GT ಸೋಲಿಸಿದ್ದೇ ವೈಶಾಕ್ ವಿಜಯ್ ಪಂಜಾಬ್‌ಗೆ ಕನ್ನಡಿಗನ ಬಲ
ಮನೆಮಗನ ಬಿಟ್ಟು RCB ತಪ್ಪು ಮಾಡ್ತಾ?

ಮಂಗಳವಾರ ನಡೆದ ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವೆ ರೋಚಕ ಪಂದ್ಯ ನಡೆಯಿತು. ಈ ಪಂದ್ಯ ನೋಡುತ್ತಿದ್ದವರು ಪಕ್ಕಾ ಗುಜರಾತ್ ಗೆಲ್ಲುತ್ತೆ.. ಪಂಜಾಬ್ ಕೊಟ್ಟ ರನ್‌ನ ಚೇಸ್ ಮಾಡೇ ಮಾಡುತ್ತೆ ಅಂತ ಎಲ್ಲರು ಅಂದ್ಕೊಂಡಿದ್ರು. ಬಟ್ ಬೌಲಿಂಗ್ ಪರಾಕ್ರಮದ ಮುಂದೆ ಬ್ಯಾಟಿಂಗ್ ಆಟ ನಡೆಯಲೇ ಇಲ್ಲ. ಅಂದಹಾಗೇ ಪಂಜಾಬ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಮೊದಲ ಪಂದ್ಯದಲ್ಲೇ ಆರ್ಭಟಿಸಿದ್ರು. ನಮೋ ಮೈದಾನದಲ್ಲಿ ಗುಜರಾತ್ ಬೌಲರ್ಗಳನ್ನ ಅಕ್ಷರಶಃ ಅಟ್ಟಾಡಿಸಿದ್ರು. ಸಿಕ್ಸರ್ ಮೇಲೆ ಸಿಕ್ಸರ್ ಸಿಡಿಸಿ , ಬೌಂಡರಿ ಮೇಲೆ ಬೌಂಡರಿ ಬಾರಿಸಿ ಘರ್ಜಿಸಿದ್ರು. ಶ್ರೇಯಸ್ ಅಯ್ಯರ್ ಅಬ್ಬರದ ನಡುವೆ ಗುಜರಾತ್ ಸ್ಪಿನ್ನರ್ ಸಾಯಿ ಕಿಶೋರ್ ಮ್ಯಾಜಿಕ್ ಮಾಡಿ 3 ವಿಕೆಟ್ ಉರುಳಿಸಿದ್ರು. ಅಂತಿಮವಾಗಿ ಪಂಜಾಬ್. ಶ್ರೇಯಸ್ ಅಯ್ಯರ್ ಅವರ 97 ರನ್ಗಳ ಕೊಡುಗೆಯಿಂದ ಐದು ವಿಕೆಟ್ ಕಳೆದುಕೊಂಡು 243 ರನ್ಗಳಿಸಿತ್ತು. ಈ ರನ್ ಗುರಿ ಬೆನ್ನತ್ತಿದ್ದ ಗುಜರಾತ್ 15 ಓವರ್‌ಗಳಲ್ಲಿ ಗೆಲುವಿನ ಸನಿಹಕ್ಕೆ ಬಂದಿತ್ತು. ಗುಜರಾತ್ ಗೆದ್ದೆ ಗೆಲ್ಲುತ್ತೆ ಅಂತ ಎಲ್ಲರು ಅಂದ್ಕೊಂಡಿದ್ರು. ಬಟ್ ಗುಜರಾತ್ನ ರನ್ ಆರ್ಭಟಕ್ಕೆ ಕನ್ನಡಿಗ ವೈಶಾಕ್ ವಿಜಯ್ ಕುಮಾರ್ 15ನೇ ಓವರ್ನಲ್ಲಿ ಬ್ರೇಕ್ ಹಾಕಿದ್ರು. 14ನೇ ಓವರ್ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕೆ ಇಳಿದ ವೈಶಾಕ್ ವಿಜಯ್ಕುಮಾರ್, ಮೂರು ಓವರ್ ಮಾಡಿ ಕೇವಲ 28 ರನ್ಗಳನ್ನು ನೀಡಿದರು. 15ನೇ ಓವರ್ನಲ್ಲಿ 5 ರನ್, 17ನೇ ಓವರ್ನಲ್ಲಿ ಮೂರು ವೈಡ್ ಬಾಲ್ ಹಾಕಿ ಐದು ರನ್ ಬಿಟ್ಟುಕೊಟ್ಟರು. ಆ ಮೂಲಕ ಗೆಲುವಿನ ಸನಿಹಕ್ಕೆ ಬಂದಿದ್ದ ಗುಜರಾತ್ ಟೈಟನ್ಸ್ಗೆ ತೀವ್ರ ಒತ್ತಡ ಹಾಕಿದರು. ಎಕಾನಮಿಕಲ್ ಸ್ಪೆಲ್ ಹಾಕಿದ ವೈಶಾಕ್ ಪಂಜಾಬ್ ತಂಡವನ್ನ ಗೆಲುವಿನ ಟ್ರ್ಯಾಕ್ಗೆ ಮರಳಿಸಿದ್ರು. 11 ರನ್ಗಳ ಅಂತರದ ಜಯ ಸಾಧಿಸಿದ ಪಂಜಾಬ್ ತಂಡ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಉಳಿದೆಲ್ಲ ಬೌಲರ್ಗಳಿಗೆ ಹೋಲಿಕೆ ಮಾಡಿದರೆ ವಿಜಯ್ಕುಮಾರ್ ಅವರ ಬೌಲಿಂಗ್ ತುಂಬಾನೇ ಪರಿಣಾಮಕಾರಿಯಾಗಿತ್ತು. 9.30 ಎಕನಾಮಿಯಲ್ಲಿ ಬಾಲ್ ಮಾಡಿದ ವೈಶಾಕ್, 28 ರನ್ಗಳನ್ನು ನೀಡಿದರು.
ವೈಶಾಕ್‌ನ ಕಡೆಗಣಿಸಿತ್ತಾ ಆರ್‌ಸಿಬಿ?
ಕರ್ನಾಟಕದ ವೇಗಿ ವೈಶಾಕ್ ಉತ್ತಮ ವೇಗದ ದಾಳಿ ನಡೆಸಬಲ್ಲ ಸಾಮರ್ಥ್ಯ ಇರುವ ಬೌಲರ್. ಮಾರಕ ಯಾರ್ಕರ್ ಗಳನ್ನ ಕೂಡ ಎಸೆಯ ಬಲ್ಲರು. ಡೆತ್ ಓವರ್‌ಗಳಲ್ಲಿ ಇವರು ತಂಡಕ್ಕೆ ಆಸರೆಯಾಗ್ತಾರೆ. ಇನ್ನು ಇವರು 2023 ಮತ್ತು 2024ರಲ್ಲಿ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಿದ್ರು. ಆರ್‌ಸಿಬಿ ಪರ ಎರಡು ಸಿಸೀನ್‌ನಲ್ಲಿ 11 ಪಂದ್ಯಗಳನ್ನ ಆಡಿರೋ ವೈಶಾಕ್ 13 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ರು. ಆದ್ರೆ ಎಲ್ಲೋ ಒಂದ್ಕಡೆ ಆರ್‌ಸಿಬಿ ಇವರನ್ನಚೆನ್ನಾಗಿ ಬಳಸಿಕೊಂಡಿಲ್ಲ. ಹೆಚ್ಚು ಪಂದ್ಯಗಳಲ್ಲಿ ಇವರನ್ನ ಆಡಿಸಿಲ್ಲ. ಆರ್‌ಸಿಬಿ ಒಳ್ಳೆ ಚಾನ್ಸ್ ಕೊಟ್ಟಿದ್ರೆ, ಎಲ್ಲೋ ಒಂದ್ಕಡೆ ಈ ಕನ್ನಡಿಗ ಈ ಬಾರಿ ಕೂಡ ಆರ್‌ಸಿಬಿಯಲ್ಲೇ ಉಳಿಯುತ್ತಿದ್ದ.. ತನ್ನ ಬೌಲಿಂಗ್ ಮೂಲಕ ಟೀಂ ಇಂಡಿಯಾದಲ್ಲೂ ಚಾನ್ಸ್ ಪಡೆಯುತ್ತಿದ್ದ ಅನ್ಸುತ್ತೆ.
