Plz.. Help Me… ಕ್ರಿಕೆಟ್ ಉಳಿಸೋಕೆ ಕೈ ಚಾಚಿದ WI – ಕೆರಿಬಿಯನ್ ಬೆನ್ನಿಗೆ ನಿಲ್ಲುತ್ತಾ BCCI?

Plz.. Help Me… ಕ್ರಿಕೆಟ್ ಉಳಿಸೋಕೆ ಕೈ ಚಾಚಿದ WI – ಕೆರಿಬಿಯನ್ ಬೆನ್ನಿಗೆ ನಿಲ್ಲುತ್ತಾ BCCI?

ಒಂದು ಕಾಲದಲ್ಲಿ ವಿಶ್ವ ಕ್ರಿಕೆಟ್ ಅಂದ್ರೆ ವೆಸ್ಟ್ ಇಂಡೀಸ್ ತಂಡದ ಹೆಸರು ಮೊದಲು ಕೇಳಿಬರುತ್ತಿತ್ತು!  ಲಾರಾ, ಕ್ರಿಸ್ ಗೇಲ್ ಇಂತಹ ದಿಗ್ಗಜರು ಎದುರಾಳಿ ತಂಡಗಳ ನಿದ್ದೆಗೆಡಿಸುತ್ತಿದ್ದರು. ಆದರೆ ಇಂದು ಅದೇ ವೆಸ್ಟ್ ಇಂಡೀಸ್ ಕ್ರಿಕೆಟ್ ಆರ್ಥಿಕ ಸಂಕಷ್ಟ, ಆಟಗಾರರ ವಲಸೆ ಮತ್ತು ಆಡಳಿತಾತ್ಮಕ ಸಮಸ್ಯೆಗಳಿಂದ ಹೋರಾಡುತ್ತಿದೆ! ಒಂದು ಕಾಲದಲ್ಲಿ ಕ್ರಿಕೆಟ್ ಜಗತ್ತನ್ನೇ ಆಳಿದ್ದ ಕೆರಿಬಿಯನ್ ತಂಡಕ್ಕೆ ಈಗ ಸಹಾಯದ ಅಗತ್ಯವಿದೆ. ಇದೇ ಕಾರಣಕ್ಕೆ ವೆಸ್ಟ್ ಇಂಡೀಸ್ ಕೋಚ್ ಡ್ಯಾರೆನ್ ಸ್ಯಾಮಿ ಅವರ ಮನವಿ ಕ್ರಿಕೆಟ್ ಜಗತ್ತಿನಲ್ಲಿ ಚರ್ಚೆಗೆ ಕಾರಣವಾಗಿದೆ.

ವೆಸ್ಟ್ ಇಂಡೀಸ್ ಕ್ರಿಕೆಟ್‌ನ ದೊಡ್ಡ ಸಮಸ್ಯೆ ಆಟಗಾರರ ಪ್ರತಿಭೆಯ ಕೊರತೆಯಲ್ಲ. ಬದಲಿಗೆ, ಪ್ರತಿಭೆಯನ್ನು ಬೆಳೆಸಲು ಬೇಕಾದ ಆರ್ಥಿಕ ವ್ಯವಸ್ಥೆಯ ಕೊರತೆ. ಇತ್ತೀಚಿನ ವರದಿಗಳ ಪ್ರಕಾರ, ಆರ್ಥಿಕ ಸಂಕಷ್ಟದಿಂದಾಗಿ ಕ್ರಿಕೆಟ್ ವೆಸ್ಟ್ ಇಂಡೀಸ್ ತನ್ನ ಆಟಗಾರರ ರಿಟೈನರ್ ವೇತನದಲ್ಲಿ ಶೇಕಡಾ 25ರಷ್ಟು ಕಡಿತ ಮಾಡಿದೆ. ಆಟಗಾರರ ಒಪ್ಪಂದಗಳ ಅವಧಿಯನ್ನೂ ಕಡಿಮೆ ಮಾಡಲಾಗಿದೆ. ಇದರಿಂದ ತಂಡದ ಭವಿಷ್ಯದ ಬಗ್ಗೆ ಆತಂಕ ಹೆಚ್ಚಾಗಿದೆ.

ಇನ್ನೊಂದು ಕಡೆ, ಐಪಿಎಲ್‌ನಂತಹ ಫ್ರಾಂಚೈಸಿ ಲೀಗ್‌ಗಳಲ್ಲಿ ಆಡಿದರೆ ಆಟಗಾರರಿಗೆ ಉತ್ತಮ ಆದಾಯ ಸಿಗುತ್ತದೆ. ಹೀಗಾಗಿ ಕೆಲ ಆಟಗಾರರು ರಾಷ್ಟ್ರೀಯ ತಂಡಕ್ಕಿಂತ ಫ್ರಾಂಚೈಸಿ ಕ್ರಿಕೆಟ್‌ಗೆ ಹೆಚ್ಚಿನ ಆದ್ಯತೆ ನೀಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ದೇಶಕ್ಕಾಗಿ ಆಡುವ ಆಸಕ್ತಿ ಇದ್ದರೂ, ಕುಟುಂಬದ ಆರ್ಥಿಕ ಭದ್ರತೆಯನ್ನೂ ಆಟಗಾರರು ಗಮನಿಸಬೇಕಾಗುತ್ತದೆ.

