ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಮುಂದಿರುವ ಸವಾಲುಗಳೇನು? – ವಿಜಯೇಂದ್ರ ಅವರ ವಿಜಯಕ್ಕಿರುವ ಆರು ಮೆಟ್ಟಿಲುಗಳು ಯಾವುದು?

ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಮುಂದಿರುವ ಸವಾಲುಗಳೇನು? – ವಿಜಯೇಂದ್ರ ಅವರ ವಿಜಯಕ್ಕಿರುವ ಆರು ಮೆಟ್ಟಿಲುಗಳು ಯಾವುದು?

ಬಿ.ವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗುವುದರೊಂದಿಗೆ ಕರ್ನಾಟಕ ಬಿಜೆಪಿಯಲ್ಲಿ ಹೊಸ ಯುಗಾರಂಭವಾಗಿದೆ.. ಕುಟುಂಬ ರಾಜಕಾರಣಕ್ಕೆ ಮಣೆಹಾಕೋದಿಲ್ಲ ಎನ್ನುವ ಬಿಜೆಪಿಯಲ್ಲಿ ಅಪ್ಪನ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಏರಿದೆ ಮಗ ಎಂಬ ದಾಖಲೆ ವಿಜಯೇಂದ್ರ ಹೆಸರಿಗೆ ಸೇರಿಕೊಂಡಿದೆ.. ಬಿಜೆಪಿ ಹೈಕಮಾಂಡ್ ಏನೇ ಲೆಕ್ಕಾಚಾರದೊಂದಿಗೆ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಮಾಡಿಕೊಂಡಿರಬಹುದು.. ಆದರೆ ವಿಜಯೇಂದ್ರ ರಾಜ್ಯಾಧ್ಯಕ್ಷರಾದ್ಮೇಲೆ ಹೇಗಿರಬೇಕು? ಏನು ಮಾಡಿದ್ರೆ ಅವರಿಗೆ ನಿಜವಾದ ವಿಜಯ ದೊರೆಯಲಿದೆ? ವಿಜಯೇಂದ್ರ ಅವರ ವಿಜಯಕ್ಕಿರುವ ಆರು ಮೆಟ್ಟಿಲುಗಳು ಯಾವುವು ಎಂಬ ವಿವರ ಇಲ್ಲಿದೆ. ಇದನ್ನೂ ಓದಿ: ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಿಜಯೇಂದ್ರ ಈಗ ಒಟ್ಟು 6 ಮೆಟ್ಟಿಲುಗಳನ್ನ ಹತ್ತಬೇಕಾಗುತ್ತೆ. ಇದೇನು ಸಾಮಾನ್ಯದ ಮೆಟ್ಟಿಲುಗಳನ್ನ 6 ಅತೀ ದೊಡ್ಡ ಸವಾಲುಗಳನ್ನ ಹೊಂದಿರುವಂಥಾ ಮೆಟ್ಟಿಲುಗಳೇ ಆಗಿವೆ. ಈ ಸವಾಲುಗಳ ಮೆಟ್ಟಿಲನ್ನ ಹತ್ತಿದ್ರೆ ಮಾತ್ರ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸಕ್ಸಸ್ ಆಗೋಕೆ ಸಾಧ್ಯ. ಹಾಗಿದ್ರೆ ಈ ಆರು ಮೆಟ್ಟಿಲುಗಳು ಯಾವುದೆಲ್ಲಾ? ಬಿಎಸ್​ವೈ ಪುತ್ರನ ಮುಂದೆ ಏನೆಲ್ಲಾ ಸವಾಲುಗಳಿವೆ ಅನ್ನೋ ವಿವರ ಈ ಕೆಳಗೆ ಇಲ್ಲಿದೆ.

ನಂ.6: ಪಕ್ಷದಲ್ಲಿರುವ ಹಿರಿಯ ನಾಯಕರ ಅಸಮಾಧಾನಗಳಿಗೆ ಇತಿಶ್ರೀ ಹಾಡಬೇಕು!

