ಸ್ಯಾಲರಿ ಕಟ್.. ಟೂರ್ನಿಗಳೂ ರದ್ದು – ದುಡ್ಡಿಲ್ಲದೆ ಕಂಗೆಟ್ಟ ವೆಸ್ಟ್ ಇಂಡೀಸ್
ಕೆರೆಬಿಯನ್ಸ್ ಕ್ರಿಕೆಟ್ ಮುಗಿಯುತ್ತಾ?

ಸ್ಯಾಲರಿ ಕಟ್.. ಟೂರ್ನಿಗಳೂ ರದ್ದು – ದುಡ್ಡಿಲ್ಲದೆ ಕಂಗೆಟ್ಟ ವೆಸ್ಟ್ ಇಂಡೀಸ್ಕೆರೆಬಿಯನ್ಸ್ ಕ್ರಿಕೆಟ್ ಮುಗಿಯುತ್ತಾ?

ವೆಸ್ಟ್ ಇಂಡೀಸ್.. ಕ್ರಿಕೆಟ್ ಲೋಕದ ದೈತ್ಯರ ತಂಡ. 1970 ಹಾಗೂ 1980ರ ದಶಕದಲ್ಲಿ ಕೆರೆಬಿಯನ್ ಕಲಿಗಳು ಇಡೀ ಕ್ರಿಕೆಟ್ ಜಗತ್ತನ್ನೇ ಆಳಿದ್ರು. ಕ್ರಿಕೆಟ್ ಇತಿಹಾಸದ ಮೊದಲ ಎರಡು ವಿಶ್ವಕಪ್‌ಗಳನ್ನು ಅಂದ್ರೆ 1975 ಮತ್ತು 1979ರಲ್ಲಿ ಸರ್ ಕ್ಲೈವ್ ಲಾಯ್ಡ್ ಕ್ಯಾಪ್ಟನ್ಸಿಯಲ್ಲಿ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ಸ್.. ಌಂಡ್ 1983ರ ವಿಶ್ವಕಪ್‌ನಲ್ಲಿ ರನ್ನರ್-ಅಪ್ ಕೂಡ. ಹೀಗೆ ಯಶಸ್ಸಿನ ಉತ್ತುಂಗದಲ್ಲಿ ಮೆರೆದ ತಂಡ ಈಗ ಆಟಗಾರರ ಸಂಬಳಕ್ಕೂ ಕತ್ತರಿ ಹಾಕೋ ಹಂತಕ್ಕೆ ಬಂದಿದೆ.

ಇದನ್ನೂ ಓದಿ : ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ – ಕಬಡ್ಡಿಯಲ್ಲಿ ಚಿನ್ನ ಗೆದ್ದ ಮಹಿಳಾ ತಂಡ

ಭಾನುವಾರದಿಂದ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಏಕದಿನ ಸರಣಿ ಆರಂಭವಾಗ್ತಿದೆ. ತಿರುವನಂತಪುರದಲ್ಲಿ ಉಭಯ ತಂಡಗಳ ಆಟಗಾರರು ಭರ್ಜರಿ ಪ್ರಾಕ್ಟೀಸ್​ನಲ್ಲಿದ್ದಾರೆ. ಹೀಗಿರುವಾಗ್ಲೇ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಫೈನಾನ್ಶಿಯಲ್ಲಿ ಪಾತಾಳಕ್ಕೆ ಕುಸಿದಿದ್ದು ಸಂಸ್ಥೆಯನ್ನ ಉಳಿಸೋಕೆ ಆಟಗಾರರ ವೇತನವನ್ನೇ ಕಡಿತ ಮಾಡೋಕೆ ಮುಂದಾಗಿದೆ. ಹಾಗೇ ಮೇಜರ್ ಟೂರ್ನಮೆಂಟ್​ಗಳನ್ನೇ ರದ್ದು ಮಾಡೋ ನಿರ್ಧಾರಕ್ಕೆ ಬಂದಿದೆ.

ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಇತ್ತೀಚಿನ ವರ್ಷಗಳಲ್ಲಿ ಡೌನ್​ಫಾಲ್ ಕಾಣ್ತಾನೇ ಬಂದಿದೆ. 2025ರ ಸೆಪ್ಟೆಂಬರ್ ನಲ್ಲಿ ಕೊನೆಗೊಂಡ ಹಣಕಾಸು ವರ್ಷದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯು ಬರೋಬ್ಬರಿ 28.14 ಮಿಲಿಯನ್ ಯುಎಸ್ ಡಾಲರ್ ಅಂದ್ರೆ ಇಂಡಿಯನ್ ಕರೆನ್ಸಿ ಪ್ರಕಾರ ಹೇಳೋದಾದ್ರೆ ಸುಮಾರು ₹235 ಕೋಟಿಗೂ ಹೆಚ್ಚು ನೆಟ್​ವರ್ತ್ ಲಾಸ್​ನಲ್ಲಿತ್ತು. ಈ ಬಿಕ್ಕಟ್ಟಿನಿಂದಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಕಳೆದ ಜುಲೈನಲ್ಲಿ ವೆಸ್ಟ್ ಇಂಡೀಸ್‌ಗೆ ತುರ್ತು ಪರಿಹಾರ ಅಂತಾ 12.82 ಮಿಲಿಯನ್ ಡಾಲರ್ ಅಂದ್ರೆ ಸುಮಾರು ₹107 ಕೋಟಿ ರೂಪಾಯಿ ಸಾಲದ ನೆರವನ್ನು ಘೋಷಿಸಿತ್ತು. ಹೀಗಿದ್ರೂ ಚೇತರಿಸಿಕೊಳ್ಳೋಕೆ ಸಾದ್ಯವಾಗಲಿಲ್ಲ. ಇದೇ ಕಾರಣಕ್ಕೆ ಸ್ವಲ್ಪನಾದ್ರೈ ಫೈನಾನ್ಶಿಯಲ್ ಹೊರೆ ತಪ್ಪಿಸೋಕೆ ಹಲವು ಮಾರ್ಗಗಳನ್ನ ಕಂಡುಕೊಂಡಿದೆ.

ಆರ್ಥಿಕ ಬಿಕ್ಕಟ್ಟಿಗೆ ಏನೆಲ್ಲಾ ಕ್ರಮ?

