾನೆ ಎಂಬುದು ಶಾಕಿಂಗ್‌ ವಿಷಯ. 2022 ರಲ್ಲೂ ದಾಂಢಿಯಾ ನೃತ್ಯ ಮಾಡುವಾಗ ಹೃದಯಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆಗಳು ನಡೆದಿದೆ. ಸದ್ಯ ಇಷ್ಟು ಮಂದಿ ಹೃದಯಾಘಾತದಿಂದ ಸಾವನ್ನಪ್ಪಲು ಏನು ಕಾರಣ ಎಂದು ದೇಶದಾದ್ಯಂತ ಚರ್ಚೆಯಾಗುತ್ತಿದೆ.

ಇದನ್ನೂ ಓದಿ: ಶಕ್ತಿ ಯೋಜನೆ ಬಳಿಕ ಖಾಸಗಿ ಬಸ್ ಗಳಿಗೆ ಪ್ರಯಾಣಿಕರ ಕೊರತೆ – 20 ಸಾವಿರ ಖಾಸಗಿ ಬಸ್ ಗಳ ಸಂಚಾರ ಸ್ಥಗಿತ

ಮೊದಲೇ ಅವರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳು, ದೀರ್ಘ ಉಪವಾಸ, ಅನಾರೋಗ್ಯಕರ ಆಹಾರ ಹಾಗೆಯೇ ಈಗಾಗಲೇ ಹೃದಯ ಸಂಬಂಧಿ ಕಾಯಿಲೆ ಹೊಂದಿರುವ ಕುರಿತು ತಿಳಿವಳಿಕೆ ಇಲ್ಲದಿರುವುದರಿಂದಲೇ ಇತ್ತೀಚೆಗೆ ಹೃದಯಾಘಾತಕ್ಕೆ ಕಾರಣವಾಗಿದೆ. ಗುಜರಾತ್​ನಲ್ಲಿ ಗಾರ್ಬಾ ನೃತ್ಯದ ವೇಳೆ 10 ಮಂದಿ ಸಾವನ್ನಪ್ಪಲು ಇದೇ ಕಾರಣ ಎಂದು ಅಹಮದಾಬಾದ್​ನ ನಾರಾಯಣ ಆಸ್ಪತ್ರೆಯ ಡಾ. ಜಿಶಾನಿ ಮನ್ಸೂರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಗಾರ್ಬಾದಂತಹ ದೈಹಿಕ ಚಟುವಟಿಕೆಗಳ ಸಮಯದಲ್ಲಿ ಹಠಾತ್ ಹೃದಯಾಘಾತವಾಗುವುದು ಈ ಮೊದಲೇ ಅಸ್ತಿತ್ವದಲ್ಲಿರುವ ವೈದ್ಯಕೀಯ ಪರಿಸ್ಥಿತಿಗಳು, ದೈಹಿಕ ಪರಿಶ್ರಮ ಮತ್ತು ಪರಿಸರದ ಅಂಶಗಳು ಸೇರಿದಂತೆ ವಿವಿಧ ಕಾರಣಗಳನ್ನು ಹೊಂದಿರಬಹುದು. ಕ್ರೀಡೆ ಹಾಗೂ ನೃತ್ಯದಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಆರೋಗ್ಯ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಬಹುದು. ಹೃದಯಾಘಾತ ಮತ್ತು ವೈಫಲ್ಯ ಸೇರಿದಂತೆ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು. ಈ ಹಿಂದೆ 10ರಲ್ಲಿ 1 ರೋಗಿ 30 ವರ್ಷಕ್ಕಿಂತ ಕಡಿಮೆ ಇರುವವರು ಇರುತ್ತಿದ್ದರು ಆದರೆ ಈಗ 10 ರಲ್ಲಿ 3 ರೋಗಿಗಳನ್ನು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಯುವಕರು ಸೇರಿದಂತೆ ಅನೇಕರಿಗೆ ಅರಿವಿಲ್ಲದೆ ಅಧಿಕ ರಕ್ತದೊತ್ತಡ ಅಥವಾ ಮಧುಮೇಹದಂತಹ ಅಪಾಯಕಾರಿ ಅಂಶಗಳನ್ನು ಹೊಂದಿರಬಹುದು. ಪ್ರತಿಯೊಬ್ಬರೂ ಕೂಡ ತಮ್ಮ ಆರೋಗ್ಯದ ಬಗ್ಗೆ ತಿಳಿದಿರುವುದು, ದೇಹವನ್ನು ಹೈಡ್ರೇಟ್​ ಆಗಿರುವಂತೆ ನೋಡಿಕೊಳ್ಳುವುದು ಮುಖ್ಯ. ಅಷ್ಟೇ ಅಲ್ಲದೇ ದೇಹದ ಎಲೆಕ್ಟ್ರೋಲೈಟ್‌ಗಳಲ್ಲಿ ಅಸಮತೋಲನ ಉಂಟಾದಾಗ ಈ ಸಮಸ್ಯೆಯು ಉಲ್ಬಣಗೊಳ್ಳಬಹುದು, ಇದು ನೃತ್ಯ ಅಥವಾ ವ್ಯಾಯಾಮದಂತಹ ಚಟುವಟಿಕೆಗಳ ಸಮಯದಲ್ಲಿ ಸಂಭವಿಸಬಹುದು. ಇವುಗಳು ಯಾವುದೇ ಸಮಸ್ಯೆಗಳು ಅಥವಾ ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲ. ನಿರ್ಜಲೀಕರಣ, ಕಳಪೆ ಆಹಾರ ಪದ್ಧತಿಗಳು ಮತ್ತು ಅತಿಯಾದ ದೈಹಿಕ ಚಟುವಟಿಕೆಯು ಕೆಲವು ಕೊಡುಗೆ ಅಂಶಗಳಾಗಿವೆ.

ಈ ಹಬ್ಬಗಳ ಸಮಯದಲ್ಲಿ, ಶಾಖ ಮತ್ತು ಅತಿಯಾದ ಚಟುವಟಿಕೆಯು ಹೃದಯದ ಒತ್ತಡವನ್ನು ಉಂಟುಮಾಡಬಹುದು. ಅಂತಹ ಆಚರಣೆಗಳ ಸಮಯದಲ್ಲಿ ಅತಿಯಾದ ಪರಿಶ್ರಮ ಮತ್ತು ಒತ್ತಡದಿಂದ ಉಂಟಾಗುವ ಸಂಭಾವ್ಯ ಅಪಾಯಗಳ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯ ಎಂದು ತಜ್ಞರು ಸಲಹೆ ನೀಡಿದರು. ಎದೆ ನೋವು ಅಥವಾ ಉಸಿರಾಟದ ತೊಂದರೆಯಂತಹ ಹೃದಯ ಸಮಸ್ಯೆಗಳ ಆರಂಭಿಕ ಚಿಹ್ನೆಗಳನ್ನು ಗುರುತಿಸುವುದು ಸಹ ಮುಖ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Shwetha M