ಶಾಲಾ ಬಿಸಿಯೂಟದಲ್ಲಿ ಚಿಕನ್ ಲೆಗ್ ಪೀಸ್ ಇಲ್ಲದಿದ್ದಕ್ಕೆ ಶಿಕ್ಷಕರನ್ನೇ ಕೂಡಿ ಹಾಕಿದ ಪೋಷಕರು..!
ಕರ್ನಾಟಕದಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡುವಂತೆಯೇ ಪಶ್ಚಿಮ ಬಂಗಾಳದ ಶಾಲೆಗಳಲ್ಲೂ ಮಧ್ಯಾಹ್ನದ ಊಟ ನೀಡಲಾಗುತ್ತಿದೆ. ಆದ್ರೆ ವಿಶೇಷ ಅಂದ್ರೆ ಪಶ್ಚಿಮ ಬಂಗಾಳದಲ್ಲಿ ಬಿಸಿಯೂಟಕ್ಕೆ ಕೋಳಿ ಮಾಂಸವನ್ನೂ ನೀಡಲಾಗುತ್ತಿದೆ. ಇದೇ ಚಿಕನ್ ಗಾಗಿ ಶಾಲೆಯೊಂದರಲ್ಲಿ ದೊಡ್ಡ ಹೈಡ್ರಾಮಾವೇ ನಡೆದು ಹೋಗಿದೆ.
ಮಾಲ್ಡಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟ ನೀಡಲಾಗಿತ್ತು. ಆದ್ರೆ ಊಟದಲ್ಲಿ ಚಿಕನ್ ಪೀಸ್ಗಳು ಕಾಣಿಸುತ್ತಿಲ್ಲ ಎಂದು ವಿದ್ಯಾರ್ಥಿಗಳ ಪೋಷಕರು ಶಿಕ್ಷಕರ ವಿರುದ್ಧ ಜಗಳ ಮಾಡಿದ್ದಾರೆ. ಚಿಕನ್ನ ಪ್ರಮುಖ ಭಾಗವನ್ನು ತಮಗಾಗಿ ಎತ್ತಿಟ್ಟುಕೊಂಡು ಮಕ್ಕಳಿಗೆ ಕೋಳಿಯ ಕುತ್ತಿಗೆ, ಲಿವರ್, ಹೊಟ್ಟೆಯ ಭಾಗವನ್ನು ಬಡಿಸುತ್ತಿದ್ದಾರೆ ಎಂದು ಮಕ್ಕಳು ತಮ್ಮ ಪೋಷಕರಿಗೆ ತಿಳಿಸಿದ್ದರು. ಇದರಿಂದ ಕೋಪಗೊಂಡ ಪೋಷಕರು ಶಾಲೆಗೆ ಆಗಮಿಸಿ ಶಿಕ್ಷಕರೊಂದಿಗೆ ಜಗಳವಾಡಿ ಶಿಕ್ಷಕರನ್ನ ನಾಲ್ಕು ಗಂಟೆಗಳ ಕಾಲ ಕೊಠಡಿಯೊಂದರಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದಾರೆ.
ಇದನ್ನೂ ಓದಿ : ಜೈಲು ಅಧಿಕಾರಿಗಳ ದಾಳಿ.. ತಪಾಸಣೆಗೆ ಹೆದರಿ ಮೊಬೈಲ್ ನುಂಗಿದ ಕೈದಿ – ಮುಂದೇನಾಯ್ತು ಗೊತ್ತಾ..!?
ಮಾಲ್ಡಾ ಜಿಲ್ಲೆಯ ಇಂಗ್ಲಿಷ್‌ಬಜಾರ್ ಪ್ರದೇಶದ ಅಮೃತಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟದಲ್ಲಿ ನೀಡಲಾಗುತ್ತಿದ್ದ ಚಿಕನ್ನಲ್ಲಿ ಲೆಗ್ಪಿಸ್ ಸೇರಿದಂತೆ ಚಿಕನ್ನ ಹಲವು ಪ್ರಮುಖ ಭಾಗಗಳನ್ನು ಶಿಕ್ಷಕರು ತಮಗಾಗಿ ಎತ್ತಿಟ್ಟುಕೊಳ್ಳುತ್ತಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಬಿಸಿಯೂಟದಲ್ಲಿ ಚಿಕನ್ ನಿಗಧಿಯಾಗಿರುವ ದಿನ ಶಿಕ್ಷಕರು ತುಂಬಾ ಖುಷಿಯಲ್ಲಿರುತ್ತಾರೆ. ಆ ದಿನ ಒಳ್ಳೆಯ ಅಕ್ಕಿಯನ್ನು ಬಳಸಿ ಪ್ರತ್ಯೇಕವಾಗಿ ಅಡುಗೆ ಮಾಡಿಸಿಕೊಂಡು ತಿನ್ನುತ್ತಾರೆ ಎಂದು ಪೋಷಕರು ಆರೋಪ ಮಾಡಿದ್ದಾರೆ.
ಶಿಕ್ಷಕರೊಂದಿಗೆ ವಾಗ್ವಾದ ನಡೆಸಿದ ಬಳಿಕ ಪೋಷಕರು ಆರು ಶಿಕ್ಷಕರನ್ನು ಬಲವಂತವಾಗಿ ಕೊಠಡಿಗೆ ಕರೆದೊಯ್ದು ಹೊರಗಿನಿಂದ ಬಾಗಿಲು ಹಾಕಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾಲ ಶಿಕ್ಷಕರನ್ನು ಕೂಡಿ ಹಾಕಲಾಗಿದೆ. ಸ್ಥಳೀಯ ಪೊಲೀಸರು ಆಗಮಿಸಿದ ನಂತರ ಶಿಕ್ಷಕರನ್ನು ಬಿಡುಗಡೆ ಮಾಡಲಾಗಿದೆ.
ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗಾಗಿ ಪೂರೈಸುವ ಆಹಾರವನ್ನು ಶಿಕ್ಷಕರು ಮಕ್ಕಳಿಗೆ ಸಿಗದಂತೆ ವಂಚಿಸುತ್ತಿರುವುದು ವಿಷಾದನೀಯ ಎಂದು ಸ್ಥಳೀಯರೊಬ್ಬರು ಆರೋಪಿಸಿದ್ದಾರೆ. ಈ ಬಗ್ಗೆ ಜಿಲ್ಲಾ ಶಿಕ್ಷಣ ಇಲಾಖೆಗೆ ತನಿಖೆ ಮಾಡುವಂತೆ ಮನವಿ ಮಾಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.