ಬಿಜೆಪಿಯಲ್ಲಿ ಯಡಿಯೂರಪ್ಪ ಕುಟುಂಬದ ಬಗ್ಗೆ, ಅದ್ರಲ್ಲೂ ವಿಶೇಷವಾಗಿ ವಿಜಯೇಂದ್ರ ಬಗ್ಗೆ ಕೆಲ ಹಿರಿಯ ನಾಯಕರು ಈ ಹಿಂದಿನಿಂದಲೂ ಅಸಮಾಧಾನ ಹೊಂದಿದ್ದಾರೆ. ಈ ಪೈಕಿ ಪ್ರಮುಖ ನಾಯಕ ಅಂದ್ರೆ ಬಸನಗೌಡ ಯತ್ನಾಳ್. ಕೇಸರಿಪಾಳಯದ ಹಿಂದುತ್ವದ ಫೈರ್​ಬ್ರ್ಯಾಂಡ್ ಯತ್ನಾಳ್ ಅವರು ಯಡಿಯೂರಪ್ಪ ಸಿಎಂ ಆಗದ್ದಾಗಲೇ ಬುಸುಗುಟ್ಟುತ್ತಲೇ ಇದ್ರು. ಬಿಎಸ್​ವೈ ಕುಟುಂಬ ರಾಜಕಾರಣ ಮಾಡ್ತಾರೆ ಅಂತಾ ಓಪನ್ ಆಗಿಯೇ ಹಲವು ಬಾರಿ ಹೇಳಿಕೊಂಡಿದ್ರು. ಭ್ರಷ್ಟಾಚಾರದ ಮಸಿ ಅಂಟಿಕೊಂಡಿದೆ ಅನ್ನೋ ಆರೋಪವನ್ನ ಕೂಡ ಮಾಡಿದ್ರು. ವಿಜಯೇಂದ್ರ ಬಗ್ಗೆಯಂತೂ ಯತ್ನಾಳ್​​ಗೆ ತೀವ್ರ ಅಸಮಾಧಾನವಿದೆ. ಬಿಎಸ್​​ವೈ ಸರ್ಕಾರದಲ್ಲಿ ವಿಜಯೇಂದ್ರ ಹಸ್ತಕ್ಷೇಪ ಜೋರಾಗಿದೆ. ಆಗ ಶಾಸಕ ಕೂಡ ಆಗದೇ ಇದ್ರೂ ಸರ್ಕಾರದ ಮೇಲೆ ಪ್ರಭಾವ ಬೀರುತ್ತಿದ್ದಾರೆ ಅಂತೆಲ್ಲಾ ಯತ್ನಾಳ್ ವಿಜಯೇಂದ್ರ ವಿರುದ್ಧ ಹೇಳಿಕೆಗಳನ್ನ ನೀಡ್ತಾನೆ ಇದ್ರು. ಆಗ ವಿಜಯೇಂದ್ರ ಪರೋಕ್ಷವಾಗಿ ಯತ್ನಾಳ್​ಗೆ ಕೌಂಟರ್​ ಕೊಡ್ತಿದ್ರೇ ಹೊರತು ನೇರವಾಗಿಯಂತೂ ಏನೂ ಹೇಳುತ್ತಿರಲಿಲ್ಲ. ಆದ್ರೀಗ ಇಂಥಾ ಯತ್ನಾಳ್​ರನ್ನ ಕೂಡ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಯಾಕಂದ್ರೆ ವಿಜಯಪುರದಲ್ಲಿ ಯತ್ನಾಳ್ ಅತ್ಯಂತ ಪ್ರಭಾವಿ ನಾಯಕ. ಹಿಂದೂ ಹುಲಿ ಬೇರೆ. ಯಾವುದೇ ಕಾರಣಕ್ಕೂ ಅವರನ್ನ ಸೈಡ್​ಲೈನ್ ಮಾಡೋದು ಸಾಧ್ಯವೇ ಇಲ್ಲ. ಹೀಗಾಗಿ ವಿಜಯೇಂದ್ರ ಹಳೆಯದನ್ನೆಲ್ಲಾ ಮರೆತು ಯತ್ನಾಳ್​ರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದೆ. ತಮ್ಮ ಕುರಿತು ಪಕ್ಷದ ಹಿರಿಯ ನಾಯಕರಲ್ಲಿರುವ ಭಿನ್ನಮತವನ್ನ ಹೋಗಲಾಡಿಸಬೇಕಾಗಿದೆ.