ಇನ್ನು ಬಾಲ್ಯದಿಂದಲೂ ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿದ್ದ ವೈಶಾಖ್ ತಂದೆ ಕೂಡಾ ಕ್ರಿಕೆಟ್ ಕೋಚ್. ಈ ಬಗ್ಗೆ ಅವರೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಆರಂಭದಿಂದಲೂ ಪೋಷಕರಿಂದ ಉತ್ತಮ ಬೆಂಬಲ ಪಡೆದ ವೈಶಾಖ್, ತಂದೆಯ ಮಾರ್ಗದರ್ಶನದಂತೆ ಬೆಳಗ್ಗೆಯಿಂದ ಸಂಜೆಯವರೆಗೆ ಆಡುತ್ತಿದ್ದರಂತೆ. ಇವರ ತಂದೆ ಕ್ರಿಕೆಟ್ ಕೋಚ್ ಆಗಿರುವುದರಿಂದ, ಬಾಲ್ಯದಿಂದಲೇ ಕ್ರಿಕೆಟ್ ಬಗೆಗಿನ ಎಲ್ಲಾ ವಿಚಾರಗಳನ್ನು ಅಪ್ಪನಿಂದ ಪಡೆದಿದ್ದಾರೆ.
ಎಲ್ಲ ಕ್ರಿಕೆಟಿಗರಂತೆ ಐಪಿಎಲ್‌ನಲ್ಲಿ ಆಡುವುದು ಮತ್ತು ಟೀಮ್ ಇಂಡಿಯಾ ಪರ ನೀಲಿ ಜೆರ್ಸಿ ತೊಟ್ಟು ಕಣಕ್ಕಿಳಿಯುವುದು ವೈಶಾಖ್ ಅವರ ಕನಸು. 2021ರ ಐಪಿಎಲ್ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ನೆಟ್ ಬೌಲರ್ ಆಗಿ ಅವಕಾಶ ಪಡೆದಿದ್ದರು. 2022ರಲ್ಲಿ ಯಾವುದೇ ಫ್ರಾಂಚೈಸಿ ಪರ ಆಡುವ ಅವಕಾಶ ಲಭಿಸಿರಲಿಲ್ಲ. 2023 ಮತ್ತು 24 ರಲ್ಲಿ ತಮ್ಮದೇ ರಾಜ್ಯದ ಫ್ರಾಂಚೈಸಿ ಪರ ಅವರಿಗೆ ಆಡುವ ಅವಕಾಶ ಸಿಕ್ಕಿತ್ತು. ಈ ಬಾರಿ 1.8 ಕೋಟಿಗೆ 28 ವರ್ಷದ ಕನ್ನಡಿಗ ವೈಶಾಕ್ ಪಂಜಾಬ್ ಪಾಲಾದ್ರು. ಮೊದಲ ಪಂದ್ಯದಲ್ಲಿ ತಮ್ಮ ಅದ್ಭುತ ಬೌಲಿಂಗ್ ಮೂಲಕ ತಂಡವನ್ನ ಗೆಲ್ಲಿಸಿದ್ದಾರೆ. ಇವರು ಐಪಿಎಲ್‌ನಲ್ಲಿ ಹೀಗೆ ಮಿಂಚಲಿ, ಹಾಗೇ ಟೀಂ ಇಂಡಿಯಾಕ್ಕೆ ಸಲೆಕ್ಟ್ ಆಗಲಿ ಅನ್ನೋದು ಕ್ರಿಕೆಟ್ ಅಭಿಮಾನಿಗಳ ಆಸೆ.