ಅಂತರರಾಷ್ಟ್ರೀಯ ಕೇಂದ್ರ ಒಪ್ಪಂದದ ಆಟಗಾರರ ವೇತನದಲ್ಲಿ 25% ಕಡಿತ

ದೇಶೀಯ ಕ್ರಿಕೆಟ್ ಪ್ಲೇಯರ್ಸ್ ವಾರ್ಷಿಕ ಒಪ್ಪಂದದ ಅವಧಿಯಲ್ಲೂ ಕಡಿತ

ಮೊದಲಿದ್ದ 12 ತಿಂಗಳುಗಳ ಒಪ್ಪಂದವನ್ನ 7 ತಿಂಗಳುಗಳಿಗೆ ಸೀಮಿತ

ಹೆಚ್ಚಿನ ವೆಚ್ಚ ನಿಯಂತ್ರಣ ಮಾಡುವ ಸಲುವಾಗಿ ದೇಶೀ ಟೂರ್ನಿಗಳಿಗೆ ಬ್ರೇಕ್

‘ಸೂಪರ್50′ ಟೂರ್ನಿ ಮತ್ತು ಮಹಿಳೆಯರ ‘ಟಿ20 ಬ್ಲೇಜ್’ ಪಂದ್ಯಾವಳಿ ರದ್ದು

ಪ್ರಯಾಣ ವೆಚ್ಚದ ಹೊರೆ ತಗ್ಗಿಸಲು ಕ್ರಿಕೆಟ್ ಅಸೋಸಿಯೇಷನ್ ಗಳಿಂದಲೇ ಭರ್ತಿ

ಕೆರಿಬಿಯನ್ ದ್ವೀಪಗಳ ನಡುವಿನ ವಿಮಾನ ಪ್ರಯಾಣದ ವೆಚ್ಚಗಳು ಅತ್ಯಂತ ದುಬಾರಿ

ಕಳೆದ 15 ವರ್ಷಗಳಲ್ಲಿ ಬರೋಬ್ಬರಿ 80 ಮಿಲಿಯನ್ ಡಾಲರ್ ಪ್ರಯಾಣಕ್ಕೆ ಖರ್ಚು

ಸ್ಥಳೀಯ ಪಂದ್ಯಾವಳಿಗಳ ವೆಚ್ಚ ಆಯಾ ದೇಶಗಳ ಕ್ರಿಕೆಟ್ ಅಸೋಸಿಯೇಷನ್‌ ಹೊಣೆ

15 ಸ್ವತಂತ್ರ ದ್ವೀಪ ರಾಷ್ಟ್ರಗಳ ಅಸೋಸಿಯೇಷನ್ ಗಳೇ ವೆಚ್ಚ ಭರಿಸಬೇಕು

ಹೀಗೆ ಫೈನಾನ್ಶಿಯಲಿ ಸ್ವಲ್ಪ ರಿಕವರ್ ಆಗೋಕೆ ಒಂದಷ್ಟು ನಿರ್ಧಾರಗಳನ್ನ ಮಾಡಿದೆ. ಅಷ್ಟಕ್ಕೂ ಮೋಸ್ಟ್ ಸಕ್ಸಸ್​​ಫುಲ್ ಟೀಂ ಆಗಿದ್ದ ವಿಂಡೀಸ್ ಈ ಥರ ಪಾತಾಳಕ್ಕೆ ಕುಸಿಯೋಕೆ ಒಂದಷ್ಟು ರೀಸನ್ಸ್ ಕೂಡ ಇದೆ. ವೆಸ್ಟ್ ಇಂಡೀಸ್‌ನ ಪ್ರಮುಖ ಸ್ಟಾರ್ ಆಟಗಾರರು ರಾಷ್ಟ್ರೀಯ ಒಪ್ಪಂದಗಳಿಗಿಂತ ಜಾಸ್ತಿ ಲೀಗ್​ಗಳಲ್ಲಿ ಆಡ್ತಿದ್ದಾರೆ. ಐಪಿಎಲ್, ಬಿಗ್ ಬ್ಯಾಷ್‌ ಲೀಗ್​ನಂತಹ ಜಾಗತಿಕ ಟಿ20 ಲೀಗ್‌ಗಳಲ್ಲಿ ಆಡೋಕೆ ಜಾಸ್ತಿ ಇಂಟ್ರೆಸ್ಟಿಂಗ್ ಆಗಿದ್ದಾರೆ. ಹೀಗಾಗಿ ತಂಡದ ಪರ್ಫಾಮೆನ್ಸ್ ಕೂಡ ಕಡಿಮೆಯಾಗ್ತಿದೆ. ಮಂಡಳಿಯ ಆದಾಯ ಮತ್ತಷ್ಟು ಕುಗ್ಗಿದೆ.  ಹಾಗೇ ಮೀಡಿಯಾ ರೈಟ್ಸ್ ಹಾಗೂ ಪ್ರಾಯೋಜಕತ್ವದ ಕೊರತೆಯಿಂದಾಗಿ ಆದಾಯವು ಒಂದೇ ವರ್ಷದಲ್ಲಿ ಶೇಕಡಾ 53 ರಷ್ಟು ಕುಸಿದಿದೆ. ಅರ್ಧಕ್ಕರ್ಧ ಕಡಿಮೆಯಾಗಿದೆ. ವೆಸ್ಟ್ ಇಂಡೀಸ್ ಆಟಗಾರರ ಸಂಘಟನೆ  ಸದ್ಯದ ಪರಿಸ್ಥಿತಿಯನ್ನು ನೋಡ್ಕೊಂಡು ಕಠಿಣ ನಿರ್ಧಾರಗಳನ್ನ ಮಾಡಿದೆ.  ಇವತ್ತು ಹಣಕ್ಕಾಗಿ ಇಷ್ಟೆಲ್ಲಾ ಪರದಾಡ್ತಿರೋ ವಿಂಡೀಸ್ ಒಂದು ಕಾಲದಲ್ಲಿ ಅಜೇಯವಿಜಯಯಾತ್ರೆಯನ್ನ ನಡೆಸಿದ್ರು.

