ಬಾಂಗ್ಲಾ ಗೆದ್ದಾಯ್ತು.. What Next? – AUS, NZ ಕೆಡವಿದ್ರೆ ನಾವೇ BOSS
WTC ಫೈನಲ್​ಗೆ ಇರೋ ಸವಾಲೇನು?

ಬಾಂಗ್ಲಾ ಗೆದ್ದಾಯ್ತು.. What Next? – AUS, NZ ಕೆಡವಿದ್ರೆ ನಾವೇ BOSSWTC ಫೈನಲ್​ಗೆ ಇರೋ ಸವಾಲೇನು?

ಟೆಸ್ಟ್ ಕ್ರಿಕೆಟ್​ನಲ್ಲಿ ಪಾರುಪತ್ಯ ಮೆರೆಯುತ್ತಿರೋ ಟೀಂ ಇಂಡಿಯಾ ಬಾಯ್ಸ್ ಇದೀಗ ಬಾಂಗ್ಲಾ ಪಡೆಯನ್ನ ಕ್ಲೀನ್ ಸ್ವೀಪ್ ಮಾಡಿದ್ದಾರೆ. ಅದ್ರಲ್ಲೂ ಈ ಗೆಲುವು ಭಾರತಕ್ಕೆ ತುಂಬಾನೇ ಸ್ಪೆಷಲ್. ಯಾಕಂದ್ರೆ ತವರಿನಲ್ಲಿ ಭಾರತಕ್ಕೆ ಇದು ಸತತ 18ನೇ ಸರಣಿ ಗೆಲುವಾಗಿದೆ. 2012-13ರಿಂದ ಭಾರತದಲ್ಲಿ ನಡೆದಿರೋ ಟೆಸ್ಟ್ ಸರಣಿಗಳಲ್ಲಿ ಭಾರತ ಒಂದೇ ಒಂದು ಸರಣಿಯನ್ನೂ ಸೋತಿಲ್ಲ. ಐತಿಹಾಸಿಕ ದಾಖಲೆ ಬರೆದು ಮುನ್ನುಗ್ಗುತ್ತಿರೋ ರೋಹಿತ್ ಶರ್ಮಾ ನೇತೃತ್ವದ ಸೇನೆ 2025ರ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ರೇಸ್​​ನಲ್ಲಿ ಅಗ್ರಸ್ಥಾನದಲ್ಲಿ ಮತ್ತಷ್ಟು ಭದ್ರವಾಗಿಸಿಕೊಂಡಿದೆ. ಸದ್ಯ ಕ್ರಿಕೆಟ್ ಅಭಿಮಾನಿಗಳನ್ನ ಕಾಡ್ತಿರೋ ಪ್ರಶ್ನೆ ಮುಂದಿನ ಸಮರ ಯಾವಾಗ ಅನ್ನೋದು. ಬಾಂಗ್ಲಾ ತಂಡವನ್ನ ವೈಟ್ ವಾಶ್ ಮಾಡಿರೋ ಟೀಂ ಇಂಡಿಯಾದ ನೆಕ್ಸ್​ಟ್ ಕದನ ಎಲ್ಲಿ? ಯಾರ ವಿರುದ್ಧ? ಭಾರತಕ್ಕಿರೋ ಚಾಲೆಂಜಸ್ & ಅಡ್ವಾಂಟೇಜಸ್ ಏನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬಿಗ್‌ ಬಾಸ್‌ ನಲ್ಲಿ ಸಿಂಗಲ್‌ ಸಿಂಹ..  ಎರಡು ಮನೆಗೂ ಜಗದೀಶ್‌ ಬಾಸ್‌! – ಚೈತ್ರ ಪಳಗಿಸಲು ಚಿನ್ನ, ರನ್ನ ಪ್ಲ್ಯಾನ್‌!

