ರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಕಾರ್ಯ ಹೇಗೆ ನಡೆಯುತ್ತೆ? – ಇದರ ಪ್ರಕ್ರಿಯೆಗಳೇನು?
ಅಯೋಧ್ಯೆಯ ಭವ್ಯ ರಾಮಮಂದಿರಕ್ಕೆ ರಾಮಲಲ್ಲಾನ ಮೂರ್ತಿ ತಲುಪಿಯಾಗಿದೆ. ಗರ್ಭಗುಡಿಯಲ್ಲಿ ಬಾಲರಾಮ ವಿರಾಜಮಾನನಾಗಿದ್ದಾನೆ. ಇನ್ನು ರಾಮನ ಮೂರ್ತಿಗೆ ಪ್ರಾಣವನ್ನ ತುಂಬೋದಷ್ಟೇ ಬಾಕಿ. ಅರ್ಥಾತ್ ಪ್ರಾಣಪ್ರತಿಷ್ಠಾಪನೆ. ಜನವರಿ 22ರಂದು ರಾಮ ಭಕ್ತ ಪ್ರಧಾನಿ ನರೇಂದ್ರ ಮೋದಿ ಪ್ರಾಣಪ್ರತಿಷ್ಠಾಪನೆ ಮಾಡಲಿದ್ದಾರೆ. ಇಡೀ ದೇಶವೇ ಆ ಒಂದು ಕ್ಷಣಕ್ಕಾಗಿ ಕಾಯ್ತಾ ಇದೆ. ಹಾಗಿದ್ರೆ ಪ್ರಾಣಪ್ರತಿಷ್ಠಾಪನೆ ಕಾರ್ಯ ಹೇಗೆ ನಡೆಯುತ್ತೆ? ಇದ್ರ ಪ್ರಕ್ರಿಯೆಗಳೇನು? ನಿಜಕ್ಕೂ ಪ್ರಾಣಪ್ರತಿಷ್ಠಾಪನೆ ಅಂದ್ರೆ ಏನು? ಹಿಂದೂ ಧರ್ಮದಲ್ಲಿ ಇಂಥದ್ದೊಂದು ಸಂಪ್ರದಾಯ ಇರೋದ್ಯಾಕೆ ಅನ್ನೋದ್ರ ಮಾಹಿತಿ ಇಲ್ಲಿದೆ.
ಪ್ರಾಣ ಪ್ರತಿಷ್ಠೆ ಅನ್ನೋದು ಹಿಂದೂಯಿಸಂ ಮತ್ತು ಜೈನಿಸಂನಲ್ಲಿರುವಂಥಾ ಒಂದು ಸಂಪ್ರದಾಯ. ಹಿಂದೂಗಳು ಮತ್ತು ಜೈನರು ಎರಡೂ ಧರ್ಮದ ಮಂದಿ ಮೂರ್ತಿಯ ಆರಾಧಕರೇ. ಎರಡೂ ಧರ್ಮದ ಪವಿತ್ರ ಸ್ಥಳಗಳಲ್ಲಿ ವಿಗ್ರಹವನ್ನ ಸ್ಥಾಪಿಸ್ತಾರೆ. ಮೂರ್ತಿ ಪ್ರತಿಷ್ಠಾಪನೆ ವೇಳೆ ಅರ್ಚಕರು ವೇದ ಪಠಣ ಮೂಲಕ ಸಂಪ್ರದಾಯಬದ್ಧವಾಗಿ ಭಗವಂತನ ಮೂರ್ತಿಯನ್ನ ಸ್ಥಾಪಿಸಲಾಗುತ್ತೆ. ಇಲ್ಲಿ ಪ್ರಾಣ ಅಂದ್ರೆ ಜೀವ ಶಕ್ತಿ ಅಂತಾ ಅರ್ಥ. ಪ್ರತಿಷ್ಠಾ ಅಂದ್ರೆ ಸ್ಥಾಪಿಸೋದು. ದೇವರ ಮೂರ್ತಿಗೆ ಪ್ರಾಣವನ್ನ ಸ್ಥಾಪಿಸೋದನ್ನ ಅಥವಾ ಅನುಷ್ಠಾನ ಮಾಡೋ-ದನ್ನ ಪ್ರಾಣಪ್ರತಿಷ್ಠಾ ಅಂತಾ ಕರೀತಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಗರ್ಭಗುಡಿ ಪ್ರವೇಶಿಸೋದೆ ತಪ್ಪಾ?- ರಾಮನ ಹೆಸರಲ್ಲಿ ಪಂಥ ಸಮರ ಶುರುವಾಯ್ತಾ?
