ಬಿಜೆಪಿ ರಥಕ್ಕೆ ಯತ್ನಾಳ್ ಸಾರಥಿ? – ಅಪ್ಪ, ಮಕ್ಕಳ ಆಟಕ್ಕೆ ಬಿಗ್ ಬ್ರೇಕ್‌!?
ಯತ್ನಾಳ್ ಬಣದವರೇ NEXT ಸಿಎಂ?

ಬಿಜೆಪಿ ರಥಕ್ಕೆ ಯತ್ನಾಳ್ ಸಾರಥಿ? – ಅಪ್ಪ, ಮಕ್ಕಳ ಆಟಕ್ಕೆ ಬಿಗ್ ಬ್ರೇಕ್‌!?ಯತ್ನಾಳ್ ಬಣದವರೇ NEXT ಸಿಎಂ?

ವಕ್ಫ್ ಆಸ್ತಿ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  ಸಮರ ಸಾರಿದ್ದಾರೆ.. ಆದ್ರೆ ಇದು ಯತ್ನಾಳ್ ಹಾಗೂ ಬಿಎಸ್ ಯಡಿಯೂರಪ್ಪ ಕಾಳಗವಾಗಿ ಬದಲಾಗಿದೆ. ವಕ್ಫ್ ಬೋರ್ಡ್‌ , ಕಾಂಗ್ರೆಸ್ ಜೊತೆ ಬಿಎಸ್‌ವೈ ಫ್ಯಾಮಿಲಿ ಮೇಲೆ ಯತ್ನಾಳ್ ಕೆಂಡ ಕಾರುತ್ತಿದ್ದಾರೆ. ರಾಜ್ಯ ರಾಜಕೀಯ ಈಗ ಯತ್ನಾಳ್ vs ಬಿಸ್‌ವೈ ಎನ್ನುವಂತಾಗಿದೆ. ಯತ್ನಾಳ್  ಹೇಳಿಕೆಗಳನ್ನು ಕೆಲ ಬಿಜೆಪಿ ನಾಯಕರುಗಳು ಸಮರ್ಥಿಸಿಕೊಳ್ಳುತ್ತಿದ್ರೆ, ಬಿಎಸ್ ಯಡಿಯೂರಪ್ಪ ಹಾಗೂ ವಿಜಯೇಂದ್ರ ಸಿಡಿಮಿಡಿಗೊಂಡಿದ್ದಾರೆ. ಹಾಗಿದ್ರೆ ಕಮಲ ಪಾಳಯದಲ್ಲಿ ಏನ್ ಆಗ್ತಿದೆ?, ಯತ್ನಾಳ್  ಹೇಳಿಕೆ ಏನೆಲ್ಲಾ ಎಫೆಕ್ಟ್ ಆಗುತ್ತೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರೋಹಿತ್ ಎಂಟ್ರಿ.. KL ಎತ್ತಂಗಡಿ! – ಸ್ಲಾಟ್ ಚೇಂಜ್ Or ಟೀಂನಿಂದ ಔಟ್?

ರಾಜ್ಯ ಬಿಜೆಪಿಯಲ್ಲಿ ಬಣ ಗುದ್ದಾಟ ಮುಗಿಲುಮುಟ್ಟಿದೆ. ಬಿಜೆಪಿಯಲ್ಲಿ ಎರಡು ಬಣಗಳು ಬಹಿರಂಗವಾಗಿಯೇ ಯುದ್ಧ ಘೋಷಿಸಿದ್ದು, ಆರೋಪ ಪ್ರತ್ಯಾರೋಪಗಳು ತೀವ್ರಗೊಂಡಿವೆ. ಯತ್ನಾಳ್ ಹಾಗೂ ವಿಜಯೇಂದ್ರ ಬಣ ಗುದ್ದಾಟ ಪಕ್ಷದ ಸಂಘಟನೆಯ ಮೇಲೆ ಎಪೆಕ್ಟ್ ಆಗುತ್ತಿದೆ. ಫಿಲ್ಟರ್‌ ಇಲ್ದೆ ಮಾತನಾಡುವ ಯತ್ನಾಳ್ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಬಹಿರಂಗ ಹೇಳಿಕೆಗಳನ್ನು ಮುಂದುವರೆಸಿದ್ದಾರೆ.  ಹಾಗೇ ಯಡಿಯೂರಪ್ಪ ಕೂಡ ಯತ್ನಾಳ್ ವಿರುದ್ಧ ರೊಚ್ಚಿಗೆಳುತ್ತಿದ್ದಾರೆ. ಬಿಜೆಪಿ ನಾಯಕತ್ವದ ವಿರುದ್ದ ಯತ್ನಾಳ್ ಬಂಡಾಯ ಎದ್ದಿದ್ದಾರೆ. ಅವರಿಗೆ ಸಾಕಷ್ಟು ಹಿರಿಯ ನಾಯಕರ ಬೆಂಬಲ ಕೂಡ ಸಿಕ್ಕಿದೆ. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ ಯತ್ನಾಳ್ ಹಲವು ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿದ್ದರು. ಬಿಎಸ್ ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಮಾಡಿದ್ದರು. ಅಲ್ಲದೆ ಪುತ್ರ ವಿಜಯೇಂದ್ರ ಅವರು ಆಡಳಿತದಲ್ಲಿ ಯಾವ ರೀತಿಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಬಗ್ಗೆಯೂ ಗಂಭೀರ ಆರೋಪಗಳನ್ನು ಮಾಡಿದ್ದರು. ವಕ್ಫ್ ವಿರುದ್ಧ ಕೂಡ ಪ್ರತ್ಯೇಕ ಬಣದ ಮೂಲಕಹೋರಾಟ ಆರಂಭಸಿರುವ ಯತ್ನಾಳ್ ಬಿಎಸ್‌ವೈ ಫ್ಯಾಮೀಲಿ  ವಿರುದ್ಧ ಹುಡುಗುತ್ತಿದ್ದಾರೆ. ಈ ನಡುವೆ  ‘ನಮ್ಮ ತಂಡದವರೇ ಮುಖ್ಯಮಂತ್ರಿ’ ಎಂದು ಯತ್ನಾಳ್ ಹೇಳಿರುವ ಮಾತು ಸದ್ಯ ಚರ್ಚೆಗೆ ಗ್ರಾಸವಾಗಿದೆ.

ವಿಜಯೇಂದ್ರ ಮತ್ತು ಬಿಎಸ್‌ವೈಗೆ ಟಾಂಗ್‌ ಕೊಟ್ಟ ಯತ್ನಾಳ್    

ವಕ್ಫ್‌ ಮಂಡಳಿ ಆಸ್ತಿ ವಿವಾದ ಭುಗಿಲೆದ್ದಿದ್ದು ಯತ್ನಾಳ್ ನಡೆಗೆ ಸ್ವಪಕ್ಷದಲ್ಲಿ ಆಕ್ಷೇಪ ಹೆಚ್ಚಾಗಿದೆ. ವರಿಷ್ಠರ ಗಮನಕ್ಕೆ ತರುವಂತೆ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ವಕ್ಫ್‌ ಆಸ್ತಿ ವಿವಾದದ ವಿರುದ್ಧ ಯತ್ನಾಳ್ ಹಾಗೂ ರಾಜ್ಯದ ಬಿಜೆಪಿ ನಾಯಕರು ದೊಡ್ಡದಾಗಿ ಧ್ವನಿ ಎತ್ತಿದ್ದಾರೆ. ಈ ನಡುವೆ ವಕ್ಫ್ ವಿರುದ್ಧ ರೊಚ್ಚಿಗೆದ್ದ ಯತ್ನಾಳ್  ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಜನರು ಸಿಕ್ಕಾಪಟ್ಟೆ ಬೇಸತ್ತಿದ್ದಾರೆ. ಹೀಗಾಗಿ ಜನ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲಿದ್ದು ನಮ್ಮ ತಂಡದವರೇ ಮುಖ್ಯಮಂತ್ರಿಯಾಗಲಿದ್ದಾರೆ. ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಅಧಿಕಾರ ನಮಗೇ ಸಿಗಲಿದೆ’ ಎಂದು ಹೇಳಿದ್ದಾರೆ.  ಈ ಹೇಳಿಕೆ  ಭಾರೀ ಚರ್ಚೆಗೆ ಗ್ರಾಸವಾಗಿದೆ.ಅಲ್ಲದೇ ಬಿಜೆಪಿಯ ಕೆಲ ಮುಖಂಡರು ಬೆಂಗಳೂರಿನಲ್ಲಿ ಕುಳಿತಿರುವವರಿಗೆ ಹೆದರಿ ನಮ್ಮ ಹೋರಾಟಕ್ಕೆ ಬಂದಿಲ್ಲ ಎಂದು ಹೇಳಿದ ಯತ್ನಾಳ್ ತಮ್ಮದೇ ಆದ ಶೈಲಿಯಲ್ಲಿ ಬಿಎಸ್‌ವೈ ಹಾಗೂ ವಿಜಯೇಂದ್ರಗೆ ಟಾಂಗ್ ಕೊಟ್ಟಿದ್ದಾರೆ.