ಕಳೆದ ಹತ್ತು ವರ್ಷಗಳಿಂದಲೂ ಭಾರತ ಪ್ರವಾಸ ಕೈಗೊಂಡ ಎಲ್ಲಾ ತಂಡಗಳ ಮೇಲೆ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. 2013ರ ಫೆಬ್ರವರಿಯಿಂದ ಈವರೆಗೂ ತವರಿನಲ್ಲಿ ಒಂದೂ ಟೆಸ್ಟ್ ಸರಣಿಯನ್ನು ಸೋತಿಲ್ಲ. ಬಾಂಗ್ಲಾ ವಿರುದ್ಧ ಮುಕ್ತಾಯಗೊಂಡ ಸೆಕೆಂಡ್ ಟೆಸ್ಟ್​ ಮ್ಯಾಚ್​ನಲ್ಲಿ ಗೆಲುವು ಸಾಧಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ತವರಿನಲ್ಲಿ ಸತತ 18 ಸರಣಿಗಳನ್ನು ಗೆದ್ದ ದಾಖಲೆ ಬರೆದಿದೆ. 2012ರಲ್ಲಿ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಭಾರತ ಕೊನೆಯ ಬಾರಿಗೆ ಟೆಸ್ಟ್ ಸರಣಿ ಸೋತಿತ್ತು. ತವರಿನಲ್ಲಿ ಸತತ ಹತ್ತು ಟೆಸ್ಟ್ ಸರಣಿಗಳನ್ನು ಗೆದ್ದ ದಾಖಲೆ ಆಸ್ಟ್ರೇಲಿಯಾದ ಸ್ಟೀವ್ ವಾ ಅವರದ್ದಾಗಿತ್ತು. ಅವರು ತಮ್ಮ ನಾಯಕತ್ವದಲ್ಲಿ ಆಸ್ಟ್ರೇಲಿಯಾವನ್ನು ಉತ್ತುಂಗಕ್ಕೇರಿಸಿದ್ರು. 1994ರ ನವೆಂಬರ್ ಮತ್ತು 2000ರ ನವೆಂಬರ್ ನಡುವೆ ತವರಿನಲ್ಲಿ ನಡೆದ ಎಲ್ಲಾ ಹತ್ತು ಸರಣಿಗಳನ್ನು ಗೆದ್ದಿದ್ದರು. ಇದೀಗ ಭಾರತ ಕೂಡ ಟೆಸ್ಟ್ ಸಿರೀಸ್​​ನಲ್ಲಿ ಅಂಥದ್ದೇ ನಾಗಾಲೋಟ ಮುಂದುವರಿಸಿದೆ. ಬಾಂಗ್ಲಾದೇಶವನ್ನ ಟೆಸ್ಟ್​​ನಲ್ಲಿ ಸೋಲಿಸಿ ಜೋಶ್​ನಲ್ಲಿರೋ ಟೀಂ ಇಂಡಿಯಾ ಇದೀಗ ಟಿ-20 ಮಾದರಿಯಲ್ಲೂ ಬಾಂಗ್ಲಾಗೆ ಶಾಕ್ ಕೊಡೋಕೆ ರೆಡಿಯಾಗಿದ್ದಾರೆ.

ಟೆಸ್ಟ್ ಬಳಿಕ ಬಾಂಗ್ಲಾ ವಿರುದ್ಧ ಮೂರು ಟಿ-20 ಸರಣಿ!

ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯ ನಂತರ ತವರಿನಲ್ಲಿ ಭಾರತ ಮೂರು ಪಂದ್ಯಗಳ ಟಿ 20 ಐ ಸರಣಿ ಆಡಲಿದೆ. ಮೊದಲ ಟಿ20 ಪಂದ್ಯ ಅಕ್ಟೋಬರ್ 6 ರಂದು ಗ್ವಾಲಿಯರ್​ನಲ್ಲಿ, ಎರಡನೇ ಪಂದ್ಯ ಅಕ್ಟೋಬರ್ 9 ರಂದು ದೆಹಲಿಯಲ್ಲಿ ಮತ್ತು ಮೂರನೇ ಟಿ 20 ಪಂದ್ಯ ಅಕ್ಟೋಬರ್ 12 ರಂದು ಹೈದರಾಬಾದ್​ನಲ್ಲಿ ನಡೆಯಲಿದೆ.  ಟಿ-20ಐ ತಂಡಕ್ಕೆ ಈಗಾಗ್ಲೇ ಬಿಸಿಸಿಐ ತಂಡವನ್ನೂ ಅನೌನ್ಸ್ ಮಾಡಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಟೀಂ ರೆಡಿಯಾಗಿದೆ. ಆದ್ರೆ ಟೆಸ್ಟ್ ಮ್ಯಾಚ್ ಆಡಿದ ಬಹುತೇಕರು ಚುಟುಕು ಸಮರದಿಂದ ಹೊರಗಿದ್ದಾರೆ. ಬಟ್ ಈಗ ಅಭಿಮಾನಿಗಳನ್ನ ಕಾಡ್ತಿರೋ ಪ್ರಶ್ನೆ ಅಂದ್ರೆ ಟಿ-20 ಸಿರೀಸ್ ಆದ್ಮೇಲೆ ಭಾರತದ ಮುಂದಿನ ಪೈಪೋಟಿ ಹೇಗಿದೆ ಅನ್ನೋದು.

ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ರೂ ಫೈನಲ್ ಗೆ ಅರ್ಹತೆ ಪಡೆದಿಲ್ಲ!

ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ತಂಡವು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ ಅನ್ನೋದೇನೋ ನಿಜ. ಆದ್ರೂ ಭಾರತ ತಂಡ WTC ಫೈನಲ್​ಗೆ ಅರ್ಹತೆ ಪಡೆದಿಲ್ಲ ಅನ್ನೋದನ್ನ ನೀವು ನಂಬ್ಲೇಬೇಕು. ಯಾಕಂದ್ರೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಭಾರತ ತಂಡವು ಇನ್ನೂ 8 ಪಂದ್ಯಗಳನ್ನಾಡಬೇಕಿದೆ. ಈ ಎಂಟು ಪಂದ್ಯಗಳ ಮೂಲಕ ಟೀಮ್ ಇಂಡಿಯಾದ ಫೈನಲ್​ ಅರ್ಹತೆ ನಿರ್ಧಾರವಾಗಲಿದೆ. ಭಾರತ ತಂಡವು ನ್ಯೂಝಿಲೆಂಡ್ ವಿರುದ್ಧ 3 ಟೆಸ್ಟ್​ ಪಂದ್ಯಗಳನ್ನಾಡಲಿದ್ದು, ಇದಾದ ಬಳಿಕ ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್ ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೂರ್ನಿ ಆಡಲಿದೆ. ಈ ಎಂಟು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದರೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಫೈನಲ್ ಆಡುವುದು ಬಹುತೇಕ ಖಚಿತವಾಗಲಿದೆ.

ನ್ಯೂಜಿಲೆಂಡ್ ವಿರುದ್ಧದ ಸರಣಿ ಗೆದ್ದರಿ ಫೈನಲ್ ಫಿಕ್ಸ್?

ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ 3 ಟೆಸ್ಟ್ ಪಂದ್ಯಗಳಿಗಾಗಿ ನ್ಯೂಜಿಲೆಂಡ್ ತಂಡ ಭಾರತಕ್ಕೆ ಭೇಟಿ ನೀಡಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಅರ್ಹತೆ ಪಡೆಯಲು ಈ ಸರಣಿ ಕೂಡ ನಿರ್ಣಾಯಕವಾಗಿದೆ. ಇದು ಭಾರತದ ಕೊನೆಯ ತವರಿನ ಟೆಸ್ಟ್​ ಸರಣಿಯಾಗಲಿದೆ. ಈ ಪಂದ್ಯಗಳು ಅಕ್ಟೋಬರ್ 16-20, 2ನೇ ಪಂದ್ಯ ಅಕ್ಟೋಬರ್ 24-28, 3ನೇ ಪಂದ್ಯ ನವೆಂಬರ್ 1ರಿಂದ 5ರವರೆಗೆ ನಡೆಯಲಿದೆ. ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿಕೊಂಡರೆ ಫೈನಲ್​ಗೆ ಅರ್ಹತೆಗಿಟ್ಟಿಸಿಕೊಳ್ಳುವುದು ಬಹುತೇಕ ಕನ್ಫರ್ಮ್​. ನ್ಯೂಝಿಲೆಂಡ್ ಅನ್ನು ವೈಟ್‌ವಾಶ್ ಮಾಡಿ ಸರಣಿ ಗೆದ್ದರೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಅಂಕ ಪಟ್ಟಿಯಲ್ಲಿ ಶೇ.70 ಕ್ಕಿಂತ ಹೆಚ್ಚು ಗೆಲುವಿನ ಶೇಕಡಾವಾರು ಕಾಯ್ದುಕೊಳ್ಳಬಹುದು. ಇದಾದ ಬಳಿಕ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ 2 ಮ್ಯಾಚ್ ಗೆದ್ದರೆ ಸಾಕು, ನೇರವಾಗಿ ಫೈನಲ್​ಗೆ ಅರ್ಹತೆ ಪಡೆಯಬಹುದು.