ಹಾಗಿದ್ರೆ ಪ್ರಾಣಪ್ರತಿಷ್ಠಾಪನೆಗೂ ಮುನ್ನ ದೇವರ ಮೂರ್ತಿಗೆ ಅಂದ್ರೆ ಇಲ್ಲಿ ರಾಮಲಲ್ಲಾನ ಮೂರ್ತಿಯ ಸ್ಥಾನಮಾನವೇನು? ಈ ಪ್ರಕ್ರಿಯೆ ಹೇಗಿರುತ್ತೆ ಅನ್ನೋದನ್ನ ಕೂಡ ನೀವು ತಿಳಿದುಕೊಳ್ಳಲೇಬೇಕು. ಪ್ರಾಣಪ್ರತಿಷ್ಠೆಗೂ ಮುನ್ನ ಎಲ್ಲಾ ಮೂರ್ತಿಗಳು ಕೇವಲ ಒಂದು ಅಲಂಕಾರಿಕ ವಸ್ತು ಅಥವಾ ಒಂದು ಪ್ರತಿಮೆ ಅಂತಷ್ಟೇ ಪರಿಗಣಿಸಲಾಗುತ್ತೆ. ಆದ್ರೆ ಪ್ರಾಣಪ್ರತಿಷ್ಠಾಪನೆಯ ಮೂಲಕ ವಿಶೇಷ ಶಕ್ತಿಯನ್ನ ಮೂರ್ತಿಯೊಳಕ್ಕೆ ತುಂಬಿಸಲಾಗುತ್ತೆ. ಈ ಮೂಲಕ ಮೂರ್ತಿಯನ್ನ ದೇವರಾಗಿ ಪರಿವರ್ತಿಸಲಾಗುತ್ತೆ. ಈ ಪ್ರಕ್ರಿಯೆ ಮುಗಿದ ಬಳಿಕವೇ ಭಗವಂತನ ಮೂರ್ತಿಯನ್ನ ಪೂಜಿಸಬಹುದು.. ರಾಮಮಂದಿರದಲ್ಲಿ ರಾಮಲಲ್ಲಾನನ್ನ ಪೂಜಿಸಬಹುದು. ಹಾಗೆಯೇ ಮೂರ್ತಿ ನಿರ್ಮಾಣದಲ್ಲೂ ಅಷ್ಟೇ, ಕಲ್ಲಿನಿಂದ ಅಥವಾ ಲೋಹದಿಂದ, ಮಣ್ಣಿನಿಂದ ಇಲ್ಲಾ ಮರದಿಂದಲೇ ಕೆತ್ತನೆ ಮಾಡಬೇಕು ಅನ್ನೋ ನಿಯಮ ಕೂಡ ಇದೆ.
ಮೂರ್ತಿಯ ಪ್ರಾಣಪ್ರತಿಷ್ಠಾಪನೆಯನ್ನ ಯಾವಾಗ ಬೇಕೊ ಆಗ ಮಾಡುವಂತಿಲ್ಲ. ಪ್ರಾಣಪ್ರತಿಷ್ಠಾಪನೆ ಮಾಡೋಕೂ ನಿರ್ದಿಷ್ಟ ದಿನ, ಸಮಯ, ಮುಹೂರ್ತ ಅಂತಾ ಇರುತ್ತೆ. ಗ್ರಹಗಳ ಹೊಂದಾಣಿಕೆ ಮತ್ತು ಚಂದ್ರನ ಚಕ್ರಗಳನ್ನ ನೋಡಿಕೊಂಡು ಜ್ಯೋತಿಷಿಗಳು ದಿನಾಂಕ, ಸಮಯವನ್ನ ನಿಗದಿಪಡಿಸ್ತಾರೆ. ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗೆ ಜ. 22 ರಂದು ದಿನಾಂಕ ನಿಗದಿಪಡಿಸಲಾಗಿದೆ.
