ಪಾಕ್ ವಿರುದ್ಧ ಎದೆಕೊಟ್ಟ ಅಬ್ದುಲ್ ಹಮೀದ್
1965 ವೀರನಿಗೆ ಯುಪಿ ಸರ್ಕಾರ ಅನ್ಯಾಯ!?

1965 ರಲ್ಲಿ ಪಾಕಿಸ್ತಾನ ಮತ್ತು ಭಾರತದ ನಡುವೆ ನಿರ್ಣಾಯಕ ಯುದ್ಧವೇನೋ ನಡೆಯಿತು. ಆದರೆ ಫಲಿತಾಂಶ ಮಾತ್ರ ಸಂಪೂರ್ಣ ಬೇರೆಯದ್ದೇ ಆಗಿತ್ತು. ಶ್ರೀನಗರವನ್ನು ತನ್ನ ಭೂಪಟದಲ್ಲಿ ಸೇರಿಸಿಕೊಳ್ಳುವ ಕನಸು ಕಾಣುತ್ತಾ ಭಾರತಕ್ಕೆ ಸೇನೆಯನ್ನು ನುಗ್ಗಿಸಿದ್ದ ಪಾಕ್ ತನ್ನ ಸಾಂಸ್ಕೃತಿಕ ರಾಜಧಾನಿ ಲಾಹೋರ್ ಉಳಿಸಿಕೊಳ್ಳಲು ಒದ್ದಾಡುವಂತಾಯ್ತು. ಕೊನೆಕೊನೆಗೆ ತನ್ನದೇ ಗಾಯಗಳಿಗೆ ಔಷಧಿ ಹಚ್ಚುತ್ತಾ ಟ್ಯಾಂಕ್ನಂಥ ಮಹತ್ವದ ಯುದ್ಧೋಪಕರಣಗಳನ್ನು ಭಾರತದ ಗಡಿಯೊಳಗೇ ಬಿಟ್ಟು ಓಡಬೇಕಾಯಿತು.
1965ರಲ್ಲಿ ಪಾಕ್ ಮತ್ತ ಭಾರತದ ನಡುವೆ ನಡೆದ ಯುದ್ಧಕ್ಕೆ 60 ವರ್ಷ ತುಂಬುತ್ತಿದೆ. ಈ ಕದನ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಯಂಕಂದ್ರೆ ಭಾರತದ ಅರ್ಥ ವ್ಯವಸ್ಥೆ, ಮಿಲಿಟರಿ ಶಕ್ತಿಗಳು 2025ರಲ್ಲಿ ಅಂದ್ರೆ ಈಗ ಇದ್ದಂತೆ 1965ರಲ್ಲಿ ಇರಲಿಲ್ಲ. 1962ರಲ್ಲಿ ಚೀನಾ ಎದುರು ಸೋತಿದ್ದ ಭಾರತಕ್ಕೆ ಹತ್ತಾರು ಸಮಸ್ಯೆಗಳಿದ್ದವು. ಸೇನೆಯನ್ನು ಮರುವಿಂಗಡಿಸಿ, ಪುನರ್ ಸಂಘಟಿಸುವ ಪ್ರಯತ್ನಗಳು ನಡೆಯುತ್ತಿದ್ದವು. ಅಮೆರಿಕ, ರಷ್ಯಾದಿಂದ ನಿರೀಕ್ಷೆಯಂತೆ ರಕ್ಷಣಾ ವ್ಯವಹಾರಗಳಿಗೆ ಸಹಾಯ ಒದಗುತ್ತಿರಲಿಲ್ಲ. ಪಾಕಿಸ್ತಾನದ ಪರ ಅಮೆರಿಕ ವರ್ತಿಸುತ್ತಿತ್ತು. ರಕ್ಷಣಾ ಉಪಕರಣಗಳ ದೇಶೀಯ ಉತ್ಪಾದನೆಯೂ ಸಶಸ್ತ್ರಪಡೆಗಳ ಬೇಡಿಕೆಯನ್ನು ಈಡೇರಿಸುವ ಸ್ಥಿತಿಯಲ್ಲಿ ಇರಲಿಲ್ಲ.