ಭಾರತದ ವಿರುದ್ಧದ ಟಿ20 ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡ ತೀವ್ರ ಪೈಪೋಟಿ ನೀಡಿತು. ಐದು ಪಂದ್ಯಗಳ ಸರಣಿ 2–2ರಲ್ಲಿ ಸಮಬಲಗೊಂಡಿದ್ದು, ಕೊನೆಯ ಪಂದ್ಯ ಮಳೆಯಿಂದ ರದ್ದಾಯಿತು. ಇಂತಹ ಪ್ರದರ್ಶನದ ನಂತರ ವೆಸ್ಟ್ ಇಂಡೀಸ್ ಕೋಚ್ ಡ್ಯಾರೆನ್ ಸ್ಯಾಮಿ ವಿಶ್ವದ ಮುಂದೆ ಸಹಾಯ ಹಸ್ತ ಚಾಚಿದ್ದಾರೆ. ನಮ್ಮಲ್ಲಿ ಪ್ರತಿಭೆಯಿದೆ, ಗೆಲ್ಲುವ ಹಠವಿದೆ, ಆದರೆ ಹೋರಾಡಲು ಹಣವಿಲ್ಲ… ದಯವಿಟ್ಟು ವೆಸ್ಟ್ ಇಂಡೀಸ್ ಕ್ರಿಕೆಟ್‌ಗೆ ಆರ್ಥಿಕವಾಗಿ ಹೆಗಲು ಕೊಡಿ, ನಮ್ಮನ್ನು ಕೈಬಿಡಬೇಡಿ ಎಂದು ಕೇಳಿಕೊಂಡಿರುವುದು ವಿಶ್ವ ಕ್ರಿಕೆಟ್‌ನಲ್ಲಿ ಸದ್ದು ಮಾಡ್ತಿದೆ.  ಕೆರಿಬಿಯನ್ ಕ್ರಿಕೆಟ್ ಬದುಕುಳಿಯಲು ಈಗ ಜಾಗತಿಕ ಪ್ರಾಯೋಜಕರು ಮತ್ತು ಕ್ರಿಕೆಟ್ ವಲಯದ ಆಸರೆ ತುರ್ತಾಗಿ ಬೇಕಾಗಿದೆ ಎಂದಿರುವುದು ಕ್ರಿಕೆಟ್ ಪ್ರೇಮಿಗಳ ಕಣ್ಣು ವೆಸ್ಟ್ ಇಂಡೀಸ್ ಕಡೆ ತಿರುಗಿ ನೋಡುವಂತೆ ಮಾಡಿದೆ.

ಇದನ್ನೂ ಓದಿ: ಚಿನ್ಮಯ್ ಸುತಾರ್ ಅಬ್ಬರ! – ರಣಜಿ ಟ್ರೋಫಿಯಲ್ಲಿ ಅಜೇಯ 400 ರನ್

ವೆಸ್ಟ್ ಇಂಡೀಸ್ ಕ್ರಿಕೆಟ್‌ಗೆ ಲಾಸ್ ಯಾಕೆ ಆಗುತ್ತೆ? 