ನಂ.5: ಸರ್ಕಾರದ ವಿರುದ್ಧ ಹೋರಾಟಕ್ಕೆ ರಣತಂತ್ರ ರೂಪಿಸಬೇಕು!

ಇದು ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಹತ್ತಬೇಕಿರುವ 5ನೇ ಮೆಟ್ಟಿಲು. ಈಗಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಮರ್ಥವಾಗಿ ಹೋರಾಟ ನಡೆಸಬೇಕಿದೆ. ಸರ್ಕಾರದ ವೈಫಲ್ಯಗಳನ್ನ ಜನರ ಮುಂದೆ ಎತ್ತಿ ಹಿಡಿಯುವ ಕೆಲಸವನ್ನ ವಿಜಯೇಂದ್ರ ಮಾಡಬೇಕಿದೆ. ಈ ಮೂಲಕ ಸರ್ಕಾರದ ವಿರುದ್ಧ ಜನಾಭಿಪ್ರಾಯವನ್ನ ರೂಪಿಸಬೇಕಿದೆ. ಸರ್ಕಾರದ ಉಚಿತ ಭರವಸೆ, ಅದ್ರ ಅನುಷ್ಠಾನದಲ್ಲಾಗಿರುವ ಎಡವಟ್ಟು, ಶಾಸಕರಿಗೆ ಅನುದಾನದ ಕೊರತೆ, ಕಮಿಷನ್ ಆರೋಪ ಹೀಗೆ ಕಾಂಗ್ರೆಸ್ ಸರ್ಕಾರದ ಮೇಲಿನ ಆರೋಪಗಳನ್ನ ಹಿಡಿದುಕೊಂಡು ವಿಜಯೇಂದ್ರ ಹೋರಾಟಕ್ಕಿಳಿಯಬೇಕಿದೆ. ಆದ್ರೆ ಈ ಹೋರಾಟದ ಸಂದರ್ಭದಲ್ಲಿ ವಿಜಯೇಂದ್ರ ಕೂಡ ಕಾಂಗ್ರೆಸ್ ಪಾಲಿಗೆ ನಂಬರ್.1 ಟಾರ್ಗೆಟ್ ಆಗಿರ್ತಾರೆ. ಬಿಎಸ್​ವೈ ಕುಟುಂಬದ ವಿರುದ್ಧವೂ ಹಲವು ಆರೋಪಗಳಿರೋದ್ರಿಂದ ಇವೆಲ್ಲವನ್ನೂ ವಿಜಯೇಂದ್ರ ಹೇಗೆ ಎದುರಿಸ್ತಾರೆ ಅನ್ನೋದು ಇಲ್ಲಿ ಇಂಪಾರ್ಟೆಂಟ್ ಆಗುತ್ತೆ. ಕಾಂಗ್ರೆಸ್ ಹೇಗೂ ಇನ್ಮುಂದೆ ವಿಜಯೇಂದ್ರರನ್ನೇ ಪ್ರಶ್ನೆ ಮಾಡೋಕೆ ಶುರು ಮಾಡುತ್ತೆ. ಇದ್ರ ಜೊತೆಗೆ ಬಿಜೆಪಿಯಲ್ಲೇ ಕೆಲ ವಿಜಯೇಂದ್ರ ವಿರೋಧಿ ನಾಯಕರುಗಳಿದ್ದಾರೆ. ಸ್ವಪಕ್ಷದ ಮಂದಿಯೇ ವಿಜಯೇಂದ್ರ ವಿರುದ್ಧ ಆರೋಪ ಮಾಡಿರೋವಾಗ, ಹೇಳಿಕೆಗಳನ್ನ ನೀಡಿರೋವಾಗ ಅವೆಲ್ಲವನ್ನೂ ಹೇಗೆ ಫೇಸ್​​ ಮಾಡ್ತಾರೆ ಅನ್ನೋದನ್ನ ನೋಡಬೇಕಿದೆ. ಇನ್ನು ಪಕ್ಷವನ್ನ ಇನ್ನಷ್ಟು ಬಲಗೊಳಿಸೋಕೆ ರಾಜ್ಯಪ್ರವಾಸ ಕೈಗೊಳ್ಳುವಾಗ ನೈತಿಕ ಶಕ್ತಿ ಅನ್ನೋದು ವಿಜಯೇಂದ್ರಗೆ ತುಂಬಾನೆ ಮುಖ್ಯವಾಗುತ್ತೆ. ಹಿರಿಯರು ಸೇರಿದಂತೆ ಪಕ್ಷದ ಎಲ್ಲಾ ನಾಯಕರ ಬೆಂಬಲ ಇದ್ರಷ್ಟೇ, ತಮ್ಮನ್ನ ಎಲ್ಲರೂ ಸಮರ್ಥಿಸಿಕೊಂಡ್ರಷ್ಟೇ ವಿಜಯೇಂದ್ರ ನೈತಿಕ ಬಲ ಪಡೆಯೋಕೆ ಸಾಧ್ಯ. ಯಾಕಂದ್ರೆ ವಿಜಯೇಂದ್ರ ಮೇಲಿನ ಆರೋಪಗಳನ್ನೇ ಕಾಂಗ್ರೆಸ್ ಅಸ್ತ್ರವಾಗಿಸಿಕೊಳ್ಳುವಾಗ ಈಗ ಬಿಜೆಪಿಯ ಎಲ್ಲಾ ನಾಯಕರು ಬಿಎಸ್​ವೈ ಪುತ್ರನ ಬೆನ್ನಿಗೆ ನಿಲ್ತಾರಾ ಅನ್ನೋದು ಇಲ್ಲಿರುವ ಪ್ರಶ್ನೆ. ಹೀಗಾಗಿ ಪಕ್ಷದ ಎಲ್ಲರನ್ನೂ ತಮ್ಮ ಪರವಾಗಿ ಒಟ್ಟಾಗಿಸುವ ಸವಾಲು ಕೂಡ ವಿಜಯೇಂದ್ರ ಮುಂದಿದೆ.