ಇದೇ ಹೊತ್ತಿಗೆ ಪಾಕಿಸ್ತಾನವು ಹೊಸ ಟ್ಯಾಂಕ್ ಹಾಗೂ ಯುದ್ಧ ವಿಮಾನಗಳ ಬಲದಿಂದ ಜಂಬ ಕೊಚ್ಚಿಕೊಳ್ಳುತಿತ್ತು. ಸಂಕಷ್ಟದಲ್ಲಿರುವ ಭಾರತವನ್ನು ಹಣಿಯಬೇಕೆಂಬ ಆಸೆ ಅಲ್ಲಿನ ಸರ್ಕಾರ ಹಾಗೂ ಸೇನಾ ನಾಯಕತ್ವದ ಚುಕ್ಕಾಣಿ ಹಿಡಿದವರಲ್ಲಿ ಹೆಚ್ಚಾಗಿತ್ತು. ಇದಕ್ಕೆ ತಕ್ಕ ತಂತ್ರಗಳನ್ನು ಹೂಡುತ್ತಿದ್ದ ಪಾಕಿಸ್ತಾನ ಏಕಾಏಕಿ ಭಾರತದ ಮೇಲೆ ಆಕ್ರಮಣ ಮಾಡಿತ್ತು. ಆದರೆ ಪಾಕಿಸ್ತಾನದ ಯೋಚನೆಯಲ್ಲಿ ತಪ್ಪಾಗಿತ್ತು.. ಇವರಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರ ಇಲ್ಲ ಅಂತ ಅಂದ್ಕೊಂಡಿತ್ತು. ಆದ್ರೆ ಭಾರತದ ಬಳಿ ಕೆಚ್ಚೆದೆಯ ಯೋಧರು ಇದ್ದರು. ಅದನ್ನ ಪಾಕ್ ಸರಿಯಾಗಿ ಅರ್ಥನೇ ಮಾಡಿಕೊಂಡಿಲ್ಲ. ಎಂಥದ್ದೇ ಅತ್ಯಾಧುನಿಕ ಉಪಕರಣಗಳಿದ್ದರೂ ಯುದ್ಧಗಳಲ್ಲಿ ಗೆಲುವು ನಿರ್ಣಯಿಸುವುದು ರಣತಂತ್ರ ರೂಪಿಸುವ ಸೇನಾ ನಾಯಕರ ಬುದ್ಧಿವಂತಿಕೆ ಮತ್ತು ಕದನಕಣದಲ್ಲಿ ನಿಂತು ಹೋರಾಡುವ ಯೋಧರ ಸ್ಥೈರ್ಯ ಮತ್ತು ಧೈರ್ಯ ಭಾರತದ ಬಳಿ ಇತ್ತು.
1965ರ ಭಾರತ-ಪಾಕ್ ಯುದ್ಧದಲ್ಲಿ ಸೇನೆಯ ಯುದ್ಧೋತ್ಸಾಹ ಕಂಪನಿ ಕ್ವಾರ್ಟರ್ ಮಾಸ್ಟರ್ ಹವಾಲ್ದಾರ್ ಅಬ್ದುಲ್ ಹಮೀದ್ ಅವರ ಕೆಚ್ಚಿನ ಹೋರಾಟ. ಪ್ಯಾಟನ್ ಟ್ಯಾಂಕ್ಗಳಂಥ ಅತ್ಯಾಧುನಿಕ ಯುದ್ಧಯಂತ್ರಗಳ ಎದುರು ಇವರ ತೆಗೆದುಕೊಂಡು ಹೋಗಿದ್ದ ಜೀಪ್ ಮೌಂಟ್ ಗನ್ ಒಂದು ಆಟಿಕೆಯಂತಿತ್ತು. ಕಬ್ಬಿನಗದ್ದೆಯಲ್ಲಿ ವ್ಯೂಹಕಟ್ಟಿಕೊಂಡು ನಿಂತಿದ್ದ ಟ್ಯಾಂಕ್ಗಳಿಗೆ ಎದೆಯೊಡ್ಡಿ ನಡೆಸಿದ ಏಕಾಂಗಿ ಹೋರಾಟದಲ್ಲಿ 7 ಗಳನ್ನು ನಾಶಪಡಿಸಿ ಭಾರತದ ಗೆಲುವಿಗೆ ತಮ್ಮ ಬಲಿದಾನದಿಂದಲೇ ದಿಟ್ಟ ಮುನ್ನುಡಿ ಬರೆದರು. ಒಂದು ದೇಶದ ಟ್ಯಾಂಕ್ ಪಡೆಯು ವ್ಯೂಹ ಕಟ್ಟಿಕೊಂಡು ಹೋರಾಡಿದಾಗ ಎದುರಾಳಿ ಸೇನೆಯ ಟ್ಯಾಂಕ್ಗಳನ್ನು ನಾಶಪಡಿಸುವಷ್ಟು ಟ್ಯಾಂಕ್ಗಳನ್ನು ಇವು ಓಬಿರಾಯನ ಕಾಲದ ಜೀಪ್ಮೌಂಟ್ ಗನ್ ಹಿಡಿದು ಸುಟ್ಟು ಹಾಕಿದ್ದರು.