ಯಾಕೆ ವೆಸ್ಟ್ ಇಂಡೀಸ್ ಈ ಸ್ಥಿತಿಗೆ ಬಂದಿದೆ ಅಂತ ಕೇಳಿದ್ರೆ ಸಾಕಷ್ಟು ಕಾರಣಗಳಿವೆ. ನಿಮ್ಗೆ ಒಂದು ಎಕ್ಸಾಂಪಲ್ ಕೊಡ್ತೀನಿ.  ಭಾರತದಲ್ಲಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತಂಡಗಳನ್ನು ಸಾಗಿಸುವ ವ್ಯವಸ್ಥೆ ಇರುವಂತೆ, ವೆಸ್ಟ್ ಇಂಡೀಸ್ ಕ್ರಿಕೆಟ್ ಒಂದೇ ದೇಶದೊಳಗೆ ನಡೆಯುವುದಿಲ್ಲ. ಹಲವು ಕೆರಿಬಿಯನ್ ದ್ವೀಪಗಳು ಮತ್ತು ಪ್ರದೇಶಗಳನ್ನು ಪ್ರತಿನಿಧಿಸುವ ಆಟಗಾರರನ್ನು ಒಟ್ಟುಗೂಡಿಸಿ ಪಂದ್ಯಗಳನ್ನು ಆಯೋಜಿಸಬೇಕಾಗುತ್ತದೆ. ವಿಮಾನ ಪ್ರಯಾಣ, ಹೋಟೆಲ್, ತರಬೇತಿ ಮತ್ತು ಪಂದ್ಯಗಳ ಆಯೋಜನೆಗೆ ದೊಡ್ಡ ಮೊತ್ತ ಖರ್ಚಾಗುತ್ತದೆ. ಕ್ರಿಕೆಟ್ ವೆಸ್ಟ್ ಇಂಡೀಸ್ ಮುಖ್ಯಸ್ಥರು ದೇಶೀಯ ಕ್ರಿಕೆಟ್‌ಗಾಗಿ ವಿಮಾನ ಪ್ರಯಾಣಕ್ಕೆ ಕಳೆದ 15 ವರ್ಷಗಳಲ್ಲಿ 80 ಮಿಲಿಯನ್ ಅಮೆರಿಕನ್ ಡಾಲರ್‌ಗಿಂತ ಹೆಚ್ಚು ಖರ್ಚಾಗಿದೆ ಎಂದು ತಿಳಿಸಿದ್ದಾರೆ.  ಅಂದರೆ, ಆಟಗಾರರನ್ನು ಬೆಳೆಸುವುದಕ್ಕಿಂತ ಅವರನ್ನು ಪಂದ್ಯಕ್ಕೆ ಕರೆತರುವುದಕ್ಕೇ ದೊಡ್ಡ ಮೊತ್ತ ಖರ್ಚಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ತರ ಅಲ್ಲಿ ಹಣ ಪೋಲ್ ಆಗ್ತಿದೆ.

ಕೆರಿಬಿಯನ್ ಬೆನ್ನಿಗೆ ನಿಲ್ಲುತ್ತಾ BCCI?

ಇನ್ನೂ ನಮಗೆ ಸಹಾಯ ಮಾಡಿ ಅಂತ ಹೇಳಿದ್ದು ಭಾರತದ ನೆಲದಲ್ಲಿ ಹೀಗಾಗಿ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಗಳಲ್ಲಿ ಒಂದಾದ BCCI, ಕೆರಿಬಿಯನ್ ಕ್ರಿಕೆಟ್‌ಗೆ ನೆರವಾಗಬೇಕು ಅನ್ನೋ ಮಾತು ಕೇಳಿ ಬರ್ತಿದೆ.ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಅಂದ್ರೆ ಅದು ಬಿಸಿಸಿಐ ಹೀಗಾಗಿ ಸಮಾನ್ಯವಾಗಿ ಕೆರಿಬಿಯನ್ ಬೆನ್ನಿಗೆ BCCI ನಿಲ್ಲುತ್ತಾ ಅನ್ನೋ  ಚರ್ಚೆ ಶುರುವಾಗಿದೆ.

 WI ನೆರವಿಗೆ BCCI?