ನಂ.4: ಲಿಂಗಾಯತರ ಜೊತೆ ಇತರೆ ಸಮುದಾಯದ ವಿಶ್ವಾಸ ಗಳಿಸಬೇಕು!

ಬಿಜೆಪಿ ಪಾಲಿಗೆ ಲಿಂಗಾಯತ ಅತ್ಯಂತ ಪ್ರಮುಖ ಸಮುದಾಯ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಅದ್ರಲ್ಲೂ ಬಿಎಸ್​ ಯಡಿಯೂರಪ್ಪ ಹೇಳಿಕೇಳಿ ಲಿಂಗಾಯತರ ಪ್ರಶ್ನಾತೀತ ನಾಯಕ. ಹೀಗಾಗಿ ವಿಜಯೇಂದ್ರರನ್ನ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರೋದ್ರ ಹಿಂದೆ ಲಿಂಗಾಯತ ಮತ ಬ್ಯಾಂಕ್​ ಲೆಕ್ಕಾಚಾರ ಕೂಡ ಇದ್ದೇ ಇದೆ. ಜಾತಿ ಸಮೀಕರಣ ಅನ್ನೋದು ಬಿಜೆಪಿ ರಾಜಕೀಯದಾಟದ ಪ್ರಮುಖ ಭಾಗ. ಮಾಜಿ ಕೇಂದ್ರ ಸಚಿವ ದಿವಂಗತ ಅನಂತಕುಮಾರ್ ಅವರು ರಾಜ್ಯಾಧ್ಯಕ್ಷರಾಗಿದ್ದಾಗ ಬಿಜೆಪಿ ಜಾತಿ ಸಮೀಕರಣ ರೂಪುಗೊಂಡಿತ್ತು. ಇನ್ನು ಬಿಜೆಪಿ ಕಟ್ಟಾಳು ಬಿಎಸ್​​ವೈ ಪ್ರಬಲ ಲಿಂಗಾಯತ ನಾಯಕ ಅಂತಾ ಗುರುತಿಸಿಕೊಂಡಿದ್ರೂ ಕೂಡ ಇತರೆ ಸಮುದಾಯದ ಜನರನ್ನ ಕೂಡ ಬಿಜೆಪಿ ಪರ ಒಟ್ಟುಗೂಡಿಸುವಲ್ಲಿ ಯಶಸ್ವಿಯಾಗಿದ್ರು. ಲಿಂಗಾಯತ ಮಾತ್ರವಲ್ಲ ಇತರೆ ಜಾತಿಯ ಮಂದಿ ಕೂಡ ಬಿಎಸ್​ವೈ ಬೆನ್ನಿಗೆ ನಿಂತಿದ್ರು. ಯಡಿಯೂರಪ್ಪ ಒಬ್ಬ ಜನನಾಯಕ ಅನ್ನೋದನ್ನ ಒಪ್ಪಿಕೊಂಡಿದ್ರು. ಯಡಿಯೂರಪ್ಪ ಯಾವತ್ತೂ ಕೇವಲ ಲಿಂಗಾಯತ ಸಮುದಾಯಕ್ಕಷ್ಟೇ ಸೀಮಿತವಾಗಿರಲಿಲ್ಲ. ಆದ್ರೆ ವಿಜಯೇಂದ್ರ ವಿಚಾರದಲ್ಲಿ ಪರಿಸ್ಥಿತಿ ಹೀಗಿಲ್ಲ. ವಿಜಯೇಂದ್ರ ಒಬ್ಬ ಯುವ ನಾಯಕರಾಗಿರೋದ್ರಿಂದ ಇನ್ನೂ ಕೂಡ ಎಲ್ಲಾ ಜಾತಿ ವರ್ಗಕ್ಕೂ ರೀಚ್ ಆಗಿಲ್ಲ. ಲಿಂಗಾಯತರೇನೊ ಬಿಎಸ್​​ವೈ ಪುತ್ರ, ತಮ್ಮದೇ ಸಮುದಾಯದ ನಾಯಕ ಅನ್ನೋ ಕಾರಣಕ್ಕೆ ವಿಜಯೇಂದ್ರ ಬೆಂಬಲಕ್ಕೆ ನಿಲ್ಲಬಹುದು. ಆದ್ರೆ ಇತರೆ ಜಾತಿಯ ಮಂದಿಯೂ ವಿಜಯೇಂದ್ರರನ್ನ ನಾಯಕನನ್ನಾಗಿ ಸ್ವೀಕರಿಸಬೇಕಲ್ಲ. ಲಿಂಗಾಯತರ ಹೊರತಾಗಿ ಬಹುತೇಕ ಎಲ್ಲಾ ಜಾತಿಯ ಂಂದಿಯೂ ವಿಜಯೇಂದ್ರರನ್ನ ಈಗ ಅನುಮಾನದ ಕಣ್ಣಿನಿಂದಲೇ ನೋಡ್ತಾರೆ. ಹೀಗಾಗಿ ಪಕ್ಷದಲ್ಲಿ ಸ್ಥಾನಮಾನ ಸೇರಿದಂತೆ ಇತರೆ ಜಾತಿಯ ಮಂದಿಗೆ ಅಸಮಾಧಾನವಾಗದಂತೆ. ಎಲ್ಲರ ವಿಶ್ವಾಸ ಗಳಿಸುವಂತೆ ವಿಜಯೇಂದ್ರ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ.

ನಂ.3: ತಮ್ಮ ಸುತ್ತಲೂ ಕಟ್ಟಿಕೊಂಡಿದ್ದ ಟೀಂನಿಂದ ಹೊರಬರಬೇಕು!

