ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ – ಹಿಂಸಾಚಾರದಲ್ಲಿ ಹಲವು ಮಂದಿ ಸಾವು

ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ – ಹಿಂಸಾಚಾರದಲ್ಲಿ ಹಲವು ಮಂದಿ ಸಾವು

ಕೋಲ್ಕತಾ: ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಗೆ ಬಿಗಿ ಭದ್ರತೆಯ ನಡುವೆ ಶನಿವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭಗೊಂಡಿದೆ. ಈ ವೇಳೆ ಹಿಂಸಾಚಾರ ಭುಗಿಲೆದ್ದು, ಟಿಎಂಸಿ ಕಾರ್ಯಕರ್ತರು ಸೇರಿ ಹಲವು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ರಾಜ್ಯದಲ್ಲಿ ಮೂರು ಹಂತದ ಪಂಚಾಯತ್ ವ್ಯವಸ್ಥೆಯಲ್ಲಿ 73,887 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಒಟ್ಟು 2.06 ಲಕ್ಷ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಜೂನ್ 8 ರಂದು ಚುನಾವಣೆಗೆ ದಿನಾಂಕಗಳನ್ನು ಘೋಷಿಸಿದ ನಂತರ ರಾಜ್ಯಾದ್ಯಂತ ತೀವ್ರ ಹಿಂಸಾಚಾರ ಘಟನೆಗಳು ವರದಿಯಾಗಿದ್ದು, 15 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಇದೀಗ ಮತ್ತೆ ಮತದಾನದ ವೇಳೆ ಹಿಂಸಾಚಾರ ಭುಗಿಲೆದ್ದಿದೆ.

ಇದನ್ನೂ ಓದಿ: ಹಳ್ಳಿಹೈದನಾದ ರಾಹುಲ್‌ ಗಾಂಧಿ! – ಟ್ರ್ಯಾಕ್ಟರ್‌ನಲ್ಲಿ ಗದ್ದೆ ಉಳುಮೆ ಮಾಡಿ ಭತ್ತ ನಾಟಿ

ಮುರ್ಷಿದಾಬಾದ್‌ನಲ್ಲಿ ತಡರಾತ್ರಿ ಟಿಎಂಸಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದರು. ಬಳಿಕ ಮನೆಯೊಂದನ್ನು ಧ್ವಂಸಮಾಡಿದ್ದಾರೆ. ನಂತರ ಕೂಚ್‌ಬೆಹಾರ್ ಜಿಲ್ಲೆಯ ಫಲಿಮಾರಿ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಮತಗಟ್ಟೆ ಏಜೆಂಟ್ ಮಾಧಬ್ ಬಿಸ್ವಾಸ್ ಅವರನ್ನು ಹತ್ಯೆ ಮಾಡಲಾಗಿದೆ. ಬಿಸ್ವಾಸ್ ಮತಗಟ್ಟೆಗೆ ಪ್ರವೇಶಿಸಲು ಪ್ರಯತ್ನಿಸಿದಾಗ ಅವರನ್ನು ಟಿಎಂಸಿ ಬೆಂಬಲಿಗರು ತಡೆದಿದ್ದಾರೆ. ನಂತರ ಪರಿಸ್ಥಿತಿ ಬಿಗುಡಾಯಿಸುತ್ತಿದ್ದಂತೆ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಈ ನಡುವೆ ಆರೋಪಗಳನ್ನು ಟಿಎಂಸಿ ನಿರಾಕರಿಸಿದೆ. ಈ ನಡುವೆ ಸ್ವತಂತ್ರ ಅಭ್ಯರ್ಥಿಯ ಬೆಂಬಲಿಗರೊಬ್ಬರನ್ನು ಥಳಿಸಿ ಉತ್ತರ 24 ಪರಗಣ ಜಿಲ್ಲೆಯ ಕದಂಬಗಚಿ ಪ್ರದೇಶದಲ್ಲಿ ಹತ್ಯೆ ಮಡಾಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮೃತ ವ್ಯಕ್ತಿಯನ್ನು 41 ವರ್ಷದ ಅಬ್ದುಲ್ಲಾ ಎಂದು ಗುರುತಿಸಲಾಗಿದೆ. ಹಲ್ಲೆ ಬಳಿಕ ಅಬ್ದುಲ್ಲಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆಂದು ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್ ಮುಖರ್ಜಿ ತಿಳಿಸಿದ್ದಾರೆ.