 ‘ಎರಡು ಬೆರಳು ತೋರಿಸಿ ಹೋರಾಟ ಮಾಡೋರಲ್ಲ’

ರಾಯಚೂರಿನಲ್ಲಿ ಮತ್ತೆ ವಿರೋಧ ಬಣಕ್ಕೆ  ಯತ್ನಾಳ್ ಟಾಂಗ್ ನೀಡಿದ್ದಾರೆ. ವಕ್ಫ್ ವಿಚಾರವಾಗಿ ನಾವು ಜನರ ಪರವಾಗಿ ಹೋರಾಟ ಮಾಡ್ತಿದ್ದೇವೆ.  ಎಲ್ಲಿ ನಮ್ಮ ಪಕ್ಷ ವೀಕ್ ಇದೆ, ಅಲ್ಲಿ ಸಂಘಟನೆ ಮಾಡಲು ಬಂದಿದ್ದೇವೆ. ನಾವು ಬರೋದ್ರಿಂದ ಎಂಎಲ್‌ಎ, ಎಂಪಿ ಸೀಟು ಹೆಚ್ಚಳ ಆಗುತ್ತೆ. ಯಾರಿಗೆ ನಮ್ಮ ದೇಶದ ಬಗ್ಗೆ ಕಳಕಳಿ ಇದೆಯೋ ಅವರು ಹೋರಾಟಕ್ಕೆ ಬನ್ನಿ. ನಾವು ಪಕ್ಷದ ಪರವಾಗಿ ಹೋರಾಟ ಮಾಡಿ ನಾಯಕರಾದವರು. ಮಧ್ಯದಲ್ಲಿ ಬಂದು ನಾಯಕರಾದವರಲ್ಲ. ಬೆಂಗಳೂರಿನ ಫ್ರೀಡಮ್ ಪಾರ್ಕಿನಲ್ಲಿ ಕುಳಿತು ಎರಡು ಬೆರಳು ತೋರಿಸಿ ಹೋರಾಟ ಮಾಡೋರಲ್ಲ ಎಂದು ಬಿಎಸ್‌ವೈಗೆ ಟಾಂಗ್ ಕೊಟ್ಟಿದ್ದಾರೆ.

ಯತ್ನಾಳ್‌ಗೆ ಪರೋಕ್ಷ ಎಚ್ಚರಿಕೆ ನೀಡಿದ್ರಾ ಬಿಎಸ್‌ವೈ?

ಯತ್ನಾಳ್ ಹೋರಾಟದ ಬಗ್ಗೆ ಮಾತನಾಡಿದ ಬಿಎಸ್‌ ಯಡಿಯೂರಪ್ಪ, ‘ಪಕ್ಷದಲ್ಲಿ ಭಿನ್ನಾಭಿಪ್ರಾಯ ಇರುವುದು ನಿಜ. ನಾವು ಇದನ್ನು ಕೇಂದ್ರದ ನಾಯಕರ ಗಮನಕ್ಕೆ ತಂದಿದ್ದೇವೆ. ಕೆಲವೇ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ. ಪಕ್ಷದಲ್ಲಿ ಸಮಸ್ಯೆ ಇದ್ದರೆ ಸರಿಪಡಿಸೋಣ. ಪಕ್ಷದ ಹಿತದೃಷ್ಟಿಯಿಂದ ಚರ್ಚೆ ಮಾಡೋಣ. ಪಕ್ಷ ಬಲಪಡಿಸುವ ಕೆಲಸ ಮಾಡೋಣ’ ಎಂದು ಮನವಿ ಮಾಡಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆ ಸಾಕಷ್ಟು ಮಹತ್ವ ಪಡೆದಿದೆ, ಬಣ ಬಡಿದಾಟದಲ್ಲಿ ಬಿಜೆಪಿ ಒಡೆದು ಹೋದಿದ್ದು, ವರಿಷ್ಟು ಈ ಬಗ್ಗೆ ಏನ್ ಕ್ರಮ ಕೈಗೊಳ್ಳುತ್ತಾರೆ ಅನ್ನೋದು ಕುತೂಹಲ ಹೆಚ್ಚಾಗಿದೆ.

Shwetha M