ವಿಜಯೇಂದ್ರ ಏರಬೇಕಿರುವ 3ನೇ ಮೆಟ್ಟಿಲು ಅಥವಾ ಸವಾಲು ಏನಂದ್ರೆ, ತಮ್ಮ ಸುತ್ತಲೂ ಇದುವರೆಗೆ ಕಟ್ಟಿಕೊಂಡಿದ್ದ ಟೀಂನಿಂದ ವಿಜಯೇಂದ್ರ ಹೊರ ಬರಲೇಬೇಕಿದೆ. ಒಬ್ಬ ರಾಜ್ಯಾಧ್ಯಕ್ಷರಾಗಿ ನೇಮಕವಾಗಿರೋವಾಗ ವಿಜಯೇಂದ್ರ ಇನ್ಮುಂದೆ ತಮ್ಮ ಆಪ್ತ ಬಳಗಕ್ಕಷ್ಟೇ ಸೀಮಿತವಾಗರೋಕೆ ಸಾಧ್ಯವೇ ಇಲ್ಲ. ತಮ್ಮ ಕಟ್ಟಾ ಬೆಂಬಲಿಗರು, ಸ್ನೇಹಿತರ ತಂಡವನ್ನ ಬಿಟ್ಟು ಹೊರ ಬರಲೇಬೇಕು. ಯಾಕಂದ್ರೆ ಬಿಎಸ್ ಯಡಿಯೂರಪ್ಪರೇನೋ ಬಿಜೆಪಿ ಅತ್ಯಂತ ಪವರ್​ಫುಲ್​ ನಾಯಕರಾಗಿದ್ರು. ಹೀಗಾಗಿ ಎಲ್ಲರೂ ಬಿಎಸ್​ವೈ ಇಟ್ಟ ಹೆಜ್ಜೆಯಲ್ಲೇ ಸಾಗ್ತಿದ್ರು. ರಾಜಕೀಯವಾಗಿ ಯಡಿಯೂರಪ್ಪರನ್ನ ಯಾರೂ ಪ್ರಶ್ನಿಸೋಕೆ ಸಾಧ್ಯವಾಗುತ್ತಿರಲಿಲ್ಲ. ಆದ್ರೆ ವಿಜಯೇಂದ್ರ ಹಾಗಲ್ಲ, ಯುವ ನಾಯಕ. ಇದೇ ಮೊದಲ ಬಾರಿಗೆ ಶಾಸಕರಾಗಿದ್ದಾರೆ. ರಾಜಕೀಯ ಕೆರಿಯರ್​ನ ಆರಂಭದಲ್ಲೇ ರಾಜ್ಯಾಧ್ಯಕ್ಷದಂತ ಪ್ರಮುಖ ಹುದ್ದೆ ಸಿಕ್ಕಿದೆ. ಹೀಗಾಗಿ ವಿಜಯೇಂದ್ರ ಅವರು ಮೊದಲು ಪಕ್ಷದಲ್ಲಿರುವ ತಮಗಿಂತ ಹಿರಿಯ ನಾಯಕರ ವಿಶ್ವಾಸ ಗಳಿಸಿಕೊಳ್ಳಬೇಕು. ಇದಕ್ಕಾಗಿ ಮೊದಲು ತಮ್ಮ ಟೀಂನಿಂದ ಹೊರಬರಲೇಬೇಕು. ಎಲ್ಲರನ್ನೂ ಒಟ್ಟಾಗಿಸಿ ಹೊಸ ತಂಡವನ್ನೇ ಕಟ್ಟಬೇಕು. ಇನ್ನೂ ಕೂಡ ತಮ್ಮ ಸ್ನೇಹಿತರನ್ನೇ ಸುತ್ತಲಿಟ್ಟುಕೊಂಡು ತಿರುಗಾಡಿದ್ರೆ ವಿಜಯೇಂದ್ರ ಪಕ್ಷದಲ್ಲೇ ಮುಜುಗರ ಎದುರಿಸಬೇಕಾಗುತ್ತೆ.

ನಂ.2: ಬಲಿಷ್ಠ ಹೈಕಮಾಂಡ್ ಸೂಚನೆಯನ್ನ ಜನರಿಗೆ ತಲುಪಿಸಬೇಕು!