ಈ ನಡುವೆ ಹತ್ಯೆಯನ್ನು ವಿರೋಧಿಸಿ ಸ್ಥಳೀಯರು ಮುಂಜಾನೆ ಟಾಕಿ ರಸ್ತೆಯನ್ನು ತಡೆದು, ಪ್ರತಿಭಟನೆ ನಡೆಸಿದ್ದಾರೆ. ಮುರ್ಷಿದಾಬಾದ್ ಜಿಲ್ಲೆಯ ಕಪಾಸ್‌ದಂಗ ಪ್ರದೇಶದಲ್ಲೂ ರಾತ್ರೋರಾತ್ರಿ ಹಿಂಸಾಚಾರ ಸಂಭವಿಸಿದ್ದು, ಘಟನೆಯಲ್ಲಿ ಟಿಎಂಸಿ ಕಾರ್ಯಕರ್ತನೊಬ್ಬ ಸಾವನ್ನಪ್ಪಿದ್ದಾನೆಂದು ತಿಳಿದುಬಂದಿದೆ. ಮೃತ ವ್ಯಕ್ತಿಯನ್ನು ಬಾಬರ್ ಅಲಿ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದೆಡೆ ಮಾಲ್ಡಾ ಜಿಲ್ಲೆಯಲ್ಲಿ ಕಾಂಗ್ರೆಸ್ ಬೆಂಬಲಿಗರೊಂದಿಗೆ ನಡೆದ ಘರ್ಷಣೆಯಲ್ಲಿ ಟಿಎಂಸಿ ನಾಯಕನ ಸಹೋದರ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಮಾಲೆಕ್ ಶೇಖ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಟ್ವೀಟ್ ಮಾಡಿರುವ ಟಿಎಂಸಿ,  ‘ರೆಜಿನಗರ, ತುಫಂಗಂಜ್ ಮತ್ತು ಖಾರ್‌ಗ್ರಾಮ್‌ನಲ್ಲಿ ನಮ್ಮ ಪಕ್ಷದ ಮೂವರು ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಡೊಮ್‌ಕೋಲ್‌ನಲ್ಲಿ ಇಬ್ಬರು ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಬಿಜೆಪಿ, ಸಿಪಿಐ(ಎಂ) ಮತ್ತು ಕಾಂಗ್ರೆಸ್‌ ಪಕ್ಷಗಳು ಹಿಂಸಾಚಾರ ನಡೆಸುತ್ತಿವೆ. ಚುನಾವಣೆಯ ಹಿನ್ನೆಲೆ ಕೇಂದ್ರ ಪಡೆಗಳನ್ನು ರಾಜ್ಯದಲ್ಲಿ ನಿಯೋಜನೆ ಮಾಡಲಾಗಿದ್ದರೆ, ಅವುಗಳು ಈಗ ಎಲ್ಲಿವೆ’ ಎಂದು ಪ್ರಶ್ನಿಸಿ ಪ್ರಶ್ನೆ ಮಾಡಿದೆ.

‘ಕೇಂದ್ರ ಪಡೆಗಳ ಭದ್ರತೆ ಮಧ್ಯೆಯೂ ಸಾವಿನ ಸಂಖ್ಯೆ ಹೆಚ್ಚುತ್ತಿವೆ. ಮಾಲ್ಡಾದ ಮಾಣಿಕ್‌ಚಕ್‌ನಲ್ಲಿ ಬಾಂಬ್ ದಾಳಿಯ ನಡೆಸಲಾಗಿದೆ. ಇದರಿಂದಾಗಿ ನಮ್ಮ ಪಕ್ಷದ ಕಾರ್ಯಕರ್ತನನ್ನು ಬಲಿ ತೆಗೆದುಕೊಂಡಿದೆ. ನಾಡಿಯಾದ ನಾರಾಯಣಪುರ ಗ್ರಾಮ ಪಂಚಾಯತಿ ಅಭ್ಯರ್ಥಿ ಹಸೀನಾ ಸುಲ್ತಾನ್​ ಅವರ ಪತಿಯ ಮೇಲೆ ಗುಂಡು ಹಾರಿಸಲಾಗಿದೆ. ಮತದಾನ ಆರಂಭವಾಗುವ ಕೆಲವೇ ಕ್ಷಣಗಳ ಮೊದಲು ಕಚ್ಚಾ, ದೇಶಿ ನಿರ್ಮಿತ ಬಾಂಬ್‌ಗಳನ್ನು ನಮ್ಮ ಕಾರ್ಯಕರ್ತರ ಮೇಲೆ ಎಸೆಯಲಾಗಿದೆ’ ಎಂದು ​​ಆರೋಪಿಸಿದೆ.

suddiyaana