1965ರ ಯುದ್ಧಕ್ಕೆ ಕಾರಣವೇನು?
1965ರ ಯುದ್ಧದ ಆರಂಭದ ದಿನಗಳವು. ಸೆಪ್ಟೆಂಬರ್ 6ರಂದು ಜಮ್ಮು ಮತ್ತು ಕಾಶ್ಮೀರದ ಚಾಂಬ್ ವಲಯದಲ್ಲಿ ಭಾರತೀಯ ಸೇನೆ ನಡೆಸಿದ ಹಠಾತ್ ದಾಳಿಯಿಂದ ಪಾಕಿಸ್ತಾನಕ್ಕೆ ಅಚ್ಚರಿಯಾಗಿತ್ತು. ಖೇಮ್ಕರನ್ ವಲಯದ ಹಲವು ಠಾಣೆಗಳಿಂದ ಪಾಕಿಸ್ತಾನ ಸೇನೆಯು ಹಿಂದೆ ಸರಿಯಬೇಕಾಯಿತು. ಆದರೆ ಚುರುಕಾಗಿ ಮರುಸಂಘಟನೆಗೊಂಡ ಪಾಕ್ ಸೇನೆ, ತನ್ನ 1ನೇ ಸಶಸ್ತ್ರ ಡಿವಿಷನ್ ಅನ್ನು ಪ್ರತಿದಾಳಿಗೆ ನಿಯೋಜಿಸಿತು. ಪಂಜಾಬ್ ಪ್ರಾಂತ್ಯದ ರಾಯ ಮತ್ತು ಬಿಯಾಸ್ ಪಟ್ಟಣಗಳನ್ನು ವಶಪಡಿಸಿಕೊಳ್ಳುವ ಮೂಲಕ ಬಿಯಾಸ್ ಸೇತುವೆಯ ಹಿಡಿತ ಸಾಧಿಸುವುದು ಈ ಡಿವಿಷನ್ಗೆ ಕೊಟ್ಟಿದ್ದ ಗುರಿ. ಒಮ್ಮೆ ಈ ಸೇತುವೆಯ ಮೇಲೆ ಪಾಕ್ ಸೇನೆಗೆ ಹಿಡಿತ ಸಿಕ್ಕಿದ್ದರೆ ಪಂಜಾಬ್ ರಾಜ್ಯದ ಅರ್ಧಕ್ಕೂ ಹೆಚ್ಚಿನ ಭೂ ಪ್ರದೇಶವು ಭಾರತದೊಂದಿಗೆ ಸಂಬಂಧ ಕಡಿತುಕೊಳ್ಳುತ್ತಿತ್ತು. ಪಾಕ್ಸೇನೆಯ ಚುರುಕಿನ ಮರುಸಂಘಟನೆ ಮತ್ತು ಕ್ಷಿಪ್ರಗತಿಯಲ್ಲಿ ಅವರು ಮಾಡಿದ ದಾಳಿಯನ್ನು ಎದುರಿಸಲು ಗಡಿಯಲ್ಲಿ ಕಾವಲಿದ್ದ ಭಾರತದ 4ನೇ ಮೌಂಟೇನ್ ಡಿವಿಷನ್ ಸೈನಿಕರು ಸಿದ್ಧರಿರಲಿಲ್ಲ. ಗಡಿಯಿಂದ 5 ಕಿಮೀ ದೂರದಲ್ಲಿರುವ ಖೇಮ್ ಕರನ್ ಮತ್ತು 7 ಕಿಮೀ ದೂರದಲ್ಲಿರುವ ಅಸಲ್ ಉತ್ತರ್ ಹಳ್ಳಿಗಳು ಪಾಕಿಸ್ತಾನ ಸೇನೆಯ ವಶವಾದವು. ಸೆಪ್ಟೆಂಬರ್ 8ರಿಂದ 10ರವರೆಗೆ ನಡೆದ ಕದನದಲ್ಲಿ ಪಾಕಿಸ್ತಾನದ ದಾಳಿಯನ್ನು ದೃಢವಾಗಿ ಹಿಮ್ಮೆಟ್ಟಿಸಲಾಯಿತು. ಖೇಮ್ಕರನ್ವರೆಗೂ ಪಾಕಿಸ್ತಾನದ ಸೈನಿಕರು ಭಾರತೀಯ ಸೈನಿಕರು ಬೆನ್ನಟ್ಟಿ ಹೋಗಿದ್ದರು. ಆ ಕಾಲದಲ್ಲಿ ಪಾಕಿಸ್ತಾನ ಸೇನೆಯ ಅತಿದೊಡ್ಡ ಶಕ್ತಿಯೆನಿಸಿದ್ದ ಅಮೆರಿಕ ನಿರ್ಮಿತ 97 ಪ್ಯಾಟನ್ ಟ್ಯಾಂಕ್ಗಳನ್ನು ಪಾಕಿಸ್ತಾನ ಸೇನೆಯು ಭಾರತದ ನೆಲದಲ್ಲಿ ಕಳೆದುಕೊಂಡಿತ್ತು. ವಶಪಡಿಸಿಕೊಂಡ ಟ್ಯಾಂಕ್ಗಳನ್ನು ಯುದ್ಧದ ನಂತರ ಭಾರತೀಯ ಸೇನೆಯು ಭಿಕ್ಕಿವಿಂಡ್ ಎಂಬಲ್ಲಿ ಪ್ರದರ್ಶಿಸಿತು. ಅಸಲ್ ಉತ್ತರ್ ಹಳ್ಳಿಗೆ 10 ಕಿಮೀ ದೂರದ ಈ ಸ್ಥಳವನ್ನು ನಂತರದ ದಿನಗಳಲ್ಲಿ ‘ಪ್ಯಾಟನ್ ನಗರ್’ ಎಂದೇ ಹೆಸರಿಸಲಾಯಿತು.
ಅಬ್ದುಲ್ ಹಮೀದ್ ಅವರ ಪಾತ್ರವೇನು?
ಅಸಲ್ ಉತ್ತರ್ ಸುತ್ತಮುತ್ತಲು ಹರಡಿಕೊಂಡಿದ್ದ ಪಾಕಿಸ್ತಾನದ ಟ್ಯಾಂಕ್ಗಳನ್ನು ಹುಡುಕಿ ಬೇಟೆಯಾಡಲೆಂದು ಅಬ್ದುಲ್ ಹಮೀದ್ ಅವರನ್ನು ಟ್ಯಾಂಕ್ ನಾಶಕ ಗನ್ ಅಳವಡಿಸಿದ ಜೀಪ್ನಲ್ಲಿ ಕಳುಹಿಸಲಾಗಿತ್ತು. ಈ ಪ್ರದೇಶದಲ್ಲಿ ಗಸ್ತು ತಿರುಗಲೆಂದು ಬಂದ ಪಾಕಿಸ್ತಾನದ ಕಮಾಂಡರ್ಗಳ ಮೇಲೆ ಭಾರತೀಯ ಸೇನೆಯ 4ನೇ ಗ್ರೆನೇಡಿಯರ್ಸ್ ಯೋಧರು ಗುಂಡು ಹಾರಿಸಿದರು. ಗುಂಡಿನ ಚಕಮಕಿಯಲ್ಲಿ ತೀವ್ರವಾಗಿ ಗಾಯಗೊಂಡು ಮೃತಪಟ್ಟ ಪಾಕಿಸ್ತಾನ ಫಿರಂಗಿ ದಳದ ಕಮಾಂಡರ್ ಎ.ಆರ್.ಶಮಿ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರವನ್ನು ಭಾರತೀಯ ಸೇನೆಯು ಸಕಲ ಮಿಲಿಟರಿ ಗೌರವದೊಂದಿಗೆ ನೆರವೇರಿಸಿತು. ಸೆಪ್ಟೆಂಬರ್ 9 ಮತ್ತು 10ರಂದು ಸಾಕಷ್ಟು ಟ್ಯಾಂಕ್ಗಳನ್ನು ಅಬ್ದುಲ್ ಹಮೀದ್ ನಾಶಪಡಿಸಿದರು. ಇಲ್ಲಿನ ಕಬ್ಬಿನ ಗದ್ದೆಗಳಲ್ಲಿದ್ದ ಪಾಕಿಸ್ತಾನ ಸೇನೆಯು ಟ್ಯಾಂಕ್ಗಳನ್ನು ಗುರುತಿಸಿದರು. ಪಾಯಿಂಟ್ ಬ್ಲಾಂಕ್ ರೇಂಜ್ನಿಂದ ಅಂದರೆ ಅತ್ಯಂತ ಸನಿಹದಿಂದ ಕ್ಷಿಪ್ರಗತಿಯಲ್ಲಿ ನಡೆಸಿದ ದಾಳಿಗೆ 4 ಪ್ಯಾಟನ್ ಟ್ಯಾಂಕ್ಗಳು ನಾಶವಾದವು. ಮತ್ತೊಂದು ಟ್ಯಾಂಕ್ ನಿಷ್ಕ್ರಿಯಗೊಂಡಿತು. ಎರಡು ದಿನಗಳಲ್ಲಿ ಒಟ್ಟು 8 ಟ್ಯಾಂಕ್ಗಳನ್ನು ಹಮೀದ್ ನಾಶಪಡಿಸಿದ್ದರು. ಇದೇ ವೇಳೆ ಪಾಕಿಸ್ತಾನದ ಟ್ಯಾಂಕ್ ಒಂದು ಉಡಾಯಿಸಿದ ಶೆಲ್ ಅವರಿದ್ದ ಜೀಪ್ಗೆ ನೇರವಾಗಿ ಅಪ್ಪಳಿಸಿದ್ದರಿಂದ ಜೀಪ್ನೊಂದಿಗೆ ಅವರ ದೇಹವೂ ಛಿದ್ರವಾಯಿತು. ಆ ಕಾಲದಲ್ಲಿ ಅಮೆರಿಕ ನಿರ್ಮಿತ ಪ್ಯಾಟನ್ ಟ್ಯಾಂಕ್ಗಳು ಎಂದರೆ ಎಂದಿಗೂ ಸೋಲದ ಯುದ್ಧಯಂತ್ರಗಳು ಎಂಬ ಭಾವನೆ ಜಗತ್ತಿನ ಹಲವು ದೇಶಗಳ ಸೈನಿಕರಲ್ಲಿ ಮನೆಮಾಡಿತ್ತು. ತಮ್ಮ ಧೈರ್ಯ ಮತ್ತು ದಿಟ್ಟ ಹೋರಾಟದಿಂದ ಈ ಭ್ರಮೆಯನ್ನು ಕಳಚಿದವರು ಅಬ್ದುಲ್ ಹಮೀದ್. ಅವರಿಗೆ ಮರಣೋತ್ತರ ಪರಮವೀರ ಚಕ್ರ ಘೋಷಿಸುವ ಮೂಲಕ ಭಾರತ ಸರ್ಕಾರವು ಅವರ ಸ್ಥೈರ್ಯವನ್ನು ಗೌರವಿಸಿತು. ಅಸಲ್ ಉತ್ತರ್ ಯುದ್ಧ ಸ್ಮಾರಕದ ಪ್ರವೇಶ ದ್ವಾರದ ಸಮೀಪ ಇಂದಿಗೂ ಪಾಕ್ ಸೇನೆಯ ಟ್ಯಾಂಕ್ ಒಂದನ್ನು ಕಾವಲಿಗೆ ನಿಲ್ಲಿಸಲಾಗಿದೆ. ಅಂದು, ಅಂದರೆ 1965ರಲ್ಲಿ ಅಬ್ದುಲ್ ಹಮೀದ್ರಂಥ ಸಾವಿರಾರು ಯೋಧರು ಪ್ಯಾಟನ್ ಟ್ಯಾಂಕ್ಗಳಿಗೆ ಹೆದರಿ ತುಸು ಹಿಂಜರಿದಿದ್ದರೂ ಇಂದು ಭಾರತದ ಭೂಪಟ ಹೀಗೆ ಇರುತ್ತಿರಲಿಲ್ಲ. ಪಾಕ್ ಆಕ್ರಮಿತ ಕಾಶ್ಮೀರದಂತೆ ಪಾಕ್ ಆಕ್ರಮಿತ ಪಂಜಾಬ್ ಎಂಬ ಮತ್ತೊಂದು ಪ್ರಾಂತ್ಯ ಪಾಕಿಸ್ತಾನದ ಭೂಪಟದಲ್ಲಿ ಸ್ಥಾನ ಪಡೆಯುತ್ತಿತ್ತು.
ಶಾಲೆಗೆ ಇಟ್ಟಿದ್ದ ಹೆಸರನ್ನ ತೆಗೆದ ಯುಪಿ ಸರ್ಕಾರ!?
ಇನ್ನೂ ಮೂಲತ ಉತ್ತರ ಪ್ರದೇಶದ ಗಾಜೀಪುರ್ ಜಿಲ್ಲೆಯ ಧರ್ಮಪುರದ ಅಬ್ದುಲ್ ಹಮೀದ್ ಅವರು ಓದಿದ ಧರ್ಮಪುರ್ನ ಶಾಲೆಗೆ ಅವರ ಹೆಸರನ್ನಿಟ್ಟು ಅಂದಿನ ಸರ್ಕಾರ ಅವರನ್ನು ಗೌರವಿಸಿತ್ತು. ಇದೀಗ ಈ ಶಾಲೆಯ ನವೀಕರಣದ ನೆಪದಲ್ಲಿ ಉತ್ತರ ಪ್ರದೇಶ ಸರ್ಕಾರ ಈ ಶಾಲೆಗಿದ್ದ ಪರಮ್‍ವೀರ ಚಕ್ರ ಅಬ್ದುಲ್ ಹಮೀದ್ ಶಾಲೆ ಹೆಸರನ್ನು ತೆಗೆದು ಪಿಎಮ್‍ಶ್ರೀ ಸಂಯುಕ್ತ ವಿದ್ಯಾಲಯವೆಂದು ನಾಮಕರಣ ಮಾಡಿದೆ. ಶಾಲೆಯೆದುರು ಅಬ್ದುಲ್ ಹಮೀದ್ ಹೆಸರಿನಲ್ಲಿದ್ದ ಬೋರ್ಡನ್ನೂ ಕಿತ್ತೆಸೆಯಲಾಗಿದೆ. ಆದರೆ ಅಬ್ದುಲ್ ಹಮೀದ್ ಕುಟುಂಬಸ್ಥರು, ಅಭಿಮಾನಿಗಳು, ಊರವರು ಹಾಗೂ ಮಾಜಿ ಸೈನಿಕರು, ಸೇನಾಧಿಕರಿಗಳು