ವಿಜಯೇಂದ್ರ ಮುಂದಿರುವ ಮತ್ತೊಂದು ಪ್ರಮುಖ ಟಾಸ್ಕ್ ಅಂದ್ರೆ, ಹೈಕಮಾಂಡ್​ ನಾಯಕರ ಸೂಚನೆಯನ್ನ ಚಾಚೂತಪ್ಪದೆ ಪಾಲಿಸಬೇಕು. ಮೇಲಿನಿಂದ ಬರುವ ಆದೇಶವನ್ನ ಸಮರ್ಪಕವಾಗಿ ಜನರ ಬಳಿಗೆ ತಲುಪಿಸಬೇಕು. ಅಂದ್ರೆ ಕೇಂದ್ರ ಸರ್ಕಾರದ ಯೋಜನೆಗಳಾಗಲಿ, ಪ್ರಧಾನಿ ಮೋದಿ ಕೈಗೊಂಡಿರುವ ಜನಪರ ಕಾರ್ಯಕ್ರಮಗಳಾಗಲಿ ಎಲ್ಲವನ್ನೂ ರಾಜ್ಯದ ಜನರಿಗೆ ಮುಟ್ಟಿಸುವ, ಮನವರಿಕೆ ಮಾಡಿಕೊಡುವ ಕೆಲಸವನ್ನ ವಿಜಯೇಂದ್ರ ಮಾಡಬೇಕಿದೆ. ತಮ್ಮನ್ನ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಸರಿಯಾಗಿ ಪಕ್ಷಕ್ಕೆ ರಿಸಲ್ಟ್​ನ್ನ ತಂದುಕೊಡಲೇಬೇಕಿದೆ. ಲೋಕಸಭೆ ಚುನಾವಣೆ ಬೇರೆ ಹತ್ತಿರವಾಗ್ತಿದ್ದು, ಹೀಗಾಗಿ ಮೋದಿ ಸರ್ಕಾರದ 10 ವರ್ಷಗಳ ಸಾಧನೆಯನ್ನ ಜನರಿಗೆ ಮನದಟ್ಟು ಮಾಡಿ, 3ನೇ ಬಾರಿಗೆ ಮೋದಿಯನ್ನ ಗೆಲ್ಲಿಸೋಕೆ ಬೇಕಾದ ಕೆಲಸಗಳನ್ನ ವಿಜಯೇಂದ್ರ ಈಗಿನಿಂದಲೇ ಮಾಡಬೇಕಿದೆ.

ನಂ.1: ಬಿಎಸ್ ​ವೈ ನಾಮಬಲ.. ಅಪ್ಪನ ಉತ್ತರಾಧಿಕಾರಿ!

