ಬಾಲರಾಮನಿಗಾಗಿ ಮಹಾ ತಪಸ್ಸು! – ದೇವ ಶಿಲ್ಪಿ ಅರುಣ್ ಯೋಗಿರಾಜ್ ಹೇಳಿದ್ದೇನು?

ಬಾಲರಾಮನಿಗಾಗಿ ಮಹಾ ತಪಸ್ಸು!  –  ದೇವ ಶಿಲ್ಪಿ ಅರುಣ್ ಯೋಗಿರಾಜ್ ಹೇಳಿದ್ದೇನು?

ಅಯೋಧ್ಯೆಯ ಉದ್ದಗಲಕ್ಕೂ ಜನಸಾಗರವೇ ಹರಿಯುತ್ತಿದೆ. ಊಟ, ನಿದ್ದೆ ಬಿಟ್ಟು ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲುತ್ತಿದ್ದಾರೆ. ಅವನೊಬ್ಬನ ದರ್ಶನ ಸಿಕ್ಕಿಬಿಟ್ಟರೆ ಸಾಕು ಅಂತಾ ಪರಿಪರಿಯಾಗಿ ಬೇಡಿಕೊಳ್ತಿದ್ದಾರೆ. ಶತಕೋಟಿ ಭಾರತೀಯರ ಕನವರಿಕೆಗೆ ಕಾರಣ ಆಗಿರೋದೇ ಇದೇ ಬಾಲರಾಮ. ನಗುಮೊಗದ ಈ ರಾಮಲಲ್ಲಾರನ್ನ ಕಲ್ಲಿನಲ್ಲಿ ಅರಳಿಸಿದ್ದು ಕರುನಾಡಿನ ಶಿಲ್ಪಿ ಅರುಣ್ ಯೋಗಿರಾಜ್. ಮೈಸೂರು ಮೂಲದ ಅರುಣ್ ಯೋಗಿರಾಜ್ ರದ್ದು ನಿಜಕ್ಕೂ ಮಹಾತಪಸ್ಸು. ತಿಂಗಳುಗಟ್ಟಲೆ ಊಟ ಬಿಟ್ಟು, ವಾರಗಟ್ಟಲೆ ಮನೆಯವರನ್ನ ಮಾತನಾಡಿಸದೆ ಗಂಟೆಗಟ್ಟಲೆ ನಿದ್ದೆ ಮಾಡದೆ ಮರ್ಯಾದಾ ಪುರುಷೋತ್ತಮನಿಗಾಗಿ ಶ್ರಮಿಸಿದ್ದಾರೆ. ಅವ್ರ ಈ ಮಹಾತ್ಯಾಗಕ್ಕೆ ಪ್ರತಿಫಲ ಸಿಕ್ಕಿದೆ. ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದ ತುಂಬೆಲ್ಲಾ ಅರುಣ್ ರ ಗುಣಗಾನ ನಡೆಯುತ್ತಿದೆ.

ಇದನ್ನೂ ಓದಿ: ಬಾಲರಾಮನ ಕಾಣಲು ಜನವೋ ಜನ! – ದೇಗುಲಕ್ಕೆ ಭೇಟಿ ಮಾಡುವ ಮುನ್ನ ಈ ಮಾಹಿತಿ ನಿಮಗೆ ಗೊತ್ತಿರಲಿ