ಇನ್ನು ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗೂ ಮುನ್ನ ಅಯೋಧ್ಯೆಯ ಸರಯೂ ನದಿಯ ನೀರಿನಲ್ಲಿ ಇಡೀ ಗರ್ಭಗುಡಿಯನ್ನ ಸ್ವಚ್ಛಮಾಡಲಾಗುತ್ತೆ. ಬಳಿಕ ಪ್ರಾಣಪ್ರತಿಷ್ಠಾಪನೆ ಸಂದರ್ಭದಲ್ಲಿ 7 ಪವಿತ್ರ ನದಿಗಳ ನೀರನ್ನ ರಾಮಲಲ್ಲಾನ ಮೂರ್ತಿಗೆ ಅಭಿಷೇಕ ಮಾಡಲಾಗುತ್ತೆ. ಗಿಡಮೂಲಕೆಗಳು, ಹೂವು, ಮಂತ್ರಪಠಣದ ಮೂಲಕ ಕಲ್ಮಶವನ್ನ ಹೋಗಲಾಡಿಸಿ ಇಡೀ ವಾತಾವರಣವನ್ನೇ ಶುದ್ಧಿಗೊಳಿಸಲಾಗುತ್ತೆ. ಮೂರ್ತಿಯೊಳಗೆ ಸೇರುವ ಭಗವಂತ ಶ್ರೀರಾಮಚಂದ್ರನನ್ನ ಮಂತ್ರಗಳ ಮೂಲಕವೇ ಆಹ್ವಾನಿಸಲಾಗುತ್ತೆ. ಇದು ರಾಮಲಲ್ಲಾ ಮೂರ್ತಿಗೆ ಪ್ರಾಣವನ್ನ ತುಂಬುವ ಸಂದರ್ಭ. ಇಡೀ ಕಾರ್ಯಕ್ರಮದ ಹೃದಯ ಭಾಗ ಅಂದ್ರೆ ಇದುವೇ. ಪ್ರಾಣಪ್ರತಿಷ್ಠಾಪನೆಯಾದ ಬಳಿಕ ಮೂರ್ತಿಯ ಮುಂದೆ ಅಹಾರವನ್ನ ಇಟ್ಟು ಶ್ರೀರಾಮನಿಗೆ ಪೂಜೆ ಸಲ್ಲಿಸಲಾಗುತ್ತೆ. ಪ್ರಾಣಪ್ರತಿಷ್ಠಾಪನೆಯಿಂದಾಗಿ ಮೂರ್ತಿಯನ್ನ ದರ್ಶನ ಮಾಡಿದ ಕೂಡಲೇ ಭಕ್ತರು ರಾಮನ ಜೊತೆಗೆ ಇನ್ನಷ್ಟು ಆಳವಾಗಿ ಕನೆಕ್ಟ್ ಆಗ್ತಾರೆ. ಇದಕ್ಕಾಗಿಯೇ ಪ್ರಾಣಪ್ರತಿಷ್ಠಾಪನೆ ಅನ್ನೋದು ಇಷ್ಟೊಂದು ಮಹತ್ವ ಪಡೆದುಕೊಂಡಿರೋದು.
ಇನ್ನು ಕೋಟಿ ಕೋಟಿ ಭಕ್ತರ ಕನಸಿನ ರಾಮಮಂದಿರದ ಲೋಕಾರ್ಪಣೆಯ ಮಹತ್ವದ ಬಗ್ಗೆಯೂ ಒಂದಷ್ಟು ಹೇಳಲೇಬೇಕು. ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ, ರಾಮಲಲ್ಲಾನ ಪ್ರತಿಷ್ಠಾಪನೆಯನ್ನ ಕೇವಲ ಭಾರತೀಯರಷ್ಟೇ ಅಲ್ಲ, ಜಗತ್ತಿನಾದ್ಯಂತ ಹಿಂದೂಗಳು ಸಂಭ್ರಮಿಸ್ತಾ ಇದ್ದಾರೆ. ರಾಮಮಂದಿರ ಅನ್ನೋದು ಕೇವಲ ಒಂದು ಮಂದಿರ ಅಷ್ಟೇ ಅಲ್ಲ. ಇದು ಈ ನೆಲದ ಸಂಸ್ಕೃತಿಯ ಸಂಕೇತ. ನಮ್ಮ ದೇಶದ ಧಾರ್ಮಿಕತೆಯ ಸಂಕೇತ. ಶತಮಾನಗಳ ಹೋರಾಟದ ಸಂಕೇತ..ಭಾರತೀಯರ ಭಾವನೆಯ ಸಂಕೇತ.. ಜಾತಿ, ಧರ್ಮ, ಮೇಲು-ಕೀಳು ಇವೆಲ್ಲವನ್ನೂ ಮೀರಿ ರಾಮಾನಿಂದ ಮಾನವೀಯತೆಯ ಸಂದೇಶ ಇಡೀ ಜಗತ್ತಿಗೇ ರವಾನೆಯಾಗಲಿದೆ. ಜೊತೆಗೆ ರಾಮಮಂದಿರ ಅನ್ನೋದು ನಮ್ಮ ದೇಶದ ಆಧ್ಯಾತ್ಮಿಕತೆಯ ಮತ್ತೊಂದು ಕೇಂದ್ರವಾಗಿದೆ. ಕೇವಲ ಆಧ್ಯಾತ್ಮಿಕವಾಗಿ ಮಾತ್ರವಲ್ಲ ಅರ್ಥಿಕವಾಗಿ ದೇಶಕ್ಕೆ ಇನ್ನಷ್ಟು ಶಕ್ತಿ ತಂದು ಕೊಡಲಿದೆ. ಅಯೋಧ್ಯೆಯಂತೂ ದೇಶದ ಅತೀ ದೊಡ್ಡ ತೀರ್ಥಯಾತ್ರಾ ಸ್ಥಳವಾಗಲಿದೆ. ಹಾಗೆಯೇ ಅಯೋಧ್ಯೆ ಇನ್ಮುಂದೆ ಸಾಮಾಜಿಕ ಸಾಮರಸ್ಯದ ಸಂಕೇತವಾಗಲಿದೆ. ಹೀಗಾಗಿಯೇ 2024ರ ಜನವರಿ 22 ಭಾರತೀಯರ ಪಾಲಿಗೆ ನಿಜಕ್ಕೂ ಐತಿಹಾಸಿಕ ದಿನ.