ಇದರ ಬಗ್ಗೆ ದನಿಯೆತ್ತಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಲೇ ಉತ್ತರ ಪ್ರದೇಶ ಸರ್ಕಾರ ಪ್ಯಾಚ್ ವರ್ಕಿಗಿಳಿದು, ಮೊದಲು ಸರ್ಕಾರಿ ದಾಖಲೆಗಳಲ್ಲಿ ಅಬ್ದುಲ್ ಹಮೀದ್ ಹೆಸರಿನಲ್ಲಿ ಯಾವ ಶಾಲೆಯೂ ಇರಲಿಲ್ಲ ಎಂದು ಭಂಡತನ ಪ್ರದರ್ಶಿಸಿದೆ. ಆದರೆ ಮಾಜಿ ಸೇನಾಧಿಕಾರಿಗಳು ಹಾಗೂ ಅಬ್ದುಲ್ ಹಮೀದ್ ಕುಟುಂಬಸ್ಥರು, ಅಭಿಮಾನಿಗಳು ದೊಡ್ಡ ಮಟ್ತದಲ್ಲಿ ಪ್ರತಿಭಟನೆ ಮಾಡುತ್ತಿದ್ದಂತೆ ಶಾಲೆಯ ಹೆಸರನ್ನು ಬದಲಾಯಿಸದೇ, ಅದನ್ನು ಅಬ್ದುಲ್ ಹಮೀದ್ ಹೆಸರಿನಲ್ಲೇ ನವೀಕರಣ ಮಾಡಲಿದ್ದೇವೆ ಎಂದು ಹೇಳಿದ್ದಾರೆ.
ಒಟ್ನಲ್ಲಿ 1965ರ ಯುದ್ಧವನ್ನು ತಾನು ಗೆದ್ದಿರುವುದಾಗಿ ಹೇಳಿಕೊಂಡು ಪಾಕಿಸ್ತಾನವು ಆ ದಿನವನ್ನು ‘ಡಿಫೆನ್ಸ್ ಆಫ್ ಪಾಕಿಸ್ತಾನ್’ ಎಂದು ಆಚರಿಸಿಕೊಳ್ಳುತ್ತಿದ್ದರೂ ನಿಜವಾಗಿಯೂ ಆ ಯುದ್ಧವನ್ನು ಗೆದ್ದಿರುವುದು ಭಾರತವೇ. ಪಾಕಿಸ್ತಾನ ಸೇನೆಯನ್ನು ಮೇಜರ್ ಜನರಲ್ ನಾಸಿರ್ ಖಾನ್ ಮತ್ತು ಬ್ರಿಗೇಡಿಯರ್ ಎ.ಆರ್.ಶಮಿ ಮುನ್ನಡೆಸಿದರು. ಒಟ್ಟು 264 ಟ್ಯಾಂಕ್ಗಳನ್ನು ಪಾಕಿಸ್ತಾನದ ಕದನಕ್ಕೆ ತಂದಿತ್ತು. ಮೇಲ್ನೋಟಕ್ಕೆ ಪಾಕಿಸ್ತಾನವೇ ಯುದ್ಧದಲ್ಲಿ ಗೆಲ್ಲಬಹುದು ಎಂಬ ಭಾವನೆ ಮೂಡಿತ್ತು. ಆದರೆ ಭಾರತೀಯ ಸೇನೆಯ ಕಮಾಂಡರ್ಗಳು ರೂಪಿಸಿದ ನಿಖರ ಯುದ್ಧತಂತ್ರ ಮತ್ತು ಸೈನಿಕರು ತೋರಿದ ಸ್ಥೈರ್ಯ ಮತ್ತು ಸಾವಿನೆದುರು ದೃಢವಾಗಿ ನಿಂತು ಹೋರಾಡುವ ಮನೋಭಾವದಿಂದ ಭಾರತಕ್ಕೆ ಗೆಲುವು ದಕ್ಕಿತು. 1965ರ ಯುದ್ಧದಲ್ಲಿ ಪಾಕಿಸ್ತಾನ ಅನುಭವಿಸಿದ ಸಾಲುಸಾಲು ಸೋಲಿಗೆ ಅಸಲ್ ಉತ್ತರ್ ಮುನ್ನುಡಿ ಬರೆಯಿತು.