ಬಾಲರಾಮನ ಕಲ್ಪನೆಗಾಗಿ ಅರುಣ್ ಯೋಗಿರಾಜ್ ತುಂಬಾನೇ ಹೋಂ ವರ್ಕ್ ಮಾಡಿದ್ದಾರೆ. ಅವರ ಮೊಬೈಲ್​ನಲ್ಲಿ ಒಂದೂವರೆ ಸಾವಿರದಷ್ಟು ಶ್ರೀರಾಮನ ಚಿತ್ರಗಳಿವೆ. ರಾತ್ರಿ ಒಂದು ಗಂಟೆಯವರೆಗೂ ಕೆಲಸ ಮಾಡುತ್ತಿದ್ದರಂತೆ. ಕೆಲಸ ಮುಗಿದ್ಮೇಲೆ ಮಲಗುವ ಮುನ್ನ ಮೊಬೈಲ್​ನಲ್ಲಿರೋ ರಾಮನ ಚಿತ್ರಗಳನ್ನ ನೋಡಿಕೊಂಡೇ ನಾಳೆಯ ತಯಾರಿ ಮಾಡಿಕೊಳ್ಳುತ್ತಿದ್ದರಂತೆ. ದಿನನಿತ್ಯ ಕೆಲಸ ಮಾಡುವಾಗ ಬಾಲರಾಮ ಬದಲಾಗುತ್ತಿದ್ದರು. ಬಾಲರಾಮ ಹೇಗೆ ಕಾಣುತ್ತಾರೆ ಅನ್ನೋ ಕುತೂಹಲ ನನ್ನಲ್ಲಿಯೇ ಹೆಚ್ಚಾಗಿತ್ತು ಎಂದು ಅರುಣ್ ಹೇಳಿಕೊಂಡಿದ್ದಾರೆ. ವಿಗ್ರಹ ಪೂರ್ಣವಾದ ಬಳಿಕ ಒಂದು ಕಾರ್ಯಗಾರಕ್ಕೆ ಕೊಡಲಾಗಿತ್ತು. ದೇವಸ್ಥಾನಕ್ಕೆ ಎಂಟ್ರಿ ಕೊಡುವಾಗಲೇ ವಿಗ್ರಹ ತನ್ನ ಲಕ್ಷಣಗಳನ್ನು ಬದಲಿಸಿಕೊಳ್ಳಲು ಆರಂಭಿಸಿತು. ಕೊನೆಗೆ ಪ್ರತಿಷ್ಠಾಪನೆಯಾಗಿ ಅಲಂಕಾರವೆಲ್ಲಾ ಆದ್ಮೇಲೆ ಇದು ನಾನು ಮಾಡಿದ ವಿಗ್ರಹ ಅಲ್ಲ. ಇದು ನನ್ನ ಕೆಲಸ ಅಲ್ಲ. ದೇವರೇ ಈ ಕೆಲಸ ಮಾಡಿಕೊಂಡಿದ್ದಾರೆ ಅನ್ನಿಸಿತ್ತಂತೆ.

ದೇಶದ 140 ಕೋಟಿ ಜನರು ಬಾಲರಾಮನನ್ನು ನೋಡುಬೇಕೆಂದು ಕಾಯುತ್ತಿದ್ದರು. ದೇಶದ ಜನತೆಗೆ ಬಾಲರಾಮನನ್ನು ತೋರಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿತ್ತು. ಇದಕ್ಕಾಗಿ ತುಂಬಾನೇ ಹೋಂ ವರ್ಕ್ ಮಾಡಲಾಗಿದೆ. ಇಲ್ಲಿಗೆ ಬಂದ್ಮೇಲೆ ಗೋವಿಂದಗಿರಿ ಮಹಾರಾಜರು ರಾಮನ ಲಕ್ಷಣಗಳ ಬಗ್ಗೆ ಹೇಳಿದ್ದರು. ಇದರ ಜೊತೆಗೆ ಅಧ್ಯಯನ ಸಹ ಮಾಡಬೇಕಿತ್ತು. ನಾವು ಮೂವರು ಶಿಲ್ಪಕಾರರು ಬೇರೆಯವರ ವಿಗ್ರಹಗಳನ್ನು ನೋಡಿರಲಿಲ್ಲ. ದೇಶಕ್ಕೆ ಮೂರು ವಿಭಿನ್ನ ವಿಗ್ರಹ ನೀಡಬೇಕು ಅನ್ನೋದು ನಮ್ಮ ಉದ್ದೇಶವಾಗಿತ್ತು. ಹಾಗಾಗಿ ಪರಸ್ಪರವಾಗಿ ಈ ಬಗ್ಗೆ ಚರ್ಚೆ ನಡೆಸುತ್ತಿರಲಿಲ್ಲ. ನಾವ್ಯಾರು ಯಾರು ಯಾರ ವಿಗ್ರಹವನ್ನು ನೋಡಿರಲಿಲ್ಲ ಎಂದಿದ್ದಾರೆ.