ಆಸ್ಟ್ರೇಲಿಯಾ ವಿರುದ್ಧ ಸರಣಿ ಡ್ರಾ ಮಾಡಿಕೊಂಡ್ರೂ ಫೈನಲ್ ಟಿಕೆಟ್!

ಭಾರತ ತಂಡವು ನ್ಯೂಝಿಲೆಂಡ್ ಅನ್ನು 3-0 ರಿಂದ ಸೋಲಿಸಿದರೆ ಮತ್ತು ಆಸ್ಟ್ರೇಲಿಯಾ ವಿರುದ್ಧ 3-1 ಸೋತರೂ ಸಹ ಫೈನಲ್​ಗೆ ಅರ್ಹತೆಗಿಟ್ಟಿಸಿಕೊಳ್ಳಬಹುದು. ಏಕೆಂದರೆ ಆಸೀಸ್ ವಿರುದ್ಧ 3-1 ಅಂತರದಿಂದ ಸೋತರೆ ಟೀಮ್ ಇಂಡಿಯಾದ ಗೆಲುವಿನ ಶೇಕಡಾವಾರು 65.78% ಇರಲಿದ್ದು, ಈ ಮೂಲಕ ಫೈನಲ್​ಗೆ ಪ್ರವೇಶಿಸಬಹುದು. ಒಂದು ವೇಳೆ ನ್ಯೂಝಿಲೆಂಡ್ ತಂಡವು ಟೀಮ್ ಇಂಡಿಯಾ ವಿರುದ್ಧ 3-0 ಅಂತರದಿಂದ ಜಯ ಸಾಧಿಸಿದರೆ, ಆಸ್ಟ್ರೇಲಿಯಾ ಭಾರತವನ್ನು 5-0 ಅಂತರದಿಂದ ಸೋಲಿಸಿದರೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಅಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಗೆಲುವಿನ ಶೇಕಡಾವಾರು 58.77% ಗೆ ಇಳಿಯಲಿದೆ. ಹೀಗಾದ್ರೆ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್ ಫೈನಲ್ ರೇಸ್​ನಿಂದ ಹೊರಬೀಳಲಿದೆ. ಆದರೆ ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಅಂಕ ಪಟ್ಟಿಯಲ್ಲಿ ಶೇ. 74.24 ರಷ್ಟು ಗೆಲುವಿನ ಶೇಕಡಾವಾರು ಹೊಂದಿರುವ ಟೀಮ್ ಇಂಡಿಯಾ ನ್ಯೂಝಿಲೆಂಡ್ ವಿರುದ್ಧ ಸರಣಿ ಗೆದ್ದು, ಆಸ್ಟ್ರೇಲಿಯಾ ವಿರುದ್ಧ ಸರಣಿ ಡ್ರಾ ಮಾಡಿಕೊಂಡರೂ ಫೈನಲ್​ಗೆ ಅರ್ಹತೆಗಿಟ್ಟಿಸಿಕೊಳ್ಳಬಹುದು. ಹೀಗಾಗಿ ಸತತ ಮೂರನೇ ಬಾರಿಯೂ ಕೂಡ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಕಾಣಿಸಿಕೊಳ್ಳಬಹುದು. ಹೀಗಾಗಿ ಭಾರತಕ್ಕೆ ಮುಂದಿನ ಎಲ್ಲಾ ಟೆಸ್ಟ್ ಸರಣಿಗಳೂ ಕೂಡ ತುಂಬಾನೇ ಇಂಪಾರ್ಟೆಂಟ್.

Shwetha M