ಕ್ರಿಕೆಟ್ ವೆಸ್ಟ್ ಇಂಡೀಸ್ ಜೊತೆ ದೀರ್ಘಾವಧಿಯ ಅಭಿವೃದ್ಧಿ ಒಪ್ಪಂದ

ದೇಶೀಯ ಕ್ರಿಕೆಟ್‌ಗೆ ಬೆಂಬಲ ನೀಡಿ ಯುವ ಟೂರ್ನಿಗಳ ಅಭಿವೃದ್ಧಿಗೆ ನೆರವು

ಪ್ರಸಾರ ಹಕ್ಕುಗಳು ಮತ್ತು ದ್ವಿಪಕ್ಷೀಯ ಸರಣಿಗಳ ಮೂಲಕ ಹೆಚ್ಚಿನ ಆದಾಯ

WI ಕ್ರಿಕೆಟ್‌ನ ಪ್ರಾಯೋಜಕತ್ವದ ಅವಕಾಶಗಳನ್ನು ಜಾಗತಿಕ ಕಂಪನಿಗಳಿಗೆ ಪರಿಚಯ

(ಕ್ರಿಕೆಟ್ ವೆಸ್ಟ್ ಇಂಡೀಸ್ ಜೊತೆ ದೀರ್ಘಾವಧಿಯ ಅಭಿವೃದ್ಧಿ ಒಪ್ಪಂದ ಮಾಡಿಕೊಳ್ಳಬಹುದು. ದೇಶೀಯ ಕ್ರಿಕೆಟ್‌ಗೆ ಬೆಂಬಲ ನೀಡಿ ಯುವ ಟೂರ್ನಿಗಳ ಅಭಿವೃದ್ಧಿಗೆ ನೆರವಾಗಬಹುದು . ಪ್ರಾಯೋಜಕರು, ಪ್ರಸಾರ ಹಕ್ಕುಗಳು ಮತ್ತು ದ್ವಿಪಕ್ಷೀಯ ಸರಣಿಗಳ ಮೂಲಕ ಹೆಚ್ಚಿನ ಆದಾಯಗಳಿಸುವಂತೆ ಮಾಡಬಹುದು. ಬಿಸಿಸಿಐಗೆ ದೊಡ್ಡ ವಾಣಿಜ್ಯ ಜಾಲವಿದೆ. ಆ ಜಾಲದ ಮೂಲಕ ವೆಸ್ಟ್ ಇಂಡೀಸ್ ಕ್ರಿಕೆಟ್‌ನ ಪ್ರಾಯೋಜಕತ್ವದ ಅವಕಾಶಗಳನ್ನು ಜಾಗತಿಕ ಕಂಪನಿಗಳಿಗೆ ಪರಿಚಯಿಸಬಹುದು. )

ಆದರೆ ಇಲ್ಲಿ ಒಂದು ಮುಖ್ಯ ವಿಚಾರವಿದೆ. BCCI ನೆರವು ನೀಡಬೇಕು ಎಂಬುದು ಒಂದು ಸಲಹೆ ಅಷ್ಟೇ ಆದ್ರೆ  ನೆರವು ನೀಡುವ ಜವಾಬ್ದಾರಿ BCCI ಒಂದರದ್ದೇ ಅಲ್ಲ. ICC, ಇತರ ಕ್ರಿಕೆಟ್ ಮಂಡಳಿಗಳು ಮತ್ತು ಪ್ರಾಯೋಜಕರೂ ಕೈಜೋಡಿಸಬೇಕು.

 WI ಸಹಾಯ ಸಿಗದಿದ್ದರೆ ಏನಾಗಬಹುದು?

ಆರ್ಥಿಕ ಸಮಸ್ಯೆ ಮುಂದುವರಿದರೆ ಆಟಗಾರರ ವೇತನ ಕಡಿತ, ಪ್ರತಿಭಾವಂತ ಯುವ ಆಟಗಾರರು ಬೇರೆ ಲೀಗ್‌ಗಳತ್ತ ಮುಖ ಮಾಡುವುದು, ದೇಶೀಯ ಕ್ರಿಕೆಟ್ ದುರ್ಬಲವಾಗುವುದು ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಪರ್ಧಾತ್ಮಕತೆ ಕುಸಿಯುವ ಅಪಾಯವಿದೆ. ಆದರೆ ಸೂಕ್ತ ಯೋಜನೆ, ಉತ್ತಮ ಆಡಳಿತ ಮತ್ತು ಹೂಡಿಕೆಯಿದ್ದರೆ ವೆಸ್ಟ್ ಇಂಡೀಸ್ ಮತ್ತೆ ಬಲಿಷ್ಠ ತಂಡವಾಗಿ ಬೆಳೆಯಬಹುದು. ಬಿಸಿಸಿಐ, ಐಸಿಸಿ, ಕೆರಿಬಿಯನ್ ಸರ್ಕಾರಗಳು, ಪ್ರಾಯೋಜಕರು ಮತ್ತು ಕ್ರಿಕೆಟ್ ವೆಸ್ಟ್ ಇಂಡೀಸ್ ಒಟ್ಟಾಗಿ ಕೆಲಸ ಮಾಡಿದರೆ ಈ ಸಂಕಷ್ಟದಿಂದ ಹೊರಬರುವ ದಾರಿ ಸಿಗಬಹುದು.

ಕೊನೆಯದಾಗಿ ಒಂದು ಮಾತು. ವೆಸ್ಟ್ ಇಂಡೀಸ್ ಕ್ರಿಕೆಟ್‌ಗೆ ಬೇಕಿರುವುದು ಕೇವಲ ಹಣವಲ್ಲ,  ಪ್ರತಿಭೆಗೆ ಗೌರವ, ಆಟಗಾರರಿಗೆ ಭದ್ರತೆ ಮತ್ತು ಭವಿಷ್ಯ ರೂಪಿಸುವ ವ್ಯವಸ್ಥೆ. ಒಂದು ಕಾಲದಲ್ಲಿ ಕ್ರಿಕೆಟ್ ಜಗತ್ತನ್ನೇ ಆಳಿದ ಕೆರಿಬಿಯನ್ ತಂಡ ಮತ್ತೆ ಎದ್ದು ನಿಲ್ಲಬೇಕಾದರೆ, ಕ್ರಿಕೆಟ್ ಜಗತ್ತು ಅದರ ಬೆನ್ನಿಗೆ ನಿಲ್ಲಬೇಕಿದೆ.

Kishor KV

Leave a Reply

Your email address will not be published. Required fields are marked *