ಅಯೋಧ್ಯೆಗೆ ಬರುವುದಕ್ಕಿಂತಲೂ ಮುಂಚೆ ಚಿಣ್ಣರ ಮೇಳಕ್ಕೆ ಹೋಗಿದ್ದೆ. ಅಲ್ಲಿ ಬಹಳಷ್ಟು ಸಮಯ ಕಳೆದಿದ್ದೇನೆ. ಮಕ್ಕಳ ಜೊತೆ ಇರುತ್ತಿದ್ದೆ. ರಾಮಲಲ್ಲಾ ಮೂರ್ತಿ ಕೆತ್ತನೆಯ 6 ತಿಂಗಳು ಅರುಣ್ ಅವರ ಜೀವನದಲ್ಲಿಯೇ ಪ್ರಮುಖವಾದ ಘಟ್ಟವಾಗಿತ್ತು. ಇಡೀ ಪ್ರಪಂಚದಲ್ಲಿ ಯಾರಿಗೂ ಸಿಗದೇ ಇರುವ ಅವಕಾಶ ನನಗೆ ಸಿಕ್ಕಿತ್ತು. ಹೀಗಾಗಿ ನಾನು ಯಾರ ಜೊತೆನೂ ಸರಿಯಾಗಿ ಮಾತಾಡದೇ ಸುಮಾರು 7 ತಿಂಗಳು ಆಗಿತ್ತು. ಹೀಗಾಗಿ ಮಾತನಾಡಲು ಸ್ವಲ್ಪ ಕಷ್ಟ ಆಗುತ್ತಿದೆ. ಏಕಾಗ್ರತೆಗೆ ಎಲ್ಲಿಯೂ ತೊಂದರೆ ಆಗಬಾರದೆಂದು ಹೊರಜಗತ್ತಿನ ಜೊತೆ ಸಂಬಂಧ ಕಟ್‌ ಮಾಡಿಕೊಂಡಿದ್ದೆವು. ಯಾಕೆಂದರೆ ಇತಿಹಾಸ ಇರುವಂತಹ ಜಾಗ, ದೇಶಾದ್ಯಂತ ಜನ ಕಾಯುತ್ತಿದ್ದಾರೆ. ಇದರ ಪ್ರಾಮುಖ್ಯತೆ ನನಗೆ ಗೊತ್ತಿದ್ದರಿಂದ ಸಾಕಷ್ಟು ಅಧ್ಯಯನ ಮಾಡಿಕೊಂಡು ಮೂರ್ತಿ ಕೆತ್ತನೆ ಮಾಡಿದ್ದೇನೆ ಎಂದಿದ್ದಾರೆ.

ಮೂರ್ತಿ ಆಯ್ಕೆಯಾಗಿರುವ ವಿಷಯ ಕಳೆದ ಡಿಸೆಂಬರ್ 29ರಂದೇ ಅರುಣ್ ಯೋಗಿರಾಜ್ ಅವ್ರಿಗೆ ತಿಳಿದಿತ್ತಂತೆ.   ಆದ್ರೆ ಅದನ್ನ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಇನ್ನು ಪ್ರಾಣಪ್ರತಿಷ್ಠಾನೆಗೂ ಮುನ್ನ ಫೋಟೋ ವೈರಲ್‌ ಬಗ್ಗೆ ಪ್ರತಿಕ್ರಿಯಿಸಿದ ಅವರು, 7 ತಿಂಗಳಿಂದ ಕಾಪಾಡಿಕೊಂಡು ಬಂದೆ. ಆದರೆ ಅದು ಹೇಗೆ ಫೋಟೋ ಮೂಲಕ ಹೊರಗೆ ಬಂತು ಎನ್ನುವುದು ಗೊತ್ತಾಗಿಲ್ಲ. ಆದರೆ ಆ ಸಮಯದಲ್ಲಿ ಸಾಕಷ್ಟು ಬೇಸರ ಆಯಿತು. ಆದರೆ ಹಳೆಯ ಫೋಟೋ ಹಾಗೂ ಪ್ರತಿಷ್ಠಾಪನೆ ಆದ ಬಳಿಕ ರಾಮಲಲ್ಲಾನ ವಿಗ್ರಹಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಅದೇ ಖುಷಿ ಎಂದಿದ್ದಾರೆ. ಇದೀಗ ಕೇಂದ್ರ ಸರ್ಕಾರದಿಂದ ಅರುಣ್ ಮತ್ತೊಂದು ಆಫರ್ ಸಿಕ್ಕಿದೆ. ಡಾ.ಬಿ ಆರ್ ಅಂಬೇಡ್ಕರ್ ಅವರ ವಿಗ್ರಹವನ್ನ ಕೆತ್ತನೆ ಮಾಡುವಂತೆ ತಿಳಿಸಲಾಗಿದೆ. ಒಟ್ಟಾರೆ ಅರುಣ್ ಯೋಗಿರಾಜ್ ಕಾರ್ಯಕ್ಕೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಮೈಸೂರಿನಲ್ಲಿರುವ ಅರುಣ್ ಕುಟುಂಬಸ್ಥರ ಸಂಭ್ರಮವೂ ದುಪ್ಪಟ್ಟಾಗಿದೆ.

 

Sulekha