ವಿಜಯಿಯಾಗೋಕೆ ವಿಜಯೇಂದ್ರಗೆ ಇರುವ ಮೊದಲ ಮೆಟ್ಟಿಲು ಅಂದ್ರೆ ಅಪ್ಪನ ನಾಮ ಬಲ. ಬಿಎಸ್ ಯಡಿಯೂರಪ್ಪರ ಪುತ್ರ ಅನ್ನೋದೆ ವಿಜಯೇಂದ್ರಗೆ ರಾಜಕೀಯವಾಗಿ ಒಲಿದಿರುವ ವರ. ಹೀಗಾಗಿ ವಿಜಯೇಂದ್ರ ತಮ್ಮ ರಾಜಕೀಯ ಕೆರಿಯರ್​ನ್ನ ಜೀರೋದಿಂದ ಆರಂಭಿಸಬೇಕಾದ ಪರಿಸ್ಥಿತಿ ಅವರಿಗೆ ಬಂದೇ ಇಲ್ಲ. ರಾಜಕೀಯಕ್ಕೆ ಕಾಲಿಡುವಾಗಲೇ ವಿಜಯೇಂದ್ರಗೆ 50 ಪರ್ಸೆಂಟ್​ನಷ್ಟಾದ್ರೂ ಬಲ, ಬೆಂಬಲ ಸಿಕ್ಕಿತ್ತು. ಬಿಎಸ್​​ವೈ ಬೆಳೆಸಿರುವ ಆಲದ ಮರವನ್ನ ಉಳಿಸಿ, ಪೋಷಿಸಿಕೊಂಡು ಹೋಗೋದಷ್ಟೇ ವಿಜಯೇಂದ್ರ ಮಾಡಬೇಕಿರುವ ಪ್ರಮುಖ ಕರ್ತವ್ಯ. ಸದ್ಯ ವಿಜಯೇಂದ್ರ ಬಿಎಸ್​ವೈ ಪುತ್ರ ಅಂತಷ್ಟೇ ರಾಜ್ಯದ ಜನರಿಗೆ ಪರಿಚಿತರಾಗಿದ್ದಾರೆ. ಆದ್ರೆ ಬಿಎಸ್​​ವೈ ವರ್ಚಸ್ಸನ್ನ ಕಾಪಾಡಿಕೊಂಡು ವಿಜಯೇಂದ್ರ ಈಗ ತಮ್ಮದೇ ಐಡೆಂಟಿಟಿಯೊಂದನ್ನ ಕೂಡ ಬೆಳೆಸಿಕೊಳ್ಳಬೇಕಿದೆ. ವಿಧಾನಸಭೆಗೆ ಇನ್ನೂ ನಾಲ್ಕು ವರ್ಷಗಳಿವೆ. ಅಷ್ಟು ಸಮಯ ಬಾಕಿ ಇರೋವಾಗಲೇ ರಾಜ್ಯಾಧ್ಯಕ್ಷ ಪಟ್ಟಕ್ಕೇರಿದ್ದು, ಪಕ್ಷದ ಪವರ್​​ ಕೂಡ ತಮ್ಮ ಕೈಗೆ ಸಿಕ್ಕಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನ ಗೆಲ್ಲಿಸುವ ಜವಾಬ್ದಾರಿ ವಿಜಯೇಂದ್ರ ಹೆಗಲ ಮೇಲೆಯೇ ಇದೆ. ರಾಜಕೀಯವಾಗಿ ವಿಜಯೇಂದ್ರ ದೀರ್ಘ ಕಾಲದ ಭವಿಷ್ಯವಿದ್ದು, ಮುಂದೆ ಮುಖ್ಯಮಂತ್ರಿ ಕೂಡ ಆಗಬಹುದು. ಹೀಗಾಗಿ ತಾವೊಬ್ಬ ಸಿಎಂ ಅಭ್ಯರ್ಥಿಯಾಗಿ ಬಿಂಬಿಸಿಕೊಳ್ಳುವ ಮಟ್ಟಿಗೆ ಮತ್ತು ಪಕ್ಷದ ಎಲ್ಲಾ ನಾಯಕರು, ಕಾರ್ಯಕರ್ತರು ತಮ್ಮಲ್ಲೊಬ್ಬ ಭವಿಷ್ಯದ ಮುಖ್ಯಮಂತ್ರಿಯನ್ನ ಕಾಣುವಂತೆ ವಿಜಯೇಂದ್ರ ತಮ್ಮ ಇಮೇಜನ್ನ ಕೂಡ ಕ್ರಿಯೇಟ್ ಮಾಡಿಕೊಳ್ಳಬೇಕಿದೆ. ಇವೆಲ್ಲವೂ ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ತಮ್ಮ ವಿಜಯಕ್ಕೆ ಸವಾಲುಗಳನ್ನ ಮೆಟ್ಟಿನಿಂತು ಹತ್ತಬೇಕಾದ ಮೆಟ್ಟಿಲುಗಳು. ಮುಂದಿನ ನಾಲ್ಕು ವರ್ಷಗಳಲ್ಲಿ ಈ ಮೆಟ್ಟಿಲುಗಳನ್ನ ಹತ್ತಿದ್ದೇ ಆದಲ್ಲಿ ವಿಜಯೇಂದ್ರ ಕರ್ನಾಟಕದ ಮುಂದಿನ ಸಿಎಂ ಆದ್ರೂ ಆಶ್ಚರ್ಯ ಇಲ್ಲ. ಆದ್ರೆ ಅದಕ್ಕೂ ಮುನ್ನ, ಲೋಕಸಭೆ ಚುನಾವಣೆ ಬೇರೆ ಇದ್ದು, ಮುಂದಿನ ಕೆಲ ತಿಂಗಳುಗಳಲ್ಲೇ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ತಮ್ಮ ಮೊದಲ ಅಗ್ನಿ ಪರೀಕ್ಷೆಯನ್ನ ಎದುರಿಸಲಿದ್ದಾರೆ. ಹೀಗಾಗಿ ಪಕ್ಷ ಕಟ್ಟೋದ್ರ ಜೊತೆಗೆ, ಅಸಮಾಧಾನಗೊಂಡಿರುವ ಸ್ವಪಕ್ಷೀಯರನ್ನ ವಿಶ್ವಾಸಕ್ಕೆ ತೆಗೆದುಕೊಂಡು ವಿಜಯೇಂದ್ರ ರಾಜ್ಯ ಪ್ರವಾಸ ಕೈಗೊಳ್ಳಬೇಕಿದೆ.

Sulekha