1980ರ ದಶಕದಲ್ಲಿ ವೆಸ್ಟ್ ಇಂಡೀಸ್ ತಂಡವು ಸತತ 27 ಟೆಸ್ಟ್ ಪಂದ್ಯಗಳಲ್ಲಿ ಸೋಲನ್ನೇ ಕಾಣದೆ (ಅದರಲ್ಲಿ ಸತತ 11 ಪಂದ್ಯಗಳ ಗೆಲುವು) ಅಜೇಯವಾಗಿ ಉಳಿದು ವಿಶ್ವ ದಾಖಲೆ ಬರೆದಿತ್ತು. ಬಲಿಷ್ಠ ಇಂಗ್ಲೆಂಡ್ ತಂಡದ ವಿರುದ್ಧ ಅವರದ್ದೇ ನೆಲದಲ್ಲಿ ಎರಡು ಬಾರಿ ಸತತವಾಗಿ 5-0 ಅಂತರದಿಂದ ಟೆಸ್ಟ್ ಸರಣಿ ಗೆದ್ದು ಐತಿಹಾಸಿಕ ‘ಬ್ಲಾಕ್‌ವಾಶ್’ ಸಾಧನೆ ಮಾಡಿತ್ತು. ಬ್ರಿಯಾನ್ ಲಾರಾ, ಕ್ರಿಸ್ ಗೇಲ್, ಸರ್ ಗಾರ್ಫೀಲ್ಡ್ ಸೋಬರ್ಸ್,  ಕೋರ್ಟ್ನಿ ವಾಲ್ಷ್ ಮತ್ತು ಕರ್ಟ್ಲಿ ಆಂಬ್ರೋಸ್ ರಂತ ವಿಶ್ವಶ್ರೇಷ್ಠ ಆಟಗಾರನ್ನ ನೀಡಿದ್ದ ತಂಡ ಇದು. ಬಟ್ ಬ್ಯಾಡ್​ಲಕ್ ಈಗ ಆಟಗಾರರಿಗೆ ವೇತನ ಕೊಡೋಕೂ ಹಣ ಇಲ್ಲದಂತಾಗಿದೆ. 2016ರ ಐಸಿಸಿ ಟಿ20 ವಿಶ್ವಕಪ್ ಗೆದ್ದ ನಂತರ ವೆಸ್ಟ್ ಇಂಡೀಸ್ ತಂಡದ ನಾಯಕ ಡ್ಯಾರೆಲ್ ಸ್ಯಾಮಿ ಕೂಡ ತಮ್ಮ ಕ್ರಿಕೆಟ್ ಮಂಡಳಿಯ ದುಸ್ಥಿತಿ ಬಗ್ಗೆ ಹೇಳಿಕೊಂಡಿದ್ರು.  ಯಾಕಂದ್ರೆ ವಿಶ್ವಕಪ್​ಗೂ ಮುನ್ನ ಸರಣಿಗಳಿಗೆ ಹೋಲಿಸಿದರೆ ಆಟಗಾರರ ಪಂದ್ಯದ ಶುಲ್ಕದಲ್ಲಿ ಶೇಕಡಾ 50 ರಿಂದ 80 ರಷ್ಟು ಕಡಿತ ಮಾಡಲಾಗಿತ್ತು. ಇದರಿಂದ ಬೇಸತ್ತ ಆಟಗಾರರು ಟೂರ್ನಿಯನ್ನೇ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದರು. ಹಾಗೇ ವಿಶ್ವಕಪ್​​ಗೆ ಬರಲು ನಮ್ಮ ಬಳಿ ಸರಿಯಾದ ಜೆರ್ಸಿಗಳಾಗಲಿ ಅಥವಾ ಅದರ ಮೇಲೆ ಪ್ರಿಂಟಿಂಗ್ ಮಾಡಿಸಲು ಹಣವಾಗಲಿ ಇರಲಿಲ್ಲ. ಹೊಸ ಮ್ಯಾನೇಜರ್ ರಾವ್ಲ್ ಲೆವಿಸ್ ಅವರು ಸ್ವತಃ ಕಷ್ಟಪಟ್ಟು ನಮಗೆ ಜೆರ್ಸಿಗಳನ್ನು ವ್ಯವಸ್ಥೆ ಮಾಡಿಕೊಟ್ಟರು ಎಂದೆಲ್ಲಾ ಭಾವುಕರಾಗಿದ್ರು. ಇದಾಗಿ 10 ವರ್ಷಗಳೇ ಕಳೆದ್ರೂ ವಿಂಡೀಸ್ ಮಂಡಳಿ ಚೇತರಿಸಿಕೊಳ್ಳಲೇಇಲ್ಲ. ಬಟ್ ಮುಂದಿನ ದಿನಗಳಲ್ಲಾದ್ರೂ ವಿಂಡೀಸ್ ಪಡೆ ಈ ಎಲ್ಲಾ ಸಮಸ್ಯೆಗಳಿಂದ ಹೊರಬರಬೇಕು. ಮತ್ತೆ ಗತವೈಭವ ಮರುಕಳಿಸಬೇಕು. ಯಾಕಂದ್ರೆ ಕೆರೆಬಿಯನ್ ಕಲಿಗಳು ಇದ್ರಷ್ಟೇ ಕ್ರಿಕೆಟ್ ಎಂಟರ್​ಟೈನಿಂಗ್ ಆಗಿರೋದು.

Shantha Kumari

Leave a Reply

Your email address will not be published. Required fields are marked *